4 ಸ್ಥಾನಕ್ಕೆ 6 ಅಭ್ಯರ್ಥಿಗಳ ಸ್ಪರ್ಧೆ: ತೀವ್ರ ಕುತೂಹಲ ಕೆರಳಿಸಿದ ರಾಜ್ಯಸಭೆಗೆ ಚುನಾವಣೆ

 

ಬೆಂಗಳೂರು, ಜೂ.3- ಎಲ್ಲಾ ವದಂತಿಗಳು ತಲೆಕೆಳಗಾಗುವಂತಹ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧೆಯನ್ನು ಮುಂದುವರೆಸುವ ಮೂಲಕ ಕುತೂಹಲ ಕೆರಳಿಸಿದ್ದಾರೆ.

ನಿನ್ನೆಯಿಂದ ನಡೆದ ಕೆಲವು ಬೆಳವಣಿಗೆಗಳಲ್ಲಿ ಹಲವು ರೀತಿಯ ವದಂತಿಗಳು ಹರಿದಾಡಲಾರಂಭಿಸಿದ್ದವು, ದೆಹಲಿಯಲ್ಲಿ ಜೆಡಿಎಸ್ ನಾಯಕರ ಮಾತುಕತೆ ಯಶಸ್ವಿಯಾಗಿದೆ.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನಖರ್ಗೆ ಅವರು ಜೆಡಿಎಸ್ ಜತೆ ಸಖ್ಯಕ್ಕೆ ಒಲವು ತೋರಿಸಿದ್ದಾರೆ. ಹೀಗಾಗಿ ಇಂದು ಕಾಂಗ್ರೆಸ್‍ನ ಹೆಚ್ಚುವರಿ ಅಭ್ಯರ್ಥಿ ಮನ್ಸೂರ್ ಖಾನ್ ನಾಮಪತ್ರವನ್ನು ಹಿಂಪಡೆಯಲಿದ್ದಾರೆ ಎಂಬ ವದಂತಿಗಳು ವ್ಯಾಪಕವಾಗಿದ್ದವು. ಆದರೆ, ಈ ಎಲ್ಲವೂ ತಿರುವು, ಮರುವಾಗಿದ್ದು, ಕಾಂಗ್ರೆಸ್‍ನ ಇಬ್ಬರೂ ಅಭ್ಯರ್ಥಿಗಳು ಉಳಿದಿದ್ದಾರೆ. ಹೀಗಾಗಿ ರಾಜ್ಯಸಭೆ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯುವುದು ಅನಿವಾರ್ಯವಾಗಲಿದೆ.

ಕಾಂಗ್ರೆಸ್ ತನ್ನದೇ ಆದ ರಣತಂತ್ರ ಹೊಂದಿದ್ದು, ಚುನಾವಣೆ ಮುನ್ನಾ ದಿನ ಜೂ.9ರಂದು ಖಾಸಗಿ ಹೋಟೆಲ್‍ನಲ್ಲಿ ಶಾಸಕಾಂಗ ಸಭೆ ನಡೆಸುತ್ತಿದೆ. ಅಲ್ಲಿ ಪಕ್ಷದ ಎಲ್ಲಾ ಶಾಸಕರಿಗೂ ವ್ಹಿಪ್ ನೀಡಲಾಗುತ್ತಿದ್ದು, ತನ್ನ ಮತಗಳನ್ನು ಭದ್ರಪಡಿಸಿಕೊಳ್ಳುವ ಕಾರ್ಯಾಚರಣೆ ನಡೆಸುತ್ತಿದೆ. ಈಗಾಗಲೇ ನವ ಸಂಕಲ್ಪ ಶಿಬಿರದ ಅಂಗವಾಗಿ ಬೆಂಗಳೂರಿನ ಹೊರ ವಲಯದಲ್ಲಿ ಬೀಡುಬಿಟ್ಟಿರುವ ಪಕ್ಷದ ಶಾಸಕರು ಹಾಗೂ ಮುಖಂಡರು ರಾಜ್ಯಸಭೆ ಚುನಾವಣೆವರೆಗೂ ಅಲ್ಲಿಯೇ ಉಳಿಯಲಿದ್ದಾರೆ ಎಂಬ ಮಾಹಿತಿಗಳಿದ್ದವು.

