ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ!

ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ ಜನ್ಮದಿನವಿದು. 1926ರ ಫೆಬ್ರವರಿ 7ರಂದುಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಹುಟ್ಟಿದ ಜಿ. ಎಸ್. ಶಿವರುದ್ರಪ್ಪ (ಜೀಯೆಸ್ಸೆಸ್) ಈ ನಾಡಿನಲ್ಲಿ ವ್ಯಾಪಕವಾಗಿ ಸಂಚರಿಸಿದ್ದವರು. ಪ್ರವಾಸ ಪ್ರೀತಿಯ ಜೀಯೆಸ್ಸೆಸ್ ಈ ಸುತ್ತುವಿಕೆಯಿಂದ ಬಹುಶ್ರುತತೆಯನ್ನು, ಸಮಚಿತ್ತವನ್ನು, ಜನಸಂಪರ್ಕವನ್ನು ಪಡೆದಿದ್ದರು.ಸೃಜನ, ವಿಮರ್ಶೆ, ಮೀಮಾಂಸೆ, ಅಧ್ಯಯನ, ಅಧ್ಯಾಪನ, ಆಡಳಿತ, ಸಂಘಟನೆ – ಈ ಮುಂತಾದ ಸಾಂಸ್ಕೃತಿಕ ನೆಲೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಕನ್ನಡ ಸಂಸ್ಕೃತಿಯ ಚಲನಶೀಲತೆಗೆ ತಮ್ಮ ಕೊಡುಗೆ ನೀಡುತ್ತ ಬಂದ ಮುಖ್ಯರಲ್ಲಿ ಜೀಯೆಸ್ಸೆಸ್ ಒಬ್ಬರಾಗಿದ್ದಾರೆ. ಡಾ. ಜಿ. ಎಸ್. ಶಿವರುದ್ರಪ್ಪನವರು ಗೋವಿಂದ ಪೈ, ಕುವೆಂಪು ನಂತರ ಮೂರನೆಯ ರಾಷ್ಟ್ರಕವಿಯಾಗಿ ನಮ್ಮ ಕನ್ನಡಿಗರ ಹೆಮ್ಮೆಯಾಗಿದ್ದಾರೆ.
ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಯಾಗಿ, ದೂರ ದೂರದ ಹಳ್ಳಿಗಾಡುಗಳಲ್ಲಿ ಓದಿನ ಸೌಲಭ್ಯಗಳಿಗಾಗಿ ನಿಧಾನವಾಗಿ ತೆರೆದುಕೊಳ್ಳುತ್ತಿದ್ದ ಜನಸಮುದಾಯದಿಂದ ಬಂದು ಶ್ರಮ, ನಿಷ್ಠೆ, ಹಾಗೂ ಪ್ರತಿಭೆಗಳಿಂದ ರಂಗದಲ್ಲಿ ಮುಖ್ಯರಾಗತೊಡಗಿದ್ದ, ಹಾಗೆ ತೊಡಗಿ ಯಶಸ್ಸು ಪಡೆದ ಮೊದಲ ತಲೆಮಾರಿಗೆ ಜೀಯೆಸ್ಸೆಸ್ ಸೇರುತ್ತಾರೆ. ಕನ್ನಡ ನವೋದಯದ ಮುಂದಾಳುಗಳು ರೂಪಿಸಿದ ಹಾದಿಯಲ್ಲಿ ನಡೆದು ಸಮರ್ಥ ಉತ್ತರಾಧಿಕಾರಿಗಳೆಂದು ಎಂದು ಸಾಬೀತು ಮಾಡಿದರು.