ಶಿವರಾಮ ಕಾರಂತ ಲೇಖಕರು

 

ಒಂದಾನೊಂದು ಕಾಲದಲ್ಲಿ ಶಿವರಾಮ ಕಾರಂತರು ಅಂತ ಒಬ್ಬರಿದ್ರಂತೆ…. ಹೀಗೆ ಮುಂದಿನ ಪೀಳಿಗೆಯ ಮಕ್ಕಳಿಗೆ ಹೇಳಿದರೆ ಅವರು ಇದನ್ನೂ ಅಚ್ಚರಿಯ ಕಥೆಯಂತೆ ಕೇಳಿದರೆ ಅಚ್ಚರಿಯಿಲ್ಲ. ದಿವಾಕರ್ ಅವರು ಒಮ್ಮೆ ವಿದೇಶದಲ್ಲಿ ಕಾರಂತರ ಬಗ್ಗೆ ಉಪನ್ಯಾಸ ಮಾಡಿದಾಗ, ಅಲ್ಲಿನ ಜನ “ನೀನು ಹೇಳಿದ ಕಥೆ ತುಂಬಾ ಕುತೂಹಲಕಾರಿಯಾಗಿ, ಚೆನ್ನಾಗಿತ್ತು” ಅಂದ್ರಂತೆ. ಇಂದು ಶಿವರಾಮ ಕಾರಂತರು ಈ ಲೋಕ ಬಿಟ್ಟು 24 ವರ್ಷ ಆಯ್ತು. ಅವರು ನಿಧನರಾದದ್ದು 1997ರ ಡಿಸೆಂಬರ್ 9ರಂದು.
ಕಾರಂತರು ಮಾಡಿದ ಕೆಲಸ, ಬರೆದ ಬರಹಗಳನ್ನು ನೋಡಿದರೆ, ಒಬ್ಬರೇ ವ್ಯಕ್ತಿ, ಒಂದೇ ಜೀವನದಲ್ಲಿ ಇಷ್ಟೆಲ್ಲ ಮಾಡಲು ಸಾಧ್ಯವೆ ಎಂದು ಬೆರಗುಪಡುವಂತಾಗುತ್ತದೆ. ಸಮಯದ ಅಭಾವದ ಬಗ್ಗೆ ನಾವೆಲ್ಲ ಗೊಣಗುಟ್ಟುವ ಪರಿಯ ಬಗ್ಗೆ ಡಾ. ಕೋಟ ಶಿವರಾಮ ಕಾರಂತರು ಹೇಳುತ್ತಾರೆ,. “….ನಾನು ಸಮಯದ ಅಭಾವವನ್ನು ಕುರಿತು ಎಂದೂ ನೆಪ ಹೇಳಿದವನಲ್ಲ. ಪ್ರತಿದಿನ ರಾತ್ರಿ ನಾನು ಒಂಭತ್ತು ತಾಸುಗಳ ನಿದ್ದೆ ಸಾಲದೆ ಹಗಲು ಸಹ ಒಂದು ತಾಸು ನಿದ್ದೆ ಮಾಡುತ್ತೇನೆ. ಅಥವಾ ಮನಸ್ಸು ಬಂದರೆ ಇನ್ನೂ ತುಸು ಹೆಚ್ಚಾಗಿ ನಿದ್ದೆ ಮಾಡುವಷ್ಟು ಅವಕಾಶವಿದೆ ಎಂದು ತಿಳಿದಿದ್ದೇನೆ. ಸಮಯ ಸಾಲದೆಯೆ ನನ್ನ ಯಾವ ಕೆಲಸವೂ ಈ ತನಕ ಕೆಟ್ಟದ್ದು ಕಾಣಿಸುವುದಿಲ್ಲ. ನನಗಿರುವ ಕಷ್ಟ – ಕೈಯಲ್ಲಿ ಒಂದಲ್ಲ ಒಂದು ಕೆಲಸವಿಲ್ಲದಿದ್ದರೆ ಸಮಯ ಕಳೆಯುವುದು ಹೇಗೆ ಎಂಬ ಚಿಂತೆ! ಇಂತದೇ ನಿಶ್ಚಿತ ಕೆಲಸವನ್ನು ಮಾಡಬೇಕು ಎಂದು ಮನಸ್ಸಿಗೆ ಹೊಳೆಯದೆ ಹೋಯಿತಾದರೆ ಒಂದಲ್ಲ ಒಂದು ಪುಸ್ತಕವನ್ನು ತೆರೆದು ಓದಲು ಎತ್ತಿಕೊಳ್ಳುತ್ತೇನೆ. ಅದಕ್ಕಾಗಿ ಆಗಾಗ ಒಳ್ಳೆಯ ಪುಸ್ತಕ ತರಿಸಿಕೊಳ್ಳುತ್ತೇನೆ. ಅದಕ್ಕೆ ವಿಷಯಗಳ ಗೊತ್ತು ಗುರಿಯಿಲ್ಲ. ಹಾಗೆ ತರಿಸಿಕೊಂಡು ಓದಿದ ಪುಸ್ತಕಗಳಲ್ಲಿ ಕೆಲವು ರುಚಿಸುತ್ತವೆ. ಕೆಲವು ರುಚಿಸುವುದಿಲ್ಲ. ಒಳ್ಳೆಯ ಪುಸ್ತಕಗಳು ಕೈಗೆ ಸಿಕ್ಕಿದರೆ – ಆಗ ಬೇರೊಂದೇ ಚಿಂತನೆ ಮೂಡುತ್ತದೆ. ಮಾಡಬಹುದಾದ ಕೆಲಸಗಳು ವಿಪುಲವಾಗಿವೆ. ಸಮಯವೂ ಧಾರಾಳವಾಗಿದೆ. ಬದುಕಿಗೂ, ಮಾನವೀಯ ಚಟುವಟಿಕೆಗಳಿಗೂ ನಿಕಟ ಸಂಬಂಧವಿದೆ ಎಂಬುದು ನನ್ನ ತಿಳಿವು. ನಾವು ಬದುಕಿದ್ದೇವೆ – ಎಂದು ಅನಿಸಿಕೊಳ್ಳುವುದಕ್ಕಾದರೂ ನಮಗೆ ಒಂದಲ್ಲ ಒಂದು ಚಟುವಟಿಕೆ ಬೇಕೇ ಆಗುತ್ತದೆ. ಆ ಚಟುವಟಿಕೆಯೇ ನಮ್ಮ ಮನಸ್ಸಿನ ಅಭಿರುಚಿಗೆ ಒಗ್ಗಿದ ಒಂದು ಕೆಲಸ ಅನಿಸಿದರಾಯಿತು” (ಸ್ಮೃತಿ ಪಟಲದಿಂದ, ಸಂಪುಟ ೨)
ಕಾರಂತರು ತಾವು ಬದುಕಿದ 95ವರ್ಷಗಳಲ್ಲಿ ನಿರಂತರವಾಗಿ ನವ ಯುವಕರಂತೆ ಊರೂರು ಅಲೆದು, ಜನಸಮುದಾಯದಲ್ಲಿ ಬೆರೆತು, ತಾವು ಬದುಕಿನಲ್ಲಿ ಕಂಡುಕೊಂಡ ದರ್ಶನಗಳನ್ನು ಹಂಚಿಕೊಳ್ಳುತ್ತ, ಕೇಳುಗರಿಗೆ ಮಹಾನ್ ಪುರುಷರ ವ್ಯಾಖ್ಯೆಗಳನ್ನು ಕೇಳುತ್ತಿರುವ ಅನುಭವವಾಗುತ್ತಿರುವಷ್ಟರಲ್ಲೇ, ನಾನಿನ್ನೂ ಬದುಕಿನ ವಿದ್ಯಾರ್ಥಿ ಎಂದು ವಿನೀತಭಾವ ತೋರ್ಪಡಿಸಿ ಈ ಬ್ರಹ್ಮಾಂಡದ ಅಖಂಡತೆಯಲ್ಲಿ ಮತ್ತೊಮ್ಮೆ ಕಾರ್ಯಪ್ರವೃತ್ತರಾಗುತ್ತಿದ್ದರು.
