ಪದರಂಗ ಪಿತಾಮಹ ಕೆ. ಎಸ್. ನಾಗಭೂಷಣಂ (ನಾಭೂ)

ಕೊಳತೂರು ಸೋಮಸುಂದರಯ್ಯ ನಾಗಭೂಷಣಂ ಕನ್ನಡದ ಪತ್ರಿಕೋದ್ಯಮದಲ್ಲಿ ‘ನಾಭೂ’ ಎಂದೇ ಚಿರಪರಿಚಿತರಾದವರು. ಸುದ್ದಿಯ ಅಂತರಂಗ ಹಿಡಿಯುವ ಡೆಸ್ಕ್ ಪತ್ರಿಕೋದ್ಯಮದಲ್ಲಿ ಅವರದು ಎತ್ತಿದ ಕೈ. ಅವರು ಕೊಟ್ಟ ಶೀರ್ಷಿಕೆಗಳನ್ನು ಪತ್ರಿಕಾರಂಗದಲ್ಲಿ ಈಗಲೂ ನೆನಪಿಸಿಕೊಳ್ಳುವವರಿದ್ದಾರೆ ಎಂದರೆ ಅದು ಹೊಗಳಿಕೆಯ ಮಾತಲ್ಲ. ನಾಗಭೂಷಣ ಪತ್ರಿಕೋದ್ಯಮದ ಶಬ್ಧಬ್ರಹ್ಮ ಎಂಬ ಖ್ಯಾತಿ ಪಡೆದಿದ್ದರು, ಏಕೆಂದರೆ ಪ್ರಜಾವಾಣಿಯಲ್ಲಿ ಬರುವ ಪದರಂಗದ (ಈಗ ಪದಬಂಧವೆಂದು ಪ್ರಚಲಿತ) ಕರ್ತೃ ಇವರೇ. ಪ್ರಜಾವಾಣಿಯಲ್ಲಿ ಪದಬಂಧವನ್ನು ಪ್ರಾರಂಭಿಸಿ ಅದನ್ನು ತಮ್ಮುಸಿರಿರುವವರೆಗೂ ಸತತ 48 ವರ್ಷಗಳ ಕಾಲ ನಿರ್ವಹಿಸಿಕೊಂಡು ಬಂದಿದ್ದರು. ಪ್ರಜಾವಾಣಿಯಲ್ಲಿ ಸುದ್ದಿ ಸಂಪಾದಕರಾಗಿ 1991ರಲ್ಲಿ ನಿವೃತ್ತಿಪಡೆದರೂ ತಮ್ಮ ಭಾಷಾ ಕೆಲಸವನ್ನು 2016ರವರೆಗೆ ಮುಂದುವರೆಸಿದ್ದರು.
ಕೆ. ಎಸ್. ನಾಗಭೂಷಣಂ ಮೂಲತಃ ಕೋಲಾರ ಜಿಲ್ಲೆಯ ಕೊಳತೂರಿನವರು. ಇವರು 1933ರ ಮಾರ್ಚ್ 2 ರಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಜನಿಸಿದರು. ತಂದೆ ಸೋಮಸುಂದರಯ್ಯ. ತಾಯಿ ಪಾರ್ವತಮ್ಮ. ಈ ದಂಪತಿಗಳ ಒಂಭತ್ತು ಮಕ್ಕಳಲ್ಲಿ ಇವರು ಎರಡನೆಯವರು.
