ಕರ್ನಾಟಕದಲ್ಲಿ ಕಡಿಮೆ ಬೆಳೆ: ಮಾವಿಗೆ ಬಂಪರ್ ಬೆಲೆ

 

ಬೆಂಗಳೂರು, ಮೇ 27: ಅಕಾಲಿಕ ಮಳೆ, ಅತ್ಯಧಿಕ ತಾಪಮಾನ ಸೇರಿದಂತೆ ಹಲವು ಕಾರಣಗಳಿಂದ ರಾಜ್ಯದಲ್ಲಿ ಈ ಬಾರಿ ಮಾವಿನ ಫಸಲು ಕಡಿಮೆಯಾಗಿದ್ದು, ಬೆಲೆ ಗಗನಕ್ಕೇರಿದೆ. ಈ ಬಾರಿ ಮಾವಿನ ಹಣ್ಣಿನ ಸಿಹಿ ಸವಿಯಬೇಕೆಂದಿದ್ದರೆ ನೀವು ದುಬಾರಿ ಬೆಲೆ ತೆರಲೇಬೇಕಿದೆ.

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿ ಅಧ್ಯಕ್ಷ ಕೆ.

ವಿ. ರಾಜು ಪ್ರಕಾರ ಎಲ್ಲಾ ಬಗೆಯ ಮಾವಿನ ಹಣ್ಣಿನ ಬೆಲೆ ದುಬಾರಿಯಾಗಿದೆ, “ಕಳೆದ ವರ್ಷ ಉತ್ತಮ ಫಸಲು ಬಂದಿತ್ತು, ಕಳೆದ ವರ್ಷ ಇದೇ ಸಮಯದಲ್ಲಿ ಒಂದು ಕೆಜಿ ಬಾದಾಮಿ ಮಾವಿನ ಬೆಲೆ 50-60 ರೂ.ಗಳಷ್ಟಿತ್ತು, ಆದರೆ ಈ ಬಾರಿ ಫಸಲು ಕಡಿಮೆಯಾಗಿದ್ದು ಒಂದು ಕೆಜಿ ಬಾದಾಮಿ ಮಾವಿನ ಬೆಲೆ 150 ರೂ. ಗಳಾಗಿದೆ” ಎಂದರು.

ಅಂದರೆ ಕಳೆದ ಬಾರಿಗೆ ಹೋಲಿಸಿದರೆ ಮಾವಿನ ಬೆಲೆ ಬರೋಬ್ಬರಿ ಮೂರು ಪಟ್ಟು ಹೆಚ್ಚಾಗಿದೆ. ಕರ್ನಾಟಕದಲ್ಲಿ ಈ ಬಾರಿ ಮಾವು ಫಸಲು ಕೇವಲ ಶೇ.30 ರಿಂದ 40 ರಷ್ಟು ಬಂದಿದೆ. ಸಾಮಾನ್ಯವಾಗಿ ಬರುವ ಫಸಲಿಗಿಂತ ಕಡಿಮೆ ಇದೆ. ಎಡಬಿಡದೆ ಸುರಿದ ಅಕಾಲಿಕ ಮಳೆ ಮಾವು ಬಳೆ ಮೇಲೆ ಪರಿಣಾಮ ಬೀರಿದೆ. ಆಲಿಕಲ್ಲು ಮಳೆಯಿಂದ ಈ ಬಾರಿ ಸಾಕಷ್ಟು ಫಸಲು ನಷ್ಟವಾಗಿದೆ.

ಪ್ರತಿ ವರ್ಷ ಕರ್ನಾಟಕದಲ್ಲಿ 12 ರಿಂದ 14 ಲಕ್ಷ ಟನ್‌ ಮಾವು ಫಸಲು ಬರುತ್ತದೆ. ಆದರೆ ಈ ವರ್ಷ ರಾಜ್ಯದಲ್ಲಿ ಕೇವಲ 6 ರಿಂದ 8 ಲಕ್ಷ ಟನ್‌ ಅಷ್ಟು ಇಳುವರಿ ಬಂದಿದೆ.

