ಔರಂಗಾಜೇಬನ ಸಮಾಧಿ ವಿವಾದ: ಓವೈಸಿಗೆ ಬೆಂಬಲ ಸೂಚಿಸಿದ ರವೀನಾ ಟಂಡನ್!

‘ಕೆಜಿಎಫ್ 2’ ಸಿನಿಮಾ ಮೂಲಕ ಮತ್ತೊಮ್ಮೆ ಕನ್ನಡ ಸಿನಿ ಪ್ರೇಕ್ಷಕರ ಹೃದಯ ಗೆದ್ದಿರುವ ನಟಿ ರವೀನಾ ಟಂಡನ್ ತಮ್ಮ ಟ್ವೀಟ್‌ಗಳಿಂದ ಗಮನ ಸೆಳೆಯುತ್ತಿದ್ದಾರೆ.

ತಾವು ರಾಜಕೀಯಕ್ಕೆ ಬರಲು ಉತ್ಸುಕರಾಗಿರುವುದಾಗಿ ಹಿಂದೊಮ್ಮೆ ಹೇಳಿದ್ದ ರವೀನಾ ಟಂಡನ್, ರಾಜಕೀಯ ವಿಷಯಗಳ ಬಗ್ಗೆ ಯಾವುದೇ ಹಿಂಜರಿಕೆ ಇಲ್ಲದೆ ಟ್ವೀಟ್ ಮಾಡುತ್ತಾರೆ.

ಈಗಲೂ ಸಹ ವಿವಾದ ಎಬ್ಬಿಸಿರುವ ವಿಷಯವೊಂದಕ್ಕೆ ಸಂಬಂಧಿಸಿದಂತೆ ರವೀನಾ ಟಂಡನ್ ಟ್ವೀಟ್ ಮಾಡಿದ್ದು, ರವೀನಾ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಕೆಲವು ದಿನಗಳ ಹಿಂದೆ ಸಂಸದ, ಎಐಎಂಐಎಂನ ಅಸಾದುದ್ದೀನ್ ಓವೈಸಿ ಸಹೋದರ ಅಕ್ಬರುದ್ದೀನ್ ಓವೈಸಿ ಮಹಾರಾಷ್ಟ್ರಕ್ಕೆ ಭೇಟಿ ನೀಡಿದಾಗ ಅಲ್ಲಿನ ಔರಂಗಾಬಾದ್‌ನ ಔರಂಗಾಜೇಬನ ಸಮಾಧಿಗೆ ಭೇಟಿ ನೀಡಿ ನಮಿಸಿದ್ದರು. ಇದು ವಿವಾದ ಎಬ್ಬಿಸಿತ್ತು. ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ಣವೀಸ್, ‘ಔರಂಗಾಜೇಬನ ಸಮಾಧಿಗೆ ನಾಯಿ ಮೂತ್ರವನ್ನು ಸಹ ಮಾಡುವುದಿಲ್ಲ” ಎಂದಿದ್ದರು. ಇದು ವಿವಾದದ ಬೆಂಕಿಗೆ ಇನ್ನಷ್ಟು ತುಪ್ಪ ಸಿಡಿಸಿತ್ತು.

ಅಕ್ಬರುದ್ದೀನ್ ಓವೈಸಿ, ಔರಂಗಾಜೇಬನ ಸಮಾಧಿಗೆ ನಮಿಸಿದ್ದನ್ನು ನಟಿ ರವೀನಾ ಟಂಡನ್ ಬೆಂಬಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರವೀನಾ ಟಂಡನ್, ”ನಮ್ಮದು ಸಹಿಷ್ಣು ಜನಾಂಗ. ಈ ಹಿಂದೆಯೂ ನಾವು ಸಹಿಷ್ಣುಗಳಾಗಿದ್ದೆವು, ಮುಂದೆಯೂ ಸಹಿಷ್ಣುಗಳಾಗಿಯೇ ಇರುತ್ತೇವೆ. ನಮ್ಮದು ಸ್ವತಂತ್ರ್ಯ ದೇಶ, ಯಾರನ್ನು ಬೇಕಾದರೂ ಪೂಜಿಸಬಹುದು. ಇಲ್ಲಿ ಎಲ್ಲರಿಗೂ ಸಮಾನ ಹಕ್ಕು ಇರಬೇಕು” ಎಂದಿದ್ದಾರೆ ರವೀನಾ ಟಂಡನ್.

ಔರಂಗಾಜೇಬನು ಹಿಂದುಗಳ ಹತ್ಯೆ ಮಾಡಿದ, ಭಾರತವನ್ನು ಲೂಟಿ ಮಾಡಿದ, ಕಾಶಿಯನ್ನು ಹಾಳುಗೆಡವಿದ ಎನ್ನಲಾಗುತ್ತದೆ. ಇದೇ ಕಾರಣಕ್ಕೆ, ಅಕ್ಬರುದ್ದೀನ್ ಓವೈಸಿ, ಔರಂಗಾಜೇಬನ ಸಮಾಧಿಗೆ ನಮಿಸಿದ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ನೆಟ್ಟಿಗರು, ವಿಶೇಷವಾಗಿ ಬಿಜೆಪಿ ಬೆಂಬಲಿಗರು, ಅಕ್ಬರುದ್ದೀನ್ ಓವೈಸಿಯ ನಡೆಯನ್ನು ಖಂಡಿಸಿದ್ದಾರೆ. ಆದರೆ ರವೀನಾ ಟಂಡನ್ ಪರೋಕ್ಷವಾಗಿ ಓವೈಸಿಗೆ ಬೆಂಬಲ ಸೂಚಿಸಿದ್ದಾರೆ.

