ನಿಮ್ಮ ಸಿನಿಮಾಗಳನ್ನು ಹಿಂದಿಗೆ ಏಕೆ ಡಬ್ ಮಾಡುತ್ತೀರಿ?

ಕೆಲವು ದಿನಗಳ ಹಿಂದೆ ಸಿನಿಮಾ ಸಂಬಧಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಟ ಸುದೀಪ್, ಕನ್ನಡ ಚಿತ್ರರಂಗ ಸಾಧಿಸುತ್ತಿರುವ ಪ್ರಗತಿ ಬಗ್ಗೆ ಮಾತನಾಡುತ್ತಾ ‘ಹಿಂದಿ ರಾಷ್ಟ್ರಭಾಷೆಯಾಗಿ ಉಳಿದಿಲ್ಲ’ ಎಂದಿದ್ದರು. ಸುದೀಪ್‌ ಹೇಳಿಕೆ ಸೂಕ್ತವಾಗಿಯೇ ಇತ್ತು ಆದರೆ ಬಾಲಿವುಡ್‌ನ ಕೆಲವರು ಸುದೀಪ್ ಹೇಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ನಡೆದ ಉಪೇಂದ್ರ ನಟಿಸುತ್ತಿರುವ ‘R’ ಸಿನಿಮಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಸುದೀಪ್, ”ಕನ್ನಡದ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಸಿನಿಮಾ ಎನ್ನಬೇಡಿ, ಹಿಂದಿ ರಾಷ್ಟ್ರಭಾಷೆಯಾಗಿ ಉಳಿದಿಲ್ಲ. ಬಾಲಿವುಡ್‌ನವರು ಹೇಳಬೇಕು ನಾವು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದೇವೆ ಎಂದು. ತೆಲುಗು, ತಮಿಳಿಗೆಲ್ಲ ಡಬ್ ಮಾಡಿ ಏನೇನೋ ಸಾಹಸ ಮಾಡುತ್ತಿದ್ದಾರೆ ಆದರೆ ಯಾವುದೂ ಸಹ ವರ್ಕ್‌ ಆಗುತ್ತಿಲ್ಲ ಬಹಳ ಕಷ್ಟಪಡುತ್ತಿದ್ದಾರೆ. ಆದರೆ ಪ್ಯಾನ್ ಇಂಡಿಯಾ ಸಿನಿಮಾ ಎಂಬುದು ಹಿಂದಿ ಸಿನಿಮಾ, ನಮ್ಮದಲ್ಲ, ನಾವು ಕೇವಲ ಸಿನಿಮಾ ಮಾಡುತ್ತಿದ್ದೇವೆ, ಅದು ವಿಶ್ವದೆಲ್ಲೆಡೆ ರೀಚ್ ಆಗುತ್ತಿದೆ ಅಷ್ಟೆ” ಎಂದಿದ್ದರು.

ಇದು ಬಾಲಿವುಡ್‌ ನಟ ಅಜಯ್ ದೇವಗನ್ ಅವರನ್ನು ಕೆರಳಿಸಿದ್ದು, ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್‌ಗೆ ಪ್ರಶ್ನೆಯೊಂದನ್ನು ಸಹ ಅಜಯ್ ದೇವಗನ್ ಕೇಳಿದ್ದಾರೆ.

ಸುದೀಪ್‌ಗೆ ಟ್ವೀಟ್‌ ಮಾಡಿರುವ ಅಜಯ್ ದೇವಗನ್
ಸುದೀಪ್‌ಗೆ ಟ್ವೀಟ್ ಮಾಡಿರುವ ಅಜಯ್ ದೇವಗನ್, ”ಸಹೋದರ ಸುದೀಪ್, ನಿಮ್ಮ ಅನುಸಾರ ಹಿಂದಿ ರಾಷ್ಟ್ರಭಾಷೆ ಅಲ್ಲದೇ ಇದ್ದರೆ ನೀವೇಕೆ ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ರಿಲೀಸ್ ಮಾಡುತ್ತೀರಿ? ಹಿಂದಿ ನಮ್ಮ ಮಾತೃಭಾಷೆ ಹಾಗೂ ರಾಷ್ಟ್ರಭಾಷೆ ಆಗಿತ್ತು, ಮುಂದೆಯೂ ಆಗಿರುತ್ತದೆ. ಜನ ಗಣ ಮನ” ಎಂದಿದ್ದಾರೆ ಅಜಯ್ ದೇವಗನ್.

