ಶಂಕರ್ ಮಹಾದೇವನ್

ಶಂಕರ್ ಮಹಾದೇವನ್
ಶಂಕರ್ ಮಹಾದೇವನ್ ಪ್ರಸಿದ್ಧ ಗಾಯಕರು ಮತ್ತು ಸಂಗೀತ ಸಂಯೋಜಕರು.
ಶಂಕರ್ ಮಹಾದೇವನ್ 1967ರ ಮಾರ್ಚ್ 3ರಂದು ಮುಂಬೈನ ಚೆಂಬೂರ್ನಲ್ಲಿ ಜನಿಸಿದರು. ಆತನನ್ನು ಕಂಡರೆ ಅದೇನೋ ಪ್ರೀತಿ ಉಕ್ಕುತ್ತದೆ. ಅದೂ ತಾರೆ ಜಮೀನ್ ಪರ್ ಚಿತ್ರದಲ್ಲಿ ಆತನ ಹಾಡು ಕೇಳಿದ ಮೇಲೆ; ಕಲ್ ಹೋ ನ ಹೋ, ದಿಲ್ ಚಾಹ್ತಾ ಹೈ, ಕಬಿ ಅಲ್ವಿದ ನಾ ಕೆಹೆನಾ, ಬಂಟಿ ಔರ್ ಬಬ್ಲಿಯಂತಹ ಸಿನಿಮಾದಲ್ಲಿ ಆತನ ಕೆಲಸ ನೋಡಿ; ಸಂಸ್ಕೃತವನ್ನೂ ಒಳಗೊಂಡಂತೆ ಎಲ್ಲಾ ಭಾಷೆಗಳಲ್ಲೂ ಆಪ್ತವಾಗಿ ಸುಲಲಿತವಾಗಿ ಹಾಡುವ ಆತನ ಸರಾಗತೆಯ ಕಂಡು; ಮತ್ತು ವಿವಿಧ ವ್ಯಾಪಾರಿ ವೇದಿಕೆಗಳಲ್ಲಿ ಕೂಡ ಸೌಜನ್ಯದಿಂದ ನಡೆಯುವ ಆತನ ಹಿರಿಮೆಯನ್ನು ನೋಡಿ ಸ್ನೇಹ ಗೌರವಗಳು ಉಕ್ಕಿ ಹರಿಯುತ್ತವೆ. ಇಂದಿನ ರೀತಿಯ ರಿಯಾಲಿಟಿ ಸ್ಪರ್ಧೆಗಳ ಕೆಟ್ಟ ಪರಂಪರೆಗಳ ನಡುವೆ ಕೂಡ ತಾನಿರುವ ವೇದಿಕೆಗಳಲ್ಲಿ ಸಂಗೀತ ಪ್ರಿಯನಾಗಿ ಸೌಜನ್ಯಯುತನಾಗಿ, ಸ್ಪರ್ಧಿಗಳ ಆತ್ಮೀಯ ಗುರುವಾಗಿ, ಸುಶ್ರಾವ್ಯ ಹಾಡುಗಾರನಾಗಿ ಶ್ರೇಷ್ಠತೆಯನ್ನು ಮೆರೆಯುತ್ತಿರುವ ಅಪರೂಪವಂತ ಶಂಕರ್ ಮಹಾದೇವನ್. ಇತ್ತೀಚೆಗೆ ಅವರು ಮತ್ತು ಅವರ ಪತ್ನಿ, ಭಾರತೀಯರೇ ತುಂಬಿರುವ ದುಬೈನ ಮಾಲ್ ಒಂದರಲ್ಲಿ ಸಾಧಾರಣರಂತೆ ಯಾರಿಗೂ ವಿಶೇಷರು ಎಂಬ ಭಾವ ನೀಡದಂತೆ ನಡೆದು ಹೋಗುತ್ತಿದ್ದುದು ಕಂಡು ಅಚ್ಚರಿ ಎನಿಸಿತು. ಹೀಗಾಗಿ ಶಂಕರ್ ಅಂದರೆ ಗೌರವ ತಾನೇ ತಾನಾಗಿ ಮೂಡುತ್ತದೆ.
