ಮಂಡ್ಯ ಜಿಲ್ಲೆಯ ಜೀವನಾಡಿ ಕೆ ಆರ್ ಎಸ್ ಹುಟ್ಟಿದ ಕಥನ ಇಲ್ಲಿದೆ!!!!!!

ಒಂದಾನೊಂದು ಕಾಲದಲ್ಲಿ, ದೆಡೆಗೆ, ಮೈಸೂರು ದೊರೆ ಕೃಷ್ಣರಾಜ ಕುದುರೆ ಏರಿ ಬಂದ. ನದಿಯ ನೀರು ವ್ಯರ್ಥ್ಯವಾಗಿ ಹರಿಯುವುದನ್ನು ಆತ ಕಂಡ. ಆ ಕಡೆ ಬೆಟ್ಟ, ಈ ಕಡೆ ಬೆಟ್ಟಕ್ಕೆ ಅಡ್ಡಲಾಗಿ ಕಾವೇರಿ ನದಿಗೆ ಕಟ್ಟೆಯೊಂದ ಕಟ್ಟಿಸಿದ. ನಾಲೆ ತೆಗೆಸಿ, ನೀರು ಹರಿಸಿದ. ಇದರಿಂದ ಹುರುಳಿ ಬಿತ್ತುವ ಹೊಲದಲ್ಲೆಲ್ಲ ಸಿಹಿ ಕಬ್ಬು, ಬಂಗಾರ ಬಣ್ಣದ ಭತ್ತದ ಬೆಳೆ ಬೆಳೆದವು…’

ಇದು ರಾಜನೊಬ್ಬನ ಜನಪರ ಕಾಳಜಿಯ ಕುರಿತಾಗಿ ತಲೆಮಾರುಗಳಿಂದ ಜನರ ಬಾಯಲ್ಲಿ ಹಚ್ಚಹಸಿರಾಗಿರುವ ನೈಜ ಕಥೆ. ಈ ರಾಜನೇ ಮೈಸೂರು ಸಂಸ್ಥಾನದ ಮನ್ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್. ಅವರು ಬೆಂಗಾಡಾಗಿದ್ದ ಮಂಡ್ಯ ಜಿಲ್ಲೆಯ ಹಿಡುವಳಿ ಭೂಮಿಗೆ ನೀರುಣಿಸುವುದು, ಮೈಸೂರು ನಗರಕ್ಕೆ ಕುಡಿಯುವ ನೀರು ಪೂರೈಸುವುದು ಹಾಗೂ ಶಿವನ ಸಮುದ್ರ ವಿದ್ಯುದಾಗಾರಕ್ಕೆ ನಿಯಮಿತವಾಗಿ ನೀರು ಹರಿಯುವಂತೆ ಮಾಡುವುದು– ಈ ಮೂರು ಉದ್ದೇಶಗಳನ್ನು ಮೂಲವಾಗಿಟ್ಟುಕೊಂಡು ಕಾವೇರಿ ನದಿಗೆ ಕನ್ನಂಬಾಡಿ ಗ್ರಾಮದ ಬಳಿ ಅಣೆಕಟ್ಟೆಯನ್ನು ಕಟ್ಟಿಸಿ, ಬರಡು ನೆಲದಲ್ಲಿ ಹಸಿರುಕ್ಕಿಸಿ ಜನ ಮಾನಸದಲ್ಲಿ ಹಸಿರಾಗಿದ್ದಾರೆ.

