ಭ್ರಷ್ಟ ಬಿಜೆಪಿ ಕಿತ್ತೊಗೆಯಲು ನಿರ್ಧಾರ- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಕೊಪ್ಪಳ: ರಾಜ್ಯದಲ್ಲಿ ಧರ್ಮಗಳ ನಡುವೆ ವಿಷ ಬೀಜ ಬಿತ್ತಿ, ಜಾತಿ, ಜಾತಿಗಳ ಮಧ್ಯೆ ಜಗಳ ತಂದು ವ್ಯಾಪಕ ಅಕ್ರಮ ನಡೆಸಿರುವ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನ ಮತ್ತು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಅವರು ಗುರುವಾರ ನಗರದ ಶಿವಶಾಂತವೀರ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನದ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿದರು.

ರಾಜ್ಯದಲ್ಲಿ ದಿನ ಪಿಕ್ ಪಾಕೆಟ್‌ ನಡೆಯುತ್ತಿದೆ, ಪೆಟ್ರೋಲ್ ದಿನಸಿ ದರ ಹೆಚ್ಚಳವಾಗಿದೆ. ಒಳ್ಳೆಯ ಸರ್ಕಾರ ನಾವು ಕೊಟ್ಟರೂ ಜನರಿಗೆ ತಿಳಿಸುವಲ್ಲಿ ವಿಫಲರಾಗಿ ಅಧಿಕಾರ ಕಳೆದುಕೊಂಡಿದ್ದೇವೆ. ಆದರೆ ಕಾರ್ಯಕರ್ತರು ಮನೆ, ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ತಿಳಿಸಿ ಸದಸ್ಯರನ್ನಾಗಿ ಮಾಡಬೇಕು ಎಂದು ಹೇಳಿದರು.

ಸದಸ್ಯತ್ವ ಅಭಿಯಾನದಲ್ಲಿ ಗಂಗಾವತಿ ತಾಲ್ಲೂಕು ಉತ್ತಮ ಸಾಧನೆ ಮಾಡಿದೆ. ಜಿಲ್ಲೆಯ ಸಾಧನೆ ಸಮಾಧಾನಕರವಾಗಿದೆ. ಐದಕ್ಕೆ ಐದು ಕ್ಷೇತ್ರಗಳು ಕಾಂಗ್ರೆಸ್ ಪಾಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ನಿತ್ಯ ಕಲಹ ಸೃಷ್ಟಿಯನ್ನು ಸರ್ಕಾರ ಮಾಡುತ್ತಿದೆ. ಪರಿಣಾಮ ದುಡಿಯುವ ವರ್ಗಕ್ಕೆ ಕೆಲಸ ಇಲ್ಲ. ಆದಾಯವಿಲ್ಲದೇ ಆಕ್ರೋಶಗೊಂಡಿದ್ದಾರೆ. ವಿದ್ಯುತ್ ಸಹ ಕಟ್‌ ಮಾಡುವ ಪರಿಸ್ಥಿತಿಗೆ ತಂದಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಜನವಿರೋಧಿ ಸರ್ಕಾರ ಕಿತ್ತೊಗೆಯಲು ತಾವೆಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಜೇಮ್ಸ್ ಚಿತ್ರ ತೆಗೆಯಲು ವಿರೋಧ: ಕನ್ನಡಿಗರ ಆತ್ಮಸಾಕ್ಷಿ ಸಂಕೇತವಾಗಿರುವ ಪುನೀತ್‌ ರಾಜ್‌ಕುಮಾರ್ ಅವರು ನಟಿಸಿದ ಕೊನೆಯ ಚಿತ್ರವನ್ನು ಚಿತ್ರಮಂದಿರದಿಂದ ಬಿಜೆಪಿ ಕಿತ್ತೊಗೆಯಲು ಹುನ್ನಾರ ನಡೆಸಿದೆ. ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದರು.

ಮೇಕೆದಾಟು ಯೋಜನೆ ಜಾರಿಗೆ ನಡೆದ ಪಾದಯಾತ್ರೆಗೆ ಅಭೂತಪೂರ್ವ ಬೆಂಬಲವನ್ನು ಜನರು ನೀಡಿದ್ದಾರೆ. ಅದೇ ರೀತಿ ಸರ್ಕಾರ ಕಿತ್ತೊಗೆಯಲು ಸಹಕರಿಸಿ ಎಂದರು.

2023ರಲ್ಲಿ ನಡೆಯುವ ಚುನಾವಣೆ ಸ್ವಾಭಿಮಾನಕ್ಕಾಗಿ ನಡೆಯುವ ಚುನಾವಣೆ. ಪಕ್ಷಬೇಧ, ಕಾಲೆಳೆಯು ವುದನ್ನು ಬಿಟ್ಟು, ಭಿನ್ನಾಭಿಪ್ರಾಯವಿಲ್ಲದೆ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ. ಜಿಲ್ಲೆಯಲ್ಲಿ ಪಕ್ಷದ ಅಭಿಮಾನಿಗಳು ಅನೇಕರು ಇದ್ದಾರೆ ಅವರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಪಕ್ಷದ ಜಿಲ್ಲಾ ಅಧ್ಯಕ್ಷ ಶಿವರಾಜ ತಂಗಡಗಿ ಮಾತನಾಡಿ, ಪಕ್ಷವನ್ನು ತಳಮಟ್ಟದಿಂದ ಸದೃಢಗೊಳಿಸಲು ಸದಸ್ಯತ್ವ ಅಭಿಯಾನ ನಮಗೆ ಹೊಸ ಹುಮ್ಮಸ್ಸು ನೀಡಿದೆ. ಎಲ್ಲ ತಾಲ್ಲೂಕಿನ ಕಾರ್ಯಕರ್ತರು 1 ಲಕ್ಷಕ್ಕೂ ಹೆಚ್ಚಿನ ಸದಸ್ಯರನ್ನಾಗಿ ಮಾಡಿದ್ದಾರೆ. ರಾಜ್ಯದಲ್ಲಿ 35 ಲಕ್ಷ ಸದಸ್ಯರ ನೋಂದಣಿಯಾಗಿದೆ ಎಂದು ಜಿಲ್ಲೆಯ ಪ್ರಗತಿ ವರದಿಯನ್ನು ಮಂಡಿಸಿದರು.

ಇಕ್ಬಾಲ್ ಅನ್ಸಾರಿ ಮಾತನಾಡಿ, ಕ್ಷೇತ್ರದ ಜನ ಜಾತಿ, ಧರ್ಮ ನೋಡದೇ ಪಕ್ಷವನ್ನು ಬೆಂಬಲಿಸಿದ್ದಾರೆ. ದುಡಿಯುವ ವರ್ಗ ಮತ್ತು ಬಡವರು ಹೆಚ್ಚಿನ ಸದಸ್ಯತ್ವ ಪಡೆದಿದ್ದಾರೆ. ಇದರಿಂದ ನಮ್ಮ ಸದಸ್ಯತ್ವ ಸಾಧನೆ ಮುಟ್ಟಿದೆ ಎಂದು ಹೇಳಿದರು.

ವೀಕ್ಷಕರಾದ ಸುದರ್ಶನ, ಮೋತಿಲಾಲ ನೆಹರೂ, ಶಾಸಕ ಅಮರೇಗೌಡ ಬಯ್ಯಾಪುರ, ಕೆ.ರಾಘವೇಂದ್ರ ಹಿಟ್ನಾಳ, ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಾಲತಿ ನಾಯಕ ಪಕ್ಷದ ಎಲ್ಲ ಪದಾಧಿಕಾರಿಗಳು, ಮೋರ್ಚಾ ಅಧ್ಯಕ್ಷರು ಇದ್ದರು. ಕೃಷ್ಣ ಇಟ್ಟಂಗಿ ಸ್ವಾಗತಿಸಿದರು.

