ಜ್ಞಾನವ್ಯಾಪಿ ಮಸೀದಿ ಸಮೀಕ್ಷೆ ಪ್ರಕರಣ : ನಾಳೆಗೆ ವಿಚಾರಣೆ ಮುಂದೂಡಿದ ಸುಪ್ರೀಂ…

ನವದೆಹಲಿ, ಮೇ 19- ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಣೆ ನಡೆಸದಂತೆ ಸುಪ್ರೀಂಕೋರ್ಟ್ ಒಂದು ದಿನದ ಮಟ್ಟಿಗೆ ತಡೆಯಾಜ್ಞೆ ನೀಡಿದೆ. ದೇಶಾದ್ಯಂತ ಕುತೂಹಲ ಕೆರಳಿಸಿರುವ ಈ ಪ್ರಕರಣವನ್ನು ಇಂದಿನಿಂದ ನಿರಂತರ ವಿಚಾರಣೆ ನಡೆಸಲು ವಾರಣಾಸಿ ನ್ಯಾಯಾಲಯ ಮುಂದಾಗಿತ್ತು.

ಆದರೆ ವಿಚಾರಣೆಯನ್ನು ಮುಂದೂಡಿ, ಮತ್ತಷ್ಟು ಸಮಯಾವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡುವುದಾಗಿ ಹಿಂದುಪರ ವಕೀಲ ವಿಷ್ಣು ಶಂಕರ್ ಜೈನ್ ತಿಳಿಸಿದ್ದರು, ಅದೇ ವೇಳೆ ಸುಪ್ರೀಂಕೋರ್ಟ್‍ನಲ್ಲೂ ಕಾಲಾವಕಾಶಕ್ಕಾಗಿ ಮನವಿ ಸಲ್ಲಿಸುವುದಾಗಿ ಹೇಳಿದ್ದರು. ಅದರಂತೆ ಇಂದು ಸುಪ್ರೀಂಕೋರ್ಟ್‍ನಲ್ಲಿ ನ್ಯಾಯಮೂರ್ತಿ ಡಿ.ವೈ.ಚಂದ್ರೂಚೂಡ್ ಪೀಠದಲ್ಲಿ ವಿಚಾರಣೆ ವೇಳೆ ಮನವಿ ಮಾಡಿದ ವಿಷ್ಣು ಜೈನ್, ಹಿರಿಯ ವಕೀಲರಾದ ಹರಿಶಂಕರ್ ಜೈನ್ ಅವರಿಗೆ ಅನಾರೋಗ್ಯವಾಗಿರುವುದರಿಂದ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಮಸೀದಿ ಪರ ಹಿರಿಯ ವಕೀಲ ಹುಝೆಫಾ ಅಹ್ಮದಿ, ದೇಶಾದ್ಯಂತ ಹಲವಾರು ತಕರಾರು ಅರ್ಜಿಗಳಿವೆ. ಆದ್ದರಿಂದ ಈ ವಿಷಯವನ್ನು ತುರ್ತಾಗಿ ವಿಚಾರಣೆ ನಡೆಸಬೇಕು. ಇಂದಿನಿಂದಲೇ ವಿಚಾರಣೆ ಆರಂಭವಾಗಬೇಕು ಎಂದು ಒತ್ತಾಯಿಸಿದರು. ವಾದ ವಿವಾದ ಆಲಿಸಿದ ಬಳಿಕ ಸುಪ್ರೀಂಕೋರ್ಟ್, ಸುಮಾರು 50 ತಕರಾರುಗಳು ನ್ಯಾಯಾಲಯ ಮುಂದಿವೆ. ನಾಳೆ ಮಧ್ಯಾಹ್ನ 3 ಗಂಟೆಗೆ ಪ್ರಕರಣದ ವಿಚಾರಣೆ ನಡೆಸಲಾಗುವುದು.ಆವರೆಗೂ ವಾರಣಾಸಿ ನ್ಯಾಯಾಲಯ ವಿಚಾರಣೆಯನ್ನು ಸ್ಥಗಿತಗೊಳಿಸಲಿ ಎಂದು ನ್ಯಾಯಮೂರ್ತಿ ಸೂಚನೆ ನೀಡಿದರು.

