ಸಾವಿತ್ರಿ-ಸತ್ಯವಂತ

ಸಾವಿತ್ರಿ-ಸತ್ಯವಂತ
ಮದ್ರದೇಶದಲ್ಲಿ ಅಶ್ವಪತಿಯೆಂಬ ಮಹಾರಾಜನಿದ್ದ. ಅವನಿಗೆ ರೂಪವತಿಯೂ ತೇಜಸ್ವಿನಿಯೂ ಬುದ್ಧಿಶಾಲಿಯೂ ಆದ ಸಾವಿತ್ರಿ ಎಂಬ ಮಗಳಿದ್ದಳು. ಅವಳಿಗೆ ಹದಿನೆಂಟು ವರ್ಷ ವಯಸ್ಸಾದಾಗ ಅಶ್ವಪತಿಯು “ಮಗಳೇ, ನಿನಗೆ ಅನುರೂಪನಾದ ಗಂಡನನ್ನು ಹುಡುಕಿಕೊಂಡು ಬಾ” ಎಂದು ಕಳುಹಿಸಿದ. ಸಾವಿತ್ರಿ ಹಲವು ರಾಜ್ಯಗಳಲ್ಲಿ ಸುತ್ತಾಡಿ ಕಡೆಗೆ ಕಣ್ಣು ಕಳೆದುಕೊಂಡು ರಾಜ್ಯಭ್ರಷ್ಟನಾಗಿ ಕಾಡಿನಲ್ಲಿದ್ದ ದ್ಯುಮತ್ಸೇನ ಎಂಬುವನ ಮಗನಾದ ಸತ್ಯವಂತನೆಂಬ ರಾಜಕುಮಾರನನ್ನು ಮೆಚ್ಚಿಕೊಂಡಳು.
ರಾಜಧಾನಿಗೆ ಹಿಂತಿರುಗಿ ತಂದೆಗೆ ಆ ವಿಷಯವನ್ನು ಸಾವಿತ್ರಿ ತಿಳಿಸುತ್ತಿದ್ದಾಗ ನಾರದ ಮಹರ್ಷಿ ಅಲ್ಲಿಗೆ ಬಂದ. ಅವನು ಸಾವಿತ್ರಿಯ ಮಾತು ಕೇಳಿ, “ಮಹಾರಾಜ, ಸಾವಿತ್ರಿಯು ತಿಳಿಯದೆ ಎಂಥ ಅಕಾರ್ಯ ಮಾಡಿಬಿಟ್ಟಳು ಸತ್ಯವಂತ ಸೂರ್ಯನ ಹಾಗೆ ತೇಜಸ್ವಿ, ಬುದ್ಧಿಯಲ್ಲಿ ಬೃಹಸ್ವತಿ, ಶೌರ್ಯದಲ್ಲಿ ಮಹೇಂದ್ರ, ರೂಪದಲ್ಲಿ ಮನ್ಮಥ ನಿಜ. ಆದರೆ ಇಂದಿನಿಂದ ಒಂದು ವರ್ಷಕ್ಕೆ ಸರಿಯಾಗಿ ಅವನು ಸಾಯ್ತಾನೆ” ಎಂದುಬಿಟ್ಟ.
ಅಶ್ವಪತಿಯು ದುಃಖದಿಂದ “ಹಾಗಾದರೆ ಸತ್ಯವಂತ ಬೇಡ. ಬೇರೆ ಯಾರನ್ನಾದರೂ ಹುಡುಕಿಕೊಂಡು ಬಾ ಸಾವಿತ್ರಿ” ಎಂದ.
ಆದರೆ ಸಾವಿತ್ರಿ ಒಪ್ಪಲಿಲ್ಲ. ತಾನು ಸತ್ಯವಂತನನ್ನೇ ವಿವಾಹವಾಗುವುದಾಗಿ ಹಟಹಿಡಿದಳು. ಬೇರೆ ದಾರಿಯಿಲ್ಲದೆ ಅಶ್ವಪತಿ ಮಗಳನ್ನು ಸತ್ಯವಂತನಿಗೆ ಧಾರೆಯೆರೆದು ಕೊಟ್ಟ.
