ಠಾಕ್ರೆ ನಿರ್ಧಾರ ರದ್ದು; ಸಿಎಂ ಆದ ಬಳಿಕ ಶಿಂಧೆ ಕೈಗೊಂಡ ಮೊದಲ ಹೆಜ್ಜೆ ಇದು!

ಮುಂಬೈ, ಜುಲೈ 1: ಏಕನಾಥ್ ಶಿಂಧೆ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಮೊದಲ ಪ್ರಮುಖ ಕ್ರಮವಾಗಿ ಮೆಟ್ರೋ ಕಾರ್ ಶೆಡ್ ನಿರ್ಮಾಣವನ್ನು ಮುಂಬೈನ ಆರೆ ಮಿಲ್ಕ್ ಕಾಲೊನಿಗೆ ಮತ್ತೊಮ್ಮೆ ವರ್ಗಾಯಿಸಿದೆ.

ಹಿಂದೆ ದೇವೇಂದ್ರ ಫಡ್ನವಿಸ್ ಸಿಎಂ ಅಗಿದ್ಧಾಗ ಅವರ ಕನಸಿನ ಯೋಜನೆಗಳಲ್ಲಿ ಇದೂ ಒಂದು ಭಾಗವಾಗಿತ್ತು.

ಉದ್ಧವ್ ಠಾಕ್ರೆ ಸಿಎಂ ಆದ ಬಳಿಕ ಈ ಯೋಜನೆಗೆ ತಡೆ ಹಾಕಿದ್ದರು. ಈಗ ಏಕನಾಥ್ ಶಿಂಧೆ ಸಿಎಂ ಆಗಿ ಈ ಯೋಜನೆಗೆ ಮತ್ತೆ ಜೀವ ಕೊಟ್ಟಿದ್ದಾರೆ.

ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಿಎಂ ಏಕನಾಥ್ ಶಿಂಧೆ ಮತ್ತು ಡಿಸಿಎಂ ದೇವೇಂದ್ರ ಫಡ್ನವಿಸ್ ಈ ಸಭೆಯಲ್ಲಿದ್ದರು.

ಆರೆ ಮಿಲ್ಕ್ ಕಾಲೊನಿಯಿಂದ ಮೆಟ್ರೋ 3 ಕಾರ್ ಶೆಡ್ ಯೋಜನೆಯನ್ನು ಸ್ಥಳಾಂತರ ಮಾಡಿದ್ದ ಠಾಕ್ರೆ ಸರಕಾರದ ನಿರ್ಧಾರಗಳನ್ನು ಹಿಂಪಡೆಯಲಾಗಿದೆ. ಹಾಗೆಯೇ, ಫಡ್ನವಿಸ್ ಸಿಎಂ ಆಗಿದ್ದಾಗ ಆರಂಭವಾಗಿದ್ದ ಜಲಯುಕ್ತ್ ಶಿವರ್ ಅಭಿಯಾನ ಎಂಬ ಜಲಸಂರಕ್ಷಣಾ ಯೋಜನೆಯನ್ನು ಪುನಾರಂಭ ಮಾಡಲು ಆದೇಶ ಮಾಡಲಾಗಿದೆ.

ಏನಿದು ಆರೆ ಕಾಲೊನಿ ವಿವಾದ?
ಮುಂಬೈ ಮಹಾನಗರಿಗೆ ಉಸಿರು ನೀಡುವ ಪ್ರದೇಶ ಎಂದರೆ ಆರೆ ಅರಣ್ಯ. ಇಲ್ಲಿ ದೇವೇಂದ್ರ ಫಡ್ನವಿಸ್ ಸಿಎಂ ಆಗಿದ್ದಾಗ ಹಲವು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದ್ದರು. ಆದರೆ ಸಾವಿರಾರು ಮರಗಳನ್ನು ಕಡಿದು ಯೋಜನೆಗಳನ್ನು ಮಾಡುವುದಕ್ಕೆ ಪರಿಸರವಾದಿಗಳ ತೀವ್ರ ವಿರೋಧ ಎದುರಾಗಿತ್ತು.

ಈ ಅರಣ್ಯ ಪ್ರದೇಶದ ಮೂಲಕ ಸಾಗುವ ಮೆಟ್ರೋ 3 ಕಾರಿಡಾರ್ ಯೋಜನೆಯ ನಿರ್ಮಾಣ ಮಾಡುವುದಕ್ಕೆ ಮುಂದಾಗಲಾಗಿತ್ತು. ರಾಷ್ಟ್ರೀಯ ರೈಲು ಸೇವೆ ಯೋಜನೆಯ ಭಾಗವಾಗಿ ಮೆಟ್ರೋ 3 ಕಾರ್ ಶೆಡ್ ಅನ್ನೂ ನಿರ್ಮಿಸುವ ಯೋಜನೆ ಶುರು ಮಾಡಲಾಗಿತ್ತು. ಠಾಕ್ರೆ ಸರಕಾರ ಕಾರ್ ಶೆಡ್ ಯೋಜನೆಯನ್ನು ಆರೆ ಕಾಲೊನಿಯಿಂದ ಆಚೆ ವರ್ಗಾಯಿಸಲು ಆದೇಶಿಸಿದ್ದರು. ಈಗ ಏಕನಾಥ್ ಶಿಂಧೆ ಸರಕಾರ ಈ ಯೋಜನೆಯನ್ನು ಮತ್ತೆ ಆರೆ ಕಾಲೊನಿಗೇ ವರ್ಗಾಯಿಸಿದೆ.

