ನಿರಾಲ ಎಂದು ಖ್ಯಾತರಾದ ಸೂರ್ಯಕಾಂತ ತ್ರಿಪಾಠಿ ಅವರು ಆಧುನಿಕ ಹಿಂದೀ ಕವಿ, ಕತೆಗಾರ

ನಿರಾಲ ಎಂದು ಖ್ಯಾತರಾದ ಸೂರ್ಯಕಾಂತ ತ್ರಿಪಾಠಿ ಅವರು ಆಧುನಿಕ ಹಿಂದೀ ಕವಿ, ಕತೆಗಾರ, ಕಾದಂಬರಿಕಾರ, ವಿಮರ್ಶಕ, ಪತ್ರಿಕೋದ್ಯಮಿ ಹೀಗೆ ವಿವಿಧ ರೂಪಗಳಲ್ಲಿ ಪ್ರಸಿದ್ಧರು. ಇವರನ್ನು ಛಾಯಾವಾದದ ಪ್ರಮುಖ ಚತುಷ್ಟಯೀ ಕವಿಗಳಲ್ಲೊಬ್ಬರು ಎಂದು ಸಾಹಿತ್ಯಕಲೋಕ ಪರಿಗಣಿಸಿದೆ.
ನಿರಾಲ ಅವರು 1896ರ ಫೆಬ್ರವರಿ 21ರಂದು ಬಂಗಾಳದ ಮೇದಿನಿಪುರ ಜಿಲ್ಲೆಯ ಮಹಿಷಾದಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ ಜನಿಸಿದರು. ತಂದೆ ಶ್ರೀ ರಾಮಸಹಾಯ ತ್ರಿಪಾಠಿ. ತಾಯಿ ರುಕ್ಮಿಣೀದೇವಿ. ಹುಟ್ಟಿದ ಮೂರೇ ವರ್ಷಕ್ಕೆ ತಾಯಿಯನ್ನು ಕಳೆದುಕೊಂಡ ಇವರು ಮುಂದೆ ತಂದೆಯ ಪ್ರೀತಿಯಿಂದಲೂ ವಂಚಿತರಾದರು. ಚಿಕ್ಕಂದಿನಿಂದಲೇ ಇವರಲ್ಲಿ ಮೂಡಿದ ಪ್ರಗತಿಶೀಲ ವಿಚಾರಗಳಿಂದಾಗಿ ಕ್ರಾಂತಿಕಾರಿ ಮನೋಭಾವ ಬೆಳೆದುದಲ್ಲದೆ ವ್ಯಕ್ತಿತ್ವದಲ್ಲೂ ಹಟ, ಮೊಂಡುತನ, ಅಚಲತೆಗಳು ಮೂಡಿದವು. ಇದರಿಂದಾಗಿ ಇವರ ಸಾಹಿತ್ಯಿಕ ಬದುಕಿನಲ್ಲೂ ಕ್ರಾಂತಿಯ ಸ್ವರ ಕಾಣತೊಡಗಿತು.