ಬಾಲಿವುಡ್ ಸ್ಟಾರ್‌ಗಳಿಗೆ ಅಸೂಯೆ

ದಕ್ಷಿಣ ಭಾರತದ ಚಿತ್ರರಂಗ ತಮ್ಮ ಸಿನಿಮಾಗಳನ್ನು ವಿವಿಧ ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದು, ಬಾಲಿವುಡ್‌ ಮಾರುಕಟ್ಟೆಯಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಏಕಸ್ವಾಮ್ಯತೆ ಪಡೆದುಕೊಳ್ಳುವತ್ತ ಸಾಗಿವೆ. ಇದು ಸಹಜವಾಗಿಯೇ ಬಾಲಿವುಡ್‌ನ ಸ್ಟಾರ್ ನಟರಿಗೆ ಅಸೂಯೆ ಉಂಟು ಮಾಡಿದೆ. ಆ ಅಸೂಯೆಯ ಕಾರಣದಿಂದಲೇ ಅಜಯ್ ದೇವಗನ್ ಈ ರೀತಿಯ ಟ್ವೀಟ್ ಮಾಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ದಕ್ಷಿಣ ಭಾರತ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡುವುದು ಬೇಡ ಎಂದು ತಮ್ಮ ಟ್ವೀಟ್‌ನಲ್ಲಿ ಅಜಯ್ ಪರೋಕ್ಷವಾಗಿ ಹೇಳುತ್ತಿದ್ದಾರೆ ಎಂದು ಸಹ ಕೆಲವರು ಕಮೆಂಟ್ ಮಾಡಿದ್ದಾರೆ.

ಹಿಂದಿ ರಾಷ್ಟ್ರಭಾಷೆಯಲ್ಲ

ಸುದೀಪ್ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ. ಭಾರತಕ್ಕೆ ಅಧಿಕೃತ ರಾಷ್ಟ್ರಭಾಷೆ ಎಂದು ಯಾವುದೂ ಇಲ್ಲ. ಭಾರತ ಸಂವಿಧಾನದ ಎಂಟನೇ ಪರಿಚ್ಛೇಧವು 22 ಪ್ರಾದೇಶಿಕ ಭಾಷೆಗಳನ್ನು ಗುರುತಿಸಿದೆ. ಆ 22 ಭಾಷೆಗಳಲ್ಲಿ ಹಿಂದಿ ಸಹ ಒಂದು ಅಷ್ಟೆ. ಆರ್ಟಿಕಲ್ 343 ಅಡಿ ದೇವನಾಗರಿ ಲಿಪಿಯಲ್ಲಿನ ಹಿಂದಿ ಹಾಗೂ ಇಂಗ್ಲೀಷ್ ಭಾಷೆಯನ್ನು ಅಧಿಕೃತ ಭಾಷೆ ಎನ್ನಲಾಗಿದೆಯಷ್ಟೆ. ಆದರೆ ವರ್ಷಾನುಗಟ್ಟಲೆಯಿಂದ ಉತ್ತರ ಭಾರತದ ಹಿಂದಿ ಭಾಷಿಕರು ಹಿಂದಿಯನ್ನು ರಾಷ್ಟ್ರಭಾಷೆ ಎನ್ನುತ್ತಾ ಅದರ ಹೇರಿಕೆಯನ್ನು ಮಾಡುತ್ತಲೇ ಬರುತ್ತಿದ್ದಾರೆ. ದಕ್ಷಿಣದ ರಾಜ್ಯಗಳು ಈ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಲೇ ಬಂದಿವೆ.

