‘ಬೈ ಟು ಲವ್’ ಚಿತ್ರ ವಿಮರ್ಶೆ:

ಕಾಲ ಸರಿದಂತೆ ‘ಮದುವೆ ವ್ಯವಸ್ಥೆ’ ಬದಲಾಗುತ್ತಾ ಸಾಗುತ್ತಿದೆ. ದಾಂಪತ್ಯಕ್ಕೆ ಹೊಸ ಭಾಷ್ಯಗಳನ್ನು ನವ ಯುವಕ-ಯುವತಿಯರು ಬರೆದುಕೊಂಡಿದ್ದಾರೆ. ಕಾಲ ಸರಿದಂತೆ ಇನ್ನಷ್ಟು ತಿದ್ದುಪಡಿಗಳು ಅವಕ್ಕೆ ಸೇರುತ್ತಾ ಹೋಗುತ್ತವೆ. ಪ್ರೀತಿ, ಮದುವೆ, ದಾಂಪತ್ಯ, ತಾಯ್ತನ, ತಂದೆತನ ಈ ಎಲ್ಲದರ ಪರಿಭಾಷೆ ಕಳೆದ ಒಂದೆರಡು ದಶಕದಲ್ಲಿ ಸಾಕಷ್ಟು ಬದಲಾಗಿದೆ.

ಈ ವಿಷಯಗಳ ಮರು ಅನ್ವೇಶಣೆಯೇ ಇಂದು ಬಿಡುಗಡೆ ಆಗಿರುವ ಹೊಸ ಸಿನಿಮಾ ‘ಬೈ ಟು ಲವ್’.

ವಿಷಯ ಗಂಭೀರವಾಗಿದ್ದರೂ ಸಿನಿಮಾವನ್ನು ಹಾಸ್ಯದ ಲೇಪದೊಂದಿಗೆ, ಸರಳವಾಗಿಯೇ ಪ್ರೆಸೆಂಟ್ ಮಾಡಲಾಗಿದೆ. ಆಯ್ಕೆ ಮಾಡಿಕೊಂಡಿರುವ ವಿಷಯಕ್ಕೆ ಪ್ರಸ್ತುತತೆ ಇದೆ. ಬಹುಜನರಿಗೆ ಕನೆಕ್ಟ್ ವಿಷಯ ವಸ್ತುವೂ ಸಿನಿಮಾದ್ದಾಗಿದೆ.

ಕತೆ ಇಷ್ಟೆ, ನಾಯಕ-ನಾಯಕಿ ಇಬ್ಬರಿಗೂ ಮನೆಯಲ್ಲಿ ಕೌಟುಂಬಿಕ ಸಮಸ್ಯೆ, ಇಬ್ಬರಿಗೂ ಪೋಷಕರ ಮೇಲೆ ಸಿಟ್ಟು. ಹಾಗಾಗಿ ಪ್ರೀತಿಸಲೇ ಬಾರದು, ಮದುವೆಯೇ ಆಗಬಾರದು ಎಂದುಕೊಂಡಿದ್ದಾರೆ. ಇಬ್ಬರ ಯೋಚನೆ, ಆಲೋಚನೆಯ ಮಾದರಿ ಒಂದೇ. ಪ್ರೀತಿಸಬಾರದು ಎಂದುಕೊಂಡಿದ್ದರೂ ಅವರಿಬ್ಬರು ಪ್ರೀತಿಸುತ್ತಾರೆ. ಆದರೆ ಅವರಿಗೆ ಮದುವೆ ಬಗ್ಗೆ ಹೆದರಿಕೆ ಹಾಗೆಯೇ ಇದೆ. ಮದುವೆ ಖುಷಿಯನ್ನು ಕಿತ್ತುಕೊಳ್ಳುತ್ತದೆ, ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುತ್ತದೆ ಎಂಬ ಆತಂಕ ಅವರದ್ದು. ಅದಕ್ಕೆ ಅವರೊಂದು ಪ್ರಯೋಗಕ್ಕೆ ಮುಂದಾಗುತ್ತಾರೆ. ಪರಸ್ಪರ ಗಂಡ-ಹೆಂಡತಿಯರಂತೆ ಬಾಳಿ ಅದು ತಮಗೆ ಒಪ್ಪಿಗೆಯಾದರೆ ಮದುವೆಯ ತೀರ್ಮಾನ ಇಲ್ಲವಾದರೆ ಅವರವರ ದಾರಿ ಅವರಿಗೆ. ಇದಕ್ಕಾಗಿ ಮಗುವೊಂದನ್ನು ಸಹ ‘ಅಡ್ಡದಾರಿಯಲ್ಲಿ’ ಪಡೆದು ಸಾಕಲು ಆರಂಭಿಸುತ್ತಾರೆ.

ಸಿನಿಮಾದಲ್ಲಿ ಏನಾಗುತ್ತದೆ?
ಈ ಪ್ರಮಿಗಳಿಬ್ಬರ ಜೀವನದಲ್ಲಿ ಮಗು ಬಂದ ಬಳಿಕ ಅವರ ಜೀವನ ಏನಾಗುತ್ತದೆ? ಅವರ ಪ್ರೀತಿ ಹಾಗೆಯೇ ಉಳಿಯುತ್ತದೆಯೇ ಅಥವಾ ನಶಿಸಿ ಹೋಗುತ್ತದೆಯೇ? ಅಥವಾ ಅವರ ಪ್ರೀತಿ ಬೇರೆಯ ರೂಪ ಪಡೆದುಕೊಳ್ಳುತ್ತದೆಯೇ? ಮಗು ಅವರಿಬ್ಬರ ಜೀವನದಲ್ಲಿ ತರುವ ಬದಲಾವಣೆ ಏನು? ಪ್ರೀತಿ, ದಾಂಪತ್ಯದ ಬಗ್ಗೆ ಅವರಿಗಾಗುವ ಸಾಕ್ಷಾತ್ಕಾರವೇನು? ಇದೆಲ್ಲವೂ ತಿಳಿಯಲು ‘ಬೈ ಟು ಲವ್’ ಸಿನಿಮಾ ನೋಡಬೇಕು.

ವೈರುಧ್ಯಗಳನ್ನು ಪ್ರೇಕ್ಷಕರೆದುರು ತೆರೆದಿಡುವ ಯತ್ನ

ವಿಷಯ ಗಂಭೀರದ್ದಾದರೂ ನಿರ್ದೇಶಕರು ಅದನ್ನು ಸರಳವಾಗಿ ಪ್ರೇಕ್ಷಕರಿಗೆ ದಾಟಿಸುವ ಯತ್ನ ಮಾಡಿದ್ದಾರೆ. ಹೊಸ ತಲೆಮಾರಿನ ಯುವಕ-ಯುವತಿಯರಲ್ಲಿ ಪ್ರೀತಿ, ದಾಂಪತ್ಯದ ಕುರಿತು ಇರುವ ಅಭಿಪ್ರಾಯ, ವೈರುಧ್ಯಗಳನ್ನು ಪ್ರೇಕ್ಷಕನಿಗೆ ಎದುರುಗೊಳಿಸುವ ಯತ್ನ ಮಾಡಿದ್ದಾರೆ. ಹೊಸ ತಲೆಮಾರಿನ ಮಧ್ಯಮ ವರ್ಗದ ದಂಪತಿಗಳ ಅಥವಾ ಮದುವೆಯ ಕನಸು ಕಟ್ಟಿರುವ ಪ್ರೇಮಿಗಳ ಮಧ್ಯೆ ಸಾಮಾನ್ಯವಾಗಿ ಬರುವ ಸನ್ನಿವೇಶಗಳನ್ನು, ಸಂಭಾಷಣೆಗಳನ್ನು ಅವರು ಸಿನಿಮಾದಲ್ಲಿ ಪ್ರತಿಫಲಿತಗೊಳಿಸಿದ್ದಾರೆ. ಸಿನಿಮಾದ ನಾಯಕನನ್ನು ತೀರ ಹೃದಯವಂತನೆಂದೊ, ಕಷ್ಟ ಸಹಿಷ್ಣುವಂತೆಯೂ, ಫವರ್‌ಫುಲ್ ವ್ಯಕ್ತಿಯಂತೆ ಚಿತ್ರಿಸಿಲ್ಲ, ನಾಯಕಿಯನ್ನು ದೇವ ಸ್ವರೂಪಿ ತಾಯಿಯಂತೆಯೂ ಚಿತ್ರಿಸಿಲ್ಲ. ಅವರಿಬ್ಬರನ್ನು ಸಾಮಾನ್ಯ ಮನುಷ್ಯರಂತೆ ಕತೆಯಲ್ಲಿ ಚಿತ್ರಿಸಲಾಗಿದೆ. ಇದು ಸಿನಿಮಾದ ಪ್ರಮುಖ ಅಂಶ. ಹಾಗಾಗಿಯೇ ಈ ‘ಬೈ ಟು ಲವ್’ ಬಹುಜನರಿಗೆ ಸಲ್ಲಬಹುದಾದ ಸಿನಿಮಾ ಎನಿಸಿಕೊಳ್ಳುತ್ತದೆ.

ಮನೊರಂಜನಾತ್ಮಕ ಅಂಶಗಳೂ ಸಾಕಷ್ಟಿವೆ

ಸಿನಿಮಾವನ್ನು ತೀರ ಸತ್ಯಕ್ಕೆ ಮುಖಾ-ಮುಖಿಯಂತೆಯೂ, ಮಧ್ಯಮ ವರ್ಗದ ಕೈಗನ್ನಡಿ ಎಂಬಂತೆಯೂ ಮಾಡಿಲ್ಲ, ಒಂದು ಮನೊರಂಜನಾತ್ಮಕ ಸಿನಿಮಾದಲ್ಲಿ ಇರಬೇಕಾದ, ಸಾಮಾನ್ಯ ಪ್ರೇಕ್ಷಕನಿಗೆ ಬೋರ್ ಹೊಡೆಸದಂತೆ ನೋಡಿಕೊಳ್ಳುವ ಎಲ್ಲ ಪ್ರಯತ್ನಗಳನ್ನು ನಿರ್ದೇಶಕರು ಮಾಡಿದ್ದಾರೆ ಮತ್ತು ಯಶಸ್ವಿಯೂ ಆಗಿದ್ದಾರೆ. ಸಿನಿಮಾದಲ್ಲಿ ಹಾಸ್ಯ, ಕೀಟಲೆ ಅಲ್ಲಲ್ಲಿ ಡಬಲ್ ಮೀನಿಂಗ್ ಡೈಲಾಗ್‌ಗಳು, ಹಾಡು, ಕುಣಿತಗಳೆಲ್ಲವೂ ಇವೆ. ಜೊತೆಗೆ ಒಂದು ಗಂಭೀರ ವಿಷಯವೂ ಇದೆ. ಕಣ್ಣೀರು ತರಿಸುವ ಭಾವುಕ ಸನ್ನಿವೇಶಗಳೂ ಇವೆ. ಗಟ್ಟಿಯಾದ ಸಂದೇಶವೂ ಇದೆ.

ಸಿನಿಮಾವನ್ನು ಆವರಿಸಿಕೊಂಡಿದ್ದಾರೆ ನಟಿ ಶ್ರೀಲೀಲಾ

ಸಿನಿಮಾದ ನಾಯಕ ಪಾತ್ರಧಾರಿಯಾಗಿ ಧನ್ವೀರ್ ಗೌಡ ನಟಿಸಿದ್ದು ಅವರಿಗೆ ಇದು ‘ಡಿ-ಮಾಸ್’ ಸಿನಿಮಾ. ಸಿನಿಮಾದಲ್ಲಿ ಅವರಿಗಾಗಿ ಪ್ರಾರಂಭದಲ್ಲಿ ಒಂದು ಫೈಟ್ ಇಡಲಾಗಿದೆ ಬಿಟ್ಟರೆ ಇನ್ಯಾವುದೇ ಮಾಸ್‌ಗಿರಿಯನ್ನು ಅವರ ಪಾತ್ರಕ್ಕೆ ನೀಡಲಾಗಿಲ್ಲ. ಕತೆಯ ದೃಷ್ಟಿಯಿಂದ ಅದರ ಅವಶ್ಯಕತೆಯೂ ಇತ್ತು. ಅದನ್ನು ಒಪ್ಪಿ ಸರಳವಾಗಿ ನಟಿಸಿದ್ದಾರೆ ಧನ್ವೀರ್. ನಟಿ ಶ್ರೀಲೀಲಾ ಸಿನಿಮಾದ ತುಂಬಾ ಆವರಿಸಿಕೊಂಡಿದ್ದಾರೆ. ಪ್ರೀತಿ, ಹಾಸ್ಯ, ಕೀಟಲೆ, ಭಾವುಕ ಸನ್ನಿವೇಶ ಎಲ್ಲದರಲ್ಲೂ ಅವರದ್ದೇ ಮೇಲುಗೈ. ಅವರು ಕನ್ನಡ ಉಚ್ಛಾರಣೆ ಅಲ್ಲಲ್ಲಿ ಕಸಿವಿಸಿಗೊಳಿಸುತ್ತದೆ ಎಂಬುದೊಂದೇ ಅವರ ಬಗ್ಗೆ ಹೇಳಬಹುದಾದ ತಕರಾರು. ಅಚ್ಯುತ್ ಕುಮಾರ್, ರಂಗಾಯಣ ರಘು, ಪವಿತ್ರ ಲೋಕೇಶ್ ಅವರುಗಳ ಪಾತ್ರಗಳು ತೂಕದ್ದು, ಅದಕ್ಕೆ ತಕ್ಕಂತೆ ಅಭಿನಯ ನೀಡಿದ್ದಾರೆ. ಸಾಧುಕೋಕಿಲ ನಗಿಸಲು ಯಶಸ್ವಿಯಾಗಿದ್ದಾರೆ. ಶಿವರಾಜ್ ಕೆಆರ್ ಪೇಟೆಯ ನಟನೆಯೂ ಸಹಜ.

ಕ್ರೆಡಿಟ್ ಸಲ್ಲಬೇಕಿರುವುದು ನಿರ್ದೇಶಕ ಹರಿ ಸಂತೋಶ್ ಅವರಿಗೆ

ಅಜನೀಶ್ ಲೋಕನಾಥ್ ನೀಡಿರುವ ಸಂಗೀತ ಚೆನ್ನಾಗಿದೆ. ಕೆಲವು ಹಾಡುಗಳು ಗುನುಗುವಂತಿವೆ. ಮಹೇಶ್ ಸಿಂಹ ಕ್ಯಾಮೆರಾ ಕೆಲಸ ಸಿನಿಮಾವನ್ನು ಅಂದಗೊಳಿಸಿದೆ. ಯೋಗಾನಂದ್ ಮುದ್ದಾನ್ ಸಂಭಾಷಣೆ ಸರಳವಾಗಿದೆ. ಕೆಲವು ಡಬ್ಬಲ್ ಮೀನಿಂಗ್ ಡೈಲಾಗ್‌ಗಳು ಕೀಟಲೆಯ ಎಲ್ಲೆ ದಾಟಿ ಅಶ್ಲೀಲ ಎನಿಸುತ್ತವೆ. ಸಿನಿಮಾ ಕುರಿತಂತೆ ಹೆಚ್ಚಿನ ಕ್ರೆಡಿಟ್ ಸಲ್ಲಬೇಕಿರುವುದು ನಿರ್ದೇಶಕ ಹರಿ ಸಂತೋಶ್ ಅವರಿಗೆ. ಬಹುತೇಕ ಹೊಸ, ಹಳೆ ನಿರ್ದೇಶಕರು ಮಾಸ್ ಸಿನಿಮಾಗಳ ಹಿಂದೆ, ಥ್ರಿಲ್ಲರ್ ಕತೆಗಳ ಹಿಂದೆ ಅಥವಾ ‘ಔಟ್ ಆಫ್‌ ದಿ ಬಾಕ್ಸ್’ ಕತೆಗಳ ಹಿಂದೆ ಓಡುತ್ತಿರುವ ಸಮಯದಲ್ಲಿ ಕೌಟುಂಬಿಕ ಮೌಲ್ಯಗಳ ಕುರಿತು ಕತೆ ಮಾಡಿ ಅದನ್ನು ಹೊಸ ತಲೆಮಾರಿನ ಯುವಕ-ಯುವತಿಯರಿಗೆ ಅಪೀಲ್ ಆಗುವಂತೆ ಕಟ್ಟಿಕೊಟ್ಟಿದ್ದಾರೆ ಅವರು. ‘ಬೈ ಟು ಲವ್’ ಒಮ್ಮೆ ನೋಡಬೇಕಾದ ಸಿನಿಮಾ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾರ್ಚ್ 2022 ರಲ್ಲಿ ಬ್ಯಾಂಕ್ ರಜಾದಿನಗಳು: ಮುಂದಿನ ತಿಂಗಳು 13 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ

Mon Feb 28 , 2022
  ಮಾರ್ಚ್ 2022 ರಲ್ಲಿ ಬ್ಯಾಂಕ್ ರಜಾದಿನಗಳು: ರಿಸರ್ವ್ ಬ್ಯಾಂಕ್ ಇಂಡಿಯಾ ಬಿಡುಗಡೆ ಮಾಡಿದ ರಜಾ ಪಟ್ಟಿಯ ಪ್ರಕಾರ, ಮುಂಬರುವ ಮಾರ್ಚ್ 2022 ರಲ್ಲಿ ಬ್ಯಾಂಕುಗಳು 13 ದಿನಗಳವರೆಗೆ ಮುಚ್ಚಲ್ಪಡುತ್ತವೆ. ಮಾರ್ಚ್ ತಿಂಗಳಲ್ಲಿ ಬರುವ ಕೆಲವು ಪ್ರಮುಖ ಹಬ್ಬಗಳು ಮಹಾಶಿವರಾತ್ರಿ ಮತ್ತು ಹೋಳಿ. ಭಾರತದ ಅತಿದೊಡ್ಡ ಹಬ್ಬಗಳಲ್ಲಿ ಒಂದಾದ ಹೋಳಿಯು 2022 ರಲ್ಲಿ ಮಾರ್ಚ್ 18 ರಂದು ಬರುತ್ತದೆ ಮತ್ತು ಕೆಲವು ವಿನಾಯಿತಿಗಳೊಂದಿಗೆ ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಮಾರ್ಚ್ 1, […]

Advertisement

Wordpress Social Share Plugin powered by Ultimatelysocial