ಪ್ರೊ. ಎಂ. ಡಿ. ನಂಜುಂಡಸ್ವಾಮಿ -ಅಗ್ರಹಾರ ಕೃಷ್ಣಮೂರ್ತಿ

ಫೆಬ್ರವರಿ 13, ಕರ್ನಾಟಕದ ಸಮಾಜವಾದಿ ಚಳವಳಿಯ ರೂವಾರಿ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರ ಜನ್ಮದಿನ. 2004ರಲ್ಲಿ ಅವರು ತಮ್ಮ ಅರವತ್ತೆಂಟನೆಯ ವಯಸ್ಸಿನಲ್ಲಿ ಕ್ಯಾನ್ಸರಿಗೆ ಬಲಿಯಾದರು. ತಮ್ಮ ಕೊನೆಯ ಉಸಿರಿರುವರೆಗೂ ನಮ್ಮ ನಾಡಿನ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಅಪಾಯಕಾರಿಯಾಗಿ ಹಬ್ಬಿರುವ ಕ್ಯಾನ್ಸರಿಗೆ ಅವರು ಚಿಕಿತ್ಸೆ ನೀಡುತ್ತಿದ್ದರು. ಶೈಕ್ಷಣಿಕ ಕ್ಯಾನ್ಸರ್, ಆರ್ಥಿಕ ಕ್ಯಾನ್ಸರ್, ಸಾಂಸ್ಕೃತಿಕ, ಧಾರ್ಮಿಕ, ಕೃಷಿ ಅಥವಾ ಸಾಮಾಜಿಕ ಕ್ಷೇತ್ರದ ಕ್ಯಾನ್ಸರ್ಗಳಾಗಲಿ ಅವಕ್ಕೆಲ್ಲ ತಮ್ಮ ಅಸಾಧಾರಣ ಜ್ಞಾನದ ಮೂಲಕ ಶಾಕ್ ಟ್ರೀಟ್ ಮೆಂಟ್ ಕೊಡುತ್ತಿದ್ದರು. ಹೀಗೂ ಯೋಚನೆ ಮಾಡಬಹುದೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತಿದ್ದರು. ರಾಜ್ಯಾಂಗ, ನ್ಯಾಯಾಂಗ, ಆಡಳಿತಾಂಗಗಳಲ್ಲಿರುವವರು ನಾಗರಿಕರಿಗೆ ಉಪಕಾರಿಯಲ್ಲದ ತೀರ್ಮಾನಗಳನ್ನು ತೆಗೆದುಕೊಂಡರೆ ಈ ಚಿಕಿತ್ಸಕ ಜಾಗೃತರಾಗುತ್ತಿದ್ದರು. ಅತಿ ಶೀಘ್ರದಲ್ಲಿಯೇ ಅಪಾಯವನ್ನು ತಡೆಯುವ ತಮ್ಮ ಯೋಜನೆಗಳನ್ನು ರೂಪಿಸುತ್ತಿದ್ದರು.
ತಮ್ಮ ಕೃಶ ಶರೀರಕ್ಕೊದಗಿದ್ದ ಕ್ಯಾನ್ಸರಿನ ಚಿಕಿತ್ಸೆಗೆ ಇಂಗ್ಲಿಷ್ ಔಷಧವನ್ನು ನಿರಾಕರಿಸಿ ಆಯುರ್ವೇದ, ಹೋಮಿಯೋಪತಿ ಮುಂತಾದ ದೇಸಿ ಚಿಕಿತ್ಸೆಗಳಿಗೆ ಅವರು ಮೊರೆ ಹೋದರು. ಜೀವನವಿಡೀ ಸ್ವದೇಶಿ ಪ್ರಚಾರ ಮಾಡಿದ್ದ ಎಂ.ಡಿ.ಎನ್, ಸಾವು ಬಂದೆರಗಿ ಪ್ರತಿಕ್ಷಣ ಕುಕ್ಕಿ ಘಾಸಿಗೊಳಿಸುತ್ತಿದ್ದರೂ ಹಟಮಾರಿಯಾಗಿದ್ದರು. ಅಲೋಪತಿಯನ್ನು ನಿಷ್ಠುರವಾಗಿ ನಿರಾಕರಿಸಿಬಿಟ್ಟಿದ್ದರು. ಅವರ ಕೆಲವು ಕಿರಿಯ ಗೆಳೆಯರು ಶಕ್ತಿಪ್ರಯೋಗ ಮಾಡಿ ಅವರನ್ನು ಕಿದ್ವಾಯಿ ಆಸ್ಪತ್ರೆಗೆ ದಾಖಲಿಸಬೇಕಾಯಿತು. ಆ ವೇಳೆಗೆ ಎಲ್ಲವೂ ಕೈ ಮೀರಿತ್ತು. ಅವರ ಶಠತ್ವ ಅಥವಾ ಹಟಮಾರಿತನವೆಂಬ ಸ್ಥಾಯಿಭಾವದಿಂದಾಗಿ ಅವರ ಸುತ್ತ ಇದ್ದವರು ಅವರ ಅಂತಿಮ ಗಳಿಗೆಯ ಕ್ಷಣಗಣನೆ ಮಾಡುವಂತಾಯಿತು. ಅವರು ತಮ್ಮ ಹಟಮಾರಿತನದಿಂದ ಎಷ್ಟನ್ನು ಸಾಧಿಸಿದರೋ ಅಷ್ಟನ್ನೂ ಕಳೆದುಕೊಂಡುಬಿಟ್ಟರು. ತಾವು ಅತಿಯಾಗಿ ಪ್ರೀತಿಸುತ್ತಿದ್ದ ಬದುಕನ್ನೂ ಕಳೆದುಕೊಂಡರು. ಯಾವ ವಿಚಾರದಲ್ಲೂ ಅವರು ರಾಜಿ ಮಾಡಿಕೊಳ್ಳುವುದನ್ನು ಕಲಿತೇ ಇರಲಿಲ್ಲ. ಅಷ್ಟೇ ಅಲ್ಲ, ತಮಗೆ ಅಂತ್ಯವಿಲ್ಲವೆಂದೇ ಅವರು ನಂಬಿ ಬಿಟ್ಟಿದ್ದರು. ಅದು ಅವರ ನಂಬಿಕೆಯಷ್ಟೇ ಆಗಿರಲಿಲ್ಲ. ಅವರನ್ನು ಬಲ್ಲ ಅನೇಕ ಗೆಳೆಯರು, ಶಿಷ್ಯರು, ಸಹಚಳವಳಿಗಾರರೆಲ್ಲರ ನಂಬಿಕೆಯಾಗಿತ್ತು.
