ಮ್ಯಾಕ್ಸಿಂ ಗಾರ್ಕಿ

 
ವಿಶ್ವದ ಶ್ರೇಷ್ಠ ಬರಹಗಾರರಲ್ಲೊಬ್ಬರೆಂದು ಹೆಸರಾದವರು ಮ್ಯಾಕ್ಸಿಂ ಗಾರ್ಕಿ. ಸೋವಿಯೆತ್ ರಷ್ಯದ ಅತಿ ಸಾಮಾನ್ಯ ಕುಟುಂಬದಲ್ಲಿ ಬಡಗಿಯೊಬ್ಬನ ಮಗನಾಗಿ ಜನಿಸಿ ಅವರು ಏರಿದ ಎತ್ತರ ಅದಮ್ಯವಾದುದು.
ಮ್ಯಾಕ್ಸಿಂ ಗಾರ್ಕಿ ಎಂಬ ಕಾವ್ಯನಾಮದ ಅಲೆಕ್ಸಿಮ್ಯಾಕ್ಸಿಮೋವಿಚ್ ಪೆಷ್ಕೋವ್ ಅವರು ರಷ್ಯದ ನಿಷ್ನಿನೊವ್ಗೊರಾಡ್ನಲ್ಲಿ 1868ರ ಮಾರ್ಚ್ 28ರಂದು ಜನಿಸಿದರು. ತಂದೆ ಕಾಲರಾ ರೋಗದಿಂದ ಅಸುನೀಗಿದಾಗ ಇವರಿಗಿನ್ನೂ ಮೂರು ವರ್ಷ. ಹೀಗಾಗಿ ಗಾರ್ಕಿ ಬಾಲ್ಯದ ದಿನಗಳನ್ನು ತಮ್ಮ ಅಜ್ಜನ ಮನೆಯಲ್ಲಿ ಕಳೆದರು.
ತಮ್ಮ ಎಳೆಯ ವಯಸ್ಸಿನಿಂದಲೇ ಜೀವನೋಪಾಯಕ್ಕಾಗಿ ದುಡಿಯಲು ಪ್ರಾರಂಭಿಸಿದ ಗಾರ್ಕಿ, ತಾರುಣ್ಯದಲ್ಲಿ ಅಲೆಮಾರಿಯಾಗಿ ವೋಲ್ಗಾ ನದಿಯ ಮಧ್ಯಪ್ರದೇಶಗಳಿಂದ ಹಿಡಿದು ಕಾಕಸಸ್ ಪ್ರದೇಶದವರೆಗೆ ತಿರುಗಾಡಿದರು. ಈ ಪರ್ಯಟನೆಗಳಲ್ಲಿ ಅವರು ಕೂಳಿಗಾಗಿ ಕೈಗೊಂಡ ಕೂಲಿ ಕೆಲಸಗಳು ಅನೇಕ ತೆರನಾದದ್ದು. ಪಾತ್ರೆ ತೊಳೆಯುವವನಾಗಿ, ವಕೀಲನ ಕಾರಕೂನನಾಗಿ, ರೊಟ್ಟಿ ಬೇಯಿಸುವವನಾಗಿ ಹೀಗೆ ಎಲ್ಲ ರೀತಿಯಲ್ಲಿ ದುಡಿದರು. ಈ ದುಡಿತದಲ್ಲಿ ನಾನಾ ರೀತಿಯ ಜನಗಳ, ಬೀದಿಹೋಕರ, ಹೊಲಸುಕೇರಿ ನಿವಾಸಿಗಳ, ಕೂಲಿಕಾರರ, ಬುದ್ಧಿಜೀವಿಗಳ ಸಂವೇದನೆಗಳನ್ನು ದಕ್ಕಿಸಿಕೊಂಡರು. ಕಜಾನ್ ನಗರದಲ್ಲಿ ಕೆಲವು ಬುದ್ಧಿಜೀವಿಗಳು ನಡೆಸುತ್ತಿದ್ದ ರಾಜಕೀಯ ವಿಚಾರಗೋಷ್ಠಿಯನ್ನು ಸೇರಿ ಮಾರ್ಕ್ಸ್ ವಾದದ ಮೂಲಸೂತ್ರದ ದರ್ಶನವನ್ನಲ್ಲದೆ ಅರ್ಥಶಾಸ್ತ್ರದ ಅರಿವನ್ನೂ ಪಡೆದುಕೊಂಡರು. ಹೀಗೆ ತಮ್ಮ ಅಲೆಮಾರಿ ಜೀವನದಲ್ಲಿ ಪಡೆದ ಅನುಭವಗಳನ್ನೇ ತಮ್ಮ ಮುಂದಿನ ಸಾಹಿತ್ಯ ಜೀವನದ ಮೂಲಾಧಾರವಾಗಿಸಿಕೊಂಡ ಸಂವೇದನಾಶೀಲನೀತ.
