ಸರ್ವಜ್ಞ

ಸರ್ವಜ್ಞ 16-17ನೆಯ ಶತಮಾನದ ಮಹಾನ್ ವಚನಕಾರ. ಈತನ ಜೀವನದ ಬಗ್ಗೆ ಖಚಿತವಾಗಿ ಯಾವ ಸಂಗತಿಗಳೂ ತಿಳಿದುಬಂದಿಲ್ಲ. ಕೆಲವಂಶಗಳು ಇವನ ವಚನಗಳಲ್ಲಿ ಉಕ್ತವಾಗಿದ್ದರೂ ಅಂಥ ರಚನೆಗಳು ಪ್ರಕ್ಷಿಪ್ತಗಳಾಗಿರುವ ಸಾಧ್ಯತೆಯೂ ಉಂಟು.
ಪುಷ್ಪದತ್ತನೆಂಬ ಗಣನಾಥನ ಅವತಾರವೆಂದು ಹೇಳಲಾದ ಸರ್ವಜ್ಞ ಹುಟ್ಟಿದ್ದು ಧಾರವಾಡ ಜಿಲ್ಲೆಯ ಅಂಬಲೂರಿ ನಲ್ಲಿ. ಇದೇ ಜಿಲ್ಲೆಯ ಮಾಸೂರಿನ ಬಸವರಸನೆಂಬ ಆರಾಧ್ಯ ಬ್ರಾಹ್ಮಣ ಇವನ ತಂದೆ. ಮಾಳಿಯೆಂಬ ಕುಂಬಾರರ ಹೆಣ್ಣು ಇವನ ತಾಯಿ. ಇವರ ವಿವಾಹಬಾಹಿರ ಸಂಬಂಧದಿಂದ ಇವನ ಜನನ. ಈ ಸಂಗತಿಗಳಲ್ಲಿ ಎಷ್ಟು ಸತ್ಯವಿದೆಯೋ ಹೇಳುವಂತಿಲ್ಲ.
ಸರ್ವಜ್ಞ ಎಂಬುದು ಕವಿಯ ಹೆಸರಾಗಿ ತೋರುವುದಿಲ್ಲ. ಇದು ಇವನ ಅಂಕಿತ ಇಲ್ಲವೆ ಬಿರುದಾಗಿರಬಹುದು. ಸರ್ವಜ್ಞ ಎಂಬುದು ಕವಿಯ ಹೆಸರೆಂದೂ ಪರಮಾರ್ಥ ಎಂಬುದು ಇವನ ಅಂಕಿತವೆಂದೂ ಒಂದು ಅಭಿಪ್ರಾಯ. ಸರ್ವಜ್ಞನ ರಚನೆಗಳನ್ನು ವಚನಗಳೆಂದು ಕರೆಯುವುದು ರೂಢಿಯಾಗಿದ್ದರೂ ಅವು ವಾಸ್ತವವಾಗಿ ತ್ರಿಪದಿಗಳು. ಶಿವಶರಣರ ವಚನಗಳಿಗೂ ಸರ್ವಜ್ಞನ ತ್ರಿಪದಿಗಳಿಗೂ ತಿರುಳಿನಲ್ಲಿ ಸಾಮ್ಯವಿರುವುದನ್ನು ಗಮನಿಸಿ ಅವನ್ನೂ ವಚನಗಳೆಂದು ಕರೆದಿರಬಹುದು.
ಸರ್ವಜ್ಞನ ಹೆಸರಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಸಂಖ್ಯೆಯ ತ್ರಿಪದಿಗಳಿವೆ; ಅವುಗಳಲ್ಲಿ ಸುಮಾರು ಒಂದು ಸಾವಿರ ತ್ರಿಪದಿಗಳು ಮಾತ್ರ ಸರ್ವಜ್ಞನವೆಂದೂ ಉಳಿದವು ಪ್ರಕ್ಷಿಪ್ತವೆಂದೂ ಹೇಳಲಾಗಿದೆ.
ಸರ್ವಜ್ಞ ವೀರಶೈವ ಧರ್ಮಕ್ಕೆ ಸೇರಿದವನಂತೆ ತೋರಿದರೂ ಇವನದು ಮತಾತೀತವಾದ ವಿಶಾಲ ದೃಷ್ಟಿ, ಸತ್ಯನಿಷ್ಠುರ ವ್ಯಕ್ತಿತ್ವ. ಇವನೊಬ್ಬ ನಿರ್ಭೀತ ವಿರಕ್ತ ಸಮಾಜದ ರೋಗರುಜಿನಗಳನ್ನು ಬಯಲಿಗೆಳೆದು ಅವಕ್ಕೆ ಚಿಕಿತ್ಸೆ ಮಾಡುತ್ತ, ತಿಳಿವನ್ನು ಹರಡುತ್ತ, ನಾಡಿನಲ್ಲೆಲ್ಲ ಸಂಚರಿಸಿದ ಪರಿವ್ರಾಜಕ. ಮೂಲತಃ ಇವನದು ಆಶುಕವಿತೆಯಿರಬೇಕು.
ಸರ್ವಜ್ಞ ವಚನಶೈಲಿಯ ಮಾದರಿಗೆ ಎರಡು ತ್ರಿಪದಿಗಳನ್ನು ಇಲ್ಲಿ ಉಲ್ಲೇಖಿಸಿದೆ:
ಮಾತಿನಿಂ ನಗೆನುಡಿಯ ಮಾತಿನಿಂ ಹಸೆಹೊಲೆಯ ಮಾತಿನಂ ಸರ್ವಸಂಪದವು ಲೋಕಕ್ಕೆ ಮಾತೇ ಮಾಣಿಕ್ಯ ಸರ್ವಜ್ಞ