ನಟ ಸುದೀಪ್‌ ಹಿಂದಿ ದ್ವೇಷಿಯಲ್ಲ

ನಟ ಸುದೀಪ್‌ ಅಪ್ಪಟ ಕನ್ನಡ ಪ್ರೇಮಿ, ಆದರೆ ಇತರ ಭಾಷಾ ದ್ವೇಷಿಯಲ್ಲ. ಈ ಹಿಂದೆ ಹಲವು ಹಿಂದಿ ಸೇರಿದಂತೆ ಇತರೆ ಭಾಷೆಗಳ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಇತರೆ ಭಾಷೆಗಳ ಜೊತೆಗೆ ಹಿಂದಿಯಲ್ಲಿಯೂ ಈ ಸಿನಿಮಾ ಬಿಡುಗಡೆ ಆಗಲಿದೆ. ಆದರೆ ಇದೇ ಸಮಯದಲ್ಲಿ ಅಜಯ್ ದೇವಗನ್ ಟಾಂಗ್ ನೀಡುವ ಟ್ವೀಟ್ ಮಾಡಿದ್ದಾರೆ. ಆದರೆ ಅಜಯ್‌ರ ಈ ಟ್ವೀಟ್‌ ಹೆಚ್ಚು ಪರಿಣಾಮವೇನು ಬೀರದು, ಸುದೀಪ್‌ಗೆ ದೊಡ್ಡ ಸಂಖ್ಯೆಯ ಅಭಿಮಾನಿ ವರ್ಗ ಹಿಂದಿ ಪ್ರದೇಶದಲ್ಲಿದೆ. ಇನ್ನು ಅಜಯ್ ದೇವಗನ್ ನಟಿಸಿ ನಿರ್ದೇಶನ ಮಾಡಿರುವ ‘ರನ್‌ವೇ 34’ ಇನ್ನೆರಡು ದಿನಗಳಲ್ಲಿ ಬಿಡುಗಡೆ ಆಗಲಿದೆ. ಅದೇ ಕಾರಣಕ್ಕೆ ಜನರ ಗಮನ ತಮ್ಮತ್ತ ಸೆಳೆಯಲು ಅಜಯ್ ಈ ರೀತಿ ಟ್ವೀಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೇನ್ಸ್‌ ಚಲನಚಿತ್ರೋತ್ಸವದಲ್ಲಿ ದೀಪಿಕಾ ತೀರ್ಪುಗಾರ್ತಿ!

Thu Apr 28 , 2022
ಮೇ 17-28ರವರೆಗೆ ಪ್ಯಾರಿಸ್‌ನಲ್ಲಿ ನಡೆಯಲಿರುವ 75ನೇ ಕೇನ್ಸ್‌ ಚಲನಚಿತ್ರೋತ್ಸವಕ್ಕೆ ಬಾಲಿವುಡ್‌ ತಾರೆ ದೀಪಿಕಾ ಪಡುಕೋಣೆ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ. ಒಟ್ಟು 8 ಸಿನಿ ತಾರೆಗಳನ್ನು ತೀರ್ಪುಗಾರರಾಗಿ ಮಾಡಲಾಗಿದ್ದು, ಅದನ್ನು ಫ್ರಾನ್ಸ್‌ನ ನಟ ವಿನ್ಸೆಟ್‌ ಲಿಂಡನ್‌ ಮುನ್ನಡೆಸಲಿದ್ದಾರೆ. ಪ್ರತಿಷ್ಠಿತ ಪಲ್ಮೆ ಡಿ’ಒರ್‌ ಪ್ರಶಸ್ತಿಯನ್ನು ನಾಮಿನೇಟ್‌ ಆಗಿರುವ 21 ಸಿನಿಮಾಗಳಲ್ಲಿ ಯಾವ ಸಿನಿಮಾಕ್ಕೆ ಕೊಡಬೇಕು ಎನ್ನುವುದನ್ನು ಈ ತೀರ್ಪುಗಾರರು ನಿರ್ಧರಿಸಲಿದ್ದಾರೆ. ಹಾಗಾಗಿ ದೀಪಿಕಾ ಅವರು ಚಲನಚಿತ್ರೋತ್ಸವದಲ್ಲಿ ಹತ್ತೂ ದಿನಗಳ ಕಾಲ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ. […]

Advertisement

Wordpress Social Share Plugin powered by Ultimatelysocial