ಕಾಲೇಜಿನ ದಿನಗಳಿಂದಲೇ ನಾಗಭೂಷಣಂ ಅವರಿಗೆ ಕನ್ನಡದ ನಂಟು. ಕಾಲೇಜು ವಿದ್ಯಾರ್ಥಿಯಾಗಿದ್ದಲೇ ನಾಟಕಗಳನ್ನು ಬರೆದಿದ್ದು ಇವು ನಂತರ ಆಕಾಶವಾಣಿಯಲ್ಲಿ ಬಾನುಲಿ ನಾಟಕಗಳಾಗಿ ಪ್ರಸಾರವಾಗಿದ್ದವು. ಬಿ.ಎಸ್ಸಿ ಪದವಿ ಓದುತ್ತಿದ್ದಾಗ ಸೆಂಟ್ರಲ್ ಕಾಲೇಜಿನ ಕನ್ನಡ ಸಾಹಿತ್ಯ ಸಂಘದ ಕಾರ್ಯದರ್ಶಿಯಾಗಿ ಜಿ.ಪಿ.ರಾಜತ್ನಂ ಅವರ ಮಾರ್ಗದರ್ಶನದಲ್ಲಿ ಹಿರಿಯ ಸಾಹಿತಿಗಳನ್ನು ಗೌರವಿಸುವ ಕೆಲಸವನ್ನು ಕೈಗೆತ್ತಿಕೊಂಡಿದ್ದರು. ವಿಸೀ, ಅನಕೃ, ಅಡಿಗರು ಹೀಗೆ ಅನೇಕ ಸಾಹಿತಿಗಳ ಒಡನಾಟದ ಅವಕಾಶ ದೊರಕಿತು. ಹೀಗೆ ಅವರ ಒಲವು ಕನ್ನಡ ಸಾಹಿತ್ಯದ ಕಡೆಗೆ ವಾಲಿತು. ಇವರ ಬರವಣಿಗೆ ಶೈಲಿಯನ್ನು ಮೆಚ್ಚಿಕೊಂಡ ರಾಜರತ್ನಂ ಸ್ವತಃ ಪತ್ರಬರೆದು, “ನಿನ್ನ ಕನ್ನಡದ ಒಲವು ನನಗೆ ಮೆಚ್ಚುಗೆಯಾಗಿದೆ, ನೀನು ಇದೇ ಕ್ಷೇತ್ರದಲ್ಲಿ ಮುಂದುವರಿ, ಕನ್ನಡಕ್ಕಾಗಿ ದುಡಿ” ಎಂದಿದ್ದರು. ವಿಜ್ಞಾನದ ವಿದ್ಯಾರ್ಥಿಯಾದರೂ ಮುಂದೆ ಕನ್ನಡದ ಕೆಲಸಮಾಡುವುದೆಂದು ನಿರ್ಧರಿಸಿದ್ದರು.
ಕಾಲೇಜು ಮುಗಿಸುತ್ತಿದ್ದಂತೆ ನಾಭೂ ಅವರಿಗೆ ಮುಂಬೈನಲ್ಲಿ ಆಲ್ ಇಂಡಿಯಾ ಲೋಕಲ್ ಸೆಲ್ಫ್ ಗವರ್ನಮೆಂಟ್ ಪ್ರಕಟಿತ ಸ್ಥಾನಿಕ ಸ್ವರಾಜ್ಯದ ಕನ್ನಡ ಸಂಪಾದಕರಾಗಿ ಕೆಲಸಕ್ಕೆ ಆಹ್ವಾನ ಬಂತು. ಈ ಕೆಲಸವನ್ನು ನಿರ್ವಹಿಸುವುದರ ಜೊತೆಯಲ್ಲಿ ಲಿಂಟಾಸ್ ಕಂಪನಿಯಲ್ಲಿ ಕನ್ನಡದ ಜಾಹೀರಾತುಗಳನ್ನು ಬರೆಯುವ ಅವಕಾಶ ಸಿಕ್ಕಿತು. ಎರಡು ವರ್ಷಗಳ ಕಾಲ ಲಿಂಟಾಸ್ ಕಂಪನಿಯಲ್ಲಿ ಮೂಡಿಬಂದ ಕನ್ನಡದ ಜಾಹೀರಾತುಗಳಿಗೆ ಅತ್ಯಾಕರ್ಷಕ, ವಿಭಿನ್ನ ಶೈಲಿಯ ಶೀರ್ಷಿಕೆಗಳನ್ನು ನೀಡಿದ್ದರು. ಅವರ ಪದಗಳ ಬಳಕೆ, ಪ್ರಾಸ, ಮತ್ತು ವಿವಿಧಾರ್ಥಗಳ ಜಾಹೀರಾತುಗಳು ಬಹಳ ಹೆಸರು ಪಡೆದವು. ಅವರನ್ನು ಅತ್ಯಂತ ಸೃಜಾನತ್ಮಕ ಬರಹಗಾರರೆಂದು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮುಂಬೈನಲ್ಲಿದ್ದಾಗ ಇವರು ಏಕಕಾಲದಲ್ಲಿ ವಿವಿಧ ಪತ್ರಿಕೆಗಳ ಜವಾಬ್ದಾರಿ ಹೊತ್ತಿದ್ದರು. ರೇಸಿಂಗ್ ನ್ಯೂಸ್ನ ಸಹಸಂಪಾದಕರಾಗಿ, ಜೆಡಬ್ಲ್ಯೂಟಿ ಕನ್ನಡ ಬರಹಗಾರರಾಗಿಯೂ ಕೆಲಸ ನಿರ್ವಹಿಸಿದ್ದರು.