ಅದನ್ನೂ ಅಲ್ಲಗಳೆದಿರುವ ಉನ್ನತ ಮೂಲಗಳು ಇಂದು ಸಂಜೆ ರೆಸಾರ್ಟ್‍ನಿಂದ ಕಾಂಗ್ರೆಸ್‍ನ ಎಲ್ಲಾ ಶಾಸಕರು ತಮ್ಮ ಕ್ಷೇತ್ರಗಳತ್ತ ಮರಳಲಿದ್ದಾರೆ. ಯಾರನ್ನೂ ಬಲವಂತವಾಗಿ ಕೂಡಿಹಾಕುವ ಪ್ರಯತ್ನಗಳಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಕುತೂಹಲ ಕೆರಳಿಸಿದ ಚುನಾವಣೆ: ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂ.10ರಂದು ನಡೆಯುವ ಚುನಾವಣೆ ಮತ್ತಷ್ಟು ಕುತೂಹಲ ಕೆರಳಿಸಿದ್ದು, ರಾಜಕೀಯ ಚುಟವಟಿಕೆಗಳು ಬಿರುಸು ಪಡೆದುಕೊಂಡಿವೆ. ಪ್ರಸ್ತುತ ಶಾಸಕರ ಸಂಖ್ಯಾಬಲ ಆಧರಿಸಿ ಬಿಜೆಪಿ ಎರಡು ಸ್ಥಾನ ಗೆಲ್ಲಲು ಅವಕಾಶವಿದೆ. ಆದರೆ, ಮೂರನೇ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಮತ್ತು ವಿಧಾನಪರಿಷತ್ ಮಾಜಿ ಸದಸ್ಯ ಲೆಹರ್‍ ಸಿಂಗ್ ಚುನಾವಣಾ ಕಣದಲ್ಲಿದ್ದಾರೆ.

ಕಾಂಗ್ರೆಸ್ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ಮತ್ತು ಮನ್ಸೂರ್ ಖಾನ್ ಅವರನ್ನು ಕಣಕ್ಕಿಳಿಸಿದೆ. ಜೆಡಿಎಸ್ ಸಂಖ್ಯಾಬಲ ಕೊರತೆ ಅನುಭವಿಸುತ್ತಿದ್ದು, ಕುಪೇಂದ್ರ ರೆಡ್ಡಿಯನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯ ತಲಾ ಒಬ್ಬ ಅಭ್ಯರ್ಥಿ ನಾಮಪತ್ರ ಹಿಂಪಡೆಯದ ಹೊರತು ಅವಿರೋಧ ಆಯ್ಕೆ ಅಸಾಧ್ಯವಾಗಲಿದೆ. ಈವರೆಗೂ ರಾಜ್ಯಸಭೆಗೆ ಬಹುತೇಕ ಅವಿರೋಧ ಆಯ್ಕೆಗಳೇ ನಡೆದಿವೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದ ಚುನಾವಣೆಯಲ್ಲಿ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರಿಂದ ಅವಿರೋಧ ಆಯ್ಕೆ ಸಾಧ್ಯವಾಗಿರಲಿಲ್ಲ. ಆ ವೇಳೆ ಅಡ್ಡಮತದಾನ ನಡೆದ ಆರೋಪಗಳಿಂದ ಬಹಳಷ್ಟು ರಾಜಕೀಯ ವ್ಯತ್ಯಾಸಗಳಾದವು. ಈಗ ಅದೇ ರೀತಿಯ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್‍ನಲ್ಲಿ ಮನ್ಸೂರ್‍ ಖಾನ್, ಬಿಜೆಪಿಯಲ್ಲಿ ಲೆಹರ್‍ ಸಿಂಗ್ ಹೆಚ್ಚುವರಿ ಅಭ್ಯರ್ಥಿಗಳೆಂದು ಪರಿಗಣಿಸಲಾಗಿದೆ.