ತನ್ನ ಐದನೆಯ ವಯಸ್ಸಿನಲ್ಲೇ ವೀಣೆ ಹಿಡಿದ ಶಂಕರ್ ಮುಂದೆ ಚನ್ನೈನಲ್ಲಿದ್ದಾಗ ಕರ್ನಾಟಕ ಸಂಗೀತವನ್ನೂ ಮುಂದೆ ಮುಂಬೈಗೆ ವಲಸೆ ಬಂದಾಗ ಹಿಂದೂಸ್ಥಾನೀ ಸಂಗೀತವನ್ನೂ ಅಭ್ಯಾಸ ಮಾಡಿದರು. ಓದಿನಲ್ಲಿ ಕಂಪ್ಯೂಟರ್ ಇಂಜಿನಿಯರ್ ಆದ ಈತ ಮಾಡುತ್ತಿದ್ದ ಪ್ರತಿಷ್ಟಿತ ಸಾಫ್ಟ್ವೇರ್ ಕೆಲಸ ಬಿಟ್ಟು ಸಂಗೀತವನ್ನೇ ವೃತ್ತಿಯಾಗಿ ಹಿಡಿದರು. ಮೊದಲು ತಮಿಳು ಚಿತ್ರಗಳಲ್ಲಿ ಹಾಡಲು ಪ್ರಾರಂಭಿಸಿ ಎ. ಆರ್. ರೆಹಮಾನ್ ಅವರ ಸಂಗೀತ ನಿರ್ದೇಶನದಲ್ಲಿ ಕಂಡುಕೊಂಡೇನ್ ಕಂಡುಕೊಂಡೇನ್ ಚಿತ್ರದ ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಪಡೆದರು. 1998ರಲ್ಲಿ ಬ್ರೆಥ್ ಲೆಸ್ ಎಂಬ ಅವರ ಆಲ್ಬಂ ಬಂದ ಮೇಲೆ ಅವರಿಗೆ ಹಿಂದೀ ಚಿತ್ರರಂಗದಲ್ಲಿ ಅಪಾರ ಬೇಡಿಕೆ ಬಂತು. ತ್ರಿಮೂರ್ತಿ ಜೋಡಿಯಾದ ಶಂಕರ್–ಎಹ್ಸನ್-ಲಾಯ್ ಮುಂದೆ ಮಾಡಿದ ಮೋಡಿಗಳು ಅನೇಕ. ಇಂದಿನ ದಿನದಲ್ಲೂ ಅವರ ಯಶಸ್ಸಿನ ಪಯಣ ಮುಂದುವರೆದಿದೆ.
ಹಾಡುಗಾರನಾಗಿ, ಗೀತರಚನಕಾರನಾಗಿ ಹಾಗೂ ತನ್ನ ಗೆಳೆಯರಾದ ಎಹ್ಸನ್ ಮತ್ತು ಲಾಯ್ ಜೊತೆಗೆ ಸಂಗೀತ ಸಂಯೋಜಕನಾಗಿ ಶಂಕರ್ ತೋರಿರುವ ಪ್ರತಿಭೆ ಭಾರತೀಯ ಚಿತ್ರರಂಗಕ್ಕೆ ಒಂದು ಹೊಸ ಹುರುಪನ್ನು ತಂದುಕೊಟ್ಟಿತು ಎಂಬ ಮಾತಿನಲ್ಲಿ ಯಾವುದೇ ಅತಿಶಯೋಕ್ತಿಯೂ ಇಲ್ಲ. ಹಿಂದೀ ಚಿತ್ರರಂಗ ಮತ್ತು ತಮಿಳು ಚಿತ್ರರಂಗದಲ್ಲಿ ರಾಜ್ಯ ಪ್ರಶಸ್ತಿ ಮತ್ತು ರಾಷ್ಟ್ರಪ್ರಶಸ್ತಿಗಳಲ್ಲದೆ ಅದೇ ಸಾಧನೆಯನ್ನು ಅವರು ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲೂ ಮಾಡಿರುವುದು ವಿಶೇಷ. ಕನ್ನಡದ ‘ಮಂಜುನಾಥ’ ಚಿತ್ರದಲ್ಲಿ ಶಂಕರ್ ಮಹಾದೇವನ್ ಹಾಡಿರುವ ‘ಓಂ ಮಹಾಕಾರ ರೂಪಂ ಶಿವಂ, ಶಿವಂ’ ಹಾಡು ಮನೋಜ್ಞವಾಗಿದೆ. 2015ರ ವರ್ಷದಲ್ಲಿ ರಿಕ್ಷಾ ಡ್ರೈವರ್ ಎಂಬ ಚಿತ್ರದಲ್ಲಿನ ಗಾಯನಕ್ಕೂ ಅವರು ತುಳು ಚಿತ್ರೋತ್ಸವದ ಪ್ರಶಸ್ತಿ ಪಡೆದಿದ್ದಾರೆ. 2019ರಲ್ಲಿ ಸಂದ ಪದ್ಮಶ್ರೀ ಪ್ರಶಸ್ತಿಯೂ ಸೇರಿದಂತೆ ಅವರಿಗೆ ಅನೇಕ ಗೌರವಗಳು ಸಂದಿವೆ.
