ನಗರದ ನಮ್ಮ ಮೆಟ್ರೋ ನೇರಳೆ ಮಾರ್ಗದ ಪ್ರಯಾಣಿಕರಿಗೆ ಸಿಹಿಸುದ್ದಿ.

ನಗರದ ನಮ್ಮ ಮೆಟ್ರೋ ನೇರಳೆ ಮಾರ್ಗದ ಪ್ರಯಾಣಿಕರಿಗೆ ಸಿಹಿಸುದ್ದಿ. ಐಟಿ ಉದ್ಯೋಗಿಗಳು ವಾಣಿಜ್ಯ ಸಂಚಾರಕ್ಕಾಗಿ ಕಾಯುತ್ತಿರುವ ವೈಟ್‌ಫೀಲ್ಡ್-ಕೆ. ಆರ್. ಪುರ ನಮ್ಮ ಮೆಟ್ರೋ ಮಾರ್ಗದಲ್ಲಿ ಸಿಎಂಆರ್‌ಎಸ್ ಪರೀಕ್ಷೆಗಳು ಆರಂಭವಾಗಿದೆ. ಮಾರ್ಚ್‌ 15ರಿಂದ ಮಾರ್ಗದಲ್ಲಿ ರೈಲುಗಳ ವಾಣಿಜ್ಯ ಸಂಚಾರ ಆರಂಭವಾಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ನಮ್ಮ ಮೆಟ್ರೋ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡುವ ಮೊದಲು ಮೆಟ್ರೊ ರೈಲು ಸುರಕ್ಷತಾ ಆಯುಕ್ತರ ತಂಡವು (ಸಿಎಂಆರ್‌ಎಸ್‌) ಅಂತಿಮ ಹಂತದ ಪರಿಶೀಲನೆ ನಡೆಸಲಿದೆ. ಬುಧವಾರ ಬೆಂಗಳೂರು ನಗರದ ಬಹುನಿರೀಕ್ಷಿತ ಮಾರ್ಗದಲ್ಲಿ ತಂಡದ ಪರಿಶೀಲನೆ ಆರಂಭವಾಗಿದ್ದು, 15-20 ದಿನ ಈ ಪ್ರಕ್ರಿಯೆ ನಡೆಯಲಿದೆ. ಬಳಿಕ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ಸಿಗಲಿದೆ. ಸಿಎಂಆರ್‌ಎಸ್ ತಂಡದ ಸಂಪೂರ್ಣ ಪರೀಕ್ಷೆ ಮುಗಿದ ಬಳಿಕ ವಾಣಿಜ್ಯ ಸಂಚಾರದ ದಿನಾಂಕ ಘೋಷಣೆ ಮಾಡಲಾಗುತ್ತದೆ. ಮಾರ್ಚ್ 2ನೇ ವಾರದಲ್ಲಿ ವೈಟ್‌ಫೀಲ್ಡ್-ಕೆ. ಆರ್. ಪುರ ಮಾರ್ಗ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ. ಕರ್ನಾಟಕ ಸರ್ಕಾರ ಭಾರತ ಪ್ರಧಾನಿ ನರೇಂದ್ರ ಮೋದಿಯಿಂದ ಈ ಮಾರ್ಗವನ್ನು ಲೋಕಾರ್ಪಣೆ ಮಾಡುವ ಕುರಿತು ಚಿಂತನೆ ನಡೆಸಿದೆ. ಮೊದಲ ದಿನವಾದ ಬುಧವಾರ ಅಧಿಕಾರಿಗಳು ಪರಿಶೀಲನೆಗೂ ಮೊದಲು ನಮ್ಮ ಮೆಟ್ರೋ ನಿಲ್ದಾಣದಲ್ಲಿ ಗಿಡ ನೆಟ್ಟರು. ಟ್ರಾಲಿ ಮೂಲಕ ಸಾಗಿದ ಸಿಎಂಆರ್‌ಎಸ್ ಅಧಿಕಾರಿಗಳ ತಂಡ ಹಳಿ ಸೇರಿದಂತೆ ವಿವಿಧ ಪರಿಶೀಲನೆ ಪೂರ್ಣಗೊಳಿಸಿದೆ. ಒಂದು ವಾರದ ಬಳಿಕ ತಂಡ ಬಿಎಂಆರ್‌ಸಿಎಲ್‌ಗೆ ಮಾರ್ಗದಲ್ಲಿ ಯಾವುದಾದರೂ ಬದಲಾವಣೆಗಳು ಇದ್ದರೆ ಮಾಹಿತಿ ನೀಡಲಿದೆ. ಶುಕ್ರವಾರ ಸಂಜೆಯ ತನಕ ಅಧಿಕಾರಿಗಳ ತಂಡದ ಪರಿಶೀಲನೆ ಕಾರ್ಯ ನಡೆಯಲಿದೆ. ಬಳಿಕ ಅಧಿಕಾರಿಗಳು 4 ರಿಂದ 5 ದಿನಗಳ ಕಾಲವನ್ನು ವರದಿ ತಯಾರು ಮಾಡಲು ತೆಗೆದುಕೊಳ್ಳಲಿದ್ದಾರೆ. ರೈಲು