ತಾಯಿಯ ಅನಾರೋಗ್ಯದ ಕಾರಣ ಬೆಂಗಳೂರಿಗೆ ಬಂದ ನಾಭೂ ಅವರು ಕಾರ್ಯನಿರತ ಪತ್ರಕರ್ತರಾಗಿ ಬಿ.ಎನ್.ಗುಪ್ತರ ಜನಪ್ರಗತಿಯಲ್ಲಿ ವೃತ್ತಿ ಆರಂಭಿಸಿದರು. ಅಲ್ಲಿಂದ ತಾಯಿನಾಡು ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ಸೇರಿದರು. ಇವರ ಪ್ರತಿಭೆಯನ್ನು ಮೆಚ್ಚಿ ಯುನಿವರ್ಸಲ್ ಪ್ರೆಸ್ ಸರ್ವೀಸ್ನಲ್ಲಿ ಕನ್ನಡ ಮುಖ್ಯಸ್ಥರಾಗಿ ಆಹ್ವಾನ ಬಂದಿತು. ಕೆಲ ಕಾಲ ಇಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು.
1963ರಿಂದ ನಾಭೂ ಅವರು ಸಂಯುಕ್ತ ಕರ್ನಾಟಕದಲ್ಲಿ ಉಪಸಂಪಾದಕರಾಗಿ ಮೂರು ವರ್ಷಗಳ ಕಾಲ ಪತ್ರಿಕೆಯ ಪ್ರತಿಷ್ಠಿತ ಅಂಕಣಗಳನ್ನು ನಿರ್ವಹಿಸಿದರು. ಇದೇ ಸಮಯದಲ್ಲಿ ಸಿನಿಮಾ, ನಾಟಕ, ನಾಟ್ಯ ಹಾಗೂ ಸಂಗೀತ ಕಾರ್ಯಕ್ರಮಗಳ ವಿಮರ್ಶಕರಾಗಿ ಸಹಾ ತಮ್ಮನ್ನು ರೂಪಿಸಿಕೊಂಡರು. 1967ರಲ್ಲಿ ಟಿ. ಎಸ್. ರಾಮಚಂದ್ರರಾಯರು ಪ್ರಜಾವಾಣಿಗೆ ಆಹ್ವಾನ ನೀಡಿದರು. ಅಲ್ಲಿಂದ 26ವರ್ಷಗಳ ಕಾಲ ಪ್ರಜಾವಾಣಿಯಲ್ಲಿ ಉಪಸಂಪಾದಕ, ಮುಖ್ಯ ಉಪಸಂಪಾದಕ ಹಾಗು ಸುದ್ದಿ ಸಂಪಾದಕರಾಗಿ ಸಮರ್ಪಕವಾಗಿ ದುಡಿದರು. ಪ್ರಜಾವಾಣಿಯ ಪ್ರಗತಿಪರ ಬೆಳವಣಿಗೆಗೆ ಸಾಕಷ್ಟು ಅಂಕಣಗಳ ನಿರ್ವಹಣೆ, ವಿಮರ್ಶೆ, ಸಂಪಾದಕೀಯ, ಪುಟವಿನ್ಯಾಸ ಹಾಗು ಸುದ್ದಿ ವಿತರಣೆಯಲ್ಲಿ ಪ್ರಸಿದ್ಧಿ ಪಡೆದರು. ಇಂದಿರಾಗಾಂಧಿ, ಕಾಮರಾಜ ನಾಡಾರ್, ನಿಜಲಿಂಗಪ್ಪ, ಶಕುಂತಲಾದೇವಿ, ಕೀರ್ತಿನಾಥ ಕುರ್ತಕೋಟಿಯವರಂಥ ಪ್ರತಿಷ್ಟಿತ ಹಾಗೂ ವಿಶ್ವ ವಿಖ್ಯಾತರ ಪತ್ರಿಕಾ ಸಂದರ್ಶನಗಳನ್ನು ಯಶಸ್ವಿಯಾಗಿ ಪ್ರಕಟಿಸಿದ್ದರು.
ಪ್ರಜಾವಾಣಿಯಲ್ಲಿ ನಾಭೂ ಅವರು ಸೇರಿದ ಕೆಲವೇ ದಿನಗಳಲ್ಲಿ ದೊರೆತ ಬಹುದೊಡ್ಡ ಅವಕಾಶವೆಂದರೆ “ಪದರಂಗ”. 1967ರಲ್ಲಿ ಆರಂಭಿಸಿ ‘ಪದರಂಗ’ವನ್ನು ಇವರು ಕಾಲವಾದ ಫೆಬ್ರವರಿ 2016 ರವರೆಗೂ ನಿರಂತರವಾಗಿ ಸೃಷ್ಟಿಸಿದ ಹೆಗ್ಗಳಿಕೆ ಇವರದ್ದು. ಒಟ್ಟು 2490 ಪದಬಂಧಗಳನ್ನು ಪ್ರಜಾವಾಣಿಗೆ ಕೊಡುಗೆಯಾಗಿ ನೀಡಿದರು. “ಪದಪರ್ವತಾರೋಹಣದಲ್ಲಿ ತೇನ್ಸಿಂಗ್ನಾದ ಈತನ ಸಾಧನೆಯನ್ನು ಸರಿಗಟ್ಟುವವರು ಕರ್ನಾಟಕದಲ್ಲೇ ಇಲ್ಲ” ಎಂದು ಸಾಹಿತಿಗಳಾದ ಅ.ರಾ. ಮಿತ್ರ ಬರೆದಿದ್ದಾರೆ.
ಪದಬಂಧ ರಚನೆಯಲ್ಲಿ ನೈಪುಣ್ಯತೆ ಪಡೆದ ನಾಭೂ ಅವರಿಗೆ ಪದಬಂಧಾಭಿಮಾನಿಗಳ ಮಹಾಪೂರವೇ ಇತ್ತು. ಅನೇಕ ಅಭಿಮಾನಿಗಳು ಪತ್ರ ಬರೆದು ಒಂದೊಂದು ಪದದ ಬಗ್ಗೆಯೂ ವಿಶ್ಲೇಷಣೆ, ವಿಮರ್ಶೆ ಮಾಡುತ್ತಿದ್ದರು. ಇವರ ಪದಬಂಧಗಳನ್ನು ಬಿಡಿಸುವುದು ಅಷ್ಟು ಸುಲಭವಿರಲಿಲ್ಲ. ಪದಗಳ ಬಳಕೆಯಲ್ಲಿ ಹಲವಾರು ಗ್ರಂಥಗಳ ಉಲ್ಲೇಖವಿರುತಿತ್ತು. ಕುಮಾರವ್ಯಾಸ ಭಾರತ, ರಾಮಾಯಣ ದರ್ಶನಂ, ಸಿರಿಭೂವಲಯ, ಗಳಗನಾಥ ಕಾದಂಬರಿ, ಗದಾಯುದ್ಧ ಹೀಗೆ ಎಲ್ಲೆಡೆಗಳಿಂದ ಹರಿದ ಅನೇಕ ವ್ಯಾಖ್ಯಾನಗಳು ಇವರ ಪದಬಂಧದ ಸುಳಿವುಗಳಲ್ಲಿ ಶೋಭಿಸುತ್ತಿತ್ತು.
ನಾಭೂ ಅವರಿಗಿದ್ದ ಭಾಷಾಜ್ಞಾನ ಇವರ ಪದಬಂಧಗಳಲ್ಲಿ ಬಹಳ ಸ್ಫುಟವಾಗಿ ವ್ಯಕ್ತವಾಗಿವೆ. ಪದಗಳ ಸುಳಿವುಗಳು ಕೆಲವು ಒಗಟಿನಂತೆ, ಕೆಲವು ಪ್ರಾಸಬದ್ಧವಾಗಿ, ಕೆಲವು ಕಾವ್ಯಮಯವಾಗಿ, ಮತ್ತೆ ಕೆಲವು ಹಾಸ್ಯ, ಇನ್ನು ಕೆಲವು ವಿಡಂಬನಾತ್ಮಕವಾಗಿರುತಿದ್ದವು. ಪದಗಳ ಪದರಗಳನ್ನು ಅರ್ಥೈಸಿಕೊಂಡು ಎರಡುಮೂರು ಅರ್ಥಗಳು ಬರುವಂತೆ ಸುಳಿವುಗಳನ್ನು ರಚಿಸುತ್ತಿದ್ದುದು ಇವರ ಪದಕೌಶಲ್ಯಕ್ಕೆ ಹಿಡಿದ ಕನ್ನಡಿ. ಎಷ್ಟೋ ಪದಗಳನ್ನು ಮತ್ತೆ ಮತ್ತೆ ಬಳಸಿದ್ದರೂ ಸುಳಿವುಗಳನ್ನು ಮಾತ್ರ ಬಹಳ ವೈವಿಧ್ಯಮವಾಗಿಸುತ್ತಿದುದು ಇವರ ವೈಶಿಷ್ಟ್ಯತೆ. ಪದಬಂಧಗಳಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದ್ದರು. ಪ್ರಸ್ತುತ ಹಾಗು ಪ್ರಚಲಿತ ಪದಗಳ ಬಳಕೆ, ಒಂದೇ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಪದಬಂಧ ರಚನೆ, ಪರಭಾಷಾ ಪದಗಳ ಕನ್ನಡೀಕರಣ ಹೀಗೆ ಅನೇಕ ಪ್ರಯೋಗಗಳನ್ನು ಪ್ರಯತ್ನಿಸಿದ್ದರು. ಅನಾರೋಗ್ಯದ ಅನಿವಾರ್ಯ ಸ್ಥಿತಿಗಳಲ್ಲೂ ಇವರ ಪದಗಳ ಕೈಂಕರ್ಯ ಒಮ್ಮೆಯಾದರೂ ನಿಂತಿದ್ದಿಲ್ಲ. 1999ರಲ್ಲಿ ಇವರು ಬಳಸಿದ ಎಲ್ಲಾ ಪದಗಳು ಮತ್ತು ಅವುಗಳ ಸುಳಿವುಗಳನ್ನು ಒಳಗೊಂಡ ‘ಪದಾಂತರಂಗ’ ಎಂಬ ಪುಸ್ತಕವನ್ನು ಪ್ರಕಟಿಸುವ ಸಲುವಾಗಿ ಸಂಗ್ರಹಿಸಿದರು. ಅಲ್ಲಿಯವರೆಗೆ ಅವರು ಬಳಸಿದ ಒಟ್ಟು ಪದಗಳ ಸಂಖ್ಯೆ 32,000 ಪದಗಳು. ಇದಾದ ನಂತರ ಸಹಾ ಮುಂದಿನ 17 ವರ್ಷಗಳ ಕಾಲ ಪದಬಂಧವನ್ನು ರಚಿಸುತ್ತಲೇ ಬಂದಿದ್ದರು. ಈ ಸಂಗ್ರಹವನ್ನು ನೋಡಿದರೆ ಇವರು ಕನ್ನಡಕ್ಕಾಗಿ ನೀಡಿದ ಕೊಡುಗೆ ಎಷ್ಟು ಅಗಾಧವಾದುದು ಎಂದು ತಿಳಿಯುತ್ತದೆ. ಇದಲ್ಲದೆ ಉದಯವಾಣಿಗೆ 1113 ‘ದಿನಪದ’, ವಿಜಯಚಿತ್ರ ಚಲನಚಿತ್ರ ಪತ್ರಿಕೆಗೆ 200ಕ್ಕೂ ಹೆಚ್ಚು ‘ವಿಜಯಪದ’, ವನಿತಾ ವಾರಪತ್ರಿಕೆಗೆ ‘ವನಿತಾಪದ’ ಹೀಗೆ ಹಲವಾರು ಪತ್ರಿಕೆಗಳಿಗೆ ಪದಬಂಧಗಳ ಕೊಡುಗೆ ನೀಡಿದ್ದರು.
ನಾಭೂ ಅವರು ರಚಿಸಿದ ಪ್ರಮುಖ ಕೃತಿಗಳಲ್ಲಿ ‘ನಾಗಲೋಚನ-ನುಡಿವಚನ’, ‘ಹನಿ-ದನಿ’, ‘ಪದಾಂತರಂಗ’ ಹಾಗೂ ‘ಮಾಧ್ಯಮ ಪಾರಿಭಾಷಿಕ’ ಸೇರಿವೆ. ‘ನಾಗಲೋಚನ’ ನುಡಿವಚನಗಳ ತತ್ವದ ಬುನಾದಿಯ ಮೇಲೆ ಹೆಣೆದಿರುವ ಪದ್ಯ ಸಂಗ್ರಹ. ಇದು ಹೊಸ ಪ್ರಯತ್ನವಾಗಿ ಪಂಚಪದಿಯಲ್ಲಿ ರಚಿತಗೊಂಡಿದೆ. ಅವರಿಗಿದ್ದ ಅನಂತ ಜ್ಞಾನ, ಪದಬಳಕೆಯ ಕೌಶಲ್ಯ, ಜೀವನದ ಸಂಘರ್ಷ, ಕೌತುಕ, ರಹಸ್ಯ ಹಾಗೂ ಸತ್ಯಗಳು ಈ ಕೃತಿ ಪದರಗಳಲ್ಲಿ ತೆದುಕೊಂಡಿವೆ. ಈ ಪಂಚಪದಿಗಳನ್ನು ಅನೇಕ ಕಾರ್ಯಕ್ರಮಗಳಲ್ಲಿ ವಾಚನ ಹಾಗು ಗಾಯನದ ಮೂಲಕ ಪ್ರಸ್ತುತ ಪಡಿಸಲಾಗಿದೆ. ಈ ಪುಸ್ತಕ ಓದಿದರೆ ನಾಭೂರವರು ಒಬ್ಬ ಸಾಧಾರಣ ವ್ಯಕ್ತಿಯಾಗಿ ಜೀವನದ ಕಷ್ಟಗಳ ಮಧ್ಯೆ ನಲುಗಿಹೋದರೂ ಜೀವನದ ಸತ್ಯ ಮತ್ತು ವಿಶ್ವದ ರಹಸ್ಯವನ್ನು ಮಾರ್ಮಿಕವಾಗಿ ಭೇದಿಸಿದ ದಾರ್ಶನಿಕರಂತೆ ಕಾಣುತ್ತಾರೆ.
ನಾಭೂ ಅವರಿಗೆ ಜೀವಮಾನದ ಸಾಧನೆಗೆ ಕನ್ನಡ ಪತಿಕೋದ್ಯಮದಲ್ಲಿ ಅತ್ಯುನ್ನತ ಪ್ರಶಸ್ತಿಯಾದ ‘ಪಿ.ರಾಮಯ್ಯ’ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ದೆಹಲಿ ಕನ್ನಡಸಂಘದ ಸನ್ಮಾನ, ರೋಟರಿ ಕ್ಲಬ್ ವತಿಯಿಂದ 1991ರ ವರ್ಷದ ವ್ಯಕ್ತಿ ಗೌರವ, ಡಿವಿಜಿ 125 ವರ್ಷ ಸಮಾರಂಭದಲ್ಲಿ ಡಿವಿಜಿ ಪ್ರಶಸ್ತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಿಂದ ವಿವಿಧ ಪುರಸ್ಕಾರಗಳು ಸಂದಿದ್ದವು. ನಾಭೂ ಅವರನ್ನು ಪ್ರೆಸ್ ಕ್ಲಬ್’ನ ಖ್ಯಾತಿಯ 35 ಗಣ್ಯರಲ್ಲಿ ಒಬ್ಬರೆಂದು ಗುರುತಿಸಲಾಗಿದೆ.
ನಾಭೂ ಅವರು ಮೈಸೂರು ರಾಜ್ಯ ಪತ್ರಕರ್ತರ ಸಂಘಕ್ಕೆ ಕಾರ್ಯದರ್ಶಿಯಾಗಿ, ಅದಕ್ಕೆ ವಿಸ್ತೃತ ರೂಪದ ಅಂಗರಚನೆ ರೂಪಿಸಿ ಅದನ್ನು ಇಂದಿನ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ಸ್ವರೂಪದಲ್ಲಿ ಮೂಡಿಸಲು, ಅದರ ಪ್ರಧಾನ ಕಾರ್ಯದರ್ಶಿಯಾಗಿ ಹಗಲಿರಳೂ ಶ್ರಮ ಪಟ್ಟರು. ಪತ್ರಕರ್ತರಿಗೆ ವೇತನ ಮಂಡಳಿ ರಚಿಸಲು ಹೋರಾಟ ನಡೆಸಿದರು. ಅಖಿಲ ಭಾರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಲಿಯಲ್ಲಿ ರಾಜ್ಯ ಸಂಘದ ಸದಸ್ಯರಾಗಿ ಸಹಾ ಹಲವು ವರ್ಷ ಸೇವೆ ಸಲ್ಲಿಸಿದರು. ಇದಲ್ಲದೆ ಮೈಸೂರು ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಹಾಗೂ ನಿರ್ದೇಶಕರಾಗಿ ಸಹಾ ಸೇವೆ ಸಲ್ಲಿಸಿದ್ದರು.
ಬಹುಮುಖಿ ಪ್ರತಿಭಾನ್ವಿತರಾದ ನಾಗಭೂಷಣರವರು ಆಕಾಶವಾಣಿ, ದೂರದರ್ಶನ, ಸಿನಿಮಾ ಹಾಗೂ ನಾಟಕರಂಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಗೃಹಿಣಿ, ಅಮರಭಾರತಿ, ಸೇಡಿನ ಕಿಡಿ, ಅಂತರ, ಅಪರಂಜಿ ಮಕ್ಕಳು ಚಲನಚಿತ್ರಗಳಿಗೆ ಸಂಭಾಷಣೆ ಬರೆದು ಸಹನಿರ್ದೇಶನವನ್ನೂ ಮಾಡಿದ್ದರು. ಜೊತೆಗೆ ಆ ಚಿತ್ರಗಳಲ್ಲಿ ನಟಿಸಿ ತಮ್ಮಗಿದ್ದ ಕನಸುಗಳಿಗೆ ಒಂದು ರೂಪ ಕೊಟ್ಟಿದ್ದರು. ಆಕಾಶವಾಣಿಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುತ್ತಿದ್ದರು. ತುರ್ತುಪರಿಸ್ಥಿತಿ ಸಮಯದಲ್ಲಿ ಆಕಾಶವಾಣಿಯಲ್ಲಿ ವಿಶೇಷ ವಾರ್ತೆಗಳನ್ನು ಓದುತ್ತಿದ್ದರು. ದೂರದರ್ಶನದಲ್ಲೂ ಹಲವಾರು ಗಣ್ಯರ ಸಂದರ್ಶನವನ್ನು ನಡೆಸಿಕೊಟ್ಟಿದ್ದರು. ವಿದೇಶಿಯರಿಗೆ ಕನ್ನಡ ಹೇಳಿಕೊಡುವ ಕೆಲಸದಲ್ಲಿ ಹಲವಾರು ವರ್ಷಗಳ ಕಾಲ ತಮ್ಮನ್ನು ತೊಡಗಿಸಿಕೊಂಡು ಅಮೇರಿಕನ್ ಪೀಸ್ ಕೋರ್ಗಾಗಿ ಕನ್ನಡ ಕಲಿಕಾಕ್ರಮವನ್ನು ಹಾಗೂ ಅದಕ್ಕೆ ಬೇಕಾದ ಪಾಠಗಳನ್ನೂ ತಯಾರಿಸಿದ್ದರು.
ನಾಭೂರವರು ರಚಿಸಿದ್ದ ಪತ್ರಿಕೋದ್ಯಮದ ಗಾದೆಗಳಲ್ಲಿ ಕೆಲವನ್ನು ಇಲ್ಲಿ ಸ್ಮರಿಸಬಹುದು:
ಕಾಸಿಗೆ ತಕ್ಕಂತೆ ನ್ಯೂಸು, ಕಾಲಕ್ಕೆ ತಕ್ಕಂತೆ ಸ್ಪೇಸು.
ಬುದ್ದಿಯೋರು ಹೇಳಿದ್ದೆಲ್ಲಾ ‘ಸುದ್ದಿ’.
ಅಂಕಣಕ್ಕೆ ಬಾರದಿದ್ದದ್ದು ಆ್ಯಂಕರ್ಗೆ ಬಂದೀತೆ.
ತಂಗಳು ಸುದ್ದಿಯಾದರೂ ಮೊಫಿಸಿಲ್ಗೆ ಬಿಸಿ.
ವರದಿಗಾರನಿಗೊಂದು ನಿಮಿಷ, ನ್ಯೂಸ್ ಡೆಸ್ಕಿಗೊಂದು ನಿಮಿಷ.
ವರದಿಗಾರನಿಗೆ ವಿನಯ ಬೇಕು, ಸಬ್ ಎಡಿಟರ್ಗೆ ಸಹನೆ ಬೇಕು.
