‘ಸಿರಿಗನ್ನಡಂ ಗೆಲ್ಗೆ’ ಎಂಬುದು ಸಾಮಾನ್ಯವಾಗಿ ಕನ್ನಡ ಪ್ರೇಮಿಗಳು ಪ್ರೀತಿಯಿಂದ ಉಸುರುವ ಮಂತ್ರ.

ಈ ಮಂತ್ರವನ್ನು ಮೊದಲು ಉದ್ಘೋಷಿಸಿದವರು ಕನ್ನಡವನ್ನು ಬೆಳೆಸಿದ ಮಹಾಪುರುಷರಲ್ಲಿ ಪ್ರಮುಖರಾದ ರಾಮಚಂದ್ರ ಹಣಮಂತರಾಯ ದೇಶಪಾಂಡೆ ಅವರು. ಕನ್ನಡದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿದ, ಕನ್ನಡ ಸಾಹಿತ್ಯ ಪರಿಷತ್ತಿಗಿಂತಲೂ 28 ವರ್ಷ ಹಿಂದೆಯೇ ತಲೆ ಎತ್ತಿದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಸ್ಥಾಪನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದವರಾಗಿಯೂ ಅವರು ಪ್ರಸಿದ್ಧರು.ರಾ. ಹ. ದೇಶಪಾಂಡೆ ಅವರು 1861ರ ಮಾರ್ಚ್ 20ರಂದು ಧಾರವಾಡದ ಸಮೀಪದ ನರೇಂದ್ರ ಎಂಬ ಗ್ರಾಮದಲ್ಲಿ ಜನಿಸಿದರು. ಪ್ರಾರಂಭದಿನದಲ್ಲೂ ಓದಿನಲ್ಲಿ ಪ್ರತಿಭಾವಂತರಾಗಿದ್ದ ರಾ.ಹ. ದೇಶಪಾಂಡೆ ಅವರ ಪ್ರಾರಂಭಿಕ ಶಿಕ್ಷಣ ಅವರ ಸ್ವಗ್ರಾಮ ನರೇಂದ್ರ ಮತ್ತು ಧಾರವಾಡಗಳಲ್ಲಿ ನೆರವೇರಿತು. ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಪಡೆದು ಕಾಲೇಜು ಶಿಕ್ಷಣಕ್ಕೆ ಶಿಷ್ಯವೇತನ ಪಡೆದುಕೊಂಡ ರಾ. ಹ. ದೇಶಪಾಂಡೆ ಪುಣೆಯ ಡೆಕ್ಕನ್ ಕಾಲೇಜಿಗೆ ಸೇರಿದರು. ಸಂಸ್ಕೃತ ಮತ್ತು ಇಂಗ್ಲಿಷಿನಲ್ಲಿ ಶ್ರೇಷ್ಠ ಪರಿಣತಿಗಾಗಿ ಅವರಿಗೆ ಅನೇಕ ಬಹುಮಾನಗಳು ಮತ್ತು ವಿದ್ಯಾರ್ಥಿ ವೇತನಗಳು ಸರಾಗವಾಗಿ ದೊರಕಿದವು. 1882ರಲ್ಲಿ ಬಿ.ಎ (ಆನರ್ಸ್) ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಇವರನ್ನು ಅಂದಿನ ಮುಂಬಯಿ ಸರ್ಕಾರ “ದಕ್ಷಿಣಾ ಫೆಲೊ” ಎಂದು ನಿಯಮಿಸಿ ಗೌರವಿಸಿತು. 1884ರಲ್ಲಿ ಎಂ. ಎ. ಪದವಿಯನ್ನು ಬಂಗಾರದ ಪದಕ ಮತ್ತು ಗ್ರಂಥಬಹುಮಾನಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಗಳಿಸಿದರು.ಬೆಳಗಾವಿಯ ಸರ್ದಾರ್ ಹೈಸ್ಕೂಲಿನ ಉಪ ಮುಖ್ಯೋಪಾಧ್ಯಾಯರಾಗಿ, ಕಾರವಾರದಲ್ಲಿ ಉಪ ಶಿಕ್ಷಣ ನಿರೀಕ್ಷರಾಗಿ, ತರಬೇತಿ ಕಾಲೇಜಿನ ಉಪ ಪ್ರಿನ್ಸಿಪಾಲರಾಗಿ, ಪ್ರಿನ್ಸಿಪಾಲರಾಗಿ, ಕನ್ನಡ ಭಾಷಾಂತರಕಾರರಾಗಿ, ಪಠ್ಯಪುಸ್ತಕರೀತಿಯ ಸೇವೆಗಳ ಪರಿಷ್ಕರಣ ಸಮಿತಿಯ ಸದಸ್ಯರಾಗಿ ಹೀಗೆ ಹಲವು ರೀತಿಯ ಸೇವೆ ಸಲ್ಲಿಸಿದರು. 