ಡಾ. ಎಚ್. ಎಲ್. ನಾಗೇಗೌಡರನ್ನು ನೆನೆದಾಗಲೆಲ್ಲ ಅವರ ದೊಡ್ಡಮನೆ ನೆನಪಾಗುತ್ತದೆ.

ಡಾ. ಎಚ್. ಎಲ್. ನಾಗೇಗೌಡರನ್ನು ನೆನೆದಾಗಲೆಲ್ಲ ಅವರ ದೊಡ್ಡಮನೆ ನೆನಪಾಗುತ್ತದೆ. ಅವರು ಸ್ಥಾಪಿಸಿರುವ ರಾಮನಗರದ ಬಳಿ ಇರುವ ಜಾನಪದ ಲೋಕ ನೆನೆದು ಮನ ಸುಖಗೊಳ್ಳುತ್ತದೆ. ‘ಜಾನಪದ ಲೋಕ’ದಲ್ಲಿ ಅಡ್ಡಾಡಿ ಪಕ್ಕದಲ್ಲಿದ್ದ ಜನಪದದ ಸೊಗಡನ್ನು ಮೂಡಿಸಿಕೊಂಡಿರುವ ಕಾಮತ್ ಲೋಕರುಚಿಯಲ್ಲಿ ಪಟ್ಟೆ ಇಡ್ಲಿ, ಜೋಳದ ರೊಟ್ಟಿ ಊಟ ಇವನ್ನು ಮೆಲ್ಲುವುದರಲ್ಲಿ ಅದೇನೋ ಸುಖವಿದೆ. ಬಿರುಸಿನ ಯಾತ್ರೆಗೆ ಎಂದು ಬೆಂಗಳೂರು ಮೈಸೂರು ದಾರಿಯಲ್ಲಿ ಹಾದಿ ಕ್ರಮಿಸುವಾಗಲೂ ಕಾಮತ್ ಲೋಕರುಚಿಯ ರುಚಿ ಕಾಣದೆ ಹಾಗೆಯೇ ಹೋಗುವುದು ಅಪರೂಪವೇ ಸರಿ. ಹಾಗೆ ಕುಳಿತಾಗ ಕೂಡ ಪಕ್ಕದಲ್ಲಿನ ಜಾನಪದ ಲೋಕದ ತಂಗಾಳಿ ಕೊಡುವ ಸುಖ ವಿಶಿಷ್ಟವಾದದ್ದು. ಹಳ್ಳಿಮನೆಗಳ ಸೌಭಾಗ್ಯವಿಲ್ಲದ ನಮಂತಹ ಪಟ್ಟಣಿಗರಿಗೆ ಅದೊಂದು ಸೊಬಗಿನ ಸಿರಿ ತವರು ಮನೆಯಂತಿದೆ.
ನಾಗೇಗೌಡರು ಐ.ಎ.ಎಸ್ ಅಧಿಕಾರಿಯಂತಹ ಉತ್ತುಂಗ ಸ್ಥಾನದಲ್ಲಿದ್ದರೂ, ಲೋಕಸೇವಾ ಆಯೋಗದಂತಹ ಪ್ರಮುಖ ಹುದ್ದೆಗಳಲ್ಲಿ ಅಲಂಕೃತರಾಗಿದ್ದರೂ ಅವರ ಹೃದಯ ಹಳ್ಳಿಗಳಲ್ಲಿ ಅಡಗಿದ್ದ ಸಾಂಸ್ಕೃತಿಕ ಮನಗಳ ಹಿಂದೆ ಓಡಾಡುತ್ತಿದ್ದುದು ಅಚ್ಚರಿಯ ವಿಚಾರವೆನಿಸುತ್ತದೆ. ಅವರ ಕನ್ನಡ ಪ್ರೀತಿಯ ಬಗ್ಗೆ ಸ್ವಾನುಭವಕ್ಕೆ ಒಂದು ಘಟನೆ ನೆನಪಾಗುತ್ತದೆ. ನಾವು ಒಂದು ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದೆವು. ಕನ್ನಡ ಕಾರ್ಯಕ್ರಮ ಆಯೋಜಿಸುವುದರ ಕಷ್ಟ ಯಾಕೆ ಹೇಳ್ತೀರಿ. ಕಾರ್ಯಕ್ರಮ ಆಯೋಜನೆ ಮಾಡಿ ಅಯ್ಯೋ ಜನ ಇಷ್ಟು ಕಡಿಮೆ ಇದ್ದಾರಲ್ಲಪ್ಪ ಎಂದು ಒಬ್ಬೊಬ್ಬರನ್ನೂ ಮದುವೆ ಮನೆಯ ಆರತಕ್ಷತೆಯಲ್ಲಿ ಸ್ವಾಗತಿಸುವಂತೆ ಜನರನ್ನು ಬರವು ಮಾಡಿಕೊಳ್ಳುತ್ತಿದ್ದ ನಮ್ಮ ಅಂದಿನದಿನದ ಪರಿಪಾಟಲನ್ನು, ನಾವು ಇತರರಿಗೆ ಆಗುತ್ತಿದ್ದ ನಗೆಪಾಟಲನ್ನು ನೆನೆದು ನಗುಬರುತ್ತಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸೂಟುಬೂಟು ಧರಿಸಿದ್ದ ಒಬ್ಬ ವ್ಯಕ್ತಿಯನ್ನು ಬನ್ನಿ ಬನ್ನಿ ಎಂದು ಸ್ವಾಗತಿಸಿದಾಗ, ನಾನು ನಾಗೇಗೌಡ ಯಾವುದೋ ಕಾರ್ಯಕ್ರಮಕ್ಕೆ ಕರೆದರು, ಅದು ಕ್ಯಾನ್ಸೆಲ್ ಆಯ್ತು ಇಲ್ಲಿಗೆ ಬಂದೆ ಅಂದಾಗಲೇ ಗೊತ್ತಾಗಿದ್ದು ನಾನು ಮಾತನಾಡುತ್ತಿದ್ದುದು ಡಾ. ಎಚ್. ಎಲ್. ನಾಗೇಗೌಡರ ಬಳಿ ಅಂತ. ಅಂತಹ ಅನಂತ ಪ್ರೀತಿಯ ದಿಗ್ದರ್ಶನ ಕಂಡು ಮನಸ್ಸು ಮೂಕವಾಗಿತ್ತು. ಅಂದು ಅವರು ಪ್ರೀತಿಯಿಂದ ಕೊಟ್ಟ ‘ಸೊನ್ನೆಯಿಂದ ಸೊನ್ನೆಗೆ’ ಪುಸ್ತಕ ಈಗಲೂ ನೆನಪಿನಲ್ಲಿದೆ.”ಒಂದು ಕಾಲಕ್ಕೆ ತೆಂಗಿನಕಾಯಿ ವ್ಯಾಪಾರಕ್ಕೆ ಪ್ರಸಿದ್ಧಿ ಪಡೆದಿದ್ದ, ಮಂಡ್ಯ ಜೆಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನಹಳ್ಳಿ ನಾಗೇಗೌಡರ ಹುಟ್ಟೂರು. ಅಂದು ಅದು ಬಸ್ಸು, ಬೈಸಿಕಲ್ಲುಗಳನ್ನೇ ಕಂಡರಿಯಾದ ಊರಾಗಿತ್ತು. ಇಂತಹ ಸಣ್ಣ ಹಳ್ಳಿಯಲ್ಲಿ 1915ರ ಫೆಬ್ರವರಿ 11ರಂದು ‘ದೊಡ್ಡಮನೆ’ ಕುಟುಂಬದಲ್ಲಿ ಜನಿಸಿದ ನಾಗೇಗೌಡರ ಮನೆ ಅಕ್ಷರಶಃ ಸಂಖ್ಯಾಬಲದಿಂದಲೂ ದೊಡ್ಡದಾಗಿಯೇ ಇತ್ತು. ಸಂಸಾರದ ಹಲವು ಮಂದಿ, ಆಳುಕಾಳು, ದನ, ಕರು, ಕುರಿ, ಕೋಳಿ ಹೀಗೆ ಸಂಖ್ಯಾಬಲದಿಂದಲ್ಲದೆ ಗುಣ, ಸಂಪತ್ತು ಮತ್ತು ಸಂಸ್ಕೃತಿಯ ಲೆಕ್ಕದಲ್ಲೂ ಸಹ ಅದು ದೊಡ್ಡಮನೆಯೇ ಆಗಿತ್ತು. ನಾಗೇಗೌಡರು ಹುಟ್ಟಿದ ಮೂರುವರ್ಷಕ್ಕೆ ತಾಯಿ ನಿಧನರಾಗಿ ಅಜ್ಜಿಯ ಆರೈಕೆಯಲ್ಲಿ ಬೆಳೆದರು.