ರಾಜಕೀಯದಲ್ಲೊಬ್ಬ ಮಹಾನುಭಾವ ನಜೀರ್ ಸಾಬ್!

ಅಕ್ಟೋಬರ್ 24, 1988 ಸಂಜೆ ಆವತ್ತಿನ ಜನತಾದಳ ಸರಕಾರದ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿಯವರು ಕಿಡ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ವಿವಿಐಪಿ ವಾರ್ಡ್‌ಗೆ ಆಗಮಿಸಿದ್ದರು. ತಮ್ಮ ಸಚಿವ ಸಂಪುಟದ ಅತ್ಯಂತ ಗೌರವಾನ್ವಿತ ಸಹೋದ್ಯೋಗಿಯ ಬದುಕಿನ ಅಂತಿಮ ಕ್ಷಣಗಳಲ್ಲಿ ಸಾಂತ್ವನ ಹೇಳಲು ಬಂದಿದ್ದರು. ಪುಪ್ಪುಸ ಕ್ಯಾನ್ಸರಿನ ಉಲ್ಬಣಾವಸ್ಥೆಯಲ್ಲಿ ಬಾಯಿಗೆ ಆಕ್ಸಿಜನ್ ಮಾಸ್ಕ್ ಧರಿಸಿ ಉಸಿರಾಡುವುದಕ್ಕೂ ಅಪಾರ ಯಾತನೆ ಅನುಭವಿಸುತ್ತ ಕುರ್ಚಿಯ ಮೇಲೆ ಕೂತಿದ್ದ ಆ ಗಣ್ಯ ರೋಗಿ ಇನ್ನಾರೂ ಅಲ್ಲ. ಇಡೀ ದೇಶಕ್ಕೇ ಮಾದರಿಯಾದ ಕರ್ನಾಟಕದ ಪಂಚಾಯತ್‌ರಾಜ್ ವ್ಯವಸ್ಥೆಯ ರೂವಾರಿಯೆನಿಸಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಅಬ್ದುಲ್ ನಜೀರ್ ಸಾಬ್.ಸಿ.ಎಂ. ಸಾಹೇಬರು ನಜೀರ್ ಸಾಬ್ ಭುಜದ ಮೇಲೆ ನಾಜೂಕಾಗಿ ಕೈಯಿರಿಸಿ ‘ಸಾಹೇಬ್ರೇ ನೀವೇನೂ ಕಾಳಜಿ ಮಾಡಬ್ಯಾಡ್ರಿ…. ಒಳ್ಳೆಯ ಟ್ರೀಟ್‌ಮೆಂಟ್ ತಗೊಂಡು ಲಗೂನ ಗುಣ ಆಗ್ರೀ…. ಆದ್ರ ನಿಮ್ಮ ಮನೆ ಸಮಸ್ಯೆ ಏನರ ಇದ್ರ ದಯವಿಟ್ಟು ಹೇಳ್ರಿ…. ನಾನದನ್ನ ನೋಡ್ಕೋಳ್ತೇನಂತ….’ ಎಂದು ಅವರ ಕಿವಿಯ ಹತ್ತಿರ ಬಂದು ಮೆಲುನುಡಿಯಲ್ಲಿ ವಿಚಾರಿಸಿಕೊಂಡರು. ಅವರಿಂದ ಆ ಕ್ಷಣದಲ್ಲಿ ನಿಚ್ಛಳವಾಗಿ ಏನೂ ಉತ್ತರ ಬಾರದಿದ್ದಾಗ, ‘ನಜೀರ್ ಸಾಹೇಬ್ರ, ತಮ್ಮ ಫ್ಯಾಮಿಲಿ ಪ್ರಾಬ್ಲಮ್ ಏನಾರ ಇದ್ರ ಹೇಳ್ರಿ ಅಂತ ಕೇಳ್ತಾ ಇದೀನಿ..’ ಎಂದು ಮತ್ತೊಮ್ಮೆ ಕೊಂಚ ಗಟ್ಟಿದನಿಯಲ್ಲಿ ಉಸಿರಿದರು ಬೊಮ್ಮಾಯಿ.