ಉದ್ದಾಮ ವ್ಯಕ್ತಿತ್ವ, ಅದ್ಭುತ ಪ್ರತಿಭೆ ಮತ್ತು ತೀವ್ರ ಕಾಲ್ಪನಿಕ ಶಕ್ತಿಗಳೊಂದಿಗೆ ಜೀವನದ ಬಹುಮುಖವೂ, ಆಳವೂ ಆದ ಅನುಭವಗಳ ಸಂಗಮರಾದ ಗಾರ್ಕಿ ಉತ್ತಮ ಸಾಹಿತ್ಯವನ್ನು ನಿರ್ಮಾಣ ಮಾಡಿದರು.
ಗಾರ್ಕಿ ತಮ್ಮ ಲೇಖನ ಜೀವನವನ್ನು ಪ್ರಾರಂಭಿಸಿದ ಕಾಲ ಅತ್ಯಂತ ಕ್ರಾಂತಿಕಾರಿ ಸನ್ನಿವೇಶಗಳಿಂದ ಕೂಡಿತ್ತು. ಕಾರ್ಮಿಕ ಚಟುವಟಿಕೆಗಳು ಚುರುಕಿನಿಂದ ಮುನ್ನಡೆಯುತ್ತಿದ್ದವು. ಲೆನಿನ್ ಪಕ್ಷ ತನ್ನ ಚಟುವಟಿಕೆಗಳನ್ನು ಪ್ರಾರಂಭಿಸಿತ್ತು.
ಗಾರ್ಕಿ ಟಿಫ್ಲಿಸ್ ನಗರದ ರೈಲ್ವೆ ವರ್ಕ್ಷಾಪಿನಲ್ಲಿ ಶ್ರಮಜೀವಿಗಳ ಕ್ರಾಂತಿಕಾರಿ ತಂಡದ ಸದಸ್ಯರಾಗಿ ಕೈಗಾರಿಕಾ ಕೂಲಿಕಾರರ ಜೀವನದ ಪರಿಚಯ ಪಡೆದರು. ಅಲ್ಲಿ ಕಾಲುಜ್ನಿ ಎಂಬುವರು ಗಾರ್ಕಿಗೆ ತಮ್ಮ ಅನುಭವಗಳನ್ನೆಲ್ಲ ಬರೆಯಲು ಪ್ರೇರೇಪಿಸಿದರು. ಗಾರ್ಕಿ ಅವರ ಮೊದಲ ಕತೆಯಾದ ಮಕರಚುದ್ರಾ ಪ್ರಕಟವಾದದ್ದು ಟಿಫ್ಲಿಸ್ನ ಕಾವ್ತಾಜ್ ಪತ್ರಿಕೆಯಲ್ಲಿ. ಈ ಕತೆ ಗಾರ್ಕಿ (ಗಾರ್ಕಿ ಎಂದರೆ ಕಟು ಎಂದು ಅರ್ಥ) ಎಂಬ ಗುಪ್ತನಾಮದಲ್ಲಿ ಪ್ರಕಟವಾಯಿತು. ಮುಂದೆ ಇದೇ ಇವರ ಶಾಶ್ವತ ಹೆಸರಾಗುಳಿಯಿತು.