ಹೈಸ್ಕೂಲು ಮುಗಿಸಿ ಮುಂದೆ ಓದಲು ಬೆಂಗಳೂರಿಗೆ ಬಂದ ನಾಗೇಗೌಡರಿಗೆ ಹಾಸ್ಟೆಲ್ ವಾಸ. ಹಾಸ್ಟೆಲ್ ಪಕ್ಕದಲ್ಲಿದ್ದ ರಾಮಕೃಷ್ಣಾಶ್ರಮ ಅವರಿಗೆ ಅಚ್ಚುಮೆಚ್ಚು. ಕಾಲೇಜಿನ ದಿನಗಳಲ್ಲಿ ಸರೋಜಿನ ನಾಯ್ಡು, ರೈಟ್ ಆನರಬಲ್ ಶ್ರೀನಿವಾಸಶಾಸ್ತ್ರಿ ಮತ್ತು ಗಾಂಧೀಜಿಯವರ ಭಾಷಣ ಕೇಳಿದ ಪುಳಕಿತ ಭಾವ ಅವರನ್ನಾವರಿಸಿತ್ತು. ಕಾಲೇಜಿನಲ್ಲಿ ಬಿ.ಎಂ. ಶ್ರೀ ಇಂಗ್ಲಿಷ್ ಕಲಿಸಿದರೆ, ವಿ.ಸೀ ಕನ್ನಡ ಕಲಿಸುತ್ತಿದ್ದರು. ಸಿ. ರಂಗಾಚಾರ್ ಎಂಬ ಸಂಸ್ಕೃತ ಮೇಷ್ಟು ಕಾಲೇಜಿನಿಂದ ಹೊರಗೆ ಕಲಿಸುತ್ತಿದ್ದ ಹಿಂದಿಯನ್ನು ಕೂಡಾ ಅಭ್ಯಾಸ ಮಾಡಿ ಪ್ರಾವೀಣ್ಯತೆ ಪಡೆದರು.ಮುಂದೆ ಮೈಸೂರಿನ ಮಹಾರಾಜ ಕಾಲೇಜು ಸೇರಿ ಅಲ್ಲಿನ ಅತಿರಥ ಮಹಾರಥಿಗಳ ಗರಡಿಯಲ್ಲಿ ಪಳಗಿದರು. ಬಿ.ಎಸ್ಸಿ ಓದಿದ ನಂತರ ಲಾ ಓದಲು ಇಲ್ಲಿ ಅವಕಾಶ ಸಿಗದಿದ್ದ ಕಾರಣ ಪುಣೆಯಲ್ಲಿ ಓದಿದರು. ಕೇಂದ್ರೀಯ ನೇಮಕಾತಿ ಮಂಡಳಿಯ ಮೂಲಕ ಮುನ್ಸೀಫ್ ಕೋರ್ಟ್ ಮುನ್ಷಿ ಕೆಲಸದಿಂದ ಅವರ ಕಾರ್ಯಕ್ಷೇತ್ರ ಪ್ರಾರಂಭಗೊಂಡಿತು. ವಿವಾಹದ ನಂತರ ಮೈಸೂರು ಸಿವಿಲ್ ಸರ್ವೀಸಸ್ ಸ್ಪರ್ಧಾ ಪರೀಕ್ಷೆ ಬರೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ರೆವಿನ್ಯೂ ಪ್ರೊಬೆಷನರಿ ಅಧಿಕಾರಿಯಾಗಿ ಹಾಗೂ 1941ರಲ್ಲಿ ಗೆಜೆಟೆಡ್ ಅಧಿಕಾರಿಯಾದರು. 1960ರಲ್ಲಿ ನಾಗೇಗೌಡರು ಐ.ಎ.