ವೈರಲ್‌ ಚಿತ್ರದ ಹಿಂದಿನ ಕಣ್ಣೀರ ಕಥೆಯಿದು;

ಸಮಾಧಿ ಮುಂದೆ ನಿಂತು ಅಳುತ್ತ ಪಿಟಿಲು ನುಡಿಸುತ್ತಿರೋ ಈ ಬಾಲಕ ಯಾರು? ವೈರಲ್‌ ಚಿತ್ರದ ಹಿಂದಿನ ಕಣ್ಣೀರ ಕಥೆಯಿದು.

ರಿಯೋ (ಬ್ರೆಜಿಲ್‌): ಸಾಮಾಜಿಕ ಜಾಲತಾಣದಲ್ಲಿ ಈ ಹುಡುಗನ ಚಿತ್ರವನ್ನು ನೀವು ನೋಡಿರಬಹುದು. ಸಮಾಧಿಯ ಮುಂದೆ ಕಣ್ಣೀರಿಡುತ್ತಾ ಪಿಟಿಲು ನುಡಿಸುತ್ತಿರುವ ಈ ಬಾಲಕನನ್ನು ನೋಡಿದರೆ ಕರುಳು ಚುರುಕ್‌ ಎನ್ನುತ್ತದೆ. ಯಾಕೆ ಈತ ಹೀಗೆ ಅಳುತ್ತಿದ್ದಾನೆ ಎನ್ನುವುದು ತಿಳಿಯುವುದಿಲ್ಲ.

ಬಹುಶಃ ಅವನ ಅಪ್ಪನೋ ಅಮ್ಮನೋ ತೀರಿಹೋಗಿರಬಹುದು, ಆದ್ದರಿಂದ ಸಮಾಧಿಯ ಮುಂದೆ ಅಳುತ್ತಿರಬಹುದು ಎಂದೂ ಅನ್ನಿಸಬಹುದು.

ಆದರೆ ಅಸಲಿಗೆ ಆ ಸಮಾಧಿಯಲ್ಲಿ ಇರುವುದು ಈ ಬಾಲಕನ ಶಿಕ್ಷಕ. ಅನಾರೋಗ್ಯದಿಂದ ಅವರು ತೀರಿಕೊಂಡಿದ್ದಾರೆ. ಬಾಲಕ ತನ್ನ ನೆಚ್ಚಿನ ಶಿಕ್ಷಕನ ನೆನೆದು ಪಿಟಿಲು ನುಡಿಸುತ್ತಾ ಅಳುತ್ತಿದ್ದಾನೆ. ಇಷ್ಟೇ ಆಗಿದ್ದರೆ ಬಹುಶಃ ಈತನ ಸುದ್ದಿ ಇಷ್ಟೆಲ್ಲಾ ವೈರಲ್‌ ಆಗುತ್ತಿರಲಿಲ್ಲ.

ಆದರೆ ಇವನ ಕಥೆ ಕಣ್ಣೀರು ತರಿಸುವಂಥದ್ದು. ಈ ಬಾಲಕನ ಹೆಸರು ಡಿಯಗೊ ಫ್ರಾಜವೊ ಟೊರ್ಕ್ವಾಟೋ ಎಂದು. ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿನ ಪರಡಾ ಡಿ ಲ್ಯೂಕಾಸ್ ಎಂಬ ಕೊಳೆಗೇರಿ ಪ್ರದೇಶದ ನಿವಾಸಿ ಇವನು. ಇವನಿಗೆ 14 ವರ್ಷ ವಯಸ್ಸು.

ಕೊಳೆಗೇರಿ ಎಂಬ ಮೇಲೆ ಅಲ್ಲಿಯ ಸ್ಥಿತಿ ಕೇಳುವುದೇ ಬೇಡ. ಆದರೆ ಈತ ಇರುವ ಕೊಳೆಗೇರಿಯಲ್ಲಿನ ಬದುಕು ಅಕ್ಷರಶಃ ನರಕವೇ. ರಿಯೊ ಡಿ ಜನೈರೊದಲ್ಲಿನ ಪರಡಾ ಡಿ ಲ್ಯೂಕಾಸ್‌ನಲ್ಲಿ ಬಡವರಾಗಿ ಹುಟ್ಟುವುದು ಎಂದರೆ ಒಂದೇ ಜನ್ಮದಲ್ಲಿ ಸಾವಿರಾರು ನರಕಗಳನ್ನು ಕಾಣುವ ಬದುಕದು. ಶಸ್ತ್ರಾಸ್ತ್ರ ಕಳ್ಳಸಾಗಣೆ, ವೇಶ್ಯಾವಾಟಿಕೆಗೆ ಮಕ್ಕಳ ಬಲವಂತದ ಬಳಕೆ, ಸುಲಿಗೆಗಾಗಿ ಅಪಹರಣ, ಒಪ್ಪಂದದ ಮೇರೆಗೆ ಕೊಲೆ, ಮಕ್ಕಳ ಕಳ್ಳಸಾಗಣೆ… ಎಲ್ಲದಕ್ಕೂ ಈ ಕೊಳೆಗೇರಿ ಮಕ್ಕಳೇ ಟಾರ್ಗೆಟ್‌. ಬಡತನ ಹಾಸುಹೊಕ್ಕಾಗಿರುವ ಈ ಪ್ರದೇಶದಲ್ಲಿ ಹೆತ್ತವರೇ ತಮ್ಮ ಕರುಳಕುಡಿಗಳನ್ನು ನಿರ್ದಾಕ್ಷಿಣ್ಯವಾಗಿ ಅಕ್ರಮ ಚಟುವಟಿಕೆಗಾಗಿ ಮಾರಾಟ ಮಾಡುತ್ತಿದ್ದಾರೆ.

