ಪ್ರಕೃತಿ ಪ್ರಸಾದ್

ಕನ್ನಡ ಕಲಾ ಲೋಕದಲ್ಲಿ ಆಗ್ಗಿಂದಾಗ್ಗೆ ನಾವು ಮಹತ್ವದ ಬಾಲ ಪ್ರತಿಭೆಗಳನ್ನು ಕಾಣುತ್ತ ಬಂದಿದ್ದೇವೆ. ಈ ಪ್ರತಿಭಾ ಸಾಲಿನಲ್ಲಿ ಸಿನಿಮಾ ಮತ್ತು ಕಿರುತೆರೆಗಳಲ್ಲಿ ತನ್ನ ಪ್ರತಿಭೆಯಿಂದ ಮನೆಮಾತಾದವರು ಕನ್ನಡದ ಬಣ್ಣದ ಲೋಕದ ಪುಟ್ಟಕ್ಕ ಎಂದೇ ಖ್ಯಾತರಾದ ‘ಪ್ರಕೃತಿ ಪ್ರಸಾದ್’.
ಪ್ರಕೃತಿ ಜನ್ಮದಿನ ಮಾರ್ಚ್ 13. ಪ್ರಕೃತಿಯ ತಂದೆ ಎಂ. ಎಸ್. ಪ್ರಸಾದ್ ಕನ್ನಡ ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ತರಗಳಲ್ಲಿ ತಮ್ಮದೇ ಆದ ಮಹತ್ವದ ಕೊಡುಗೆ ನೀಡುತ್ತಾ ಬಂದಿರುವವರು. ಕಬ್ಬನ್ ಪಾರ್ಕಿನಲ್ಲಿ ಹಲವಾರು ವರ್ಷಗಳ ಕಾಲ ನಿರಂತರವಾಗಿ ಸಂಗೀತ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡುತ್ತಿದ್ದ ಬ್ಯಾಂಡ್ ಸ್ಟ್ಯಾಂಡ್ ಅಂತಹ ಸಂಯೋಜನೆಗಳ ಜೊತೆಗೆ, ತಮ್ಮ ಮುದ್ದಿನ ಮಗಳ ಹೆಸರಿನ ‘ಪ್ರಕೃತಿ ಫೌಂಡೇಷನ್’ ಮೂಲಕ ‘ಪ್ಲಾಸ್ಟಿಕ್ ಬೇಡ ಅನ್ನಿ’, ‘ಮಾನವತೆಯಿಂದಿರೋಣ’ ಮುಂತಾದ ಕಾರ್ಯಕ್ರಮಗಳನ್ನು ಸಂಘಟಿಸುವುದರ ಮೂಲಕ ಅನೇಕ ಜನಪರ, ಪ್ರಾಕೃತಿಕ ಮತ್ತು ಸೇವಾ ಮನೋಭಾವದ ಕಾಳಜಿಗಳನ್ನು ಅಭಿವ್ಯಕ್ತಿಸುತ್ತಾ ಬಂದವರು. ಇತ್ತೀಚಿನ ವರ್ಷದಲ್ಲಿ ಅವರು ದೈಹಿಕ ಮತ್ತು ಮಾನಸಿಕ ನ್ಯೂನತೆಗಳ ಸಂಕಟದಲ್ಲಿ ನಲುಗಿರುವ ಮಕ್ಕಳಲ್ಲಿ ಸಂತಸ ಮಿನುಗಿಸುವ ಸಲುವಾಗಿ ಕೈಗೊಂಡ ಬೊಂಬೆಗಳ ಕ್ರೋಡೀಕರಣ ಮತ್ತು ವಿತರಣಾ ಕಾರ್ಯಕ್ರಮ ಆಯೋಜನೆ ಎಲ್ಲೆಡೆ ಮನಮುಟ್ಟಿವುದರೊಂದಿಗೆ ವ್ಯಾಪಕವಾದ ಶ್ಲಾಘನೆಗಳನ್ನಾಕರ್ಷಿಸಿತು. ಇದಕ್ಕೆ ಪೂರಕವಾಗಿ ಪ್ರಕೃತಿಯ ತಾಯಿ ಪೂಜಾ ಪ್ರಸಾದ್ ಚಿಕ್ಕಂದಿನಿಂದ ತಮ್ಮ ಮನೆಯಲ್ಲಿ ಉತ್ತಮ ಸಂಸ್ಕಾರ ಮತ್ತು ಸಾಂಸ್ಕ್ರತಿಕ ಆಸಕ್ತಿಗಳು ನೆಲೆಗೊಳ್ಳುವಲ್ಲಿ ಆಸಕ್ತಿ ವಹಿಸಿದ್ದಾರೆ.
