ಪಂಜೆ ಮಂಗೇಶರಾವ್ ಭಾರತೀಯ-ಬರಹಗಾರ

ಪಂಜೆ ಮಂಗೇಶರಾಯರು ತಮ್ಮ ‘ಕಿರುಗತೆ-ಕಿರುಗವನಗಳು’ ಮೂಲಕ ಹೊಸಸಾಹಿತ್ಯದ ಹರಿಕಾರರಲ್ಲಿ ಒಬ್ಬರೆಂದು ಚಿರಸ್ಮರಣೀಯರು.ರಾಮಪ್ಪಯ್ಯ ಮತ್ತು ಶಾಂತಾದುರ್ಗಾ ದಂಪತಿಗಳ ಮಗನಾಗಿ ಮಂಗೇಶರಾಯರು 1874ರ ಫೆಬ್ರವರಿ 22ರಂದು ಬಂಟವಾಳದಲ್ಲಿ ಜನಿಸಿದರು. ಅವರ ಪೂರ್ವಿಕರು ಮೂಲತಃ ಪುತ್ತೂರಿಗೆ ಸಮೀಪದ ‘ಪಂಜ’ದವರಾಗಿದ್ದರು. ಅವರು ವಿವಾಹವಾಗಿದ್ದು ನಾಡಿನಲ್ಲಿ ಪ್ರಸಿದ್ಧರಾದ ಬೆನಗಲ್ ರಾಮರಾಯರ ತಂಗಿ ಗಿರಿಜಾಬಾಯಿ ಅವರನ್ನು.
ಬಿ.ಎ ವಿದ್ಯಾಭ್ಯಾಸ ಮುಗಿಸಿ ಎಲ್.ಟಿ ತರಬೇತಿ ಪಡೆದ ಪಂಜೆಯವರು ಪ್ರಾರಂಭದಲ್ಲಿ ಶಿಕ್ಷಕರಾಗಿ, ಮಂಗಳೂರಿನ ಶಾಲಾ ಸಬ್ ಇನ್ಸ್ಪೆಕ್ಟರ್ ಆಗಿ, ಇನ್ಸ್ಪೆಕ್ಟರ್ ಆಗಿ ಕಾಸರಗೋಡು, ಮಂಗಳೂರು, ಮಡಿಕೇರಿ ಮುಂತಾದ ಕಡೆಗಳಲ್ಲಿ ಕಾರ್ಯನಿರ್ವಹಿಸಿದರು. ಕೇವಲ ತಮ್ಮ ಕಾರ್ಯಕ್ಷೇತ್ರಕ್ಕೆ ಮೀಸಲಾಗಿರದೆ ಹೊರಗಿನ ಜೀವನದಲ್ಲೂ ಪಂಜೆಯವರು ಪ್ರವೇಶಿಸಿ, ಸಾಮಾಜಿಕ ಕಾರ್ಯಗಳಲ್ಲೂ, ಸಾಹಿತ್ಯಾಧ್ಯಯನ, ಸಾಹಿತ್ಯ ರಚನೆಗಳಲ್ಲೂ ಆಸಕ್ತಿ ತಳೆದು ಜನರ ಸ್ನೇಹವನ್ನು ಸಂಪಾದಿಸಿದರು. ತಮ್ಮ ಪ್ರವಾಸಾನುಭವಗಳಿಂದ ಪ್ರೇರಿತರಾಗಿ ತಿರುಳು ಹುರುಳುಗಳಿರುವ ಸಾಹಿತ್ಯ ಸೃಷ್ಟಿ ಮಾಡಿದರು. ಹರಟೆ, ಹಾಡು, ಕಿರುಗಥೆ ಹೀಗೆ ಅವರ ಸಾಹಿತ್ಯ ಸೃಷ್ಟಿ ನಾನಾ ಮುಖವಾದದ್ದು.