ಶಿಕ್ಷಕ ತಂದೆಯೊಡನೆ ಸುತ್ತುತ್ತ ಊರೂರುಗಳಲ್ಲಿ ಶಿಕ್ಷಣ ಪಡೆದು ಮೈಸೂರು ಸೇರಿ ವೆಂಕಣ್ಣಯ್ಯ, ಕುವೆಂಪು ಅವರ ಒತ್ತಾಸೆಯಲ್ಲಿ ಬಿ.ಎ (ಆನರ್ಸ್), ಎಂ.ಎ ಹಾಗೂ ಪಿಎಚ್.ಡಿ ಗಳನ್ನು ಪಡೆದರು. ಮಹಾರಾಜ ಕಾಲೇಜು ಆಗ ಟಂಕಸಾಲೆ. ಅಲ್ಲಿ ಪ್ರಮಾಣೀಕರಣಗೊಂಡರೆ ಮಾತ್ರ ಸಾಹಿತ್ಯಕ ವ್ಯಕ್ತಿತ್ವಕ್ಕೆ ಚಲಾವಣೆ ಸಿಗುವಂತೆ ಇದ್ದ ಕಾಲ. ವಿಶ್ವವಿದ್ಯಾಲಯದ ಹೊರಗಿದ್ದವರೂ ಒಂದಲ್ಲ ಒಂದು ಬಗೆಯಲ್ಲಿ ಈ ಟಂಕಸಾಲೆಯ ವ್ಯಾಪ್ತಿಯ ಒಳಗಾಗಿಯೇ ಇದ್ದರೆಂಬುದಕ್ಕೆ ಪ್ರಬುದ್ಧ ಕರ್ನಾಟಕ ಹಾಗೂ ಮಹಾರಾಜ ಕಾಲೇಜು ಕರ್ನಾಟಕ ಸಂಘ ಪ್ರಕಟಿಸಿದ ಗ್ರಂಥಗಳ ಪುಟಗಳು ಸಾಕ್ಷಿಯಾಗಿವೆ. ಜೀಯೇಸ್ಸೆಸ್ ಅಲ್ಲಿ ಕವಿಯಾಗುವ ಹಂಬಲಕ್ಕೆ ಪುಷ್ಟಿ ಪಡೆದರು. ಮಾಸ್ತಿಯವರು ‘ಜೀವನ’ದಲ್ಲಿ ಈ ಕವಿಯನ್ನು ಮೊದಲು ಅನಾವರಣಗೊಳಿಸಿದರಾದರೂ ಜೀಯೆಸ್ಸೆಸ್ ಹಸಿರು ಬಾವುಟ ಕಂಡದ್ದು ಕುವೆಂಪು ಅವರಲ್ಲಿ. ಈ ಮಹಾರಾಜ ಕಾಲೇಜು ಇವರೊಳಗಿನ ವಿಮರ್ಶಕ ಮೀಮಾಂಸಕರನ್ನೂ ಬೆಳೆಸಿತು.ಜೀಯೆಸ್ಸೆಸ್ ಮೈಸೂರು ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳಲ್ಲಿ (ದಾವಣಗೆರೆ, ಶಿವಮೊಗ್ಗೆ, ಮೈಸೂರು) ಅಧ್ಯಾಪಕರಾಗಿ ವೃತ್ತಿಜೀವನವನ್ನು ಆರಂಭಿಸಿದರು. ಹೈದರಾಬಾದ್ ಉಸ್ಮಾನಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯರಾಗಿ ಕೆಲಸಮಾಡಿ, ಮರಳಿ ಮಹಾರಾಜಾ ಕಾಲೇಜಿಗೆ ಬಂದು, ಅನಂತರ (1966) ಬೆಂಗಳೂರು ವಿಶ್ವವಿದ್ಯಾಲಯ ಸೇರಿ, 1970ರಿಂದ ಕನ್ನಡ ಅಧ್ಯಯನ ಕೇಂದ್ರದ ಮುಖ್ಯರಾದರು. ಇಲ್ಲಿ ಎರಡು ದಶಕಗಳ ಕಾಲ ಕಾವ್ಯ, ಕಾವ್ಯಮೀಮಾಂಸೆಗಳ ಪಾಠ ಹೇಳಿದರು. ಕನ್ನಡದ ಅತಿ ಪ್ರಭಾವಶಾಲಿ ಅಧ್ಯಾಪಕರ ಪರಂಪರೆಗೆ ಜೀಯೆಸ್ಸೆಸ್ ಸೇರಿದವರು. ಪ್ರಾಚೀನ ಹಾಗೂ ಆಧುನಿಕ ಕನ್ನಡ ಕಾವ್ಯ, ಇಂಗ್ಲಿಷ್ ರೋಮಾಂಟಿಕ್ ಕಾವ್ಯ, ಐರೋಪ್ಯ ನವ್ಯಕಾವ್ಯ, ಪಾಶ್ಚಾತ್ಯ ಮಹಾಕಾವ್ಯ ಹಾಗೂ ತೌಲನಿಕ ಕಾವ್ಯ ಮೀಮಾಂಸೆ – ಇವು ಅವರು ಪಾಠ ಹೇಳಿದ ಮುಖ್ಯ ವಲಯಗಳು. ಎಲ್ಲ ಕಾಲದ, ಎಲ್ಲ ದೇಶದ ಕವಿಗಳನ್ನು ಕನ್ನಡದ ಸಂವೇದನೆಯ ಮೂಲಕವೇ ಗ್ರಹಿಸಬಯಸುವ, ಪರೋಕ್ಷವಾಗಿ ಒಂದು ಬಗೆಯ ಶುದ್ಧ ಕಾವ್ಯವನ್ನು ಹುಡುಕುವ ವಿಧಾನವನ್ನು ಬಳಸಿದರು. ಅವರ ಪಾಠಗಳು ಪೂರ್ವಸಿದ್ಧತೆ, ವಿವರಗಳ ಮಂಡನೆ, ಚಿಂತನಶೀಲತೆ, ಸಾಮಾಜಿಕ ಒಳನೋಟಗಳನ್ನು ಒಳಗೊಂಡಿರುವುದರ ಜೊತೆಗೆ ಹೊಸದನ್ನು ಅಳವಡಿಸಿಕೊಳ್ಳುವ, ಹೊಸದಾದುದಕ್ಕೆ ಪ್ರತಿಕ್ರಯಿಸುವ ಆಸಕ್ತಿಯಿಂದ ಕೂಡಿರುತ್ತಿದ್ದವು. ಅವರ ಪಾಠಗಳು ಅವರ ವಿದ್ಯಾರ್ಥಿಗಳನ್ನು ಚಿಂತನೆಗೆ ಹಚ್ಚಿ ಮೊಳೆತು ಬೆಳೆದಿವೆಯಾಗಿ, ಜೀಯೆಸ್ಸೆಸ್ ಪರೋಕ್ಷವಾಗಿ ತರಗತಿಯ ಹೊರಗೂ ಮೇಷ್ಟರಾಗಿದ್ದರು. ಅವರ ಹಲವಾರು ಶಿಷ್ಯರು ಕನ್ನಡ ವಿಮರ್ಶೆ ಮತ್ತು ಸಾಹಿತ್ಯಾಧ್ಯಯನದ ಕ್ಷೇತ್ರದ ಕೃಷಿಯಲ್ಲಿ ತೊಡಗಿ ಅಪಾರ ಸಾಧನೆ ಮಾಡಿದ್ದಾರೆ.ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಿರ್ದೇಶಕರಾಗಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸಾಹಿತ್ಯ ಸಂಬಂಧದ ಚಟುವಟಿಕೆಗಳನ್ನು ಸಂಯೋಜಿಸಿ, ಸಂಘಟಿಸಿ, ನಿರ್ವಹಿಸಿ ಜೀಯೆಸ್ಸೆಸ್ ಹೆಸರಾಗಿದ್ದರು. ಕನ್ನಡ ವಿಮರ್ಶೆಯ ಬೆಳವಣಿಗೆಗೆ ಅವರು ಹಾಕಿಕೊಂಡ ಹಲವು ಯೋಜನೆಗಳನ್ನು ಕಾರ್ಯಗತ ಮಾಡಿದರು. ‘ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ’ಯ ಸಂಪುಟಗಳು ಮತ್ತು ‘ಸಾಹಿತ್ಯ ವಾರ್ಷಿಕ’ದ ಯೋಜನೆಗಳು ಅನನ್ಯವಾದವು. ಸಾಂಸ್ಥಿಕ ಪ್ರಯತ್ನದ ಸಾಹಿತ್ಯ ಚರಿತ್ರೆಯ ಯೋಜನೆಯಲ್ಲಿ ವಿವಿಧ ಚಿಂತನಾಕ್ರಮಗಳ ಮೇಳವನ್ನು ‘ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ’ಯು ಸಾಧಿಸಿದರೆ, ‘ಸಾಹಿತ್ಯ ವಾರ್ಷಿಕ’ ದಾಖಲೆಯ ಜೊತೆಗೆ ವಿಮರ್ಶೆಯ ಬೆಳವಣಿಗೆಯ ದಿಕ್ಕನ್ನು ಕೂಡ ಸಾಧಿಸಲು ಸಮರ್ಥವಾಯಿತು. ಇಂಥ ಪ್ರಯತ್ನಗಳನ್ನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಜೀಯೆಸ್ಸೆಸ್ ಮುಂದುವರೆಸಿ ಯಶಸ್ಸು ಸಾಧಿಸಿದ್ದರು.ಜೀಯೆಸ್ಸೆಸ್ ಅವರು ಕನ್ನಡ ಸಾಹಿತ್ಯ ಪಂಡಿತರಿಗೆ, ಸಾಹಿತ್ಯ ಚಿಂತಕರಿಗೆ, ಸಾಹಿತ್ಯ ಪ್ರಿಯರಿಗೆ ಎಷ್ಟು ಪ್ರಿಯರೋ, ಜನಸಾಮಾನ್ಯರಿಗೆ ಕೂಡ ಬಲುಪ್ರಿಯರು. ಅವರ ಭಾವಗೀತೆಗಳು ಹಲವಾರು ಪ್ರಮುಖ ಹಾಡುಗಾರರ, ಜನಸಾಮಾನ್ಯರ ಧ್ವನಿಗಳಲ್ಲಿ ಹಲವಾರು ದಶಕಗಳಿಂದ ನಲಿಯುತ್ತ ಸಾಗಿದೆ. ‘ಎದೆ ತುಂಬಿ ಹಾಡಿದೆನು ಅಂದು ನಾನು’ ಹಾಡನ್ನು ಅನುಭಾವಿಸದ ಕನ್ನಡಿಗನೇ ಇಲ್ಲ. ಎಲ್ಲ ಮಾದರಿಯ ಕವಿತೆಗಳಲ್ಲಿ, ಹಾಡುಗಳಲ್ಲಿ ಅದು ನಿರಂತರವಾಗಿ ಜನರ ನಾಲಿಗೆಯಲ್ಲಿ, ಜನಮಾನಸದಲ್ಲಿ ಬೆಳಗುತ್ತಿದೆ. ‘ಉಡುಗಣವೇಷ್ಟಿತ ಚಂದ್ರ ಸುಶೋಭಿತ ನೀಲಾಂಬರ ಸಂಚಾರಿ’, ‘ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ’, ‘ಕಾಣದ ಕಡಲಿಗೆ ಹಂಬಲಿಸಿದೆ ಮನ’, ‘ಯಾರವರು ಯಾರವರು ಯಾರವರು ಯಾರೋ’, ‘ಆಕಾಶದ ನೀಲಿಯಲ್ಲಿ ಚಂದ್ರತಾರೆ ತೊಟ್ಟಿಲಲ್ಲಿ’, ‘ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು’, ‘ಹಾಡು ಹಳೆಯದಾದರೇನು’, ‘ಯಾವುದೀ ಪ್ರವಾಹವೂ’, ‘ಬೆಳಗು ಬಾ ಹಣತೆಯನು’, ‘ನೀನು ಮುಗಿಲು ನಾನು ನೆಲ’ ಹೀಗೆ ಅವರ ಭಾವಗೀತೆಗಳನ್ನು ಒಂದಾದ ಮೇಲೆ ಒಂದು ನೆನಪಿಸಿಕೊಳ್ಳುತ್ತಲೇ ಇರಬೇಕು ಎಂದೆನಿಸುತ್ತದೆ ಮಾತ್ರವಲ್ಲ ಆ ನೆನಪೇ ಒಂದು ಸವಿ ಪಯಣದ ಮೆಲುಕಿನಂತಿರುತ್ತದೆ. ಜೀಯೆಸ್ಸೆಸ್ ಕನ್ನಡಪರ ಚಳುವಳಿಗಳಲ್ಲಿ, ಕಾಳಜಿಗಳಲ್ಲಿ ಕೂಡಾ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದವರು.ಕನ್ನಡದ ಮುಖ್ಯಕವಿಗಳಾಗಿ ಜೀಯೆಸ್ಸೆಸ್ ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಕಾವ್ಯರಚನೆ ಮಾಡಿದರು. ಕುವೆಂಪು ಮತ್ತು ಪು.ತಿ.ನ ಅವರ ಕಾವ್ಯರಚನೆಗಳಿಂದ ಬೇರೆ ಬೇರೆ ಬಗೆಯಲ್ಲಿ ಬೇರೆ ಬೇರೆ ಪ್ರಮಾಣಗಳಲ್ಲಿ ಪ್ರಭಾವಿತರಾಗಿ ಕವಿತೆಗಳನ್ನು ಬರೆಯತೊಡಗಿದ ಜೀಯೆಸ್ಸೆಸ್ ಮುಂದಿನ ಕನ್ನಡ ಕಾವ್ಯದ ಬೆಳವಣಿಗೆಯಲ್ಲಿ ಬೆರೆಯುತ್ತ ಬೆಳೆದರು. ನವೋದಯ, ನವ್ಯ, ಬಂಡಾಯಗಳೆಂಬ ಮಾರ್ಗಗಳು ಅವರ ಕಾವ್ಯರಚನೆಯನ್ನು ಪ್ರಭಾವಿಸಿದ್ದವು. ಇವುಗಳ ಪ್ರಭಾವ ಏನೇ ಇದ್ದರೂ, ಜೀಯೆಸ್ಸೆಸ್ ಅವರ ಮುಖ್ಯ ಕವಿತೆಗಳಲ್ಲಿ ತುಂಬಿರುವುದು ಪ್ರಸಾದ ಗುಣ. ಇವರ ಕವನ ಸಮುದಾಯದ ಅಧಿಕತಮ ಕವಿತೆಗಳ ಸಾಧಾರಣ ಧರ್ಮವನ್ನು ಗಮನಿಸಿದರೆ ಕವಿ, ಕಾವ್ಯಶರೀರವನ್ನು, ಪದಸಂಯೋಜನೆಯನ್ನು, ಅರ್ಥವು ಓದುಗನಿಗೆ ಸಂವಹನಗೊಳಿಸುವ ಪಾರದರ್ಶಕ ಮಾಧ್ಯಮವನ್ನಾಗಿ ಬಳಸಿರುವುದು ಸ್ಪಷ್ಟಗೊಳ್ಳುತ್ತದೆ. ಕಾವ್ಯಶರೀರ ‘ಅರ್ಥ’ವನ್ನು ಮುಚ್ಚಿಡಲು ರೂಪುಗೊಂಡುದಲ್ಲ. ಹಾಗೆಯೇ ‘ಅರ್ಥ’ವನ್ನು ಗ್ರಹಿಸಿಕೊಳ್ಳಲೆಂದೇ ಕಾವ್ಯ ಶರೀರವನ್ನು ರೂಪಿಸುವ ನವ್ಯಕವಿಗಳ ಮಾದರಿಯೂ ಇವರದ್ದಲ್ಲ. ಕವಿ ತನ್ನ ಅನುಭವಕ್ಕೆ ದಕ್ಕಿದ ಭಾವಾರ್ಥಗಳನ್ನು ಭಾಷಿಕವಾಗಿ ಮಂಡಿಸುತ್ತಾರೆ; ಹೀಗಾಗಿ ಇದೊಂದು ಬಗೆಯ ಧ್ಯಾನಿತ ಕಾವ್ಯ. ಹಾಗಾಗಿ ಕವಿ ಅನುಭವದ ಗ್ರಹಿಕೆಗೆ ಕಾವ್ಯ ಬಿಡುಗಡೆಯ ಮಾಧ್ಯಮವಾಗುತ್ತದೆ.