ಮುರಿವ ಮುಂಚಿನ ಮರ್ಮರ!

ಅವತ್ತು ರಾತ್ರಿ ಅವನು ಮನೆ ತಲುಪಿದಾಗ ಹೆಂಡತಿ ಊಟ ಬಡಿಸಿದಳು. ಊಟದ ನಂತರ ನಿನ್ನ ಬಳಿ ಮಾತನಾಡಲಿಕ್ಕಿದೆ ಎಂದನವ. ಆಕೆ ಮೌನವಾಗಿ ಅವನೆದುರಲ್ಲಿ ಕುಳಿತುಕೊಂಡಳು. ಆಕೆಯ ಕಣ್ಣುಗಳಲ್ಲಿ ನೋವು ಸರಿದಾಡಿತ್ತು. ಆತ ಏನು ಹೇಳಲಿಕ್ಕೆ ಹೊರಟಿದ್ದಾನೆ ಎಂಬುದು ಅವಳಿಗೆ ಗೊತ್ತಾಗಿ ಹೋಗಿತ್ತೇ? ಗೊತ್ತಾದರೂ ಏನೀಗ? ತಾನಂತೂ ನಿರ್ಧಾರ ಮಾಡಿಬಿಟ್ಟಾಗಿದೆ ಎಂದುಕೊಂಡ.
ಅವನಿಗೆ ಅವಳಿಂದ ವಿಚ್ಛೇದನ ಬೇಕಾಗಿತ್ತು. ಅದನ್ನೇ ಸಾವಕಾಶವಾಗಿ ಹೇಳಿದ. ಆಕೆ ಎಲ್ಲವನ್ನೂ ಕೇಳಿದಳು. ಕೂಗಲಿಲ್ಲ, ಚೀರಾಡಲಿಲ್ಲ. ಬದಲಿಗೆ ‘ಏಕೆ’ ಎಂಬ ಪ್ರಶ್ನೆಯನ್ನಿಟ್ಟಳು. ಅದಕ್ಕೆ ಸೂಕ್ತ ಉತ್ತರ ನೀಡುವುದು ಅವನಿಂದ ಸಾಧ್ಯವಾಗಲಿಲ್ಲ. ಆತ ಬೇರೊಬ್ಬಳ ಮೋಹಕ್ಕೆ ಬಿದ್ದಿದ್ದ. ತಮ್ಮಿಬ್ಬರ ಮದುವೆ ಅರ್ಥ ಮುಕ್ಕಾಗಿದೆ ಎಂಬುದಷ್ಟೇ ಅವನ ನಿರ್ಧಾರ. ಇವಳ ಮೇಲೆ ಆತನಲ್ಲುಳಿದಿರುವುದು ಅನುಕಂಪ ಮಾತ್ರ. ಅವನಿಂದ ಸಮರ್ಪಕ ಉತ್ತರ ಬರದಿದ್ದಾಗ ಮಾತ್ರ ಆಕೆ ಕೋಪದಿಂದ ಬುಸುಗುಟ್ಟಿದಳು. ಆ ರಾತ್ರಿ ಅವರಿಬ್ಬರೂ ಮಾತನಾಡಲಿಲ್ಲ. ಅವಳ ಅಳು ನಿಲ್ಲುತ್ತಲೇ ಇರಲಿಲ್ಲ.
ಬೆಳಗ್ಗೆ ಈತ ಡಿವೋರ್ಸ್ ಪೇಪರ್ ರೆಡಿ ಮಾಡಿದ. ಮನೆ, ಕಾರು ಹಾಗೂ ಕಂಪನಿಯ ಶೇ. 30ರಷ್ಟು ಪಾಲುದಾರಿಕೆ ಇವನ್ನೆಲ್ಲ ಆಕೆಗೆ ಕೊಡುವುದಾಗಿ ನಮೂದಿಸಿ, ಆಕೆಗೆ ನೀಡಿದ. ಅವಳು ಅದನ್ನು ಈತನೆದುರೇ ಹರಿದು ಹಾಕಿದಳು. ಇವನಿಗೆ ಪೆಚ್ಚೆನಿಸಿತಾದರೂ ವಿಚ್ಛೇದನದ ನಿರ್ಧಾರ ಅಚಲವಾಗಿತ್ತು. ತಿಂಗಳುಗಳೇ ಆ ಬಗ್ಗೆ ಯೋಚಿಸಿ ಆ ನಿರ್ಧಾರಕ್ಕೆ ಬಂದಿದ್ದ.
ಮರುದಿನ ಇನ್ನೊಬ್ಬಳೊಂದಿಗೆ ಸಾಯಂಕಾಲ ಕಳೆದು ಮನೆಗೆ ಹಿಂತಿರುಗುವಾಗ ರಾತ್ರಿಯಾಗಿತ್ತು. ಹೆಂಡತಿ ಏನೋ ಬರೆಯುತ್ತಿದ್ದಳು. ಅದನ್ನೇನೂ ವಿಚಾರಿಸುವ ಗೋಜಿಗೆ ಹೋಗದೆ ಆತ ಹಾಸಿಗೆ ಮೇಲೆ ಉರುಳಿದ. ಮರುದಿನ ಆಕೆಯ ವಿಚ್ಛೇದನದ ಕುರಿತ ಶರತ್ತುಗಳು ಇವನನ್ನು ಎದುರುಗೊಂಡಿದ್ದವು. ಅವನಿಂದ ಯಾವ ಸ್ವತ್ತುಗಳೂ ಬೇಡ. ಆದರೆ ವಿಚ್ಛೇದನಕ್ಕೆ ಒಂದು ತಿಂಗಳ ಕಾಲಾವಕಾಶ ಬೇಕು. ಆ ಸಮಯದಲ್ಲಿ ಇಬ್ಬರೂ ತುಂಬಾ ಸಹಜವಾಗಿ ದಾಂಪತ್ಯವನ್ನು, ದಿನಚರಿಯನ್ನು ಸವೆಸಬೇಕು ಎಂಬುದೇ ಅವಳ ನಿಯಮ. ಅದಕ್ಕೆ ಅವಳು ಕಾರಣವನ್ನೂ ಕೊಟ್ಟಿದ್ದಳು. ಮಗನಿಗೆ ಈಗ ಪರೀಕ್ಷೆಯ ಸಮಯ. ಇದೇ ಸಂದರ್ಭದಲ್ಲಿ ತಾವು ಬೇರೆಯಾಗಿ ಅದರ ಪರಿಣಾಮಗಳು ಆ ಚಿಕ್ಕ ಹುಡುಗನ ಮೇಲಾಗಬಾರದು ಎಂದು. ಅದೇನೋ ಅವನಿಗೆ ಸಮಂಜಸ ಎನ್ನಿಸಿತಾದ್ದರಿಂದ ತಕ್ಷಣವೇ ಒಪ್ಪಿಕೊಂಡ. ಅವಳ ಇನ್ನೊಂದು ಬೇಡಿಕೆ ವಿಚಿತ್ರವಾಗಿತ್ತು. ಆ ಒಂದು ತಿಂಗಳ ಅವಧಿಯಲ್ಲಿ ಆತ ಪ್ರತಿನಿತ್ಯ ಬೆಳಗ್ಗೆ ತನ್ನನ್ನು ಬೆಡ್ ರೂಮಿನಿಂದ ಹಾಲ್ಗೆ ಎತ್ತಿಕೊಂಡು ತಂದು ಬಿಡಬೇಕು. ತಮ್ಮ ಮದುವೆಯಾದ ಹೊಸತರ ದಿನಗಳನ್ನು ನೆನಪಿಸಿಕೊಳ್ಳುತ್ತ ಆ ಕಾರ್ಯ ಮಾಡಬೇಕು ಎಂಬ ಶರತ್ತು! ಇದೇನೋ ಆತನಿಗೆ ಬೇಡದ ವಿಷಯವಾಗಿದ್ದರೂ ಒಂದು ತಿಂಗಳ ಮಟ್ಟಿಗೆ ತಾನೇ ಎನ್ನುತ್ತ ಆಗೇಬಿಡಲಿ ಎಂದ.
ಹೆಂಡತಿಯ ಈ ವಿಚಿತ್ರ ಬೇಡಿಕೆಯನ್ನು ಪ್ರಿಯತಮೆಯ ಮುಂದಿರಿಸಿದಾಗ ಅವಳು, “ಆಕೆ ಏನೇ ಆಟ ಆಡಿದರೂ ವಿಚ್ಛೇದನವನ್ನು ಎದುರಿಸಲೇಬೇಕು. ನೀನು ನನ್ನ ತೆಕ್ಕೆಗೆ ಬಂದೇ ಬರುತ್ತೀಯಾ ಬಿಡು” ಎಂದಳು.
ವಿಚ್ಛೇದನದ ವಿಷಯ ಮನಸ್ಸು ಹೊಕ್ಕಿದಾಗಿನಿಂದ ದೇಹ ಸಂಪರ್ಕವೇ ಇರದ ಹೆಂಡತಿಯನ್ನು ಮೊದಲ ದಿನ ಬೆಡ್ ರೂಮಿನಿಂದ ಎತ್ತಿಕೊಂಡು ಬರುವುದು ಅವನಿಗೆ ಮುಜುಗರದ ಜೊತೆಗೆ ಯಾಂತ್ರಿಕ ವಿಷಯ ಎಂಬಂತಾಗಿತ್ತು. ತನ್ನ ಅಮ್ಮನನ್ನು ಅಪ್ಪ ಎತ್ತಿಕೊಂಡು ಬರುವುದನ್ನು ನೋಡಿ ಕಣ್ಣರಳಿಸಿದ ಮಗ ಚಪ್ಪಾಳೆ ಹೊಡೆದಿದ್ದು ಅವನಿಗೆ ಇನ್ನಷ್ಟು ಇರಿಸುಮುರಿಸು ಉಂಟುಮಾಡಿತ್ತು. ಆಗಲೇ ಆಕೆ ಕಿವಿಯಲ್ಲಿ ಮೆಲ್ಲಗೆ ಹೇಳಿದಳು-ನಮ್ಮ ಡಿವೋರ್ಸ್ ವಿಷಯ ಆತನಿಗೆ ಗೊತ್ತಾಗವುದು ಬೇಡ ಅಂತ. ಈತನೂ ತಲೆಯಾಡಿಸಿದ. ನಂತರ ಆಕೆ ಅವಳ ಪಾಡಿಗೆ ಕೆಲಸಕ್ಕೆ ಹೊರಟರೆ, ಈತ ಒಬ್ಬನೇ ಕಾರಿನಲ್ಲಿ ಆಫೀಸು ತಲುಪಿಕೊಂಡ.
ಎರಡನೇ ದಿನ ಹೆಂಡತಿಯನ್ನು ಎತ್ತಿಕೊಂಡು ಬರುವುದು ಸುಸೂತ್ರದ ಕೆಲಸ ಎನಿಸಿತು. ಅವಳು ಇವನೆದೆಗೆ ಬಾಗಿದಳು. ಆಕೆಯ ದೇಹದ ಕಂಪು ಈತನ ನಾಸಿಕಗಳಿಗೆ ತಾಗಿತ್ತು. ಅರೆ, ಬಹಳ ದಿನಗಳಿಂದ ತನ್ನ ಹೆಂಡತಿಯನ್ನು ಅಷ್ಟಾಗಿ ಗಮನಿಸಿಯೇ ಇರಲಿಲ್ಲವಲ್ಲ. ಈಕೆ ಮೊದಲಿನಂತಿಲ್ಲ. ವಯಸ್ಸು ಅವಳನ್ನು ಸುಸ್ತಿಗೆ ತಳ್ಳಿದಂತಿದೆ. ಮುಖದಲ್ಲಿ ಸೂಕ್ಷ್ಮವಾಗಿ ಸುಕ್ಕುಗಳು ಮೂಡಿರುವುದು ಅವನ ನಜರಿಗೇ ಹಾಯ್ದಿರಲಿಲ್ಲ. ಒಂದಿಷ್ಟು ಕೂದಲುಗಳು ಬಿಳಿಯಾಗಿರುವುದೂ ಇದೇ ಮೊದಲೆಂಬಂತೆ ಆತನಿಗೆ ತಿಳಿದು ಬಂತು.
ನಾಲ್ಕನೇ ದಿನ ಮಡದಿಯನ್ನು ಎತ್ತಿ ತರುವಾಗ ಕಳೆದುಹೋದಂತಿದ್ದ ಆಪ್ತತೆ ಮರುಕಳಿಸಿರುವಂತೆ ಭಾಸವಾಯಿತು. ಐದನೇ ದಿನ ಅದು ಇನ್ನಷ್ಟು ಗಟ್ಟಿಯಾದಂತೆನಿಸಿತು. ಹತ್ತು ವರ್ಷ ತನ್ನೊಂದಿಗೆ ಬದುಕಿದವಳ ಬಗ್ಗೆ ಅಷ್ಟೂ ಅನ್ನಿಸದಿದ್ದರೆ ಹೇಗೆ ಅಂದುಕೊಂಡನೇನೊ? ಅದೇಕೋ ಈ ಯಾವ ಅನುಭವಗಳನ್ನೂ ಪ್ರಿಯತಮೆಗೆ ಹೇಳುವ ಮನಸ್ಸಾಗಲಿಲ್ಲ. ಅವಳನ್ನು ಹೊರುವ ಕೆಲಸ ಅಂಥ ಭಾರವಾದದ್ದು ಎಂದೇನೂ ಅನಿಸದೇ ದಿನಗಳು ಸರಾಗವಾಗಿ ಜಾರತೊಡಗಿದ್ದವು.
ಅದೊಂದು ದಿನ ಬೆಳಗ್ಗೆ ಹೆಂಡತಿ ಉಡುಗೆ ಆಯ್ಕೆಯಲ್ಲಿ ತೊಡಗಿದ್ದಳು. ಯಾವುದೂ ಸರಿ ಬರುತ್ತಿರಲಿಲ್ಲ. ಎಲ್ಲವೂ ದೊಡ್ಡದು ಎಂದು ಅಲವತ್ತುಕೊಂಡಳು. ಆಗ ಗಂಡನಿಗೆ ಹೊಳೆಯಿತು, ಈಕೆ ಕೃಶಳಾಗುತ್ತಿದ್ದಾಳೆ. ಹಾಗೆಂದೇ ಹೊತ್ತುಕೊಂಡು ನಡೆಯುವುದು ತನಗೆ ಒಜ್ಜೆ ಎನಿಸುತ್ತಿಲ್ಲ ಎಂದು! ಹತಾಶೆಯಿಂದ ಆಕೆ ಅವನಿಗೆ ಹೊಡೆದಳು. ಈತ ಅರಿವೇ ಇರದಂತೆ ಆಕೆಯ ತಲೆ ಸವರಿದ.
ಅಷ್ಟರಲ್ಲಿ ಬಾಗಿಲ ಬಳಿ ಕಾಣಿಸಿಕೊಂಡ ಮಗ ಹೇಳಿದ – “ಅಪ್ಪಾ, ಟೈಮ್ ಆಯ್ತು. ನೀನಿನ್ನೂ ಅಮ್ಮನನ್ನು ಎತ್ತಿಕೊಳ್ಳಲೇ ಇಲ್ಲ!” ಅಪ್ಪ ತಾಯಿಯನ್ನು ಎತ್ತಿಕೊಂಡು ಹೊರಬರುವುದು ದಿನಚರಿಯ ಒಂದು ಭಾಗ ಎಂದೇ ಮಗ ಎಣಿಸಿಬಿಟ್ಟಿದ್ದ. ಮಗನನ್ನು ಹತ್ತಿರ ಬರುವಂತೆ ಕರೆದ ತಾಯಿ ಅವನನ್ನು ಬಿಗಿಯಾಗಿ ಅಪ್ಪಿಕೊಂಡಳು. ತಾನೂ ಆ ಭಾವಪ್ರಪಂಚದಲ್ಲಿ ಶಾಮೀಲಾಗುವುದಕ್ಕೆ ಹೋದರೆ ಎಲ್ಲಿ ಮನಸ್ಸಿನ ನಿರ್ಧಾರ ಬದಲಾಗಿಬಿಡುತ್ತದೋ ಎಂಬ ಆತಂಕ ಇವನಿಗೆ. ಆ ತಲ್ಲಣದ ನಡುವೆಯೇ ಮಡದಿಯ ಕೈ ಹಿಡಿದುಕೊಂಡ. ಹಾಲ್ಗೆ ಬಂದಾಗ ಆಕೆ ಇವನ ಕೊರಳನ್ನು ಬಳಸಿಕೊಂಡಳು. ಅದು ಮದುವೆ ದಿನದ ಚಿತ್ರಣವನ್ನೇ ನೆನಪಿಗೆ ತಂದಿತು.
ಕೊನೆಯ ದಿನ. ಆತ ಅವಳನ್ನು ಹೊತ್ತುಕೊಂಡು ಬರುವಾಗ ಹೆಂಡತಿ ಇಷ್ಟೊಂದು ತೂಕ ಕಳೆದುಕೊಂಡು ಬಿಟ್ಟಿದ್ದಾಳಲ್ಲ ಎಂದು ಕಳವಳವಾಯಿತು. ಮನಸ್ಸು ಮಾತ್ರ ಭಾರವಾಗಿತ್ತು. ನಮ್ಮ ನಡುವಿನ ಆಪ್ತತೆಯನ್ನೇ ಇಷ್ಟು ದಿನ ಗುರುತಿಸಿರಲಿಲ್ಲ ಎಂದು ಗೊಣಗಿಕೊಂಡು ಆತ ಅವಸರವಸರವಾಗಿ ಹೊರಗೆ ಹೊರಟ. ತಡ ಮಾಡಿದರೆ ಎಲ್ಲಿ ಮನಸ್ಸಿನ ನಿರ್ಧಾರ ಬದಲಾಗಿಬಿಡುವುದೋ ಎಂಬ ಆತಂಕ!
ಅಲ್ಲಿ ಪ್ರಿಯತಮೆ ಬಾಗಿಲು ತೆಗೆದಳು, ”ಕ್ಷಮಿಸು, ನಾನು ವಿಚ್ಛೇದನ ತೆಗೆದುಕೊಳ್ಳುವುದಿಲ್ಲ. ನನ್ನ ವಿವಾಹ ಜೀವನ ಬೋರ್ ಆಗಿದ್ದು ಏಕೆಂದರೆ ನಾನು ಅದರಲ್ಲಿನ ಚಿಕ್ಕ ಚಿಕ್ಕ ವಿವರಗಳನ್ನು ಗಮನಿಸಿಯೇ ಇರಲಿಲ್ಲ” ಎಂದು ಖಡಕ್ಕಾಗಿ ಹೇಳಿದ. “ನಿಂಗೇನು ಜ್ವರ ಬಂದಿದೆಯಾ? ಏನೇನೋ ಹೇಳ್ತಿದ್ದಿ” ಅಂತ ಅವಳು ಆತನ ಹಣೆ ಮೇಲೆ ಕೈ ಇರಿಸಿದಳು. ಇಂವ ತಲೆ ಕೊಡವಿಕೊಂಡ. ಅವಳಿಗೆ ವಾಸ್ತವ ಅರಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. ಭೋರೆಂದು ಅತ್ತು ಧಡಾರನೇ ಬಾಗಿಲು ಹಾಕಿದಳು.
ಆತ ಲಗುಬಗೆಯಿಂದ ಮನೆ ದಾರಿ ಹಿಡಿದ. ದಾರಿಯಲ್ಲಿ ಮಡದಿಗೆ ಎಂದು ಹೂಗುಚ್ಛ ತೆಗೆದುಕೊಂಡ. ಹೂ ಮಾರುವ ಹುಡುಗಿ ಶುಭಾಶಯ ಪತ್ರದಲ್ಲಿ ಏನು ಬರೆಯಲಿ ಎಂದು ಕೇಳಿದಳು. “ಸಾವು ನನ್ನನ್ನು ಹೊತ್ತೊಯ್ಯುವ ದಿನದವರೆಗೂ ಪ್ರತಿದಿನ ಮುಂಜಾನೆ ನಿನ್ನನ್ನು ಎತ್ತಿಕೊಳ್ಳುತ್ತೇನೆ” ಎಂದು ಬರೆಸಿದ. ಮನೆಗೆ ಮರಳಿದವನ ಕೈಯಲ್ಲಿ ಹೂವು. ಮುಖದಲ್ಲಿ ನಗೆ. ಮಡದಿಗಾಗಿ ನೋಡಿದಾಗ ಆಕೆ ಹಾಸಿಗೆಯಲ್ಲಿದ್ದಳು. ಎಬ್ಬಿಸಲು ಹೋದಾಗ ಗೊತ್ತಾದ ಸತ್ಯವೆಂದರೆ ಆಕೆ ಸತ್ತುಹೋಗಿದ್ದಳು! ಅವಳು ಅಷ್ಟು ದಿನ ಕ್ಯಾನ್ಸರಿನೊಂದಿಗೆ ಹೋರಾಡುತ್ತಿದ್ದಳು. ಸಾಯುವುದು ಅವಳಿಗೆ ಪಕ್ಕಾ ಆಗಿತ್ತು. ಪ್ರಿಯತಮೆಯ ವ್ಯಾಮೋಹದಲ್ಲಿ ಬಿದ್ದಿದ್ದವನಿಗೆ ಅವಳು ಕರಗಿಹೋಗುತ್ತಿರುವ ಸಂಗತಿಯೇ ಸಂವೇದನೆಗೆ ದಕ್ಕಿರಲಿಲ್ಲ. ಕೊನೆ ಕ್ಷಣದಲ್ಲಿ ತಮ್ಮ ವಿಚ್ಛೇದನದಿಂದ ಮಗನ ಮೇಲೆ ಆಗುವ ಪರಿಣಾಮವನ್ನು ತಡೆಯುವುದಷ್ಟೇ ಅವಳ ಕಾಳಜಿಯಾಗಿತ್ತು. ಮಗನ ಕಣ್ಣುಗಳಲ್ಲಿ ಅಪ್ಪ ತನ್ನ ತಾಯಿಗೆ ಒಬ್ಬ ಪ್ರೀತಿಪಾತ್ರ ಸಂಗಾತಿಯಾಗಿದ್ದ!
ಬದುಕಿನ ಚಿಕ್ಕ ವಿವರಗಳಲ್ಲೇ ಜೀವಂತಿಕೆಯ ಇಂಧನವಿದೆ. ಕತೆ ಸಾರುವುದು ಇಷ್ಟನ್ನೇ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್-ರಷ್ಯಾ: 18 ರಿಂದ 60 ವರ್ಷ ವಯಸ್ಸಿನ ಉಕ್ರೇನಿಯನ್ ಪುರುಷರು ದೇಶವನ್ನು ತೊರೆಯಲು ಅನುಮತಿಸುವುದಿಲ್ಲ!!

Fri Feb 25 , 2022
18 ರಿಂದ 60 ವರ್ಷ ವಯಸ್ಸಿನ ಎಲ್ಲಾ ಉಕ್ರೇನಿಯನ್ ಪುರುಷರು ದೇಶವನ್ನು ತೊರೆಯಲು ಅನುಮತಿಸಲಾಗುವುದಿಲ್ಲ ಎಂದು ಉಕ್ರೇನ್‌ನ ಸ್ಟೇಟ್ ಬಾರ್ಡರ್ ಗಾರ್ಡ್ ಸೇವೆ ಗುರುವಾರ ತಡವಾಗಿ ಘೋಷಿಸಿತು. ನಿಯಮಗಳು ಸಮರ ಕಾನೂನಿನ ಅವಧಿಗೆ ಅನ್ವಯಿಸುತ್ತವೆ. ಇದು ಏಕೆ ಎಂಬುದಕ್ಕೆ ಹೆಚ್ಚಿನ ವಿವರಗಳನ್ನು ನೀಡಿಲ್ಲ ಎಂದು ಬಾರ್ಡರ್ ಗಾರ್ಡ್ ಸೇವೆಯು ಫೇಸ್‌ಬುಕ್ ಹೇಳಿಕೆಯಲ್ಲಿ ತಿಳಿಸಿದೆ. ಮಹಿಳೆಯರು ಮತ್ತು ಮಕ್ಕಳು ಹತ್ತಿರದ ಗಡಿಗೆ ಇತರ ಸಾರಿಗೆಯನ್ನು ಕಂಡುಕೊಂಡರೆ ಅಥವಾ ಚಾಲನೆ ಮಾಡಿದರೆ ಮಾತ್ರ […]

Advertisement

Wordpress Social Share Plugin powered by Ultimatelysocial