ಎಸ್. ಆರ್. ವಿಜಯಶಂಕರ್ ಕನ್ನಡ ಸಾಹಿತ್ಯ ಕ್ಷೇತ್ರದ ಪ್ರಖ್ಯಾತ ವಿಮರ್ಶಕ.

ಇಂದು ಕನ್ನಡ ಸಾಹಿತ್ಯ ಕ್ಷೇತ್ರದ ಪ್ರಖ್ಯಾತ ವಿಮರ್ಶಕ, ಪ್ರಖ್ಯಾತ ಶಿಕ್ಷಕ, ಪತ್ರಕರ್ತ, ಆಧುನಿಕ ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರಧಾನ ಸಂಪರ್ಕಾಧಿಕಾರಿ ಹಾಗೂ ನನ್ನ ಆತ್ಮೀಯ ಗೆಳೆಯರಾದ ಎಸ್. ಆರ್. ವಿಜಯಶಂಕರ ಅವರ ಜನ್ಮದಿನ.ವಿಜಯಶಂಕರ್ 1957ರ ಡಿಸೆಂಬರ್ 21ರಂದು ಜನಿಸಿದರು.ಎಚ್ ಎಮ್ ಟಿ ಸಂಸ್ಥೆಯಲ್ಲಿ ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ವಿಜಯಶಂಕರ್ ನಮ್ಮ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಆಗಿದ್ದವರು. ಅಲ್ಲಿನ ‘ಕನ್ನಡ ಸಂಪದ’ದಲ್ಲಿ ನಾವುಗಳು ಹುರುಪಿನಿಂದ ಓಡಾಡುವ ಯುವ ಚಿಲುಮೆಗಳಾಗಿದ್ದೆವೇ ವಿನಃ, ನನ್ನಂತಹವರಿಗೆ ಸಾಹಿತ್ಯಶಕ್ತಿಯ ಬುನಾದಿ ಇರಲಿಲ್ಲ. ಅದನ್ನು ತಮ್ಮ ಮಾರ್ಗದರ್ಶನದ ಮೂಲಕ ನಮ್ಮ ‘ಕನ್ನಡ ಸಂಪದ’ದಲ್ಲಿ ಸಮರ್ಪಕವಾಗಿ ತುಂಬಿದವರು ವಿಜಯಶಂಕರ್. ನಮ್ಮ ಕನ್ನಡ ಸಂಪದದಲ್ಲಿ ಅಂದಿನ ದಿನಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳನ್ನು ಕುರಿತು ಅವರು ಅಂದು ಹೇಳಿದ ಒಂದು ಮಾತು, ನನ್ನ ಮತ್ತು ನಾನು ಕಾರ್ಯದರ್ಶಿಯಾಗಿದ್ದ ‘ಕನ್ನಡ ಸಂಪದ’ದ ದೃಷ್ಠಿಕೋನದಲ್ಲಿ ಒಂದು ವಿಶಿಷ್ಟ ಬದಲಾವಣೆಯನ್ನು ಕಾಣುವಂತೆ ಮಾಡಿತು. “ನಾವು ಹಬ್ಬ ಸಮಾರಂಭಗಳ celebrationಗಳಿಗೆ ಕಾದುಕೊಂಡು ಕನ್ನಡದ ಕೆಲಸವನ್ನು ನಡೆಸಬೇಕಿಲ್ಲ. ಯಾವುದೇ celebrationಗಳಿಲ್ಲದೆ ಸಹಾ ನಾವು ಅತ್ಯುತ್ತಮ ಕೆಲಸಗಳನ್ನು ಮಾಡಬಹುದು” ಎಂದು ಹೇಳಿದ ಅವರ ಮಾತು ನನ್ನಲ್ಲಿ ಬದಲಾವಣೆ ತಂದಿತ್ತು. ಮುಂದಿನ ದಿನಗಳಲ್ಲಿ ನಾನು ಅಂತಹ ಕೆಲಸಗಳಲ್ಲಿ ಹೆಚ್ಚು ಪ್ರವೃತ್ತನಾದೆ.