ನಿರಾಲಾ ಅವರಿಗೆ ಮಾತೃಭಾಷೆಯಾದ ಬಂಗಾಳಿಯಲ್ಲದೆ ಇಂಗ್ಲಿಷ್ ಹಾಗೂ ಸಂಸ್ಕೃತ ಭಾಷೆಗಳಲ್ಲಿಯೂ ಪ್ರಭುತ್ವವಿತ್ತು. ಕುದುರೆ ಸವಾರಿ ಮತ್ತು ಸಂಗೀತ ಇವರ ಪ್ರಿಯ ಹವ್ಯಾಸಗಳು. 1911ರಲ್ಲಿ ವಿವಾಹವಾದರು. ಹೆಂಡತಿ ಮನೋಹರ ದೇವಿ. ಐದು ವರ್ಷಗಳಲ್ಲಿ ಇವರು ಅಪಾರ ಕಷ್ಟನಷ್ಟಗಳಿಗೆ ಗುರಿಯಾದರು. 1916ರಲ್ಲಿ ತಂದೆ, 1918ರಲ್ಲಿ ಹೆಂಡತಿ, 1919ರಲ್ಲಿ ಇನ್ಫ್ಲುಯೆಂಜಾದ ಪ್ರಭಾವದಿಂದಾಗಿ ಕುಟುಂಬದ ಅನೇಕರು ಸಾವನ್ನಪ್ಪಿದರು. ಆಗ ಇವರು ಜೀವನೋಪಾಯಕ್ಕಾಗಿ ಮಹಿಷಾದಲ್ಲಿ ನೌಕರಿ ಹಿಡಿದರು. ಒಂದು ಸಾಮಾನ್ಯ ವಿವಾದದಿಂದಾಗಿ ಇದ್ದ ನೌಕರಿಯನ್ನೂ ತೊರೆದು 1922ರಲ್ಲಿ ಕಲ್ಕತ್ತದ ರಾಮಕೃಷ್ಣ ಮಿಷನ್ನಿನವರು ನಡೆಸುತ್ತಿದ್ದ ಸಮನ್ವಯ ಪತ್ರಿಕೆಯ ಸಂಪಾದಕರಾದರು. ಈ ಅವಧಿಯಲ್ಲಿ ಇವರ ದಾರ್ಶನಿಕ ವಿಚಾರಗಳಿಗೊಂದು ನಿರ್ದಿಷ್ಟ ರೂಪ ದೊರೆಯಿತು. ಅದನ್ನು ಬಿಟ್ಟು 1923ರಲ್ಲಿ ಮಹಾದೇವ ಬಾಬು ಅವರು ಸಂಪಾದಿಸುತ್ತಿದ್ದ ಮತವಾಲಾ ಪತ್ರಿಕೆಯ ಸಂಪಾದಕ ಮಂಡಲಿಯನ್ನು ಸೇರಿದರು. ಇವರ ಕಾವ್ಯಜೀವನಕ್ಕೆ ಅನುಪಮ ಪ್ರೋತ್ಸಾಹ ದೊರೆತದ್ದು ಮತವಾಲಾದಿಂದ. ಅಲ್ಲಿದ್ದ 2-3 ವರ್ಷಗಳಲ್ಲಿ ಇವರು ಬರೆದ ಗೀತೆಗಳು ಖ್ಯಾತಿಯನ್ನಷ್ಟೇ ಅಲ್ಲದೆ ಬದುಕಿಗೊಂದು ಗತಿಯನ್ನು ನೀಡಿದವು. ಮತವಾಲಾದಲ್ಲಿ ಪ್ರಕಟವಾದ ಕವಿತೆಗಳು ಪರಿಮಳ ಎಂಬ ಸಂಗ್ರಹದಲ್ಲಿದೆ. ಮತವಾಲಾದ ಜೊತೆಯಲ್ಲಿಯೇ ಇವರು ರಂಗೀಲಾ, ಸರೋಜ, ಮೌಜಿ ಮುಂತಾದ ಪತ್ರಿಕೆಗಳಿಗೂ ತಮ್ಮ ಸಹಕಾರವನ್ನಿತ್ತರು.
ನಿರಾಲಾ ಅವರ ಪ್ರತಿಭೆ ಬಹುಮುಖವಾದದ್ದು. 1923ರಿಂದ 1958ರವರೆಗಿನ ಅವಧಿಯಲ್ಲಿ ಪ್ರಕಟವಾಗಿರುವ ಇವರ ಕಾವ್ಯಕೃತಿಗಳೆಂದರೆ ಅನಾಮಿಕ (1923), ಪರಿಮಳ (1930), ಗೀತಿಕ (1936), ತುಳಸೀದಾಸ (1938), ಕುಕ್ಕರ ಮತ್ತ (1942), ಅಣಿಮಾ (1943), ಬೇಲಾ (1943), ಅಪರಾ (1946), ನಯೇ ಪತ್ರೆ (1946), ಅರ್ಚನಾ (1950), ಆರಾಧನಾ (1953), ಗೀತಗುಂಜ (1958). ಅನಾಮಿಕ, ಪರಿಮಳ. ಗೀತಿಕ ಹಾಗೂ ತುಳಸೀದಾಸ ಕಾವ್ಯಸಂಗ್ರಹಗಳಲ್ಲಿ ಛಾಯವಾದ, ಪ್ರಗತಿವಾದ ಹಾಗೂ ಕ್ರಾಂತಿಕಾರಿ ಭಾವನೆಗಳು ಕಾಣಬರುತ್ತವೆ. ಮುಕ್ತ ಛಂದಸ್ಸಿನಲ್ಲಿ ಮೊದಲ ಬಾರಿಗೆ ಹಿಂದಿಯಲ್ಲಿ ಇವರು ಕವಿತೆ ಬರೆದಾಗ ದೊಡ್ಡ ವಿರೋಧವನ್ನೇ ಎದುರಿಸಬೇಕಾಯಿತು.