ನನಗೆ ಅವರ ಅನಾರೋಗ್ಯದ ಸುದ್ದಿ ಗೊತ್ತಾದಾಗ ಹೋಗಿ ನೋಡುವುದು ಕ್ಲೀಷೆಯ ಕಾಯಕವೆನಿಸಿದ್ದಕ್ಕಿಂತಲೂ ಹೆಚ್ಚಾಗಿ- ಅವರಿಗೆ ಕಾಯಿಲೆಯಾಗಿ ಮಲಗಿರುವಾಗ ಅವರನ್ನು ಮಾತನಾಡಿಸುವುದು- ಇವೆಲ್ಲ ಯಾವುದೋ ಅಸಹಜ ಯೋಚನೆಯೆನಿಸಿತು. ಅವರಿಗೆ ಕಾಯಿಲೆಯೇ ಆಗಿಲ್ಲವೆಂದು ನನ್ನ ಮನಸ್ಸನ್ನು ನಾನೇ ನಂಬಿಸಲು ಪ್ರಯತ್ನಿಸುತ್ತಿದ್ದೆ. ಸ್ನೇಹಿತರ ಬಳಿ ಮಾತಾಡುವಾಗ ವಿಷಯವನ್ನು ತೇಲಿಸಿಬಿಡುತ್ತಿದ್ದೆ. ಹೀಗೇ ನಡೆದು ಎಲ್ಲ ಸರಿ ಹೋಗಿ ಪಾರಾಗಿಬಿಡುತ್ತಾರೆಂದು ನಂಬಿದ್ದೆ. ಆದರೆ ಎಂ.ಡಿ.ಎನ್ ಫೆಬ್ರವರಿ 3, 2004ರ ಮುಂಜಾನೆ ಪ್ರೀತಿಯ ಮಗಳು ಚುಕ್ಕಿಯ ಹೆಸರು ಹೇಳುತ್ತಾ ಶಾಶ್ವತವಾಗಿ ಮಲಗಿಬಿಟ್ಟರಂತೆ.
ಇದು ನನಗೆ ಅತ್ಯಂತ ತೀವ್ರವಾದ ಸ್ವಂತ ಸಾವಿನಂತೆ ತೋರತೊಡಗಿತು. ನನ್ನ ವ್ಯಕ್ತಿತ್ವದ ಒಂದು ಭಾಗವೇ ಕಳಚಿಬಿದ್ದಂತಾಯಿತು. ಅನೇಕರಿಗೆ ಹೀಗೆ ಆಗಿರುವುದು ನನಗೆ ಗೊತ್ತು. ಅದಕ್ಕೆ ಮುಖ್ಯ ಕಾರಣ, ತಾರುಣ್ಯದ ದಿನಗಳಲ್ಲಿ ನಾನು ಮತ್ತು ನನ್ನ ಓರಗೆಯ ಗೆಳೆಯರು ಅವರ ಪ್ರಭಾವಕ್ಕೆ ಒಳಗಾದದ್ದು.
