ಗ್ರಾಮಲೆಕ್ಕಿಗ ಹುದ್ದೆಯನ್ನು ಗ್ರಾಮ ಆಡಳಿತ ಅಧಿಕಾರಿ ಎಂದು ಪುನರ್ ಪದನಾಮೀಕರ !

ಬೆಂಗಳೂರು, ಫೆಬ್ರವರಿ 26;ಸರ್ಕಾರ ಕಂದಾಯ ಇಲಾಖೆಯಲ್ಲಿನ ಗ್ರಾಮಲೆಕ್ಕಿಗ ಹುದ್ದೆಯನ್ನು ಗ್ರಾಮ ಆಡಳಿತ ಅಧಿಕಾರಿ (Village Administrative Officer) ಎಂದು ಪುನರ್ ಪದನಾಮೀಕರಿಸುವ ಕುರಿತು ಅಧಿಕೃತ ಆದೇಶ ಹೊರಡಿಸಿದೆ.

ಈ ಕುರಿತು ಕರ್ನಾಟಕ ರಾಜ್ಯಪತ್ರದಲ್ಲಿಯೂ ಆದೇಶಿಸಲಾಗಿದೆ. ಹುದ್ದೆಯ ಪದನಾಮ ಮಾತ್ರ ಬದಲಾವಣೆಯಾಗಿದೆ. ನೇಮಕಾತಿ ವಿಧಾನ ಮತ್ತು ವೇತನ ಶ್ರೇಣಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರಾಜ್ಯಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.

ಕಂದಾಯ ಸಚಿವರ ಟಿಪ್ಪಣಿ, ಪ್ರಾದೇಶಿಕ ಆಯುಕ್ತರು ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ವಿಭಾಗ ಇವರ 14/10/2022ರ ಪತ್ರ ಸಂಖ್ಯೆಯ ಅನ್ವಯ ಗ್ರಾಮಲೆಕ್ಕಿಗ ಹುದ್ದೆಯನ್ನು ಗ್ರಾಮ ಆಡಳಿತ ಅಧಿಕಾರಿ ಎಂದು ಬದಲಾವಣೆ ಮಾಡಲಾಗಿದೆ. ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ (ಸೇವೆಗಳು- 2) ಹರೀಶ್ ಈ ಕುರಿತು ಆದೇಶ ಹೊರಡಿಸಿದ್ದಾರೆ.

ಸಚಿವರಿಂದ ಸ್ವೀಕೃತವಾದ ಟಿಪ್ಪಣಿಯಲ್ಲಿ ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರು ಪದನಾಮವನ್ನು ಗ್ರಾಮ ಆಡಳಿತ ಅಧಿಕಾರಿ ಎಂದು ಬದಲಾಯಿಸುವ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದ್ದರು. ಅದರಂತೆ, ಎಲ್ಲಾ ಪ್ರಾದೇಶಿಕ ಆಯುಕ್ತರಿಗೆ ಪದನಾಮವನ್ನು ಬದಲಾವಣೆ ಮಾಡುವ ಸಂಬಂಧ ಅಭಿಪ್ರಾಯ ನೀಡುವಂತೆ ಕೋರಲಾಗಿತ್ತು. ನಾಲ್ಕು ಪ್ರಾದೇಶಿಕ ಆಯುಕ್ತರುಗಳು ಗ್ರಾಮಲೆಕ್ಕಿಗರು ಎಂಬ ಪದನಾಮವನ್ನು ಗ್ರಾಮ ಆಡಳಿತ ಅಧಿಕಾರಿ ಎಂದು ಬದಲಾಯಿಸಬಹುದೆಂದು ವರದಿ ಸಲ್ಲಿಸಿದ್ದರು.

ಈ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಸರ್ಕಾರ ಈ ಕುರಿತು ಅಧಿಕೃತ ಆದೇಶವನ್ನು ಹೊರಡಿಸಿದೆ. ಅದನ್ನು ರಾಜ್ಯಪತ್ರದಲ್ಲಿ ಸಹ ಪ್ರಕಟಿಸಲಾಗಿದೆ. ದಿನಾಂಕ 6/12/2022ರ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯಲ್ಲಿನ ಗ್ರಾಮಲೆಕ್ಕಿಗರ ಹುದ್ದೆಯ ವೇತನ ಶ್ರೇಣಿ, ನೇಮಕಾತಿ ವಿಧಾನ ಅಥವಾ ಕರ್ತವ್ಯ ಮತ್ತು ಜವಾಬ್ದಾರಿಗಳಲ್ಲಿ ಯಾವುದೇ ಬದಲಾವಣೆ ಇಲ್ಲದೇ ಗ್ರಾಮಲೆಕ್ಕಿಗರು (Village Accountant) ಎಂಬ ಪದನಾಮವನ್ನು ಗ್ರಾಮ ಆಡಳಿತ ಅಧಿಕಾರಿ (Village Administrative Officer) ಎಂದು ಮರು ಪದನಾಮೀಕರಿಸಿ ಆದೇಶ ಹೊರಡಿಸಲಾಗಿದೆ.