ಹೀಗೆ ಪದೇ ಪದೆ, ನಿಮ್ಮ ಮನೆಯ ಸಮಸ್ಯೆ…. ಫ್ಯಾಮಿಲಿ ಪ್ರಾಬ್ಲೆಮ್…ಎಂಬ ಮಾತುಗಳನ್ನು ಕೇಳಿಸಿಕೊಂಡು ವಿಚಲಿತರಾದ ಆ ಅತೀವ ಸಂಕೋಚದ ಆಸಾಮಿ ನಜೀರ್ ಸಾಬ್ ಆ ಮಾರಣಾಂತಿಕ ಸನ್ನಿವೇಶದಲ್ಲೂ ವಿಶಿಷ್ಟವಾಗಿ ಪ್ರತಿಕ್ರಿಯಿಸಿದರು. ಬಾಯಿಯ ಮೇಲಿನ ಮಾಸ್ಕ್ ತೆಗೆದು, ಕಣ್ಣಗಲಿಸಿ ನೋಡುತ್ತ ತಮ್ಮ ಯೋಗಕ್ಷೇವು ವಿಚಾರಿಸಿದ ಮುಖ್ಯಮಂತ್ರಿಯನ್ನು ಉದ್ದೇಶಿಸಿ ನಜೀರ್ ಸಾಬ್ ಆಡಿದ ಮಾತುಗಳು ಬೊಮ್ಮಾಯಿಯವರನ್ನಷ್ಟೇ ಅಲ್ಲ, ಅಲ್ಲಿ ಸುತ್ತುವರಿದು ನಿಂತಿದ್ದ ಅವರ ನಾಲ್ಕಾರು ಆಪ್ತಮಿತ್ರರ ಅಂತಃಕರಣವನ್ನೇ ಅಲ್ಲಾಡಿಸುವಂತಿದ್ದವು.’ಸರ್, ನನ್ನ ಮನೆ ಸಮಸ್ಯೆ ಯಾವುದೂ ಇಲ್ಲ. ಆದರೆ ನಾನೀಗ ಈ ಸಾವಿರ ಮನೆಗಳ ಕಾರ್ಯಕ್ರಮ ರೂಪಿಸಿದ್ದೇನೆ. ಅದರಂತೆ ಪ್ರತಿ ತಾಲೂಕಿನ ಬಡವರಿಗೆ ವರ್ಷಕ್ಕೆ ಒಂದು ಸಾವಿರ ಮನೆಗಳನ್ನು ಕಟ್ಟಿಸ್ತಾ ಹೋದ್ರೆ, ಇನ್ನೈದು ವರ್ಷಗಳಲ್ಲಿ ವಸತಿರಹಿತರ ಸಮಸ್ಯೆಯೆ ಇರದಂತಾಗುತ್ತೆ. ನಿಮಗೆ ಒಳ್ಳೆಯ ಹೆಸರು ಬರುತ್ತೆ. ಇದಕ್ಕೋಸ್ಕರ ನಾನು ಐರ್‌ಡಿಪಿಯಲ್ಲಿ ಹೆಚ್ಚುವರಿಯಾಗಿ ಮಿಕ್ಕಿದ 13 ಕೋಟಿ ರೂಪಾಯಿ ಹಣವನ್ನು ತೊಡಗಿಸಿಕೊಳ್ಳಬೇಕಂತಿದ್ದೆ. ನಮ್ಮ ಪ್ರೈವೇಟ್ ಸೆಕ್ರೆಟರಿ ಜಗನ್ನಾಥ್ ರಾವ್‌ಗೆ ಈ ಬಗ್ಗೆ ನೋಟ್ಸ್ ಬರೆಸಿದ್ದೇನೆ. ದಯವಿಟ್ಟು ಶುರುಮಾಡಿ ಸಾರ್. ನಿಮ್ಮ ಸರಕಾರಕ್ಕೆ ಪುಣ್ಯ ಬರುತ್ತೆ….’ಸಾವಿನಂಚಿನಲ್ಲಿದ್ದ ಸಹೋದ್ಯೋಗಿಯ ಅಂತಿಮ ಕ್ಷಣಗಳ ಈ ಆಶಯಗಳನ್ನು ಕೇಳಿಸಿಕೊಂಡ ಸಿ.ಎಂ. ಬೊಮ್ಮಾಯಿಯವರಿಗೆ ದುಃಖ ಉಮ್ಮಳಿಸಿ ಬಂದುಬಿಟ್ಟಿತು. ಭಾವೋದ್ವೇಗಕ್ಕೊಳಗಾದ ಬೊಮ್ಮಾಯಿ ಆ ಕೊಠಡಿಯಿಂದ ಹೊರಬಂದವರೇ ತಮ್ಮ ಎಂದಿನ ಜಾಯಮಾನಕ್ಕೆ ವ್ಯತಿರಿಕ್ತವಾಗಿ ಶಾಲಾಬಾಲಕರಂತೆ ಬಿಕ್ಕಳಿಸಿ ಬಿಕ್ಕಳಿಸಿ ಅಳತೊಡಗಿದರು. ಈ ಪ್ರಸಂಗವನ್ನು ಕಣ್ಣಾರೆ ನೋಡಿದವರು ನಜೀರರ ರಾಜಕೀಯ ಒಡನಾಡಿಗಳಾದ ರಮೇಶ್ ಕುಮಾರ್ ಮತ್ತು ಎಂ.