ಎಪ್ಪತ್ತರ ದಶಕವೇ ಹಾಗಿತ್ತು. ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಸ್ವಾತಂತ್ರ್ಯಾನಂತರದ ಭ್ರಮನಿರಸನಗಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಬೇಕಾದಂಥ ಕಾಲವಾಗಿತ್ತು. ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಹಲವು ವಿಚಾರಶೀಲರು ಮಾತು, ಬರವಣಿಗೆಗಳಲ್ಲಿ ತೊಡಗಿದ್ದರು. ಅದೇ ಹೊತ್ತಿಗೆ ಪೊಫೆಸರ್ ಎಂ.ಡಿ.ಎನ್ ಜರ್ಮನಿಯಲ್ಲಿ ಕಾನೂನು ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದು ಬಂದಿದ್ದರು. ಮೈಸೂರಿನಲ್ಲಿ ‘ಸಮಾಜವಾದಿ ಯುವಜನ ಸಭಾ’ವನ್ನು ಹುಟ್ಟುಹಾಕಿ ಅದನ್ನು ಬೆಂಗಳೂರಿಗೆ ಹಬ್ಬಿಸಲು 1970ರಿಂದಲೇ ಪ್ರಯತ್ನಶೀಲರಾಗಿದ್ದರು. ಬೆಂಗಳೂರಿನಲ್ಲಿ ಅವರ ಪಟ್ಟಶಿಷ್ಯರಾದವರು ಡಾ.ಲಕ್ಷ್ಮೀಪತಿಬಾಬು ಮತ್ತು ಡಾ.ರಾ.ನ.ವೆಂಕಟಸ್ವಾಮಿ. ಇವರಿಬ್ಬರೂ ತಮ್ಮ ವೈದ್ಯಕೀಯ ಶಿಕ್ಷಣವನ್ನು ನಿರ್ಲಕ್ಷಿಸಿ ಸಮಾಜವಾದಿ ಚಳವಳಿಗೆ ತೊಡಗಿಸಿಕೊಳ್ಳುವಷ್ಟರ ಮಟ್ಟಿಗೆ ಎಂ.ಡಿ.ಎನ್ ಪ್ರಭಾವಶಾಲಿಯಾಗಿದ್ದರು. ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಆಗ ತಾನೇ ಓದು ಪ್ರಾರಂಭಿಸಿದ್ದ ನಮ್ಮ ಗುಂಪು ಸಹಜವಾಗಿಯೇ ಹಲವಾರು ಬಗೆಯ ಚಳುವಳಿಗಳಿಗೆ ಆಕರ್ಷಿತವಾಯಿತು. ನಮ್ಮ ಗುಂಪಿನಲ್ಲಿ ದಲಿತ ಕವಿ ಸಿದ್ಧಲಿಂಗಯ್ಯ, ಡಿ.ಆರ್. ನಾಗರಾಜ್, ಕಥೆಗಾರ ಕರಿಗೌಡ ಬೀಚನಹಳ್ಳಿ, ಕಲ್ಲೂರು ಮೇಘರಾಜ, ಗಂಗಣ್ಣ ಮುಂತಾದವರಿದ್ದೆವು. ನಮ್ಮಲ್ಲೂ ಬಣಗಳಿದ್ದವು! ಮಾರ್ಕ್ಸ್‌ವಾದಿಗಳದ್ದು, ಲೋಹಿಯಾವಾದಿಗಳದ್ದು, ಗಾಂಧಿವಾದಿಗಳದ್ದು… ಹೀಗೇ.
ಎಪ್ಪತ್ತರ ದಶಕದಲ್ಲಿ ನಡೆದ ಚಳುವಳಿಗಳಿಗೆ ಲೆಕ್ಕವಿಲ್ಲ. ಸಮಾಜವಾದಿ ಯುವಜನ ಸಭಾದ ಪ್ರಾರಂಭ, ವಿದ್ಯಾರ್ಥಿ, ಕಾರ್ಮಿಕರ ಚಳುವಳಿಗಳು, ಜಾತಿವಿನಾಶ ಸಮ್ಮೇಳನ, ಬರಹಗಾರರ ಕಲಾವಿದರ ಒಕ್ಕೂಟ, ಪೆರಿಯಾರ್, ದಲಿತ-ಬಂಡಾಯ ಚಳುವಳಿ, ಕೋವೂರ್ ಆಗಮನ, ತುರ್ತು ಪರಿಸ್ಥಿತಿ, ಕೇಂದ್ರದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ, ಬರೋಡ ಡೈನಮೈಟ್ ಪ್ರಕರಣ, ಆನಂತರ ಪ್ರಬಲವಾಗಿ ಬೆಳೆದ ರೈತ ಚಳವಳಿ ಇತ್ಯಾದಿ ನೂರಾರು. ಇವೆಲ್ಲ ಚಳುವಳಿಗಳ ಜೊತೆಗೆ ಜೆಪಿಯವರ ಸಂಪೂರ್ಣಕ್ರಾಂತಿ ದೇಶಾದ್ಯಂತ ಹಬ್ಬಿತು. ಕರ್ನಾಟಕದಲ್ಲಿ ನಾಟಕ ಕ್ಷೇತ್ರದ ‘ಸಮುದಾಯ’, ಹಾವನೂರು ಆಯೋಗ, ಭಾಷಾ ಚಳುವಳಿ ಇವೆಲ್ಲವುಗಳ ಪರಿಣಾಮವಾಗಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ರಚನೆ- ಹೀಗೆ ಎಪ್ಪತ್ತರ ದಶಕ ಸಂಕ್ರಮಣ ಕಾಲವಾಗಿತ್ತು. ಇವೆಲ್ಲ ಚಳವಳಿಗಳ ಹಿಂದೆ ಒಂದಲ್ಲ ಒಂದು ರೀತಿಯಲ್ಲಿ ಪ್ರಚೋದಕ ಶಕ್ತಿಯಾಗಿದ್ದವರು ಪೊಫೆಸರ್ ನಂಜುಂಡಸ್ವಾಮಿ. ತಮ್ಮ ಪ್ರಖರ ವಿಚಾರ ಲಹರಿ, ಖಚಿತ ಅಂಕಿ ಅಂಶಗಳ ಭಾಷಣ, ಅದ್ಭುತ ಕನ್ನಡ ಭಾಷಾಬಳಕೆ, ಭಾರತದ ಜಾತಿ ವ್ಯವಸ್ಥೆ ಮತ್ತು ನ್ಯಾಯಾಂಗದ ಬಗೆಗೆ ಗಳಿಸಿದ್ದ ಪಾಂಡಿತ್ಯ, ಆಧುನಿಕ ಜೀವನ ಶೈಲಿಯ ಜೊತೆಗೆ ಲೋಹಿಯಾ ಹಾಗೂ ಗಾಂಧೀವಾದದ ಆಳವಡಿಕೆ ಮುಂತಾದುವುಗಳಿಂದ ಯುವಕ ಯುವತಿಯರನ್ನು ಸಮಾಜವಾದಿ ಆಂದೋಲನಕ್ಕೆ ಸೆಳೆಯುತ್ತಿದ್ದರು.