ಹರ್ಷ ಕೊಲೆ ಬಗ್ಗೆಯೂ ಟ್ವೀಟ್ ಮಾಡಿದ್ದರು
ರಾಜಕೀಯದ ಬಗ್ಗೆ ಆಸಕ್ತಿ ಹೊಂದಿರುವ ರವೀನಾ ಟಂಡನ್, ಟ್ವಿಟ್ಟರ್ ಮೂಲಕ ದೇಶದ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರುತ್ತಾರೆ. ಶಿವಮೊಗ್ಗದ ಹಿಂದು ಕಾರ್ಯಕರ್ತ ಹರ್ಷ ಕೊಲೆಯಾದಾಗ ಆ ಬಗ್ಗೆಯೂ ನಟಿ ರವೀನಾ ಟಂಡನ್ ಟ್ವೀಟ್ ಮಾಡಿದ್ದರು. ನಟ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಕೋವಿಡ್ ಸಮಯದಲ್ಲಿ ವಿವಾಹವಾದಾಗ, ಆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ರವೀನಾ ಟ್ವೀಟ್ ಮಾಡಿದ್ದರು. ಆ ನಂತರ ಅದನ್ನು ಅಳಿಸಿ ಹಾಕಿದರು.

ಹಲವು ರಾಜಕೀಯ ಪಕ್ಷಗಳು ಆಫರ್ ನೀಡಿದ್ದವು: ರವೀನಾ

ತಮಗೆ ರಾಜಕೀಯದಲ್ಲಿ ಆಸಕ್ತಿ ಇರುವುದಾಗಿಯೂ, ಮುಂದೆ ಸಕ್ರಿಯ ರಾಜಕೀಯ ಪ್ರವೇಶ ಮಾಡುವುದಾಗಿ ಅಭಿಮಾನಿಗಳೊಟ್ಟಿಗಿನ ಸಂವಾದದಲ್ಲಿ ಹೇಳಿದ್ದರು. ‘ನೀವು ರಾಜಕೀಯ ಪ್ರವೇಶಿಸುತ್ತೀರ?’ ಎಂಬ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ್ದ ರವೀನಾ ಟಂಡನ್, ”ಯಾವುದಕ್ಕೂ, ಯಾವತ್ತು ಇಲ್ಲ ಎಂದು ಹೇಳಬೇಡ” (ನೆವರ್ ಸೇ ನೆವರ್). ಈ ಮೊದಲೇ ನಾನು ರಾಜಕೀಯ ಸೇರುವ ಬಗ್ಗೆ ಗಂಭೀರವಾಗಿ ಆಲೋಚಿಸಿದ್ದೆ. ಆಗ ನನಗೆ ಹಲವು ರಾಜಕೀಯ ಪಕ್ಷಗಳು ಆಫರ್‌ ಅನ್ನು ಸಹ ನೀಡಿದ್ದವು. ‘ಪಶ್ಚಿಮ ಬಂಗಾಳ, ಪಂಜಾಬ್, ಮುಂಬೈ ಗಳಲ್ಲಿ ಚುನಾವಣೆ ಟಿಕೆಟ್ ಸಹ ನೀಡಲು ಮುಂದೆ ಬಂದಿದ್ದವು. ಆದರೆ ಆ ಸಮಯದಲ್ಲಿ ನಾನು ಪೂರ್ಣವಾಗಿ ರಾಜಕೀಯಕ್ಕೆ ತಯಾರಾಗಿರಲಿಲ್ಲ. ಹಾಗಾಗಿ ಅವಕಾಶ ನಿರಾಕರಿಸಿದೆ” ಎಂದಿದ್ದರು.