ಸಾವಿತ್ರಿ ರಾಜಯೋಗ್ಯವಾದ ಆಭರಣ, ವಸ್ತ್ರುಗಳನ್ನೆಲ್ಲಾ ತ್ಯಜಿಸಿ ನಾರಿನ ಉಡುಗೆಯನ್ನು ತೊಟ್ಟು ಕಾಡಿನಲ್ಲಿ ಅತ್ತೆ ಮಾವಂದಿರ ಹಾಗೂ ಗಂಡನ ಸೇವೆ ಮಾಡುತ್ತಾ ದಿನ ಕಳೆದಳು.
ಹಾಗೆ ಒಂದು ವರ್ಷ ಮುಗಿಯುತ್ತ ಬಂದಂತೆ ಸಾವಿತ್ರಿ ಕಠಿಣ ವ್ರತ ಆಚರಿಸಲಾರಂಭಿಸಿದಳು. ಸತ್ಯವಂತ ಸಾಯುವ ದಿನ ಬಂದಾಗ ಅವಳು ಗೌರಿಯ ಪ್ರಸಾದವನ್ನು ತೆಗೆದುಕೊಂಡು ಗಂಡನ ಜೊತೆಗೆ ತಾನೂ ಕಾಡಿಗೆ ಬರುವೆನೆಂದು ಹಟ ಹಿಡಿದಳು.
“ನೀನು ಕಾಡಿನ ಮುಳ್ಳುಕಲ್ಲುಗಳಲ್ಲಿ ನಡೆಯಲಾರೆ ಸಾವಿತ್ರಿ” ಎಂದು ಸತ್ಯವಂತನೆಂದಾಗ ಅವಳು “ನೀವು ಜೊತೆಯಲ್ಲಿದ್ದರೆ ಮುಳ್ಳು ಕಲ್ಲುಗಳೂ ಹೂವುಗಳಾಗುತ್ತವೆ” ಎಂದಳು. ಅತ್ತೆ ಮಾವಂದಿರ ಅಪ್ಪಣೆ ಪಡೆದು ಸಾವಿತ್ರಿ ಸತ್ಯವಂತನ ಜೊತೆ ಕಾಡಿಗೆ ನಡೆದಳು.
ಸಂಜೆಯ ಹೊತ್ತಿಗೆ ಕಟ್ಟಿಗೆ ಕಡಿಯುತ್ತಿದ್ದ ಸತ್ಯವಂತ “ಯಾಕೋ ಬಳಲಿಕೆಯಾಗ್ತಿದೆ. ಸ್ವಲ್ಪ ಮಲಗ್ತೇನೆ ಸಾವಿತ್ರಿ” ಎಂದು ಅವಳ ತೊಡೆಯ ಮೇಲೆ ತಲೆಯಿರಿಸಿ ಮಲಗಿದ. ಗಾಬರಿಯಿಂದ ಕುಳಿತ ಸಾವಿತ್ರಿಗೆ ಭೀಕರಾಕೃತಿಯೊಂದು ಎದುರಿಗೆ ಕಾಣಿಸಿತು. “ಯಾರು ನೀನು?” ಎಂದು ಸಾವಿತ್ರಿ ಕೇಳಿದಳು. “ನಾನು ಯಮಧರ್ಮರಾಯ ಸಾವಿತ್ರಿ. ನಿನ್ನ ಗಂಡನ ಆಯುಸ್ಸು ಇಂದಿಗೆ ತೀರಿತು. ಅವನ ಪ್ರಾಣವನ್ನು ಸೆಳೆದೊಯ್ಯಲು ಬಂದಿದೇನೆ” ಎಂದು ನುಡಿದು ಯಮರಾಯ, ಪಾಶವನ್ನು ಬೀಸಿದ.
