ಡಾ. ಲಲಿತಾಂಬ ಚಂದ್ರಶೇಖರ್ ಬಹುಭಾಷಾ ಕೋವಿದೆ, ಶಿಕ್ಷಣ ತಜ್ಞೆ, ಮತ್ತು ಬರಹಗಾರ್ತಿ.

ಲಲಿತಾಂಬ 1929ರ ಫೆಬ್ರವರಿ 15ರಂದು ದಾವಣಗೆರೆಯಲ್ಲಿ ಜನಿಸಿದರು. ತಂದೆ ವೆಂಕಟಕೃಷ್ಣಯ್ಯ, ತಾಯಿ ಪಾರ್ವತಮ್ಮ. ಶಿಕ್ಷಕರಾಗಿದ್ದ ತಂದೆಯವರಿಗೆ ಹಲವಾರು ಹಳ್ಳಿಗಳಿಗೆ ವರ್ಗವಾಗುತ್ತಿದ್ದುದರಿಂದ ಇವರ ಪ್ರಾರಂಭಿಕ ಶಿಕ್ಷಣವು ಹಳ್ಳಿಯ ಶಾಲೆಗಳಲ್ಲಿ ಸಾಗಿತು. ಪ್ರೌಢಶಾಲಾಭ್ಯಾಸ ಬೆಂಗಳೂರಿನ ವಾಣಿವಿಲಾಸ ಇನಸ್ಟಿಟ್ಯೂಟ್‌ನಲ್ಲಿ ನಡೆದು, ಮಹಾರಾಣಿ ಕಾಲೇಜಿನಲ್ಲಿ ಬಿ.ಎಸ್‌ಸಿ ಪದವಿ ಗಳಿಸಿದರು. ಪದವಿ ಪಡೆದ ನಂತರ ಓದಿದ ಪ್ರೌಢಶಾಲೆಯಲ್ಲಿಯೇ ಶಿಕ್ಷಕಿಯಾಗಿ ಕೆಲಕಾಲ ಕೆಲಸ ಮಾಡಿದರು. ಮದುವೆಯ ನಂತರ ಹೈದರಾಬಾದಿಗೆ ತೆರಳಿ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಎಂ.ಎಸ್‌ಸಿ., ಎಂ.ಎ (ಇಂಗ್ಲಿಷ್), ಎಂ.ಎಡ್., ಪಿಜಿಡಿಟಿಇ, ಮುಂತಾದ ಅನೇಕ ಸ್ನಾತಕೋತ್ತರ ಪದವಿಗಳನ್ನು ಗಳಿಸಿದರು. ಅಲ್ಲಿನ ಹೈಸ್ಕೂಲು, ಜೂನಿಯರ್ ಕಾಲೇಜು, ಟೀಚರ್ಸ್ ಟ್ರೈನಿಂಗ್ ಇನಿಸ್ಟಿಟ್ಯೂಟ್, ಕಾಲೇಜ್ ಆಫ್ ಎಜುಕೇಷನ್ ಮುಂತಾದ ಕಡೆ ಕಾರ್ಯನಿರ್ವಹಿಸಿ ಟೀಚರ್ಸ್ ಟ್ರೈನಿಂಗ್ ಇನಸ್ಟಿಟ್ಯೂಟ್‌ನ ಪ್ರಾಂಶುಪಾಲರಾಗಿ ನಿವೃತ್ತರಾದರು.ಲಲಿತಾಂಬ ಅವರು ಮಾಧ್ಯಮಿಕ ಶಾಲೆಯಲ್ಲಿದ್ದಾಗಲೇ ಸಣ್ಣಕಥೆಗಳನ್ನು ಬರೆಯಲು ಪ್ರಾರಂಭಿಸಿದರು. ಹೀಗೆ ಬರೆದ ಕತೆಗಳು ಅಂದಿನ ಪತ್ರಿಕೆಗಳಾದ ಯುಗಪುರುಷ, ಕತೆಗಾರ ಮುಂತಾದ ಮಾಸಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿತು. ಹದಿನೇಳರ ಹರೆಯದಲ್ಲಿಯೆ ಇವರು ಬರೆದ ಭಾಷಣ, ಕಿರುಗತೆ, ಹಾಸ್ಯ ನಾಟಕಗಳು ಮೈಸೂರಿನ ಆಕಾಶವಾಣಿ, ಮದರಾಸು ಮತ್ತು ಮುಂಬಯಿ ಕೇಂದ್ರಗಳಿಂದ ಪ್ರಸಾರವಾದವು. ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿಯೇ ನೋಬೆಲ್ ಪ್ರಶಸ್ತಿ ವಿಜೇತೆ ಪರ್ಲ್ ಎಸ್ ಬಕ್ ರವರ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದು, ಮುನ್ನುಡಿ ಬರೆಯಲು ಮಾಸ್ತಿಯವರನ್ನು ಕೇಳಿದಾಗ, ಇವರ ಅನುವಾದವನ್ನು ಪ್ರಶಂಸಿಸಿ ತಮ್ಮ ಜೀವನ ಮುದ್ರಣಾಲಯದಿಂದಲೇ ಇವರ ‘ಚೀಣಾದ ಸಣ್ಣ ಕಥೆಗಳು’ ಎಂಬ ಕೃತಿ ಪ್ರಕಟಿಸಿದರು.ಲಲಿತಾಂಬ ಅವರು ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಲಿಯುವಿಕೆ ಮತ್ತು ತರಬೇತಿಗಳ ಬಗ್ಗೆ ಪ್ರೌಢ ಪ್ರಬಂಧಗಳನ್ನು ಬರೆದಿರುವುದಲ್ಲದೆ ಆಲ್ ಇಂಡಿಯಾ ಸಿಲಿಬಸ್, ಆಂಧ್ರ ಪ್ರದೇಶದ ಸಿಲಿಬಸ್ ಕಮಿಟಿ, ಸಾರ್ವಜನಿಕ ಶಿಕ್ಷಣ ಇಲಾಖೆಗಳ ಪ್ರಾಯೋಗಿಕ ಯೋಜನೆಗಳು, ಕಾರ್ಯಾಗಾರಗಳು, ವಿಜ್ಞಾನ ಪ್ರಯೋಗಗಳ ಸಲಕರಣೆ ಸಮಿತಿ, ಬೋರ್ಡ್ ಆಫ್ ಸೆಕೆಂಡರಿ ಮತ್ತು ಇಂಟರ್ ಮೀಡಿಯಟ್ ಮುಂತಾದವುಗಳ ಸದಸ್ಯೆಯಾಗಿ, ಸಂಯೋಜಕರಾಗಿ, ಭಾಷಣಕಾರರಾಗಿ, ಮೌಲ್ಯ ಮಾಪಕರಾಗಿ, ಹಲವಾರು ವಿದ್ಯಾ ಸಂಸ್ಥೆಗಳ ಸಂರ್ದಶಕ ಪ್ರಾಧ್ಯಾಪಕರಾಗಿ, ಸಲಹೆಗಾರರಾಗಿ ಆಂಧ್ರ ಸರಕಾರದ ಶಿಕ್ಷಣ ಇಲಾಖೆಯಿಂದ ಗೌರವ ಪಡೆದರು. ಸಾಂಸ್ಕೃತಿಕವಾಗಿಯೂ ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ ಹೊಂದಿದ್ದು ಹೈದರಾಬಾದ್ ಕನ್ನಡ ಸಾಹಿತ್ಯ ಮಂದಿರ, ಕನ್ನಡ ನಾಟ್ಯರಂಗ ಮುಂತಾದವುಗಳ ಕಾರ್ಯದರ್ಶಿಯಾಗಿದ್ದಲ್ಲದೆ ಹೊರನಾಡಿನಲ್ಲಿರುವ ಕನ್ನಡದ ಮಕ್ಕಳಿಗಾಗಿ ಬೋಧನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೊರನಾಡ ಕನ್ನಡಿಗರಿಗಾಗಿ ದುಡಿದರು.