1887ರಿಂದ 1907 ವರ್ಷದ ಇಪ್ಪತ್ತು ವರ್ಷ ಅವಧಿಯಲ್ಲಿ ಅವರಿಗೆ 22 ಬಾರಿ ಹುದ್ದೆಯಿಂದ ಹುದ್ದೆಗೆ ವರ್ಗವಾಗಿ ಊರೂರು ಅಲೆದಾಡುವಂತಾಗಿತ್ತು.ಉತ್ತರ ಕರ್ನಾಟಕದಲ್ಲಿ ಕನ್ನಡದ ಧ್ವನಿಯಾಗುವಂತಹ ಸಂಸ್ಥೆಯೊಂದನ್ನು ಕಟ್ಟಲು ಸತತ ಮೂರು ವರ್ಷಗಳವರೆಗೆ ಪರಿಶ್ರಮಪಟ್ಟ ರಾ.ಹ.ದೇಶಪಾಂಡೆಯವರ ಪರಿಶ್ರಮದ ಫಲಶ್ರುತಿಯಾಗಿ 1890ರ ವರ್ಷದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಸ್ಥಾಪನೆಗೊಂಡಿತು. ರಾ. ಹ. ದೇಶಪಾಂಡೆ ಅವರು ಆ ಸಂಸ್ಥೆಯ ಪ್ರಥಮ ಕಾರ್ಯದರ್ಶಿಗಳಾದರು. ಮೊದಮೊದಲು ತಮ್ಮ ಪತ್ರವ್ಯವಹಾರಗಳಲ್ಲೆಲ್ಲ “ಕನ್ನಡ ಬೆಳೆಯಲಿ” ಎನ್ನುವ ಶೀರ್ಷಕ ಘೋಷವಾಕ್ಯವನ್ನು ಬರೆಯುತ್ತಿದ್ದ ರಾ.ಹ.ದೇಶಪಾಂಡೆಯವರು “ಸಿರಿಗನ್ನಡಂ ಗೆಲ್ಗೆ” ಎನ್ನುವ ಶೀರ್ಷಕ ಘೋಷವಾಕ್ಯವನ್ನು 1893ರಲ್ಲಿ ಪ್ರಾರಂಭಿಸಿದರು. ಈ ಘೋಷವಾಕ್ಯದಿಂದ ತುಂಬಾ ಪ್ರಭಾವಿತರಾದ ಆಚಾರ್ಯ ಬಿ.ಎಂ.ಶ್ರೀಕಂಠಯ್ಯನವರು ಇದನ್ನು ಎಲ್ಲೆಲ್ಲೂ ಜನಪ್ರಿಯಗೊಳಿಸಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡ ನಾಡಿನಲ್ಲಿ ಮೊಟ್ಟ ಮೊದಲ ಬಾರಿಗೆ ಪುಸ್ತಕ ಪಾರಿತೋಷಕ ಯೋಜನೆಯನ್ನು ಪ್ರಾರಂಭಿಸಿತು. 1896ರಲ್ಲಿ ವಾಗ್ಭೂಷಣವೆನ್ನುವ ಸಾಹಿತ್ಯಕ ಹಾಗು ವಿಮರ್ಶಾತ್ಮಕ ಮಾಸಿಕವನ್ನು ಪ್ರಾರಂಭಿಸಿತು. 1907ರಲ್ಲಿ ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನವನ್ನು ಮೊಟ್ಟ ಮೊದಲನೆಯದಾಗಿ ಸಂಘಟಿಸಿತು. ಈ ರೀತಿಯಾಗಿ ರಾ.ಹ.ದೇಶಪಾಂಡೆಯವರ ಶ್ರಮ ಕರ್ನಾಟಕ ವಿದ್ಯಾವರ್ಧಕ ಸಂಘದ ಮೂಲಕ ಉತ್ತರ ಕರ್ನಾಟಕದಲ್ಲಿ ಕನ್ನಡಕ್ಕೆ ವಿಶಿಷ್ಟ ಕಾಯಕಲ್ಪವನ್ನು ನೀಡಿತು.ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಲ್ಲೂ ರಾ.