ವಾದಿರಾಜ್ ಪ್ರಸಿದ್ಧ ಹಿಂದಿ ಚಿತ್ರಗಳ ನಿರ್ದೇಶಕ

“ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು” ಎಂಬ ಮಾತನ್ನು ಚಿತ್ರರಂಗಕ್ಕೆ ಅನ್ವಯಿಸಿದಾಗ ನೆನಪಾಗುವ ಪ್ರಮುಖ ಹೆಸರು ವಾದಿರಾಜ್. ‘ಅಪ್ಪ, ಅಮ್ಮ ಜಗಳದಲಿ ಕೂಸು ಬಡವಾಯ್ತು’ ಎಂಬಂತಹ ನೆನಪಿನಲ್ಲುಳಿಯುವ ಅಭಿನಯ, ಅವರ ಕುಳ್ಳಗಿನ ದುಂಡು ದುಂಡಾದ ಆಕೃತಿ ಇವುಗಳೆಲ್ಲದರ ಜೊತೆಗೆ ಅವರು ಕನ್ನಡದಲ್ಲಿ ನಿರ್ಮಿಸಿದ ಶ್ರೇಷ್ಠ ಚಿತ್ರಗಳಾದ ನಾಂದಿ, ನಂದಾದೀಪ, ಸೀತಾ, ನಮ್ಮ ಮಕ್ಕಳು, ದಂಗೆ ಎದ್ದ ಮಕ್ಕಳು ಮುಂತಾದವುಗಳಿಂದ ಅವರು ಅಜರಾಮರರಾಗಿದ್ದಾರೆ. ಕನ್ನಡ ಚಿತ್ರರಂಗದ ಮಹಾನ್ ಹಾಸ್ಯ ನಟರಾದ ನರಸಿಂಹ ರಾಜು, ಬಾಲಕೃಷ್ಣ, ದ್ವಾರಕೀಶರ ಸಾಲಿನಲ್ಲಿ ವಾದಿರಾಜ್ ಅವರ ಹೆಸರೂ ಚಿರಸ್ಮರಣೀಯ. ನಿರ್ದೇಶನದಲ್ಲೂ ಅವರದ್ದು ಎತ್ತಿದ ಕೈ.
ಉಪಾಧ್ಯಾಯ ಶ್ರೀನಿವಾಸ ವಾದಿರಾಜ್‌ 1927ರ ಜನವರಿ 3ರಂದು ಜನಿಸಿದರು. ಉಡುಪಿ ಜಿಲ್ಲೆಯ ಪಣಿಯಾಡಿ ಇವರ ಹುಟ್ಟೂರು. ಅಭಿನಯ ಕಲೆಯಲ್ಲಿ ತೊಡಗಿದ್ದ ತಮ್ಮ ತಂದೆಯವರಿಂದ ಪ್ರಭಾವಿತರಾದ ವಾದಿರಾಜ್‌ ಕೇವಲ ಚಲನಚಿತ್ರಗಳಲ್ಲಷ್ಟೇ ಅಲ್ಲದೆ ಸಹಸ್ರಾರು ನಾಟಕಗಳಲ್ಲೂ ಅಭಿನಯಿಸಿದ್ದರು. 1954ರಲ್ಲಿ ‘ಕೋಕಿಲವಾಣಿ’ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ವಾದಿರಾಜ್‌ ನಟಿಸಿದ ಚಿತ್ರಗಳ ಸಂಖ್ಯೆ ನೂರಕ್ಕೂ ಹೆಚ್ಚಿನದು. 1958ರ ವರ್ಷದಲ್ಲಿ ತೆರೆಕಂಡ ಕೃಷ್ಣಗಾರುಡಿ ಚಿತ್ರ ಅವರನ್ನು ಪ್ರಖ್ಯಾತರನ್ನಾಗಿಸಿತು. ಮುಂದೆ ಕಂಡ ‘ಧರ್ಮ ವಿಜಯ’, ‘ಸ್ವರ್ಣ ಗೌರಿ’ ಮುಂತಾದ ಚಿತ್ರಗಳಲ್ಲಿನ ಅವರ ಹಾಸ್ಯನಟನೆ ಅಪಾರ ಜನಮೆಚ್ಚುಗೆ ಪಡೆಯಿತು.
ಹೀಗೆ ನಟನೆಯಲ್ಲಿ ಪ್ರಸಿದ್ಧಿ ಪಡೆಯುತ್ತಿದ್ದ ವಾದಿರಾಜ್, ಪ್ರಸಿದ್ಧ ಹಿಂದಿ ಚಿತ್ರಗಳ ನಿರ್ದೇಶಕ ವಿ. ಶಾಂತಾರಾಂ ಅವರ ಚಿತ್ರಗಳಿಂದ ಪ್ರೇರಿತರಾಗಿ ‘ನಂದಾ ದೀಪ’ ಚಿತ್ರಕಥೆ ಬರೆದು, ಶ್ರೀಭಾರತಿ ಲಾಂಛನದಲ್ಲಿ ನಿರ್ಮಿಸಿದರು. ಈ ಚಿತ್ರದ ಮೂಲಕ ಕನ್ನಡದ ಶ್ರೇಷ್ಠ ನಿರ್ದೇಶಕರಲ್ಲೊಬ್ಬರಾದ ಎಂ. ಆರ್. ವಿಠ್ಠಲರನ್ನು ಪರಿಚಯಿಸಿದರು. ಈ ಚಿತ್ರ ರಾಷ್ಟ್ರಪ್ರಶಸ್ತಿ ಗಳಿಸಿತು. 