ಸಂಗೀತದ ವಿವಿಧ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರಕಾರಗಳಲ್ಲಿ ಪ್ರಸಿದ್ಧ ಸಾಧಕರೊಡನೆ ಶಂಕರ್ ಮಹಾದೇವನ್ ಸಾಧಿಸಿರುವ ಸಹಯೋಗ ಮತ್ತು ಸಾಧನೆಗಳು ಕೂಡಾ ವಿಶಿಷ್ಟರೀತಿಯದ್ದು. ‘ಶಂಕರ್ ಮಹಾದೇವನ್ ಅಕಾಡೆಮಿ’ ಸ್ಥಾಪಿಸಿ ಉತ್ತಮ ಪ್ರತಿಭೆಗಳನ್ನು ಹೊರತರುವ ಕೆಲಸವನ್ನೂ ಸಹಾ ಶಂಕರ್ ಮಾಡುತ್ತಿದ್ದಾರೆ. ತಾವು ಮಾಡುತ್ತಿರುವ ಪ್ರತೀ ಕೆಲಸದಲ್ಲೂ ಪ್ರೀತಿ ತುಂಬಿ ವಿಶಿಷ್ಟತೆ ಸಾಧಿಸುತ್ತಿರುವ ಶಂಕರ್ ಮಹಾದೇವನ್ ಅವರ ಸಾಧನೆ ಸರ್ವ ರೀತಿಯಲ್ಲೂ ಗಮನಾರ್ಹವಾದದ್ದು. ಈ ಮಹಾನ್ ಪ್ರತಿಭೆ ಸಂಗೀತಲೋಕದಲ್ಲಿ ನಿರಂತರ ಬೆಳಗುತ್ತಿರಲಿ ಎಂದು ಹಾರೈಸೋಣ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸತ್ಯಕಾಮ |On the birth anniversary of great writer Sathyakama |

Thu Mar 3 , 2022
ಬಹಳಷ್ಟು ವೇಳೆ ನಮ್ಮ ಕ್ರಿಯೆಗಳು ಮತ್ತು ಓದುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿಕೊಂಡಲ್ಲಿ, ಅವು ಬಹುತೇಕವಾಗಿ ಅಭ್ಯಾಸಬಲದಿಂದ ಹುಟ್ಟುವಂತಾಗಿದ್ದು, ನಾವು ಆ ಅಭ್ಯಾಸಬಲದ ಹಾದಿಯಲ್ಲಿ ಕ್ರಮೇಣವಾಗಿ ನಮ್ಮ ಅಭಿರುಚಿಗಳನ್ನು ಸೃಷ್ಟಿಸಿಕೊಂಡಿರುತ್ತೇವೆ. ಶೈಕ್ಷಣಿಕ ಪರಿಧಿಯಾಚೆಗಿನ ನಮ್ಮ ಓದಿನ ಅಭ್ಯಾಸಗಳು ಪ್ರಾರಂಭಗೊಂಡಾಗ ನಮಗೆ ಅದನ್ನು ಬರೆದವರಲ್ಲಾಗಲೀ ಕಥಾವಸ್ತುವಿನ ಬಗೆಗಾಗಲೀ ಯಾವುದೇ ಪೂರ್ವಾಗ್ರಹವಿರುವುದಿಲ್ಲ. ಹೀಗೆ ನಾನು ಓದಲು ಪ್ರಾರಂಭಿಸಿದ ದಿನಗಳಲ್ಲಿ ನನ್ನನ್ನು ಅತೀವ ಆಕರ್ಷಣೆಗೆ ಸಿಲುಕಿಸಿದ ಬರಹಗಳಲ್ಲಿ ಸತ್ಯಕಾಮ ಅವರ ಕಥೆಗಳು ಪ್ರಮುಖವಾಗಿವೆ. ಅಂದಿನ ದಿನಗಳಲ್ಲಿ ಕೆಲವೊಂದು […]

Advertisement

Wordpress Social Share Plugin powered by Ultimatelysocial