ಸತ್ಯವಂತನ ಪ್ರಾಣವನ್ನು ತೆಗೆದುಕೊಂಡು ಯಮ ಮುಂದೆ ಹೋದಹಾಗೆ ಸಾವಿತ್ರಿಯೂ ಅವನನ್ನು ಅನುಸರಿಸಿದಳು.
“ಯಾಕೆ ಹಿಂದೆ ಬರುತ್ತೀ ಸಾವಿತ್ರಿ? ಮರಳಿಹೋಗು” ಎಂದ ಯಮರಾಯ.
“ಗಂಡನು ಎಲ್ಲಿ ಹೋಗ್ತಾನೋ ಅಲ್ಲಿಗೆ ಹೋಗಬೇಕಾದ್ದು ಸತಿಯ ಧರ್ಮವಲ್ಲವೆ?” ಎಂದು ಕೇಳಿದಳು, ಸಾವಿತ್ರಿ.
“ನಿನ್ನ ಮಾತಿಗೆ ಮೆಚ್ಚಿದೆ ಸಾವಿತ್ರಿ. ನಿನ್ನ ಗಂಡನ ಪ್ರಾಣವೊಂದನ್ನು ಬಿಟ್ಟು ಮತ್ತೇನು ವರ ಬೇಕೋ ಕೇಳು, ಕೊಡ್ತೇನೆ” ಎಂದ ಯಮರಾಯ.
“ಯಮಧರ್ಮ, ರಾಜ್ಯಭ್ರಷ್ಟನಾಗಿ ಕಣ್ಣು ಕಳೆದುಕೊಂಡಿರುವ ನನ್ನ ಮಾವನಿಗೆ ಕಣ್ಣು ಬರಲಿ.”
“ತಥಾಸ್ತು” ಎಂದು ನಡೆದ ಯಮ.
ಮತ್ತೆ ಸಾವಿತ್ರಿ ಹಿಂಬಾಲಿಸಿದಳು. “ಪುನಃ ಯಾಕೆ ಬರ್ತೀ ಸಾವಿತ್ರಿ?” ಎಂದು ಕೇಳಿದ ಯುಮದೇವ.
“ಸಜ್ಜನರ ಸಂಗ ಯಾವಾಗಲೂ ಒಳ್ಳೆಯ ಫಲವನ್ನೆ ಕೊಡುತ್ತದಂತೆ ಯಮದೇವ. ಅದಕ್ಕೋಸ್ಕರ ನಿನ್ನ ಹಿಂದೆ ಬರ್ತಿದೇನೆ.”
“ಭೇಷ್ ಸಾವಿತ್ರಿ. ನಿನ್ನ ಮಾತು ಬಲು ಸೊಗಸಾಗಿದೆ. ಸತ್ಯವಂತನ ಜೀವವೊಂದನ್ನು ಬಿಟ್ಟು ಇನ್ನೊಂದು ವರ ಕೇಳಿಕೋ.”
“ನನ್ನ ಮಾವನಿಗೆ ಕಳೆದುಹೋದ ರಾಜ್ಯ ಮತ್ತೆ ದೊರಕಲಿ.”
“ಆಗಲಿ, ಇನ್ನಾದರೂ ಹಿಂದಿರುಗು.”
ಆದರೆ ಸಾವಿತ್ರಿ ಮತ್ತೂ ಯಮನ ಹಿಂದೆಯೇ ನಡೆದಳು.
“ಧರ್ಮರಾಯ, ಸಜ್ಜನರು ಪ್ರತ್ಯುಪಕಾರವನ್ನು ನಿರೀಕ್ಷಿಸದೆ ಪರೋಪಕಾರ ಮಾಡ್ತಾರೆ. ನೀನೂ ಹಾಗೆಯೇ ನನ್ನಲ್ಲಿ ದಯೆ ತೋರು. ಗಂಡನಿಲ್ಲದ ಸ್ವರ್ಗ ನನಗೆ ಬೇಡ. ಸಂಪತ್ತೂ ಬೇಡ.”