ನಂಜುಂಡಸ್ವಾಮಿಯವರು ನಮ್ಮ ಗುಂಪಿನಿಂದ ಅನೇಕ ಕೆಲಸಗಳನ್ನು ಮಾಡಿಸುತ್ತಿದ್ದರು. ಕರ್ನಾಟಕದಲ್ಲಿ 72-73ರಲ್ಲಿ ಭೀಕರ ಬರಗಾಲ ಕಾಣಿಸಿಕೊಂಡಿತು. ಬರಪೀಡಿತ ಪ್ರದೇಶಗಳ ಜನರಿಗೆ ಸಹಾಯ ಮಾಡಲು ನಮ್ಮಿಂದ ಮೆಜೆಸ್ಟಿಕ್ ಚೌಕದಲ್ಲಿ ಬೂಟ್ ಪಾಲಿಷ್ ಮಾಡಿಸಿ ಹಣ ಸಂಗ್ರಹ ಮಾಡಿಸುತ್ತಿದ್ದರು. ಪ್ರತಿದಿನ ಬೆಳಗ್ಗೆ ನಾವು ಜನತಾ ಬಜಾರಿನ ಮುಂದಿನ ಚೌಕದಲ್ಲಿ ಕುಳಿತು ಬೂಟ್ ಪಾಲಿಷ್ ಮಾಡುತ್ತಿದ್ದರೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ತಾಯಂದಿರು ನಮ್ಮ ನಿಧಿಗೆ ಕಾಣಿಕೆ ಕೊಡಲೆಂದೇ ತೋರುಗಾಣಿಕೆಗೆ ಮಕ್ಕಳ ಶೂಗಳಿಗೆ ಪಾಲಿಷ್ ಮಾಡಿಸುತ್ತಿದ್ದರು. ಅಂಥ ವಿನೂತನ ಕಾರ್ಯಕ್ರಮಗಳನ್ನು ನೋಡಲು ರಾಜಕಾರಣಿಗಳು, ಲೇಖಕರು ಮೆಜೆಸ್ಟಿಕ್ ಗೆ ಬರುತ್ತಿದ್ದರು. ಸಂಗ್ರಹಗೊಂಡ ಹಣವನ್ನು ಸಂಜೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ.ಎಚ್.ನರಸಿಂಹಯ್ಯನವರ ನೇತೃತ್ವದಲ್ಲಿ ಎಣಿಸಿ ಲೆಕ್ಕಹಾಕಿ ಮರುದಿನ ಜಿಲ್ಲಾಧಿಕಾರಿಗಳ ಕಚೇರಿಗೆ ಕೊಡುತ್ತಿದ್ದೆವು. ಹೀಗೆ ಬೂಟ್ ಪಾಲಿಷ್ ಮಾಡುತ್ತಿದ್ದ ಒಂದು ಸಂದರ್ಭದಲ್ಲಿ ಎಂ.ಡಿ.ಎನ್ ನನಗೆ ಲಂಕೇಶ್ ಅವರನ್ನು ಪರಿಚಯ ಮಾಡಿಕೊಟ್ಟಿದ್ದರು.
ಆಗ ನಡೆಯುತ್ತಿದ್ದ ವಿಧಾನಸಭೆಯ ಅಧಿವೇಶನದಲ್ಲಿ ಬಜೆಟ್ ಮಂಡನೆಯ ದಿನ ನಮ್ಮ ಗುಂಪಿನಿಂದ ಪ್ರೇಕ್ಷಕರ ಗ್ಯಾಲರಿಯಿಂದ ಕರಪತ್ರಗಳನ್ನು ತೂರುವ ಯೋಜನೆ ರೂಪಿಸಿದ್ದರು. ಬರಗಾಲ ಪೀಡಿತ ಪ್ರದೇಶಗಳಿಗೆ ಭೇಟಿ ಕೊಡದಿರುವ ಶಾಸಕರ ವಿರುದ್ಧ ಧಿಕ್ಕಾರ ಕೂಗುತ್ತಾ ಪ್ರೇಕ್ಷಕರ ಗ್ಯಾಲರಿಯಿಂದ ಕರಪತ್ರಗಳನ್ನು ತೂರಿದೆವು. ಕ್ಷಣಾರ್ಧದಲ್ಲಿ ಬಂಧನಕ್ಕೊಳಗಾಗಿ ಜೈಲಿಗೆ ಹೋದೆವು. ಆಗ ನಾವೆಲ್ಲ ಪುಟ್ಟಪುಟ್ಟ ನಾಯಕರಾಗಿ ಪರಿವರ್ತಿತರಾಗಿದ್ದೆವು. ಪೊಲೀಸರು ನಿಮ್ಮ ನಾಯಕರಾರು ಎಂದು ಪ್ರಶ್ನಿಸಿದರೆ, ನಾವೆಲ್ಲ ನಮ್ಮದು ‘ಸಾಮೂಹಿಕ ನಾಯಕತ್ವ’ ಎಂದು ದಿಟ್ಟವಾಗಿ ಹೇಳುತ್ತಿದ್ದೆವು. ಇದು ಪೊಲೀಸರಿಗೆ ವಿಚಿತ್ರವೆನಿಸುತ್ತಿತ್ತು. ವಿರೋಧ ಪಕ್ಷದ ಯಾರ್ಯಾರೋ ಧುರೀಣರು ಬಂದು ನಮ್ಮನ್ನು ಅಭಿನಂದಿಸುತ್ತಿದ್ದರು. ಆದರೆ ನಮ್ಮ ಮೂಲಪುರುಷ ಎಂಡಿಎನ್ ಚಾರ್ ಮಿನಾರ್ ಸಿಗರೇಟು ಸೇದುತ್ತಾ ಸುಬೇದಾರ್ ಛತ್ರಂ ರಸ್ತೆಯ ರಾಮಕೃಷ್ಣ ಲಾಡ್ಜ್ ನಲ್ಲಿ ಕುಳಿತು ಚಹಾ ಹೀರುತ್ತಾ ಬೇರೊಂದು ಪ್ರತಿಭಟನೆಯ ಯೋಜನೆ ಹಾಕುತ್ತಿರುತ್ತಿದ್ದರು!
