ನವದೆಹಲಿ:ಅನಾರೋಗ್ಯದ ಲಕ್ಷಣಗಳಿರುವವರು ರೈಲು ಸಂಚಾರ ಮಾಡಬೇಡಿ ಎಂದು ರೈಲ್ವೆ ಇಲಾಖೆ ಆದೇಶಿಸಿದೆ. ಲಾಕ್ಡೌನ್ನಿಂದಾಗಿ ದೇಶದ ವಿವಿಧೆಡೆ ಸಿಲುಕಿರುವ ವಲಸಿಗರನ್ನು ಮರಳಿ ತಮ್ಮ ಊರುಗಳಿಗೆ ಕಳುಹಿಸಲು ಭಾರತೀಯ ರೈಲ್ವೆ ದೇಶಾದ್ಯಂತ ಪ್ರತಿದಿನ ಶ್ರಮಿಕ್ ವಿಶೇಷ ರೈಲು ವ್ಯವಸ್ಥೆ ಮಾಡಿದೆ. ಆದರೆ ರೈಲು ಪ್ರಯಾಣ ಮಾಡುತ್ತಿರುವ ಕೆಲವರಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಅವಧಿಯಲ್ಲಿಯೇ ಅನಾರೋಗ್ಯದ ಲಕ್ಷಣಗಳು ಕಂಡುಬಂದಿದ್ದರೂ ತಮ್ಮ ಊರು ತಲುಪಬೇಕೆಂಬ ಆತುರದಲ್ಲಿ ರೈಲು ಸಂಚಾರ ಮಾಡುತ್ತಿದ್ದಾರೆ. ಮೊದಲೇ ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಂಡಿದ್ದಾಗ್ಯೂ ಪ್ರಯಾಣ ಮುಂದುವರಿಸಿದಾಗ ದುರದೃಷ್ಟವಶಾತ್ ಕೆಲವು ಸಾವು ಸಂಭವಿಸಿದ ಘಟನೆಗಳೂ ನಡೆದಿವೆ. ದುರ್ಬಲ ಆರೋಗ್ಯ ಹೊಂದಿದವರನ್ನು ಕೋವಿಡ್- 19 ನಿಂದ ಪಾರು ಮಾಡುವ ನಿಟ್ಟಿನಲ್ಲಿ ರೈಲ್ವೆ ಸಚಿವಾಲಯ ಒಂದು ಆದೇಶ ಹೊರಡಿಸಿದೆ. ಸಹ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು (ಉದಾ: ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು, ಕ್ಯಾನ್ಸರ್, ರೋಗನಿರೋಧಕ ಶಕ್ತಿಯ ಕೊರತೆಯ ಪರಿಸ್ಥಿತಿ ಇರುವವರು), ಗರ್ಭಿಣಿಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ತೀರ ಅಗತ್ಯ ಸಂದರ್ಭ ಹೊರತುಪಡಿಸಿ ರೈಲ್ವೆ ಪ್ರಯಾಣ ಮಾಡಬಾರದು ಎಂದು ರೈಲ್ವೆ ಸಚಿವಾಲಯ ಮನವಿ ಮಾಡಿದೆ.
ರೈಲ್ವೆ ಇಲಾಖೆಯ ಮಹತ್ವದ ಸೂಚನೆ

Please follow and like us: