ಪ್ರಸನ್ನ

ಪ್ರಸನ್ನ ಹವ್ಯಾಸಿ ರಂಗಭೂಮಿಗೆ ಬೆಳಕು ತಂದ ಪ್ರಮುಖರಲ್ಲೊಬ್ಬರು. ಎಪ್ಪತ್ತರ ದಶಕದಲ್ಲಿ ಹವ್ಯಾಸಿ ರಂಗಭೂಮಿಗೆ ಹಬ್ಬದ ಸಡಗರ. ಹಲವಾರು ಹವ್ಯಾಸಿ ರಂಗಸಂಸ್ಥೆಗಳು ಹುಟ್ಟಿಕೊಂಡದ್ದು ಆಗಲೇ. ಆ ಸಂದರ್ಭದಲ್ಲಿ ರಂಗಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದವರಲ್ಲಿ ಪ್ರಸನ್ನ ಅವರದು ಎದ್ದು ಕಾಣುವ ಹೆಸರು. ಗ್ರಾಮಸ್ಥರ ಜೀವನ ಸುಧಾರಣೆಗಾಗಿ ಸಂಘಟನಾ ಕಾರ್ಯಕರ್ತರಾಗಿ ಸಹಾ ಅವರು ಪ್ರಸಿದ್ಧರಾಗಿದ್ದಾರೆ.