ಎಸ್. ಶ್ರೇಣಿಗೆ ಆಯ್ಕೆಯಾದರು. ಶಿವಮೊಗ್ಗ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಾಗಿ ಅತ್ಯುತ್ತಮವಾದ ಸೇವೆ ಸಲ್ಲಿಸಿ ಜನಪ್ರಿಯತೆ ಪಡೆದರು. 1973ರಲ್ಲಿ ರಾಜ್ಯದ ಲೋಕಾ ಸೇವಾ ಆಯೋಗದ ಸದಸ್ಯರಾಗಿ ನೇಮಿಸಲ್ಪಟ್ಟ ಅವರು ತಮ್ಮ ಆರು ವರ್ಷಗಳ ಅಧಿಕಾರಾವಧಿಯಲ್ಲಿ ಸಾವಿರಾರು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಉದ್ಯೋಗ ನೀಡಿದ್ದರು. ನಿವೃತ್ತಿಯ ನಂತರ ರಾಜ್ಯ ಸರ್ಕಾರವು ಅವರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡಿತ್ತು.ನಾಗೇಗೌಡರು ಸೇರಿದ್ದು ಆಡಳಿತ ಕ್ಷೇತ್ರವನ್ನಾದರೂ ಅವರ ಆಸಕ್ತಿ ಕನ್ನಡ ಸಾಹಿತ್ಯ ಮತ್ತು ಜಾನಪದದಲ್ಲಿತ್ತು. ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳೆರಡರಲ್ಲೂ ಪ್ರಭುತ್ವ ಪಡೆದಿದ್ದ ನಾಗೇಗೌಡರು ಕವಿಯಾಗಿ, ಕಥೆಗಾರರಾಗಿ, ಕಾದಂಬರಿಕಾರರಾಗಿ, ಭಾಷಾಂತರಕಾರರಾಗಿ, ಪ್ರವಾಸಕಥನಕಾರರಾಗಿ, ಆತ್ಮಚರಿತ್ರಕಾರರಾಗಿ, ಜಾನಪದ ಕರ್ತಾರರಾಗಿ ನೀಡಿರುವ ಕೊಡುಗೆ ಅಮೂಲ್ಯವಾದುದು. ಅವರ ಜೀವನಾನುಭವದ ವ್ಯಾಪ್ತಿ ಎಷ್ಟು ವಿಶಾಲ, ಅಪರಿಮಿತ ಎಂಬುದಕ್ಕೆ ಅವರು ರಚಿಸಿರುವ ಕೃತಿಗಳೇ ಸಾಕ್ಷಿ. ಒಬ್ಬ ವ್ಯಕ್ತಿ ತನ್ನ ಜೀವಿತದ ಅವಧಿಯಲ್ಲಿ ಇಷ್ಟೆಲ್ಲವನ್ನೂ ಸಾಧಿಸಲು ಸಾಧ್ಯವೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿರುವ ಇವರ ಸಾಧನೆ ಇವರ ವ್ಯಕ್ತಿತ್ವದಷ್ಟೇ ಹಿರಿದಾದದ್ದು.