ಪಂಡಿತ್ ಶಿವಕುಮಾರ್ ಶರ್ಮ | On the birth day of great musician and Santoor Maestro Pandit Sivakumar Sharma |

ಪಂಡಿತ್ ಶಿವಕುಮಾರ್ ಶರ್ಮ
On the birth day of great musician and Santoor Maestro Pandit Sivakumar Sharma
ಸಂತೂರ್ ವಾದ್ಯವೆಂದರೆ ಸ್ವಾಭಾವಿಕವಾಗಿ ಎಂಬಂತೆ ಜನಮಾನಸದಲ್ಲಿ ಮೂಡುವ ಹೆಸರು ಪಂಡಿತ್ ಶಿವಕುಮಾರ್ ಶರ್ಮ.
ಪಂಡಿತ್ ಶಿವಕುಮಾರ್ ಶರ್ಮ ಅವರು 1938ರ ಜನವರಿ 13ರಂದು ಜಮ್ಮುವಿನಲ್ಲಿ ಜನಿಸಿದರು. ತಂದೆ ಪಂಡಿತ್ ಉಮಾದತ್ತ ಶರ್ಮ ಸಂಗೀತಗಾರರಾಗಿದ್ದು ಗಾಯನದ ಜೊತೆಗೆ ತಬಲಾ ಮತ್ತು ಹಾರ್ಮೋನಿಯಂ ನುಡಿಸುವಿಕೆಯಲ್ಲಿ ಸಹಾ ಪ್ರಭುತ್ವ ಸಾಧಿಸಿದ್ದರು. ತಂದೆಯಿಂದ ಐದನೆಯ ವಯಸ್ಸಿನಲ್ಲೇ ಶಿವಕುಮಾರ ಶರ್ಮ ಅವರ ಸಂಗೀತ ಕಲಿಕೆ ಆರಂಭಗೊಂಡಿತು. ಆರಂಭದಲ್ಲಿ ತಬಲಾ ಕಲಿಕೆ ಆರಂಭಿಸಿದ ಶಿವಕುಮಾರ ಶರ್ಮರು ಮುಂದೆ ಗಾಯನದಲ್ಲಿ ತರಬೇತಿ ಪಡೆದರು. ಹನ್ನೆರಡನೇ ವಯಸ್ಸಿನ ವೇಳೆಗೆ ಜಮ್ಮುವಿನ ರೇಡಿಯೋ ಕೇಂದ್ರದಲ್ಲಿ ಅವರ ಗಾಯನ ಪ್ರಸಾರವಾಗಿತ್ತು.
ಅಂದಿನ ದಿನಗಳಲ್ಲಿ ಉಮಾದತ್ತ ಶರ್ಮ ಅವರು ತಂತಿ ವಾದ್ಯಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದಾಗ ಅವರಿಗೆ ನೂರು ತಂತಿಗಳಿದ್ದ ಸಂತೂರ್ ಎಂಬ ಕಾಶ್ಮೀರದ ಪ್ರಾಂತೀಯ ಜನಪದ ವಾದ್ಯ ಅಪಾರವಾಗಿ ಆಸ್ಥೆ ಹುಟ್ಟಿಸಿತು. ಅವರಿಗೆ ತಮ್ಮ ಮಗ ಅದರಲ್ಲಿ ಸಂಗೀತ ನುಡಿಸಬೇಕು ಎಂದು ಆಶಯ ಮೂಡಿತು.
ಶಿವಕುಮಾರ್ ಶರ್ಮರು ತಮ್ಮ 13 ನೆಯ ವಯಸ್ಸಿನಲ್ಲಿ ಸಂತೂರ್ ಬಳಸಲು ಪ್ರಾರಂಭಿಸಿದರು. 1955ರಲ್ಲಿ ಅವರು ಮುಂಬೈನಲ್ಲಿ ಮೊದಲ ಸಾರ್ವಜನಿಕ ಪ್ರದರ್ಶನವನ್ನು ನೀಡಿದರು. ಕಾಲೇಜಿನಲ್ಲಿದ್ದಾಗ ತಬಲಾ ವಾದನ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲಸ್ಥಾನ ಪಡೆದಿದ್ದ ಶಿವಕುಮಾರ್ ಶರ್ಮ ಸಂಗೀತಲೋಕದಲ್ಲಿ ಅಪರಚಿತವೆನಿಸಿದ್ದ ಸಂತೂರ್ ವಾದ್ಯದ ಹಿಂದೆ ಹೊರಟರು.
ಪಂಡಿತ್ ಶಿವಕುಮಾರ್ ಶರ್ಮ ಅವರು 1955ರಲ್ಲಿ ಸ್ವಾಮಿ ಹರಿದಾಸ ಸಮ್ಮೇಳನದಲ್ಲಿ ಮೊದಲ ಬಾರಿಗೆ ಶಾಸ್ತ್ರೀಯವಾಗಿ ಸಂತೂರ್ ವಾದನವನ್ನು ಪ್ರಸ್ತುತಗೊಳಿಸಿ ಜನಮೆಚ್ಚುಗೆ ಪಡೆದರು. ನಂತರದ ಹತ್ತು ವರ್ಷಗಳಲ್ಲಿ ಆ ವಾದ್ಯವನ್ನು ನಾನಾ ರೀತಿಯಲ್ಲಿ ಪರಿಷ್ಕರಿಸಿ ಇದರಲ್ಲಿದ್ದ ನೂರು ತಂತಿಗಳಲ್ಲಿ ಕೆಲವನ್ನು ತೆಗೆದರು. ವಾದ್ಯದ ತಾಂತ್ರಿಕ ರಚನೆಯ ಜೊತೆಗೆ ಅದನ್ನು ನುಡಿಸುವ ತಂತ್ರದಲ್ಲೂ ಕೆಲವು ಬದಲಾವಣೆಗಳನ್ನು ಮಾಡಿದ ಶರ್ಮ, ಈ ವಾದ್ಯದಲ್ಲಿ ನವಿರಾದ ಸಂಗೀತ ಗಮಕಗಳನ್ನೂ ಧ್ವನಿಸುವ ಸಾಮರ್ಥ್ಯವನ್ನು ತಂದು, ಶಾಸ್ತ್ರೀಯ ಸಂಗೀತದ ಮುಖ್ಯವಾಹಿನಿಗೆ ಬರುವಂತೆ ಮಾಡಿದರು.
ಪಂಡಿತ್ ಶಿವಕುಮಾರ್ ಶರ್ಮ ಅವರು ‘ಝಣಕ್ ಝಣಕ್ ಪಾಯಲ್ ಬಾಜೆ’ ಚಿತ್ರದ ಒಂದು ದೃಶ್ಯಕ್ಕಾಗಿ ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದರು. ಅವರ ಮೊದಲ ಆಲ್ಬಮ್ 1960ರಲ್ಲಿ ದಾಖಲಾಯಿತು. 1967ರಲ್ಲಿ, ಅವರು ‘ಕಾಲ್ ಆಫ್ ದಿ ವ್ಯಾಲಿ’ ಎಂಬ ಪರಿಕಲ್ಪನೆಯ ಆಲ್ಬಂ ಅನ್ನು ತಯಾರಿಸಲು ಕೊಳಲಿನ ಇಂಪಿನ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಮತ್ತು ಸಂಗೀತಗಾರ ಬ್ರಿಜ್ ಭೂಷಣ್ ಕಬ್ರಾ ಅವರೊಂದಿಗೆ ಒಂದುಗೂಡಿದರು. ಈ ಆಲ್ಬಂ ಭಾರತೀಯ ಶಾಸ್ತ್ರೀಯ ಸಂಗೀತದ ಬಹು ದೊಡ್ಡ ಯಶಸ್ಸೆನಿಸಿತು.
‘ದಿ ಗ್ಲೋರಿ ಆಫ್ ಸ್ಟ್ರಿಂಗ್ಸ್ – ಸಂತೂರ್’, ‘ವರ್ಷ-ಎ ಹೋಮೇಜ್ ಟು ದಿ ರೇನ್ ಗಾಡ್ಸ್’, ‘ಹಂಡ್ರೆಡ್ ಸ್ಟ್ರಿಂಗ್ಸ್ ಆಫ್ ಸಂತೂರ್’, ‘ಪಯೋನಿಯರ್ ಆಫ್ ಸಂತೂರ್’,’ಸಂಪ್ರದಾಯ’, ‘ವೈಬ್ರಂಟ್ ಮ್ಯೂಸಿಕ್’, ‘ಎಸೆನ್ಷಿಯಲ್ ಈವ್ನಿಂಗ್ ಚಾಂಟ್ಸ್’ , ‘ದಿ ಲಾಸ್ಟ್ ವರ್ಡ್ ಇನ್ ಸಂತೂರ್’, ‘ಸಂಗೀತ್ ಸರ್ತಾಜ್’ ಮುಂತಾದ ಅನೇಕ ಆಲ್ಬಮ್ಗಳ ಮೂಲಕ ಪಂಡಿತ್ ಶಿವಕುಮಾರ್ ಶರ್ಮ ಸಂಗೀತ ಲೋಕದ ವಿಸ್ಮಯವನ್ನು ತರೆದಿಟ್ಟಿದ್ದಾರೆ. ಅವರ ಸಂಗೀತ ಕಛೇರಿಗಳು ವಿಶ್ವದಾದ್ಯಂತ ತಮ್ಮ ಸುನಾದದ ಇಂಪನ್ನು ಚೆಲ್ಲುತ್ತಿವೆ.
ಪಂಡಿತ್ ಶಿವಕುಮಾರ್ ಶರ್ಮ 2002ರಲ್ಲಿ ‘ಜರ್ನಿ ವಿಥ್ ಹಂಡ್ರೆಡ್ ಸ್ಟ್ರಿಂಗ್ಸ್: ಮೈ ಲೈಫ್ ಇನ್ ಮ್ಯೂಸಿಕ್’ ಎಂಬ ಆತ್ಮಚರಿತ್ರೆ ಪ್ರಕಟಿಸಿದರು. ಭಾರತದ ಎಲ್ಲಾ ಮೂಲೆಗಳಿಂದ ಮತ್ತು ಜಪಾನ್, ಜರ್ಮನಿ, ಆಸ್ಟ್ರೇಲಿಯಾ, ಅಮೆರಿಕಾ ಮುಂತಾಗಿ ವಿಶ್ವದ ವಿವಿಧ ಭಾಗಗಳಿಂದ ಅವರ ಬಳಿ ಶಿಷ್ಯತ್ವ ಪಡೆದವರಿದ್ದಾರೆ. ಅವರ ಶಿಷ್ಯರಾದ ಸತೀಶ್ ವ್ಯಾಸ್, ಉಲ್ಲಾಸ್ ಬಾಪಟ್, ಧನಂಜಯ್ ದೈತಣ್ಕರ್, ರಾಹುಲ್ ಶರ್ಮ, ಶ್ರುತಿ ಅಧಿಕಾರಿ ಮುಂತಾದವರು ಸಂತೂರ್ ಯಾನವನ್ನು ಯಶಸ್ವಿಯಾಗಿ ಕೈಗೊಂಡಿದ್ದಾರೆ.
ಸದಾ ಹೊಸದರತ್ತ ತುಡಿಯುವಂತದ್ದು ಶಿವಕುಮಾರ್ ಶರ್ಮ ಅವರ ಮನ. ಅವರಿಗೆ ಕಲೆಯ ಯಾವ ವಿಭಾಗಗಳೂ ವರ್ಜ್ಯವಲ್ಲ. ಹೀಗಾಗಿ ಹೆಸರಾಂತ ಕೊಳಲು ವಾದಕ ಪಂ. ಹರಿಪ್ರಸಾದ್ ಚೌರಾಸಿಯಾ ಅವರ ಜೊತೆಗೂಡಿ ‘ಶಿವ-ಹರಿ’ ಹೆಸರಿನಲ್ಲಿ, ಸಿಲ್ ಸಿಲಾ, ಫಾಸ್ಲೆ, ಚಾಂದನಿ, ಲಮ್ಹೆ, ಡರ್ ಮುಂತಾದ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.
ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಪದ್ಮಶ್ರೀ, ಪದ್ಮವಿಭೂಷಣ, ಅಮೆರಿಕದ ಬಾಲ್ಟಿಮೋರ್ ನಗರದ ಗೌರವಪ್ರಜೆಯಾಗಿ ದೊರೆತ ಸನ್ಮಾನ, ಜಮ್ಮು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ತಾನ್ ಸೇನ್ ಸನ್ಮಾನ ಮುಂತಾದ ಅನೇಕ ಗೌರವಗಳು ಪಂಡಿತ್ ಶಿವಕುಮಾರ್ ಶರ್ಮ ಅವರನ್ನು ಅರಸಿಬಂದಿವೆ.
Please follow and like us:

Leave a Reply

Your email address will not be published. Required fields are marked *

Next Post

ಮಹರ್ಷಿ ಮಹೇಶ್ ಯೋಗಿ | On the birth anniversary of spiritual guru Mahesh Yogi |

Tue Mar 8 , 2022
ಮಹರ್ಷಿ ಮಹೇಶ್ ಯೋಗಿ On the birth anniversary of spiritual guru Mahesh Yogi ಮಹೇಶ್ ಯೋಗಿ ಪಾಶ್ಚಿಮಾತ್ಯರಿಗೆ ಭಾರತೀಯ ಯೋಗಪದ್ಧತಿಯ ಮೂಲಕ ಧ್ಯಾನ ಕಲಿಸಿದವರಲ್ಲಿ ಪ್ರಮುಖರು. ಮಹರ್ಷಿ ಮಹೇಶ್ ಯೋಗಿ ಅವರ ಯೋಗ ಪದ್ಧತಿ ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ. ಮಹರ್ಷಿ ಮಹೇಶ್ ಯೋಗಿ ಅವರು ಹುಟ್ಟಿದ್ದು ಮಧ್ಯಪ್ರದೇಶದ ಜಬಲ್‌ಪುರನಲ್ಲಿ. ಇವರ ಜನ್ಮದಿನಾಂಕದ ಬಗ್ಗೆ ನಿಖರವಾದ ದಾಖಲೆಗಳಿಲ್ಲ. ಕೆಲವೊಂದು ಮೂಲಗಳ ಪ್ರಕಾರ 1911ರಿಂದ 1918ರ ಕಾಲಾವಧಿಯಲ್ಲಿ ಮಹರ್ಷಿಯವರು ಜನಿಸಿರಬಹುದೆಂದು ಊಹಿಸಲಾಗಿದೆ. […]

Advertisement

Wordpress Social Share Plugin powered by Ultimatelysocial