ಈ ಅಣೆಕಟ್ಟೆ ನಿರ್ಮಾಣ ಕಾಮಗಾರಿ 1911ರಲ್ಲಿ ಆರಂಭವಾಯಿತಾದರೂ ನೀರಿನ ಹಂಚಿಕೆ ವಿಷಯದಲ್ಲಿ ಮೈಸೂರು ಮತ್ತು ಮದರಾಸು ಸರ್ಕಾರಗಳ ನಡುವೆ ವಿವಾದ ಉಂಟಾಗಿ ಕಾಮಗಾರಿಗೆ ತೊಡಕಾಗಿತ್ತು. 1924ರ ಅಖೈರು ಒಪ್ಪಂದದೊಡನೆ ವಿವಾದ ಬಗೆಹರಿದು ಕಾಮಗಾರಿ ಪುನಾರಂಭಗೊಂಡಿತು. 1924ರಲ್ಲಿ ಮದರಾಸು ಮತ್ತು ಮೈಸೂರು ಸರ್ಕಾರಗಳ ನಡುವೆ ನಡೆದ ಕಾವೇರಿ ನದಿ ನೀರು ಹಂಚಿಕೆ ಒಪ್ಪಂದದ ಪ್ರಕಾರ ಪ್ರತಿ ವರ್ಷ ಮೇ ತಿಂಗಳ 28ನೇ ತಾರೀಖಿನಿಂದ ಅದರ ಮುಂದಿನ ಜನವರಿ 27ರವರೆಗೆ ಪ್ರತಿ ದಿನ ಜಲಾಶಯಕ್ಕೆ ಬರುವ ನೀರಿನಲ್ಲಿ ದಿನವಹಿ ಫಲಾನಾ ಪರಿಮಾಣವೆಂದು ಗೊತ್ತಾಗಿರುವಷ್ಟು ಜಲಾಶಯದಿಂದ ಹರಿದು ಹೋಗಲು ಅವಕಾಶ ಮಾಡಿಕೊಟ್ಟು ಹೆಚ್ಚಾಗಿ ಬಂದ ನೀರನ್ನು ಜಲಾಶಯದಲ್ಲಿ ಶೇಖರಿಸಿಟ್ಟುಕೊಳ್ಳುವ ತೀರ್ಮಾನವಾಯಿತು. ಆದರೆ ಅದೇ ವರ್ಷ ನದಿಯಲ್ಲಿ ಭಾರಿ ಪ್ರವಾಹ ಬಂದು ಕೆಲವು ವಾರಗಳ ಕಾಲ ಕಾಮಗಾರಿ ಸ್ಥಗಿತಗೊಂಡಿತ್ತು.

 

ಕೆಆರ್ಎಸ್ ಜಲಾಶಯ ನಿರ್ಮಾಣದಲ್ಲಿ ಗಟ್ಟಿತನದಿಂದ ಕೂಡಿದ ಕಪ್ಪು ಗ್ರಾನೈಟ್ ಕಲ್ಲುಗಳನ್ನು ಬಳಸಲಾಗಿದೆ. ಮಧ್ಯದಲ್ಲಿ ‘ಮುರುಡು ಕಲ್ಲು’ ಮತ್ತು ‘ಸುರಕಿ ಗಾರೆ’ (ಸುಣ್ಣದ ಕಲ್ಲು, ಮರಳು, ಸುಟ್ಟ ಇಟ್ಟಿಗೆ ಪುಡಿಯನ್ನು ಮತ್ತು ಮರವಜ್ರವನ್ನು ಅರೆದು ಮಾಡಿದ್ದು) ಪ್ರಧಾನವಾಗಿ ಬಳಸಲಾಗಿದೆ. ಕಲ್ಲುಗಳನ್ನು ವರಸೆ ವರಸೆಯಾಗಿ ಜೋಡಿಸಿ ಅವುಗಳ ಮಧ್ಯೆ ಸುರಕಿ ಗಾರೆ ಸೇರಿಸಲಾಗಿದೆ.

ಕಾಮಗಾರಿಗೆ ಯಾವುದೇ ಗುತ್ತಿಗೆ ನೀಡದೆ ‘ಮರಾಮತ್ತು ಇಲಾಖೆ’ (ಕಾಮಗಾರಿ ಇಲಾಖೆ)ಯೇ ಎಂಜಿನಿಯರ್ಗಳನ್ನು ನೇಮಿಸಿಕೊಂಡು ಕಾಮಗಾರಿ ನಡೆಸಿತು. ಇದು ಬೃಹತ್ ಕಾಮಗಾರಿಯಾದ ಕಾರಣ ಪ್ರತಿಯೊಂದು ತಪಶೀಲು ವಿವರಕ್ಕೂ ವಿಶೇಷ ಗಮನ ಹರಿಸಲಾಗಿತ್ತು. ಅಣೆಕಟ್ಟೆಯ ಕಲ್ಲು ಕಟ್ಟಡ ಪರಿಮಾಣವು ಸುಮಾರು 3 ಕೋಟಿ ಘನ ಅಡಿಗಳು. ಕಟ್ಟಡದ ವೆಚ್ಚ ಪ್ರತಿ 100 ಅಡಿಗಳಿಗೆ 31 ರೂಪಾಯಿಗಳಂತೆ ಬಿದ್ದಿದೆ. ತಳಪಾಯಕ್ಕಾಗಿ ಅಗೆದ ಭೂಮಿ 87.3 ಲಕ್ಷ ಘನ ಅಡಿಗಳಾಗಿದ್ದು, ಅದಕ್ಕೆ ಸಾವಿರ ಘನ ಅಡಿಗೆ 55 ರೂಪಾಯಿ ವೆಚ್ಚವಾಗಿದೆ. ಜಲಾಶಯದ ನಿರ್ಮಾಣ ಹಂತದಲ್ಲಿ 10 ಸಾವಿರ ಕೆಲಸಗಾರರು ದುಡಿದಿದ್ದಾರೆ.