ರಘುಪತಿ, ಪತ್ರಕರ್ತ ಮಿತ್ರರಾದ ಇಮ್ರಾನ್ ಖುರೇಶಿ ಮತ್ತು ಇ.ರಾಘವನ್ ಹಾಗು ಹವ್ಯಾಸಿ ಪತ್ರಕರ್ತರಾಗಿದ್ದ ರವೀಂದ್ರ ರೇಷ್ಮೆ. ಎಲ್ಲರಿಗೂ ಹೀಗೆ ಸ್ವಂತ ಮನೆಯ ಸಮಸ್ಯೆಗಳ ಬದಲು ನಾಡಿನ ಲಕ್ಷಾಂತರ ಮಂದಿ ವಸತಿರಹಿತ ಬಡವರಿಗೋಸ್ಕರ ಮನೆಕಟ್ಟಿಸಿಕೊಡಬೇಕೆಂಬ ನಜೀರರ ಕನವರಿಕೆಯನ್ನು ಕೇಳಿಸಿಕೊಂಡು ಕರುಳು ಕಿವಿಚಿದಂತಾಗಿತ್ತು.ಮುಂದೆ ಒಂದೆರಡು ಗಂಟೆಗಳಲ್ಲಿಯೆ ನಜೀರ್ ಸಾಬ್ ಎಂಬ ಅತ್ಯಂತ ಕ್ರಿಯಾಶೀಲ ಹಾಗೂ ಮಾನವೀಯ ಸಂವೇದನೆಯುಳ್ಳ ರಾಜಕಾರಣಿಯ ಇಹಲೋಕಯಾತ್ರೆ ಮುಗಿದಿತ್ತು. 1980ರ ದಶಕದ ರಾಜಕಾರಣಕ್ಕೆ ಅಧಿಕಾರ ವಿಕೇಂದ್ರಿಕರಣದ ದೀಕ್ಷೆಯನ್ನಿತ್ತು, ಜನತೆಗೇ ಅಧಿಕಾರ ಎಂಬ ಗಾಂಧೀಜಿಯ ಆದರ್ಶವನ್ನು ಪ್ರತ್ಯಕ್ಷವಾಗಿ ಅನುಷ್ಠಾನಗೊಳಿಸಿ ಇಡೀ ರಾಷ್ಟ್ರದ ಪ್ರಜಾತಂತ್ರ ಪ್ರೇಮಿಗಳ (ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರಾದಿಯಾಗಿ) ಮೆಚ್ಚುಗೆ, ಗೌರವಕ್ಕೆ ಪಾತ್ರರಾಗಿದ್ದ ಕರ್ನಾಟಕದ ಈ ಮೇಧಾವಿ ನಾಯಕನ ಸಾರ್ಥಕ ಬದುಕು ಅಂತ್ಯಗೊಂಡಿತ್ತು.ಅವಿಭಜಿತ ಮೈಸೂರು ಜಿಲ್ಲೆಯ ಗಡಿಪ್ರದೇಶದ ತಾಲ್ಲೂಕಾದ ಗುಂಡ್ಲುಪೇಟೆಯಲ್ಲಿ ಅರಳಿದ ಅಬ್ದುಲ್ ನಜೀರ್ ಸಾಬ್ 1983ರಲ್ಲಿ ಅಧಿಕಾರಕ್ಕೇರಿದ ರಾಜ್ಯದ ಪ್ರಪ್ರಥಮ ಕಾಂಗ್ರೆಸ್ಸೇತರ ಮುಖ್ಯಮಂತ್ರಿ. ರಾಮಕೃಷ್ಣ ಹೆಗಡೆಯವರಿಗಂತೂ ಅತ್ಯಂತ ಅಚ್ಚುಮೆಚ್ಚಿನ ಸಹೋದ್ಯೋಗಿ ಹಾಗು ಅತ್ಮೀಯ ಒಡನಾಡಿ ಎನಿಸಿಬಿಟ್ಟಿದ್ದರು. 1983 ಜನವರಿಯಿಂದ 1988 ಅಕ್ಟೋಬರ್‌ವರೆಗೆ ಅಂದರೆ ಸತತವಾಗಿ ಐದೂವರೆ ವರ್ಷಕಾಲ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವರಾಗಿ ತಮ್ಮ ಪರಿವರ್ತನಶೀಲ ಆಡಳಿತದ ಛಾಪನ್ನೊತ್ತಿ ಅಜರಾಮರರಾದ ನಜೀರ್ ಸಾಬ್ ರಾಜ್ಯದ ಮುಖ್ಯಮಂತ್ರಿಯೇನೂ ಆಗಿರಲಿಲ್ಲ. ಆದರೆ ಇದುವರೆಗಿನ ಯಾವುದೇ ಮುಖ್ಯಮಂತ್ರಿಯೂ ಪಡೆದಿರಬಹುದಾದ ಅಥವಾ ಅದಕ್ಕಿಂತ ಹೆಚ್ಚಿನ ಸಾರ್ವಜನಿಕ ಮನ್ನಣೆ ಮತ್ತು ರಾಜಕೀಯ ಮರ್ಯಾದೆಯನ್ನು ಪಡೆದುಕೊಂಡ ಅಪರೂಪದ ರಾಜಕಾರಣಿ ಎನಿಸಿಬಿಟ್ಟರು.ದೂರದ ಬಿಜಾಪುರ ಜಿಲ್ಲೆಯ ಗಡಿಭಾಗದ ಇಂಡಿ ತಾಲ್ಲೂಕಿನ ಒಂದು ಕುಗ್ರಾಮದಲ್ಲಿ ಕುಡಿಯುವ ನೀರಿಗೋಸ್ಕರ ನಜೀರ್ ಸಾಬ್ ನಿರ್ಮಿಸಿದ್ದ ಕೊಳವೆಬಾವಿಯ ಹ್ಯಾಂಡ್ ಪಂಪಿನ ಮೇಲೆ ಆವತ್ತು ಬಡ ಗ್ರಾಮಸ್ಥರೇ ನಜೀರ್ ಕೃಪಾ ಎಂದು ಕೆತ್ತಿಸಿ ತಮ್ಮ ಶ್ರದ್ಧಾಂಜಲಿಯನ್ನರ್ಪಿಸಿದರು. ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಕಚೇರಿಗಳಲ್ಲೂ ಅಲ್ಲಿನ ಜನಪ್ರತಿನಿಧಿಗಳೇ ನಜೀರ್ ಸಾಬರ ಭಾವಚಿತ್ರವನ್ನು ಸ್ವಯಂಪ್ರೇರಿತರಾಗಿ ತೂಗುಹಾಕಿ ಅವರ ನೆನಪನ್ನ ಚಿರಸ್ಥಾಯಿಯಾಗಿಸಿಬಿಟ್ಟರು. ಮೈಸೂರಿನಲ್ಲಿರುವ ರಾಜ್ಯ ಸರಕಾರದ ಆಡಳಿತ ತರಬೇತಿ ಸಂಸ್ಥೆಯ ಆವರಣದಲ್ಲಿಯೆ ಅಂದಿನ ಮಹಾನಿರ್ದೇಶಕರಾಗಿದ್ದ ಐಎಎಸ್ ಅಧಿಕಾರಿ ಚಿರಂಜೀವಿಸಿಂಗ್ ಖುದ್ದು ಉಸ್ತುವಾರಿ ವಹಿಸಿಕೊಂಡು ನಿರ್ಮಿಸಿದ ಅಬ್ದುಲ್ ನಜೀರ್‌ಸಾಬ್‌ಗ್ರಾಮೀಣಾಭಿವೃದ್ಧಿ ಅಧ್ಯಯನ ಮತ್ತು ತರಬೇತಿ ಸಂಸ್ಥೆಯು ಗ್ರಾಮರಾಜ್ಯದ ಪರಿಕಲ್ಪನೆಗೆ ನಜೀರರು ನೀಡಿದ ಕೊಡುಗೆಯ ಐತಿಹಾಸಿಕ ಸ್ಮಾರಕವಾಗಿಬಿಟ್ಟಿತು.ಇಡೀ ರಾಷ್ಟ್ರಕ್ಕೆ ಮಾದರಿಯಾಗಬಲ್ಲ ಪಂಚಾಯತ್ ರಾಜ್ ವ್ಯವಸ್ಥೆಯಿಂದ ರಾಜೀವ್ ಗಾಂಧಿ ಎಷ್ಟರ ಮಟ್ಟಿಗೆ ಪ್ರಭಾವಿತರಾದರೆಂದರೆ 1988ರ ಏಪ್ರಿಲ್‌ನಲ್ಲಿ ತಮ್ಮ ಆಪ್ತಮಿತ್ರರೂ ಒಡನಾಡಿಗಳೂ ಆದ ಮಣಿಶಂಕರ್ ಐಯ್ಯರ್ ಮತ್ತು ಖುರ್ಷಿದ್ ಅಲಂಖಾನ್ ಅವರುಗಳನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟರು. ಅಷ್ಟೊತ್ತಿಗಾಗಲೆ ನಜೀರ್ ಸಾಬ್ ಹಾಸಿಗೆ ಹಿಡಿದಿದ್ದರು. ಅವರ ನಿವಾಸಕ್ಕೇ ಆಗಮಿಸಿದ ಇವರಿಬ್ಬರೂ ಪಂಚಾಯತ್ ರಾಜ್ ಮತ್ತು ಇತರ ಸ್ಥಳೀಯ ಸಂಸ್ಥೆಗಳನ್ನು ರಾಜ್ಯ ಸರ್ಕಾರಗಳ ಕಪಿಮುಷ್ಠಿಯಿಂದ ಮತ್ತು ದಾಸ್ಯದಿಂದ ಬಿಡುಗಡೆ ಮಾಡಿ ಅವುಗಳ ಸ್ವಾಯುತ್ತತೆಯನ್ನು ರಕ್ಷಿಸುವುದು ಹೇಗೆಂದು ನಜೀರರೊಂದಿಗೆ ಸುದೀರ್ಘ ವಿಚಾರವಿನಿಯಮ ನಡೆಸಿದರು. ಈ ಚರ್ಚೆಗೆ ಪ್ರೇರಣೆಯಾಗಿದ್ದು 1985ರ ಅಕ್ಟೋಬರ್‌ನಲ್ಲಿಯೆ ಒಮ್ಮೆ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಕರ್ನಾಟಕ ಸರಕಾರದ ಪ್ರತಿನಿಧಿಯಾಗಿ ನಜೀರ್ ಸಾಬ್ ಪ್ರತಿಪಾದಿಸಿದ್ದ ವಿಚಾರಧಾರೆ.ಮುಂದೆ ನಜೀರರ ನಿಧನಾನಂತರ ಅಂದರೆ 1989 ರ ಮೇ 15ರಂದು ಸ್ವತಃ ಪ್ರಧಾನಿ ರಾಜೀವ್ ಗಾಂಧಿಯವರೇ ಸಂಸತ್ತಿನಲ್ಲಿ ಸಂವಿಧಾನದ 64ನೇ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು. ಇದು ಕರ್ನಾಟಕದ ಜನತಾದಳ ರಾಜ್ಯ ಸರಕಾರದ ಮಾದರಿ ಎಂಬುದನ್ನು ಗಮನಿಸಿಯೂ ಯಾವುದೇ ಪಕ್ಷಭೇದವೆಣಿಸದೆಯೆ ಅತ್ಯಂತ ಪ್ರಾಂಜಲ ಮನಸ್ಸಿನಿಂದ ರಾಜೀವ್ ಗಾಂಧಿ ಸಿದ್ಧಪಡಿಸಿದ ಮಸೂದೆಯಾಗಿತ್ತು. ಆದರೆ ಈ ಮಸೂದೆ ಅವರ ಜೀವಿತಕಾಲದಲ್ಲಿ ಪಾಸಾಗದೆ ಹೋದದ್ದು, ಅಂದಿನ ಕಾಲಘಟ್ಟದ ನಾಟಕೀಯ ರಾಜಕಾರಣಕ್ಕೆ ಪುರಾವೆಯಂತಿತ್ತು.ಮುಂದೆ ರಾಜೀವ್ ಗಾಂಧಿಯ ದುರಂತ ಹತ್ಯೆಯ ನಂತರ ಅಧಿಕಾರಕ್ಕೆ ಬಂದ ಪಿ.ವಿ. ನರಸಿಂಹರಾವ್ ಪ್ರಧಾನಮಂತ್ರಿಗಿರಿಯಲ್ಲಿ ಪಾಸಾದ ಸಂವಿಧಾನದ 73ನೇ ಹಾಗೂ 74ನೇ ತಿದ್ದುಪಡಿಕಾಯ್ದೆಗಳೇ ಕನ್ನಡಮ್ಮನ ಹೆಮ್ಮೆಯ ಪುತ್ರ ನಜೀರ್ ಸಾಬ್‌ರ ರಾಜಕೀಯ ಸಾಧನೆಗೆ ದಕ್ಕಿದ ರಾಷ್ಟ್ರೀಯ ಪುರಸ್ಕಾರದಂತಿದ್ದವು.ಇವತ್ತಿನ ಪೀಳಿಗೆಯ ಯುವಮತದಾರರಿಗೆ ಹಾಗು ಯುವರಾಜಕಾರಣಿಗಳಿಗೆ ಚಕಿತಗೊಳಿಸಬಹುದಾದ ಮತ್ತೊಂದು ಪ್ರಸಂಗವನ್ನಿಲ್ಲಿ ಉಲ್ಲೇಖಿಸಲೇಬೇಕಿದೆ. ನಜೀರ್ ಸಾಬರು ತೀರಿಕೊಳ್ಳುವುದಕ್ಕಿಂತ ಒಂದು ತಿಂಗಳ ಮುಂಚೆ ಅಂದರೆ 1988 ರಸೆಪ್ಟೆಂಬರ್ ತಿಂಗಳ ಕೊನೆಯಲ್ಲೊಂದು ದಿನ ಅವರ ಆರೋಗ್ಯ ವಿಚಾರಿಸಲಿಕ್ಕೆಂದು ಅವರ ಅಭಿಮಾನಿ ಸಾಹಿತಿ ಮಿತ್ರರಾದ ಪಿ.ಲಂಕೇಶ್ ಮತ್ತು ಪೂರ್ಣಚಂದ್ರ ತೇಜಸ್ವಿಯವರು ಕ್ರೆಸೆಂಟ್ ರಸ್ತೆಗೆ ಶಿಫ್ಟಾಗಿದ್ದ ಮಂತ್ರಿನಿವಾಸಕ್ಕೆ (ಈಗಿರುವ ಜ್ಯೂಡಿಶಿಯಲ್ ಅಕಾಡೆಮಿ ಕಟ್ಟಡ) ಆಗಮಿಸಿದ್ದರು. ಆವತ್ತೇ ದೂರದ ದಿಲ್ಲಿಯಿಂದ ರಾಜೀವ್ ಗಾಂಧಿಯವರು ಸಹ ತಮ್ಮ ಅತ್ಯಂತ ಕ್ರಿಯಾಶೀಲ ಗೆಳೆಯ ಸ್ಯಾಮ್ ಪಿತ್ರೋಡಾರನ್ನು ಸಹ ಅದೇ ಉದ್ದೇಶಕ್ಕಾಗಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದರು.ಈ ಮೂವರು ದಿಗ್ಗಜರೂ ಕಿಮೋಥೆರಪಿಯ ಅಡ್ಡಪರಿಣಾಮಗಳಿಂದ ಜರ್ಜರಿತರಾಗಿದ್ದ ನಜೀರರ ಮುಖದಲ್ಲಿನ್ನೂ ಜೀವನೋತ್ಸಾಹ ಮಿಂಚುತ್ತಿದ್ದುದನ್ನು ಕಂಡು ಪುಳಕಿತಗೊಂಡರು. ನಜೀರರ ಕೈಕುಲುಕಿದ ಪಿತ್ರೋಡಾ ‘ನಿಮ್ಮ ಸಾಧನೆ ಅಮೋಘ…. ನೀವು ಕರ್ನಾಟಕದಲ್ಲಿ ಮಾಡಿರುವ ಕೆಲಸ ಅಗಾಧ. ಆದರೆ ಒಂದು ಪ್ರಶ್ನೆ. ಇದನ್ನೆಲ್ಲ ಇಷ್ಟೊಂದು ಅಲ್ಪಾವಧಿಯಲ್ಲಿ ನೀವು ಮಾಡಿದ್ದಾದರೂ ಹೇಗೆ? ನಿಮ್ಮ ಹತ್ರ ಕಂಪ್ಯೂಟರ್‌ಗಳಿರಲಿಲ್ಲ. ಆಗಿನ್ನೂ ಎಸ್ಟಿಡಿ ಟೆಲಿಫೋನ್‌ಗಳೂ ಬಂದಿರಲಿಲ್ಲ…. ಹೇಗೆ ಇದನ್ನು ನೀವು ಸಾಧಿಸಿದ್ರಿ’ ಎಂದು ಪ್ರಶ್ನಿಸಿದರು.ದೈಹಿಕ ನೋವಿನಲ್ಲೂ ಮುಖದಲ್ಲಿ ಮಂದಹಾಸ ಮೂಡಿಸಿಕೊಂಡ ನಜೀರ್ ‘ಇಲ್ಲಾ ಸಾರ್. ಇದು ನನ್ನೊಬ್ಬನದೇ ಸಾಹಸ ಅಲ್ಲ. ನನ್ನ ಸಚಿವಸಂಪುಟದ ಸಹೋದ್ಯೋಗಿಗಳು, ನನ್ನ ಇಲಾಖೆಯ ಅಧಿಕಾರಿಗಳೂ ಹಾಗೂ ಸಮಸ್ತ ಜನಪ್ರತಿನಿಧಿಗಳ ಸಾಮೂಹಿಕ ಪ್ರಯತ್ನದ ಫಲ ಇದು. ಜತೆಗೆ ನಮ್ಮ ಕರ್ನಾಟಕದ ಜನತೆಯ ಅಂತಕರಣ ಪೂರ್ವಕ ಆಶೀರ್ವಾದ ಕೂಡ ನಮ್ಮ ಮೇಲಿತ್ತು’ ಎಂದು ವಿನೀತರಾಗಿ ನಿವೇದಿಸಿಕೊಂಡರು.