‘ವ್ಯಾಪಾರ ನಿರ್ಬಂಧ ಅಮಾನವೀಯ’

ಕೊಪ್ಪಳ: ಮುಸ್ಲಿಂ ಸಮುದಾಯದ ಜನರಿಗೆ ಜಾತ್ರೆಗಳಲ್ಲಿ ವ್ಯಾಪಾರ ವಹಿವಾಟು ನಿಷೇಧ ಮಾಡುವುದು ಅವಮಾನವೀಯ ನಡೆ. ಕೆಲವೊಂದು ವ್ಯಾಪಾರ ಕೆಲವರಿಗೆ ಕರಗತವಾಗಿರುತ್ತದೆ. ಅದನ್ನು ಅವರೇ ಮಾಡಬೇಕು. ಇದರಲ್ಲಿ ಧರ್ಮ ತಂದರೆ ತಾತ್ಕಾಲಿಕ ವಿಷ ಬಿತ್ತಿದಂತೆ ಎಂದು ಡಿಕೆಶಿ ಹೇಳಿದರು.

ಹಿಜಾಬ್ ವಿಷಯದಲ್ಲಿ ಪಕ್ಷದ ನಿಲುವು ಸ್ಪಷ್ಟ ಸಂವಿಧಾನ ರಕ್ಷಣೆ ಮಾಡುವುದು. ಎಲ್ಲ ಧರ್ಮದವರ ಹಕ್ಕುಗಳನ್ನು ರಕ್ಷಣೆ ಮಾಡುವುದು ನಮ್ಮ ಕರ್ತ್ಯವ್ಯ. ಮುಸ್ಲಿಂ ಸಮುದಾಯ ಪಕ್ಷದ ಮೇಲೆ ಯಾವುದೇ ಅಸಮಾಧಾನ ಹೊಂದಿಲ್ಲ ಎಂದರು.

ರಾಜ್ಯದಲ್ಲಿ 50 ಲಕ್ಷ ಸದಸ್ಯತ್ವ ಅಭಿಯಾನದ ಗುರಿಯಿದೆ. ಈಗ 30 ಲಕ್ಷ ಸದಸ್ಯರನ್ನಾಗಿ ಮಾಡಿದ್ದೇವೆ. ಇನ್ನೂ ಒಂದುವಾರದಲ್ಲಿ ಗುರಿ ಮುಟ್ಟುವ ಸಾಧನೆ ಮಾಡುತ್ತೇವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸ್ವಿಸ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ನಲ್ಲಿ ನಾಲ್ವರು ಭಾರತೀಯರು!

Fri Mar 25 , 2022
ಡಬಲ್ ಒಲಿಂಪಿಕ್ ಪದಕ ವಿಜೇತೆ ಪಿ ವಿ ಸಿಂಧು ಮತ್ತು ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ವಿಜೇತ ಕಿಡಂಬಿ ಶ್ರೀಕಾಂತ್ ಸೇರಿದಂತೆ ನಾಲ್ವರು ಭಾರತೀಯ ಶಟ್ಲರ್‌ಗಳು ಗುರುವಾರ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರು. ಮಾಜಿ ವಿಶ್ವ ಚಾಂಪಿಯನ್ ಸಿಂಧು ಟರ್ಕಿಯ ನೆಸ್ಲಿಹಾನ್ ಯಿಗಿತ್ ವಿರುದ್ಧ 21-19 21-14 ಅಂತರದಲ್ಲಿ ಜಯಗಳಿಸಿ ಕೊನೆಯ 8 ರೊಳಗೆ ಪ್ರವೇಶಿಸಿದರೆ, ಶ್ರೀಕಾಂತ್ 60 ನೇ ಶ್ರೇಯಾಂಕದ ಫ್ರಾನ್ಸ್‌ನ ಕ್ರಿಸ್ಟೋ ಪೊಪೊವ್ ಅವರ ಉತ್ಸಾಹದ […]

Advertisement

Wordpress Social Share Plugin powered by Ultimatelysocial