ವೀಣಾ ಬಾಲಚಂದರ್ ಭಾರತೀಯ ಶಾಸ್ತ್ರೀಯ ಸಂಗೀತದ ಮಹಾನ್ ವೈಣಿಕ.

ಬಾಲಚಂದರ್ 1927ರ ಜನವರಿ 18ರಂದು ಚೆನ್ನೈನಲ್ಲಿ ಜನಿಸಿದರು. ಅವರ ತಂದೆ ಪ್ರಸಿದ್ಧ ವಕೀಲರಾದ ಸುಂದರಂ ಅಯ್ಯರ್. ಮಹಾನ್ ಕಲಾರಸಿಕರಾಗಿದ್ದ ಸುಂದರಂ ಅಯ್ಯರ್ ಅವರ ಮನೆ ಸಂಗೀತ ಸಂಸ್ಕೃತಿಗಳಿಗೆ ಆಶ್ರಯತಾಣವಾಗಿತ್ತು. ಆ ಕಾಲದ ಮಹಾನ್ ಸಂಗೀತಜ್ಞರಾಗಿದ್ದ ಅರೈಕುಡಿ ರಾಮಾನುಜ ಅಯ್ಯಂಗಾರ್, ಮುತ್ತಯ್ಯ ಭಾಗವತರ್, ಮಧುರೈ ಮಣಿ ಅಯ್ಯರ್ ಮುಂತಾದ ಪ್ರಸಿದ್ಧರೆಲ್ಲಾ ಅವರ ಮನೆಯಲ್ಲಿ ತಂಗಿ ಸಂಗೀತದ ಸುಧೆ ಹರಿಸಿ ಆತಿಥ್ಯ ಸ್ವೀಕರಿಸಿ ಹೋಗುತ್ತಿದ್ದರು.
ಬಾಲ್ಯದಲ್ಲೇ ತಮ್ಮ ಬಹುಮುಖ ಪ್ರತಿಭೆಯಿಂದ ಗಮನಸೆಳೆದ ಬಾಲಚಂದರ್ ಚಿತ್ರಕಲೆ, ಸಂಗೀತ, ನಟನೆ, ಕ್ರೀಡೆ ಹೀಗೆ ಎಲ್ಲ ಬಗೆಯಲ್ಲಿ ಪರಿಣತಿ ಸಾಧಿಸಿದ್ದರು. ಚಿಕ್ಕಂದಿನಲ್ಲೇ ಚದುರಂಗದಾಟದಲ್ಲೂ ಪರಿಣತಿ ಸಾಧಿಸಿದ್ದ ಬಾಲಚಂದರ್ ಒಂದು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಾಗಿ ಶ್ರೀಲಂಕಾಕ್ಕೆ ಹೋಗಿದ್ದಾಗ, ಚದುರಂಗದಾಟಕ್ಕೆ ಸಂಬಂಧಿಸಿದ ಅತ್ಯಂತ ಕ್ಲಿಷ್ಟ ಸಮಸ್ಯೆಗಳನ್ನು ಸುಲಲಿತವಾಗಿ ಪರಿಹರಿಸಿ ತಜ್ಞರನ್ನು ಬೆರಗುಗೊಳಿಸಿದ್ದರು. ಶಾಲಾ ವಿದ್ಯಾಭ್ಯಾಸವನ್ನು ಹತ್ತನೇ ತರಗತಿಗೇ ಸೀಮಿತಗೊಳಿಸಿಕೊಂಡರಾದರೂ ಕಲಾ ಮಾಧ್ಯಮದಲ್ಲಿ ಅವರ ಪ್ರಗತಿ ನಿರಂತರವಾಗಿತ್ತು. ಬಾಲಚಂದರ್ ಅವರ ಅಣ್ಣ ರಾಜಂ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಅದಕ್ಕೆ ಹೋಲಿಕೆಯಾಗಿ ಬಾಲಚಂದರ್ ಅವರಿಗೆ ಗಾಯನಕ್ಕೆ ಬೇಕಾದ ಶಾರೀರವಿಲ್ಲ ಎಂಬುದು ಮನೆಯವರ ಅಭಿಪ್ರಾಯವಾಗಿದ್ದಿದ್ದರಿಂದ, ಅವರು ವೀಣಾವಾದನ ಕಲೆಗೆ ತಮ್ಮನ್ನು ಹೆಚ್ಚಿನ ರೀತಿಯಲ್ಲಿ ಅರ್ಪಿಸಿಕೊಂಡರು.
ಸುಂದರಂ ಅಯ್ಯರ್ ಅವರ ಕುಟುಂಬ ಅಭಿನಯ ಕಲೆಯಲ್ಲೂ ಗಣನೀಯ ಸಾಧನೆ ಮಾಡಿತ್ತು. ಬಾಲಚಂದರ್ ಅವರು ಚಿಕ್ಕಂದಿನಲ್ಲಿರುವಾಗಲೇ ಅವರ ಅಕ್ಕ ಜಯಲಕ್ಷ್ಮಿ ತಮಿಳು ಚಲನಚಿತ್ರ ‘ಶಿವಕಾವಿ’ಯಲ್ಲಿ ತ್ಯಾಗರಾಜ ಭಾಗವತರೊಂದಿಗೆ ನಟಿಸಿ ಹೆಸರು ಮಾಡಿದ್ದರು. ಬಾಲಕ ಬಾಲಚಂದರ್ ತಮ್ಮ ಆರನೆಯ ವಯಸ್ಸಿನಲ್ಲೇ ಪ್ರಸಿದ್ಧ ನಿರ್ದೇಶಕ ವಿ. ಶಾಂತಾರಾಂ ಅವರು ತಮಿಳಿನಲ್ಲಿ ನಿರ್ಮಿಸಿದ ‘ಸೀತಾಕಲ್ಯಾಣ’ ಎಂಬ ಚಿತ್ರದಲ್ಲಿ ಬಾಲನಟನಾಗಿ ನಟಿಸಿದರು. ಇದೇ ಚಿತ್ರದಲ್ಲಿ ಸುಂದರಮ್ ಅಯ್ಯರ್ ಜನಕ ಮಹಾರಾಜನಾಗಿ, ಹಿರಿಯಣ್ಣ ರಾಜಂ ಶ್ರೀರಾಮನಾಗಿ, ಅಕ್ಕಂದಿರಾದ ಜಯಲಕ್ಷ್ಮಿ ಮತ್ತು ಸರಸ್ವತಿ ಅವರುಗಳು ಸೀತೆ – ಊರ್ಮಿಳೆಯರಾಗಿ ಪಾತ್ರ ನಿರ್ವಹಿಸಿದ್ದರು. ಬಾಲಚಂದರ್ ತಮ್ಮ ಹದಿಮೂರನೇ ವಯಸ್ಸಿನಲ್ಲಿ ಅಭಿನಯಿಸಿದ ‘ಋಷ್ಯಶೃಂಗ’ ಚಿತ್ರದಲ್ಲಿ ತಮ್ಮೊಂದಿಗೆ ಪಾತ್ರ ನಿರ್ವಹಿಸಿದ್ದ ಶಾಂತಾ ಅವರನ್ನು ವಿವಾಹವಾದರು. ಈ ಚಿತ್ರದಲ್ಲಿ ಬಾಲಚಂದರ್ ಹಲವಾರು ಹಾಡುಗಳನ್ನೂ ಹಾಡಿದ್ದರು.
ಸುರದ್ರೂಪಿಯಾಗಿದ್ದ ಯುವಕ ಬಾಲಚಂದರ್ ಅವರಿಗೆ ಚಲನಚಿತ್ರರಂಗದಲ್ಲಿ ಬಹಳಷ್ಟು ಅವಕಾಶಗಳು ತೆರೆದಿದ್ದವಾದರೂ ಅವರ ತಂದೆ ಸುಂದರಂ ಅಯ್ಯರ್ ಅವರಿಗೆ ತಮ್ಮ ಮಗ ಚಿತ್ರರಂಗದಲ್ಲಿ ನಟನಾಗಿ ಹೆಚ್ಚು ಮುಂದುವರೆಯುವುದು ಇಷ್ಟವಿರಲಿಲ್ಲ. ಹೀಗಿದ್ದರೂ ಹಲವಾರು ಚಿತ್ರಗಳಲ್ಲಿ ನಟಿಸಿದ ಬಾಲಚಂದರ್ ತಮ್ಮ ನಟನೆಯ ಜೊತೆಗೆ ಜೆಮಿನಿ ಸ್ಟುಡಿಯೊದಲ್ಲಿನ ಚಟುವಟಿಕೆಗಳೆಲ್ಲವನ್ನೂ ಅತ್ಯಂತ ಆಸಕ್ತಿಯಿಂದ ಗಮನಿಸುತ್ತಿದ್ದರು. ಇದು ಮುಂದೆ ಅವರು ಚಲನಚಿತ್ರ ಕ್ಷೇತ್ರದ ವಿವಿಧ ರಂಗಗಳಲ್ಲಿ ಮುಂದುವರಿಯಲು ಸಹಾಯಕವಾಯಿತು. ಬಾಲಚಂದರ್ ಅವರ ಬೆಳವಣಿಗೆಯ ದಿನಗಳಲ್ಲಿ ಅವರನ್ನು ಪ್ರಸಿದ್ಧಿಗೆ ತಂದ ಮತ್ತೊಂದು ಚಿತ್ರ ‘ಇದು ನಿಜಮಾ’. ಇದರಲ್ಲಿ ಅವರಿಗೆ ಅವಳಿ ಸಹೋದರರಿರುವ ನಾಯಕ ಪಾತ್ರವಿತ್ತು. ಇಪ್ಪತ್ತರ ಯುವಕ ಬಾಲಚಂದರ್ ಈ ಚಿತ್ರದ ಕಥಾ ಬರವಣಿಗೆ, ಗೀತ ರಚನೆ ಮತ್ತು ಸಂಗೀತ ಸಂಯೋಜನೆಗಳನ್ನು ತಾವೇ ನಿರ್ವಹಿಸಿದ್ದರಲ್ಲದೆ ಕೆಲವು ಹಾಡುಗಳನ್ನೂ ಹಾಡಿದರು. ತಾವು ನಟಿಸಿದ ಬಹುತೇಕ ಚಿತ್ರಗಳಲ್ಲಿ ಬಾಲಚಂದರ್ ತಾವೇ ಹಾಡುಗಳನ್ನು ಹಾಡುತ್ತಿದ್ದರು. ವೈಜಯಂತಿ ಮಾಲಾ, ಮಾಧುರಿ ದೇವಿ, ಅಂಜಲಿ ದೇವಿ ಮುಂತಾದ ಪ್ರಸಿದ್ಧ ನಟಿಯರು ಅವರ ನಾಯಕಿಯರಾಗಿ ಅಭಿನಯಿಸಿದ್ದರು. ಹೀಗೆ ಚಿತ್ರರಂಗದಲ್ಲಿ ಪ್ರಸಿದ್ಧರಾಗಿದ್ದ ಸಂದರ್ಭದಲ್ಲೂ ಬಾಲಚಂದರ್ ವೀಣಾ ವಾದನಕ್ಕೆ ಸಾಕಷ್ಟು ಗಮನ ಹರಿಸುತ್ತಿದ್ದರು. ಕಾಲಾನುಕ್ರಮದಲ್ಲಿ ತಮ್ಮ ಆಸಕ್ತಿ ವೀಣಾವಾದನದಲ್ಲಿದೆ ಎಂಬುದನ್ನು ಮನಗಂಡ ಅವರು ಚಲನಚಿತ್ರದಲ್ಲಿ ತಮ್ಮ ಭಾಗವಹಿತ್ವವನ್ನು ಕಡಿಮೆ ಮಾಡಿಕೊಂಡು ತಮಗೆ ಇಷ್ಟವಾದ ಕೆಲವೊಂದು ಚಿತ್ರಗಳಲ್ಲಿ ಮಾತ್ರ ಅಭಿನಯ, ಹಾಡುಗಾರಿಕೆ, ನಿರ್ದೇಶನಗಳನ್ನು ಕೈಗೊಂಡರು. ಬಾಲಚಂದರ್ ಅವರು ನಿರ್ದೇಶಿಸಿ ಪ್ರಸಿದ್ಧ ನಟ ಶಿವಾಜಿ ಗಣೇಶನ್ ನಟಿಸಿದ್ದ ‘ಅಂದನಾಳ್’ ಚಿತ್ರ ತಮಿಳು ಚಿತ್ರರಂಗದ ಇತಿಹಾಸದಲ್ಲಿನ ಉತ್ತಮ ಚಿತ್ರಗಳಲ್ಲೊಂದು ಎಂದು ಇಂದೂ ಪ್ರಖ್ಯಾತಿಯನ್ನು ಉಳಿಸಿಕೊಂಡಿದೆ. ಹೀಗೆ ಬಣ್ಣದ ಲೋಕದಲ್ಲಿನ ಪ್ರಖ್ಯಾತಿಯಲ್ಲಿದ್ದೂ ತಮ್ಮ ಎಲ್ಲಾ ಯಶಸ್ಸು ಖ್ಯಾತಿಗಳು ವೀಣೆಯ ಮುಂದೆ ಅಲ್ಪದ್ದು ಎಂದು ಭಾವಿಸಿದ ಅವರು ವೀಣೆಯನ್ನು ಸರಸ್ವತಿ ಎಂದು ಬಗೆದು ಅದರ ಆರಾಧನೆಯಲ್ಲಿಯೇ ತಮ್ಮನ್ನು ಹೆಚ್ಚು ಹೆಚ್ಚು ಸಮರ್ಪಿಸಿಕೊಳ್ಳತೊಡಗಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಂದೂವರೆ ಕೋಟಿ ಖರ್ಚು ಮಾಡಿ ಚುನಾವಣೆಯಲ್ಲಿ ಆರಿಸಿ ಬಂದಿದ್ದೇನೆ.

Wed Jan 18 , 2023
ಹಿಸ್ಸಾರ (ಹರಿಯಾಣಾ) – ಒಂದೂವರೆ ಕೋಟಿ ರೂಪಾಯಿ ಖರ್ಚು ಮಾಡಿದ ಬಳಿಕ ನಾನು ಸರಪಂಚನಾಗಿದ್ದೇನೆ. ಆದ್ದರಿಂದ ನನಗೆ ‘ರೈಟ ಟು ರಿಕಾಲ್’ನ (ಜನಪ್ರತಿನಿಧಿಗಳನ್ನು ಹಿಂದಕ್ಕೆ ಕರೆಸುವ ಅಧಿಕಾರ) ಹೆದರಿಕೆಯನ್ನು ತೋರಿಸುವವರಿಗೆ 2024 ರಲ್ಲಿ ಹಿಂದಕ್ಕೆ ಕಳುಹಿಸಲಾಗುವುದು, ಎಂದು ಹಾಂಸಿ ಪ್ರದೇಶದ ಓರ್ವ ಸರಪಂಚನು ಹೇಳಿಕೆ ನೀಡಿದ್ದಾರೆ. ಅವರ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ. ಈ ವಿಡಿಯೋ ಜನೇವರಿ 15 ರಂದು ರಾಜ್ಯದ ಪಂಚಾಯತ ಸಚಿವ ದೇವೆಂದ್ರ ಬಬಲಿಯವರ ವಿರುದ್ಧ […]

Advertisement

Wordpress Social Share Plugin powered by Ultimatelysocial