ಹೀಗೆ ತನ್ನ ವಾತಾವರಣದಲ್ಲಿದ್ದ ಸಾಂಸ್ಕೃತಿಕ ಆಸಕ್ತಿಗಳನ್ನು ಚಿಕ್ಕಂದಿನಲ್ಲೇ ಮೈಗೂಡಿಸಿಕೊಂಡ ಪ್ರಕೃತಿ ಇನ್ನೂ ಮೂರು ವರ್ಷದ ಮಗುವಾಗಿದ್ದಾಗಲೇ ಭಗವದ್ಗೀತೆ, ಸೌಂದರ್ಯ ಲಹರಿ, ಮುಂತಾದ ಅನೇಕ ಶ್ಲೋಕಗಳನ್ನು ಪಟಪಟನೆ ಉಚ್ಚರಿಸುತ್ತಿದುದಕ್ಕೆ ಸಾಕ್ಷಿಯಾದದ್ದು ದೂರದರ್ಶನದಲ್ಲಿ ಪ್ರಸಾರಗೊಳ್ಳುತ್ತಿದ್ದ ‘ಚಿಣ್ಣರ ಲೋಕ’ ಕಾರ್ಯಕ್ರಮ. ಹೀಗೆ ಕಿರುತೆರೆಗೆ ಕಾಲಿಟ್ಟ ಈ ಪುಟಾಣಿ ಮುಂದೆ ಟಿ ಎನ್. ಸೀತಾರಾಂ ಅವರ ‘ಮುಕ್ತಾ’ ಧಾರಾವಾಹಿಯ ‘ಚಿನ್ಮಯಿ – ಚಿನ್ನು’ವಾದಳು. ಮುಂದೆ ಬೀಸು ಸುರೇಶ್, ಎ. ಜಿ. ಶೇಷಾದ್ರಿ, ಕವಿತಾ ಲಂಕೇಶ್, ಅಭಯ ಸಿಂಹ, ರಾಮದಾಸ ನಾಯ್ಡು ಮುಂತಾದವರ ಗಮನ ಸೆಳೆದ ಪ್ರಕೃತಿ ವಿವಿಧ ವಾಹಿನಿಗಳಲ್ಲಿ ಮೂಡಿಬಂದಿರುವ ತಕಧಿಮಿ ತಾ, ನಾಕು ತಂತಿ, ಮಿಂಚು, ಪುಣ್ಯಕೋಟಿ, ನಾಗಮಣಿ, ವಸುಧೈವ ಕುಟುಂಬಕಂ, ಪವಿತ್ರ ಬಂಧನ, ನನ್ನ ಪ್ರೀತಿಯ ಶ್ರೀಮತಿ, ಕಾದಂಬರಿ ಕಣಜ, ಮುಂತಾದ ಧಾರಾವಾಹಿಗಳಲ್ಲಿ ವ್ಯಾಪಿಸಿದಳು. ದೂರದರ್ಶನದ ಕಿರು ಚಿತ್ರ ‘ಆತ್ಮ ಕಥೆಗಳು’ ಚಿತ್ರದಲ್ಲೂ ಪ್ರಕೃತಿ ಪಾತ್ರವಹಿಸಿದ್ದರು. ಹಲವಾರು ದೂರದರ್ಶನ ಕಾರ್ಯಕ್ರಮಗಳ ನಿರೂಪಕಿಯಾಗಿ ಸಹಾ ಪ್ರಕೃತಿ ಕಾಣಿಸಿಕೊಂಡಿದ್ದರು. ಹಲವಾರು ವರ್ಷ ಗಂಭೀರ ಪಾತ್ರಗಳಲ್ಲಿ ಅಭಿನಯಿಸಿದ್ದ ಪ್ರಕೃತಿ ಉದಯ ವಾಹಿನಿಯ ‘ಫ್ಯಾಮಿಲಿ ನಂಬರ್ ೧’ ಧಾರಾವಾಹಿಯ ಮೂಲಕ ಪ್ರೇಕ್ಷಕನಲ್ಲಿ ನಗೆಚಿಮ್ಮಿಸಿದ್ದರು.