ತಡವಾದ ಮಾವು ಫಸಲು
ಸಾಮಾನ್ಯವಾಗಿ ಏಪ್ರಿಲ್‌ನಿಂದ ಜುಲೈ ತಿಂಗಳು ಮಾವಿನ ಸೀಸನ್ ಆಗಿದ್ದು, ಆದರೆ ಈ ಬಾರಿ ರಾಮನಗರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಬೆಳೆಯುವ ಹಣ್ಣುಗಳಷ್ಟೇ ಬೆಂಗಳೂರು ಮಾರುಕಟ್ಟಗೆ ಬಂದಿದೆ. ರಾಜ್ಯದಲ್ಲಿ ಮಾವು ಬೆಳೆಯುವ ಪ್ರಮುಖ ಜಿಲ್ಲೆ ಕೋಲಾರದಿಂದ ಇನ್ನೂ ಮಾವಿನ ಹಣ್ಣಿನ ಸರಬರಾಜು ಆರಂಭವಾಗಿಲ್ಲ, ಮಾವು ಹೂ ಬಿಡುವುದು ತಡವಾದ ಕಾರಣ ಈ ಬಾರಿ ಬೆಳೆ ತಡವಾಗಿದ್ದು ಇನ್ನು ಕೆಲವು ದಿನಗಳಲ್ಲಿ ಕೋಲಾರದ ಮಾವು ಮಾರುಕಟ್ಟೆಗೆ ಬರಲಿದೆ.

ಪೂರೈಕೆ ಸರಿಯಾಗಿದ್ದಾಗ ಬೆಲೆ ಕೂಡ ಸ್ಥಿರತೆ ಕಾಯ್ದುಕೊಳ್ಳುತ್ತದೆ. ಆದರೆ ಈ ಸೀಸನ್‌ನಲ್ಲಿ ಮಾವಿನ ಪೂರೈಕೆ ಕಡಿಮೆಯಾಗಿದ್ದು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಕೋಲಾರದ ಮಾವು ಮಾರುಕಟ್ಟೆಗೆ ಬಂದ ನಂತರ ಮತ್ತು ಈ ಬಾರಿ ಮಾವು ಫಸಲು ತಡವಾಗಿರುವುದರಿಂದ ಕೆಲವು ದಿನಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಾವು ಮಾರುಕಟ್ಟೆಗೆ ಬರಲಿದ್ದು, ಬೆಲೆ ಕಡಿಮೆಯಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ಮಾವಿನ ಹಣ್ಣನ್ನೂ ಬಿಡದ ಧರ್ಮ ಸಂಘರ್ಷ

ಮಾವು ಫಸಲು ಶುರುವಾಗುವ ಆರಂಭದಲ್ಲಿ ರಾಜ್ಯದಲ್ಲಿ ಹಿಂದೂಗಳ ಹತ್ತಿರ ಮಾತ್ರ ಮಾವು ಮಾರಾಟ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದು ಹರಿದಾಡಿತ್ತು. ರಾಜ್ಯದಲ್ಲಿ ದೊಡ್ಡ ಸುದ್ದಿ ಮಾಡಿದ್ದ ಈ ವಿವಾದ ರೈತರ ಮೇಲೆ ಪರಿಣಾಮ ಬೀರಿತ್ತು.

ಮೊದಲೇ ಅಡ್ವಾನ್ಸ್ ಮಾಡಿದ್ದ ಮುಸ್ಲಿಂ ವ್ಯಾಪಾರಿಗಳು ಆತಂಕಗೊಂಡಿದ್ದರು. ಮಾವು ಮಾರಾಟಗಾರರಲ್ಲಿ ಮುಸ್ಲಿಮರೇ ಅಧಿಕವಾಗಿದ್ದು, ಮಾವು ಬೆಳೆಯುವ ಬಹುತೇಕ ರೈತರು ಹಿಂದೂಗಳೇ ಆಗಿದ್ದರು. ಕೆಲ ಹಿಂದೂ ಸಂಘಟನೆಗಳ ಈ ಹೋರಾಟಕ್ಕೆ ರೈತರು, ವರ್ತಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ವಿವಾದ ಅಷ್ಟಕ್ಕೇ ತಣ್ಣಗಾಗಿತ್ತು.

