ಎಸ್. ನಂಜುಂಡಸ್ವಾಮಿ

 
ಎಸ್.ನಂಜುಂಡ ಸ್ವಾಮಿ ವರ್ಣಚಿತ್ರ ಕಲೆ ಮತ್ತು ಶಿಲ್ಪಕಲೆಗಳೆರಡರಲ್ಲೂ ಅಗ್ರಗಣ್ಯರೆನಿಸಿದ್ದವರು.
ಎಸ್. ಎನ್. ಸ್ವಾಮಿ ಅವರು ಈಗಿನ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಯರಗಂಬಳ್ಳಿ ಎಂಬಲ್ಲಿ 1906ರ ಮಾರ್ಚ್ 26 ರಂದು ಜನಿಸಿದರು. ತಂದೆ ಶಿಲ್ಪ ಸಿದ್ಧಾಂತಿ ವೀರತ್ತಸ್ವಾಮಿಗಳು. ಹೀಗಾಗಿ ಸ್ವಾಮಿ ಅವರಿಗೆ ಶಿಲ್ಪಕಲೆ ಮತ್ತು ಚಿತ್ರಕಲೆ ವಂಶಪಾರಂಪರ್ಯವಾಗಿ ಬಂದ ವಿದ್ಯೆಯಾಗಿತ್ತು.
ಮುಂದೆ ಸ್ವಾಮಿ ಅವರು ಮೈಸೂರಿನ ಶ್ರೀ ಜಯಚಾಮರಾಜೇಂದ್ರ ವೃತ್ತಿ ಶಿಕ್ಷಣ ಶಾಲೆಯಲ್ಲಿ ಚಿತ್ರಾಭ್ಯಾಸ ಮಾಡಿ, ಮುಂಬಯಿ ಜೆ.ಜೆ. ಕಲಾಶಾಲೆಯಿಂದ ಹೆಚ್ಚಿನ ವಿದ್ಯಾಭ್ಯಾಸ ಮಾಡಿದರು. ಜಯಚಾಮರಾಜೇಂದ್ರ ಕಲಾಶಾಲೆಯಲ್ಲಿ ಅಧ್ಯಾಪಕ ವೃತ್ತಿಯನ್ನೂ ನಡೆಸಿದರು.
ರೇಖಾಚಿತ್ರ, ತೈಲಚಿತ್ರ, ವರ್ಣಚಿತ್ರಗಳಲ್ಲಿ ನಂಜುಡ ಸ್ವಾಮಿಯವರದು ಶ್ರೇಷ್ಠ ಸಾಧನೆ. ಪ್ರಕೃತಿ ಚಿತ್ರಗಳು, ಭೂ ದೃಶ್ಯಗಳಲ್ಲಿ ನೆರಳು-ಬೆಳಕಿನಾಟಗಳ ಸೌಂದರ್ಯವನ್ನು ಯಥಾವತ್ತಾಗಿ ಚಿತ್ರಿಸುವ ಕಲೆ ಸ್ವಾಮಿಯವರಿಗೆ ಕರಗತವಾಗಿತ್ತು. ಅವರ ಚಿತ್ರಗಳಲ್ಲಿ ಅವರದ್ದೇ ಎನ್ನುವಂತಹ ಪ್ರತ್ಯೇಕತೆ ವೈಶಿಷ್ಟ್ಯತೆಗಳು ಎದ್ದು ಕಾಣುವಂತಿತ್ತು.
ಮೈಸೂರು ವಾಣಿ ವಿಲಾಸ ಮೊಹಲ್ಲದಲ್ಲಿರುವ ಮಹಾರಾಜ ಹೈಸ್ಕೂಲಿನ ಭಿತ್ತಿಯೊಂದರ ಮೇಲೆ ರಚಿತವಾಗಿರುವ ಶಾರದಾದೇವಿ ಚಿತ್ರ, ಕಬೀರ್ ತನ್ನ ಹೆಂಡತಿಯನ್ನು ಹೆಗಲ ಮೇಲೆ ಹೊತ್ತೊಯ್ಯುವ ದೃಶ್ಯ, ವೃತ್ತಿ ಶಿಕ್ಷಣ ಶಾಲೆಯಲ್ಲಿ ರಾಜರ ಒಡ್ಡೋಲಗದ ದೃಶ್ಯಗಳು ಇವೇ ಮುಂತಾದವು ಜನರ ಕಣ್ಣಿಗೆ ನಿರಂತರವಾಗಿ ಕಾಣುವಂತಹ ಸ್ವಾಮಿಯವರ ಕಲಾವಂತಿಕೆಯ ನಿದರ್ಶನಗಳು. ಹಲವಾರು ಭಾವಚಿತ್ರಗಳ ರಚನೆಯಲ್ಲೂ ಸ್ವಾಮಿ ಅವರದ್ದು ಅದ್ವಿತೀಯ ಸಾಧನೆ ಎನಿಸಿದೆ. ಮೈಸೂರಿನ ವಸ್ತುಪ್ರದರ್ಶನ ಶಾಲೆಯ ಮೇಲೆ ರಚಿಸಲ್ಪಟ್ಟ ಜಯಚಾಮರಾಜ ಒಡೆಯರ ಚಿತ್ರ ಅಂದಿನ ದಿನಗಳಲ್ಲಿ ಪ್ರಸಿದ್ಧಿ ಪಡೆದಿತ್ತು. ರಾಮಾಯಣ, ಮಹಾಭಾರತ, ಭಾಗವತ ಮುಂತಾದ ಕಥೆಗಳನ್ನು ಓದುವುದು, ಕೇಳುವುದು, ಕತೆ ಕೇಳಿದ ನಂತರ ಚಿತ್ರ ರಚನೆ ಮಾಡುವುದು ಅವರ ಹವ್ಯಾಸವೇನೋ ಎನಿಸುವಂತಿತ್ತು. ಅವರ ಇನ್ನಿತರ ಪ್ರಖ್ಯಾತ ಚಿತ್ರಗಳೆಂದರೆ ಅಶೋಕ ವನದಲ್ಲಿ ಸೀತಾದೇವಿ ರಾವಣನ ಕೈಸೆರೆಯಾಗಿದ್ದು, ಮಾಯಾಜಿಂಕೆಗೆ ಮೋಹಗೊಂಡ ಸೀತೆ ರಾಮನಲ್ಲಿ ತನ್ನ ಅಭೀಷ್ಠೆಯನ್ನು ವ್ಯಕ್ತಪಡಿಸುತ್ತಿರುವುದು ಮುಂತಾದವು.
ಸ್ವಾಮಿಯವರದು ಆಡಂಬರವಿಲ್ಲದ ಸರಳ ಜೀವನ. ನಿವೃತ್ತಿಯ ನಂತರ ಒಂಟಿಕೊಪ್ಪಲಿನಲ್ಲಿದ್ದ ಮನೆಮಾರಿ ಹುಟ್ಟೂರಾದ ಯರಗಂಬಳ್ಳಿಗೆ ಹೋಗಿ ಪುನಃ ವಾಪಸ್ಸು ಮೈಸೂರಿಗೆ ಬಂದರು. ಚಿತ್ರಕಲೆಯಲ್ಲಿ ಏಕತಾನತೆ ಮೂಡಿತು ಎಂದೆನಿಸಿದಾಗ ಗಂಧದ ಮತ್ತು ದಂತದಲ್ಲಿ ಮೂರ್ತಿಗಳ ಕೆತ್ತನೆ ಮಾಡಿದರು. ಬೇಲೂರಿನ ಶಿಲಾಬಾಲಿಕೆ ವಿಗ್ರಹಗಳು ಅವರಿಗೆ ಸ್ಫೂರ್ತಿ ನೀಡಿದ್ದವು.
ಕರ್ನಾಟಕ ಲಲಿತಕಲಾ ಅಕಾಡಮಿ ಪ್ರಶಸ್ತಿ ಪಡೆದಿದ್ದ ಎಸ್ ಎನ್ ಸ್ವಾಮಿಯವರು 1969ರ ಡಿಸೆಂಬರ್ 27ರಂದು ಚಾಮುಂಡೇಶ್ವರಿ ಶಿಲಾ ವಿಗ್ರಹವನ್ನು ಕಡೆಯುತ್ತಿದ್ದಾಗ ಆ ಜಗನ್ಮಾತೆಯಲ್ಲೇ ಲೀನವಾದರೋ ಎಂಬಂತೆ ಈ ಲೋಕವನ್ನಗಲಿದರು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿ. ಎಚ್. ಭಾಗ್ಯ