ಮುಂದೆ ವಿಜಯಶಂಕರರು ನಾವೆಲ್, ಸಿಸ್ಕೋ ಮುಂತಾದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ನಂತರದಲ್ಲಿ ಇಂಟೆಲ್ ಸಂಸ್ಥೆಯ ಅಂತರರಾಷ್ಟ್ರೀಯ ಮಟ್ಟದ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿದ್ದವರು. ಇತ್ತೀಚಿನ ವರ್ಷದಲ್ಲಿ ಐಚ್ಛಿಕವಾಗಿ ಆ ಸೇವೆಯನ್ನು ಸಲಹೆ ಸ್ವರೂಪಕ್ಕೆ ನಿಯಮಿತಗಳಿಸಿಕೊಂಡಿದ್ದಾರೆ. ತಮ್ಮ ಹುದ್ದೆಯ ನಿಮಿತ್ತವಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ವಿಶ್ವದೆಲ್ಲೆಡೆ ನಿರಂತರವಾಗಿ ಚಲಿಸುವ ಕೆಲಸ ಅವರದ್ದಾಗಿತ್ತು. ಆದರೆ ಅವರ ಕನ್ನಡದ ಪ್ರೀತಿ, ಸಾಹಿತ್ಯದ ಆಸಕ್ತಿ ಒಂದಿನಿತೂ ಕುಂದಲಿಲ್ಲ. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಮತ್ತು ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನೂ ಒಳಗೊಂಡಂತೆ ವಿವಿಧ ವೇದಿಕೆಗಳಲ್ಲಿ, ಅವರ ವೈವಿಧಯಮುಖಿ ಚಿಂತನೆಗಳು ಮತ್ತು ಸಾಹಿತ್ಯದ ವಿಮರ್ಶೆಗಳು ನಿರಂತರ ಬೆಳಕು ಕಾಣುತ್ತ ಬಂದಿವೆ. ‘ನೀನಾಸಂ’ ಸಾಹಿತ್ಯ ಶಿಬಿರಗಳು ಮತ್ತು ‘ನೀನಾಸಂ’ ಸಾಹಿತ್ಯ ಉತ್ಸವಗಳಲ್ಲಿ ಎಷ್ಟೋ ವರ್ಷಗಳಿಂದ ಅವರು ಪ್ರಮುಖ ಸಂಪನ್ಮೂಲ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪುಸ್ತಕಗಳಾದ ‘ಮನೋಗತ’, ‘ಒಳದನಿ’, ‘ಒಡನಾಟ’, ‘ಪ್ರತಿಮಾಲೋಕ’, ‘ನಿಧಾನಶೃತಿ’, ‘ನಿಜಗುಣ’, ‘ಅಪ್ರಮೇಯ’, ‘ಹೂಬೆರಳು’ , ‘ವಸುಧಾ ವಲಯ’, ‘ನವ್ಯ ಸಾಹಿತ್ಯ’ ಕೃತಿಗಳು ಸಾಹಿತ್ಯಾಸಕ್ತರಲ್ಲಿ ಅಪಾರ ಮೆಚ್ಚುಗೆ ಸ್ಪಂದನೆಗಳನ್ನು ಗಳಿಸಿವೆ. ಇದಲ್ಲದೆ ‘ಎಚ್ಎಸ್ವಿ ಕಾವ್ಯ ಸಾತತ್ಯ’, ವ್ಯಕ್ತಿ ಚಿತ್ರಣಗಳ ‘ಆಪ್ತನೋಟ’, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಬದುಕು- ಬರಹ, ಬೆಳುದಿಂಗಳ ನೋಡಾ ( ವಿಮರ್ಶಾ ಪ್ರಬಂಧಗಳು) , ಕೆ. ವಿ. ತಿರುಮಲೇಶ್, ಕೀರ್ತಿನಾಥ ಕುರ್ತಕೋಟಿ, ಅನವರತ ಅಂತಹ ಅವರ ಇನ್ನೂ ಹಲವಾರು ಕೃತಿಗಳೂ ಪ್ರಕಟಗೊಂಡಿವೆ. 