ಪ್ರೊ. ತಾಳ್ತಜೆ ವಸಂತಕುಮಾರ್ ಜಾನಪದ ಮುಂತಾದ ಕ್ಷೇತ್ರಗಳಲ್ಲಿ ಪರಿಣತರಾಗಿ ಹೆಸರಾಗಿದ್ದಾರೆ.

ವಸಂತಕುಮಾರ್ ಕಾಸರಗೋಡಿನ ಬಾಯಾರು ಗ್ರಾಮದ ತಾಳ್ತಜೆಯಲ್ಲಿ 1948ರ ಡಿಸೆಂಬರ್ 27ರಂದು ಜನಿಸಿದರು. ತಂದೆ ಕೃಷ್ಣಭಟ್ಟ. ತಾಯಿ ಲಕ್ಷ್ಮೀಅಮ್ಮ. ಪ್ರಾರಂಭಿಕ ಶಿಕ್ಷಣ ಬಾಯೂರು ಗ್ರಾಮದ ಮುಳಿಗದ್ದೆ ಮತ್ತು ಪ್ರೌಢ ಶಾಲಾ ಶಿಕ್ಷಣ ಉಪ್ಪಿನಂಗಡಿಯ ಬೋರ್ಡ್ ಹೈಸ್ಕೂಲುಗಳಲ್ಲಿ ನಡೆಯಿತು. ಪುತ್ತೂರಿನ ವಿವೇಕಾನಂದ ಕಾಲೇಜಿನಿಂದ ಬಿ.ಎ. ಪದವಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯಲ್ಲಿ ರ್ಯಾಂಕ್ ಮತ್ತು ಸುವರ್ಣ ಪದಕ ಗಳಿಸಿದರು. ಮಂಗಳೂರು ವಿಶ್ವವಿದ್ಯಾಲಯಕ್ಕೆ ‘ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ’ ಮಹಾಪ್ರಬಂಧವನ್ನು ಸಲ್ಲಿಸಿ ಪಿಎಚ್‌.ಡಿ. ಪದವಿ ಗಳಿಸಿದರು.
ಡಾ. ವಸಂತಕುಮಾರ್ ಪುತ್ತೂರಿನಲ್ಲಿ ವಿವೇಕಾನಂದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ನಂತರ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ, ಆ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ 2008ರಲ್ಲಿ ನಿವೃತ್ತರಾದರು.
ವಸಂತಕುಮಾರ್ ಅವರ ಕೃತಿಗಳಲ್ಲಿ ಹರಿಹರನ ರಗಳೆಗಳು, ಸಿಂಗಾರ, ಆಯ್ದಲೇಖನಗಳು, ಮುತ್ತಿನ ಸತ್ತಿಗೆ, ಹಣತೆಗೆ ಹನಿಎಣ್ಣೆ ಮುಂತಾದ ವಿಮರ್ಶಾ ಕೃತಿಗಳು; ಸಾಧನೆ, ಬೇರು ಬಿಳಲು, ಸೋಪಾನ, ಮೊದಲಾದ ಸಂಪಾದಿತ ಕೃತಿಗಳು; ಮರೀಚಿಕೆ ಎಂಬ ಕಾದಂಬರಿ; ಸಾರಸ, ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ, ಸಂಶೋಧನ ರಂಗ, ಬೌದ್ಧಾಯನ ಮೊದಲಾದ ಸಂಶೋಧಿತ ಕೃತಿಗಳು; ರಂ.ಶ್ರೀ. ಮುಗಳಿ, ವಿ.ಕೃ.ಗೋಕಾಕ್, ಶಿವರಾಮಕಾರಂತ, ಟಿ. ಕೇಶವಭಟ್ಟ ಮೊದಲಾದವರ ಜೀವನ-ಸಾಧನೆಯ ಕೃತಿಗಳು ಮುಂತಾದವು ಸೇರಿವೆ.
ತಾಳ್ತಜೆ ವಸಂತಕುಮಾರ್ ಅವರು ಅನೇಕ ರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಚಾರ ಸಂಕಿರಣಗಳು ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ. 1993ರಲ್ಲಿ ಜರ್ಮನಿಯ ಸಾಂಸ್ಕೃತಿಕ ವಿನಿಮಯದಡಿ ಜರ್ಮನಿಯ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ಕನ್ನಡ, ಕರ್ನಾಟಕ ವಿಷಯದಲ್ಲಿ ಅನೇಕ ಉಪನ್ಯಾಸಗಳನ್ನು ನೀಡಿದರು.
ತಾಳ್ತಜೆ ವಸಂತಕುಮಾರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಮಹಾರಾಷ್ಟ್ರ ರಾಜ್ಯ ಘಟಕದ ಸ್ಥಾಪನಾಧ್ಯಕ್ಷರಾಗಿ (1992-95) ಜವಾಬ್ದಾರಿ ನಿರ್ವಹಿಸಿದ್ದರು. 2011ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಅವರಿಗೆ ಸಂದಿತು. ಗೊರೂರು ಸಾಹಿತ್ಯ ಪ್ರಶಸ್ತಿ, ಬೌದ್ಧಾಯನ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕಾಂತಾವರ ಪ್ರಶಸ್ತಿ, ಗುರುನಾರಾಯಣ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಅವರಿಗೆ ಸಂದಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಧಾಮ್ ಸಿಂಗ್ ಸ್ವಾತಂತ್ರ್ಯ ಹೋರಾಟಗಾರ

Sun Jan 1 , 2023
ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಉಧಾಮ್ ಸಿಂಗ್ ಭಾರತೀಯ ಸ್ವಾಭಿಮಾನದ ಪ್ರತೀಕ. ಜಲಿಯನ್ ವಾಲಾಬಾಗ್ ಮಾರಣ ಹೋಮಕ್ಕೆ ಕಾರಣನಾದ ನೀಚ ಬ್ರಿಟಿಷ್ ಅಧಿಕಾರಿ ಡೈಯರ್ ಅನ್ನು ಕೊಂದ‍ ಧೀರನೀತ.‍ ಇಂದು ಅವರ ಜನ್ಮದಿನ. ಉಧಾಮ್ ಸಿಂಗ್ 1899ರ ಡಿಸೆಂಬರ್ 26ರಂದು ಪಂಜಾಬಿನ ಸುನಮ್ ಎಂಬಲ್ಲಿ ಜನಿಸಿದರು. ಇವರ ಬಾಲ್ಯದಲ್ಲೇ ತಂದೆ ನಿಧನರಾದ ಕಾರಣ ಅಮೃತಸರದ ಅನಾಥಾಶ್ರಮದಲ್ಲಿದ್ದು 1918ರಲ್ಲಿ ಮೆಟ್ರಿಕ್ಯುಲೇಷನ್ ಮುಗಿಸಿ 1919ರಲ್ಲಿ ಅನಾಥಾಶ್ರಮದಿಂದ ಹೊರಬಂದರು. 1919ರ ಏಪ್ರಿಲ್ 13ರಂದು ಜಲಿಯನ್ ವಾಲಾಬಾಗಿನ […]

Advertisement

Wordpress Social Share Plugin powered by Ultimatelysocial