ಮಾವು ಬೆಳೆಯುವ ಪ್ರಮುಖ ಜಿಲ್ಲೆ ಕೋಲಾರ

ಒಂದು ವರ್ಷಕ್ಕೆ ಕೋಲಾರ ಜಿಲ್ಲೆಯಲ್ಲಿ ಸರಾಸರಿ 5 ಲಕ್ಷ ಟನ್ ಮಾವು ಬೆಳೆಯುತ್ತಾರೆ. ಶ್ರೀನಿವಾಸಪುರ ತಾಲ್ಲೂಕು ಒಂದರಲ್ಲೇ 3 ಲಕ್ಷ ಟನ್ ಮಾವು ಬೆಳೆಯಲಾಗುತ್ತದೆ. ಕೋಲಾರ ಜಿಲ್ಲೆಯಾದ್ಯಂತ 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಿದೆ. ಇದರಲ್ಲಿ ಶ್ರೀನಿವಾಸಪುರ ತಾಲ್ಲೂಕು ಒಂದರಲ್ಲೇ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದೆ. ಶ್ರೀನಿವಾಸಪುರ ಮಾವು ಮಾರುಕಟ್ಟೆಗೆ ಚಿಕ್ಕಬಳ್ಳಾಪುರ, ನೆರೆಯ ಆಂಧ್ರದ ಚಿತ್ತೂರು, ಮದನಪಲ್ಲಿ ಕಡೆಯಿಂದಲೂ ಮಾವು ಮಾರುಕಟ್ಟೆಗೆ ಬರುತ್ತದೆ.

ಇಲ್ಲಿ ಬೆಳೆಯುವ ಮಾವಿನ ಹಣ್ಣಿಗೆ ದೇಶದೆಲ್ಲೆಡೆ ಉತ್ತಮ ಬೇಡಿಕೆಯಿದೆ, ತೋತಾಪುರಿ, ಬೇನಿಶಾ, ನೀಲಂ, ಮಲ್ಲಿಕಾ, ಮಲಗೋಬಾ ಮಾವಿಗೆ ಹೆಚ್ಚಿನ ಬೇಡಿಕೆಯಿದೆ.

ಗ್ರಾಹಕರ ಜೊತೆ ವ್ಯಾಪಾರಿಗಳಿಗೂ ಬೇಸರ

ಮಾವಿನ ಹಣ್ಣಿನ ದರ ಏರಿಕೆ ಬಗ್ಗೆ ಪ್ರತಿಕ್ರಿಯಿಸಿರುವ ವ್ಯಾಪಾರಿಗಳು ಇಷ್ಟು ವರ್ಷಗಳ ಕಾಲ ಆಂಧ್ರ ಪ್ರದೇಶ, ಶ್ರೀನಿವಾಸಪುರ ಹಾಗೂ ಚನ್ನಪಟ್ಟಣದಿಂದ ಹಣ್ಣಿನ ಸರಬರಾಜು ಆಗಿತ್ತು. ಯಾವ ಮಂಡಿಯಲ್ಲಿ ದರ ಕಡಿಮೆ ಇರುತ್ತೋ, ಅಲ್ಲಿಂದ ತಂದು ಮಾರಾಟ ಮಾಡಲಾಗುತ್ತಿತ್ತು. ಆದರೆ ಈ ಬಾರಿ, ರಾಮನಗರ, ಚನ್ನಪಟ್ಟಣ ಬಿಟ್ಟು ಬೇರೆಲ್ಲಿಂದಲೂ ಇನ್ನೂ ಮಾವಿನ ಹಣ್ಣು ಬರುತ್ತಿಲ್ಲ. ಈಗ ಸರಬರಾಜು ಆಗುತ್ತಿರುವ ಮಾವಿನ ಗುಣಮಟ್ಟವೂ ಉತ್ತಮವಾಗಿಲ್ಲ. ಸಗಟು ಮಾರಾಟ ಬೆಲೆಯಲ್ಲಿ ತೀವ್ರ ಹೆಚ್ಚಳವಾಗಿರುವುದರಿಂದ ದರ ಏರಿಕೆ ಮಾಡುವುದು ಅನಿವಾರ್ಯ ಎಂದಿದ್ದಾರೆ.