ಪಂಜೆಯವರು 1918ರಿಂದ 21ರವರೆಗಿನ ಅವಧಿಯಲ್ಲಿ ಶಿಕ್ಷಣರಂಗದಲ್ಲಿ ಫಲಕಾರಿಯಾದ ಅನೇಕ ನೂತನ ಪ್ರಯೋಗಗಳನ್ನು ಮಾಡಿದರು. ಅವುಗಳಲ್ಲಿ ಪ್ರಮುಖವಾದದ್ದೆಂದರೆ ಹರಿಜನ ಬಾಲಕರಿಗೂ ಶಾಲಾ ಪ್ರವೇಶವನ್ನು ದೊರಕಿಸಿದ್ದು; ಅವರೊಂದಿಗೆ ಸಹಪಂಕ್ತಿ ಭೋಜನ ಮಾಡಿದ್ದು. ಮಡಿಕೇರಿಯಲ್ಲಿ ಅವರು ಶಾಲಾ ಇನ್ಸ್ಪೆಕ್ಟರ್ ಆಗಿದ್ದ ಸಮಯದಲ್ಲಿ ಪ್ರಸಿದ್ಧವಾದ ‘ಹುತ್ತರಿ ಹಾಡ’ನ್ನು ಬರೆದರು.ಸೇವಾ ಅವಧಿಗೆ ಮುಂಚೆಯೇ ಸ್ವಯಂನಿವೃತ್ತಿ ಪಡೆದು ಮಂಗಳೂರಿಗೆ ಹಿಂದಿರುಗಿದ ಪಂಜೆಯವರು ತಮ್ಮ ವಿಶಿಷ್ಟ ಸಾಹಿತ್ಯ ಸೃಷ್ಟಿ, ರಸಿಕತೆ, ಸಂಘಟನಾ ಕುಶಲತೆಗಳಿಂದ ನಾಡಿನ ಅನೇಕ ವಿದ್ವಜ್ಜನರ, ಸಾಹಿತ್ಯ ಸಹೃದಯರ ಪ್ರೀತ್ಯಾದಾರಗಳಿಗೆ ಪಾತ್ರವಾಗಿದ್ದರು. ತತ್ಪಲವಾಗಿ 1934ರಲ್ಲಿ ರಾಯಚೂರಿನಲ್ಲಿ ಸಮಾವೇಶಗೊಂಡ ಇಪ್ಪತ್ತನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ಅವರಿಗೆ ಲಭಿಸಿತು.ಪಂಜೆಯವರು ಹೊಸಗನ್ನಡ ಸಾಹಿತ್ಯದ ಪ್ರವರ್ತಕರಲ್ಲಿ ಪ್ರಮುಖರು. ಕವಿ ಶಿಷ್ಯ, ರಾ.ಮ.ಪಂ, ಹರಟೆ ಮಲ್ಲ ಮುಂತಾದ ಗುಪ್ತನಾಮಗಳಿಂದ ಪಂಜೆಯವರು ರುಚಿಯಾದ ಶುಚಿಯಾದ ಸಾಹಿತ್ಯವನ್ನು ರಚಿಸಿದರು. ಅನುವಾದರೂಪಾಂತರಗಳೇ ಇರಲಿ, ದೇಶೀ ಜನಪದ ಸಾಹಿತ್ಯ ಪ್ರೇರಿತವೇ ಆಗಿರಲಿ ಎಲ್ಲವುಗಳಿಗೂ ‘ಪಂಜೆ’ತನದ ಮುದ್ರೆಯನ್ನೊತ್ತಿ ಸ್ವತಂತ್ರವೆಂದೇ ತೋರುವಷ್ಟು ಸಹಜವಾಗಿ, ಸುಂದರವಾಗಿ ಕನ್ನಡದಲ್ಲಿ ನಿರೂಪಿಸಿರುವುದು ಅವರ ಶ್ರೇಷ್ಟತೆ ಮತ್ತು ವಿಶಿಷ್ಟತೆ. ಅವರು ರಚಿಸಿದ ‘ತೆಂಕಣ ಗಾಳಿಯಾಟ’, ‘ಅಣ್ಣನ ವಿಳಾಸ’, ‘ನಕ್ಷತ್ರ’ದಂತಹ ಕವಿತೆಗಳು, ‘ಕೋಟಿಚೆನ್ನಯ್ಯ’ ಮುಂತಾದವನ್ನು ರೂಪಾಂತರ-ಭಾವಾಂತರ ಅಥವಾ ಭಾಷಾಂತರಗಳೆಂದು ಯಾರು ತಾನೇ ಹೇಳಬಲ್ಲರು? ಅವರು ರಚಿಸಿದ ವಿಪುಲ ಶಿಶುಸಾಹಿತ್ಯದಲ್ಲಿ ಎಷ್ಟೋ ಕತೆ-ಕವಿತೆಗಳು ಅನ್ಯ ಸಾಹಿತ್ಯದಿಂದ, ಮುಖ್ಯವಾಗಿ ಇಂಗ್ಲಿಷಿನಿಂದ ತಂದುಕೊಂಡಿದ್ದು.‘ಬಾಲ್ಯ ಸಾಹಿತ್ಯ’ ಪಂಜೆಯವರ ಪ್ರಥಮ ಪ್ರೇಮ. ಬಾಲ ಸಾಹಿತ್ಯದ ಪ್ರಕಟಣೆ, ಪ್ರಚಾರಗಳಿಗಾಗಿಯೇ ಪಂಜೆಯವರು ಶ್ರೀ ಉಲ್ಲಾಳ ಮಂಗೇಶರಾಯರಂತಹ ಸುಹೃತ್ ಬಲದಿಂದ 1921ರಲ್ಲಿ, ಮಂಗಳೂರಿನ ಕೊಂಡಿಯಾಲ ಬೈಲಿನಲ್ಲಿ ‘ಬಾಲ ಮಂಡಲ’ವನ್ನು ಸ್ಥಾಪಿಸಿದರು. ತಮ್ಮ ಶಿಕ್ಷಣ ಜೀವನದಲ್ಲಿ ಮಕ್ಕಳೊಂದಿಗೆ ಬೆರೆತು, ನಡೆ ನುಡಿಗಳನ್ನು ಚೆನ್ನಾಗಿ ಅರಿತುಕೊಂಡಿದ್ದ ಪಂಜೆಯವರು, ಮಕ್ಕಳ ಶಬ್ದ ಸಂಗ್ರಹ ಸಣ್ಣದು, ಕಲ್ಪನಾಶಕ್ತಿ ದೊಡ್ಡದು ಎಂಬುದನ್ನು ಬಲ್ಲವಾರಾಗಿದ್ದರಿಂದ ಅದಕ್ಕೆ ತಕ್ಕಂತೆ ಸಾಹಿತ್ಯದ ಅಡುಗೆ ಮಾಡಿ ಬಡಿಸಿದರು. ಮಕ್ಕಳು ನಾ ಮುಂದು, ತಾ ಮುಂದು ಎಂದು ತಿಂದರು, ತೇಗಿದರು, ಕುಣಿದು ಕುಪ್ಪಳಿಸಿದರು. ಆ ಅಡುಗೆಯ ಕಂಪು, ಆ ತೇಗಿದ ದನಿ ಈಗಲೂ ಕನ್ನಡದ ಉದ್ದಗಲದಲ್ಲಿ ಮೂಗಿಗೆ ಬಡಿಯುತ್ತಿದೆ, ಕಿವಿಗೆ ಕೇಳುತ್ತಿದೆ!ಪಂಜೆಯವರು ರಚಿಸಿದ ಬಾಲಸಾಹಿತ್ಯದಲ್ಲಿ ಕಥೆಗಳದು ಒಂದು ಗುಂಪಾದರೆ ಗೀತಗಳದು ಇನ್ನೊಂದು; ಕಥನಕವನಗಳದು ಮತ್ತೊಂದು. ‘ಗುಡುಗುಡು ಗುಮ್ಮಟದೇವರು’, ‘ಹೇನು ಸತ್ತು ಕಾಗೆ ಬಡವಾಯಿತು’, ‘ಆರ್ಗಣೆ ಮುದ್ದೆ’, ‘ಸಿಗಡೆ ಯಾಕೆ ಒಣಗಲಿಲ್ಲ’, ‘ಮೆಣಸಿನ ಕಾಳಪ್ಪ’, ‘ಮೂರು ಕರಡಿಗಳು’, ‘ಇಲಿಗಳ ಥಕ ಥೈ’ ಇವು ಕೆಲವು ಕಥೆಗಳು. ಇವುಗಳಲ್ಲದೆ ‘ಪ್ರುಥುವಾ ಶೈಲಿನಿ’, ‘ದುರ್ಗಾವತಿಯೇ’, ಮುಂತಾದ ಪ್ರೌಢ ನೀಳ್ಗತೆಗಳೂ, ಕಿರುಕಾದಂಬರಿಯೆನ್ನಬಹುದಾದ ‘ಕೋಟಿ ಚೆನ್ನಯ್ಯ’ವೂ ಇದೆ. ಮಕ್ಕಳ ಕಿರುಕಥೆಗಳು ರಸಪೂರ್ಣವಾಗಿದ್ದು ಸರಳ-ಸುಲಭ ಭಾಷೆಗಳಲ್ಲಿ ನಿರೂಪಿತವಾಗಿವೆ. ಮಕ್ಕಳ ಮನಸ್ಸನ್ನು ಆವರಿಸಿ ನಿಲ್ಲುವಂತದ್ದಾಗಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬ್ರಿಟನ್ ಸರ್ಕಾರದಿಂದ ಭಾರತೀಯರಿಗೆ ಹೊಸ ವೀಸಾ ಯೋಜನೆ

Wed Feb 22 , 2023
  ನವದೆಹಲಿ: ಬ್ರಿಟನ್ ಸರ್ಕಾರದಿಂದ ಭಾರತೀಯರಿಗೆ ಹೊಸ ವೀಸಾ ಯೋಜನೆ ಆರಂಭಿಸಲಾಗಿದೆ. ಯಂಗ್ ಪ್ರೊಫೆಷನಲ್ ಯೋಜನೆಯಡಿ ಹೊಸ ವೀಸಾ ಯೋಜನೆ ಜಾರಿಗೊಳಿಸಲಾಗಿದ್ದು, 2400 ಭಾರತೀಯರಿಗೆ ವೀಸಾ ನೀಡಲು ಬ್ರಿಟನ್ ಸರ್ಕಾರ ನಿರ್ಧಾರ ಕೈಗೊಂಡಿದೆ. ಭಾರತದ ಯುವ ಜನಾಂಗವನ್ನು ಆಕರ್ಷಿಸಲು ಹೊಸ ವೀಸಾ ಯೋಜನೆ ಜಾರಿಗೊಳಿಸಲಾಗಿದೆ. ಇಂಗ್ಲೆಂಡ್ ನಲ್ಲಿ ಕೆಲಸ ಮಾಡಲು ಇಚ್ಚಿಸುವ ಭಾರತದ ಯುವಕರಿಗೆ ಅವಕಾಶ ನೀಡಲಾಗುವುದು. ಭಾರತದ ಪ್ರತಿಭಾವಂತ ಯುವಕರು ಹೊಸ ವೀಸಾ ಯೋಜನೆ ಅಡಿ ಉದ್ಯೋಗ ಪಡೆಯಲು ಅವಕಾಶ […]

Advertisement

Wordpress Social Share Plugin powered by Ultimatelysocial