ಭಾರತದಲ್ಲಿ ನೆಹರೂ ಮನೆತನವು ವಂಶಪಾರಂಪರ್ಯವಾಗಿ ಆಡಳಿತ ನಡೆಸುವುದರ ವಿರುದ್ಧ ಎಂ.ಡಿ.ಎನ್ ಹಲವಾರು ಪ್ರತಿಭಟನೆಗಳನ್ನು ಆಯೋಜಿಸಿದ್ದರು. ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಬಹುಶಃ ನಮ್ಮ ರಾಜ್ಯದಲ್ಲಿ ಕಂಡಷ್ಟು ಕಪ್ಪುಬಾವುಟ ಪ್ರದರ್ಶನಗಳನ್ನು ಬೇರಾವ ರಾಜ್ಯಗಳಲ್ಲೂ ಎದುರಿಸಲಿಲ್ಲವೆನಿಸುತ್ತದೆ. ಅವರು ಕರ್ನಾಟಕಕ್ಕೆ ಯಾವಾಗ ಭೇಟಿಕೊಟ್ಟರೂ ವಿಮಾನ ನಿಲ್ದಾಣದಲ್ಲೇ ಪ್ರತಿಭಟನೆ ಎದುರಿಸಬೇಕಾಗುತ್ತಿತ್ತು. ಭಾರತದ ಸುಪ್ರಸಿದ್ಧ ಚಲನಚಿತ್ರ ತಾರೆ ದೇವಿಕಾರಾಣಿ ತನ್ನ ತೋಟದಲ್ಲಿ ಕಾರ್ಮಿಕರಿಗೆ ಕಾನೂನುಬದ್ಧ ವೇತನವನ್ನು ಕೊಡುತ್ತಿಲ್ಲವೆಂಬ ಕಾರಣಕ್ಕೆ ಆಕೆ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವವನ್ನು ಉದ್ಘಾಟಿಸುವುದನ್ನು ಎಂ.ಡಿ.ಎನ್ ಮತ್ತು ಶಿಷ್ಯರು ಯಶಸ್ವಿಯಾಗಿ ಪ್ರತಿಭಟಿಸಿದರು. ನಿರುದ್ಯೋಗ ಸೃಷ್ಟಿಸುವ ಶಿಕ್ಷಣ ವ್ಯವಸ್ಥೆಯನ್ನು ಧಿಕ್ಕರಿಸಲು ವಿಶ್ವವಿದ್ಯಾಲಯದ ಘಟಿಕೋತ್ಸವಗಳಲ್ಲೇ ವಿದ್ಯಾರ್ಥಿಗಳು ಮಿಂಚಿನಂತೆ ವೇದಿಕೆಯೇರಿ ತಮ್ಮ ಪದವಿಪತ್ರಗಳನ್ನು ಹರಿದು ತೂರುವಂತೆ ಮಾಡಿ ದಿಗ್ಭಮೆಯುಂಟುಮಾಡುತ್ತಿದ್ದರು. ಜಾತ್ಯತೀತ ರಾಷ್ಟ್ರದಲ್ಲಿ ಜಾತಿ ಸಮ್ಮೇಳನಗಳನ್ನು ಮಾಡಬಾರದೆಂದು ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಕಪ್ಪುಬಾವುಟ ಪ್ರದರ್ಶನ ಮಾಡಿಸುತ್ತಿದ್ದರು. ಸರ್ಕಾರಿ ನೌಕರರು ಸರ್ಕಾರದ ವಿರುದ್ಧ ಪ್ರತಿಭಟಿಸಬಾರದೆಂಬ ಮೂಢನಂಬಿಕೆಯನ್ನು ತೊಡೆಯಲು ಕಾನೂನಿನಲ್ಲಿರುವ ಅರೆಕೊರೆಗಳನ್ನು ವಿವರಿಸಿ ಸರ್ಕಾರಿ ನೌಕರರಿಗೆ ಧೈರ್ಯ ತುಂಬುತ್ತಿದ್ದರು. ಕೋರ್ಟು ಕಚೇರಿಗಳಲ್ಲಿ ಕೊಳಚೆ ಪ್ರದೇಶಗಳ ಬಡಜನರ ಪರವಾಗಿ ಉಚಿತವಾಗಿ ವಾದಿಸಿ ನ್ಯಾಯ ಕೊಡಿಸುತ್ತಿದ್ದರು. ಸಿಗರೇಟು ಕಂಪನಿಯೊಂದು ಆಗ ರಾಷ್ಟ್ರಪತಿ ನಿವಾಸದ ಅತಿಥಿಗಳಿಗೆಂದೇ ವಿಶೇಷವಾಗಿ ತಯಾರಿಸುತ್ತಿದ್ದ ಸಿಗರೇಟುಗಳನ್ನು ತಯಾರಿಸಬಾರದೆಂದು, ಜನಸಾಮಾನ್ಯರಿಗೆ ಸಿಕ್ಕದಿರುವಂಥ ಯಾವ ವಸ್ತುವೂ ರಾಷ್ಟ್ರಾಧ್ಯಕ್ಷರಿಗೆ ಸಿಕ್ಕಬಾರದೆಂದು ಕಂಪನಿಯ ಮುಂದೆ ಧರಣಿ ಮಾಡಿಸುತ್ತಿದ್ದರು. ಈ ಸಭೆಯಲ್ಲಿ ನನ್ನಿಂದ ಭಾಷಣ ಮಾಡಿಸಿದ್ದರು. ಪವಾಡ ಪುರುಷರ ಕೈಚಳಕಗಳನ್ನು ಬಯಲು ಮಾಡುತ್ತಿದ್ದ ಕೋವೂರರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಪಂಚತಾರಾ ಮತ್ತು ಸಾಮಾನ್ಯ ಹೋಟೆಲ್ ಗಳಲ್ಲಿನ ಬೆಲೆ ಸಮಾನವಾಗಿರಬೇಕೆಂದು ಅಶೋಕ ಹೋಟೆಲಿನಲ್ಲಿ ನಾವೆಲ್ಲ ತಿಂಡಿ ತಿಂದು ನ್ಯಾಯ ಬೆಲೆಯ ಬಿಲ್ ಕೊಟ್ಟು ಬರುವಂತೆ ಮಾಡುತ್ತಿದ್ದರು. ನಾವೆಲ್ಲ ಬಾಡಿಗೆ ಸೂಟು ಬೂಟುಗಳನ್ನು ಹೊಂದಿಸಿಕೊಂಡು ಇಂಥ ಕಡೆಗೆಲ್ಲ ಪ್ರವೇಶ ಗಿಟ್ಟಿಸಿಕೊಂಡು ಪ್ರತಿಭಟಿಸುತ್ತಿದ್ದೆವು. ಇಂಥೆಲ್ಲ ರೋಚಕ ಘಟನೆಗಳನ್ನು ನಮ್ಮ ಪುಟ್ಟ ಗುಂಪಿನ ಮೂಲಕ ಮಾಡಿಸುತ್ತಿದ್ದ ಎಂ.ಡಿ.ಎನ್ ಒಬ್ಬ ಚತುರ ಹೋರಾಟಗಾರರಾಗಿದ್ದರು. ಸಮಾಜವಾದಿ ಆಲೋಚನೆಗಳನ್ನು ಪ್ರಯೋಗಾತ್ಮಕ ನೆಲೆಯಲ್ಲಿ ತರುಣ ತರುಣಿಯರ ಮನಸ್ಸಿಗೆ ತುಂಬುತ್ತಿದ್ದರು.
ಪೆರಿಯಾರ್ ಬೆಂಗಳೂರಿಗೆ ಬರುವಂತೆ ಮಾಡಿದ್ದರು. ಅವರ ಜೊತೆಗೆ ಪೊಫೆಸರ್ ಧರ್ಮಲಿಂಗಂ ಅವರಿದ್ದರು. ಪುರಭವನದಲ್ಲಿ ಸಮಾವೇಶ. ಲಂಕೇಶ್ ಸ್ವಾಗತ ಭಾಷಣ ಮಾಡಿದ್ದರು. ನಾವೆಲ್ಲ ಉತ್ಸಾಹದಿಂದ ಓಡಾಡುತ್ತ ಕೆಲಸಗಳನ್ನು ಮಾಡುತ್ತಿದ್ದೆವು. ಗಾಂಧಿನಗರದ ಯಾದವ ಹಾಸ್ಟೆಲ್ ನಲ್ಲಿ ಪೆರಿಯಾರ್ ಜೊತೆಗಿನ ಮಾತುಕತೆಯ ಸಂದರ್ಭದಲ್ಲಿ ನನಗೂ ಡಾ.ಸಿದ್ಧಲಿಂಗಯ್ಯನವರಿಗೂ ಗೂಂಡಾಗಳು ಸರಿಯಾಗಿ ಗೂಸಾ ಕೊಟ್ಟರು. ಪ್ರೊ.ಎಂ.ಡಿ.ಎನ್ ಪೊಲೀಸರನ್ನು ಕರೆಸಿ ಗೂಂಡಾಗಳನ್ನು ದಸ್ತಗಿರಿ ಮಾಡಿಸಿದರು. ಆಗ ಅವರು ತುಂಬುತ್ತಿದ್ದ ಧೈರ್ಯ ಅಸಾಧಾರಣವಾಗಿರುತ್ತಿತ್ತು. ಪೊಲೀಸ್ ಅಧಿಕಾರಿ ಸ್ವಲ್ಪ ನಿರ್ಲಕ್ಷ್ಯದಿಂದ ಮಾತಾಡಿಸಿದ ತಕ್ಷಣ ಎಂ.ಡಿ.ಎನ್, ‘ನಾನು ನಿಮಗೆ ಸಂಬಳ ಕೊಡುತ್ತಿರುವ ಧಣಿ. ಮೊದಲು ನನಗೆ ಸೆಲ್ಯೂಟ್ ಮಾಡಿ ನನ್ನೊಡನೆ ಮಾತಾಡಬೇಕು’ ಎಂದು ಕಂಚಿನ ಕಂಠದಲ್ಲಿ ಹೇಳಿದ್ದೇ ತಡ ಎಲ್ಲರಿಗೂ ಅಚ್ಚರಿಯಾಗುವಂತೆ ಆ ಪೊಲೀಸ್ ಅಧಿಕಾರಿ ಸೆಲ್ಯೂಟ್ ಮಾಡಿ ತಮ್ಮ ಕರ್ತವ್ಯವನ್ನು ಮಾಡತೊಡಗಿದರು. ಇದನ್ನು ನನಗೆ ಮರೆಯಲು ಸಾಧ್ಯವಾಗಿಯೇ ಇಲ್ಲ. ಆತ್ಮಾಭಿಮಾನ, ಆತ್ಮಸ್ಥೈರ್ಯದ ಪ್ರತಿರೂಪವಾಗಿದ್ದರು ಎಂ.ಡಿ.ಎನ್.
ಅವರು ವಿಸ್ತೃತವಾದ ರೈತ ಸಂಘಟನೆಗೆ ತೊಡಗಿದ ಮೇಲೆ ನಾವೆಲ್ಲ ಒಬ್ಬೊಬ್ಬರಾಗಿ ಅವರಿಂದ ಕಳಚಿಕೊಂಡೆವು. ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿಕೊಂಡೆವು. ಅಲ್ಲಿ ಇಲ್ಲಿ ಆಗಾಗ್ಗೆ ಸಿಕ್ಕರೆ ನಾವು ತೋರುತ್ತಿದ್ದ ಗೌರವ, ಅವರು ತೋರುತ್ತಿದ್ದ ಪ್ರೀತಿ ನಿರ್ಮಲ ಅಂತಃಕರಣದಿಂದಿರುತ್ತಿತ್ತು. ಅವರ ರೈತ ಸಂಘಟನೆಗೆ ಸರ್ಕಾರ ಮತ್ತು ಖಾಸಗಿ ವಲಯ ಹೆದರುವಂತಾದದ್ದು ಈಗ ಚಾರಿತ್ರಿಕ ಸಂಗತಿಯಾಗಿದೆ. ಕೆಂಟಕಿ ಕೋಳಿ ವಿರುದ್ಧ, ಮನ್ಸಾಂಟೋ ಕಂಪನಿ ವಿರುದ್ಧದ ಹೋರಾಟ, ನೀರಾ ಪರ ಹೋರಾಟ, ಸರ್ಕಾರದ ವಿರುದ್ಧದ ಯಾವ ಹೋರಾಟಗಳೇ ಆಗಲಿ ತರ್ಕಬದ್ಧ ವಾದಗಳನ್ನು ಮುಂದಿಟ್ಟು ಹಠಾತ್ ದಾಳಿಗಳನ್ನು ನಡೆಸಿ ಜನಾಭಿಪ್ರಾಯವನ್ನು ರೂಪಿಸುತ್ತಿದ್ದರು. ಅವರ ವರ್ಚಸ್ಸು ಕರ್ನಾಟಕದಾಚೆಗೂ ಹಬ್ಬಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆಲೆಯೂರಿತು.
2003ರ ವರ್ಷದಲ್ಲಿ ನಾನು ಇಬ್ಬರು ಕೃಷಿವಿಜ್ಞಾನಿಗಳ ಜೊತೆ ಮಾತಾಡುತ್ತಿದ್ದೆ. ಕೃಷಿ ವಿಚಾರದಲ್ಲಿ ಅಜ್ಞಾನಿಯಾಗಿರುವ ನಾನು ಹೈಬ್ರಿಡ್, ಹೆಚ್ಚು ಇಳುವರಿ ಕೊಡುವ ತಳಿಗಳು, ಅವು ಬೀರುವ ಪರಿಣಾಮಗಳು, ಎಂ.ಡಿ.ಎನ್ ವಿರೋಧಿಸುತ್ತಿದ್ದ ಬೀಜ, ಕಾಳು, ಬಿ.ಟಿ. ಹತ್ತಿಯ ಬಗ್ಗೆ ಮಾಹಿತಿ ಕೇಳುತ್ತಿದ್ದೆ. ಅವರು ತಿಳಿಸಿದ ಹಲವು ಸಂಗತಿಗಳು ನನಗೆ ಒಪ್ಪಿಗೆಯಾದವು. ಈಗ ಬಿಳಿ ಹತ್ತಿ ಬೆಳೆದು, ನೂಲು ತೆಗೆದು ವಿವಿಧ ಬಣ್ಣಗಳನ್ನು ಹಾಕಿ ಬಟ್ಟೆ ನೇಯುವ ಬದಲು ವಿವಿಧ ಬಣ್ಣದ ಹತ್ತಿಯನ್ನೇ ಬೆಳೆದುಬಿಡಬಹುದು ಎಂದರು. ವಿಜ್ಞಾನದ ಈ ಅಚ್ಚರಿ ನನಗೆ ಕುತೂಹಲವುಂಟು ಮಾಡಿತು. ಈ ವಿಚಾರಗಳನ್ನೆಲ್ಲ ಕೂಲಂಕಷವಾಗಿ ತಿಳಿದುಕೊಳ್ಳಬೇಕು ಎಂಬ ಆಸೆ ಹುಟ್ಟಿತು. ಕಪ್ಪು ಭೂಮಿಯಲ್ಲಿ ಬಿಳಿ ಹತ್ತಿ ಮಾತ್ರ ಬೆಳೆಯಬೇಕೆಂಬುದು ಎಂ.ಡಿ.