ಲವ್ ಮಾಕ್ಟೇಲ್ 2 ವಿಮರ್ಶೆ:ಸಂಗೀತ, ಕ್ಯಾಮೆರಾ ಕೆಲಸ ಹೇಗಿದೆ?

‘ಲವ್ ಮಾಕ್ಟೆಲ್’ ಸಿನಿಮಾ ಇತ್ತೀಚಿನ ಕೆಲವರ್ಷಗಳಲ್ಲಿ ಕನ್ನಡಿಗರಿಂದ ಹೆಚ್ಚು ಪ್ರೀತಿ ಗಳಿಸಿದ ಸಿನಿಮಾಗಳಲ್ಲಿ ಪ್ರಮುಖವಾದುದು. ಆ ಸಿನಿಮಾದ ನಾಸ್ಟಾಲಿಜಿಯಾ ಎಫೆಕ್ಟ್, ಪ್ರೀತಿ, ಹತಾಶೆ, ಭಾವುಕತೆ, ಸಂಸಾರದ ಸುಂದರತೆ, ಹಾಸ್ಯ ಎಲ್ಲವೂ ಪ್ರೇಕ್ಷಕನಿಗೆ ಬಹುವಾಗಿ ಇಷ್ಟವಾಗಿತ್ತು.

ಸಿನಿಮಾದ ನಾಯಕಿ ನಿಧಿ ಅಲಿಯಾಸ್ ನಿಧಿಮಾ ಅಂತೂ ಹಲವರ ಕ್ರಶ್ ಆಗಿಬಿಟ್ಟಿದ್ದಳು. ಇದೀಗ ಅದೇ ಸಿನಿಮಾದ ಎರಡನೇ ಭಾಗವನ್ನು ನಿರ್ದೇಶಕ, ನಟ ಡಾರ್ಲಿಂಗ್ ಕೃಷ್ಣ ಹೊತ್ತು ತಂದಿದ್ದಾರೆ.

‘ಲವ್ ಮಾಕ್ಟೆಲ್’ ಸಿನಿಮಾದಲ್ಲಿ ವರ್ಕೌಟ್ ಆಗಿದ್ದ ಎಲ್ಲ ಅಂಶಗಳನ್ನು ಅವರು ತಮ್ಮ ‘ಲವ್ ಮಾಕ್ಟೆಲ್ 2’ ಸಿನಿಮಾದಲ್ಲಿ ಪುನರ್‌ ಸೃಷ್ಟಿ ಮಾಡಿದ್ದಾರೆ. ಇಲ್ಲಿ ಸಹ ಹಾಸ್ಯವಿದೆ, ಪ್ರೀತಿಯಿದೆ, ಹತಾಶೆಯಿದೆ, ಸುಂದರ ಸಂಗೀತವಿದೆ, ಮುದ್ದು ಮುಖದ ನಾಯಕಿಯರಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಸಿನಿಮಾದಲ್ಲಿಯೂ ನಿಧಿ ಇದ್ದಾಳೆ!

‘ಲವ್ ಮಾಕ್ಟೆಲ್ 2’ ಸಿನಿಮಾ ಆರಂಭವಾಗುವುದೇ ಕಳೆದು ಹೋದ ಆದಿಯನ್ನು ಅವರ ಗೆಳೆಯರು ಹುಡುಕಲು ಮಾಡುವ ಪ್ರಯತ್ನದ ಮೂಲಕ. ಒಟ್ಟಾರೆ ಸಿನಿಮಾದ ಭಾವವೂ ಅದೇ, ನಿಧಿಯ ಪ್ರೀತಿಯಲ್ಲಿ ಕಳೆದು ಹೋದ ಆದಿ, ನಿಧಿ ಅಗಲಿದ ಬಳಿಕ ತನ್ನನ್ನು ತಾನು ಹುಡುಕಿಕೊಳ್ಳುವ ಪ್ರಯತ್ನವೇ ಈ ಸಿನಿಮಾ ಎನ್ನಬಹುದು. ಹಾಗೆಂದು ಬಹಳ ಗಂಭೀರವಾದ ಕತೆ ಹೆಣೆಯಲಾಗಿದೆ ಎಂದೇನೂ ‘ಆತಂಕ’ ಪಡುವಂತಿಲ್ಲ. ‘ಹುಡುಕಾಟ’ದ ಕತೆಯನ್ನು ಸರಳವಾಗಿ, ಹಾಸ್ಯಮಿಶ್ರಿತಗೊಳಿಸಿ ನೋಡುಗರಿಗೆ ಪ್ರೆಸೆಂಟ್ ಮಾಡಿದ್ದಾರೆ ನಿರ್ದೇಶಕ ಡಾರ್ಲಿಂಗ್ ಕೃಷ್ಣ.

ಸಿನಿಮಾದ ಮೊದಲಾರ್ಧ ಹೇಗಿದೆ?
ಸಿನಿಮಾದ ಮೊದಲಾರ್ಧ ಬಹಳ ಸರಳವಾಗಿ ನೋಡಿಸಿಕೊಂಡು ಹೋಗುತ್ತದೆ. ನಿಧಿ ಅಗಲಿದ ಬಳಿಕ ಆದಿಯ ಸ್ಥಿತಿ ಹೇಗಿದೆ? ಅವನ ಗೆಳೆಯರು ಅವನಿಗೆ ಮತ್ತೊಂದು ಮದುವೆ ಮಾಡಲು ಮಾಡುವ ಯತ್ನ ಇನ್ನೂ ಕೆಲವು ಅಂಶಗಳು ಇವೆ. ಇವುಗಳ ನಡುವೆ ಆದಿ, ತನ್ನ ಹಳೆಯ ಪ್ರೇಮಿ ಜೊತೆಗೆ ಹೋಗಲಿದ್ದಾನಾ ಎಂಬ ಅನುಮಾನವನ್ನೂ ನಿರ್ದೇಶಕರು ಮೂಡಿಸುತ್ತಾರೆ. ಮೊದಲಾರ್ಧ ಬಹುತೇಕ ಹಾಸ್ಯವೇ ಡಾಮಿನೇಟ್ ಮಾಡುವ ಕಾರಣ ಬಹಳ ಸಲೀಸಾಗಿ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಸರಿಯಾಗಿ ಮಧ್ಯಂತರದಲ್ಲಿ ಟ್ವಿಸ್ಟ್ ಒಂದು ಬರುತ್ತದೆ.

ಇಂಟರ್ವೆಲ್ ಬಳಿಕ ಸಿನಿಮಾ ಹೇಗಿದೆ?

ಮಧ್ಯಂತರದಲ್ಲಿ ಬರುವ ಟ್ವಿಸ್ಟ್ ತುಸು ಮಟ್ಟಿಗೆ ನಿರೀಕ್ಷಿತವೇ, ಆದರೆ ಮಧ್ಯಂತರದ ಬಳಿಕ ಸಿನಿಮಾದ ಕತೆಗೆ ಹಾಸ್ಯದ ಜೊತೆಗೆ ಭಾವುಕತೆಯೂ ಸೇರಿಕೊಳ್ಳುತ್ತದೆ. ಈ ಸಿನಿಮಾಕ್ಕೆ ಕತೆ ಬರೆದಿರುವ ಡಾರ್ಲಿಂಗ್ ಕೃಷ್ಣ ಬರವಣಿಗೆಯ ವಿಶೇಷತೆಯೆಂದರೆ ಅವರು ಯಾವ ಭಾವವನ್ನು ತೀರ ಒತ್ತಿ ಹೇಳುವ ಪ್ರಯತ್ನ ಮಾಡಿಲ್ಲ ಅಥವಾ ಪ್ರೇಕ್ಷಕರ ಮೇಲೆ ಯಾವುದನ್ನೂ ಹೇರಿಲ್ಲ. ಭಾವುಕತೆ, ಪ್ರೀತಿ, ಹಾಸ್ಯ, ಹತಾಶೆ ಎಲ್ಲವನ್ನೂ ಸಂಯಮದಿಂದ ಪ್ರೇಕ್ಷಕರಿಗೆ ದಾಟಿಸುವ ಯತ್ನ ಮಾಡಿದ್ದಾರೆ. ಎಷ್ಟರ ಮಟ್ಟಿಗೆ ಸಂಯಮಿ ಆಗಿದ್ದಾರೆಂದರೆ ‘ಲವ್ ಮಾಕ್ಟೆಲ್‌’ ಸಿನಿಮಾದಲ್ಲಿ ಉದ್ದೇಶಪೂರ್ವಕವಾಗಿ ತುರುಕಲಾಗಿದ್ದ ಫೈಟ್‌ಗಳು ಈ ಸಿನಿಮಾದಲ್ಲಿ ಕಾಣುವುದಿಲ್ಲ!