ಇನ್ನು ಹಿರಿತೆರೆಯಾದ ಚಲನಚಿತ್ರ ಮಾಧ್ಯಮದಲ್ಲಿ ಪ್ರಕೃತಿಯ ಸಾಧನೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಂತದ್ದು. ಬಿ ಸುರೇಶರ ‘ಗುಬ್ಬಚ್ಚಿಗಳು’ ಮತ್ತು ‘ಪುಟ್ಟಕ್ಕನ ಹೈವೇ’; ರಾಮದಾಸ ನಾಯ್ಡು ಅವರ ‘ಹೆಜ್ಜೆಗಳು’ ಈ ಮೂರೂ ಚಿತ್ರಗಳು ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳಲ್ಲಿ ಮತ್ತು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ವಿಶಿಷ್ಟ ಸಾಧನೆ ಮಾಡಿದವು. ‘ಗುಬ್ಬಚ್ಚಿಗಳು’ ಮತ್ತು ‘ಹೆಜ್ಜೆಗಳು’ ಚಿತ್ರಗಳಿಗಾಗಿ ಪ್ರಕೃತಿ ಎರಡು ಬಾರಿ ರಾಜ್ಯ ಪ್ರಶಸ್ತಿ ಗಳಿಸಿದ್ದರು. ‘ಗುಬ್ಬಚ್ಚಿ’ಯಲ್ಲಿನ ಅಭಿನಯಕ್ಕಾಗಿ ಅವರು ರಾಷ್ಟ್ರಪ್ರಶಸ್ತಿಗೆ ನಾಮಾಂಕಿತಗೊಂಡಿದ್ದರು. ಪ್ರಕಾಶ್ ರೈ ಅಭಿನಯಿಸಿ, ನಿರ್ದೇಶಿಸಿದ ಯಶಸ್ವೀ ಚಿತ್ರ ‘ನಾನು ನನ್ನ ಕನಸು’ ಪ್ರಕೃತಿಯ ಮತ್ತೊಂದು ಮಹತ್ವದ ಚಿತ್ರ. ಪ್ರಕೃತಿ ಅಭಿನಯಿಸಿದ ರಾಮದಾಸ್ ನಾಯ್ಡು ಅವರ ನಿರ್ದೇಶನದ ‘ಕೃತಿ’ ಚಿತ್ರ ಸಹಾ ರಾಷ್ಟ್ರಮಟ್ಟದ ಸ್ಪರ್ಧೆಯ ಕಣದಲ್ಲಿತ್ತು. ಪಿ. ಶೇಷಾದ್ರಿಯವರ ‘ವಿದಾಯ’ ಚಿತ್ರದಲ್ಲೂ ಪ್ರಕೃತಿ ಅಭಿನಯಿಸಿದ್ದು ಈ ಚಿತ್ರ ಸಹಾ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತು.
ರಂಗಭೂಮಿಯಲ್ಲಿಯೂ ತಮ್ಮ ಛಾಪನ್ನು ಹರಡಿದ್ದ ಪ್ರಕೃತಿ ನೀತೀಶ್ ಶ್ರೀಧರ ಮೂರ್ತಿ ಅವರ ‘ರಬ್ಡಿ’ ನಾಟಕದಲ್ಲಿ ಶ್ರೇಷ್ಠ ಅಭಿನಯ ನೀಡಿ ‘ಅಭಿನಯ ರಂಗಹಬ್ಬ’ದಲ್ಲಿ ಪ್ರಶಸ್ತಿ ಗಳಿಸಿದ್ದರು.