2012 ವರ್ಷದಲ್ಲಿ‘ನಿಜಗುಣ’ ಸಾಹಿತ್ಯ ವಿಮರ್ಶಾ ಗ್ರಂಥಕ್ಕೆ ಮತ್ತು 2018ರಲ್ಲಿ ‘ವಸುಧಾ ವಲಯ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೌರವ ಸಂದಿದೆ.ವಿಜಯಶಂಕರ್ ಬಂಟ್ವಾಳ ತಾಲ್ಲೂಕಿನ ಸರವು ಎಂಬ ಹಳ್ಳಿಯ ಅಡಿಕೆ ವ್ಯವಸಾಯದ ಕುಟುಂಬಕ್ಕೆ ಸೇರಿದವರು. ಅಂದಿನ ದಿನಗಳಲ್ಲಿ ಒಂದು ಟಾರ್ ರಸ್ತೆ ಕಾಣಬೇಕೆಂದರೆ ಹಲವಾರು ಮೈಲಿ ದೂರ ನಡೆಯಬೇಕಿದ್ದ ಹಳ್ಳಿ. ತಂದೆ ಸರವು ರಾಮ ಭಟ್ಟರು ಪದವಿ ಪಡೆದರೂ ವ್ಯವಸಾಯಕ್ಕೆ ನಿಂತವರು. ತಾಯಿ ರತ್ನವೇಣಿ. ಮನೆಯಲ್ಲಿದ್ದ ಅಪಾರ ಪುಸ್ತಕಗಳ ಸಂಗ್ರಹವನ್ನು ಜಾಲಾಡಿದ್ದರಿಂದ ಕನ್ನಡ ಚೆನ್ನಾಗಿ ಜೊತೆಗೂಡಿತ್ತು. ಶಾಲೆಯಲ್ಲಿ ಸಂಸ್ಕೃತ ಕಲಿತರು. ಹಾಗಾಗಿ ಕಾಲೇಜಿನಲ್ಲಿ ಇಂಗ್ಲಿಷ್ ಓದಿದರು. ಸುಬ್ಬರಾಯ ಚೊಕ್ಕಾಡಿ ಅವರು ಅವರ ಚಿಕ್ಕಪ್ಪನವರು. ಅವರ ಮೂಲಕ ಗೋಪಾಲಕೃಷ್ಣ ಅಡಿಗರು, ಕೆ.ವಿ. ಸುಬ್ಬಣ್ಣ ಇಂತಹ ಸಮುದಾಯ ಅವರಿಗೆ ಹತ್ತಿರವಾಯ್ತು. ಮೈಸೂರಿನ ಎಂ.ಎ ವ್ಯಾಸಂಗದಲ್ಲಿ ಯು. ಆರ್. ಅನಂತಮೂರ್ತಿ, ಜಿ. ಎಚ್. ನಾಯಕ್, ಪೋಲಂಕಿ ರಾಮಮೂರ್ತಿ, ಎಸ್. ಅನಂತನಾರಾಯಣ ಇವರುಗಳೆಲ್ಲ ಅವರ ಅಧ್ಯಾಪಕರಾಗಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ‌ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಪ್ರಕರಣ.

Thu Dec 22 , 2022
ಈಶಾನ್ಯ ವಿಭಾಗ ಡಿಸಿಪಿ ಅನೂಪ್ ಶೆಟ್ಟಿ‌ ಹೇಳಿಕೆ ಕೆಲದಿನಗಳ ಹಿಂದೆ ಟ್ಟೀಟರ್ ನಲ್ಲಿ ಓರ್ವ ವ್ಯಕ್ತಿ ಏರ್ ಪೊರ್ಟ್ ಗೆ ಬೆದರಿಕೆ ಹಾಕಿದ್ದ ಇಂಜಿನಿಯರಿಂಗ್ ‌ವಿದ್ಯಾರ್ಥಿಯಾಗಿದ್ದ ವೈಭವ್ ಗಣೇಶ್ ತನಿಖೆ ವೇಳೆ ಆರೋಪಿ ಬೆಂಗಳೂರು ಟ್ರಾಫಿಕ್ ಜಾಮ್ ನಿಂದ ಬೇಸತ್ತು ಈ ರೀತಿ ಮಾಡಿದೆ ಅಂತ ಬಾಯಿಬಿಟ್ಟ ಪರಪ್ಪನ ಅಗ್ರಹಾರ ದ ಕೂಡ್ಲು ಗೇಟ್ ನಿಂದ ಏರ್ ಪೊರ್ಟ್ ಗೆ ಪ್ರಯಾಣ ಮಾಡಿದ. ಈ ವೇಳೆ ಟ್ರಾಫಿಕ್ ಜಾಮ್ ಜಾಸ್ತಿಯಾಗಿತ್ತು […]

Advertisement

Wordpress Social Share Plugin powered by Ultimatelysocial