ಪ್ರಸನ್ನ 1951ರ ಮಾರ್ಚ್ 23ರಂದು ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ ಜನಿಸಿದರು. ತಂದೆ ಪ್ರಹ್ಲಾದಾಚಾರ್ಯ. ತಾಯಿ ಹೇಮಾವತಿ ಬಾಯಿ. ಸೆಂಟ್ರಲ್ ಕಾಲೇಜಿನಿಂದ ಎಂ.ಎಸ್ಸಿ. ಪದವಿ ಪಡೆದು ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಸಂಪಾದಿಸಿದ ಕೀರ್ತಿ ಅವರದು.
ಪ್ರಸನ್ನರು ದೆಹಲಿಯ ನಾಟಕ ಶಾಲೆಯಲ್ಲಿದ್ದ ದಿನಗಳಲ್ಲಿ ನಿರ್ದೇಶಿಸಿದ ನಾಟಕಗಳಲ್ಲಿ ಗಾಂಧಿ, ಉತ್ತರ ರಾಮಚರಿತಂ, ಅಗ್ನಿ ಔರ್ ಬರ್ ಕಾ, ಫ್ಯೂಜಿಯಾಮ ಪ್ರಮುಖವಾದವು. ಇಂಗ್ಲಿಷ್, ಹಿಂದಿ, ಕನ್ನಡ ಭಾಷೆಗಳ ಮೇಲೆ ಅವರು ಪ್ರಭುತ್ವ ಸಾಧಿಸಿದರು. ರಾಷ್ಟ್ರೀಯ ನಾಟಕಶಾಲೆಯಲ್ಲಿ ಕೆಲಕಾಲ ಬೋಧನೆ ಮಾಡಿ, ರಂಗಭೂಮಿ ಅಧ್ಯಯನಕ್ಕಾಗಿ ರಷ್ಯ, ಜರ್ಮನಿ ಮುಂತಾದ ಕಡೆಗಳಲ್ಲಿ ಪ್ರವಾಸ ಕೈಗೊಂಡರು.
ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಎಡಪಂಥೀಯ ವಿಚಾರ ಧಾರೆಗೆ ಪ್ರಾಶಸ್ತ್ಯ ನೀಡಿದ ಪ್ರಸನ್ನರಿಂದ ಮೂಡಿಬಂದದ್ದು ‘ಸಮುದಾಯ’ ತಂಡ. ರಾಜ್ಯಾದ್ಯಂತ ಅದರ ಶಾಖೆಗಳು ಮೂಡಿದವು. ನಾಟಕ, ಜಾಥಾ, ಕಲಾ ಮೇಳಗಳ ಮೂಲಕ ಅವರು ಜನಾಂದೋಲನವನ್ನು ಕೈಗೊಂಡರು. ಕಾರ್ಮಿಕರು, ಪ್ರಗತಿಪರ ಚಿಂತಕರು, ಸಾಹಿತಿ-ಕಲಾವಿದರನ್ನು ಒಗ್ಗೂಡಿಸಲು ವೇದಿಕೆ ಸ್ಥಾಪಿಸಿದ್ದೇ ಅಲ್ಲದೆ, ಜಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯ ಪರಿವರ್ತನೆಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದರು.
ಪ್ರಸನ್ನರು ನಿರ್ದೇಶಿಸಿದ ನಾಟಕಗಳಲ್ಲಿ ತುಘಲಕ್, ಗೆಲಿಲಿಯೋ, ಹುತ್ತವ ಬಡಿದರೆ, ತದ್ರೂಪಿ, ಕದಡಿದ ನೀರು, ತಾಯಿ, ದಂಗೆಯ ಮುಂಚಿನ ದಿನಗಳು, ಹ್ಯಾಮ್ಲೆಟ್ ಮುಂತಾದವು ಪ್ರಮುಖವೆನಿಸಿವೆ. ತಮಿಳುನಾಡು, ಕೇರಳ, ಮಧ್ಯಪ್ರದೇಶ, ಬಿಹಾರಗಳಲ್ಲಿ ರಂಗಭೂಮಿ ಅಧ್ಯಯನಕ್ಕಾಗಿ ಅವರು ವ್ಯಾಪಕವಾಗಿ ಪ್ರವಾಸ ಕೈಗೊಂಡಿದ್ದರು.
ಪ್ರಸನ್ನರು ಸೈದ್ಧಾಂತಿಕ ತಿಳುವಳಿಕೆಗಾಗಿ ‘ಸಮುದಾಯ ವಾರ್ತಾಪತ್ರ’ವನ್ನು ಸ್ಥಾಪಿಸಿದರು. ಪ್ರಸನ್ನರು ಭೀಷ್ಮ ಸಾಹ್ನಿಯವರ ‘ತಮಸ್’ ಕಾದಂಬರಿಯನ್ನು ದೂರದರ್ಶನಕ್ಕೆ ಅಳವಡಿಸಿದರಲ್ಲದೆ, ನೌಟಂಕಿ, ಸ್ವಯಂವರ, ನಾಶವಾಯ್ತೆ ಲಂಕಾದ್ರಿಪುರ ಮುಂತಾದ ಕಾದಂಬರಿಗಳನ್ನು ಕೂಡಾ ರಚಿಸಿದರು.
ಮೈಸೂರಿನ ರಂಗಾಯಣದ ನಿರ್ದೇಶಕರ ಜವಾಬ್ದಾರಿಯನ್ನೂ ಹೊತ್ತಿದ್ದ ಪ್ರಸನ್ನರು ಅಲ್ಲಿ ಹಲವಾರು ನಾಟಕಗಳ ನಿರ್ದೇಶನ ಮಾಡಿದರು. ರಂಗಾಯಣದಲ್ಲಿ ಅವರು ನಿರ್ವಹಿಸಿದ ಕಾರ್ಯಗಳು ರಂಗಭೂಮಿಗೆ ಹೊಸ ಆಯಾಮವನ್ನು ಸೃಷ್ಟಿಸಿಕೊಟ್ಟವು. ಪ್ರಸನ್ನರು ಸ್ವಯಂ ರಚಿಸಿದ ನಾಟಕಗಳು ಉಳಿ, ದಂಗೆಯ ಮುಂಚಿನ ದಿನಗಳು, ಒಂದು ಲೋಕದ ಕಥೆ, ಹದ್ದು ಮೀರಿದ ಹಾದಿ, ಜಂಗಮದ ಬದುಕು.
ಸಂಘಟನಾ ಚತುರತೆ, ಹೊಸ ಚಿಂತನೆ ಮತ್ತು ಸೃಜನಶೀಲತೆಗಳಿಗಾಗಿ ಪ್ರಸನ್ನರು ಹೆಸರಾಗಿದ್ದಾರೆ. ಪ್ರಸನ್ನರ ಚತುರತೆಯಲ್ಲಿ ‘ಭೂಮಿಗೀತ’ವು ರಂಗ ಪರೀಕ್ಷೆಗಳ ನೂತನ ಅಪೇಕ್ಷೆಗಳಿಗನುಗುಣವಾಗಿ ಹೊಸವಿನ್ಯಾಸವನ್ನು ಗಳಿಸಿತು; ‘ವನರಂಗ’ ಹೊಸ ರೂಪ ಪಡೆಯಿತು; ಶ್ರೀರಂಗ ಸ್ಟುಡಿಯೋ ನಿರ್ಮಾಣಗೊಂಡಿತು; ಲಂಕೇಶ್ ಆರ್ಟ್ ಗ್ಯಾಲರಿ ಕಲಾ ಪ್ರದರ್ಶನಗಳಿಗಾಗಿ ತೆರೆದುಕೊಂಡಿತು; ರಾಷ್ಟ್ರೀಯ ನಾಟಕೋತ್ಸವ ‘ಬಹುರೂಪಿ’ ಚಾಲನೆಗೊಂಡಿತು; ವಾರಾಂತ್ಯದ ರಂಗಪ್ರದರ್ಶನಗಳು ಪ್ರಾರಂಭಗೊಂಡವು; ಹವ್ಯಾಸಿ ರಂಗತಂಡಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಗ್ರೀಷ್ಮ ರಂಗೋತ್ಸವ ಹುಟ್ಟಿಕೊಂಡಿತು; ರಂಗಶಿಕ್ಷಣಕ್ಕಾಗಿ ಭಾರತೀಯ ರಂಗ ಶಿಕ್ಷಣ ಕೇಂದ್ರದ ಚಿಂತನೆಗೊಂದು ರೂಪ ಸಿಕ್ಕಿತು. ರಂಗಭೂಮಿಯ ಕುರಿತಾದ ಮಾಹಿತಿ ಸಂಶೋಧನಾ ಚಟುವಟಿಕೆಗಳ ಸಲುವಾಗಿ ಶ್ರೀರಂಗ ಮಾಹಿತಿ ಕೇಂದ್ರದ ನಕಾಶೆ ರೂಪುಗೊಂಡಿತು.
ಪ್ರಸನ್ನ ಅವರು ಹೆಗ್ಗೋಡಿನಲ್ಲಿ ನೆಲೆಸಿ ಕವಿ-ಕಾವ್ಯ ಟ್ರಸ್ಟ್ ಆಶ್ರಯದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿದರಲ್ಲದೆ. ಋಜುವಾತು ಪತ್ರಿಕೆಗೆ ಹೊಸರೂಪ ನೀಡಿದರು. ಗುಡಿ ಕೈಗಾರಿಕೆಗೆ ಪ್ರೋತ್ಸಾಹ, ಗ್ರಾಮೀಣ ಕುಶಲ ಕರ್ಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಜಯನಗರ ಸೌತ್ ಎಂಡ್ ಸರ್ಕಲ್, ಗಿರಿನಗರದ ಪ್ರವೇಶ ದ್ವಾರದ ಬಳಿ ‘ದೇಸಿ’ ಅಂಗಡಿ ಪ್ರಾರಂಭಿಸಿದರಲ್ಲದೆ, ಗ್ರಾಮೀಣ ಕುಶಲ ಕರ್ಮಿಗಳಿಗೆ ಕಲ್ಯಾಣನಿಧಿಯನ್ನು ಸ್ಥಾಪಿಸಿದರು. ವಿನಾಶದ ಅಂಚಿಗೆ ತಲುಪಿದ್ದ ಕೈ ಮಗ್ಗದ ನೇಕಾರಿಕೆಯಲ್ಲಿರುವವರ ಹಿತರಕ್ಷಣೆಗಾಗಿ ವ್ಯಾಪಕ ಹೋರಾಟ ನಡೆಸಿದರು.
ಈ ಬಹುರೂಪಿ ಪ್ರಸನ್ನರಿಗೆ ಸಂದ ಪ್ರಶಸ್ತಿ ಗೌರವಗಳು ಹಲವಾರು. ಸಂಗೀತ ನಾಟಕ ಅಕಾಡಮಿ ಫೆಲೋಷಿಪ್, ರಂಗಭೂಮಿ ಅಧ್ಯಯನಕ್ಕಾಗಿ ಭಾರತ ಭವನ್ ಫೆಲೋಷಿಪ್, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಬಹುಮಾನ, ಪು.ತಿ.ನ. ಟ್ರಸ್ಟ್ ಪುರಸ್ಕಾರ, ಚದುರಂಗ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಇವುಗಳಲ್ಲಿ ಪ್ರಮುಖವಾದವು.
ಪ್ರಸನ್ನರ ಸಾಧನೆಗಳು ನಿರಂತರವಾಗಿ ಮುಂದುವರೆಯುತ್ತಿರಲಿ. ಅವರಿಗೆ ಎಲ್ಲ ರೀತಿಯ ಪ್ರೋತ್ಸಾಹ ಗೌರವಗಳೂ ಸಲ್ಲಲಿ ಎಂದು ಹಾರೈಸುತ್ತಾ ಶುಭಾಶಯಗಳನ್ನು ಹೇಳೋಣ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಶವಂತ ಚಿತ್ತಾಲ