“ಸಾವಿತ್ರಿ, ನಿನ್ನ ಮಾತು ಅಣೆಮುತ್ತು. ಕಡೆಯ ವರ ಕೇಳಿಕೊಂಡು ಇಲ್ಲಿಂದ ಹೊರಟುಬಿಡು.”
“ಆರ್ಯ, ನನಗೆ ನೂರು ಜನ ಮಕ್ಕಳಾಗಲಿ.”
“ತಥಾಸ್ತು.”
ಸಾವಿತ್ರಿ ಹಿಂದೆ ಬರುತ್ತಿರುವುದನ್ನು ಕಂಡು ಯಮ ಸಿಟ್ಟಿನಿಂದ “ಮತ್ತೇನು ಬೇಕು ಸಾವಿತ್ರಿ?” ಎಂದು ಕೇಳಿದ. ಸಾವಿತ್ರಿ ನಕ್ಕು “ನನಗೆ ನೂರು ಮಕ್ಕಳಾಗಲೆಂದು ಅನುಗ್ರಹಿಸಿದೆ. ಆದರೆ ಸತ್ಯವಂತನಿಲ್ಲದ ನನಗೆ ಮಕ್ಕಳಾಗೋದು ಹೇಗೆ? ದಯವಿಟ್ಟು ನನ್ನ ಗಂಡನನ್ನು ಬದುಕಿಸು” ಎಂದು ಬೇಡಿಕೊಂಡಳು.
ತನ್ನ ಮಾತಿನೊಳಗೆ ತಾನೇ ಸಿಕ್ಕಿಕೊಂಡು, ಸಾವಿತ್ರಿಯ ಜಾಣ್ಮೆಗೆ ಬೆರಗಾಗಿ ಯಮಧರ್ಮ ಸತ್ಯವಂತನನ್ನು ಮತ್ತೆ ಬದುಕಿಸಿದ.

ಅಲ್ಲಿಂದ ಮುಂದೆ ಸಾವಿತ್ರಿ-ಸತ್ಯವಂತರು ನೂರಾರು ವರ್ಷ ಕಾಲ ರಾಜ್ಯಭಾರ ಮಾಡಿದರು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ

Tue Mar 15 , 2022
ಜಯದ್ರಥನು ದ್ರೌಪದಿಯನ್ನು ಅಪಹರಿಸಿ ಪರಿಭವಕ್ಕೆ ಒಳಗಾದದ್ದು. ಪಾಂಡವರ ವನವಾಸ ಹಾಗೆಯೇ ಮುಂದುವರಿದು ಹನ್ನೊಂದು ವರ್ಷಗಳು ಕಳೆದವು. ಈ ಮಧ್ಯೆ ಧೃತರಾಷ್ಟ್ರನ ಅಳಿಯ ಜಯದ್ರಥನು ಪಾಂಡವರು ಇದ್ದ ಆಶ್ರಮದ ಹತ್ತಿರ ಬಿಡಾರವನ್ನು ಮಾಡಿ ಕೋಲಾಹಲವೆಬ್ಬಿಸಿದನು. ದುಷ್ಟನಾದ ಅವನು ದ್ರೌಪದಿಗಾಗಿ ಶೃಂಗಾರಸಾಮಗ್ರಿಗಳನ್ನು ಕಳಿಸಿಕೊಟ್ಟನು. ಪಾಂಡವರು ಇಲ್ಲದ ವೇಳೆ ನೋಡಿ ಕೊಡಿರೆಂದನು. ಪಾಂಡವರು ಮುನಿಗಳನ್ನು ದ್ರೌಪದಿ ಮತ್ತು ಆಶ್ರಮದ ಕಾವಲಿಗೆ ನಿಲ್ಲಿಸಿ ಬೇಟೆಗೆ ತೆರಳಿದರು. ಇತ್ತ ಜಯದ್ರಥನ ಕಡೆಯವರು ಬಂದು ದ್ರೌಪದಿಯನ್ನು ಕಂಡು ಸಾಮಗ್ರಿಗಳನ್ನು […]

Advertisement

Wordpress Social Share Plugin powered by Ultimatelysocial