1964ರ ವರ್ಷದಲ್ಲಿ ಅವರು ನಿರ್ಮಿಸಿದ ‘ನವಜೀವನ’ ಮತ್ತು ‘ನಾಂದಿ’ ಚಿತ್ರಗಳು ಕೂಡಾ ರಾಷ್ಟ್ರ ಪ್ರಶಸ್ತಿ ಗಳಿಸಿದವು. ‘ನಾಂದಿ’ ಚಿತ್ರವನ್ನು ನಿರ್ದೇಶಿಸಿದವರು ಕನ್ನಡದ ಮತ್ತೊಬ್ಬ ಶ್ರೇಷ್ಠ ನಿರ್ದೇಶಕ ಎನ್. ಲಕ್ಷ್ಮೀನಾರಾಯಣ್ ಅವರು. ವಿದೇಶಿ ನೆಲಕ್ಕೆ ಪಾದಾರ್ಪಣೆ ಮಾಡಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತಗೊಂಡ ಪ್ರಪ್ರಥಮ ಕನ್ನಡ ಚಿತ್ರ ಎಂಬ ಹೆಗ್ಗಳಿಕೆ ‘ನಾಂದಿ’ ಚಿತ್ರದ್ದು. ಇದು ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲೊಂದು ಎಂದು ಚಿತ್ರವಿದ್ವಾಂಸರಿಂದ ಪರಿಗಣಿತವಾಗಿದೆ.
1967ರ ವರ್ಷದಲ್ಲಿ ತಮ್ಮ ಚಿತ್ರಸಂಸ್ಥೆಯನ್ನು ವಿಜಯ ಭಾರತಿ ಎಂದು ಪುನರ್ನಾಮಕರಣ ಮಾಡಿದ ವಾದಿರಾಜ್, ಪ್ರೇಮಕ್ಕೂ ಪರ್ಮಿಟ್ಟೆ, ನಮ್ಮ ಮಕ್ಕಳು, ಸೀತಾ, ನಾ ಮೆಚ್ಚಿದ ಹುಡುಗ, ಸೀತೆಯಲ್ಲ ಸಾವಿತ್ರಿ, ನಮ್ಮಮ್ಮನ ಸೊಸೆ ಮುಂತಾದ ಜನಪ್ರಿಯ ಚಿತ್ರಗಳನ್ನು ನಿರ್ಮಿಸಿದರು.
ಎಂಭತ್ತರ ದಶಕದಲ್ಲಿ ಮೂಡಿ ಬಂದ ವಾದಿರಾಜರ ‘ದಂಗೆ ಎದ್ದ ಮಕ್ಕಳು’ ಚಿತ್ರ ರಜತ ಕಮಲ ಪ್ರಶಸ್ತಿ ಗಳಿಸಿತು. ರಾಜ್ಕುಮಾರ್ ಅವರ ‘ಅದೇ ಕಣ್ಣು’ ಚಿತ್ರ ವಾದಿರಾಜ್ ನಿರ್ಮಾಣದ ಕಡೆಯ ಚಿತ್ರ.
ಚಲನಚಿತ್ರ ನಿರ್ಮಾಣದ ಜೊತೆಗೆ ವಾದಿರಾಜ್ ಅವರು ಹಲವಾರು ವಾರ್ತಾ ಚಿತ್ರ, ದೂರದರ್ಶನ ಚಿತ್ರಗಳನ್ನೂ ನಿರ್ಮಿಸಿ ನಿರ್ದೇಶಿಸಿದ್ದರು. ಶ್ರೇಷ್ಠ ನಿರ್ದೇಶಕರನ್ನು ಚಿತ್ರರಂಗಕ್ಕೆ ಕೊಡುವುದರ ಜೊತೆಗೆ ವಾದಿರಾಜ್ ಹಲವಾರು ಪ್ರತಿಭೆಗಳನ್ನು ಸಹಾ ಚಿತ್ರರಂಗಕ್ಕೆ ನೀಡಿದ್ದಾರೆ. ವಾದಿರಾಜ್ ಅವರ ಸಹೋದರಿ ಹರಿಣಿ ಅವರು ಕನ್ನಡ ಚಿತ್ರರಂಗದ ಪ್ರಸಿದ್ಧ ನಾಯಕಿಯರಲ್ಲಿ ಒಬ್ಬರು. ಅವರ ಸಹೋದರ ಜವಹರಲಾಲ್ ಹಲವಾರು ವಾದಿರಾಜ್ ಚಿತ್ರಗಳ ಸಹನಿರ್ಮಾಪಕರಾಗಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಂದ್ರಶೇಖರ ಕಂಬಾರ ಬಹುಮುಖಿ ವಿದ್ವಾಂಸರಾಗಿ ಪ್ರಖ್ಯಾತರು.

Tue Jan 3 , 2023
ಚಂದ್ರಶೇಖರ ಕಂಬಾರರು ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ, ಅಧ್ಯಾಪನ, ಆಡಳಿತ ಹೀಗೆ ಬಹುಮುಖಿ ವಿದ್ವಾಂಸರಾಗಿ ಪ್ರಖ್ಯಾತರು. ಚಂದ್ರಶೇಖರ ಕಂಬಾರರು 1937ರ ಜನವರಿ 2ರಂದು ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ಜನಿಸಿದರು. ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು. ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಇವರ ಬಾಲ್ಯದ ವಸಾಹತು […]

Advertisement

Wordpress Social Share Plugin powered by Ultimatelysocial