Mon Mar 28 , 2022
ನಾನು ಭಾಗ್ಯ ಮೇಡಮ್ ಅವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳಲ್ಲಿ ಮತ್ತು ಕನ್ನಡ ಭವನದಲ್ಲಿ ದೂರದಿಂದ ಕಂಡವನು. ಅವರು ಕರ್ನಾಟಕ ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಆಗಿದ್ದ ಸಮಯದಲ್ಲಿ ಹಲವು ವರ್ಷಗಳಿಂದ ಘೋಷಣೆ ಆಗದಿದ್ದ ಪ್ರಶಸ್ತಿಗಳು ಪುನಃ ಇತ್ಯರ್ಥಗೊಳ್ಳಲು ಬೇಕಾದ ಅಗತ್ಯ ವ್ಯವಸ್ಥೆ ತಂದವರು. ಅವರು ವ್ಯವಸ್ಥೆಗೊಳಿಸುತ್ತಿದ್ದ ಕಾರ್ಯಕ್ರಮಗಳಲ್ಲಿ ಒಂದು ಅಚ್ಚುಕಟ್ಟು ಕಂಗೊಳಿಸುತ್ತಿತ್ತು. ಭಾಗ್ಯ ಅವರು ಫೇಸ್ಬುಕ್ ಮೂಲಕ ಪರಿಚಯವಾದ ನಂತರ ಅವರು ಹಿಂದಿ, ಉರ್ದು, ಗುಜರಾಥಿ, ಒಡಿಯಾ, ಬಾಂಗ್ಲಾ, ಇಂಗ್ಲಿಷ್ […]

Advertisement

Wordpress Social Share Plugin powered by Ultimatelysocial