ಚಿತ್ರಕತೆ ಹೆಣಿಗೆ ಸೂಕ್ಷ್ಮವಾಗಿಯೂ ಜಾಣತನದಿಂದಲೂ ಕೂಡಿದೆ

ನಿರ್ದೇಶಕರಾಗಿ ಡಾರ್ಲಿಂಗ್ ಕೃಷ್ಣ ಸಿನಿಮಾದ ಪಾತ್ರಗಳನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಬರುವ ಬಹುತೇಕ ಪಾತ್ರಗಳಿಗೆ ಸಮತೋಲಿತ ಸ್ಕ್ರೀನ್ ಸ್ಪೇಸ್ ನೀಡಿದ್ದಾರೆ. ನಾಯಕ-ನಾಯಕಿಯರಷ್ಟೆ ಮೆರೆಯಬೇಕೆಂಬ ಹಪ-ಹಪಿಗೆ ಅವರಿಗಿದ್ದಂತಿಲ್ಲ. ಪೋಷಕ ಪಾತ್ರಗಳಾದ ವಿಜಿ-ಸುಶಿ, ನಾಯಕಿಯ ತಾತ, ಕೆಲಸದ ಮಹಿಳೆ, ಜೋ, ಮ್ಯಾಚ್‌ ಮೇಕರ್ ಯುವತಿ, ಪೊಲೀಸ್ ಅಧಿಕಾರಿ ಎಲ್ಲ ಪಾತ್ರಕ್ಕೂ ಒಳ್ಳೆಯ ಪ್ರಾಮುಖ್ಯತೆ ದೊರೆತಿದೆ. ಡಾರ್ಲಿಂಗ್ ಕೃಷ್ಣರ ಚಿತ್ರಕತೆ ಕೆಲವೆಡೆ ಸೂಕ್ಷ್ಮವೂ, ಜಾಣತನದಿಂದಲೂ ಕೂಡಿದೆ. ಆದಿಯ ಗೆಳೆಯ ಹೇಳುವ ಒಣ ಜೋಕುಗಳು ನಗು ಹುಟ್ಟಿಸದಿದ್ದರೂ ಆ ಜೋಕಿನ ಸರಣಿಗೆ ಕೊನೆಯಲ್ಲೊಂದು ಭಾವುಕ ಟ್ವಿಸ್ಟ್‌ ಒದಗಿಸಿದ್ದಾರೆ. ಕೆಲಸದ ಮಹಿಳೆಯ ಅತಿ ಎನಿಸುವ ಖುಷಿಗೂ ಕಾರಣ ನೀಡುತ್ತಾರೆ. ಮೊದಲ ‘ಲವ್ ಮಾಕ್ಟೆಲ್’ನ ಕೆಲವು ಪಾತ್ರಗಳನ್ನು, ಸನ್ನಿವೇಶಗಳನ್ನು ಈ ಸಿನಿಮಾದಲ್ಲಿ ಜಾಣತನದಿಂದ ಬಳಸಿಕೊಂಡಿದ್ದಾರೆ ಡಾರ್ಲಿಂಗ್ ಕೃಷ್ಣ.

ಸಂಗೀತ, ಕ್ಯಾಮೆರಾ ಕೆಲಸ ಹೇಗಿದೆ?

ಈ ಭಾವುಕ ಕತೆಯನ್ನು ಹೇಳಲು ಡಾರ್ಲಿಂಗ್ ಕೃಷ್ಣ ಆಯ್ದುಕೊಂಡಿರುವ ಲೊಕೇಶನ್‌ಗಳು ಕಣ್ಣಿಗೆ ಹಿತ ಎನಿಸುತ್ತವೆ. ಈ ವಿಷಯದಲ್ಲಿ ಕ್ಯಾಮೆರಾಮನ್‌ ಅಭಿನಂದನಾರ್ಹರು. ‘ಲವ್ ಮಾಕ್ಟೆಲ್‌’ ಗೆಲುವಿನಲ್ಲಿ ಸಂಗೀತವೂ ಪ್ರಧಾನ ಪಾತ್ರ ವಹಿಸಿತ್ತು. ಅದಕ್ಕೆಂದೇ ಡಾರ್ಲಿಂಗ್ ಕೃಷ್ಣ ಅವರು ಈ ಸಿನಿಮಾದಲ್ಲಿ ಸಂಗೀತಕ್ಕೆ ಪ್ರಾಧಾನ್ಯತೆ ನೀಡಿದ್ದು, ಹಾಡುಗಳು ಗುನುಗುವಂತಿವೆ. ಭಾವುಕ ಸನ್ನಿವೇಶದಲ್ಲಿ ಹಾಡಿನ ಬಿಟ್‌ಗಳ ಬಳಕೆ ಸನ್ನಿವೇಶದ ತೀವ್ರತೆಯನ್ನು ಹೆಚ್ಚಿಸಿವೆ. ಸಿನಿಮಾದ ಎಡಿಟಿಂಗ್ ಸಹ ಚೆನ್ನಾಗಿದೆ. ಎಡಿಟಿಂಗ್ ಮೂಲಕವೇ ಪ್ರೇಕ್ಷಕರನ್ನು ಚಕಿತಗೊಳಿಸುವ ಯತ್ನವೂ ಕೆಲವು ದೃಶ್ಯಗಳಲ್ಲಿ ಕಾಣುತ್ತದೆ.