ಈಗಿರುವ ಯಾವ ಪಕ್ಷವೂ ನನಗೆ ಇಷ್ಟವಿಲ್ಲ: ರವೀನಾ

ಮುಂದುವರೆದು, ”ಈಗಿರುವ ಯಾವ ಪಕ್ಷಗಳೊಂದಿಗೂ ನನ್ನ ಪೂರ್ಣ ಸಹಮತ ಇಲ್ಲ. ಕೆಲವು ಪಕ್ಷಗಳ ಕೆಲವು ಸಿದ್ಧಾಂತಗಳು ಇಷ್ಟವಾಗುತ್ತವೆ. ಕೆಲವು ಇಷ್ಟವಾಗುವುದಿಲ್ಲ. ನಾನು ಯಾವುದೋ ಒಂದು ಪಕ್ಷ ಸೇರಿ ಬಳಿಕ ಅವರ ಸಿದ್ಧಾಂತ ನನಗೆ ಹಿಡಿಸಲಿಲ್ಲವಾದರೆ ನಾನು ಆ ಪಕ್ಷದೊಡನೆ ಮುಂದುವರೆಯುವುದು ಕಷ್ಟವಾಗುತ್ತದೆ. ಅಥವಾ ಪಕ್ಷವೇ ನನ್ನನ್ನು ಮೂಲೆಗುಂಪು ಮಾಡಿಬಿಡಬಹುದು. ಹಾಗಾಗಿ ಪಕ್ಷ ರಾಜಕೀಯ, ಅದರಿಂದ ಎದುರಾಗುವ ಸಮಸ್ಯೆಗಳು, ಹಿನ್ನಡೆಗಳನ್ನೆಲ್ಲ ಸಹಿಸಿಕೊಳ್ಳುವ ಶಕ್ತಿ ನನಗೆ ಬಂದಿದೆ ಎಂದು ನನಗೆ ಅನಿಸಿದ ದಿನ ನಾನು ರಾಜಕೀಯ ಸೇರುತ್ತೇನೆ” ಎಂದಿದ್ದರು ರವೀನಾ.

ಮಾತು ತಪ್ಪಿದವಳು ಎನಿಸಿಕೊಳ್ಳಲು ಇಷ್ಟವಿಲ್ಲ: ರವೀನಾ

”ಈಗ ನಾನು ರಾಜಕೀಯ ಸೇರುವುದಿಲ್ಲ ಎಂದು ಹೇಳಿ ಬಳಿಕ ಒಂದು ದಿನ ರಾಜಕೀಯ ಸೇರಿ ಮಾತು ತಪ್ಪಿದವಳು ಎನಿಸಿಕೊಳ್ಳುವುದು ನನಗೆ ಇಷ್ಟವಿಲ್ಲ. ಹಾಗಾಗಿ ನನಗೆ ರಾಜಕೀಯ ಸೇರುವ ಆಸೆಯಿದೇ ಎಂದು ನಾನು ಹೇಳುತ್ತೇನೆ” ಎಂದಿದ್ದರು. ನಟಿ ರವೀನಾ ಕೋವಿಡ್ ಸಮಯದಲ್ಲಿ ಕೆಲವು ಸಾಮಾಜಿಕ ಕಾರ್ಯಗಳನ್ನು ತಮ್ಮ ಫೌಂಡೇಶನ್ ವತಿಯಿಂದ ಮಾಡಿದ್ದರು. ಮುಂಬೈನಲ್ಲಿ ಜನಿಸಿರುವ ರವೀನಾ, ನಟಿಯಾಗಿ ಹಿಂದಿ, ಕನ್ನಡ, ತೆಲುಗು, ತಮಿಳು, ಬೆಂಗಾಳಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪತ್ನಿ ದೀಪಿಕಾ ಪಡುಕೋಣೆಯನ್ನು 'ಚಪ್ಲಿ' ಎಂದು ಕರೆಯುತ್ತಾರಂತೆ ಪತಿ ರಣ್ವೀರ್:

Tue May 17 , 2022
ಪ್ರಿಯವಾದವರನ್ನು ಮುದ್ದು ಹೆಸರಿನಿಂದ ಕರೆಯುವುದು ರೂಢಿ. ಪತ್ನಿಯನ್ನು, ಪ್ರೇಯಸಿಯನ್ನು, ಚಿನ್ನು ಎಂದೊ, ಮುದ್ದು ಎಂದೋ, ಬಂಗಾರ ಎಂದೋ ಕರೆಯುವುದು ಸಾಮಾನ್ಯ. ಬೇರೆ ಬೇರೆ ಭಾಷೆಗಳವರು ಅವರದ್ದೇ ಆದ ಮುದ್ದು ಹೆಸರುಗಳ ಮೂಲಕ ತಮ್ಮ ಪ್ರೀತಿ ಪಾತ್ರರನ್ನು ಕರೆಯುತ್ತಾರೆ. ಹಿಂದಿ ಪ್ರದೇಶಗಳಲ್ಲಿ ‘ಬಾಬು’, ‘ಶೋನ’ ‘ಬೇಬಿ’ ಹೆಸರುಗಳು ಹೆಚ್ಚು ಚಾಲ್ತಿಯಲ್ಲಿವೆ. ಬಾಲಿವುಡ್‌ ನ ಹಲವು ಕ್ಯೂಟ್ ಜೋಡಿಗಳು ತಮ್ಮ ಪ್ರೇಯಸಿಯನ್ನು, ಪತಿ, ಪತ್ನಿಯನ್ನು ಮುದ್ದಾಗಿ ಅಡ್ಡ ಹೆಸರಿನಿಂದ ಕರೆಯುವ ರೂಢಿ ಇರಿಸಿಕೊಂಡಿದ್ದಾರೆ. […]

Advertisement

Wordpress Social Share Plugin powered by Ultimatelysocial