ಯಮುನಾ ಮೂರ್ತಿ | On the birth day of great name in our cultural world Yamuna Murthy Madam |

 
ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಯಮುನಾ ಮೂರ್ತಿ ಅವರದ್ದು ಪ್ರಸಿದ್ಧ ಹೆಸರು. ಆಕಾಶವಾಣಿಯಲ್ಲಿ ನಿರ್ವಹಿಸಿದ್ದ ಹಿರಿಯ ಸೇವೆಯ ಜೊತೆಗೆ ನಾಟ್ಯರಂಗ, ರಂಗಭೂಮಿ, ಕಿರುತೆರೆ, ಸಿನಿಮಾ, ಬರವಣಿಗೆ ಹೀಗೆ ಯಮುನಾ ಮೂರ್ತಿ ಅವರು ಸಾಂಸ್ಕೃತಿಕ ಲೋಕದಲ್ಲಿ ಮೂಡಿಸಿರುವ ಕ್ರಿಯಾಶೀಲತೆಯ ಛಾಪು ಹಿರಿದಾದದ್ದು.
ಯಮುನಾ ಮೂರ್ತಿಯವರು 1933ರ ಮಾರ್ಚ್ 8ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಸಾಂಗ್ಲಿ ಪಾಂಡುರಂಗರಾವ್. ತಾಯಿ ವೆಂಕಮ್ಮ.
ಯಮುನಾ ಮೂರ್ತಿಯವರು ತಮ್ಮ ಏಳನೆಯ ವಯಸ್ಸಿನಲ್ಲಿಯೇ ಭರತ ನಾಟ್ಯವನ್ನೂ, ಹತ್ತನೆಯ ವಯಸ್ಸಿನಲ್ಲೇ ಕಥಕ್ಕಳಿ ನೃತ್ಯವನ್ನೂ ಅಭ್ಯಸಿಸತೊಡಗಿದರು. ಮುಂದೆ ಅವರು ಹಲವಾರು ನೃತ್ಯ ಪ್ರದರ್ಶನಗಳನ್ನು ನೀಡಿದರು. ಓದಿನಲ್ಲೂ ಪರಿಣಿತರಾದ ಅವರು ಬಿ.ಎಸ್ಸಿ ಪದವಿ ಪಡೆದರು.
ತಮ್ಮ ಬಾಲ್ಯದ ದಿನಗಳಲ್ಲೇ ಹವ್ಯಾಸಿ ರಂಗಭೂಮಿಗೂ ಪದಾರ್ಪಣ ಮಾಡಿದ ಯಮುನಾ ಮೂರ್ತಿಯವರು, ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿಯೇ ‘ಛಾಯಾ ಕಲಾವಿದರು’ ಎಂಬ ಹವ್ಯಾಸಿ ರಂಗತಂಡದಲ್ಲಿ, ಕನ್ನಡ ಹವ್ಯಾಸಿ ರಂಗಭೂಮಿಯ ಮೊದಲ ಸ್ತ್ರೀ ಕಲಾವಿದೆ ಎಂಬ ಪ್ರಸಿದ್ಧಿಗೆ ಪಾತ್ರರಾದರು. ಅವರು ಪರ್ವತವಾಣಿ ವಿರಚಿತ ‘ಬಹದ್ದೂರ್ ಗಂಡು’ ನಾಟಕದ ನಾಯಕಿಯಾಗಿ ನೂರೈವತ್ತಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಪಾಲ್ಗೊಂಡರು.
1963ರಲ್ಲಿ ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ ನಾಟಕ ಕಲಾವಿದರಾಗಿ ಪದಾರ್ಪಣ ಮಾಡಿದ ಯಮುನಾ ಮೂರ್ತಿಯವರು, 23 ವರ್ಷ ಕಾಲ ಧಾರವಾಡದಲ್ಲಿ ಮತ್ತು 5 ವರ್ಷ ಕಾಲ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿ, 1991ರ ವರ್ಷದಲ್ಲಿ ಆಕಾಶವಾಣಿಯಲ್ಲಿ ಅಲಂಕರಿಸಿದ್ದ ಸಹಾಯಕ ಕೇಂದ್ರ ನಿರ್ದೇಶಕ ಹುದ್ದೆಯಿಂದ ನಿವೃತ್ತರಾದರು. ಈ ಅವಧಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ನಾಟಕಗಳನ್ನು ಪ್ರಸ್ತುತಪಡಿಸಿ ಅಭಿನಯಿಸುವುದರ ಜೊತೆಗೆ ಸ್ವಯಂ ತಾವೇ ಅರವತ್ತರಷ್ಟು ನಾಟಕಗಳನ್ನು ರಚಿಸಿದ್ದರು. ಅಖಿಲ ಭಾರತ ಮಟ್ಟದ ಆಕಾಶವಾಣಿ ವಾರ್ಷಿಕ ಸ್ಪರ್ಧೆಗಳಲ್ಲಿ ಅವರು ಆರು ಬಾರಿ ಶ್ರೇಷ್ಠ ನಿರ್ದೇಶಕಿ ಗೌರವಕ್ಕೆ ಭಾಜನರಾಗಿದ್ದರು.
ಆಕಾಶವಾಣಿಯಲ್ಲಿ ನಿವೃತ್ತಿ ಹೊಂದಿದ ನಂತರದಲ್ಲಿ ಯಮುನಾ ಮೂರ್ತಿಯವರು ‘ಯಾಮಿನೀ ಕ್ರಿಯೇಷನ್ಸ್’ ಎಂಬ ಸಂಸ್ಥೆ ಸ್ಥಾಪಿಸಿ, ದೂರದರ್ಶನಕ್ಕಾಗಿ ಹಲವಾರು ನಾಟಕಗಳನ್ನು ಪ್ರಸ್ತುತಪಡಿಸಿದ್ದಾರೆ. ಇದರ ಜೊತೆಗೆ ಅವರು ಕಿರುತೆರೆಯ ಹಲವಾರು ಧಾರಾವಾಹಿಗಳಲ್ಲಿಯೂ ಪಾತ್ರ ನಿರ್ವಹಿಸಿದ್ದಾರೆ. ಮಾಯಾಮೃಗ. ಪ್ರತಿಬಿಂಬ, ಚಂದ್ರಬಿಂಬ. ಬೆಳ್ಳಿತೆರೆ. ಪ್ರೇಮದ ಕಾರಂಬರಿ, ಗಾಜಿನ ಗೊಂಬೆ, ಮನೆ ಮನೆ ಕಥೆ, ಸಂಜೆ ಮಲ್ಲಿಗೆ, ಕಲ್ಯಾಣ ಭಾರತಿ, ಯಾವ ಜನ್ಮದ ಮೈತ್ರಿ, ಮೂಡಲ ಮನೆ, ಮುಗಿಲು, ಪ್ರೀತಿ ಇಲ್ಲದ ಮೇಲೆ, ಕಲ್ಯಾಣ ರೇಖೆ, ಮುತ್ತಿನ ತೋರಣ, ಸೂರ್ಯಕಾಂತಿ, ಮೇಘ ಮಂದಾರ, ಪುಣ್ಯಕೋಟಿ ಇವೇ ಮುಂತಾದ ಹಲವಾರು ಧಾರವಾಹಿಗಳಲ್ಲಿ ಅವರು ಪಾತ್ರ ನಿರ್ವಹಿಸಿದ್ದಾರೆ. ಕಿರು ಚಿತ್ರಗಳು ಮತ್ತು ಚಲನಚಿತ್ರಗಳಲ್ಲೂ ಯಮುನಾ ಮೂರ್ತಿಯವರು ಅಭಿನಯಿಸಿದ್ದಾರೆ.
ನಾಟಕ ರಚನೆಯಷ್ಟೇ ಅಲ್ಲದೆ ಇತರ ಬರಹಗಳಲ್ಲೂ ಕೃಷಿ ನಡೆಸಿರುವ ಯಮುನಾ ಮೂರ್ತಿಯವರ ‘ಲಠ್ಠಣಿಗೆ ಪುರಾಣ’ ಎಂಬ ಲಲಿತ ಪ್ರಬಂಧ ಹತ್ತನೇ ತರಗತಿಯ ಪಾಠಗಳಲ್ಲಿ ಸೇರ್ಪಡೆಯಾಗಿತ್ತು. ಬಾನುಲಿ ಬರಹ, ಅಭಿನಯ ಮತ್ತು ನಿರೂಪಣಾ ಶಿಬಿರಗಳಲ್ಲಿ ಯಮುನಾ ಮೂರ್ತಿಯವರ ವಿದ್ವತ್ ಪೂರ್ಣ ಉಪನ್ಯಾಸಗಳು ಅಪಾರ ಮೆಚ್ಚುಗೆ ಗಳಿಸಿವೆ. ಮಕ್ಕಳಿಗೆ ಕಥೆ ಹೇಳುವುದು, ಹಾಸ್ಯೋತ್ಸವ ಮತ್ತು ಹರಟೆಗಳಲ್ಲಿ ಭಾಗವಹಿಸುವುದೂ ಸಹಾ ಯಮುನಾ ಮೂರ್ತಿಯವರ ವೈವಿಧ್ಯಮಯ ಅಭಿರುಚಿಗಳಲ್ಲಿ ಸೇರಿವೆ.
ಯಮುನಾ ಮೂರ್ತಿ ಹಾಗೂ ಎನ್ ವಿ ರಾಮಚಂದ್ರಮೂರ್ತಿ ದಂಪತಿಗಳಿಗೆ ಪೂರ್ಣಿಮಾ ಮತ್ತು ದೀಪಕ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಅವರ ಆತ್ಮಕಥೆ “ಆತ್ಮಕಥೆಯಲ್ಲ, ಆತ್ಮಗಳ ಕಥನ” ಬಿಡುಗಡೆಗೊಂಡಿದೆ. ಕೆಲವು ತಿಂಗಳ
ಹಿಂದೆ ಆಕಾಶವಾಣಿಯ ‘ನುಡಿ ತೇರನೆಳೆದವರು’ ಕಾರ್ಯಕ್ರಮದಲ್ಲಿ ಈಗಲೂ ಅವರಲ್ಲಿರುವ ಉತ್ಸಾಹಭರಿತ ಜೀವನಪ್ರೀತಿಯ ಮಾಧುರ್ಯದ ಧ್ವನಿಯನ್ನು ಕೇಳಿ ಸಂತೋಷವೆನಿಸಿತು.
ಕರ್ನಾಟಕ ನಾಟಕ ಅಕಾಡೆಮಿಯ ಗೌರವವೂ ಸೇರಿದಂತೆ ಹಲವಾರು ಗೌರವಗಳು ಯಮುನಾ ಮೂರ್ತಿಯವರನ್ನು ಅರಸಿ ಬಂದಿವೆ. ನಮ್ಮ ಸಾಂಸ್ಕೃತಿಕ ಲೋಕದ ಹಿರಿಯರಾದ ಯಮುನಾ ಮೂರ್ತಿಯವರಿಗೆ ಗೌರವಯುತವಾದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸೋಣಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಗಾಗ್ಗೆ ಮಾತನಾಡದ ಆಘಾತ ಪ್ರತಿಕ್ರಿಯೆಗಳು:

Sun Mar 20 , 2022
ಶಾಲೆಯಲ್ಲಿ ಮಗುವಾಗಿದ್ದಾಗ ಒಬ್ಬರು ಹಿಂಸೆಗೆ ಒಳಗಾಗಬಹುದಿತ್ತು ಮತ್ತು ತಮ್ಮನ್ನು ತಾವು ಹೇಗೆ ನಿಲ್ಲಬೇಕು ಎಂದು ತಿಳಿದಿರಲಿಲ್ಲ. ಇದು ದೊಡ್ಡವನಾಗಿ ತನ್ನನ್ನು ತಾನೇ ತೆಗೆದುಹಾಕಲು ಮತ್ತು ಪ್ರತ್ಯೇಕಿಸಲು ಕಾರಣವಾಗಬಹುದು ಅಥವಾ ಜನರನ್ನು ನಂಬುವ ವಿಷಯಕ್ಕೆ ಬಂದಾಗ ಹೆಚ್ಚು ಕಾವಲುಗಾರನಾಗಬಹುದು. ಗಮನಿಸದೆ ಹೋಗುವ ಸಾಮಾನ್ಯ ಆಘಾತದ ಇನ್ನೊಂದು ಉದಾಹರಣೆಯೆಂದರೆ, ಯಾರಾದರೂ ಅನಿರೀಕ್ಷಿತವಾಗಿ ತಮ್ಮ ಕೆಲಸವನ್ನು ಕಳೆದುಕೊಂಡಾಗ ಮತ್ತು ಅವರ ಜೀವನವು ಕಷ್ಟಗಳನ್ನು ಉಂಟುಮಾಡುವ ನಾಟಕೀಯ ತಿರುವನ್ನು ತೆಗೆದುಕೊಳ್ಳುತ್ತದೆ. ಈ ರೀತಿಯ ನಷ್ಟವನ್ನು ಹೇಗೆ […]

Advertisement

Wordpress Social Share Plugin powered by Ultimatelysocial