ರಚೆಲ್‌ ಡೇವಿಡ್ ‘ಶೋ ಸ್ಟೀಲರ್’

ನಟನೆಯ ವಿಷಯಕ್ಕೆ ಬರುವುದಾದರೆ ಮೊದಲ ‘ಲವ್ ಮಾಕ್ಟೆಲ್’ ಸಿನಿಮಾದಲ್ಲಿ ನಿಧಿಮಾ ಅಲಿಯಾಸ್ ಮಿಲನಾ ನಾಗರಾಜ್ ‘ಶೋ ಸ್ಟೀಲರ್’ ಆಗಿದ್ದರು. ಈ ಸಿನಿಮಾದಲ್ಲಿಯೂ ಮಿಲನಾ, ನಿಧಿಮಾ ಪಾತ್ರದ ಮೂಲಕ ತಮ್ಮ ಚುರುಕುತನ, ಮುದ್ದು-ಮುದ್ದು ಮ್ಯಾನರಿಸಂನಿಂದ ಇಷ್ಟವಾಗುತ್ತಾರೆ. ಆದರೆ ಸಿನಿಮಾದ ಮತ್ತೊಬ್ಬ ನಾಯಕಿ ಸಿಹಿ ಪಾತ್ರಧಾರಿ ಈ ಸಿನಿಮಾದ ‘ಶೋ ಸ್ಟೀಲರ್’ ಎನ್ನಬಹುದು. ಮುದ್ದು ಮುಖದ ರಚೇಲ್ ಡೇವಿಡ್ ಅಭಿನಯದಲ್ಲಿಯೂ ಪೂರ್ಣ ಅಂಕ ಗಿಟ್ಟಿಸಿಕೊಳ್ಳುತ್ತಾರೆ. ಅವರ ಪಾತ್ರಕ್ಕೆ ಇನ್ನಷ್ಟು ಪ್ರಾಧಾನ್ಯತೆ ಸಿಗಬಾರದಿತ್ತೆ ಎನಿಸುವಷ್ಟು ಪ್ರೇಕ್ಷಕರಿಗೆ ಸಿಹಿ ಪಾತ್ರ ಹತ್ತಿರವಾಗುತ್ತದೆ. ಸಿಹಿ ಪಾತ್ರದ ಮೂಲಕ ಗಮನ ಸೆಳೆದಿರುವ ರಚೆಲ್ ಭವಿಷ್ಯದಲ್ಲಿ ಕನ್ನಡದ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಎನಿಸುತ್ತದೆ. ಮ್ಯಾಚ್‌ ಮೇಕರ್ ಆಗಿ ಕಾಣಿಸಿಕೊಳ್ಳುವ ಸುಶ್ಮಿತಾ ಗೌಡ, ಜೋ ಪಾತ್ರದಲ್ಲಿ ಅಮೃತಾ ಐಯ್ಯಂಗಾರ್, ಅದಿತಿಯಾಗಿ ರಚನಾ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಆದಿಯ ಸ್ನೇಹಿತರ ಪಾತ್ರಧಾರಿಗಳಾದ ಅಭಿಲಾಶ್ ಹಾಗೂ ಖುಷಿ ಅವರ ಕೆಮಿಸ್ಟ್ರಿ ಚೆನ್ನಾಗಿದೆ, ನಟನೆಯೂ ಸೂಪರ್. ನಾಯಕ ಡಾರ್ಲಿಂಗ್ ಕೃಷ್ಣ ಸಂಯಮದಿಂದ ಅಗತ್ಯಕ್ಕೆ ತಕ್ಕಂತೆ ಯಾವುದೇ ಅಬ್ಬರವಿಲ್ಲದೆ ನಟಿಸಿದ್ದಾರೆ.