ಡಾ. ಶಿವರಾಮ ಕಾರಂತರು ಮಂಗಳೂರಿಗೆ 50 ಮೈಲಿ ದೂರದ ಕೋಟ ಎಂಬ ಚಿಕ್ಕ ಗ್ರಾಮದಲ್ಲಿ 1902ರ ಅಕ್ಟೋಬರ್ 10ರಂದು ಜನಿಸಿದರು. ಅವರ ತಂದೆ ಕೆ. ಶೇಷ ಕಾರಂತರು. ತಾಯಿ ಲಕ್ಷ್ಮಿ. ಕಾರಂತರು ತಮ್ಮ ಪ್ರೌಢ ಶಿಕ್ಷಣವನ್ನು ಕೋಟ ಮತ್ತು ಕುಂದಾಪುರಗಳಲ್ಲಿ ಪಡೆದರು. ಚಿಕ್ಕಂದಿನಲ್ಲೇ ಅವರಿಗೆ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿತು.
ಕಾರಂತರು ಶಾಲೆಯಲ್ಲಿ ಕುಳಿತು ಕಲಿತದ್ದಕ್ಕಿಂತ ನಿಸರ್ಗದಲ್ಲಿ ವಿಹರಿಸಿ ಬದುಕಿನ ಶಾಲೆಗಳಲ್ಲಿ ಕಲಿತಿದ್ದೆ ಹೆಚ್ಚು. ಅವರದೇ ಪರಿಯಲ್ಲಿ ಹೇಳುವುದಾದರೆ ಮುಂಜಾನೆಯ ಹಕ್ಕಿಗಳ ಉಲಿತ, ಹರಳುಗಲ್ಲಿನ ಮೇಲೆ ಓಡುವ ನದಿಯೊಂದರ ನಾದ, ಸಂಜೆಯ ಗಾಳಿಗೆ ಮಿದುವಾಗಿ ಉರುಳುವ ಕಡಲಿನ ಮೊರೆತ, ಅಲೆಗಳು ಮರಳ ದಿನ್ನೆಯನ್ನೇರಿ ತಿರುಗಿ ಕಡಲನ್ನು ಸೇರುವ ಜೋಗುಳ, ನೀಲ ಬಾನಿನ ಚುಕ್ಕಿಗಳ ವಿಸ್ತಾರ ರಾಜ್ಯ, ಹಸಿರು ಕಾನನ ಇವುಗಳೆಲ್ಲ ಅವರಿಗೆ ಪಾಠಕ್ಕಿಂತ ಹೆಚ್ಚು ಪ್ರಿಯ.