ಹಿನ್ನೆಲೆ: ಜ್ಞಾನವಾಪಿ ಮಸೀದಿಯಲ್ಲಿ ಹಿಂದು ಧಾರ್ಮಿಕ ನಂಬಿಕೆಗಳಿಗಳಿಗೆ ಅನುಗುಣವಾದ ವಿಗ್ರಹಗಳು ಹಾಗೂ ಇತರ ಕುರುಹುಗಳಿವೆ, ಮಸೀದಿಯ ಪಶ್ಚಿಮ ಗೋಡೆಯಲ್ಲಿ ಪೂಜೆ ಹಾಗೂ ಪ್ರಾರ್ಥನೆಗೆ ಅವಕಾಶ ನೀಡುವಂತೆ ದೆಹಲಿ ಮೂಲದ ಐವರು ಮಹಿಳೆಯರು ವಾರಣಾಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅದರ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ ಕಳೆದ ಗುರುವಾರ ಮಸೀದಿಯ ಸಮೀಕ್ಷೆಗೆ ಆದೇಶ ನೀಡಿತ್ತು. ಜೊತೆಗೆ ಕೋರ್ಟ್ ಕಮಿಷನರ್‍ರನ್ನು ನೇಮಿಸಿತ್ತು. ಹಿಂದು ಮತ್ತು ಮುಸ್ಲಿಂ ಸಮುದಾಯದ ಎರಡು ಕಡೆಯ ವಕೀಲರು ಹಾಗೂ ಜಿಲ್ಲಾ ಆಡಳಿತದ ಅಕಾರಿಗಳು ಮಸೀದಿಯ ಪ್ರತಿಯೊಂದು ಭಾಗವನ್ನು ಸಮೀಕ್ಷೆ ನಡೆಸಿದ್ದರು ಮತ್ತು ವಿಡಿಯೋ ಚಿತ್ರಿಕರಣ ನಡೆಸಿದ್ದರು. ಆ ಸಮೀಕ್ಷೆಯ ವರದಿ ಮಂಗಳವಾರ ಸಲ್ಲಿಕೆಯಾಗಬೇಕಿತ್ತು. ಆದರೆ ಸಮಿತಿ ಎರಡು ದಿನಗಳ ಕಾಲಾವಕಾಶ ಕೇಳಿದ್ದರಿಂದ ಸ್ಥಳೀಯ ನ್ಯಾಯಾಲಯ ಅನುಮತಿ ನೀಡಿದೆ.

ಸಮೀಕ್ಷೆಯ ವೇಳೆ ಮಸೀದಿಯ ಅಂಗಳದಲ್ಲಿರುವ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದು ಪರ ವಕೀಲರು ಹೇಳಿದ್ದರು. ಹಿಂದು ಧಾರ್ಮಿಕ ಕುರುಹುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪೂಜೆಗೆ ಅವಕಾಶ ಮಾಡಿಕೊಡುವಂತೆ ಸಿವಿಲ್ ನ್ಯಾಯಾಲಯಕ್ಕೆ ಮನವಿಯನ್ನೂ ಸಲ್ಲಿಸಿದ್ದರು. ಆ ಜಾಗವನ್ನು ಜಪ್ತಿ ಮಾಡುವಂತೆ ಸ್ಥಳೀಯ ನ್ಯಾಯಾಲಯ ಆದೇಶದ ನೀಡಿತ್ತು.

ಇದೇ ವೇಳೆ ಸಮೀಕ್ಷೆಯ ವರದಿಯನ್ನು ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ಮೊದಲೆ ಬಹಿರಂಗ ಪಡಿಸಿದ್ದಕ್ಕಾಗಿ ವಕೀಲರೊಬ್ಬರನ್ನು ಸಮೀಕ್ಷಾ ತಂಡದಿಂದ ಕೈ ಬಿಟ್ಟಿತ್ತು. ಆದರೆ ಸುಪ್ರೀಂಕೋರ್ಟ್ ವಾರಣಾಸಿ ನ್ಯಾಯಾಲಯ ನೀಡಿದ್ದ ಜಪ್ತಿ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.

ಶಿವಲಿಂಗದ ಸ್ವರೂಪ ಪತ್ತೆಯಾದ ಜಾಗವನ್ನು ಸಂರಕ್ಷಿಸಬೇಕು, ಆದರೆ ಈ ವೇಳೆ ಮುಸ್ಲಿಂ ಸಮುದಾಯಕ್ಕೆ ನಮಾಜ್ ಮಾಡುವ ಹಕ್ಕಿನಿಂದ ವಂಚನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಆದರೆ ಮಸೀದಿಯ ಆಡಳಿತ ಮಂಡಳಿ ಶಿವಲಿಂಗ ಪತ್ತೆಯಾಗಿದೆ ಎಂಬ ಮಾಹಿತಿಯನ್ನು ಅಲ್ಲಗಳೆದಿದ್ದಾರೆ. ಅದು ಶಿವಲಿಂಗ ಅಲ್ಲ ನೀರಿನ ಕಾರಂಜಿಯ ರಚನೆ ಎಂದು ವಾದಿಸಿದೆ. ಮಹತ್ವದ ಬೆಳವಣಿಗೆಯಲ್ಲಿ ರೇಖಾ ಪಾಠಕ್, ಮಂಜುವ್ಯಾಸ್ ಮತ್ತು ಸೀತಾ ಸಾಹು ಎಂಬ ಮೂವರು ಮಹಿಳೆಯರು ಹೆಚ್ಚುವರಿ ಅರ್ಜಿ ಸಲ್ಲಿಸಿ ಶಿವಲಿಂಗ ಪತ್ತೆಯಾದ ಜಾಗದಲ್ಲಿ ಪೂಜೆಗೆ ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿದ್ದಲ್ಲದೆ, ಮಸೀದಿಯ ನೆಲ ಮಹಡಿಯನ್ನು ಹೊಡೆದು ಸಮೀಕ್ಷೆ ನಡೆಸಬೇಕು. ಅಲ್ಲಿ ಮತ್ತಷ್ಟು ಕುರುಹುಗಳು ದೊರೆಯುವ ಸಾಧ್ಯತೆಗಳಿವೆ ಎಂದು ಪ್ರತಿಪಾದಿಸಿದ್ದಾರೆ.

ಸೂಕ್ಷ್ಮ ವಿಚಾರವಾಗಿರುವುದರಿಂದ ತ್ವರಿತ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಮತ್ತು ವಾರಣಾಸಿ ಕೋರ್ಟ್‍ಗಳು ಮುಂದಾಗಿದ್ದವು. ಆದರೆ ಸದ್ಯಕ್ಕೆ ವಿಚಾರಣೆ ದಿನದ ಮಟ್ಟಿಗೆ ಮುಂದೂಡಿಕೆಯಾಗಿದೆ. ನಾಳೆಯ ವಿಚಾರಣೆ ಕುತೂಹಲ ಕೆರಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಡುಪಿ ಜಿಲ್ಲೆಯಲ್ಲಿ ಡೆಂಘೆ ಪ್ರಕರಣ ಹೆಚ್ಚಳ: ಜಡ್ಕಲ್-ಮುದೂರಲ್ಲಿ ಶಾಲೆಗೆ 10 ದಿನ ರಜೆ...

Thu May 19 , 2022
ಉಡುಪಿ: ಜಿಲ್ಲೆಯಲ್ಲಿ 136 ಡೆಂಘೆ ಪ್ರಕರಣ ದಾಖಲಾಗಿದ್ದು, ಜನರದಲ್ಲಿ ಆತಂಕ ಮೂಡಿಸಿದೆ. ಬೈಂದೂರು ತಾಲೂಕು ವ್ಯಾಪ್ತಿಯ ಜಡ್ಕಲ್ ಮುದೂರು ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲೆಗೆ 10 ದಿನ ರಜೆ ಘೋಷಿಸಲಾಗಿದೆ. ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 114 ಡೆಂಘೆ ಪ್ರಕರಣಗಳು ಪತ್ತೆಯಾಗಿದೆ. ಈ ವ್ಯಾಪ್ತಿಯ ಮುದೂರು ಗ್ರಾಮದಲ್ಲಿ 105, ಜಡ್ಕಲ್​ನಲ್ಲಿ 7 ಪ್ರಕರಣ ಕಂಡು ಬಂದಿದೆ. ಕೊಲ್ಲೂರಿನಲ್ಲಿ ಇಬ್ಬರಿಗೆ ಡೆಂಘೆ ದೃಢಪಟ್ಟಿದೆ. ಜಡ್ಕಲ್ ಮುದೂರು ಭಾಗದಲ್ಲಿ ನಿರಂತರವಾಗಿ ಡೆಂಘೆ ಪ್ರಕರಣಗಳು […]

Advertisement

Wordpress Social Share Plugin powered by Ultimatelysocial