ಎನ್ ಆಲೋಚನೆಯಿದ್ದೀತೇ ಎಂದು ನನ್ನ ಮನಸ್ಸಿನಲ್ಲಿ ತರ್ಕ ಶುರುವಾಯಿತು. ಎಂಡಿಎನ್ ಜೊತೆ ಕುಳಿತು ಇದರ ಬಗೆಗೆ ತಿಳಿದುಕೊಳ್ಳಬೇಕೆನಿಸಿತು. ನಾವು ಅವರಿಂದ ದೂರವಾದ ಮೇಲೆ ಪ್ರೆಸ್ ಕ್ಲಬ್ಬಿನಲ್ಲಿ ಯಾವಾಗಲಾದರೂ ಸಿಕ್ಕಾಗ, ನೀವು ಸಾಹಿತ್ಯ ಅದೆಲ್ಲಾ ಬಿಟ್ಟು ನಮ್ಮ ರೈತರ ಹೋರಾಟಕ್ಕೆ ಬರಬೇಕು. ಸರ್ಕಾರಿ ಕೆಲಸಗಳಿಗೆ ಸೇರಿ ಜಡ್ಡುಗಟ್ಟಿ ಹೋಗಿಬಿಟ್ಟಿದ್ದೀರಿ ಎಂದು ಮತ್ತೆ ಮತ್ತೆ ಹೇಳುತ್ತಿದ್ದುದು ನೆನಪಾಯಿತು. ಅವರ ಜೊತೆ ಮತ್ತೆ ಹೋರಾಟಕ್ಕೆ ತೊಡಗಿಕೊಳ್ಳುವ ಆಸೆ ಆಂತರ್ಯದಲ್ಲೇ ಉಳಿಯುತ್ತಿತ್ತು. ಅವರು ಜನತಾ ವಿಶ್ವವಿದ್ಯಾಲಯದ ಮಹಾಗುರುವಾಗಿ ನಿರಕ್ಷರಕುಕ್ಷಿಗಳ ಇಡೀ ಸಮೂಹಕ್ಕೆ ವೈಚಾರಿಕ ವಿಚಾರಗಳನ್ನು ಕಲಿಸಿಕೊಡುತ್ತಿದ್ದರು. ಅನೇಕ ಮಹತ್ವದ ವಿಚಾರಗಳನ್ನು ನಮ್ಮೊಡನೆ ಬಿಟ್ಟು ಹೋಗಿದ್ದಾರೆ. ನಾವೆಲ್ಲ ಮನಸ್ಸು ಮಾಡಿದರೆ ಅವರ ಕೆಲಸಗಳನ್ನು ಮುಂದುವರಿಸಬಹುದಲ್ಲವೇ ಅನ್ನಿಸುತ್ತದೆ. ಪ್ರತಿಯೊಂದನ್ನೂ ಮುಂದೂಡುವುದರಲ್ಲೇ ಕಾಲ ಕಳೆಯುತ್ತಿರುವ ನಮ್ಮಿಂದ ಈ ಕೆಲಸ ಆದೀತೆ?

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರೋಜಿನಿ ನಾಯ್ಡು

Fri Mar 4 , 2022
ಸರೋಜಿನಿ ನಾಯ್ಡು ‘ಭಾರತದ ಕೋಗಿಲೆ’ ಎಂದು ಪ್ರಸಿದ್ಧರಾದ ಕವಯತ್ರಿ, ಬರಹಗಾರ್ತಿ, ಸಾಮಾಜಿಕ ಕಾರ್ಯಕರ್ತೆ, ಸ್ವಾತಂತ್ರ ಹೋರಾಟಗಾರ್ತಿ. ಸರೋಜಿನಿ ನಾಯ್ಡು ಅವರು 1879ರ ಫೆಬ್ರುವರಿ 13ರಂದು ಹೈದರಾಬಾದಿನಲ್ಲಿ ಜನಿಸಿದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಪ್ರಥಮ ಮಹಿಳಾ ಅಧ್ಯಕ್ಷೆ ಹಾಗೂ ಉತ್ತರ ಪ್ರದೇಶದ ಪ್ರಥಮ ರಾಜ್ಯಪಾಲರಾದ ಹೆಗ್ಗಳಿಕೆಗೆ ಪಾತ್ರರಾದವರು. ಸರೋಜಿನಿಯವರ ತಂದೆ ಅಘೋರನಾಥ ಚಟ್ಟೋಪಾಧ್ಯಾಯರು ವಿಜ್ಞಾನಿ ಮತ್ತು ತತ್ವಶಾಸ್ತ್ರಜ್ಞರು. ಹೈದರಾಬಾದಿನಲ್ಲಿ ನಿಜಾಂ ಕಾಲೇಜನ್ನು ಸಂಸ್ಥಾಪಿಸಿದ ಕೀರ್ತಿ ಅವರದು. ತಾಯಿ ಸುಂದರಿ […]

Advertisement

Wordpress Social Share Plugin powered by Ultimatelysocial