ಜೀವನದ ಸಹಸ್ರಾರು ಸಮಸ್ಯೆಗಳಿಗೆ ಸದಾ ತೆರೆದ ಮನಸ್ಸು, ಕುಂದದ ಕುತೂಹಲ ಮತ್ತು ನಿರಂತರ ಸಾಧನೆಯ ಛಲ, ಎಲ್ಲವನ್ನೂ ಪರೀಕ್ಷಿಸಿದ ನಂತರವೇ ಸ್ವೀಕರಿಸುವ ಅಥವಾ ನಿರಾಕರಿಸುವ ಸ್ವಭಾವ ಇವೆಲ್ಲವನ್ನೂ ಕಾರಂತರು ಪ್ರಾರಂಭದಿಂದಲೇ ಮೈಗೂಡಿಸಿಕೊಂಡರು. ತಮಗನ್ನಿಸಿದ್ದನ್ನು ಕೈಗೊಳ್ಳಲು ಅವರು ಹಿಂದೆ ಮುಂದೆ ನೋಡಿದವರಲ್ಲ. ಗಾಂಧೀಜಿಯವರ ಅಸಹಕಾರ ಚಳುವಳಿಯ ಕರೆಯ ಬಗ್ಗೆ ಪತ್ರಿಕೆಯಲ್ಲಿ ಓದಿ ಆ ಕ್ಷಣದಲ್ಲೇ ತಮ್ಮ ಶಾಲಾ ಪ್ರಿನ್ಸಿಪಾಲರಿಗೆ, “I want to non-co-operate with your education system” ಎಂದು ಚೀಟಿ ನೀಡಿ ಹೊರಬಂದರು. ಇದೇನು, ಆ ಹುಡುಗ ಲೀವ್ ಲೆಟರ್ ಇಟ್ಟಂತೆ ಈ ಪತ್ರವನ್ನಿಟ್ಟು ಹೋಗುತ್ತಿದ್ದಾನಲ್ಲ, ಅವನನ್ನು ಕರೆಯಿರಿ ಎಂದು ಹೇಳುವಷ್ಟರಲ್ಲಿ ಇವರು ಹಿಂದಿರುಗಿ ನೋಡದೆ ಹೊರಟುಬಿಟ್ಟಿದ್ದರು. ಸ್ವಾತ್ರಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ ಇವರು ಗಾಂಧೀವಾದದಲ್ಲಿ ಪ್ರಭಾವಿತರಾಗಿ ಸಾಕಷ್ಟು ಕಾಲ ಸವೆಸಿದರೂ ಅದಕ್ಕೇ ಜೋತುಬೀಳದೆ ಬದುಕಿನ ವೈವಿಧ್ಯತೆಯೆಡೆಗೆ ದೃಷ್ಟಿ ಹಾಯಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಉದಯಶಂಕರ್ ಮಹಾನ್ ನೃತ್ಯ ಕಲಾವಿದ.

Sat Dec 24 , 2022
  ಸಾಮಾನ್ಯವಾಗಿ ಪ್ರದರ್ಶನ ನೃತ್ಯ ಕಲೆಯಲ್ಲಿ ಹಿಂದಿನ ದಿನಗಳಲ್ಲಿ ಸ್ತ್ರೀಯರೇ ಹೆಚ್ಚು ಪ್ರಾಧಾನ್ಯತೆ ಪಡೆದಿದ್ದರು. ಪುರುಷರೂ ನೃತ್ಯ ಕಲೆಯಲ್ಲಿ ನುರಿತವರೆಂಬ ಸಂಗತಿ ಸಾಮಾನ್ಯಜನರ ಅನುಭವಕ್ಕೆ ಬಂದದ್ದೇ ಉದಯಶಂಕರನನ್ನು ನೋಡಿದ ಮೇಲೆ ಎಂಬ ಪ್ರತೀತಿ ಇದೆ. ಅಂತರರಾಷ್ಟ್ರೀಯ ಪ್ರಸಿದ್ಧಿ ಪಡೆದ ಭಾರತೀಯ. ನೃತ್ಯ ಕಲಾವಿದರಲ್ಲಿ ಬಹುಶಃ ಮೊಟ್ಟಮೊದಲನೆಯವರು ಉದಯಶಂಕರ್. ಉದಯಶಂಕರ್ 1900ರ ಡಿಸೆಂಬರ್ 8ರಂದು ಉದಯಪುರದಲ್ಲಿ ಜನಿಸಿದರು. ಅವರ ತಂದೆ ರಾಜಸ್ಥಾನದ ಝಲವಾರಾ ಪ್ರಾಂತ್ಯದ ದಿವಾನರಾಗಿದ್ದರು. ಬಾಲ್ಯದಲ್ಲಿಯೇ ಕಲೆಯತ್ತ ಒಲವನ್ನು ತೋರಿದ್ದ […]

Advertisement

Wordpress Social Share Plugin powered by Ultimatelysocial