ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್

ಸಂಚಾರಿ ವಿಜಯ್ ಹುಟ್ಟುಹಬ್ಬ ಇಂದು (ಜುಲೈ 17). ಕ್ರೂರ ವಿಧಿ ಅವರನ್ನು ಕರೆದುಕೊಳ್ಳದೇ ಇದ್ದಿದ್ದರೆ ಇಂದು ಯಾವುದಾದರೂ ಹಾಡಿಯ ಮಕ್ಕಳೊಟ್ಟಿಗೊ, ನಿರ್ಲಕ್ಷಿತ ಸಮುದಾಯದ ಜನರೊಟ್ಟಿಗೊ ತಮ್ಮ 39ನೇ ವರ್ಷದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿರುತ್ತಿದ್ದರು ಸಂಚಾರಿ ವಿಜಯ್.

ಜುಲೈ 17, 1983 ರಂದು ಚಿಕ್ಕಮಗಳೂರಿನ ಪಂಚನಹಳ್ಳಿಯಲ್ಲಿ ಜನಿಸಿದ ಸಂಚಾರಿ ವಿಜಯ್, ಬಾಲ್ಯದಲ್ಲಿಯೇ ಬಹಳ ಕಷ್ಟಪಟ್ಟು ಮೇಲೆ ಬಂದ ವ್ಯಕ್ತಿ. ಜೀವನ ಸಾಗಿಸಲು ಹೋಟೆಲ್‌ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡಿದ್ದ ವಿಜಯ್, ತಮ್ಮ ಅಪ್ರತಿಮ ಶ್ರದ್ಧೆ, ಶ್ರಮದಿಂದ ರಾಷ್ಟ್ರಪ್ರಶಸ್ತಿ ಪಡೆದ ನಟನಾಗಿ ಬೆಳೆದಿದ್ದು, ಇಂದಿನ ಹಲವು ನಟರಿಗೆ ಮಾದರಿಯಾಗಬಹುದಾದ, ಮಾದರಿಯಾಗಲೇ ಬೇಕಾಗಿರುವ ಸಂಗತಿ.

ಸಂಚಾರಿ ನಾಟಕ ತಂಡದಲ್ಲಿ ಹಲವು ನಾಟಗಳಲ್ಲಿ ನಟಿಸಿದ ಸಂಚಾರಿ ವಿಜಯ್, 2011 ರಲ್ಲಿ ಬಿಡುಗಡೆ ಆದ ‘ರಂಗಪ್ಪ ಹೋಗ್ಬಿಟ್ನಾ’ ಸಿನಿಮಾದಿಂದ ಚಿತ್ರರಂಗದಲ್ಲಿ ಸಕ್ರಿಯರಾದರು. ಆದರೆ ಪ್ರತಿಭಾವಂತ ನಟನ ಪ್ರತಿಭೆ ಗುರುತಿಸಲು, ಅದನ್ನು ಸೂಕ್ತವಾಗಿ ಬಳಸಿಕೊಳ್ಳಲು ಕನ್ನಡ ಚಿತ್ರರಂಗ ಬಹಳ ತಡ ಮಾಡಿತು.

2015 ರಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಸಂಚಾರಿ ವಿಜಯ್
2015 ರಲ್ಲಿ ‘ನಾನು ಅವನಲ್ಲ, ಅವಳು’ ಸಿನಿಮಾಕ್ಕೆ ವಿಜಯ್‌ಗೆ ರಾಷ್ಟ್ರಪ್ರಶಸ್ತಿ ಧಕ್ಕಿದಾಗಲೇ ವಿಜಯ್‌ರ ಪ್ರತಿಭೆ ಚಿತ್ರರಂಗಕ್ಕೆ ಅರ್ಥವಾಗಿದ್ದು. ವಿಜಯ್‌ಗೆ ರಾಷ್ಟ್ರಪ್ರಶಸ್ತಿ ಬಂತಾದರೂ ಸಿನಿಮಾ ಅವಕಾಶಗಳೇನೂ ಬರಲಿಲ್ಲ. ರಾಷ್ಟ್ರಪ್ರಶಸ್ತಿ ಬಳಿಕವೂ ಅವರ ನಟನಾ ಪ್ರತಿಭೆಗೆ ಸವಾಲಾಗಬಲ್ಲ ಪಾತ್ರಗಳು ಸಿಗಲಿಲ್ಲವೆನ್ನುವುದು ಸತ್ಯ. ಆದರೆ ಭರವಸೆ ಕಳೆದುಕೊಳ್ಳಲಿಲ್ಲ ಸಂಚಾರಿ ವಿಜಯ್.