ಹ. ದೇಶಪಾಂಡೆ ಅವರ ಪ್ರಮುಖ ಪಾತ್ರವಿತ್ತು. ಸರ್. ಎಂ. ವಿಶ್ವೇಶ್ವರಯ್ಯನವರ ಆಪ್ತರಾಗಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಯ ಸ್ಥಾಪನೆಗಿರುವ ಅವಶ್ಯಕತೆಯನ್ನು ಅವರಿಗೆ ಮನದಟ್ಟು ಮಾಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ರಚನೆಗಾಗಿ ಕನ್ನಡ ಭಾಷಾಭಿವೃದ್ಧಿಗಾಗಿ 1915 ವರ್ಷದ ಮೇ ತಿಂಗಳಿನಲ್ಲಿ ಮೈಸೂರು ಸರ್ಕಾರದ ವತಿಯಿಂದ ಬೆಂಗಳೂರಿನಲ್ಲಿ ಕರೆದಿದ್ದ ಸಭೆಯಲ್ಲಿ ರಾ.ಹ.ದೇಶಪಾಂಡೆಯವರು ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಅವರು ಕನ್ನಡ ಲೇಖಕರ ಸಂಘವೊಂದನ್ನು ಕಟ್ಟುವ ಸಲಹೆಯನ್ನಿತ್ತರು. ಮರು ವರ್ಷ ಮೈಸೂರು ಸರಕಾರದವರು ಕನ್ನಡ ಸಾಹಿತ್ಯ ಪರಿಷತ್ತಿನ ರಚನೆಗಾಗಿ ಸಂವಿಧಾನ ರಚಿಸುವ ಉಪಸಮಿತಿ ನೇಮಿಸಿದಾಗ ಅದರಲ್ಲಿ ಸಕ್ರಿಯ ಪಾತ್ರ ವಹಿಸಿದರು. 1918ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ನಾಂದಿಯಾದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ರಾ.ಹ. ದೇಶಪಾಂಡೆಯವರು ಉಪಸ್ಥಿತರಿದ್ದರು.ಕರ್ನಾಟಕ ಕಾಲೇಜಿನ ಸ್ಥಾಪನೆಗಾಗಿ ರಾ.ಹ.ದೇಶಪಾಂಡೆಯವರು ಧನಸಂಗ್ರಹಕ್ಕಾಗಿ ಮನೆಮನೆಗೆ, ಊರೂರಿಗೆ ಅಲೆದು ಪರಿಶ್ರಮ ಪಟ್ಟರು. ಮುಂದೆ ಕ್ರಮೇಣದಲ್ಲಿ ಕರ್ನಾಟಕ ಕಾಲೇಜು ಸ್ಥಾಪನೆಗೊಂಡಿತು.ಕನ್ನಡ ಭಾಷೆಯ ವಿವಿಧ ಪ್ರಾಂತ್ಯಗಳು ಒಂದಾಗಬೇಕೆಂಬುದು ಅವರ ಅಂತರಂಗದ ಕನಸಾಗಿತ್ತು. ಅದಕ್ಕಾಗಿ ಎಲ್ಲ ಪ್ರಾಂತ್ಯಗಳ ಕನ್ನಡದ ಅಗ್ರಗಣ್ಯರೊಡನೆ ಅವರು ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು. ಹೀಗಾಗಿ ಕರ್ನಾಟಕ ಏಕೀಕರಣಕ್ಕಾಗಿ ಪರಿಶ್ರಮಪಟ್ಟ ಮೊದಲಿಗರಲ್ಲಿ ರಾ.ಹ.ದೇಶಪಾಂಡೆಯವರೂ ಪ್ರಮುಖರಾದವರು.ಸಾಹಿತ್ಯ ರಚನೆಯಲ್ಲೂ ಮಹತ್ವದ ಕಾರ್ಯಕೈಗೊಂಡ ರಾ.ಹ.ದೇಶಪಾಂಡೆಯವರು ಸುಮಾರು 30 ಚರಿತ್ರಗ್ರಂಥಗಳನ್ನೂ, ಪಠ್ಯಗಳನ್ನೂ ರಚಿಸಿದರು. ಚೈತನ್ಯ ಚರಿತ್ರೆ, ಗ್ರೇಟ ಬ್ರಿಟನ್ ಅಯರ್ಲ್ಯಾಂಡ ದೇಶಗಳ ಸಂಕ್ಷಿಪ್ತ ವರ್ಣನೆ, ಚರಿತ್ರ ಸಂಗ್ರಹ, ಅಕ್ಬರ ಚಕ್ರವರ್ತಿಯ ಚರಿತ್ರೆ, ಮೊಗಲ ಬಾದಶಾಹಿ, ಭರತಖಂಡದ ಧರ್ಮಸ್ಥಾಪಕರೂ ಧರ್ಮಸುಧಾರಕರೂ, ಬಾಯಿಲೆಕ್ಕದ ಮೊದಲನೆಯ ಪುಸ್ತಕ, ಕಥೆಗಳನ್ನೊಳಗೊಂಡ ಬೀರಬಲ್ಲನ ಚರಿತ್ರೆ (ಪೂರ್ವಾರ್ಧ), ಛತ್ರಪತಿ ಶಿವಾಜಿ ಮಹಾರಾಜ, ಕರ್ನಾಟಕ ಸಾಮ್ರಾಜ್ಯ (ಸಂಪುಟ 1, ಸಂಪುಟ 2, ಸಂಪುಟ 3) ಮುಂತಾದ ಕೃತಿಗಳು ಇವುಗಳಲ್ಲಿ ಸೇರಿವೆ.