Mon Mar 28 , 2022
  ಯಶವಂತ ಚಿತ್ತಾಲರು ಕನ್ನಡದ ಶ್ರೇಷ್ಠ ಕಥೆಗಾರರಲ್ಲಿ ಒಬ್ಬರು. ಇಂದು ಅವರ ಸಂಸ್ಮರಣೆ ದಿನ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಳಿ ಇರುವ ಒಂದು ಸಣ್ಣ ಊರು ಹನೇಹಳ್ಳಿ. ಇಲ್ಲಿ ಹುಟ್ಟಿ ಬೆಳೆದವರು ಯಶವಂತ ವಿಠೋಬಾ ಚಿತ್ತಾಲ. ಅವರು ಹುಟ್ಟಿದ ದಿನ ಆಗಸ್ಟ್ 3, 1928. ಯಶವಂತ ಚಿತ್ತಾಲರ ಅಣ್ಣ ಗಂಗಾಧರ ಚಿತ್ತಾಲ. ಅಣ್ಣ ಕವಿಯಾದರೆ ತಮ್ಮ ಯಶವಂತ ನಮ್ಮ ಒಬ್ಬ ಶ್ರೇಷ್ಠ ಕಥೆಗಾರ, ಕಾದಂಬರಿಕಾರ. ವಿಠೋಬಾ – ರುಕ್ಮಿಣಿ […]

Advertisement

Wordpress Social Share Plugin powered by Ultimatelysocial