ಹಾಗೆಯೇ, 32 ಅಂತಸ್ತಿನ ವಸತಿ ಸಮುಚ್ಚಯವನ್ನು ಇದೇ ಅರಣ್ಯ ಪ್ರದೇಶದಲ್ಲಿ ನಿರ್ಮಿಸುವುದು ಫಡ್ನವಿಸ್ ಸರಕಾರದ ಕನಸಾಗಿತ್ತು. ಈ ಯೋಜನೆಯಲ್ಲಿ 8 ಸಾವಿರ ಜನರಿಗೆ ವಸತಿ ಕಲ್ಪಿಸುವ ಆಶಯ ಇದೆ. 365 ಕಾರುಗಳಿಗೆ ಪಾರ್ಕಿಂಗ್ ಮತ್ತು ಒಂದು ಹೆಲಿಪೋರ್ಟ್ ಕೂಡ ಈ ಯೋಜನೆಯಲ್ಲಿ ಇದೆ. ಠಾಕ್ರೆ ಸರಕಾರ ಈ ಯೋಜನೆಗೂ ತಡೆಯೊಡ್ಡಿತ್ತು.

ಜಲಸಂರಕ್ಷಣೆ ಯೋಜನೆ

ದೇವೇಂದ್ರ ಫಡ್ನವಿಸ್ ಸಿಎಂ ಆಗಿದ್ದಾಗ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಜಲಯುಕ್ತ್ ಶಿವರ್ ಅಭಿಯಾನ ಕೂಡ ಒಂದು. ಜಲಸಂರಕ್ಷಣೆ ಯೋಜನೆಯಲ್ಲಿ ಬರ ಪರಿಸ್ಥಿತಿಯನ್ನು ಎದುರಿಸುವ ಆಶಯ ಇತ್ತು. ಆದರೆ, ಈ ಯೋಜನೆಯನ್ನು ಸಿಎಜಿ ವರದಿಯಲ್ಲಿ ಟೀಕಿಸಲಾಗಿತ್ತು. ಹಾಗೆಯೇ, ಯೋಜನೆಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಸಿಎಂ ಆಗಿದ್ದಾಗ ಈ ಅಕ್ರಮದ ಬಗ್ಗೆ ತನಿಖೆಗೆ ಆದೇಶಿಸಿದ್ದರು.

ಇದೀಗ ಏಕನಾಥ್ ಶಿಂಧೆ ಸಿಎಂ ಆದ ಬಳಿಕ ಜಲಯುಕ್ತ್ ಶಿವರ್ ಅಭಿಯಾನ್ ಯೋಜನೆಯನ್ನು ಪುನಾರಂಭಿಸಲು ಆದೇಶಿಸಲಾಗಿದೆ.

ಸಾಕಷ್ಟು ಹೈಡ್ರಾಮಾ

ಶಿವಸೇನಾ ಪಕ್ಷದೊಳಗೆ ಏಕನಾಥ್ ಶಿಂಧೆ ಬಂಡಾಯ ಎದ್ದು 50ಕ್ಕೂ ಹೆಚ್ಚು ಶಾಸಕರು ಅವರ ಬಳಿ ಸೇರಿಕೊಂಡಾಗ ಉದ್ಧವ್ ಠಾಕ್ರೆ ಅಧಿಕಾರದಿಂದ ಕೆಳಗಿಳಿಯದೇ ಬೇರೆ ವಿಧಿ ಇರಲಿಲ್ಲ. ಬಹುಮತ ಪರೀಕ್ಷೆ ನಡೆಯಬೇಕೆಂದು ರಾಜ್ಯಪಾಲರು ಹೇಳಿದ ಬೆನ್ನಲ್ಲೇ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಆ ಬಳಿಕ ಏಕನಾಥ್ ಶಿಂಧೆ ಮತ್ತು ದೇವೇಂದ್ರ ಫಡ್ನವಿಸ್ ಹಾಗು ಬಿಜೆಪಿ ವರಿಷ್ಠರ ಮಧ್ಯೆ ಮಾತುಕತೆಯಾಯಿತು. ಫಡ್ನವಿಸ್ ಸಿಎಂ ಎಂದೂ ಶಿಂಧೆ ಡಿಸಿಎಂ ಎಂದೂ ನಿಶ್ಚಯವಾಗಿತ್ತು. ಆದರೆ, ದಿಢೀರನೇ ಬದಲಾದ ನಿರ್ಧಾರದಲ್ಲಿ ಏಕನಾಥ್ ಶಿಂಧೆ ಸಿಎಂ ಆಗಿ ಘೋಷಿತರಾದರು. ಫಡ್ನವಿಸ್ ಡಿಸಿಎಂ ಆಗುವಂತೆ ಜೆಪಿ ನಡ್ಡಾ ಸೂಚಿಸಿ ಒಪ್ಪಿಸಿದರು.

ನಿನ್ನೆ ಸಂಜೆಯ ನಂತರ ಇಬ್ಬರೂ ಕೂಡ ರಾಜ್ಯಪಾಲರಿಂದ ಪ್ರಮಾಣವಚನ ಸ್ವೀಕರಿಸಿದರು. ಆ ಬಳಿಕ ಸಂಪುಟ ಸಭೆಯಲ್ಲಿ ಆರೆ ಅರಣ್ಯ ಪ್ರದೇಶದಲ್ಲಿನ ಅಭಿವೃದ್ಧಿ ಯೋಜನೆಗಳ ಬಗ್ಗೆ ಮೊದಲು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಬಿಜೆಪಿ ಪ್ಲಾನ್ ಏನು?

ಠಾಕ್ರೆ ಕುಟುಂಬಕ್ಕೆ ಸೇರದ ಒಬ್ಬ ವ್ಯಕ್ತಿಯನ್ನು ಸಿಎಂ ಆಗಿ ಮಾಡುವ ಮೂಲಕ ಬಿಜೆಪಿ ಆ ಕುಟುಂಬಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ. ಠಾಕ್ರೆ ಕುಟುಂಬ ಶಿವಸೇನಾ ಪಕ್ಷದಲ್ಲಿ ಸಂಪೂರ್ಣ ಹಿಡಿತ ಹೊಂದುವುದನ್ನು ತಪ್ಪಿಸಲು ಬಿಜೆಪಿ ನಡೆಸಿದ ಪ್ಲಾನ್ ಇದು.

ಹಾಗೆಯೇ, ಬಿಜೆಪಿ ತಾನು ಅಧಿಕಾರದ ವ್ಯಾಮೋಹ ಹೊಂದಿಲ್ಲ ಎಂಬುದನ್ನು ಬಿಂಬಿಸುವ ಪ್ರಯತ್ನವೂ ಇದಾಗಿದೆ. ಅಜಿತ್ ಪವಾರ್ ಜೊತೆ ಸೇರಿ ಬಿಜೆಪಿ ಸರಕಾರ ರಚಿಸಲು ಯತ್ನಿಸಿದಾಗ ಅನೇಕರು ಬಿಜೆಪಿ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತದೆ ಎಂದು ಟೀಕಿಸಿದ್ದರು. ಆದರೆ, ಈಗ ಏಕನಾಥ್ ಶಿಂಧೆಗೆ ಸಿಎಂ ಸ್ಥಾನ ಬಿಟ್ಟುಕೊಡುವ ಮೂಲಕ ಬಿಜೆಪಿ ತನಗೆ ಅಧಿಕಾರ ಮಾತ್ರವೇ ಮುಖ್ಯವಲ್ಲ ಎಂಬ ಸಂದೇಶವನ್ನು ರವಾನಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೇರಳಕ್ಕೆ ರಾಹುಲ್‌ ಗಾಂಧಿ ಭೇಟಿ: 3 ದಿನಗಳ ಕ್ಷೇತ್ರ ಪ್ರವಾಸ !

Fri Jul 1 , 2022
  ಕಣ್ಣೂರು: ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ತಮ್ಮ ಲೋಕಸಭಾ ಕ್ಷೇತ್ರ ವಯನಾಡ್‌ ಪ್ರವಾಸ ಕೈಗೊಂಡಿದ್ದಾರೆ. ಒಂದು ವಾರದ ಹಿಂದಷ್ಟೇ ಸಂಸದರ ಕಚೇರಿಗೆ ಎಸ್‌ಎಫ್‌ಐ ಕಾರ್ಯಕರ್ತರು ನುಗ್ಗಿ ಹಾನಿ ಮಾಡಿದ್ದರು. ಕೆಲ ದಿನಗಳ ಹಿಂದೆ ತಿರುವನಂತಪುರದಲ್ಲಿರುವ ಪಕ್ಷದ ಪ್ರಧಾನ ಕಚೇರಿ ಮೇಲಿನ ದಾಳಿ ಹಿಂದೆ ಕಾಂಗ್ರೆಸ್‌ ಇದೆ ಎಂದು ಸಿಪಿಐ(ಎಂ) ಆರೋಪಿಸಿದೆ. ಉಭಯ ಪಕ್ಷಗಳ ಕಚೇರಿ ಮೇಲಿನ ದಾಳಿಯಿಂದ ಕೇರಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಈ ನಡುವೆ ರಾಹುಲ್‌ ಗಾಂಧಿ […]

Advertisement

Wordpress Social Share Plugin powered by Ultimatelysocial