ಟಿಫ್ಲಿಸ್ ನಗರ ಬಿಟ್ಟಮೇಲೆ ಗಾರ್ಕಿ ತಮ್ಮ ಹುಟ್ಟು ಊರಾದ ನಿಷ್ನಿನೊವ್ ಗೊರಾಡ್ಗೆ ವಾಪಸಾದರು (ಈಗ ಈ ಊರಿಗೆ ಅವರ ಗೌರವಾರ್ಥವಾಗಿ ಗಾರ್ಕಿ ಎಂದು ಹೆಸರಿಡಲಾಗಿದೆ). ಇಲ್ಲಿ ರಷ್ಯದ ಸುಪ್ರಸಿದ್ಧ ಸಾಹಿತಿ ಕೊರೆಲೆಂಕೊ ಅವರು, ಗಾರ್ಕಿ ಅವರ ಬರಹ ಕಲೆ ಬೆಳಗಲು ಬಹಳ ಸಹಾಯ ಮಾಡಿದರು. ಗಾರ್ಕಿ ಅವರ ಕಥೆಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಲು ಪ್ರಾರಂಭವಾಯಿತು. ಅವರ ಮೊಟ್ಟ ಮೊದಲ ಕಥಾಸಂಕಲನ ಪ್ರಕಟವಾದದ್ದು 1898ರಲ್ಲಿ. ಹೀಗೆ ರಷ್ಯನ್ ಸಾಹಿತ್ಯ ಕ್ಷೇತ್ರದಲ್ಲಿ ಗಾರ್ಕಿ ಅವರ ಹೆಸರು ಅಡಿಯೂರಿತು. ಗಾರ್ಕಿಯವರ ಕತೆಗಳೆಲ್ಲವೂ ಪ್ರಚಂಡ ಕಾರ್ಮಿಕ ಮುನ್ನಡೆಯಿಂದ ಸಚೇತನಗೊಂಡ ಜನತೆಯ ಮನೋಭಾವದ ಚಿತ್ರಗಳಿಂದ ತುಂಬಿವೆ.
ಗಾರ್ಕಿ ಅವರ ಪ್ರಾರಂಭಿಕ ಕೃತಿಗಳು ದಿನಗೂಲಿಯವರ, ಅಲೆಮಾರಿಗಳ, ಸ್ವಪ್ನಜೀವಿಗಳ ಮತ್ತು ಬಂಡಾಯಕೋರರ ಭಾವನಾತ್ಮಕ ಚಿತ್ರಗಳಿಂದ ಕೂಡಿವೆ. ಗಾರ್ಕಿ ಕೇವಲ ದೀನದಲಿತರ ಜೀವನದ ಕಷ್ಟಕಾರ್ಪಣ್ಯಗಳ ವಾಸ್ತವಚಿತ್ರಣದಿಂದ ತೃಪ್ತರಾದಂತೆ ಕಾಣುವುದಿಲ್ಲ. ಮಾನವ ಜೀವನದ ಘನೋದ್ದೇಶವನ್ನು, ಮಾನವ ವಿಕಾಸದ ರೀತಿನೀತಿಗಳ ಕುರಿತೂ ಆಳವಾಗಿ ವಿಚಾರ ಮಾಡಿದ್ದಾರೆ. ಜೀವನದ ಸತ್ಯಸಂಗತಿಗಳ ಗ್ರಹಿಕೆ, ವ್ಯಾಪಕತೆಗಳಿಗಷ್ಟೇ ಗಮನ ಕೊಡದೆ ಈ ರೀತಿಯ ಜೀವನಕ್ಕೆ ಕಾರಣವೇನು ಅದರಿಂದ ಪಾರಾಗಲು ಮಾರ್ಗವೇನು ಎಂಬುದರ ಕುರಿತೂ ವಿಶ್ಲೇಷಿಸಿದ್ದಾರೆ. ಜನಜೀವನವನ್ನು ಸೌಂದರ್ಯರಾಹಿತ್ಯದಿಂದ ಮೇಲೆತ್ತಿ ಸೌಂದರ್ಯ ಮತ್ತು ಸದ್ಗುಣಗಳ ಬಗೆಗೆ ಅರಿವನ್ನುಂಟು ಮಾಡಿ ಕ್ರಿಯಾಶೀಲತೆಯಿಂದ ಹುರಿದುಂಬಿಸುವ ಹೊಸ ಮಾರ್ಗವನ್ನು ಅವರು ಪ್ರತಿಪಾದಿಸಿದ್ದಾರೆ.