ಕಾವ್ಯದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದರೂ ನಿರಾಲಾ ಅವರು ಆರ್ಥಿಕ ಸಂಕಷ್ಟಕ್ಕೊಳಗಾಗಿ ಕಥೆ-ಕಾದಂಬರಿಗಳ ರಚನೆಗೆ ಕೈಹಾಕಿದರು. ಲಲಿ, ಚತುರೀಚಮಾರ್, ಸುಕುರ್ ಕೀ ಬೇಬಿ, ಸುಬಿ ಎಂಬ ಹೆಸರುಗಳಲ್ಲಿ ಸಂಗ್ರಹವಾಗಿರುವ ಹಲವಾರು ಕಥೆಗಳು; ಅಪ್ಸರಾ, ಅಲಕಾ, ಪ್ರಭಾವತಿ, ನಿರುಪಮಾ, ಕುಲ್ಲಿಭಾಂಟ್, ಚೋಟೀಕಿ ಪಕಡ್, ಬಿಲ್ಲೇಸುರ್ ಬಕರಿಹಾ, ಕಾಲೇಕಾರ್ ನಾಮೇ, ಚಮೇಲಿ ಕಾದಂಬರಿಗಳು ಬದುಕಿನ ತೀವ್ರಸಂವೇದನೆಗಳಿಂದ ಮೂಡಿಬಂದವುಗಳಾಗಿವೆ.
ಹಿಂದೀ ಗದ್ಯಸಾಹಿತ್ಯದಲ್ಲಿ ನಿರಾಲ ಅವರ ಪ್ರಬಂಧಗಳಿಗೆ ವಿಶೇಷ ಮಹತ್ತ್ವವುಂಟು. ಪ್ರಬಂಧ-ಪದ್ಮ, ಪ್ರಬಂಧ-ಪ್ರತಿಮಾ, ಚಾಮಿಕ್ ಹಾಗೂ ಚಯನ್ ಎಂಬ ಪ್ರಬಂಧ ಸಂಗ್ರಹಗಳು ವಸ್ತುನಿಷ್ಠವಾಗಿರುವುದೇ ಅಲ್ಲದೇ ಪರಾಮರ್ಶನ ಪ್ರಬಂಧಗಳೂ ಆಗಿವೆ.
