ಕೆ. ಎಸ್. ಅಶ್ವಥ್

 
ಕೆ. ಎಸ್. ಅಶ್ವಥ್ ನಮ್ಮ ಚಿತ್ರರಂಗ ಕಂಡ ಅಪೂರ್ವ ಮಹಾನ್ ಕಲಾವಿದ. ಕೆ ಎಸ್ ಅಶ್ವಥ್ ಅಂತಹ ಹಿರಿಯರನ್ನು ನೆನೆಯುವುದು ಮನಸ್ಸಿಗೆ ಅವ್ಯಕ್ತವಾದ ಒಂದು ಸಮಾಧಾನ ನೀಡುವಂತಹ ಸಂಗತಿ.
ಚಲನಚಿತ್ರರಂಗವನ್ನು ನೋಡಿದಾಗ ಇವರು ‘ನಮ್ಮಂತೆಯೇ ಇರುವ ನಮ್ಮ ಪ್ರತಿನಿಧಿ’ ಎಂಬ ಭಾವವನ್ನು ಹುಟ್ಟಿಸುವ ಮಂದಿ ತುಂಬಾ ಕಡಿಮೆ. ಅದು ಚಿತ್ರರಂಗದ ಜನರ ತಪ್ಪು ಎನ್ನುವುದಕ್ಕಿಂತ ಬಣ್ಣದ ಲೋಕವನ್ನು ನೋಡಿದಾಗ ಅದು ನಮ್ಮಲ್ಲಿ ಮೂಡಿಸುವ ಭ್ರಮೆ ಅದಕ್ಕೆ ಕಾರಣವಿರಬೇಕು. ಹೀಗಿದ್ದೂ ಚಿತ್ರರಂಗದಲ್ಲಿ ಎಲ್ಲ ರೀತಿಯಿಂದಲೂ ಸಂಭಾವಿತರು ಎಂಬ ಹೃದ್ಭಾವ ಹುಟ್ಟಿಸಿದ ವಿರಳರಲ್ಲಿ ವಿರಳರು ಕೆ. ಎಸ್. ಅಶ್ವಥ್. ಬಹುಶಃ ಅವರು ನಿರ್ವಹಿಸಿದ ಸಂಭಾವಿತ ಪಾತ್ರಗಳು, ನಮ್ಮಲ್ಲಿ ಅವರ ಬಗ್ಗೆ ಈ ರೀತಿಯ ಸಂಭಾವ್ಯತೆ ಹುಟ್ಟಿರುವುದಕ್ಕೆ ಪ್ರಮುಖ ಕಾರಣ. ಅತೀ ಚೆಲ್ಲು ಚೆಲ್ಲಾದ ಪಾತ್ರಗಳನ್ನಾಗಲಿ, ಕ್ರೂರಿಯಾದ ಪಾತ್ರಗಳನ್ನಾಗಲಿ ನಾವು ಅವರಲ್ಲಿ ಕಂಡದ್ದಿಲ್ಲ. ಹಾಗೆ ಅವರು ಅಂತಹ ಪಾತ್ರ ಮಾಡಿರಬಹುದಾದ ಸಾಧ್ಯತೆ ಇದ್ದರೂ ಅವರು ನಟಿಸಿದ ಮುನ್ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅವನ್ನು ನಾವು ಗಮನಿಸದ ಹಾಗೆ ಎಲ್ಲೆಲ್ಲೆಲ್ಲೋ ಹುದುಗಿಕೊಂಡುಬಿಟ್ಟಿರುತ್ತವೆ. ಅವರು ಎಂದಿಗೂ ಆಪ್ತ ವ್ಯಕ್ತಿಯಾಗಿಯೇ ಕನ್ನಡ ಚಿತ್ರಪ್ರೇಕ್ಷಕರ ಮನನದಲ್ಲಿ ಪ್ರತಿಷ್ಠಾಪಿತರು.
ಬಣ್ಣದ ಲೋಕದಲ್ಲಿನ ಪಾತ್ರಗಳ ಆಚೆಗೆ, ತಾವು ನಡೆಸಿದ ಬದುಕಿನ ರೀತಿಯಲ್ಲಿ ಕೂಡ ಅಶ್ವಥ್ ಸಾಮಾನ್ಯ ಮಧ್ಯಮವರ್ಗದ ಜನರಿಗೆ ಎಲ್ಲ ರೀತಿಯಲ್ಲೂ ಹತ್ತಿರದ ರೀತಿಯವರು. ಅದು ಬದುಕಿನ ಸುಂದರ ಕ್ಷಣಗಳಿಗೆ ಮಾತ್ರ ಅನ್ವಯಿಸದೆ, ಬದುಕಿನ ಏರಿಳಿತಗಳು, ಕಾಳಜಿಗಳು, ಕಾಯಿಲೆಗಳು, ಅನಿಶ್ಚಿತತೆಗಳು, ನೋವುಗಳು, ಭಯ ಭೀತಿಗಳು, ಜವಾಬ್ಧಾರಿಗಳು, ಅಸಹಾಯಕತೆಗಳು ಹೀಗೆ ಪ್ರತಿಯೊಂದರಲ್ಲೂ ಅವರ ಬದುಕು ‘ಮೇಲಕ್ಕೆ ಏರಿ ಬದುಕಲಾಗದ, ಕೆಳಕ್ಕೆ ಇಳಿಯಲೂ ಆಗದ ವಿಚಿತ್ರ ಅಸಹಾಯಕ ಸ್ಥಿತಿಯ ಮಧ್ಯಮ ವರ್ಗದ ಬದುಕಿನದು’.
ನನಗೆ ಅಶ್ವಥ್ ಅವರ ‘ನಮ್ಮ ಮಕ್ಕಳು’ ಚಿತ್ರ ತುಂಬಾ ತುಂಬಾ ಅತ್ಮೀಯವಾದುದು. ಅದು ಅಂದಿನ ದಿನಗಳಲ್ಲಿ ನೂರಾರು ಕನಸುಗಳನ್ನು ಹೊತ್ತು ಬೆಳೆಯುತ್ತಿದ್ದ ಮಕ್ಕಳಾಗಿದ್ದ ನಮ್ಮಂತವರ, ನಮ್ಮನ್ನು ಸಾಕುತ್ತಿದ್ದ ನಮ್ಮ ಪೋಷಕರ, ನಮ್ಮ ಸಂಸ್ಕೃತಿಗಳ, ನಮ್ಮ ಬದುಕಿನ ರೀತಿಯ ಯಥಾವತ್ತಾದ ಚಿತ್ರಣ. ನಾನು ಆ ಚಿತ್ರದಲ್ಲಿ ಕಥೆಗಿಂತ ಮಿಗಿಲಾದ ಆ ಕಥೆಯ ಪಾತ್ರಗಳ ಬಗ್ಗೆ ಹೇಳುತ್ತಿದ್ದೇನೆ. ಆ ನಿಟ್ಟಿನಲ್ಲಿ ನಮಗೆ ಬಹಳ ಹತ್ತಿರವಾದವರು ‘ನಮ್ಮ ಮಕ್ಕಳು’ ಚಿತ್ರದ ಅಶ್ವಥ್, ಪಂಡರಿಬಾಯಿ ಮತ್ತು ಆ ಚಿತ್ರದಲ್ಲಿನ ಅವರ ಮೂರು ಮಕ್ಕಳು.
ಅಶ್ವಥಾ 1925ರ ಮಾರ್ಚ್ 25ರಂದು ಜನಿಸಿದರು. ಅಶ್ವಥ್ ಚಿತ್ರರಂಗದಲ್ಲಿ ಹೆಚ್ಚು ಇದ್ದದ್ದು 1955 ರಿಂದ 1995ರ ಅವಧಿಯಲ್ಲಿ. ಆ ನಂತರ ಜೀವನವನ್ನು ನೆಮ್ಮದಿಯಲ್ಲಿ ಕಳೆಯುತ್ತೇನೆ ಎಂದು ಭಾವಿಸಿಕೊಂಡು ನಿವೃತ್ತರಾದ ಅವರಿಗೆ ಅವರು ಕನಸಿದ್ದ ಜೀವನಕ್ಕಿಂತ ವಿಭಿನ್ನ ವೃದ್ಧಾಪ್ಯದ ಜೀವನ ಸಿಕ್ಕಿದ್ದು ದುರದೃಷ್ಟಕರ. ಆದರೆ ಒಂದು ರೀತಿಯಲ್ಲಿ ಅದೇ ಬದುಕು. ಇಲ್ಲಿ ಅಶ್ವಥ್ ಅವರ ಬಗ್ಗೆ ಮೇಲೆ ಹೇಳಿದ ಕೆಲವು ಮಾತುಗಳಂತೆ ಅವರು ಮಾನವನ ಈ ಬದುಕಿನ ಘಟ್ಟದ ಬಹು ಮುಖ್ಯ ಪ್ರಾತಿನಿಧಿಕರು ಕೂಡಾ ಹೌದು. ಅಶ್ವಥ್ ಅವರು ಚಿತ್ರರಂಗದಲ್ಲಿ ಕ್ರಿಯಾಶೀಲರಾಗಿದ್ದ ದಿನಗಳಲ್ಲಿ, ಅವರನ್ನು ಅವರ ಊರಾದ ನಮ್ಮ ಮೈಸೂರಿನಲ್ಲಿ ನೋಡುವುದು ಕಷ್ಟವೇ ಇರಲಿಲ್ಲ. ಇಂದಿನ ಕಾಲದಲ್ಲಿ ಎಲ್ಲರೂ ಕಾರಿನಲ್ಲಿ ಓಡಾಡುತ್ತಾರೆ. ಅಂದಿನ ದಿನದಲ್ಲಿ ಅಶ್ವಥ್ ಒಂದು ಟಾಂಗಾವನ್ನು ಶಾಶ್ವತವಾಗಿ ಬಾಡಿಗೆಗೆ ಗೊತ್ತು ಮಾಡಿಕೊಂಡಿದ್ದರು. ಅದೊಂದು ಸುಂದರ ಗಾಡಿ. ಅದರಲ್ಲಿ ಅಶ್ವಥ್ ಅವರ ದಿನನಿತ್ಯದ ಪಯಣ. ಹಾಗಾಗಿ ಅವರನ್ನು ಮೈಸೂರಿಗರು ನೋಡಬಹುದಾದದ್ದು ಸರ್ವೇಸಾಮನ್ಯವಾಗಿತ್ತು.
ಅಶ್ವಥ್ ಅವರ ವಿಚಾರದಲ್ಲಿ ನಾನು ಗಮನಿಸಿದ್ದ ಮತ್ತೊಂದು ಅಂಶವೆಂದರೆ ಅಂದಿನ ದಿನಗಳಲ್ಲಿ ನಡೆಯುತ್ತಿದ್ದ ಬಯಲು ಭಾಷಣ ಕಾರ್ಯಕ್ರಮಗಳಲ್ಲಿ, ಅನವಶ್ಯಕವಾದ ಜನಗಳ ಆಕರ್ಷಣೆ ತಮ್ಮೆಡೆಗೆ ಬೀರದಿರಲಿ ಎಂದು ಒಂದು ಮಫ್ಲರ್ ಸುತ್ತಿಕೊಂಡು ಒಂದೆಡೆ ಬಂದು ನಿಲ್ಲುತ್ತಿದ್ದರು. ಮೈಸೂರಿನ ಟೌನ್ ಹಾಲ್ ಮುಂದೆ ಅಂದಿನ ದಿನಗಳಲ್ಲಿ ಅದರಲ್ಲೂ ತುರ್ತು ಪರಿಸ್ಥಿತಿಯ ಆಸುಪಾಸಿನ ದಿನಗಳಲ್ಲಿ ಎಲ್ಲಾ ಭಾಷಣ ಕಾರ್ಯಕ್ರಮಗಳಲ್ಲಿ ಅವರನ್ನು ಕಾಣುವುದು ಸರ್ವೇ ಸಾಮಾನ್ಯವಾಗಿತ್ತು. ಹೀಗೆ ಅಶ್ವಥ್ ತಾವು ಬಣ್ಣದ ಲೋಕದಲ್ಲಿದ್ದರೂ ತಮ್ಮನ್ನು ಸರ್ವೇ ಸಾಮಾನ್ಯನನ್ನಾಗಿರಿಸಿಕೊಂಡಿದ್ದರು.
ನಾವು ಚಿತ್ರ ವಿಮರ್ಶೆಗಳನ್ನು ಓದುವಾಗ ಹಲವು ನಟ ನಟಿಯರ ಅಭಿನಯದ ಬಗ್ಗೆ ಉತ್ತಮವಲ್ಲದ ಮಾತುಗಳನ್ನು ನೋಡುವುದಿದೆ. ಅಂತಹ ಮಾತುಗಳನ್ನು ಅಶ್ವಥ್ ಅವರ ಬಗ್ಗೆ ಕೇಳಿರಲಿಕ್ಕೆ ಸಾಧ್ಯವಿಲ್ಲ. ಅವರು ಅಭಿನಯದಲ್ಲಿ ಅಷ್ಟೊಂದು ಸಹಜರು. ‘ನಾಗರಹಾವು’ ಚಿತ್ರದ ಚಾಮಯ್ಯ ಮೇಷ್ಟ್ರು ಪಾತ್ರದಲ್ಲಿ ಅವರು ಒಂದು ಪವಾಡ ಸದೃಶರಾಗಿದ್ದರು. ಅವರ ಪಾತ್ರ ಅಭಿನಯ ಅಷ್ಟೊಂದು ಪ್ರಭಾವಿ. ಹಾಗಾಗಿ ಅವರು ಚಾಮಯ್ಯ ಮೇಷ್ಟರು ಎಂದು ಅನ್ವರ್ಥವಾಗಿಹೋಗಿದ್ದರು. ಹಾಗೆ ನೋಡಿದರೆ ಅವರ ಅಭಿನಯದಲ್ಲಿ ಅಂತಹ ಪಾತ್ರಗಳು ಅನೇಕವು ಮೂಡಿವೆ. ಆದರೆ ಪುಟ್ಟಣ್ಣ ಕಣಗಾಲರ ಚಿತ್ರಗಳ ಪಾತ್ರಗಳಲ್ಲಿ ಕಲಾವಿದರು ಮಿನುಗುತ್ತಿದ್ದ ಬೆರಗು ವಿಶಿಷ್ಟವಾದದ್ದು. ಆ ವಿಶಿಷ್ಟತೆಯಲ್ಲಿ ಕೆ. ಎಸ್. ಅಶ್ವಥ್ ಅಜರಾಮರರಾಗಿಬಿಟ್ಟರು. ಅಶ್ವಥ್ ಅವರ ಕಸ್ತೂರಿ ನಿವಾಸ, ಮುತ್ತಿನಹಾರ, ಗೆಜ್ಜೆಪೂಜೆ, ಶರಪಂಜರ, ಬಯಲುದಾರಿ, ಉಪಾಸನೆ ಪಾತ್ರಗಳು ಸಹಾ ಅದೇ ಮೆರುಗಿನವು.
ತಂದೆಯಾಗಿ, ಸಹೋದರನಾಗಿ, ಪತಿಯಾಗಿ, ತಾತನಾಗಿ, ನಾರದನಾಗಿ, ಹಳ್ಳಿಗನಾಗಿ, ಪಟ್ಟಣಿಗನಾಗಿ, ಗುರುವಾಗಿ, ಅಧಿಕಾರಿಯಾಗಿ, ಸೇವಕನಾಗಿ, ಋಷಿಯಾಗಿ ಹೀಗೆ ವಿಭಿನ್ನ ನೆಲೆಗಳಲ್ಲಿ ಅವರು ತಮ್ಮ ಪಾತ್ರಗಳಿಗೆ ನೀಡಿದ ಬೆಲೆ ಅಸದೃಶವಾದದ್ದು. ಅವರನ್ನು ನಾವು ನೋಡಿದ ಇಷ್ಟಪಟ್ಟ ಒಂದೆರಡು ಪಾತ್ರಗಳ ನೆಲೆಯಲ್ಲಿ ಅವರ ಅಭಿನಯ ಕಲೆಯನ್ನು ಅವಲೋಕಿಸುವುದಕ್ಕಿಂತ ತಾವು ನಟಿಸಿದ ಪಾತ್ರಗಳಲ್ಲೆಲ್ಲ ಅವರು ತುಂಬಿದ ಸಹಜತೆಯ ಆಳದಲ್ಲಿ ಅವರಿಗೆ ಇದ್ದ ಸಾಮರ್ಥ್ಯ, ಜೀವಂತಿಕೆ, ನಿಷ್ಠೆ ಜೊತೆಗೆ ಇವೆಲ್ಲಕ್ಕೂ ಮಿಗಿಲಾಗಿ ತಮ್ಮನ್ನು ಸಾಮಾನ್ಯನಂತೆ ಕಂಡುಕೊಳ್ಳುವ ವಿಧೇಯತೆ, ಬದುಕಿನ ಜೊತೆ ಹೊಂದಿದ್ದ ಸಾಮೀಪ್ಯತೆ ಇತ್ಯಾದಿಗಳಿಂದ ಅವರನ್ನು ನೋಡುವುದು ಅತ್ಯಂತ ಮಹತ್ವದ್ದೆನಿಸುತ್ತದೆ.
ಅಶ್ವಥ್ ಅವರ ವೈಯಕ್ತಿಕ ಬದುಕನ್ನು ಸೂಕ್ಷ್ಮವಾಗಿ ಗಮನಿಸಿದಾಗ ಒಂದು ಗಹನವಾದ ವಿಚಾರ ವೇದ್ಯವಾಗುತ್ತದೆ. ಒಬ್ಬ ವೃತ್ತಿಪರ ವ್ಯಕ್ತಿ ತಾನು ತನ್ನ ಕಾರ್ಯಕ್ಷೆತ್ರದಿಂದ ನಿವೃತ್ತಿ ಪಡೆದಾಗ ಆತನ ಬದುಕಿನಲ್ಲಿ ಮೂಡುವ ಅನಿಶ್ಚಿತತೆಗಳು ಅಶ್ವಥ್ ಅಂತಹ ಹಲವಾರು ವರ್ಷಗಳು ನಿರಂತರ ಸೇವೆಯಲ್ಲಿದ್ದ ವ್ಯಕ್ತಿಯನ್ನು ಸಹಾ ಕಾಡಿತ್ತು ಎಂದರೆ ಈ ದೇಶದಲ್ಲಿ ಪಿಂಚಣಿ ಎಂಬ ಭದ್ರತೆ ಇಲ್ಲದ ಇತರ ಜನರ ಪಾಡೇನು ಎಂದು ಪ್ರಶ್ನಿಸಿಕೊಳ್ಳುವಂತಾಗುತ್ತದೆ. ಈ ದೇಶದ ಸಾಮಾನ್ಯನ ಬದುಕಿನಲ್ಲಿ ಹಣದುಬ್ಬರ, ಆಡಂಭರದ ಹೈಟೆಕ್ ಎಂಬ ಹೆಸರಿನಲ್ಲಿ ಆರೋಗ್ಯ ಮತ್ತಿತರ ಮೂಲಭೂತ ಅವಶ್ಯಕತೆಗಳಲ್ಲಿ ತುರುಕಿರುವ ಕೈಗೆಟುಕದಂತಿರುವ ಶ್ರೀಮಂತಪರ ಬೆಲೆ ತೆತ್ತುವಿಕೆ’ ಮಾಡಿರುವ ಹಾನಿಗಳು ಸಹಿಸಲಾಸಾಧ್ಯವಾದಂತಹವು. ಇದು ಪರಂಪರಾಗತ ಮೌಲ್ಯ ಇತ್ಯಾದಿಗಳ ಬಗ್ಗೆ ಭೋಳೆ ಬಿಟ್ಟು ನಿಜ ಬದುಕನ್ನು ಕಂಗೆಡಿಸಿ ಕುಳಿತಿರುವ ನಮ್ಮ ಸಾರ್ವಜನಿಕ, ರಾಜಕೀಯ, ಆರ್ಥಿಕವಲಯಗಳು ಸೃಷ್ಟಿಸಿರುವ ದೊಡ್ಡ ಕಂದರವನ್ನು ತೋರುತ್ತದೆ. ನಮ್ಮ ನಿತ್ಯದ ಬದುಕಿನಲ್ಲಿ ಇಂತಹ ದೊಡ್ಡ ಕಂದರವನ್ನು ಇಟ್ಟುಕೊಂಡು ನೀನು ನಿಶ್ಚಿಂತನಾಗಿ ಯೋಗೀಶ್ವರನಾಗು, ಬದುಕಿನಲ್ಲಿ ಆಸೆ, ಭಯ, ಕ್ರೋಧ ಎಲ್ಲಾ ಬಿಟ್ಟು ಬದುಕು ಎಂದು ಪುರಾಣ ಹೇಳುತ್ತದೆ ನಮ್ಮ ವ್ಯವಸ್ಥೆ. ಇದರ ಬಗ್ಗೆ ವ್ಯವಸ್ಥೆ ಏನು ಮಾಡುತ್ತದೋ ಗೊತ್ತಿಲ್ಲ. ಆದರೆ, ವೈಯಕ್ತಿಕವಾಗಿ ನಾವು ಅರಿವನ್ನು ಹೊಂದಿರುವುದು ಅತ್ಯಗತ್ಯ ಎಂಬ ಪಾಠ ಕೂಡ ಅಶ್ವಥ್ ಅವರ ಜೀವನದಲ್ಲಿ ಅಡಗಿದೆ. ಅಶ್ವಥ್ ಅವರು ನಿಧನರಾಗುವ ಮುಂಚೆ ಕಡೇ ಪಕ್ಷ ಒಂದು ದಶಕಕ್ಕೂ ಹೆಚ್ಚು ಕಾಲ ಅಶ್ವಥ್ ಕಷ್ಟದ ಬದುಕನ್ನು ನಡೆಸಿರುವುದು ಸರ್ವವೇದ್ಯ. ಅವರು ದೊಡ್ಡ ಕಲಾವಿದರು, ಅವರಿಗೆ ನಾವು ಬೆಂಬಲವಾಗಿದ್ದೆವು ಎಂದು ತೋರಿಸಿಕೊಳ್ಳಲು ನಮ್ಮ ಸಾಮಾಜಿಕ ರಂಗದ ಜನ ಆಸ್ಥೆ
ಮೂಡಿಸಿಕೊಂಡಿದ್ದು ಅವರು ನಿಧನರಾಗುವ ಕೆಲವು ಮುಂಚಿನ ದಿನಗಳಲ್ಲಿ ಮಾತ್ರ. ಅಶ್ವಥ್ ಅವರಂತೆ ಇನ್ನೂ ಬಹುತೇಕ ಕಲಾವಿದರು, ಸಾಮಾನ್ಯ ಜನ, ಸಾಮಾನ್ಯರಲ್ಲಿ ಸಾಮಾನ್ಯರ ಬಗ್ಗೆ ನಮ್ಮ ಇಂದಿನ ವ್ಯವಸ್ಥೆ ಎಂಬ ಅವ್ಯವಸ್ಥೆ ತೀವ್ರವಾಗಿ ನೋಡುವ ಅಗತ್ಯತೆ ಇದೆ.
ಹೀಗೆ ಕೆ.ಎಸ್. ಅಶ್ವಥ್ ಎಲ್ಲ ರೀತಿಯಲ್ಲೂ ಸಾಮಾನ್ಯರ ಪ್ರತಿನಿಧಿ. ಅಸಾಮಾನ್ಯ ಕಲಾವಿದ. ಅವರು ಎಲ್ಲ ರೀತಿಯಲ್ಲೂ ನಮ್ಮ ಹೃದಯದಲ್ಲಿ ಸ್ಥಾಪಿತರು. ಅವರು ನಿಧನರಾದದ್ದು 2010ರ ಜನವರಿ 18ರಂದು. ಅವರ ನೆನಪು ಅವರ ಜೀವನ ಕಾಲದಲಿದ್ದ ನಮಗೆ ಎಂದೆಂದೂ ಅಮರ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗೀತಾ ನಾಗಭೂಷಣ

Mon Mar 28 , 2022
ಗೀತಾ ನಾಗಭೂಷಣ ಮೊಘಲಾಯಿ ಪರಿಸರದ ಪ್ರಮುಖ ಲೇಖಕಿ ಎಂದು ಪ್ರಖ್ಯಾತರಾದವರು. ಗೀತಾ ನಾಗಭೂಷಣರು ಕಲ್ಬುರ್ಗಿ ಜಿಲ್ಲೆಯ ಹಿಂದುಳಿದ ಪುಟ್ಟ ಹಳ್ಳಿಯಲ್ಲಿ 1942ರ ಮಾರ್ಚ್ 25ರಂದು ಜನಿಸಿದರು. ತಮಗಿದ್ದ ಕಿತ್ತು ತಿನ್ನುವ ಬಡತನ, ಅಸಹಕಾರಕ ಪರಿಸರ, ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸದ ಸಾಮಾಜಿಕ ವ್ಯವಸ್ಥೆ ಇತ್ಯಾದಿಗಳನ್ನೆಲ್ಲಾ ದೃಢಸಂಕಲ್ಪ ಮತ್ತು ಹೋರಾಟದ ಮನೋಭಾವಗಳಿಂದ ದಾಟಿ ತಮ್ಮ ಎಡಬಿಡದ ಪರಿಶ್ರಮದಿಂದ ಬಿ.ಎ, ಬಿ.ಎಡ್, ಎಂ.ಎ ಪದವಿಗಳನ್ನು ಗಳಿಸಿ ಬಹುಕಾಲ ಅಧ್ಯಾಪನ ವೃತ್ತಿಯನ್ನು ನಡೆಸಿದವರು. ಜೊತೆಗೆ […]

Advertisement

Wordpress Social Share Plugin powered by Ultimatelysocial