ಲಲಿತಾಂಬ ಚಂದ್ರಶೇಖರ್ ಅವರು ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲೆಸಿ ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ ಹೊಂದಿದ್ದು, ಬೆಂಗಳೂರು ಆಕಾಶವಾಣಿಯಲ್ಲಿ ಚಿಂತನ ಕಾರ್ಯಕ್ರಮಗಳು, ಭಾಷಣಗಳು, ನಾಟಕಗಳನ್ನು ಮೂಡಿಸಿದರು. ದೂರದರ್ಶನದಲ್ಲಿ ಮಕ್ಕಳ ಮನಸ್ಸಿನಲ್ಲಿ ದೇಶಭಕ್ತಿಯ ಬಗ್ಗೆ ಅರಿವು ಮೂಡಿಸಲು ಸ್ವಾತಂತ್ರ್ಯ ವೀರರ ಬಗ್ಗೆ ಬರೆದ ನಾಟಕಗಳನ್ನು ಮೂಡಿಸಿದರು.ಲಲಿತಾಂಬ ಅವರು ಕನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಉರ್ದು ಭಾಷೆಗಳ ಮೇಲೆ ಸಾಧಿಸಿದ ಪರಿಣತಿಯಿಂದ ಹಲವಾರು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗಿಯಾದಂತೆ ಸಾಹಿತ್ಯ ಕೃತಿಗಳ ರಚನೆಯಲ್ಲಿಯೂ ತೊಡಗಿಸಿಕೊಂಡು ಹಲವಾರು ಕಾದಂಬರಿಗಳು, ಹಾಸ್ಯ ಕತೆಗಳು ಹಾಗೂ ಹಾಸ್ಯ ನಾಟಕಗಳನ್ನು ಬರೆದರು. ಆಗಾಗ್ಗೆ ಪತ್ರಿಕೆಗಳಿಗೆ ಬರೆದ ಕತೆಗಳ ಸಂಗ್ರಹ ‘ವಿಮೋಚನೆ’. ಮೈಸೂರಿನ ಉಷಾ ಸಾಹಿತ್ಯ ಮಾಲೆಯಿಂದ ಪ್ರಕಟವಾಧ ಕಾದಂಬರಿ ‘ರೇಖಾ’ ಭಾಗ ೧-೨. ದಲಿತ ವರ್ಗದವರ ಹಿರಿಮೆಯನ್ನು ಸಾರುವ ‘ಮುಕುಂದ ಚಂದ್ರ’ ಕಾದಂಬರಿಯು ಪಿ.ಯು. ತರಗತಿಗಳಿಗೆ ಪಠ್ಯವಾಗಿದ್ದಲ್ಲದೆ ಚಲನಚಿತ್ರವಾಗಿಯೂ ಜನಪ್ರಿಯವಾಯಿತು. ಚಲನಚಿತ್ರವಾದ ಇವರ ಮತ್ತೊಂದು ಕಾದಂಬರಿ ‘ಪುನರ್ದತ್ತಾ’. ವಿಡಂಬನ ಕಾದಂಬರಿ ‘ಸರಸ್ವತಿ ಸಂಹಾರವೆ ?’. ಸುಕನ್ಯೆಯರು ಸ್ವೀಕಾರ, ನಾದದ ಹಾದಿಯಲ್ಲಿ, ಬಿಡಿ ಹೂಗಳು, ಪರಿಸ್ಥಿತಿ, ವಿಮೋಚನೆ ಇವರ ಇತರ ಕಾದಂಬರಿಗಳು. ಭಾಮನೆ ಸತ್ಯಭಾಮನೆ, ಮನೆ ಪಾಠ, ತಾತ ಕಂಡ ವಿಶ್ವನಾಥ, ಅತಿಥಿ ಸತ್ಕಾರ, ಪುರಾಣ ಶ್ರವಣ, ವರಾನ್ವೇಷಣೆಯ ಸಹಾಯಕ ಸಂಸ್ಥೆ, ಜ್ಯೋತಿಷಾಲಯ, ಹೆಣ್ಣಿಗೊಂದು ಕಾಲ – ಗಂಡಿಗೊಂದು ಕಾಲ, ಯಾವ ನಾಟಕ ? ಮುಂತಾದ ಇವರ ನಾಟಕಗಳು ರೇಡಿಯೋ ಹಾಗೂ ದೂರದರ್ಶನ ವಾಹಿನಿಗಳಲ್ಲಿ ಹಲವಾರು ಬಾರಿ ಪ್ರಸಾರಗೊಂಡವು. ಇವರ ಹಾಸ್ಯ ಲೇಖನಗಳು ವಿವಾಹ ಮಹೋತ್ಸವದ ಅವಾಂತರಗಳು ಎಂಬ ಸಂಕಲನದಲ್ಲಿ ಸೇರಿವೆ. ರಜೆ ಚೀಟಿ, ಅಜ್ಜಿಯ ಬಾಣಂತನ, ಕುಟುಂಬ ನಿಯಂತ್ರಣ, (ಮೆಮರೆ ಇ ಆದಾಬ್ ಎಂಬ ಉರ್ದು ಭಾಷಾ ಸಂಚಿಕೆಯಲ್ಲಿ ಪ್ರಕಟವಾಗಿದೆ), ಪ್ರವಾಸವೊ ಪ್ರಯಾಸವೊ, ಒಮ್ಮೆ ಎಡವಿದರೆ ಮೊದಲಾದ ಹಾಸ್ಯ ಕತೆಗಳು ಆಕಾಶವಾಣಿ ಹಾಗೂ ದೂರದರ್ಶನ ವಾಹಿನಿಗಳಲ್ಲಿ ನಾಟಕ ರೂಪಾಂತರವಾಗಿ ಪ್ರಸಾರಗೊಂಡಿವೆ. ಇವುಗಳಲ್ಲದೆ ಕತೆ ಸಣ್ಣದು – ಸಂದೇಶ ದೊಡ್ಡದು (ಭಾಗ ೧-೪), ಸನಾತನ ಧರ್ಮ ಸಂಪ್ರದಾಯಗಳು: ಸಂದೇಹ – ಸಮಾಧಾನ (ಭಾಗ ೧-೩) ಮುಂತಾದ ಹಲವಾರು ಕೃತಿಗಳನ್ನು ರಚಿಸಿರುವರಲ್ಲದೆ ಹಲವಾರು ಧ್ವನಿ ಸುರಳಿಗಳನ್ನೂ ಹೊರತಂದಿದ್ದರು.ಲಲಿತಾಂಬ ಚಂದ್ರಶೇಖರ್ ಅವರ ಸಾಹಿತ್ಯ ಹಾಗೂ ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಭಾರತೀಯ ವಿದ್ಯಾಭವನ (ಮುಂಬಯಿ) ದಿಂದ ಅತ್ಯುತ್ತಮ ಕಥಾ ಪ್ರಶಸ್ತಿ, ಆಂಧ್ರ ಸರಕಾರದ ಅತ್ಯುತ್ತಮ ಬೋಧಕ ಪ್ರಶಸ್ತಿ (ಎರಡು ಬಾರಿ), ಮೆಮರೆ ಇ ಆದಾಬ್ ಉರ್ದು ಸಂಸ್ಥೆಯಿಂದ ಅತ್ಯುತ್ತಮ ಕಥಾ ಪ್ರಶಸ್ತಿ; ಹೈದರಾಬಾದಿನ ಕನ್ನಡ ಸಾಹಿತ್ಯ ಮಂದಿರದಿಂದ ಶ್ರೇಷ್ಠ ಸಾಹಿತಿ ಪುರಸ್ಕಾರ; ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅತ್ಯುತ್ತಮ ಕಾದಂಬರಿ ಪ್ರಶಸ್ತಿ; ಭಾರತ ಸರಕಾರದಿಂದ ಅತ್ಯುತ್ತಮ ಬೋಧಕ ಪ್ರಶಸ್ತಿಗಳಲ್ಲದೆ ವಿಜಯಶ್ರೀ, ಅತ್ತಿಮಬ್ಬೆ ಪ್ರತಿಷ್ಠಾನ, ಸರ್. ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನ, ಸ್ವರಲಿಪಿ ಸಂಸ್ಥೆ ಮುಂತಾದವುಗಳ ಹಲವಾರು ಪ್ರಶಸ್ತಿಗಳು ಸಂದವು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಂದೇ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗಿದ್ದ 6 ವಿದ್ಯಾರ್ಥಿಗಳು: ಹೊಸಕೋಟೆ ಬಳಿ ಹೆದ್ದಾರಿಯಲ್ಲಿ ಕಾರು ಪಲ್ಟಿ, 3 ಯುವಕರು, 1 ಯುವತಿ ಸಾವು

Wed Feb 16 , 2022
ಬೆಳ್ಳಂ ಬೆಳಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅಟ್ಟೂರು ಗೇಟ್ ಬಳಿ ರಾ.ಹೆ. 75ರಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಡಿವೈಡರ್‌ ದಾಟಿ ಲಾರಿಗೆ ಕಾರು ಡಿಕ್ಕಿಯಾಗಿ ನಾಲ್ವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿ ಪಕ್ಕದ ರಸ್ತೆಗೆ ಹಾರಿ ಲಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ […]

Advertisement

Wordpress Social Share Plugin powered by Ultimatelysocial