ಹೆಚ್ಚು ಸಿನಿಮಾ ಅವಕಾಶಗಳು ಲಭಿಸಲು ಆರಂಭವಾದವು

2017, 18 ರ ವೇಳೆಗೆ ಸಂಚಾರಿ ವಿಜಯ್‌ಗೆ ಹೆಚ್ಚು ಹೆಚ್ಚು ಸಿನಿಮಾ ಅವಕಾಶಗಳು ಲಭಿಸಲು ಆರಂಭವಾದವು. ಕಮರ್ಶಿಯಲ್, ಕಲಾತ್ಮಕ ಎಲ್ಲ ಮಾದರಿಯ ಸಿನಿಮಾಗಳು ಸಂಚಾರಿ ವಿಜಯ್‌ ಅನ್ನು ಅರಸಿ ಬಂದವು. ವಿಜಯ್ ಸಹ ಅದೇ ತನ್ಮಯದಿಂದ ಪಾತ್ರವನ್ನು ನಿಭಾಯಿಸಿದರು. ಆದರೆ ಅದೇ ವೇಳೆಗೆ ಕೋವಿಡ್ ಹಬ್ಬಿ ಸಿನಿಮಾ ರಂಗವೇ ಸ್ಥಬ್ಧವಾಯಿತು.

ಕೋವಿಡ್ ಸಮಯದಲ್ಲಿ ಸಮಾಜ ಸೇವೆ

ಆದರೆ ಸಂಚಾರಿ ವಿಜಯ್‌ರ ಕ್ರಿಯಾಶೀಲ ಮನಸ್ಸು, ಚಲನಶೀಲ ವ್ಯಕ್ತಿತ್ವ ಕೋವಿಡ್ ಸಮಯದಲ್ಲಿ ಅವರನ್ನು ಸಮಾಜ ಸೇವೆಯತ್ತ ಎಳೆದೊಯ್ಯಿತು. ಕವಿರಾಜ್, ನೀತು ಶೆಟ್ಟಿ ಇನ್ನೂ ಕೆಲವು ಸಮಾನ ಮನಸ್ಕರ ಗೆಳೆಯರ ಬಳಗ ಸೇರಿಕೊಂಡ ಹಲವಾರು ಮಂದಿಗೆ ಸಹಾಯ ಮಾಡಿದರು. ಅವಶ್ಯಕತೆ ಇದ್ದವರಿಗೆ ಆಕ್ಸಿಜನ್ ಕಾನ್ಸ್‌ಟ್ರೇಟರ್‌ ಮಷಿನ್‌ಗಳನ್ನು ಒದಗಿಸಿದರು. ಆಹಾರ ಒದಗಿಸಿದರು. ಅಲ್ಲೆಲ್ಲೊ ಕಾಡಿನಂಚಿನಲ್ಲಿರುವ ಬುಡಕಟ್ಟು ಸಮುದಾಯದ ಜನರ ಮನೆಗಳಿಗೆ ತಾರಸಿ ಹೊದಿಸಬೇಕು ಎಂದು ಕನಸು ಕಂಡರು, ಇನ್ಯಾರಿಗೋ ತಿನ್ನಲು ಊಟ, ಬದುಕಲು ಕೆಲಸ ಕೊಡಬೇಕು ಎಂದುಕೊಂಡರು ವಿಜಯ್.