ಗಾರ್ಕಿ ಅವರ ಪ್ರಖ್ಯಾತ ನಾಟಕವಾದ ದಿ ‘ಲೋಯರ್ ಡೆಪ್ತ್ಸ್’ (1902) ಕೃತಿಯಲ್ಲಿ ಕ್ರಾಂತಿಯ ಭಾವನೆ ಅತ್ಯಂತ ಪ್ರಭಾವಿಯಾಗಿ ಮೂಡಿಬಂದಿದೆ. ರಷ್ಯದಲ್ಲಿ ಇದರ ಪ್ರದರ್ಶನವನ್ನು ಬಹಿಷ್ಕರಿಸಲಾಗಿತ್ತಾದರೂ ಜಗತ್ತಿನ ಎಲ್ಲ ಮಹಾನಗರಗಳಲ್ಲೂ ಇದು ಪ್ರದರ್ಶಿಸಲ್ಪಟ್ಟಿತು. ಇದರಲ್ಲಿ ಬರುವ ಪಾತ್ರಗಳಾದ ಕಳ್ಳರು, ವೇಶ್ಯೆಯರು, ವರ್ಗಬಾಹಿರ ಶ್ರೀಮಂತರು – ಒಂದು ಕಿಕ್ಕಿರಿದ ವಠಾರದಲ್ಲಿ, ದುರ್ಗಂಧ ವಾತಾವರಣದಲ್ಲಿ, ಜೀವಿಸುತ್ತಿರುವ ದೃಶ್ಯ ಪ್ರೇಕ್ಷಕರನ್ನು ಕುರಿತು ಇಂಥ ಪರಿಸ್ಥಿತಿ ಖಂಡಿತ ಮುಂದುವರಿಯಕೂಡದು ಎಂದು ಒಕ್ಕೊರಲಿನಲ್ಲಿ ಸಾರಿ ಹೇಳುತ್ತದೆ. ಪಾಲಿಗೆ ಬಂದದ್ದು ಪಂಚಾಮೃತವೆಂದು ನಮ್ರರಾಗಿ ತೃಪ್ತಿಕರ ಜೀವನವನ್ನು ನಡೆಸಿರಿ ಎಂದು ಬೋಧಿಸುತ್ತಿದ್ದ ಲೂಕನನ್ನು ವಠಾರದ ನಿವಾಸಿಗಳು ಅದರಲ್ಲೂ ವಿಶೇಷವಾಗಿ ತನ್ನ ದುರದೃಷ್ಟವನ್ನು ಹೋರಾಟವಿಲ್ಲದೆ ಒಪ್ಪಿಕೊಳ್ಳುವ ಭಾವನೆಯೇ ಇಲ್ಲದಿದ್ದ ಸ್ಯಾಟಿನ್ ಎಂಬ ದಂಗೆಕೋರ ಕುಡುಕ ಕೂಡ ವಿರೋಧಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ.
ಗಾರ್ಕಿ ಅವರ ಪ್ರಸಿದ್ಧ ಕಾದಂಬರಿ ‘ತಾಯಿ’ (ಮದರ್) ಭಾವಪುರ್ಣ ವಿಚಾರಗಳಿಂದ ಕೂಡಿದುದಾಗಿದೆ. ಈ ಕಾದಂಬರಿ ರಷ್ಯದ ಕಾರ್ಮಿಕ ಜೀವನವನ್ನು ಮತ್ತು ಅಲ್ಲಿನ ಕಾರ್ಮಿಕರು ನಡೆಸಿದ ಹೋರಾಟವನ್ನು ಕುರಿತದ್ದು. ಕಾರ್ಮಿಕರು ಕ್ರಾಂತಿಕಾರಿ ಹೋರಾಟದಲ್ಲಿ ಹೇಗೆ ಆಧ್ಯಾತ್ಮಿಕ ಮನೋಭಾವನೆಗಳನ್ನು ವ್ಯಕ್ತಪಡಿಸುತ್ತಾರೆ ಎಂಬುದೇ ಈ ಕಾದಂಬರಿಯ ಗುರಿ. ಇದರಲ್ಲಿ ಪಾವೆಲ್ ವ್ಲಾಸೋವ್ ಮತ್ತು ಅವನ ತಾಯಿ ನಿಲೋವ್ನ ತಮ್ಮ ಹೋರಾಟದ ಜೀವನದಲ್ಲಿ ಹೇಗೆ ಸತ್ಯ ಮತ್ತು ಸೌಂದರ್ಯದ ಅರಿವನ್ನು ಪಡೆಯುತ್ತಾರೆ, ಹೋರಾಟ ಹೇಗೆ ಅವರ ನೀರಸ ಕಷ್ಟಮಯ ಜೀವನವನ್ನು ಶ್ರೀಮಂತವಾಗಿ ಮಾರ್ಪಡಿಸುತ್ತದೆ – ಎಂಬುದರ ಚಿತ್ರಣವಿದೆ. ಈ ಕೃತಿಯಿಂದ ಸಮಾಜವಾದೀ ವಾಸ್ತವತೆಯ ನಾಂದಿಯಾಯಿತು.