ಅತ್ಯಂತ ಸ್ನೇಹಪರರಾಗಿದ್ದ ರಾ.ಹ.ದೇಶಪಾಂಡೆ ಅವರು ಅಂದಿನ ಕಾಲದ ಎಲ್ಲ ಪ್ರಮುಖ ಸಾಹಿತಿಗಳೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು. ವಿವಿದೆಡೆಗಳಿಂದ ಧಾರವಾಡಕ್ಕೆ ಬರುತ್ತಿದ್ದ ಅನೇಕ ಸಾಹಿತಿಗಳಿಗೆ ದೇಶಪಾಂಡೆಯವರ ಮನೆ ಅತಿಥಿಗೃಹವಾಗಿತ್ತು. ಬಾಲ ಗಂಗಾಧರ ತಿಲಕ ಹಾಗು ಮಹಾತ್ಮಾ ಗಾಂಧಿಯವರ ಪ್ರಭಾವಕ್ಕೆ ಒಳಗಾದ ದೇಶಪಾಂಡೆಯವರು ಖಾದಿ ಹಾಗು ಸ್ವದೇಶಿ ವ್ರತವನ್ನು ಅಖಂಡವಾಗಿ ಪಾಲಿಸಿದರು. ಇವೆಲ್ಲಕ್ಕೂ ಕಲಶಪ್ರಾಯದಂತೆ ಇದ್ದದ್ದು ಅವರ ಕನ್ನಡಪ್ರೇಮ. ಕನ್ನಡ ಪುಸ್ತಕಗಳ ಮಾರಾಟದ ಉದ್ದೇಶದಿಂದ, ತಮ್ಮ ವಿಜ್ಞಾನ ಪದವಿಧರ ಮಗನನ್ನು ಉಪನ್ಯಾಸಕ ಹುದ್ದೆಗೆ ಹೋಗಗೊಡದೆ, ತಮ್ಮ ಮನೆಯಲ್ಲಿಯೆ ಪ್ರಾರಂಭಿಸಿದ ‘ಶಂಕರ ಪುಸ್ತಕ ಭಂಡಾರ’ದಲ್ಲಿ ತೊಡಗಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಯಂತ ಕಾಯ್ಕಿಣಿ ಜೀವನ ಚರಿತ್ರೆ

Fri Feb 18 , 2022
  ಜಯಂತ ಕಾಯ್ಕಿಣಿ ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. ಸಿನಿಮಾ ಸಾಹಿತ್ಯದಲ್ಲಿ ಶೋಭಾಯಮಾನರು. 1955ರ ಜನವರಿ 24ರಂದು ಗೋಕರ್ಣದಲ್ಲಿ ಜನಿಸಿದ ಜಯಂತರು ಕನ್ನಡ ಸಾಹಿತ್ಯಲೋಕದ ಪ್ರಸಿದ್ಧ ಬರಹಗಾರರಾದ ಗೌರೀಶ ಕಾಯ್ಕಿಣಿಯವರ ಮಗ. ಜಯಂತರ ಕತೆ, ಕಾವ್ಯಗಳಲ್ಲಿ ಸೂಕ್ಷ್ಮಸಂವೇದನೆ ಬಹುತೇಕ ಕಾಣಸಿಗುವ ವಸ್ತು. ಇಳಿಸಂಜೆಯ ಬಿಸಿಲು, ಬಿಸಿಲುಕೋಲು, ಪಾತರಗಿತ್ತಿ, ಬಣ್ಣ ಅವರ ಬರಹಗಳಲ್ಲಿ ಸಾಮಾನ್ಯವಾಗಿ ಪ್ರತಿಫಲಿಸುತ್ತಲೇ ಇರುತ್ತವೆ. ಮೆದುಮಾತಿನ, ಮೆಲುದನಿಯ, ಸಜ್ಜನಿಕೆಯ, ಎಲ್ಲರಿಗೂ ಪ್ರಿಯವಾಗುವ ಆಕರ್ಷಣೀಯ ವ್ಯಕ್ತಿತ್ವ ಜಯಂತರದು. ‘ಅನಿಸುತಿದೆ ಯಾಕೋ […]

Advertisement

Wordpress Social Share Plugin powered by Ultimatelysocial