ಬೈಕ್‌ನಲ್ಲಿ ಹೋಗಬೇಕಾದರೆ ಆದ ಅಪಘಾತ

ಆದರೆ ಸಂಚಾರಿ ವಿಜಯ್‌ರ ಕನಸುಗಳನ್ನೆಲ್ಲ ವಿಧಿ ಕಿತ್ತುಕೊಂಡು ಬಿಟ್ಟಿತು. ಜೊತೆಗೆ ಕನ್ನಡ ಸಿನಿ ಪ್ರೇಮಿಗಳಿಂದ ಅತ್ಯುತ್ತಮ ಕಲಾವಿದನೊಬ್ಬನನ್ನು ದೂರ ಮಾಡಿಬಿಟ್ಟಿತು. ಅಂದು 2021, ಜೂನ್ 12ರ ಶನಿವಾರದ ರಾತ್ರಿ, ತಮ್ಮ ಮನೆಯಿಂದ ಸ್ವಲ್ಪವೇ ಮುಂದಕ್ಕೆ ಗೆಳೆಯನ ಬೈಕ್‌ನಲ್ಲಿ ಹಿಂದೆ ಕೂತು ವಿಜಯ್ ಹೋಗುತ್ತಿದ್ದರು. ಆಗ ಆದ ಸಣ್ಣ ಅಪಘಾತದಲ್ಲಿ ವಿಜಯ್‌ ತಲೆಗೆ ಬಲವಾದ ಪೆಟ್ಟು ಬಿದ್ದಿತು. ವಿಜಯ್ ಮತ್ತೆ ಮೇಲೇಳಲೇ ಇಲ್ಲ. ಜುಲೈ 14 ರಂದು ವಿಜಯ್‌ ಅನ್ನು ಮೃತ ಎಂದು ಘೋಷಿಸಲಾಯ್ತು. ಅಲ್ಲಿಗೆ ಕನ್ನಡ ಚಿತ್ರರಂಗ ಒಬ್ಬ ಅತ್ಯಪೂರ್ವ ನಟನನ್ನು ಕಳೆದುಕೊಂಡಿತು. ಇಂದು ಸಂಚಾರಿ ವಿಜಯ್ ಹುಟ್ಟುಹಬ್ಬದಂದು, ಅವರ ಗೆಳೆಯರು, ಅಭಿಮಾನಿಗಳು, ಸಹನಟರು ಸಾಮಾಜಿಕ ಜಾಲತಾಣಗಳ ಮೂಲಕ ನೆನಪಿಸಿಕೊಳ್ಳುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಟ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ದಿ ಬೆಸ್ಟ್ !

Sun Jul 17 , 2022
ಕನ್ನಡ ಚಿತ್ರರಂಗದಲ್ಲಿ ನಟ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ದಿ ಬೆಸ್ಟ್ ಎನಿಸಿಕೊಂಡಿದೆ. ಈ ಜೋಡಿ ಸಿನಿಮಾ ತೆರೆಯ ಮೇಲೆ ಎಷ್ಟು ಅದ್ಭುತವಾಗಿ ಮಿಂಚಿತ್ತೋ, ಅಷ್ಟೇ ಅದ್ಭುತವಾಗಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಕೂಡ ಸದಾ ಕಂಗೊಳಿಸುತ್ತಿರುತ್ತದೆ. ನಟ ಯಶ್ ಸೂಪರ್ ಸ್ಟಾರ್ ಎನಿಸಿಕೊಂಡರು ಕೂಡ ಪಕ್ಕಾ ಫ್ಯಾಮಿಲಿ ಮ್ಯಾನ್. ನೀವು ಯಶ್ ಮತ್ತು ರಾಧಿಕಾ ಪಂಡಿತ್ ಅವರ ಕುಟುಂಬ ಜೀವನದ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ, ಹೆಚ್ಚಿನ ಮಾಹಿತಿ ಸಿಗುವುದು […]

Advertisement

Wordpress Social Share Plugin powered by Ultimatelysocial