ಹಳಿ, ನಿಲ್ದಾಣ, ಸಿಗ್ನಲ್ ವ್ಯವಸ್ಥೆ, ರೈಲುಗಳ ವೇಗ ಸೇರಿದಂತೆ ಯಾವುದಾದರೂ ಅಂಶಗಳಲ್ಲಿ ಬದಲಾವಣೆ ಅಗತ್ಯವಿದ್ದರೆ ವರದಿಯಲ್ಲಿ ಉಲ್ಲೇಖಿಸಲಾಗುತ್ತದೆ. ಈ ವರದಿ ಬಿಎಂಆರ್‌ಸಿಎಲ್ ಕೈ ಸೇರಿದರೆ ಮುಂದಿನ ಹಂತದಲ್ಲಿ ವಾಣಿಜ್ಯ ಸಂಚಾರದ ದಿನಾಂಕ ನಿರ್ಧಾರ ಮಾಡಲಾಗುತ್ತದೆ. ಮಾರ್ಚ್‌ 15ರಿಂದ ಸಂಚಾರ? ಮೆಟ್ರೊ ರೈಲು ಸುರಕ್ಷತಾ ಆಯುಕ್ತರ ತಂಡದ ಅಧಿಕಾರಿಗಳ ಪರಿಶೀಲನೆ ಕಾರ್ಯ 15 ರಿಂದ 20 ದಿನಗಳ ಕಾಲ ನಡೆಯಲಿದೆ. ಈ ಅಂತಿಮ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮಾರ್ಚ್ 15 ರಿಂದ ವೈಟ್‌ಫೀಲ್ಡ್-ಕೆ. ಆರ್.‌ ಪುರ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ವಾಣಿಜ್ಯ ಸಂಚಾರ ಆರಂಭವಾಗಬಹುದು ಎಂದು ಅಂದಾಜಿಸಲಾಗಿದೆ. ವೈಟ್‌ಫೀಲ್ಡ್‌-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗವು. ಬೆಂಗಳೂರು ನಗರದ ಮೊದಲ ನಮ್ಮ ಮೆಟ್ರೋ ಯೋಜನೆಯ ಕೆಂಗೇರಿ-ಬೈಯ್ಯಪ್ಪನಹಳ್ಳಿ ನಡುವಿನ ವಿಸ್ತರಿತ ಮಾರ್ಗವಾಗಿದೆ. ಸದ್ಯ ವೈಟ್‌ಫೀಲ್ಡ್-ಕೆ. ಆರ್. ಪುರ ನಡುವಿನ 13 ಕಿ. ಮೀ. ಮಾರ್ಗದಲ್ಲಿ ಮಾತ್ರ ರೈಲು ಓಡಲಿದೆ. ಈ ಮಾರ್ಗದಲ್ಲಿ 7 ರೈಲುಗಳನ್ನು ಓಡಿಸಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ. ಇದೇ ಮಾರ್ಗದಲ್ಲಿ ಕೆ. ಆರ್. ಪುರ-ಬೈಯ್ಯಪ್ಪನಹಳ್ಳಿ ನಡುವಿನ 2.3 ಕಿ. ಮೀ. ಮಾರ್ಗದಲ್ಲಿ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಬೈಯ್ಯಪ್ಪನಹಳ್ಳಿ ಬಳಿ ರೈಲು ನಿಲ್ದಾಣವೂ ಇರುವುದರಿಂದ ಕಾಮಗಾರಿ ವಿಳಂಬವಾಗತ್ತಿದೆ. ಈ ಮಾರ್ಗದಲ್ಲಿ ಇದೇ ವರ್ಷದ ಜೂನ್‌ನಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಲಿದೆ. ಬೆಂಗಳೂರು ನಗರದ ಸಂಚಾರ ದಟ್ಟಣೆ ಸಮಸ್ಯೆಗೆ ನಮ್ಮ ಮೆಟ್ರೋ ಪರ್ಯಾಯ ಎಂದು ಅಂದಾಜಿಸಲಾಗಿದೆ. ಸದ್ಯ 56 ಕಿ. ಮೀ. ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು ಸಂಚಾರ ನಡೆಸುತ್ತಿವೆ. 2023ರಲ್ಲಿ 38.09 ಕಿ. ಮೀ. ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಲಿದೆ. ಆಗ ಮೆಟ್ರೋ ಜಾಲದ ವ್ಯಾಪ್ತಿ 94.09 ಕಿ. ಮೀ.