ಜಲಾಶಯದ ಬೇರೆ ಬೇರೆ ಮಟ್ಟದಲ್ಲಿ ವಿವಿಧ ಅಳತೆಯ ಒಟ್ಟು 171 ತೂಬುಗಳನ್ನು ಅಳವಡಿಸಲಾಗಿದೆ. ಪ್ರವಾಹದ ನೀರು ಹೊರ ಹರಿಯಲು, ಕೆಸರು ಕೊಚ್ಚಿ ಹೋಗುವಂತೆ ಮಾಡಲು ಹಾಗೂ ವಿದ್ಯುತ್ ಉತ್ಪಾದನಾ ಘಟಕಕ್ಕೆ ನೀರು ಹರಿಸಲು ಪ್ರತ್ಯೇಕ ತೂಬುಗಳನ್ನು ಅಳವಡಿಸಲಾಗಿದೆ. ದಕ್ಷಿಣ ದ್ವಾರದ ಆಚೆಗೆ 8 ಅಡಿ ಅಗಲ ಮತ್ತು 12 ಅಡಿ ಎತ್ತರ ಇರುವ 40 ತೂಬುಗಳಿವೆ. ನೆಲಮಟ್ಟದಿಂದ 106 ಅಡಿ ಎತ್ತರದಲ್ಲಿ ಈ ತೂಬುಗಳನ್ನು ಅಳವಡಿಸಲಾಗಿದೆ. ಈ ತೂಬುಗಳ ಆಚೆಗೆ 10 ಅಡಿ ಅಗಲ ಮತ್ತು 8 ಅಡಿ ಎತ್ತರದ 48 ತೂಬುಗಳಿದ್ದು, ನದಿ ಪಾತ್ರದ 103 ಅಡಿಗಳ ಮಟ್ಟದಲ್ಲಿ ಇವುಗಳನ್ನು ಇಡಲಾಗಿದೆ. ಈ ತೂಬು ಬಾಗಿಲುಗಳ ಮೇಲೆ 10 ಅಡಿ ಅಗಲ ಮತ್ತು 10 ಅಡಿ ಎತ್ತರದ 48 ತೂಬುಗಂಡಿಗಳಿವೆ. ನೆಲಮಟ್ಟದಿಂದ 114 ಅಡಿಗಳ ಎತ್ತರದಲ್ಲಿರುವ ಈ ತೂಬುಗಂಡಿಗಳಿಗೆ ಸ್ವಯಂ ಚಾಲಿತ ಬಾಗಿಲುಗಳನ್ನು ಜೋಡಿಸಲಾಗಿದೆ. ಈ ತಂತ್ರಜ್ಞಾನಕ್ಕೆ ಸರ್.ಎಂ. ವಿಶ್ವೇಶ್ವರಯ್ಯ ಅವರು ಹಕ್ಕುಸ್ವಾಮ್ಯ ಪಡೆದಿದ್ದರು. ಜಲಾಶಯದ ಮಟ್ಟ 124 ಅಡಿಗೆ ಮುಟ್ಟುತ್ತಿದ್ದಂತೆ ಇವು ತಾವಾಗಿಯೇ ತೆರೆದುಕೊಳ್ಳುತ್ತವೆ.