ಇಂಥ ವ್ಯವಸ್ಥೆಯಲ್ಲಿ ಶಿಕ್ಷಣ, ಶಾಲೆ, ಅಭ್ಯಾಸ? ಇದು ಮರೀಚಿಕೆ ಮಾತ್ರವಲ್ಲದೇ ಇಂಥದ್ದೊಂದು ಈ ಭೂಮಿಯ ಮೇಲೆ ಇದೆ ಎನ್ನುವುದೇ ಇಲ್ಲಿಯ ಮಕ್ಕಳಿಗೆ ತಿಳಿಯದ ವಿಷಯ. ಇಂಥ ಸ್ಥಿತಿಯ ನಡುವೆ ಡಿಯಗೊ ಫ್ರಾಜವೊ ಟೊರ್ಕ್ವಾಟೋ ಜೀವನವೇ ರೋಚಕ.

ಈ ಬಾಲಕ 4ನೇ ವಯಸ್ಸಿನಲ್ಲಿ ಲ್ಯುಕೇಮಿಯಾಕ್ಕೆ ಬಲಿಯಾಗಿ ಕ್ಷೀಣಿಸುತ್ತಾ ಹೋದ. ಆಸ್ಪತ್ರೆಯಲ್ಲಿಯೇ ಈತನ ಬಾಲ್ಯ ಕಳೆದುಹೋಯಿತು. ಅದರೆ ಅದ್ಯಾವ ಜನ್ಮದ ಬಂಧವೋ ಗೊತ್ತಿಲ್ಲ. ಸಂಗೀತವೆಂದರೆ ಈತನಿಗೆ ಪಂಚಪ್ರಾಣವಾಗಿತ್ತು. ಅತ್ಯುತ್ತಮ ಸಂಗೀತಗಾರನಾಬೇಕು ಅನ್ನೋದು ಬಾಲಕನ ಕನಸು. ಪಿಟಿಲು ವಾದಕನಾಗಿ ಮುಂದೊಂದು ದಿನ ಪ್ರಸಿದ್ಧಿಗೆ ಬಂದೇ ಬರುತ್ತೇನೆ ಎನ್ನುತ್ತಿದ್ದ ಈ ಪುಟಾಣಿ. ಇದನ್ನು ಕೇಳಿ ಗಹಗಹಿಸಿ ನಕ್ಕವರೇ ಹೆಚ್ಚಂತೆ.

ಈ ಚಿಕ್ಕ ವಯಸ್ಸಿನಲ್ಲಿಯೇ ಭೂಗತ ಲೋಕಕ್ಕೂ ಪ್ರವೇಶಿಸಿ ಹಣ ಸಂಪಾದಿಸಲು ಶುರು ಮಾಡಿದ್ದ. ಪಿಟಿಲು ಖದೀರಿಸಿ ನುಡಿಸತೊಡಗಿದ. ಇವನ ಜೀವನದ ಟರ್ನಿಂಗ್‌ ಪಾಯಿಂಟ್‌ ಆದದ್ದು ಒಮ್ಮೆ ಅಚಾನಕ್‌ ಆಗಿ ಸಮಾಜಸೇವಾ ಸಂಪರ್ಕ ಅಧಿಕಾರಿ ಇವಾಂಡ್ರೊ ಜೊವಾ ಸಿಲ್ವಾ ಅವರನ್ನು ಭೇಟಿ ಮಾಡಿದಾಗ. ಬಾಲಕ ವಾಸಿಸುವ ಕೊಳೆಗೇರಿ ಮಕ್ಕಳ ಕಲ್ಯಾಣ ಕಾರ್ಯಕರ್ತರಾಗಿ ಇವರು ಕೆಲಸ ಮಾಡುತ್ತಿದ್ದರು. ಬಾಲಕ ಎಲ್ಲವನ್ನೂ ಮರೆತು ತನ್ಮಯನಾಗಿ ಪಿಟಿಲು ನುಡಿಸುವುದನ್ನು ನೋಡಿ ಖುಷಿಗೊಂಡ ಸಿಲ್ವಾ ಬಾಲಕನಿಗೆ ಪಿಟೀಲು ನುಡಿಸಲು ತರಬೇತಿ ನೀಡಿದರು, ಮಾತ್ರವಲ್ಲದೇ ಸ್ಥಳೀಯ ಬ್ಯಾಂಡ್‌ಗೆ ಆತನನ್ನು ನೇಮಿಸಿಕೊಂಡರು. ಹೀಗೆ ಬಾಲಕನ ಜೀವನದ ದಿಕ್ಕೇ ಬದಲಾಗಿ ಹೋಯ್ತು. ಎಲ್ಲೆಡೆ ಇವರ ಪಿಟಿಲಿನ ವಾದನಕ್ಕೆ ಜನ ಮನಸೋತರು.

ಆದರೆ ಅಷ್ಟೊತ್ತಿಗಾಗಲೇ ಮಹಾ ದುರಂತವೊಂದು ನಡೆದುಹೋಯ್ತು. 2009ರಲ್ಲಿ ರಿಯೋದಲ್ಲಿ ಮಾಫಿಯಾ ದರೋಡೆಕೋರರು ಇವಾಂಡ್ರೊ ಸಿಲ್ವಾ ಅವರನ್ನು ಗುಂಡಿಕ್ಕಿ ಸಾಯಿಸಿಬಿಟ್ಟರು. ತನ್ನ ಬದುಕನ್ನೇ ಬದಲಿಸಿದ ಗುರುವನ್ನು ಕಳೆದುಕೊಂಡು ಬಾಲಕ ಪಟ್ಟ ನೋವು ಅಷ್ಟಿಷ್ಟಲ್ಲ. ಅವರ ಸಮಾಧಿ ಮುಂದೆ ನಿಂತು ಕಣ್ಣೀರು ಸುರಿಸುತ್ತಾ ಪಿಟಿಲು ನುಡಿಸಿದ. ಈತನ ಜತೆ ಪಿಟಿಲು ವಿದ್ಯಾರ್ಥಿಗಳೂ ಜತೆಯಾದರು.

ವೃತ್ತಿಪರ ಛಾಯಾಗ್ರಾಹಕರೊಬ್ಬರು ಸೆರೆಹಿಡಿದ ಈ ಫೋಟೋವನ್ನು ಬ್ರೆಜಿಲ್‌ನ ಪ್ರಸಿದ್ಧ ದಿನಪತ್ರಿಕೆಯಲ್ಲಿಎಂಬ ಶೀರ್ಷಿಕೆಯಡಿ ಪ್ರಕಟಿಸಲಾಗಿತ್ತು. ಈ ಚಿತ್ರ ಇದೀಗ ವಿಶ್ವಾದ್ಯಂತ ವೈರಲ್‌ ಆಗಿಬಿಟ್ಟಿತು. ಇದೀಗ ಸಾಮಾಜಿಕ ಜಾಲತಾಣದ ಬಹಳ ಸಕ್ರಿಯವಾಗಿರುವ ಈ ಹೊತ್ತಿನಲ್ಲಿ ಪುನಃ 12 ವರ್ಷಗಳ ಬಳಿಕ ಮತ್ತೆ ಈ ಚಿತ್ರ ವೈರಲ್‌ ಆಗಿದೆ. ಆದರೆ ಈ ಬಾಲಕನ ಇಂದಿನ ಸ್ಥಿತಿ ಹೇಗಿದೆ ಎಂಬ ಬಗ್ಗೆ ಮಾತ್ರ ಯಾರಿಗೂ ಅರಿವಿಲ್ಲ. ಆದರೆ ತೀರಾ ಅನಾರೋಗ್ಯಪೀಡಿತನಾಗಿರುವ ಬಾಲಕ ಬದುಕಿಲ್ಲ ಎಂದೇ ಹೇಳಲಾಗುತ್ತಿದ್ದರೂ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನನ್ಗೆ ಯಾವುದೇ ಯೋಚನೆ ಇಲ್ಲ ಯಾಕಂದ್ರೆ..| Vishnu Smaraka | Bharathi Vishnuvardhan | Speed News Kannada

Fri Dec 31 , 2021
ನನ್ಗೆ ಯಾವುದೇ ಯೋಚನೆ ಇಲ್ಲ ಯಾಕಂದ್ರೆ..| Vishnu Smaraka | Bharathi Vishnuvardhan | Speed News Kannada Please follow and like us:

Advertisement

Wordpress Social Share Plugin powered by Ultimatelysocial