‘ನಾನಾಗುವೆ ಗೀಜಗನ ಹಕ್ಕಿ’ ನಾಗೇಗೌಡರು ತಮ್ಮ ತಾರುಣ್ಯದಲ್ಲಿ ರಚಿಸಿದ ಕವನಗಳ ಸಂಕಲನ. ‘ಕಥೆ – ವ್ಯಥೆ’ ಸಂಕಲನ ಎಂಟು ನೀಳ್ಗವನಗಳನ್ನು ಹೊಂದಿದ್ದು ನಾಗೇಗೌಡರ ಕವನ ಸ್ವಂತಿಕೆಯನ್ನು ಮೆರೆಯುತ್ತದೆ. ಬದುಕಿನ ಬಗ್ಗೆ ಕವಿಗಿರುವ ಕಳಕಳಿ, ಸಾಮಾಜಿಕ ಅನಿಷ್ಟಗಳನ್ನು ಕುರಿತಾದ ಹೇವರಿಕೆ, ಆದರ್ಶ-ವಾಸ್ತವ, ಸತ್ಯ-ಮಿಥ್ಯಗಳ ತಾಕಲಾಟ ಇಲ್ಲಿನ ಕವನಗಳಲ್ಲಿ ಕಂಡುಬರುತ್ತದೆ. ಇವುಗಳಲ್ಲಿ ಮೊದಲ ನಾಲ್ಕು ಕವನಗಳು ಪ್ರಸಿದ್ಧ ಕವಯತ್ರಿ ತೋರುದತ್ತಳ ಇಂಗ್ಲಿಷ್ ಕವನಗಳ ಭಾವಾನುವಾದವಾಗಿವೆ. ‘ಕಂಡು ಕೇಳಿದ ಕಥೆಗಳು’ ನಾಗೇಗೌಡರ ಹಾಸ್ಯ ಮಿಶ್ರಿತ ಗದ್ಯಶೈಲಿಗೆ ಉನ್ನತ ಪಂಕ್ತಿಯದ್ದಾಗಿದೆ.ನಾಗೇಗೌಡರು ಖೈದಿಗಳನ್ನು ಭೇಟಿ ಮಾಡಿ ಅವರ ಮಾತುಗಳನ್ನು ಧ್ವನಿಮುದ್ರಿಸಿಕೊಂಡು ಅವರ ಬದುಕಿನ ಸುಖ-ದುಃಖಗಳನ್ನು ಅರಿತು ‘ಖೈದಿಗಳ ಕಥೆಗಳು’ ಎಂಬ ಜೀವಂತ ಪಾತ್ರಗಳ ಕಥೆಗಳನ್ನು ರಚಿಸಿದ್ದಾರೆ. ಸರಳಿನ ಹಿಂದೆ ಇರುವಾಗ ಖೈದಿಗಳು ತಮ್ಮ ತಪ್ಪಿಗೆ ಪಡುವ ಪರಿತಾಪ, ಪಶ್ಚಾತ್ತಾಪ, ತಪ್ಪನ್ನು ಮರೆತು ಋಜುಮಾರ್ಗದಲ್ಲಿ ನಡೆಯಬೇಕೆಂಬ ಅಭೀಪ್ಸೆಯನ್ನು ವ್ಯಕ್ತಪಡಿಸುವುದು ಇವೆಲ್ಲವೂ ಓದುಗರ ಮನ ಮಿಡಿಯುವಂತೆ ಮಾಡುತ್ತದೆ.ನಾಗೇಗೌಡರ ಪ್ರಸಿದ್ಧ ಕಾದಂಬರಿ ‘ದೊಡ್ಡಮನೆ’. ನಶಿಸುತ್ತಿರುವ ನಮ್ಮ ಸಂಸ್ಕೃತಿಯ ಚಿತ್ರಣವನ್ನು ಗುಣ-ಗಾತ್ರಗಳೆರಡರಲ್ಲೂ ಬೃಹತ್ತಾಗಿ ಚಿತ್ರಿಸುವ ಪ್ರಾದೇಶಿಕ ಕಾದಂಬರಿ ‘ದೊಡ್ಡಮನೆ’. ಬಯಲು ಸೀಮೆಯ ರೈತಾಪಿ ಬದುಕಿನ ದುರಂತ ಚಿತ್ರಣ ಈ ಕಾದಂಬರಿಯಲ್ಲಿ ಹೆಪ್ಪುಗಟ್ಟಿದೆ. ನಾಗೇಗೌಡರು ತಮ್ಮ ಗ್ರಾಮೀಣ ಬದುಕಿನ ಪರಿಪಕ್ವತೆಯನ್ನು ಈ ಕೃತಿಯಲ್ಲಿ ಮೆರೆದಿದ್ದಾರೆ. ‘ದೊಡ್ಡಮನೆ’ ಕಾದಂಬರಿಗೆ ಸಾಹಿತ್ಯಕ ಮೌಲ್ಯವಷ್ಟೇ ಅಲ್ಲದೆ, ಸಾಂಸ್ಕೃತಿಕ ಮೌಲ್ಯವೂ ಇದೆ. ಕಾದಂಬರಿಯುದ್ದಕ್ಕೂ ಗೋಚರಿಸುವ ಹಬ್ಬ ಹರಿದಿನಗಳು, ಅಡುಗೆ, ಊಟೋಪಚಾರಗಳು, ಮನೆಯ ಮಾದರಿಗಳು, ಜಾತ್ರೆ-ಆಚರಣೆ-ಸಂಪ್ರದಾಯಗಳು, ಗತಿಸಿದ ಸಂಸ್ಕೃತಿಯೊಂದರ ಚಿತ್ರಣವನ್ನು ಮತ್ತೆ ಕಟ್ಟಿಕೊಡುತ್ತವೆ. ಭಾಷೆಯ ದೃಷ್ಟಿಯಿಂದಲಂತೂ ಕನ್ನಡದ ಕಾದಂಬರಿ ಕ್ಷೇತ್ರದಲ್ಲಿ ಇದು ವಿಶಿಷ್ಟವಾದುದು. ಕಾದಂಬರಿಯುದ್ದಕ್ಕೂ ಬಳಕೆಯಾಗಿರುವ ಆಡುಮಾತು, ಜನಪದ ನುಡಿಗಟ್ಟುಗಳು, ಬೈಗುಳಗಳು, ಗಾದೆ, ಒಗಟುಗಳು ಅಧ್ಯಯನಕ್ಕೆ ಆಕರಗಳಾಗಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕ: ಸರ್ಕಾರಿ ಪಿಯು ಕಾಲೇಜುಗಳು ಬುರ್ಖಾ ಧರಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸುತಾರೆ;

Wed Feb 16 , 2022
ಬುರ್ಖಾ ಧರಿಸಿದ ಮುಸ್ಲಿಂ ವಿದ್ಯಾರ್ಥಿಗಳನ್ನು ಒಳಗೆ ಬಿಡದ ಕಾರಣ, ಹಿಜಾಬ್ ಸಾಲುಗಳಿಂದಾಗಿ ಒಂದು ವಾರದವರೆಗೆ ಮುಚ್ಚಲ್ಪಟ್ಟ ನಂತರ ಬುಧವಾರ ತೆರೆಯಲಾದ ಕರ್ನಾಟಕದ ಹಲವಾರು ಪದವಿ ಪೂರ್ವ ಕಾಲೇಜುಗಳಲ್ಲಿ ಬುಧವಾರ ಅಸ್ತವ್ಯಸ್ತತೆ ಉಂಟಾಗಿದೆ. ಹಲವು ಸೂಕ್ಷ್ಮ ಸ್ಥಳಗಳಲ್ಲಿ ಪ್ರಿ-ಯೂನಿವರ್ಸಿಟಿ ಕಾಲೇಜುಗಳಲ್ಲಿ ಮತ್ತು ಸುತ್ತಮುತ್ತಲಿನ ಪೊಲೀಸರೊಂದಿಗೆ ಬಿಗಿ ಭದ್ರತೆಯ ನಡುವೆ, ಮುಸ್ಲಿಂ ವಿದ್ಯಾರ್ಥಿಗಳ ಒಂದು ವಿಭಾಗವು ಬುರ್ಖಾವನ್ನು ತೆಗೆದುಹಾಕುವುದಿಲ್ಲ, ಹಿಜಾಬ್, ಇಸ್ಲಾಮಿಕ್ ಸ್ಕಾರ್ಫ್‌ಗಳನ್ನು ಬಿಟ್ಟುಬಿಡುವುದಿಲ್ಲ ಎಂದು ಹಠ ಹಿಡಿದಿದೆ. ಹಿಜಾಬ್ ಸಾಲಿಗೆ ಸಂಬಂಧಿಸಿದ […]

Advertisement

Wordpress Social Share Plugin powered by Ultimatelysocial