ಇವರಿಬ್ಬರೂ ಸ್ಪರ್ಧೆಯಲ್ಲಿ ಮುಂದುವರೆದರೆ ಜೆಡಿಎಸ್‍ನ ಕುಪೇಂದ್ರರೆಡ್ಡಿ ಆಯ್ಕೆ ಸವಾಲಾಗಲಿದೆ. ಸಂಖ್ಯಾಬಲ ಮತ್ತು ಪ್ರಾಶಸ್ತ್ಯ ಮತಗಳ ಆಧಾರದಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆಗಳು ದಟ್ಟವಾಗಿವೆ.

ರಾಜಕೀಯ ಕೆಸರೆರಚಾಟ: ಜೆಡಿಎಸ್ ಈವರೆಗೂ ಸಿದ್ದರಾಮಯ್ಯ ವಿರುದ್ಧ ಕಟು ಟೀಕೆಗಳನ್ನೇ ಮಾಡುತ್ತಾ ಬಂದಿತು. ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಂಧಾನಕ್ಕೆ ಮುಂದಾಗಿದೆಯಾದರೂ ಅದು ಯಶಸ್ವಿಯಾದಂತೆ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯಸಭೆ ಚುನಾವಣೆ ಆಧಾರಿತವಾಗಿಯೇ ಮತ್ತಷ್ಟು ಆರೋಪ-ಪ್ರತ್ಯಾರೋಪಗಳು ಕೇಳಿ ಬರುವ ಸಾಧ್ಯತೆಗಳಿವೆ. ಅಲ್ಪಸಂಖ್ಯಾತರ ಪ್ರಾತಿನಿಧ್ಯದ ವಿಷಯದಲ್ಲಿ ಈಗಾಗಲೇ ಒಂದಷ್ಟು ಚರ್ಚೆಗಳು ನಡೆದಿವೆ. ಮುಂದಿನ ದಿನಗಳಲ್ಲಿ ಈ ವಿಷಯವಾಗಿಯೂ ರಾಜಕೀಯ ಕೆಸರೆರಚಾಟ ಕೇಂದ್ರೀಕೃತವಾಗುವ ಅಂದಾಜುಗಳಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಣದುಬ್ಬರದ ವಿರುದ್ಧ ಮೋದಿ ಸರ್ಕಾರದ ಹೋರಾಟಕ್ಕೆ ಟೊಮೆಟೊವೇ ದೊಡ್ಡ ಅಪಾಯ!

Fri Jun 3 , 2022
ಭಾರತದಲ್ಲಿ ಟೊಮೆಟೊ ದರವು ತೀವ್ರವಾಗಿ ಏರಿಕೆ ಕಾಣುತ್ತಿದೆ. ಹಣದುಬ್ಬರದ ವಿರುದ್ಧ ಸರ್ಕಾರವು ಈಗಾಗಲೇ ಹಲವಾರು ಕ್ರಮಗಳನ್ನು ಪ್ರಯೋಗ ಮಾಡಿದೆ. ಈಗ ಈ ಟೊಮೆಟೊ ಸರ್ಕಾರಕ್ಕೆ ಭಾರೀ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇದೆ. ತರಕಾರಿ ಬೆಲೆ ಏರಿಕೆಯೇ ಹಣದುಬ್ಬರವನ್ನು ಮಿತಿ ಮೀರಿಸಿ ಸರ್ಕಾರವನ್ನೇ ಉರುಳಿಸಿ ಇತಿಹಾಸ ಸೃಷ್ಟಿ ಮಾಡುತ್ತದೆಯೇ ಎಂಬ ಚರ್ಚೆಗಳು ಕೂಡಾ ನಡೆಯುತ್ತಿದೆ. ಭಾರತೀಯರು ಅಧಿಕವಾಗಿ ಬಳಸುವ ತರಕಾರಿಗಳಲ್ಲಿ ಟೊಮೆಟೊ, ಆಲೂಗಡ್ಡೆ ಮತ್ತು ಈರುಳ್ಳಿ ಸೇರಿದೆ. ಕೋಳಿ, ಮಾಂಸ, ಯಾವುದೇ […]

Advertisement

Wordpress Social Share Plugin powered by Ultimatelysocial