ಬೆಲೆ ಹೆಚ್ಚಾಗಿರುವುದರಿಂದ ಅಂದುಕೊಂಡಷ್ಟು ವ್ಯಾಪಾರವೂ ಆಗಿಲ್ಲ ಎನ್ನುತ್ತಾರೆ ವ್ಯಾಪಾರಿಗಳು. ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಆರಂಭವಾಗುವ ಮಾವಿನಹಣ್ಣಿನ ವ್ಯಾಪಾರ ಮೇ ತಿಂಗಳವರೆಗೂ ನಡೆಯುತ್ತದೆ. ಮಾರ್ಚ್ ಆರಂಭದಲ್ಲಿ ದರಗಳು ಕೊಂಚ ಹೆಚ್ಚಿದರೂ ಏಪ್ರಿಲ್‌ ವೇಳೆಗೆ ಕಡಿಮೆಯಾಗಬೇಕಿತ್ತು. ಆದರೆ ಮಾವಿನ ಹಣ್ಣಿನ ಬೆಲೆ ಮಾರ್ಚ್‌ಗಿಂತ ಹೆಚ್ಚಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇಂದಿರಾ ಕ್ಯಾಂಟೀನ್‌ಗಳಲ್ಲಿ ಇನ್ನು ಮುಂದೆ ಇಸ್ಕಾನ್ ಊಟ: ಬೆಲೆ ದುಬಾರಿ ಸಾಧ್ಯತೆ!

Fri May 27 , 2022
ಬೆಂಗಳೂರು, ಮೇ26: ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಾರಂಭವಾಗಿದ್ದ ಇಂದಿರಾ ಕ್ಯಾಂಟೀನ್ ಯೋಜನೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೊರಗುತ್ತಿತ್ತು. ಇಂದಿರಾಕ್ಯಾಂಟೀನ್ ನಲ್ಲಿನ ಊಟದ ಸೌಲಭ್ಯ ಸರಿಯಾಗಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಇದರಿಂದಾಗಿ ಬಿಬಿಎಂಪಿ ಪಾಲಿಕೆ ವ್ಯಾಪ್ತಿಯಲ್ಲಿರುವ ಕ್ಯಾಂಟೀನ್‌ಗಳಿಗೆ ಇಸ್ಕಾನ್ ಊಟವನ್ನು ತರಿಸಲು ಸಿದ್ದವಾಗಿದೆ. ಇನ್ನು ಮುಂದೆ ಇಂದಿರಾ ಕ್ಯಾಂಟೀನ್ ನಲ್ಲಿ ಇಸ್ಕಾನ್ ಊಟ ಲಭ್ಯವಾಗಲಿದೆ. ಈ ಕುರಿತಂತೆ ಮಾಹಿತಿ ನೀಡಿದ ಬಿಬಿಎಂಪಿ ಹಣಕಾಸು ವಿಭಾಗ ಪಾಲಿಕೆ ವ್ಯಾಪ್ತಿಯಲ್ಲಿರೋ ಎಲ್ಲಾ ಕ್ಯಾಂಟೀನ್ ಗಳಲ್ಲಿ ಇಸ್ಕಾನ್ […]

Advertisement

Wordpress Social Share Plugin powered by Ultimatelysocial