ಹಲವಾರು ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದ ನಾಗಭೂಷಣಂ ಅವರನ್ನು ಈಗಲೂ ಮಾಧ್ಯಮ ಮಿತ್ರರು ನೆನಪಿಸಿಕೊಳ್ಳುತ್ತಾರೆ. ಸದಾ ಹಸನ್ಮುಖಿಯಾಗಿ ಎಲ್ಲರೊಡನೆ ಬೆರೆತು, ಸವಿಮಾತು, ಹಾಸ್ಯ, ಸರಳತೆಗಳಿಂದ ಎಲ್ಲರನ್ನೂ ಪ್ರೀತಿಸುವ ವ್ಯಕ್ತಿಯಾಗಿದ್ದರು ನಾಭೂ.
ನಾಭೂ ಅವರು 2016 ವರ್ಷದ ಫೆಬ್ರವರಿ 15 ರಂದು ಈ ಲೋಕವನ್ನಗಲಿದರು. ತಮ್ಮ ಚಿಂತನೆ, ಪದಬಂಧಗಳ ಅಮೂಲ್ಯ ನೆನಪುಗಳ ಮೂಲಕ ಅವರು ತಮ್ಮ ಅಭಿಮಾನಿಗಳ ಹೃದಯಗಳಲ್ಲಿ ಸದಾ ಜೀವಂತರಾಗಿದ್ದಾರೆ.
ಅವರು ರಚಿಸಿದ ನಾಗಲೋಚನದ ಒಂದು ನುಡಿವಚನ ಇಲ್ಲಿದೆ:
ಅಕ್ಷರಗಳ ಪದಗಳಿಂದ ತಿಳಿಯ ಹೇಳಿದನು ಪದಗಳ ಒಳಾರ್ಥ
ಸರಳಾರ್ಥ ಸಮಾನಾರ್ಥಗಳ ವಿಕಟಾರ್ಥ ವಿಪರೀತಾರ್ಥಗಳ
ನಾಗಬಂಧನ ವಾಕ್ಯಗಳನು ತಾನುಂಡು ಕಂಡ ಜೀವಿತಾರ್ಥವನು
ಲೋಕವಿರುವ ತನಕ ಉಳಿಯುವ ಅಮರ ತತ್ವಾರ್ಥಗಳನು
ತಾನಳಿದರೂ ಚಿರಂಜೀವನ ಸಾರ್ಥಕತೆಯನು ನಾಗಲೋಚನ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಘವೇಂದ್ರ ಖಾಸನೀಸ

Wed Mar 2 , 2022
ರಾಘವೇಂದ್ರ ಖಾಸನೀಸರು ಕನ್ನಡದ ಶ್ರೇಷ್ಠ ಕತೆಗಾರರಲ್ಲಿ ಒಬ್ಬರು. ರಾಘವೇಂದ್ರ ಖಾಸನೀಸರು ವಿಜಾಪುರ ಜಿಲ್ಲೆಯ ಇಂಡಿ ಎಂಬಲ್ಲಿ 1933ರ ಮಾರ್ಚ್ 2ರಂದು ಜನಿಸಿದರು. ತಂದೆ ನಾರಾಯಣ ಖಾಸನೀಸ. ತಾಯಿ ಕಮಲಾಬಾಯಿ. ತಮ್ಮ ತಂದೆಯವರಿಂದ ಆರ್ಥರ್ ಕಾನನ್‌ಡೈಲ್, ಶರ್ಲಾಕ್‌ ಹೋಮ್ಸ್ ಕಥೆಗಳನ್ನು ಚಿಕ್ಕವಯಸ್ಸಿನಿಂದಲೇ ಕೇಳುತ್ತಿದ್ದ ಇವರಲ್ಲಿ ಬಾಲ್ಯದಿಂದಲೇ ಕಥೆಗಾರನೊಬ್ಬ ರೂಪಗೊಳ್ಳತೊಡಗಿದ್ದ. ರಾಘವೇಂದ್ರ ಖಾಸನೀಸರು ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯವರೆಗೆ ಓದಿದ್ದು ವಿಜಾಪುರದಲ್ಲಿ. ಅವರು ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ತಿ.ತಾ.ಶರ್ಮರ ವಿಶ್ವಕರ್ನಾಟಕ ಪತ್ರಿಕೆಗೆ ಕಥೆ ಬರೆದು […]

Advertisement

Wordpress Social Share Plugin powered by Ultimatelysocial