ಸಾಹುಕಾರ್ ಜಾನಕಿ ನಟಿ

ಚಲನಚಿತ್ರರಂಗದಲ್ಲಿ ಬಹುಕಾಲದಿಂದ ನಿರಂತರವಾಗಿ ಸಕ್ರಿಯರಾಗಿರುವವರಲ್ಲಿ ಸಾಹುಕಾರ್ ಜಾನಕಿ ಪ್ರಮುಖರು. ತಮಿಳು ಮತ್ತು ತೆಲುಗು ಚಿತ್ರರಂಗಗಳು ಹೆಚ್ಚು ಅವಕಾಶ ಕೊಟ್ಟ ಸಾಹುಕಾರ್ ಜಾನಕಿ ಅಚ್ಚ ಕನ್ನಡತಿ.
ಸಾಹುಕಾರ್ ಜಾನಕಿ 1931ರ ಡಿಸೆಂಬರ್ 12ರಂದು ಜನಿಸಿದರು. ಮೂಲತಃ ಅವರ ಕುಟುಂಬದವರು ಉಡುಪಿಯವರು. ತಂದೆಯವರಿಗೆ ರಾಜ್ಯದಿಂದ ರಾಜ್ಯಕ್ಕೆ ವರ್ಗಾವಣೆಯಾಗುವ ಕೇಂದ್ರ ಸರಕಾರಿ ಕೆಲಸ. ಹೀಗಾಗಿ ಜಾನಕಿ ಅವರು ಆಂಧ್ರದ ರಾಜಮುಂಡ್ರಿಯಲ್ಲಿ ಜನಿಸಿದರು. ಅದರೆ ಮನೆಯಲ್ಲಿ ಅವರ ಮಾತು ಕನ್ನಡವೇ ಆಗಿತ್ತು.
ಅಪ್ಪ ಉನ್ನತ ಹುದ್ದೆಯಲ್ಲಿದ್ದರೂ ಮನೆಯಲ್ಲಿ ತುಂಬ ಸಂಪ್ರದಾಯದ ವಾತಾವರಣವಿತ್ತು. ಸಿನಿಮಾ ಎಂದರೆ ಸಿಡಿಸಿಡಿ ಎನ್ನುವ ವಾತಾವರಣ. ತಂದೆಗೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಅತ್ಯಲ್ಪ ಅವಧಿಯಲ್ಲಿಯೆ ಆಗುತ್ತಿದ್ದ ವರ್ಗಾವಣೆಯ ಪರಿಣಾಮ ಜಾನಕಿ ಅವರ ವಿದ್ಯಾಭ್ಯಾಸದ ಮೇಲೂ ಆಯಿತು. ಹೆಚ್ಚು ಓದಬೇಕೆಂಬ ಹಂಬಲವಿದ್ದರೂ ಹೈಸ್ಕೂಲು ದಾಟುವುದೂ ಸಾಧ್ಯವಾಗಲಿಲ್ಲ. ಆದರೆ ಸೂಕ್ಷ್ಮಗ್ರಾಹಿ ಜಾನಕಿ ಪಂಚಭಾಷೆ ಬಲ್ಲವರು. ಇಂಗ್ಲಿಷ್ ಸಂಭಾಷಣೆಯೂ ಅವರಿಗೆ ಸುಲಲಿತ.
ಸಾಂಪ್ರದಾಯಿಕವಾಗಿ ಚೆನ್ನಾಗಿ ಸಂಗೀತ ಕಲಿತಿದ್ದ ಜಾನಕಿ 11ನೇ ವಯಸ್ಸಿಗೆ ಆಕಾಶವಾಣಿ ಕಲಾವಿದೆಯಾದರು. ಅಂಗಳದಲ್ಲಿ ಕುಂಟೋಬಿಲ್ಲೆ ಆಡುತ್ತಿದ್ದ ಹದಿನಾರನೆ ವಯಸ್ಸಿಗೆ ಕುತ್ತಿಗೆಗೆ ಭಾರವಾದ ತಾಳಿ ಬಂತು. ಸಣ್ಣ ಸಂಸ್ಥೆಯೊಂದರಲ್ಲಿ ಇಂಜಿನಿಯರ್ ಆಗಿದ್ದ ಶ್ರೀನಿವಾಸ್ ರಾವ್ ಜೊತೆಗೆ ಮದುವೆಯಾಯ್ತು. “1947ರಲ್ಲಿ ದೇಶಕ್ಕೆ ಸ್ವಾತಂತ್ರ ಬಂತು. ಆ ವರ್ಷವೇ ಮದುವೆ ಎಂಬುದರ ಮೂಲಕ ನನ್ನ ಸ್ವಾತಂತ್ರ ಕಳೆದುಕೊಂಡೆ” ಎನ್ನುತ್ತಾರೆ ಜಾನಕಿ. ಮದುವೆಯಾದ ಕೆಲ ತಿಂಗಳಿನಲ್ಲಿ ಪತಿ ಕೆಲಸ ತೊರೆದ. ಕಷ್ಟಪಟ್ಟು ದುಡಿಯುವುದಕ್ಕೆ ಆತನಿಗೆ ಮನಸಿರಲಿಲ್ಲ. ಆಗ ಜಾನಕಿಯ ತಂದೆ ಅಸ್ಸಾಂನಲ್ಲಿದ್ದರು. “ನಿನ್ನ ಅಪ್ಪ ಏನಾದರೂ ಕೆಲಸ ಕೊಡಿಸಬಹುದು ಬಾ” ಎಂದು ಗಂಡ ಅಲ್ಲಿಗೆ ಕರೆದುಕೊಂಡು ಹೋದ. ಅಲ್ಲಿ ತಂದೆ ತಾಯಿಯರದು ದೊಡ್ಡ ಕುಟುಂಬ. ತವರಿಗೆ ಹೆಚ್ಚು ದಿನ ಹೊರೆಯಾಗಿ ಇರುವುದಕ್ಕೆ ಜಾನಕಿ ಅವರ ಮನ ಒಪ್ಪಲಿಲ್ಲ. ಪರಿಣಾಮ ಗಂಡನೊಟ್ಟಿಗೆ ಮದ್ರಾಸಿಗೆ ಬಂದರು. ಆಗಲೇ ಬಾಲ್ಯದಂಗಳದಲ್ಲಿ ನಲಿದಾಡುವ ಹದಿನೇಳರ ಬಾಲೆಗೆ ಕಂಕುಳಿನಲ್ಲೊಂದು ಹೆಣ್ಣು ಮಗುವಿತ್ತು.
ಪತಿ ಶ್ರೀನಿವಾಸರಾಯ ಕೆಲಸ ಹುಡುಕಲು ಆಸಕ್ತಿಯೆ ತೋರಲಿಲ್ಲ. ಬದುಕಿನ ಬಂಡಿ ಉರುಳುವುದು ಕಷ್ಟವಾಗತೊಡಗಿತು. ಈ ಮೊದಲು ತಂದೆ ಮದ್ರಾಸಿನಲ್ಲಿದ್ದಾಗ ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿತ್ತು. ಆದರೆ ಸಿನಿಮಾದಲ್ಲಿ ನಟಿಸುವ ಮಾತಿರಲಿ, ಸಿನಿಮಾ ನೋಡುವುದಕ್ಕೂ ಸಿಡಿಮಿಡಿಗುಟ್ಟುತ್ತಿದ್ದ ತಂದೆ, ಜಾನಕಿ ನಟಿಸುವುದಕ್ಕೆ ಒಪ್ಪಿರಲಿಲ್ಲ. ಈಗ ಮತ್ತೆ ಮದ್ರಾಸಿಗೆ ಬಂದ ನಂತರ ಕಂಕುಳಿನಲ್ಲಿದ್ದ ಮಗಳಿಗಾಗಿ, ಜಾನಕಿ ದುಡಿಯಲೇ ಬೇಕಿತ್ತು. ನಟನೆ ಅವಕಾಶ ಕೋರಿ ಎ.ವಿ.ಎಂ ಸ್ಟುಡಿಯೋಗೆ ಕಾಲಿರಿಸಿದಾಗ ಜಾನಕಿ ಅವರು ಮೂರು ತಿಂಗಳ ಹಸಿ ಬಾಣಂತಿಯಾಗಿದ್ದರು.
ಜಾನಕಿ ಅವರ ಮೊದಲ ಸಿನಿಮಾ ಸಾಹುಕಾರ್. ಆ ಚಿತ್ರದ ನಾಯಕ ನಟ ಎನ್.ಟಿ.ರಾಮರಾವ್. ಮೊದಲ ಸಿನಿಮಾ ಯಶಸ್ವಿಯಾಯಿತು. ಆಗ ಅವರಿಗೆ ದೊರೆತ ಮೊಟ್ಟ ಮೊದಲ ಸಂಭಾವನೆ 2700 ರುಪಾಯಿ ( ಎರಡು ಸಾವಿರದ ಎಳುನೂರು). ಈ ಸಿನಿಮಾದ ಹೆಸರೇ ಜೊತೆ ಸೇರಿ ಸಾಹುಕಾರ್ ಜಾನಕಿ ಎಂಬ ಹೆಸರು ಪ್ರಸಿದ್ಧಿಗೊಂಡಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