ಈ ತೂಬುಗಳ ಜತೆಗೆ 80 ಅಡಿ ಎತ್ತರದಲ್ಲಿ 10 ಅಡಿ ಅಗಲ ಮತ್ತು 20 ಅಡಿ ಎತ್ತರವಿರುವ 16 ತೂಬುಗಳಿವೆ. ಇವುಗಳಲ್ಲದೆ ಅಣೆಕಟ್ಟೆಯ ಮಧ್ಯಭಾಗದಲ್ಲಿ 6 ಅಡಿ ಅಗಲ ಮತ್ತು 15 ಅಡಿ ಎತ್ತರದ 11 ತೂಬುಗಳಿದ್ದು, ಕ್ರ್ಯಾಬ್ವಿಂಚ್ ಸಾಧನ ಬಳಸಿ ಮೇಲಕ್ಕೇರಿಸುವ ಮತ್ತು ಕೆಳಕ್ಕೆ ಇಳಿಸುವ ಮೂಲಕ ಜಲಾಶಯದ ಕೆಸರನ್ನು ಹೊರ ಹಾಕಬಹುದಾಗಿದೆ. ಜಲಾಶಯದ ಈ ಎಲ್ಲ ತೂಬುಗಳನ್ನು ಒಮ್ಮೆಲೇ ತೆರೆದರೆ 3.50 ಲಕ್ಷ ಕ್ಯೂಸೆಕ್ (ಒಂದು ಸೆಕೆಂಡ್ಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ಆಗುತ್ತದೆ) ಹೊರ ಹರಿಯುತ್ತದೆ. 80 ಅಡಿ ಮಟ್ಟದ 31 ತೂಬುಗಳ ಬಾಗಿಲುಗಳು ಇಂಗ್ಲೆಂಡ್ನ ರ್್ಯಾನ್ಸಮ್್ಸ ಕಂಪೆನಿಯಿಂದಲೂ, ಉಳಿದ ತೂಬುಗಳ ಬಾಗಿಲುಗಳು ಭದ್ರಾವತಿಯ ಕಬ್ಬಿಣದ ಕಾರ್ಖಾನೆಯಲ್ಲಿ ಬೀಡು ಕಬ್ಬಿಣದಿಂದಲೂ ತಯಾರಿಸಲಾಗಿದೆ.

 

ಕೆ‌ ಆರ್‌ ಎಸ್ ಕಟ್ಟಲು ಶ್ರಮಿಸಿದವರು

ದಿವಾನರುಟಿ. ಆನಂದರಾವ್ (1909–1912 ನವೆಂಬರ್), ಸರ್.ಎಂ. ವಿಶ್ವೇಶ್ವರಯ್ಯ ( 1912–18 ಡಿಸೆಂಬರ್), ಸರ್.ಎಂ. ಕಾಂತರಾಜ ಅರಸ್ (1918– 1922 ಮಾರ್ಚ್), ಸರ್..ಆರ್. ಬ್ಯಾನರ್ಜಿ (1922– 1926 ಮೇ), ಸರ್. ಮಿರ್ಜಾ ಇಸ್ಮಾಯಿಲ್ (1926– 1941 ಜೂನ್).

ಮುಖ್ಯ ಎಂಜಿನಿಯರ್ಗಳು

ಸರ್.ಎಂ. ವಿಶ್ವೇಶ್ವರಯ್ಯ (1910–1912 ನವೆಂಬರ್), ಕರ್ಪೂರಿ ಶ್ರೀನಿವಾಸರಾವ್ (1912–1917 ಜೂನ್), ರಾವ್ ಬಹದ್ದೂರ್ ಬಿ. ಸುಬ್ಬರಾವ್ (1917 ಜೂನ್– 1917 ಡಿಸೆಂಬರ್), ಎಸ್. ಕಡಾಂಬಿ (1917 ಜೂನ್– 1917 ಡಿಸೆಂಬರ್, 1921 ಏಪ್ರಿಲ್– 1922 ಡಿಸೆಂಬರ್, 1923 ಏಪ್ರಿಲ್– 1923 ಡಿಸೆಂಬರ್) ಕೆ. ಕೃಷ್ಣ ಐಯಂಗಾರ್ (1918– 1931 ಮಾರ್ಚ್), ಜಾನ್ಬೋರ್ (1923 ಜನವರಿ– 1923 ಮಾರ್ಚ್), ಕೆ.ಆರ್. ಶೇಷಾಚಾರ್ (1924– 1931), ಎಸ್. ಶ್ರೀನಿವಾಸ ಅಯ್ಯರ್ (1931– 1934 ಜೂನ್).

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

D K Shivakumar |ಮಕ್ಕಳೊಂದಿಗೆ ಡಿಕೆಶಿ | Mekedatu Padayatre | Childrens | Speed News Kannada |

Thu Jan 13 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial