ಅರಳುಮಲ್ಲಿಗೆ ಪಾರ್ಥಸಾರಥಿ |On the birth day of schloar Aralu Malluge Parthasarathy

ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಹರಿದಾಸ ಸಾಹಿತ್ಯವನ್ನು ವಿಶಾಲವ್ಯಾಪ್ತಿಯಲ್ಲಿ ಪಸರಿಸುತ್ತಿರುವ ಮಹನೀಯರಾಗಿದ್ದಾರೆ.
ಪಾರ್ಥಸಾರಥಿಯವರು ದೊಡ್ಡಬಳ್ಳಾಪುರ ಬಳಿಯ ಅರಳುಮಲ್ಲಿಗೆ ಎಂಬ ಹಳ್ಳಿಯಲ್ಲಿ 1948ರ ಮಾರ್ಚ್ 22ರಂದು ಜನಿಸಿದರು. ತಂದೆ ಕೃಷ್ಣಮೂರ್ತಿರಾವ್. ತಾಯಿ ರಂಗಮ್ಮ. ಪಾರ್ಥಸಾರಥಿಯವರ ಪ್ರಾಥಮಿಕ ವಿದ್ಯಾಭ್ಯಾಸ ನಡೆದುದು ಅರಳು ಮಲ್ಲಿಗೆಯಲ್ಲಿ. ಪ್ರೌಢಶಾಲೆಗೆ ಸೇರಿದ್ದು ದೊಡ್ಡಬಳ್ಳಾಪುರದ ಹೈಸ್ಕೂಲಿಗೆ. ಮುಂದೆ ಅವರು ಬೆಂಗಳೂರಿನ ಆರ್.ಸಿ. ಕಾಲೇಜಿನಿಂದ ಬಿ.ಕಾಂ., ಸೆಂಟ್ರಲ್ ಕಾಲೇಜಿನಿಂದ ಎಂ.ಕಾಂ ಪದವಿಗಳಲ್ಲದೆ, ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವವನ್ನು ಗಳಿಸಿದರು. ತಮ್ಮ ಓದು ಮುಗಿಸಿದ ನಂತರ ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನ ಪ್ರಾಧ್ಯಾಪಕರಾಗಿ 1971ರಿಂದ 28 ವರ್ಷಕಾಲ ಸುದೀರ್ಘ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು. ಇಂದೂ ಸಹಾ ಅವರು ಹಲವಾರು ಪ್ರತಿಷ್ಠಿತ ಮ್ಯಾನೇಜ್ ಮೆಂಟ್ ಇನ್ಸ್ಟಿಟ್ಯೂಟುಗಳಂತಹ ಅನೇಕ ಸಂಸ್ಥೆಗಳಿಗೆ ಸಲಹೆಗಾರರಾಗಿ, ಆಡಳಿತ ಮಂಡಳಿಯ ಸದಸ್ಯರಾಗಿ, ಆಹ್ವಾನಿತ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹರಿದಾಸ ಮನೆತನದಿಂದ ಬಂದ ಬಳುವಳಿಯಾಗಿ ಪಾರ್ಥಸಾರಥಿಯವರ ರಕ್ತದಲ್ಲೂ ಹರಿದದ್ದು ಹರಿದಾಸ ಸಾಹಿತ್ಯವೇ. ಕಾಲೇಜಿನಲ್ಲಿ ಓದುತ್ತಿದ್ದಾಗ ನವ್ಯ ಸಾಹಿತ್ಯದ ಸುಳಿಗೆ ಸಿಕ್ಕಿ 1971ರಲ್ಲಿ ‘ಹೂವು ಹಾವು ತೀರ್ಥ’ ಎಂಬ ಕಾದಂಬರಿಯೊಂದನ್ನು ಬರೆದಿದ್ದರಂತೆ. ಸ್ವಾಮೀಜಿಯೊಬ್ಬರು ಲೌಕಿಕ ಸೆಳೆತಕ್ಕೆ ಸಿಕ್ಕಿ ಪೀಠ ತ್ಯಜಿಸಿದ ಕಥಾವಸ್ತುವನ್ನು ಆ ಕಾದಂಬರಿ ಒಳಗೊಂಡಿತ್ತು. ಆದರೆ ಹರಿದಾಸ ಸಾಹಿತ್ಯದತ್ತ ಹರಿದ ಮನಸ್ಸು ‘ಹರಿದಾಸ ಅಕಾಡೆಮಿ’ ಹುಟ್ಟುಹಾಕಲು ಪ್ರೇರಣೆ ಒದಗಿಸಿತು. ಇದರಿಂದ ಹರಿದಾಸ ಸಾಹಿತ್ಯದ ಪ್ರಚಾರ ಕೈಗೊಂಡು, ಆ ಸಲುವಾಗಿ ದೇಶದೆಲ್ಲೆಡೆ ಪರ್ಯಟನೆ ಕೈಗೊಂಡದ್ದೇ ಅಲ್ಲದೆ ಹಲವಾರು ಬಾರಿ ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಇಂಗ್ಲೆಂಡ್, ಸಿಂಗಪೂರ್, ಬಹರಿನ್, ಯುಎಇ , ಕತಾರ್ ಒಳಗೊಂಡಂತೆ ವಿಶ್ವದಾದ್ಯಂತ ಪ್ರವಾಸ ಕೈಗೊಂಡು ಬಳಲಿದ್ದ ಮನಗಳಿಗೆ ಸಾಂತ್ವನ ನೀಡುವಂತಹ ಆಧ್ಯಾತ್ಮಿಕ ಉಪನ್ಯಾಸಗಳನ್ನು ನೀಡುತ್ತಾ ಬಂದಿದ್ದಾರೆ. ಹೀಗೆ ಅವರು ವಿಶ್ವದಾದ್ಯಂತ ನೀಡಿರುವ ಒಟ್ಟಾರೆ ಪ್ರವಚನಗಳ ಸಂಖ್ಯೆ 5000ವನ್ನು ಮೀರಿವೆ.
ಅರಳುಮಲ್ಲಿಗೆ ಪಾರ್ಥಸಾರಥಿಯವರು ನಲವತ್ತಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ವಿಷ್ಣುಸಹಸ್ರನಾಮ, ಅರಳು ಮಲ್ಲಿಗೆ ಅಮೃತ ನುಡಿಗಳು, ಹರಿದಾಸರ 4500 ಹಾಡುಗಳು, ವಾದಿರಾಜ ಸಂಪುಟ, ಶ್ರೀಪಾದರಾಜ ಸಂಪುಟ, ಶ್ರೀ ವ್ಯಾಸರಾಜ ಸಂಪುಟ, ಹರಿದಾಸ ಝೇಂಕಾರ ತರಂಗಿಣಿ, ಪುರಂದರ ಸಂಪುಟ, ದಾಸ ಸಾಹಿತ್ಯ ವೈಭವ, ಜನಪ್ರಿಯ ಭಜನ ಸಂಪುಟ, ರಂಗ ವಿಠ್ಠಲ, ದಾಸ ಸಾಹಿತ್ಯ ವಾಹಿನಿ, ಸಿರಿ ಕೃಷ್ಣ, ಮಧ್ವಾಚಾರ್ಯರು, ಸಂಸ್ಕೃತಿ ಪುರುಷರು, ಕಲಾ ತಪಸ್ವಿ, ಮಹತ್ತಾಗಿ ಚಿಂತಿಸು, ಆಡಳಿತ ಮೂಲ ತತ್ವಗಳು ಮುಂತಾದ ವೈವಿಧ್ಯಮಯ ಮತ್ತು ವಿದ್ವತ್ ಪೂರ್ಣ ಸಂಗತಿಗಳಿವೆ. ಇದಲ್ಲದೆ ಧ್ವನಿ ಸುರುಳಿ, ಮತ್ತು ಸಿ.ಡಿ.ಗಳ ಮೂಲಕವೂ ಹರಿದಾಸ ಸಾಹಿತ್ಯವೇ ಅಲ್ಲದೆ ಭಾಗವತ, ಭಗವದ್ಗೀತ, ರಾಮಾಯಣ ವಿಷ್ಣುಸಹಸ್ರನಾಮ, ಚಕ್ರ ಶಾಸ್ತ್ರ ಮುಂತಾದ ಮೌಲ್ಯಗಳು ಜನಸಾಮಾನ್ಯರಿಗೆ ತಲುಪುವಂತೆ ಶ್ರದ್ಧಾಪೂರ್ವಕವಾದ ಕಾಯಕ ಮಾಡುತ್ತಾ ಬಂದಿದ್ದಾರೆ.
ಅರಳುಮಲ್ಲಿಗೆ ಪಾರ್ಥಸಾರಥಿಯವರಿಗೆ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ.

ನಮ್ಮ ನಾಡಿನ ಈ ಮಹಾನ್ ಸಾಂಸ್ಕೃತಿಕ ರಾಯಭಾರಿಗಳಿಗೆ ಜನ್ಮದಿನದ ಹಾರ್ದಿಕ ಶುಭ ಹಾರೈಕೆಗಳು ಮತ್ತು ಗೌರವಪೂರ್ವಕ ನಮನಗಳು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಮಿಳುನಾಡು ಬಸ್ಸಿನಲ್ಲಿ ಶಾಲಾ ವಿದ್ಯಾರ್ಥಿಗಳು ಮದ್ಯ ಸೇವಿಸಿದ ವಿಡಿಯೋ ವೈರಲ್!

Fri Mar 25 , 2022
ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ಚಲಿಸುತ್ತಿದ್ದ ಬಸ್ಸಿನಲ್ಲಿ ಮದ್ಯ ಸೇವಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ ಕ್ಲಿಪ್ ಅನ್ನು ವಿದ್ಯಾರ್ಥಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ ಎಂದು ನಂಬಲಾಗಿದೆ. ಇದು ಹುಡುಗಿಯರು ಮತ್ತು ಹುಡುಗರ ಗುಂಪು ಬಿಯರ್ ಬಾಟಲಿಯನ್ನು ತೆರೆದು ಸೇವಿಸುವುದನ್ನು ತೋರಿಸುತ್ತದೆ. ಎಲ್ಲಾ ವಿದ್ಯಾರ್ಥಿಗಳು ಚೆಂಗಲ್ಪಟ್ಟುವಿನ ಸರ್ಕಾರಿ ಶಾಲೆಯವರು ಎಂದು ನಂಬಲಾಗಿದೆ. ಆರಂಭದಲ್ಲಿ ಇದು ಹಳೆಯ ವಿಡಿಯೋ ಎಂದು ಭಾವಿಸಲಾಗಿದ್ದು, ಮಂಗಳವಾರ ಘಟನೆ ನಡೆದಿದೆ ಎಂದು […]

Advertisement

Wordpress Social Share Plugin powered by Ultimatelysocial