ಸಿನಿಮಾದಲ್ಲಿ ಕೊರತೆಯೇ ಇಲ್ಲವೇ?

ಸಿನಿಮಾದಲ್ಲಿ ಕೊರತೆಯೇ ಇಲ್ಲವೆಂದೇನೂ ಇಲ್ಲ ಸಿನಿಮಾದಲ್ಲಿ ಕೆಲವೆಡೆ ಉದ್ದೇಶಪೂರ್ವಕವಾಗಿ ಪ್ರೇಕ್ಷಕನ ದಾರಿ ತಪ್ಪಿಸುವ ದೃಶ್ಯಗಳನ್ನು ಸೃಷ್ಟಿಸಲಾಗಿದೆ. ಜೋ ಹಾಗೂ ಆದಿ ಕಾರಿನಲ್ಲಿ ಮುತ್ತಿಟ್ಟುಕೊಳ್ಳುವ ದೃಶ್ಯಕ್ಕೆ ಸಿನಿಮಾದಲ್ಲಿ ಸ್ಪಷ್ಟನೆಯೇ ಇಲ್ಲ. ನಿಧಿಮಾ ಜೊತೆಗಿದ್ದಾಗ ಆದಿ ಆಡುವ ಮಾತುಗಳು ಎದುರಿಗಿದ್ದ ಸ್ನೇಹಿತರಿಗೆ ಕೇಳುವುದಿಲ್ಲವೇ? ಇಂಥ ಕೆಲವು ಅನುಮಾನಗಳು ಹುಟ್ಟುತ್ತವೆ ಆದರೆ ಒಟ್ಟಾರೆ ಸಿನಿಮಾ ನಿಡುವ ಆಪ್ತ ಅನುಭವದ ಮುಂದೆ ಈ ಲಾಜಿಕಲ್ ಪ್ರಶ್ನೆಗಳು ಮಂಕಾಗುತ್ತವೆ. ನಿಮಗೆ ‘ಲವ್ ಮಾಕ್ಟೆಲ್’ ಇಷ್ಟವಾಗಿದ್ದರೆ ‘ಲವ್ ಮಾಕ್ಟೆಲ್ 2’ ಸಹ ಇಷ್ಟವಾಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜನರು ಹೆಚ್ಚು ಹಣ ಖರ್ಚು ಮಾಡಿದ ಆಯಪ್ ಯಾವುದು ಗೊತ್ತಾ?

Mon Feb 28 , 2022
ಈಗ ಬಹುತೇಕ ಎಲ್ಲರ ಬಳಿಯೂ 1 – 2 ಸ್ಮಾರ್ಟ್‌ಫೋನ್‌ಗಳಿರುತ್ತದೆ. ಸ್ಮಾರ್ಟ್‌ಫೋನ್  ಬಳಕೆದಾರರ ಸಂಖ್ಯೆ ಹೆಚ್ಚಿದಂತೆ ಗೂಗಲ್‌ ಪ್ಲೇ ಸ್ಟೋರ್ , ಆಯಪಲ್‌ ಆಯಪ್‌ ಸ್ಟೋರ್‌ಗಳಲ್ಲಿ  ಅಪ್ಲಿಕೇಷನ್‌ ಅಥವಾ ಆಯಪ್‌ಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅದರಲ್ಲಿ ಕೆಲವು ಪ್ರಖ್ಯಾತ ಆಯಪ್‌ಗಳನ್ನು ಕೋಟ್ಯಂತರ ಮಂದಿ ಡೌನ್ಲೋಡ್  ಮಾಡಿರುತ್ತಾರೆ. ಈ ಆಯಪ್‌ಗಳಲ್ಲಿ ಬಹುತೇಕ ಉಚಿತ ಅಪ್ಲಿಕೇಷನ್‌ಗಳು ಇರುತ್ತವೆಯಾದರೂ, ಕೆಲವು ಫೀಚರ್‌ ಅಥವಾ ಇತರೆ ಅಂಶಗಳಿಗಾಗಿ ಅದಕ್ಕೆ ಹಣವನ್ನೂ ನೀಡಬೇಕಾಗಿದೆ. ಇನ್ನು ಕೆಲವು ಅಪ್ಲಿಕೇಷನ್‌ಗಳು ಪೇಯ್ಡ್‌ […]

Advertisement

Wordpress Social Share Plugin powered by Ultimatelysocial