ನಿರಾಲ ಅವರು ವಿಮರ್ಶಿಸಿರುವ ಸಾಹಿತ್ಯ ಪ್ರಕಾರಗಳೂ ಹಲವಾರು. ಪ್ರಕಟವಾಗಿರುವ ಸಂಕಲನಗಳಲ್ಲಿ ಸೇರಿರುವ ಮೈಥಿಲ್ ಕೋಕಿಲ್ ವಿದ್ಯಾಪತಿ, ಬಂಗಾಲ್ ಕೇ ವೈಷ್ಣವ್, ಕವಿಯೋಂ ಕಿ ಶೃಂಗಾರ್ ವರ್ಣನಾ, ಅರ್ಥ ಅರ್ಥಾಂತರಣ್ ಮಹಾಕವಿ ರವೀಂದ್ರ್ ಕೀ ಕವಿತಾ, ವಂಗ್ ಭಾಷಾ ಕ ಉಚ್ಚಾರಣ್, ಪಂತ್ ಔರ್ ಪಲ್ಲವ್ ಉಲ್ಲೇಖನೀಯವಾದುವು. ಅಲ್ಲದೆ ಇವರು ಹಿಂದಿಯ ಸಮಕಾಲೀನ ಹಾಗೂ ಪ್ರಾಚೀನ ಕವಿಗಳ ಸಾಹಿತ್ಯದ ಬಗೆಗೆ ವಿಮರ್ಶಾತ್ಮಕವಾದ ಲೇಖನಗಳನ್ನು ಪ್ರಕಟಿಸಿದ್ದಾರೆ. ಕಾವ್ಯಶಾಸ್ತ್ರದ ಬಗೆಗೂ ಅನೇಕ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಭಕ್ತ ಧ್ರುವ, ಭಕ್ತ ಪ್ರಹ್ಲಾದ, ಮಹಾರಾಣಾ ಪ್ರತಾಪ್- ಇವು ಇವರು ಮಕ್ಕಳಿಗಾಗಿ ಬರೆದ ಗ್ರಂಥಗಳು. ಇವರು ಬರೆದ ಗದ್ಯ ಮಹಾಭಾರತ ಆಬಾಲವೃದ್ಧರಿಗೂ ಪ್ರಿಯವಾಗಿರುವ ಕೃತಿ.
ನಿರಾಲ ಅವರು ಉತ್ತಮ ಅನುವಾದಕರಾಗಿ ಬಂಗಾಳಿಯ ಬಂಕಿಮಚಂದ್ರರ ಹನ್ನೊಂದು ಕಾದಂಬರಿಗಳನ್ನೂ, ರಾಮಕೃಷ್ಣ ಪರಮಹಂಸ ಹಾಗೂ ವಿವೇಕಾನಂದರ ಸಾಹಿತ್ಯವನ್ನೂ ಅನುವಾದಿಸಿದ್ದಾರೆ.
ನಿರಾಲ ಅವರು 1961ರ ಅಕ್ಟೋಬರ್ 16ರಂದು ಈ ಲೋಕವನ್ನಗಲಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಶ್ರೀಮಾತೆ ಮೀರಾ ಅಲ್ಫಾಸ

Mon Feb 21 , 2022
ಗುರು ಶ್ರೀ ಅರವಿಂದರು ಅತೀತ ಮಾನಸ ಯೋಗದ ಪ್ರವರ್ತಕರು. ಈ ಕೆಲಸದಲ್ಲಿ ಅವರಿಗೆ ಸಹಕಾರಿಯಾದವರು ಮುಂದೆ ಶ್ರೀಮಾತೆ ಎಂದು ಪೂಜನೀಯರಾದ ಮೀರಾ ಅಲ್ಫಾಸ ಅವರು. ಅರವಿಂದರಂತೆಯೇ ಸಾಕ್ಷಾತ್ಕಾರಗಳನ್ನು ಪಡೆದುಕೊಂಡ ಶ್ರೀಮಾತೆಯವರು “ಅತೀತ ಮಾನಸಯೋಗವು ಪೃಥ್ವಿಯ ಮುಂದಿನ ವಿಕಸನವನ್ನು ತ್ವರಿತಗೊಳಿಸುವುದೆಂದು” ಪ್ರತಿಪಾದಿಸಿದರು. ಮೀರಾ ಅಲ್ಫಾಸ ಅವರು 1878ರ ಫೆಬ್ರವರಿ 21ರಂದು ಪ್ಯಾರಿಸ್ಸಿನಲ್ಲಿ ಜನಿಸಿದರು. ಮೀರಾ ಅಲ್ಫಾಸಾ ಅವರು ಮೊದಲ ಬಾರಿಗೆ ಪಾಂಡಿಚೇರಿಯ ಅರವಿಂದೋ ಆಶ್ರಮಕ್ಕೆ ಭೇಟಿ ಇತ್ತಿದ್ದು ತಮ್ಮ 36ನೆಯ ವಯಸ್ಸಿನಲ್ಲಿ. […]

Advertisement

Wordpress Social Share Plugin powered by Ultimatelysocial