ಗೆ ಏರಿಕೆಯಾಗಲಿದೆ. 2023ರಲ್ಲಿ ನಮ್ಮ ಮೆಟ್ರೋ ರೈಲು ನಗರದ ಎರಡು ಟೆಕ್ ಹಬ್‌ಗಳಾದ ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುತ್ತದೆ. ವೈಟ್‌ಫೀಲ್ಡ್‌-ಕೆಆರ್ ಪುರ ಮಾರ್ಗ ಈ ವರ್ಷ ನಮ್ಮ ಮೆಟ್ರೋ ವಾಣಿಜ್ಯ ಸಂಚಾರ ಆರಂಭವಾಗಲಿರುವ ಮೊದಲ ಮಾರ್ಗವಾಗಿದೆ. ಈ ವರ್ಷದಲ್ಲಿ ಒಟ್ಟು ಮೂರು ನಮ್ಮ ಮೆಟ್ರೋ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಇದರಿಂದಾಗಿ ನಗರದ ಸಂಚಾರ ದಟ್ಟಣೆ ಸಮಸ್ಯೆ ಸ್ವಲ್ಪ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇದೆ. ನಿಲ್ದಾಣಗಳು ಮೊದಲ ಹಂತದಲ್ಲಿ ಬಿಎಂಆರ್‌ಸಿಎಲ್ ವೈಟ್‌ಫೀಲ್ಡ್‌-ಕೆ. ಆರ್. ಪುರ ನಡುವೆ ಮಾತ್ರ ನಮ್ಮ ಮೆಟ್ರೋ ರೈಲನ್ನು ಓಡಿಸಲಿದೆ. ಈ ಮಾರ್ಗದಲ್ಲಿ ವೈಟ್‌ಫೀಲ್ಡ್‌, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯಸಾಯಿ ಆಸ್ಪತ್ರೆ, ನಲ್ಲೂರುಹಳ್ಳಿ, ಕುಂದಲಹಳ್ಳಿ, ಸೀತಾರಾಮಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್‌ಪಾಳ್ಯ, ಮಹದೇವಪುರ, ಕೆಆರ್ ಪುರ ನಿಲ್ದಾಣಗಳಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತೆರಿಗೆ ಲೆಕ್ಕಾಚಾರ ತಲೆಬಿಸಿಯೇ ಇಲ್ಲಿದೆ ಮಾಹಿತಿ ಮುಂದೆ ಓದಿ...

Thu Feb 23 , 2023
ಪ್ರತಿ ವರ್ಷವೂ ಕೂಡಾ ನಾವು ಆದಾಯ ತೆರಿಗೆಯನ್ನು ಪಾವತಿ ಮಾಡುವುದು ಅತೀ ಮುಖ್ಯವಾಗುತ್ತದೆ. ಸರ್ಕಾರವು ನಮ್ಮ ತೆರಿಗೆಯ ಮೇಲೆಯೇ ನಿಂತಿರುತ್ತದೆ. ನಾವು ಪಾವತಿ ಮಾಡುವ ತೆರಿಗೆಯಿಂದಲೇ ನಾವು ಸರ್ಕಾರದ ಖಜಾನೆಯು ಭರ್ತಿಯಾಗುತ್ತದೆ. ಆದರೆ ತೆರಿಗೆಯನ್ನು ಪಾವತಿ ಮಾಡುವ ಸರಳ ವಿಧಾನ ಯಾವುದು ಎಂಬುವುದನ್ನು ನಾವು ಎಂದಿಗೂ ಹುಡುಕುತ್ತಾ ಇರಬಹುದು?. ಅದಕ್ಕೆ ಸುಲಭವಾದ ದಾರಿಯನ್ನು ಟಿಪ್ಸ್ ಅನ್ನು ನಾವಿಲ್ಲಿ ನೀಡಿದ್ದೇವೆ. ಹೌದು, ತೆರಿಗೆ ಲೆಕ್ಕಾಚಾರ ಮಾಡುವುದು ಕೊಂಚ ಕಷ್ಟ ಹೌದು. ತೆರಿಗೆ […]

Advertisement

Wordpress Social Share Plugin powered by Ultimatelysocial