ಆಗ ತೇಜಸ್ವಿಯವರು ‘ಸಾಹೇಬ್ರೆ, ನಿಮ್ಮ ಆರೋಗ್ಯ ಹೇಗಿದೆ, ಈಗ ಪರವಾ ಇಲ್ಲವಾ’ ಎಂದು ವಿಚಾರಿಸಿಕೊಂಡರು. ಲಂಗ್ ಕ್ಯಾನ್ಸರಿನ ಅತ್ಯಂತ ಪ್ರಕ್ಷುಬ್ಧ ಸ್ಥಿತಿಯನ್ನು ತಲುಪಿದ್ದ ಆ ಧಾರುಣ ಹಂತದಲ್ಲೂ ನಜೀರ್ ಹೇಳಿದ್ದೇನು ಗೊತ್ತೆ? ‘ನನ್ನ ಆರೋಗ್ಯದ ವಿಚಾರ ಇರ್ಲಿ. ಈ ವರ್ಷ ಸಿಕ್ಕಾಪಟ್ಟೆ ಮಳೆ ಸುರಿದು ರಾಜ್ಯದಲ್ಲೆಲ್ಲಾ ಬಹುತೇಕ ಕೆರೆಗಳು ತುಂಬಿ ತುಳುಕ್ತಾ ಇವೆ. ಆದ್ದರಿಂದ ಚೀನಾದಿಂದ ಒಳನಾಡು ಮೀನುಗಾರಿಕೆಯ ಹೊಸ ವಿಧಾನಗಳ ಬಗ್ಗೆ ಮಾಹಿತಿ ತರಿಸ್ಕೊಂಡು ಬ್ಲೂಪ್ರಿಂಟ್ ಮಾಡಿಸ್ತಾ ಇದ್ದೀನಿ. ಇದು ಕೂಡ ನಮ್ಮ ಹಳ್ಳಿಗಾಡಿನ ರೈತರಿಗೆ ಮತ್ತಷ್ಟು ನೆಮ್ಮದಿ ತರಲಿ ಅನ್ನೋದೆ ನನ್ನ ಉದ್ದೇಶ….’ಇವತ್ತಿನ ಓಟು ಬ್ಯಾಂಕ್ ರಾಜಕೀಯದ ನಿರ್ಲಜ್ಜ ಭ್ರಷ್ಟಾಚಾರ ಹಾಗೂ ಅಧಿಕಾರಸ್ತರ ದರ್ಪ, ದೌಲತ್ತು ಮತ್ತು ಅವಕಾಶವಾದಿ ಸೋಗಲಾಡಿತನಗಳು ಆವತ್ತೂ ಇದ್ದವು. ಸಾರ್ವಜನಿಕ ಬದುಕಿನ ಇವತ್ತಿನ ಬಹುತೇಕ ಅಪಸವ್ಯಗಳು ಆಗಲೂ ಆಗಾಗ್ಗೆ ಸಂಭವಿಸುತ್ತಲೇ ಇದ್ದವು. ಆದರೆ ಅಧಿಕಾರ ರಾಜಕಾರಣದ ಈ ಕೆಸರಲ್ಲೂ ಅಬ್ದುಲ್ ನಜೀರ್ ಸಾಬ್‌ರಂತಹ ಜಾತ್ಯಾತೀತ ಮನೋಧರ್ಮದ ಪ್ರತಿಭಾಶಾಲಿ ಕಮಲ ಅರಳಿ ತನಗೆ ದಕ್ಕಿದ ಅಲ್ಪಾವಧಿಯಲ್ಲಿಯೆ ಜನಕಲ್ಯಾಣದ ಕನಸುಗಳ ವೈವಿದ್ಯಮಯ ಅಜೆಂಡಾವನ್ನೇ ಅನಾವರಣಗೊಳಿಸಿ ತನ್ನ ಕ್ರಿಯಾಶೀಲತೆಯ ಕಂಪನ್ನು ಪಸರಿಸಿತ್ತು.ಅಂದಹಾಗೆ 1980ರ ದಶಕದ ಆರಂಭದ ದಿನಗಳಲ್ಲಿ ಅಂದಿನ ಗುಂಡೂರಾವ್ ಕಾಂಗ್ರೆಸ್ಸಿನ ಎಮ್ಮೆಲ್ಲೆಗಳ ಪೈಕಿ ಒಬ್ಬರೆನಿಸಿದ್ದ ನಜೀರ್ ಸಾಬರನ್ನು ಹಿಂದಿನ ಸಾಲಿನ ಬೆಂಚುಗಳ ಅನಾಮಧೇಯ ವಿದ್ಯಾರ್ಥಿಗಳಂತೆಯೆ ಅಲಕ್ಷಿಸಲಾಗಿತ್ತು. ಅವರನ್ನು