‘ಸಾಮಗಾನ’, ‘ಚೆಲುವು-ಒಲವು’, ‘ದೇವಶಿಲ್ಪ’, ‘ದೀಪದ ಹೆಜ್ಜೆ’, ‘ಅನಾವರಣ’, ‘ತೆರೆದ ಬಾಗಿಲು’, ‘ಗೋಡೆ’, ‘ವ್ಯಕ್ತಮಧ್ಯ’, ‘ತೀರ್ಥವಾಣಿ’, ‘ಕಾರ್ತಿಕ’, ಕಾಡಿನ ಕತ್ತಲಲ್ಲಿ’, ‘ಪ್ರೀತಿ ಇಲ್ಲದ ಮೇಲೆ’, ‘ಚಕ್ರಗತಿ’ ಅವರ ಪ್ರಮುಖ ಕವನ ಸಂಕಲನಗಳು. ಜೀಯೆಸ್ಸೆಸ್ ತಮ್ಮ ಕವಿತೆಗಳಲ್ಲಿ ಎರಡು ಜಗತ್ತುಗಳಿಗೆ ಸ್ಪಂದಿಸುವ ಹೊಣೆ ಹೊರಲು ಸಿದ್ಧರಾಗಿದ್ದದ್ದು ಕಂಡುಬರುತ್ತದೆ. ಒಂದು ಜೀವಸಂಮೃದ್ಧ ಪ್ರಕೃತಿ; ಇನ್ನೊಂದು ಮಾನವ ಕೇಂದ್ರಿತ ಸಮಾಜ. ವಿಸ್ಮಯ ಉತ್ಸುಕತೆಗಳು ಅವರ ಕವಿತೆಗಳ ಪ್ರಧಾನ ಭಾವಗಳಾಗಿದ್ದವು. ಪ್ರಕೃತಿಯ ನಿಯತ ಲಯಗಳು ಕವಿಗೆ ಸದಾ ಆಕರ್ಷಣೆಯನ್ನು ಉಂಟುಮಾಡಿದ್ದವು. ಇನ್ನೊಂದು ನೆಲೆಯಲ್ಲಿ ಅವರಲ್ಲಿದ್ದ ನಿರೂಪಕ ಸಾಮಾಜಿಕ ಹೊಣೆಗಾರಿಕೆಯನ್ನು ಪಡೆದುಕೊಂಡಿದ್ದ. ಆವರಣದ ಮಾನವ ಜಗತ್ತಿನ ವೈಸಾದೃಶ್ಯಗಳನ್ನು, ಲಯರಾಹಿತ್ಯವನ್ನು, ಅಪಶ್ರುತಿಗಳನ್ನು ಗ್ರಹಿಸಿ ಅವುಗಳನ್ನು ತನ್ನ ಕವಿತೆಗಳಲ್ಲಿ ಮಂಡಿಸುವುದು ಈ ನಿರೂಪಕನ ವೈಶಿಷ್ಟ್ಯ.‘ಕಾಲ’ ಮತ್ತು ‘ಮನುಷ್ಯ’ ತಮ್ಮ ಕಾವ್ಯದ ಕೇಂದ್ರಗಳು ಎಂದು ಜೀಯೆಸ್ಸೆಸ್ ಹೇಳಿರುವುದುಂಟು. ನಿರಂತರವಾದದ್ದು ಹಾಗೂ ಅದರ ಒಂದು ಘಟಕದಲ್ಲಿ ನಿಜವಾಗವಂಥದ್ದು ಇವೆರಡೂ, ಅತೀತವಾದದ್ದು ಅನ್ಯವಲ್ಲ, ಅದು ಲೋಕವೇ ಎಂಬ ನೆಲೆಯಲ್ಲಿರುವ ಇವರ ಕಾವ್ಯ ಲೋಕಪ್ರೀತಿಯದು. ‘ಪರಿಶೀಲನದಿಂದ’ ಮೊದಲಾಗಿ ‘ಗತಿಬಿಂಬ’, ‘ನವೋದಯ’, ‘ಅನುರಣನ’, ‘ಪ್ರತಿಕ್ರಿಯೆ’, ಮತ್ತು ‘ಬೆಡಗು’ ವರೆಗಿನ ಅವರ ವಿಮರ್ಶೆಯ ಸಂಕಲನಗಳು ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಸಾಹಿತ್ಯ ಕೃತಿಗಳ ಬಗೆಗೆ ಸಮರ್ಥ ಒಳನೋಟಗಳನ್ನು ನೀಡುತ್ತವೆ. ಕನ್ನಡ ನವೋದಯ ವಿಮರ್ಶೆಯ ವಿಚಾರಮೂಲವಾದಿ ಆಕೃತಿಗಳನ್ನು ಇಡಿಯಾಗಿ ಕನ್ನಡ ಸಾಹಿತ್ಯ ಪರಂಪರೆ ಮತ್ತು ಸಮಕಾಲೀನ ಕಾವ್ಯಕ್ಕೆ ಸಮರ್ಥವಾಗಿ ಅನ್ವಯಿಸುವ ಜೀಯೆಸ್ಸೆಸ್ ಅವರ ‘ಸೌಂದರ್ಯ ಸಮೀಕ್ಷೆ’ ಮಹಾಪ್ರಬಂಧ ಅವರ ವಿಮರ್ಶಾ ಪ್ರಯತ್ನದ ಪ್ರಮುಖ ಹಂತ. ಅವರ ‘ಸೌಂದರ್ಯ ಸಮೀಕ್ಷೆ’ಯಲ್ಲಿ ಕಾವ್ಯಗಳಲ್ಲಿ, ಕೃತಿಭಾಗಗಳಲ್ಲಿ ಕಂಡು ಬರುವ ‘ಲೋಕಾನುಭವ ಪರಿವರ್ತನೆ’ಯನ್ನು ವ್ಯಾಖ್ಯಾನಿಸುವ ಬಗೆ ಸಾಹಿತ್ಯಾಭ್ಯಾಸಿಗಳಿಗೆ ಈಗಲೂ ಸಾಹಿತ್ಯಾಧ್ಯಯನಕ್ಕೆ ಪ್ರವೇಶವನ್ನು, ಸಾಹಿತ್ಯಾಭಿರುಚಿಗೆ ಮಾದರಿಯನ್ನು ಒದಗಿಸಬಲ್ಲದು. ತಾತ್ವಿಕವಾಗಿ ಕನ್ನಡ ಕಾವ್ಯಪರಂಪರೆಯನ್ನು ವ್ಯಾಖ್ಯಾನಿಸುವ ಅವರ ಇನ್ನೆರಡು ಪ್ರಯತ್ನಗಳೆಂದರೆ ‘ಕನ್ನಡ ಸಾಹಿತ್ಯ ಸಮೀಕ್ಷೆ’ ಮತ್ತು ‘ಕನ್ನಡ ಕವಿಗಳ ಕಾವ್ಯ ಕಲ್ಪನೆ’. ಕನ್ನಡ ಸಾಹಿತ್ಯ ಮೀಮಾಂಸೆಯ ಚೌಕಟ್ಟನ್ನು ರಚಿಸಲು ಬೇಕಾದ ಮೂಲಭೂತ ಅಂಶಗಳು ಈ ಕೃತಿಗಳಲ್ಲಿ ಚರ್ಚಿತವಾಗಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಐಪಿಎಲ್ ವೇತನ ರಚನೆಯು ಹೇಗೆ ಕಾರ್ಯನಿರ್ವಹಿಸುತ್ತದೆ?

Wed Feb 16 , 2022
ಇಶಾನ್ ಕಿಶನ್; 15.25 ಕೋಟಿ, ದೀಪಕ್ ಚಹಾರ್; 14 ಕೋಟಿ – 2022 ರ ಐಪಿಎಲ್ ಹರಾಜಿನಲ್ಲಿ ಈ ವರ್ಷದ ಸೀಸನ್ ಇಂಚುಗಳು ಹತ್ತಿರವಾಗುತ್ತಿದ್ದಂತೆ ಹಲವಾರು ಆಟಗಾರರನ್ನು ನಂಬಲಾಗದ ಬೆಲೆಗೆ ವಿವಿಧ ತಂಡಗಳಿಗೆ ಮಾರಾಟ ಮಾಡಲಾಗಿದೆ. ಆದರೆ ಬೆಲೆಗಳ ಅರ್ಥವೇನು ಮತ್ತು ಅವುಗಳನ್ನು ಆಟಗಾರರಿಗೆ ಹೇಗೆ ಪಾವತಿಸಲಾಗುತ್ತದೆ? ಒಂದು ತಂಡವು ಆಟಗಾರನನ್ನು ಖರೀದಿಸುವ ಮೊತ್ತವು ವರ್ಷದ ಐಪಿಎಲ್ ಋತುವಿನಲ್ಲಿ ಅವರ ಸಂಬಳವಾಗಿದೆ. ಮೊತ್ತವು ಅವರು ಮಾರಾಟವಾದ ವರ್ಷಕ್ಕೆ ಮಾತ್ರ ಮಾನ್ಯವಾಗಿರುತ್ತದೆ. […]

Advertisement

Wordpress Social Share Plugin powered by Ultimatelysocial