ಗ್ರಾಮ ಲೆಕ್ಕಿಗ ಕಂದಾಯ ಇಲಾಖೆಯ ಯೋಜನೆಗಳನ್ನು ಗ್ರಾಮ ಮಟ್ಟಕ್ಕೆ ತಲುಪಿಸುವ ಮಹತ್ತರವಾದ ಹುದ್ದೆಯಾಗಿದೆ. ಈ ಹುದ್ದೆ ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಗ್ರಾಮ ಮಟ್ಟದಲ್ಲಿರುವ ಸರ್ಕಾರದ ಅಧಿಕಾರಿ ಎಂದರೆ ಗ್ರಾಮ ಲೆಕ್ಕಿಗ. ಸದರಿ ಪದನಾಮ ಬದಲಾವಣೆಯ ಪ್ರಸ್ತಾವನೆಯನ್ನು ಕಂದಾಯ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಗ್ರಾಮಲೆಕ್ಕಿಗರ ಹುದ್ದೆಗೆ ಅನ್ವಯಿಸುವಂತೆ ಸೂಕ್ತ ತಿದ್ದುಪಡಿ ತರಲು ಪ್ರತ್ಯೇಕವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಗ್ರಾಮ ಲೆಕ್ಕಿಗರ ಹುದ್ದೆಯನ್ನು ಪ್ರಸ್ತುತ ಕರ್ನಾಟಕ ಜನರಲ್ ಸರ್ವೀಸಸ್ (Revenue Subordinate Branch) (Cadre & Recruitment)(ತಿದ್ದುಪಡಿ) ನಿಯಮಗಳು 2008 ಮತ್ತು 2009 ಹಾಗೂ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ಪ್ರಕಾರ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಚನೆ ಮಾಡಿರುವ ಸಮಿತಿಯು ಈ ನೇಮಕಾತಿಯನ್ನು ನೋಡಿಕೊಳ್ಳುತ್ತದೆ. ಜಿಲ್ಲಾಧಿಕಾರಿಗಳ ಕಚೇರಿ ಮೂಲಕವೇ ನೇಮಕಾತಿ ಅಧಿಸೂಚನೆ ಪ್ರಕಟವಾಗುತ್ತದೆ.

ಗ್ರಾಮಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಬಗ್ಗೆ ಸಲಹೆ ನೀಡಲು ಸಲಹಾ ಸಮಿತಿ ರಚಿಸಲು ಸರ್ಕಾರ ಆದೇಶ ಹೊರಡಿಸಿದೆ. ಈ ಸಮಿತಿಯ ವರದಿ ಆಧರಿಸಿ ನೇಮಕಾತಿ ನಿಯಮದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ಸದ್ಯ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದವರನ್ನು ಗ್ರಾಮ ಲೆಕ್ಕಿಗರಾಗಿ ನೇಮಕಾತಿ ಮಾಡಲಾಗುತ್ತಿದೆ. ಹೆಚ್ಚಿನ ವಿದ್ಯಾರ್ಹತೆಯನ್ನು ನಿಗದಿ ಮಾಡಿಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಕ್ಟರ್ ಹ್ಯೂಗೋ ಮಹಾನ್ ಕಾದಂಬರಿಕಾರ.

Sun Feb 26 , 2023
ಮಹಾನ್ ಕಾದಂಬರಿಕಾರ ವಿಕ್ಟರ್ ಹ್ಯೂಗೋ ವಿಶ್ವದೆಲ್ಲೆಡೆ ಪರಿಚಿತರು. ಅವರ ಒಂದು ಉದ್ಘೋಷ ಹೀಗಿದೆ”: “The reduction of the univserse to single being, the expansion of single being even to God, this is love.” ಇಡಿಯ ಬ್ರಹ್ಮಾಂಡವನ್ನೇ ಒಂದು ಜೀವಿಯಲ್ಲಿ ಹ್ರಸ್ವ ಮಾಡಬಲ್ಲಂತದ್ದೂ, ಜೀವಿಯೊಂದನ್ನು ದೈವತ್ವಕ್ಕೂ ವಿಸ್ತರಿಸಿಬಲ್ಲಂಥದೂ ಒಂದಿದೆ. ಅದೇ ಪ್ರೀತಿ.’ ಪ್ರಖ್ಯಾತ ಫ್ರೆಂಚ್ ಕವಿ, ನಾಟಕಕಾರ, ಕಾದಂಬರಿಕಾರ, ಪ್ರಬಂಧಕಾರ, ಮಹಾನ್ ಚಿತ್ರಕಾರ, ರಾಜನೀತಿಜ್ಞ, […]

Advertisement

Wordpress Social Share Plugin powered by Ultimatelysocial