ರಷ್ಯದ ಎರಡು ಸಾಹಿತ್ಯಕ ಯುಗಗಳ ನಡುವಣ ಜೀವಂತ ಸೇತುವೆಯಂತೆ ತೋರುವ ಗಾರ್ಕಿಯ ಪಾತ್ರ ‘ತಾಯಿ’ ಕಾದಂಬರಿಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ, ಐತಿಹಾಸಿಕ ಮುನ್ನಡೆಯೆಂದರೆ ಮಾನವನ ಹಿತಸಾಧನೆ ಎಂಬುದನ್ನು ಸ್ಪಷ್ಟಪಡಿಸಿರುವುದೇ ಈ ಕಾದಂಬರಿಯ ಹಿರಿಮೆ. ಇದು ಬರಿಯ ನೊಂದಜೀವಿಗಳ ವಾಸ್ತವಿಕ ಚಿತ್ರಣ ಮಾತ್ರವಲ್ಲ, ಅವರು ತಮ್ಮ ಹೋರಾಟದ ಮೂಲಕ ಪ್ರಪಂಚವನ್ನು ಯಾವ ರೀತಿ ಮಾರ್ಪಡಿಸಲು ಸನ್ನದ್ಧರಾಗಿದ್ದಾರೆ ಎಂಬುದನ್ನು ಇದು ವಿವರಿಸುತ್ತದೆ.
ಗಾರ್ಕಿ ಅವರ ಕೃತಿಗಳಲ್ಲಿ ರಷ್ಯದ ಕಾರ್ಖಾನೆಗಳ, ಮಾಲೀಕರ, ವರ್ತಕರ, ಶ್ರೀಮಂತರ ಮತ್ತು ಬುದ್ಧಿಜೀವಿಗಳ ಚಿತ್ರಗಳನ್ನೂ ಕಾಣಬಹುದು. ಈ ವರ್ಗದ ವ್ಯಕ್ತಿಗಳನ್ನು ಚಿತ್ರಿಸುವಾಗ ಗಾರ್ಕಿ ಅವರನ್ನು ಬಂಡವಾಳಗಾರರೆಂಬ ಕಾರಣದಿಂದ ಮಾತ್ರ ಅವಹೇಳನ ಮಾಡುವುದಿಲ್ಲ. ಗಾರ್ಕಿ ಅವರ ಇತರ ಕಾದಂಬರಿಗಳಾದ ದಿತ್ರಿ, ಪೋಮಾಗಾರ್ದೇವ್, ದಿ ಲೈಫ್ ಆಫ್ ಮಾತ್ವೆ ಕೋಷ್ಮಿಯಾಕಿನ್ ಮತ್ತು ಆರ್ತ ಮನೋವ್ಸಗಳು ಕ್ರಾಂತಿಪುರ್ವ ರಷ್ಯದ ಒಡೆಯರ ಜೀವನವನ್ನು ಕುರಿತವುಗಳು. ಅನೇಕ ವೇಳೆ ಈ ಕಾದಂಬರಿಗಳಲ್ಲಿ ಬರುವ ವ್ಯಕ್ತಿಗಳು ದೃಢನಿಶ್ಚಯದಿಂದ ಕೆಲಸ ಮಾಡತಕ್ಕವರು, ಸಾಹಸಿಗಳು, ಕ್ರಿಯಾಶೀಲರು ಮತ್ತು ಸ್ವಪ್ರಯತ್ನದಿಂದ ಮಹತ್ತರವಾದ ಕೆಲಸಗಳನ್ನು ಸಾಧಿಸಿದವರು. ಈ ವರ್ಗದವರನ್ನು ಚಿತ್ರಿಸುವಾಗ ಅವರನ್ನು ನಿಂದಿಸುವುದಾಗಲೀ ಅವಹೇಳನಕ್ಕೆ ಗುರಿ ಮಾಡುವುದಾಗಲಿ ಗಾರ್ಕಿ ಅವರ ಉದ್ದೇಶವಲ್ಲ. ಇಂಥ ಜನರ ಜೀವನವನ್ನು ಬಂಡವಾಳ ಸಮಾಜ ಯಾವ ರೀತಿ ವಿರೂಪಗೊಳಿಸುತ್ತದೆ, ಅವರ ಆತ್ಮವನ್ನು ಯಾವ ರೀತಿ ಕುಂಠಿಸುತ್ತದೆ, ಹಣದ ಗಳಿಕೆಯ ಆಸೆ ಹೇಗೆ ಅವರನ್ನು ಕ್ರೂರಿಗಳನ್ನಾಗಿ ಮಾಡುತ್ತದೆ – ಎಂಬುದನ್ನು ಇವರ ಕೃತಿಗಳು ಸಾಹಿತ್ಯಕವಾಗಿ ಪ್ರತಿಬಿಂಬಿಸುತ್ತವೆ. ಆರ್ತಮನೋವ್ಸ ಕಾದಂಬರಿ ರಷ್ಯದ ವರ್ತಕವರ್ಗದ ಮೂರು ಪೀಳಿಗೆಗಳ ಜೀವನವನ್ನು ಒಳಗೊಂಡಿದೆ. ಈ ಕುಟುಂಬದ ಯಜಮಾನ ಇಲ್ಯ ಆರ್ತಮನೋವ್ ತನ್ನ ಸ್ವಂತ ನೆಲದಲ್ಲಿಯೇ ಬೆಳೆದು ಅಚಲವಾಗಿ ನಿಂತಿರುವ ಓಕ್ ಮರದಂತೆ ದೃಢನಾಗಿರುತ್ತಾನೆ. ಆತ ತನ್ನ ಹಣ, ಕಾಲ ಮತ್ತು ದುಡಿಮೆಗಳನ್ನು ತನ್ನ ಊರನ್ನು ಸಂಪದ್ಯುಕ್ತವಾದ ಪಟ್ಟಣವಾಗಿ ಮಾರ್ಪಡಿಸಲು ಸಂಕಲ್ಪ ಉಳ್ಳವನು. ಆದರೆ ಅವನ ಚಟುವಟಿಕೆಗಳೆಲ್ಲ ಶೋಷಣೆಯ ಆಧಾರದ ಮೇಲೆ ನಿಂತಿರುತ್ತವೆ. ಅವನ ಮಕ್ಕಳು ಮತ್ತು ಮೊಮ್ಮಕ್ಕಳು ಕ್ರಮೇಣ ಸೋಮಾರಿಗಳಾಗಿ, ಧ್ಯೇಯರಹಿತ ಜೀವನದ ಕೆಸರಿನಲ್ಲಿ ಬಿದ್ದು ಅಲ್ಪರಾಗುತ್ತಾರೆ. ವ್ಯಕ್ತಿ ತನಗೆ ತಾನೇ ಎಷ್ಟೇ ಉನ್ನತಸತ್ತ್ವನಾಗಿದ್ದರೂ ಸಾಮಾಜಿಕ ಅರ್ಥವ್ಯವಸ್ಥೆ ಶೋಷಣಾತ್ಮಕವಾದಾಗ ಅದರಿಂದ ಅವನೂ ಪಾರಾಗಲಾರದೆ ಅವನ ಭಾವೀ ಸಂತಾನವೆಲ್ಲ ವ್ಯರ್ಥಜೀವಿಗಳಾಗಿ ಪತನಗೊಳ್ಳುತ್ತಾರೆಂಬುದನ್ನೂ ಈ ಕಾದಂಬರಿಯಲ್ಲಿ ಸಾಂಕೇತಿಸಲಾಗಿದೆ.
ಗಾರ್ಕಿ ಅವರ ಕಡೆಯ ಮತ್ತು ಬಹು ದೊಡ್ಡ ಕೃತಿಯಾದ ಕ್ಲಿಂ ಸಾಮ್ಗಿನ್ನನ ಜೀವನ – ಎಂಬುದು ಒಬ್ಬ ವ್ಯಕ್ತಿ ಹೇಗೆ ತನ್ನ ಸ್ವಪ್ರತಿಷ್ಠೆ ಮತ್ತು ಅಲ್ಪತೆಯಿಂದ ಅರಿವಿಲ್ಲದೆಯೆ ತನ್ನ ಜೀವನವನ್ನು ವಿಷಪೂರಿತವನ್ನಾಗಿ ಮಾಡಿಕೊಳ್ಳುತ್ತಾನೆ ಎಂಬುದನ್ನು ಕುರಿತದ್ದು. 1880ರಿಂದ 1917ರ ವರೆಗಿನ ಅವಧಿಯ ರಷ್ಯದ ವಿಸ್ತೃತ ದೃಶ್ಯವನ್ನು ನೀಡುವ ಈ ಕಾದಂಬರಿಯ ನಾಯಕ ಕ್ಲಿಂ ಸಾಮ್ಗಿನ್. ಇವನೊಬ್ಬ ವಿಷಯ ಲಂಪಟ, ಸ್ವಪ್ರತಿಷ್ಠೆಯಿಂದ ಕೂಡಿದ ವಕೀಲ. ಇವನದು ಬಾಲ್ಯದಿಂದಲೂ ಯಾವ ಮಾತಿಗೂ ಸಿಕ್ಕಿಬೀಳದ, ಯಾವ ತತ್ವಕ್ಕೂ ತೆಕ್ಕೆಬೀಳದ ಯಾವ ಪ್ರಶ್ನೆಗೂ ಖಚಿತ ಉತ್ತರ ನೀಡದ ಪ್ರಕೃತಿ. ಸದಾ ತಾನು ಅನಾಥರಕ್ಷಕನೆಂದು ಬಡಾಯಿ ಕೊಚ್ಚುತ್ತಿರುತ್ತಾನೆ. ಆದರೆ ಇವನ ಜೀವನದ ಆಧಾರ ಶ್ರೀಮಂತರ ನೆರವು. ಇವನು ಹುಟ್ಟು ಗೋಸುಂಬೆ, ಸ್ವಾರ್ಥಿ. ಯಾವಾಗಲೂ ತನ್ನ ಯೋಗಕ್ಷೇಮಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾನೆ. ತಾನು ಎಲ್ಲರ ಪಕ್ಷಪಾತಿಯೆಂದು ನಟಿಸುತ್ತಾನೆ. ಆದರೆ ಯಾರ ಸಹಾಯಕ್ಕೂ ಒಂದು ಹುಲ್ಲುಕಡ್ಡಿಯನ್ನೂ ಎತ್ತುವುದಿಲ್ಲ. ಎಂಥ ಸನ್ನಿವೇಶಕ್ಕಾದರೂ ಹೊಂದಿಕೊಳ್ಳುವ ಚಾತುರ್ಯ ಇವನಲ್ಲಿದೆ. ಆದರೆ ಇವನಲ್ಲಿ ಮಾನವೀಯತೆ ಎಳ್ಳಷ್ಟೂ ಕಾಣುವುದಿಲ್ಲ. ಇವನ ನಿತ್ಯಜೀವನ ಕಪಟ ಮತ್ತು ಮೋಸದಿಂದ ತುಂಬಿದೆ.
ಗಾರ್ಕಿ ಈ ಕಾದಂಬರಿಯ ಮೂಲಕ ಪ್ರತಿಗಾಮಿ ಶಕ್ತಿಗಳ ವಿರುದ್ಧವಾದ ಮಹತ್ತರವಾದ ಹೋರಾಟ ನಡೆಸಿದ್ದಾರೆ. ಬಂಡವಾಳ ಅರ್ಥವ್ಯವಸ್ಥೆಯಲ್ಲಿ ಮಾನವ ಎಷ್ಟು ಕೀಳುಮಟ್ಟವನ್ನು ತಲುಪಬಲ್ಲ ಎಂಬುದನ್ನು ಕುರಿತ ಇಂಥ ಇನ್ನೊಂದು ಕಾದಂಬರಿ ಇದುವರೆಗೂ ಪ್ರಾಯಶಃ ರಚಿತವಾಗಿಲ್ಲ.
