ನಂದಿತಾ

ನಂದಿತಾ ಕನ್ನಡ ಚಿತ್ರಲೋಕದ ಪ್ರತಿಭಾನ್ವಿತ ಹಿನ್ನೆಲೆಗಾಯಕಿ.
ನಂದಿತಾ ಅವರು 1978ರ ಫೆಬ್ರವರಿ 28ರಂದು ಜನಿಸಿದರು. ಕಳೆದ ಎರಡು ದಶಕದ ಕನ್ನಡ ಚಿತ್ರರಂಗದಲ್ಲಿ ಗಾಯಕಿಯಾಗಿ ಹೆಸರು ಮಾಡಿದವರಲ್ಲಿ ನಂದಿತ ಅವರದು ಪ್ರಮುಖ ಹೆಸರು. ಆರ್.ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹೊರಬಂದ ಪ್ರತಿಭಾವಂತ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾದ ನಂದಿತಾ ಪ್ರತಿಷ್ಟಿತ ಅಂತರರಾಷ್ಟ್ರೀಯ ಸಂಸ್ಥೆ ‘ಸಿಸ್ಕೋ’ದಲ್ಲಿ ಹೊಂದಿದ್ದ ಉದ್ಯೋಗವನ್ನು ತ್ಯಜಿಸಿ ಸಂಗೀತಕ್ಕೆ ಒಲಿದು ಬಂದಿದ್ದು ಪ್ರಮುಖ ಸುದ್ಧಿಯಾಗಿತ್ತು.
ನಂದಿತಾ ಅವರ ತಂದೆ ವೀಣಾ ವೆಂಕಟಗಿರಿಯಪ್ಪನವರ ವೀಣಾ ಪರಂಪರೆಗೆ ಸೇರಿದವರು. ತಾಯಿ ಕೂಡಾ ವೀಣಾ ವಿದ್ವಾಂಸರಾಗಿ ಮಗಳು ನಂದಿತಾಗೆ ಗುರುವಾದರು. ನಂದಿತಾ ವೀಣೆಯಲ್ಲಿ ವಿದ್ವತ್ ಪರೀಕ್ಷೆಯಲ್ಲಿ ಉತ್ತೀರ್ಣರು.
ಹಂಸಲೇಖಾ ಅವರ ಮೂಲಕ ‘ಹಬ್ಬ’ ಚಿತ್ರದಲ್ಲಿ ಹಿನ್ನಲೆಗಾಯಕಿಯಾದ ನಂದಿತ ಮುಂದೆ ನೂರಾರು ಚಿತ್ರಗಳಲ್ಲಿ, ದೂರದರ್ಶನ ಕಾರ್ಯಕ್ರಮಗಳಲ್ಲಿ, ಮತ್ತು ಪ್ರಮುಖ ವೇದಿಕೆಗಳಲ್ಲಿ ಕಾಣಿಸಿಕೊಂಡು ತಮ್ಮ ಗಾಯನ ಮತ್ತು ನಗೆಮೊಗದಿಂದ ಕನ್ನಡ ಜನತೆಯ ಹೃದಯವನ್ನು ಗೆದ್ದಿದ್ದಾರೆ. ಹಲವಾರು ನಟಿಯರಿಗೆ ಸಂಭಾಷಣಾ ಧ್ವನಿದಾನ ಕೂಡಾ ಮಾಡಿದ್ದಾರೆ.
ಶಾಸ್ತ್ರೀಯ ಸಂಗೀತದ ನಿರತ ಅಧ್ಯಯನದ ಜೊತೆಗೆ ಹಲವು ಹೊಸ ಚಿಂತನೆಗಳಲ್ಲೂ ಶ್ರಮ ವಹಿಸಿರುವ ನಂದಿತ ಆ ನಿಟ್ಟಿನಲ್ಲೂ ಹಲವಾರು ಧ್ವನಿಮುದ್ರಿಕೆಗಳನ್ನು ಹೊರತಂದಿದ್ದಾರೆ.
ನಾಲ್ಕು ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಫಿಲಂಫೇರ್ ಹಾಗೂ ಇನ್ನಿತರ ಹಲವಾರು ಗೌರವಗಳು ನಂದಿತಾ ಅವರಿಗೆ ಸಂದಿವೆ. ಪ್ಯಾರಿಸ್ ಪ್ರಣಯ ಚಿತ್ರದ ‘ಎದೆ ತುಂಬಿ ಹಾಡಿದೆನು’, ಕಲ್ಲರಳಿ ಹೂವಾಗಿ ಚಿತ್ರದ ‘ಅಕ್ಕ’, ಜೋಗುಳದ ‘ಆಕಾಶಕ್ಕೆ ಒಬ್ಬ ಸೂರ್ಯ’, ನನ್ನ ಪ್ರೀತಿಯ ಹುಡುಗಿಯ ‘ಮೂಡಲ್ ಕುಣಿಗಲ್ ಕೆರೆ’ ಇವುಗಳಲ್ಲಿ ಪ್ರಮುಖವಾದವು. ಮತದಾನ ಚಿತ್ರದ ‘ಇದು ಮೊದಲನೆ ಹಾಡು’, ಮನಸೆಲ್ಲಾ ನೀನೆ ಚಿತ್ರದ ‘ಜೀರ್ಜಿಂಬೆ ಜೀರ್ಜಿಂಬೆ’, ಜೋಗುಳದ ‘ಆಕಾಶಕ್ಕೆ ಒಬ್ಬ ಸೂರ್ಯ’, ಯಶವಂತ್ ಚಿತ್ರದ ‘ಮೊದಮೊದಲು’, ಆ ದಿನಗಳು ಚಿತ್ರದ ‘ಸಿಹಿಗಾಳಿ’, ದುನಿಯಾ ಚಿತ್ರದ ‘ಕರಿಯ ಐ ಲವ್ ಯು’, ಇಂತಿ ನಿನ್ನ ಪ್ರೀತಿಯ ಚಿತ್ರದ ‘ಹೂ ಕನಸ ಜೋಕಾಲಿ’, ಆಪ್ತಮಿತ್ರದ ‘ಬಾರಾ ಸನಿಹಕೆ ಬಾರಾ’, ಮಂದಾಕಿನಿ ಚಿತ್ರದ ‘ಬಾನಿಗೆ ಭಾಸ್ಕರ ಛಂದ’ ಮುಂತಾದವು ನಂದಿತ ಅವರ ಇನ್ನಿತರ ಪ್ರಸಿದ್ಧ ಗೀತೆಗಳಲ್ಲಿ ನೆನಪಾಗುವ ಕೆಲವು ಹಾಡುಗಳು.
ನಮ್ಮಲ್ಲಿ ನಂದಿತಾ ಅಂತಹಾ ಪ್ರತಿಭೆಗಳಿದ್ದೂ ನಮ್ಮ ಚಿತ್ರರಂಗದಲ್ಲಿ ಈ ಪ್ರತಿಭೆಗಳು ಅಲ್ಲೊಂದು ಇಲ್ಲೊಂದು ಸಣ್ಣ ಪುಟ್ಟ ಅವಕಾಶಕ್ಕಾಗಿ ಕಾದು ಕುಳಿತಿರಬೇಕಾದ ವಿಚಿತ್ರ ಸ್ಥಿತಿ ಹಿಂದಿನಿಂದಲೂ ಕನ್ನಡಕ್ಕೆ ಅಂಟಿರುವ ದೌರ್ಭಾಗ್ಯ. ತಪ್ಪು ತಪ್ಪು ಉಚ್ಚಾರ ಮತ್ತು ಭಾವ ಪ್ರಾಧಾನ್ಯತೆಯ ಆಳಕ್ಕಿಳಿಯದ ಬೇರೆ ಭಾಷಿಗರನ್ನು ಇಲ್ಲಿ ಓಲೈಸುವ ಪ್ರವೃತ್ತಿ ನಮ್ಮ ಕನ್ನಡಿಗರಿಗೆ ಅಂಟಿದ ಶಾಪ. ಇಂಥ ಪ್ರವೃತ್ತಿಗಳು ನಂದಿತ ಅಂತಹ ಪ್ರತಿಭಾವಂತರ ಆತ್ಮಸ್ಥೈರ್ಯವನ್ನು ನಂದಿಸದೆ, ಅದನ್ನೇ ಒಂದು ಚಾಲೆಂಜ್ ರೂಪದಲ್ಲಿ ಸ್ವೀಕರಿಸಿ ವಿಶಿಷ್ಟ ಸಾಧನೆಗಳತ್ತ ಮುನ್ನುಗುವ ಪ್ರೇರಣೆ ಅವರಲ್ಲಿ ಉದಿಸಲಿ ಎಂದು ನಾವು ಹಾರೈಸೋಣ.
ನಂದಿತಾ ಅವರ ಸಂಗೀತ ಸಾಧನೆ, ಬದುಕಿನಲ್ಲಿ ಸಂತಸ ಎಂದೆಂದೂ ನಲಿಯುತ್ತಿರಲಿ ಎಂದು ಹಾರೈಸಿ ನಮ್ಮ ಈ ಕನ್ನಡ ಪ್ರತಿಭೆಗೆ ಹುಟ್ಟು ಹಬ್ಬದ ಶುಭಾಶಯ ಹೇಳೋಣ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಷ್ಟ್ರೀಯ ವಿಜ್ಞಾನ ದಿನ