ಜಾತಿ ಹೀನನ ಮನೆಯ ಜ್ಯೋತಿತಾ ಹೀನವೆ ಜಾತಿ ವಿಜಾತಿ ಎನಬೇಡ ದೇವನೊಲಿದಾತನೇ ಜ್ಞಾತಿ ಸರ್ವಜ್ಞ
ಸರ್ವಜ್ಞನ ಒಂದೊಂದು ವಚನವೂ ಸ್ವಯಂಪೂರ್ಣವಾದ ಮುಕ್ತಕ ಅಥವಾ ಸುಭಾಷಿತ. ಇವನ ವಚನಗಳಲ್ಲಿ ಪ್ರಸ್ತಾಪವಾಗದಿರುವ ವಿಷಯವೇ ಇಲ್ಲ. ಅವುಗಳಲ್ಲಿ ನೀತಿಯಿದೆ, ತತ್ತ್ವವಿದೆ, ವಿವೇಕವಿದೆ, ವಿಡಂಬನವಿದೆ, ಅನುಭವ ರಸಾಯನವಿದೆ, ಎಲ್ಲವೂ ಸರಸವಾಗಿ ನಿರೂಪಿತವಾಗಿದೆ. ಮಿತ್ರಸಮ್ಮಿತ ಕಾಂತಾಸಮ್ಮಿತಗಳನ್ನು ಸರ್ವಜ್ಞನ ವಚನಗಳಲ್ಲಿ ಕಾಣುತ್ತೇವೆ. ಇವನ ರಚನೆಗಳೆಲ್ಲ ಕಾವ್ಯವಾಗದಿದ್ದರೂ ಬಹಳ ಕಡೆ ಒಳ್ಳೆಯ ಕಾವ್ಯಗುಣಗಳನ್ನು ಮೆರೆಯುತ್ತವೆ. ಹೇಳಬೇಕಾದ್ದನ್ನು ಇವನು ಸರಳ ಸುಲಭವಾದ ಶೈಲಿಯಲ್ಲಿ, ಉಪಮಾನ ದೃಷ್ಟಾಂತ ಗಳ ಮೂಲಕ, ಜನಸಾಮಾನ್ಯರ ಮನಸ್ಸಿಗೆ ನಾಟುವಂತೆ ಹೇಳುತ್ತಾನೆ. ಆದ್ದರಿಂದಲೇ ಇವನ ತ್ರಿಪದಿಗಳು ಗಾದೆಗಳಂತೆ ನಾಡಿನಲ್ಲಿ ಮನೆಮಾತಾಗಿವೆ. ಇವನು ತಮಿಳಿನ ತಿರುವಳ್ಳುವರ್, ತೆಲುಗಿನ ವೇಮನರಂತೆ ಜನತೆಯ ಕವಿಯಾಗಿ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನಗಳಿಸಿದ್ದಾನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ಕುರಿಗಾಹಿ ಮಹಿಳೆ ಕಟ್ಟಿಗೆ ತರಲು ಹೋಗಿದ್ದಾಗ ಆಕೆ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

Mon Feb 21 , 2022
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ನಡೆದ ಕುರಿಗಾಹಿ ಮಹಿಳೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು 24 ಗಂಟೆಗಳಲ್ಲೇ ಭೇದಿಸಿರುವ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕೊಲೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಕೈಗೊಂಡಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಹೇಳಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಕೇವಲ 24 ಗಂಟೆಯೊಳಗಾಗಿ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ […]

Advertisement

Wordpress Social Share Plugin powered by Ultimatelysocial