ಗಾರ್ಕಿ ಕೇವಲ ಸಾಹಿತಿಗಳಾಗಿಯೇ ಉಳಿಯಲಿಲ್ಲ. ತಮ್ಮ ಕಾಲದ ರಾಜಕೀಯ ಪ್ರಶ್ನೆಗಳನ್ನು ಕುರಿತು ಅನೇಕ ಉಜ್ಜ್ವಲ ಲೇಖನಗಳನ್ನು ಪ್ರಾವ್ಡಾ ಮತ್ತು ಇಜಂವೆಸ್ತಿಯಾ ಪತ್ರಿಕೆಗಳಲ್ಲಿ ಪ್ರಕಟಿಸಿದರು. ರಾಜಕೀಯ ಹೋರಾಟದಲ್ಲಿ ಭಾಗವಹಿಸಿದ್ದರು. 1905ರ ಜನವರಿ ಒಂಬತ್ತರಂದು ನಡೆದ ಹತ್ಯಾಕಾಂಡದ ಪ್ರತ್ಯಕ್ಷದರ್ಶಿಯಾದ ಗಾರ್ಕಿ ಅದನ್ನು ಖಂಡಿಸಿದರು. ಇದಕ್ಕಾಗಿ ಗಾರ್ಕಿಯನ್ನು ಬಂಧಿಸಿ ಗಡೀಪಾರು ಮಾಡಿದರು. ಜಾರ್ ಸರ್ಕಾರದ ಈ ಕೃತ್ಯ ಯುರೋಪನ್ನೆಲ್ಲ ಕದಡಿತು. ಯುರೋಪಿನ ಎಲ್ಲ ನಗರಗಳಲ್ಲೂ ಇದರ ವಿರುದ್ಧ ಸಭೆಗಳು ನಡೆದವು. ಫ್ರೆಂಚ್ ಮಹಾ ಸಾಹಿತಿ ಅನತೋಲ್ ಫ್ರಾನ್ಸ್ ಅವರು ಗಾರ್ಕಿಯಂಥ ಮನುಷ್ಯ ಪ್ರಪಂಚಕ್ಕೆ ಸೇರಿದವರು, ಪ್ರಪಂಚವೆಲ್ಲ ಅವರ ಸಹಾಯಕ್ಕಾಗಿ ಏಳಬೇಕು – ಎಂದು ಘೋಷಿಸಿದರು. ಗಾರ್ಕಿ 1906-1913ರ ವರೆಗೆ ವಿದೇಶಗಳಲ್ಲಿ ವಾಸಿಸಿದರು. ಇವರು 1921 ರಿಂದ 1928ರ ವರೆಗೆ ಇಟಲಿಯಲ್ಲಿ ವಾಸಿಸುತ್ತಿದ್ದರು. ರಷ್ಯಕ್ಕೆ ಹಿಂತಿರುಗಿದ ಅನಂತರ ರಷ್ಯದ ಲೇಖಕರ ನಿರ್ವಿವಾದ ನಾಯಕರಾದರು. 1934ರಲ್ಲಿ ಸೋವಿಯತ್ ಲೇಖಕರ ಒಕ್ಕೂಟ ಸ್ಥಾಪನೆಯಾದಾಗ ಅದರ ಪ್ರಥಮ ಅಧ್ಯಕ್ಷರಾದರು.
ಮಹಾನ್ ಲೇಖಕ ಮ್ಯಾಕ್ಸಿಂ ಗಾರ್ಕಿ 1936ರ ಜೂನ್ 14ರಂದು ನಿಷ್ನಿನೊವ್ಗೊರಾಡ್ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವಾಗ ನಿಧನರಾದರು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಚ್. ಜಿ. ಶಶಿಧರ

Mon Mar 28 , 2022
  ಆತ್ಮೀಯ ಗೆಳೆಯ ಎಚ್. ಜಿ. ಶಶಿಧರ ಚರಿತ್ರೆ-ಶಿಲ್ಪಕಲೆ-ಸಾಹಿತ್ಯ-ಛಾಯಾಗ್ರಹಣ-ಕಲೆ ಹೀಗೆ ಅಪರಿಮಿತ ಆಸಕ್ತಿ ಉಳ್ಳವರು. ಮಾರ್ಚ್ 27 ಶಶಿಧರ ಅವರ ಜನ್ಮದಿನ. ಹೊಸಕೋಟೆಯ ಡಿ. ಹೊಸಹಳ್ಳಿ ಅವರ ಹುಟ್ಟಿದ ಊರು. ಮುಂದೆ ಅವರ ಜೀವನ ಸಾಗುತ್ತಿರುವುದು ಬೆಂಗಳೂರಲ್ಲಿ. ಶಶಿಧರ ಅವರು ವಿದ್ಯಾಭ್ಯಾಸದಲ್ಲಿ ಎಂ.ಬಿ.ಎ ಮಾಡಿ ಬಾಯರ್ ಕ್ರಾಪ್ ಸರ್ವೀಸಸ್ ಲಿಮಿಟೆಡ್ ಸಂಸ್ಥೆಯಲ್ಲಿ ಅಕೌಂಟ್ಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ವೃತ್ತಿ ಆದರೆ ಅವರ ಪ್ರವೃತ್ತಿ ಸಾಹಿತ್ಯ ಮತ್ತು ಚರಿತ್ರೆಯ ಚಿತ್ತದ […]

Advertisement

Wordpress Social Share Plugin powered by Ultimatelysocial