Tue Mar 1 , 2022
ರಾಷ್ಟ್ರೀಯ ವಿಜ್ಞಾನ ದಿನ ಫೆಬ್ರುವರಿ 28 ಭಾರತೀಯ ವಿಜ್ಞಾನಕ್ಕೊಂದು ಪರ್ವ ದಿನ. 1928ರ ಇದೇ ದಿನದಂದು ಮಹಾನ್ ವಿಜ್ಞಾನಿ ಸರ್ ಸಿ ವಿ ರಾಮನ್ ಅವರು ವಿಶ್ವಪ್ರಸಿದ್ಧವಾದ ‘ರಾಮನ್ ಎಫೆಕ್ಟ್’ ಸಂಶೋಧನೆಯ ವಿವರಗಳನ್ನು ಜಗತ್ತಿಗೆ ಬಹಿರಂಗಪಡಿಸಿದರು. ಮೆಡಿಟರೇನಿಯನ್ ಸಮುದ್ರದಲ್ಲಿ ಪಯಣಿಸುತ್ತಿದ್ದ ಸಿ ವಿ ರಾಮನ್ ಅವರು ಕಡಲಿನ ನೀಲಿ ಬಣ್ಣವನ್ನು ಕಂಡು ಆ ಸೊಬಗಿಗೆ ಪರವಶರಾದದ್ದು ಮಾತ್ರವಲ್ಲ, ಅವರಿಗೆ ನೀರಿನ ಬಣ್ಣ ಅದು ಹೇಗೆ ನೀಲಿಯಾಗಿದೆ ಎಂಬ ಸೋಜಿಗ ಕೂಡಾ […]

Advertisement

Wordpress Social Share Plugin powered by Ultimatelysocial