ಜಯಲಕ್ಷ್ಮೀ ಶ್ರೀನಿವಾಸನ್

Wed Dec 21 , 2022
ಜಯಲಕ್ಷ್ಮೀ ಶ್ರೀನಿವಾಸನ್ ತಮಿಳು ಸಾಹಿತ್ಯ ಹಾಗೂ ಕನ್ನಡ ಸಾಹಿತ್ಯದ ಮಧ್ಯೆ ಸೇತುವೆಯಾಗಿ ಎರಡೂ ಭಾಷಿಗರಿಗೆ ಅಪಾರ ಸಾಹಿತ್ಯ ಮತ್ತು ಸಾಹಿತ್ಯ ವಿನಿಮಯವನ್ನು ತಂದವರು. ಜಯಲಕ್ಷ್ಮಿಯವರು ಕರೂರು ಜಿಲ್ಲೆಯ ವಾರಂಗಲ್ಲಲ್ಲಿ 1911ರ ಡಿಸೆಂಬರ್ 12ರಂದು ಜನಿಸಿದರು. ತಂದೆ ರಾಜಮಂತ್ರ ಪ್ರವೀಣ ಎ.ವಿ. ರಾಮನಾಥನ್ ಮೈಸೂರು ಸಂಸ್ಥಾನದ ಮೆಂಬರ್ ಆಫ್ ಕೌನ್ಸಿಲ್ ಆಗಿದ್ದವರು. ತಾಯಿ ಸೀತಾಲಕ್ಷ್ಮೀ. ಇವರ ಮನೆಮಾತು ತಮಿಳಾದ್ದರಿಂದ ಮನೆಯಲ್ಲಿ ತರಿಸುತ್ತಿದ್ದ ತಮಿಳು ಪತ್ರಿಕೆಗಳಿಂದ ತಮಿಳು ಹಾಗೂ ಶಾಲೆಯಲ್ಲಿ ಕನ್ನಡ, ಇಂಗ್ಲಿಷ್ […]

Advertisement

Wordpress Social Share Plugin powered by Ultimatelysocial