ಮುಖ್ಯವಾಹಿನಿಗೆ ಪರಿಚಯಿಸಿದ್ದು ಆವತ್ತಿನ ಕಾಂಗ್ರೆಸ್ಸಿನ ಯುವಶಾಸಕರಲ್ಲೊಬ್ಬರಾಗಿದ್ದ ಶ್ರೀನಿವಾಸಪುರ ಕ್ಷೇತ್ರದ ರಮೇಶ್ ಕುಮಾರ್ ಮತ್ತು ಬೆಂಗಳೂರಿನ ರಾಜಕೀಯ ದಂತಕಥೆಗಳಲ್ಲೊಬ್ಬರಂತಿದ್ದ ಎಂ. ರಘುಪತಿ. ಇವರಿಬ್ಬರೂ ನಜೀರ್ ಸಾಬರ ವಿಭಿನ್ನ ವ್ಯಕ್ತಿತ್ವ, ವಿಚಾರಗಳನ್ನು ಲಂಕೇಶರಿಗೆ ಮನವರಿಕೆ ಮಾಡಿಕೊಟ್ಟರು. ನಂತರ, ಈ ಲೇಖಕನ ಬರವಣಿಗೆಯಲ್ಲಿ ಮೂಡಿದ ನಜೀರರ ಮೊಟ್ಟಮೊದಲ ವ್ಯಕ್ತಿಚಿತ್ರಕ್ಕೆ ಆವತ್ತು ಲಂಕೇಶ್ ಪತ್ರಿಕೆಯ ಸಂಪಾದಕರು ನೀಡಿದ ಶೀರ್ಷಿಕೆ- ‘ಕಾಂಗೈ ಕೊಚ್ಚೆಯಲ್ಲೊಂದು ಕಮಲ – ನಜೀರ್ ಸಾಬ್‌’.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕ ಮೃಗಾಲಯಗಳ ಪ್ರಾಧಿಕಾರಿಯ ರಾಯಭಾರಿ ಚಾಲೆಂಜಿಂಗ್ ಸ್ಟಾರ್ ದರ್ಶನ್

Fri Feb 18 , 2022
    ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಪ್ರಾಣಿ-ಪಕ್ಷಿಗಳ ಮೇಲೆ ಇರುವ ಪ್ರೀತಿ ಏನು ಅನ್ನುವುದು ಗೊತ್ತೇ ಇದೆ. ಈ ಹಿನ್ನೆಲೆಯಲ್ಲಿಯೇ ಕರ್ನಾಟಕ ಸರ್ಕಾರ ದರ್ಶನ್‌ಗೆ ಹೊಸ ಜವಾಬ್ದಾರಿಯನ್ನು ನೀಡಿದೆ. ಕರ್ನಾಟಕ ಮೃಗಾಲಯಗಳ ಪ್ರಾಧಿಕಾರದ ರಾಯಭಾರಿಯಾಗಿ ದರ್ಶನ್‌ರನ್ನು ಅಧಿಕೃತವಾಗಿ ನೇಮಕ ಮಾಡಲಾಗಿದೆ ̤  (ಫೆ.16) ದರ್ಶನ್ ಹುಟ್ಟುಹಬ್ಬದ ದಿನದಂದೇ ಮೃಗಾಲಯದ ಪ್ರಾಧಿಕಾರ ಅಧಿಕೃತವಾಗಿ ದರ್ಶನ್ ರಾಯಭಾರಿ ಎಂದು ಘೋಷಿಸಿದೆ. ಮೃಗಾಲಗಳಿಗೆ ದರ್ಶನ್ ಮಾಡಿದ ಸಹಾಯ, ಪ್ರಾಣಿ-ಪಕ್ಷಿಗಳನ್ನು ದತ್ತು ತೆಗೆದುಕೊಂಡ ಹಿನ್ನೆಲೆಯನ್ನುಗಮನಿಸುತ್ತಲೇ ಇದೆ. […]

Advertisement

Wordpress Social Share Plugin powered by Ultimatelysocial