ಎಂ ಎನ್ ಸುರೇಶ್ ನಿರ್ದೇಶನದ ಕೃಷಿ ಕ್ಷೇತ್ರ ಕುರಿತಾದ ವಾರ್ತಾ ಚಿತ್ರ ಮತ್ತು ಪ್ರಸಿದ್ಧ ನಿರ್ದೇಶಕ ಪಿ. ಶೇಷಾದ್ರಿ ನಿರ್ದೇಶನದಲ್ಲಿ ‘ಭಾಗ್ಯಲಕ್ಷ್ಮೀ ಯೋಜನೆ’ಯ ಕುರಿತಾದ ವಾರ್ತಾಚಿತ್ರ ಹಾಗೂ ನಿರ್ದೇಶಕ ಪಿ. ಎಸ್. ವಿಶ್ವನಾಥ್ ಅವರ ವಾರ್ತಾಚಿತ್ರದಲ್ಲೂ ಪ್ರಕೃತಿ ಅಭಿನಯಿಸಿದ್ದರು. ಹಲವು ಆಯ್ದ ಜಾಹೀರಾತುಗಳಲ್ಲೂ ಪಾಲ್ಗೊಂಡಿದ್ದಿದೆ.
ಹೀಗೆ ರಂಗಭೂಮಿ, ಕಿರುತೆರೆ, ಸಿನಿಮಾ, ಜಾಹಿರಾತು ಲೋಕಗಳಲ್ಲಿ ವ್ಯಾಪಿಸಿ ಪ್ರಶಸ್ತಿ, ಪ್ರಸಿದ್ಧಿಗಳೆರಡನ್ನೂ ತಮ್ಮದಾಗಿಸಿಕೊಂಡಿದ್ದ ಪ್ರಕೃತಿ ಹತ್ತನೇ ತರಗತಿಯಲ್ಲಿ 98% ಅಂಕಗಳಿಸಿದ ಪ್ರಾಜ್ಞೆಯೂ ಹೌದು. ಪಿಯುಸಿಯಲ್ಲಿಯೂ ಉನ್ನತ ಸಾಧನೆ ಮಾಡಿ ಪದವಿ ವ್ಯಾಸಂಗದಲ್ಲಿ ಶ್ರದ್ಧಾಪೂರ್ಣವಾಗಿ ತೊಡಗಿರುವ ಈ ಪುಟ್ಟಕ್ಕ ತನ್ನ ಓದು ಮತ್ತು ಶಾಲಾಕಾಲೇಜಿಗೆ ಹೆಚ್ಚು ಚಕ್ಕರ್ ಕೊಡದೆ, ತನ್ನ ಆಟದ ಮತ್ತು ರಜಾ ವೇಳೆಯನ್ನು ಕಲಾಲೋಕದ ದೀಪಬೆಳಗುವೇಕೆಗೆ ಬಳಸಿಕೊಂಡ ಪ್ರಬುದ್ಧೆ.
ಇಂದು ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಮ್ಮೀ ಪುಟ್ಟಕ್ಕನ ಭವಿತವ್ಯ ಭವ್ಯವಾಗಿರಲಿ ಎಂದು ಆಶಿಸುತ್ತಾ ಆಕೆಗೆ ಸಕಲ ಶುಭ ಹಾರೈಕೆಗಳನ್ನು ತಿಳಿಸೋಣ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆರ್ ನಾಗೇಶ್

Sun Mar 13 , 2022
ಆರ್ ನಾಗೇಶ್ ಕರ್ನಾಟಕ ರಂಗಭೂಮಿಗೆ ಹೊಸ ದಾರಿಹಾಕಿಕೊಟ್ಟ ನವ್ಯ ಪರಂಪರೆಯಲ್ಲಿನ ಪ್ರಮುಖರು. ಅವರು ರಂಗನಟ, ನಿರ್ದೇಶಕ, ಬೆಳಕು ತಜ್ಞ, ರಂಗ ವಿನ್ಯಾಸಕ ಹೀಗೆ ರಂಗಭೂಮಿಯ ಹಲವಾರು ಆಯಾಮಗಳಲ್ಲಿ ದುಡಿದವರು. ಆರ್. ನಾಗೇಶ್ 1943ರ ಮಾರ್ಚ್ 13ರಂದು ಬೆಂಗಳೂರು ಸಮೀಪದ ರಾಮೋಹಳ್ಳಿಯಲ್ಲಿ ಜನಿಸಿದರು. ತಂದೆ ರಾಮರಾಜ ಅರಸು. ತಾಯಿ ಲಕ್ಷ್ಮೀದೇವಮ್ಮ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿ ಮೊದಲು ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯಲ್ಲಿ ನಂತರ, ತಮ್ಮ ಅಭಿರುಚಿಗೆ ತಕ್ಕಂತೆ ವಾರ್ತಾ […]

Advertisement

Wordpress Social Share Plugin powered by Ultimatelysocial