ಜಿ. ವರದರಾಜರಾವ್ ಮಹಾನ್ ವಿದ್ವಾಂಸರು

ಜಿ. ವರದರಾಜರಾವ್ ಕಳೆದ ಶತಮಾನದ ಮಹಾನ್ ವಿದ್ವಾಂಸರಾಗಿ, ಬರಹಗಾರರಗಿ ಮತ್ತು ಪ್ರಾಧ್ಯಾಪಕರಾಗಿ ಪ್ರಸಿದ್ಧರು.
ಜಿ. ವರದರಾಜರಾವ್ 1918ರ ಜನವರಿ 3ರಂದು ಬೆಂಗಳೂರಿನಲ್ಲಿ ಜನಿಸಿದರು. ಕಾವ್ಯ, ಶಿಶುಸಾಹಿತ್ಯ, ವಿಮರ್ಶೆ, ಸಂಶೋಧನೆ , ವ್ಯಕ್ತಿ ಚಿತ್ರಣಗಳು ಹೀಗೆ ನಾನಾ ಕ್ಷೇತ್ರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ ವರದರಾಜರಾಯರ ಬಹುತೇಕ ವ್ಯಾಸಂಗ ನಡೆದದ್ದು ಮೈಸೂರಿನಲ್ಲಿ. ಇಂಟರ್ ಮೀಡಿಯೆಟ್‌ನಲ್ಲಿ ವಿಜ್ಞಾನದ ವಿಷಯದಲ್ಲಿ ಓದಿದರೂ ಅವರಿಗೆ ಕನ್ನಡದಲ್ಲಿ ಹೆಚ್ಚು ಅಂಕಗಳು ಲಭಿಸಿದವು.
ಕನ್ನಡದಲ್ಲಿ ಆನರ್ಸ್ ಓದಲು ಪ್ರಯತ್ನಿಸಿದಾಗ ವಿಶ್ವವಿದ್ಯಾಲಯದ ನಿಯಮದ ಪ್ರಕಾರ ವಿಜ್ಞಾನ ವಿಷಯದ ವಿದ್ಯಾರ್ಥಿಗಳು ಕನ್ನಡವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಳ್ಳುವ ಹಾಗಿರಲ್ಲಿಲ್ಲ. ಕನ್ನಡ ಓದಬೇಕೆಂಬ ಆಸೆಯಿಂದ ಪ್ರೊ.ಎಂ.ವಿ. ಸೀತಾರಾಮಯ್ಯ, ಎ.ಆರ್. ಕೃಷ್ಣಶಾಸ್ತ್ರಿ, ಎನ್‌.ಎಸ್‌. ಸುಬ್ಬರಾವ್‌, ಬಿ.ಎಂ.ಶ್ರೀ ಮುಂತಾದವರುಗಳ ಶಿಫಾರಸ್ಸಿನಿಂದ ಮಹಾರಾಜ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ರಾಲೋರವರನ್ನು ಒಪ್ಪಿಸಿ ಆನರ್ಸ್‌ಗೆ ಸೇರಿದರು. ಬಿ.ಎ.ಆನರ್ಸ್ ನಂತರ ಎಂ.ಎ. ಪದವಿಯನ್ನೂ ಪಡೆದಾಗ ಸ್ವಯಂ ರಾಲೋ ಸಾಹೇಬರೇ ಪ್ರಶಂಸಿಸಿದರು.
ವರದರಾಜರಾಯರು ರಾಜ್ಯಸರಕಾರದ ಕನ್ನಡ ಭಾಷಾಂತರ ಕಚೇರಿಯಲ್ಲಿ ಕೆಲಕಾಲ ಉದ್ಯೋಗ ಮಾಡಿದ ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪನ ನಡೆಸಿದರು. ಮುಂದೆ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಗೊಂಡರು.
ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಸ್ಪರ್ಧೆಯೊಂದರಲ್ಲಿ ಭಾಗವಹಿಸಿ ‘ಪುರಂದರ ದಾಸರ ಕೀರ್ತನೆಗಳು’ ಕುರಿತು ಬರೆದ ಪ್ರಬಂಧಕ್ಕೆ ವರದರಾಜರಾಯರಿಗೆ ಬಹುಮಾನ ಸಂದಿತು. ಇದರಿಂದ ಇವರಿಗೆ ಹರಿದಾಸ ಸಾಹಿತ್ಯದತ್ತ ಒಲವು ಮೂಡಿ ಆ ಕುರಿತು ಸಂಶೋಧನೆಗೆ ತೊಡಗಿದರು. ಈ ಪ್ರಬಂಧವು ಪುಸ್ತಕ ರೂಪದಲ್ಲಿಯೂ ಪ್ರಕಟಗೊಂಡಿತು. ‘ಸೀತಾ ಪರಿತ್ಯಾಗ ಸಮಸ್ಯೆಗಳು’ ಈ ಸಂದರ್ಭದಲ್ಲಿ ಪ್ರಕಟಗೊಂಡ ಮತ್ತೊಂದು ಕೃತಿ. ಮುಂದೆ ಕರ್ಣನ ಕಥೆಯಾದ ‘ಕಲಿಕರ್ಣ’, ‘ಮಹಾಸತಿ ಕಸ್ತೂರಿ ಬಾ’, ಕುಮಾರ ರಾಮನ ಸಾಂಗತ್ಯ ಆಧರಿಸಿದ ‘ಕುಮ್ಮಟ ಕೇಸರಿ’ ಕೃತಿಗಳು ಪ್ರಕಟಗೊಂಡವು. ‘ಕುಮಾರ ರಾಮನ ಸಾಂಗತ್ಯಗಳು’ ಜಿ. ವರದರಾಜರಾಯರಿಗೆ ಡಾಕ್ಟರೇಟ್‌ ತಂದು ಕೊಟ್ಟ ಮಹಾ ಪ್ರಬಂಧ.
ವರದರಾಜರಾಯರ ಹಲವಾರು ಕವನಗಳು ‘ತೋರಣ’, ‘ವಿಜಯದಶಮಿ’ ಮತ್ತು ಪರಂಪರೆ ಎಂಬ ಸಂಕಲನಗಳಲ್ಲಿ ಪ್ರಕಟಗೊಂಡಿವೆ. ‘ಓಬವ್ವ’ ಮತ್ತು ‘ಸೆರೆಯಾಳು’ ಅವರು ಬರೆದಿರುವ ಎರಡು ನೀಳ್ಗವಿತೆಗಳು. ಓಬವ್ವ 300 ಸಾಲುಗಳ ಮಿತಿಯ ಕಥನ ಕವನ ಪ್ರಸಂಗಕ್ಕೆ ಬಿ.ಎಂ.ಶ್ರೀಯವರ ರಜತ ಮಹೋತ್ಸವ ಚಿನ್ನದ ಪದಕ ಸಂದಿತು.
ವರದರಾಜರಾಯರು ಮಕ್ಕಳಿಗಾಗಿಯೂ ‘ಬುಡುಬುಡಿಕೆ’, ‘ತೊಟ್ಟಿಲು’, ‘ಕುಮ್ಮಟದುರ್ಗ’ ಮುಂತಾದ ಶಿಶುಸಾಹಿತ್ಯ ಸಂಕಲನಗಳನ್ನು ಪ್ರಕಟಿಸಿದರು.
ವರದರಾಜರಾಯರ ‘ಸೆರೆಯಾಳು’ ಎಂಬುದು ಬೈರನ್‌ ಕವಿಯ ‘ಪ್ರಿಸನರ್ಸ್ ಆಫ್‌ ಪಿಲಾನ್‌’ ಎಂಬುದರ ಭಾವಾನುವಾದ ಕೃತಿ.
ವರದರಾಜರಾಯರ ಸಂಶೋಧನಾ ಲೇಖನಗಳು, ವಿಚಾರ, ವಿಮರ್ಶೆ ಮುಂತಾದವು ‘ಪಡಿನುಡಿ’, ‘ಸಾಹಿತ್ಯ ಸಾನ್ನಿಧ್ಯ’, ‘ಹರಿದಾಸ ಹೃದಯ’ ಎಂಬ ಸಂಕಲನಗಳಲ್ಲಿ ಮೂಡಿಬಂದಿವೆ.
ಮಂಗಳೂರಿನ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದನಂತರ ಪುನಃ ಮೈಸೂರಿಗೆ ಬಂದ ವರದರಾಜರಾಯರು ತಮ್ಮ ಸಂಶೋಧನೆ ಮತ್ತು ವಿಮರ್ಶಾ ಸಾಹಿತ್ಯ ಕೃತಿರಚನೆಯಲ್ಲಿ ತೊಡಗಿಕೊಂಡು ‘ಹರಿದಾಸ ಸಾಹಿತ್ಯ ಸಾರ’, ‘ಪುರಂದರದಾಸರು’ ಮತ್ತು ‘ಹರಿಭಕ್ತಿ ವಾಹಿನಿ’ ಮುಂತಾದ ಮಹತ್ವದ ಕೃತಿಗಳನ್ನು ಪ್ರಕಟಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಣಕ್ಕೆಅಪಾರವಾಗಿ ಇಂಬು ನೀಡಿದವರು.

Tue Jan 3 , 2023
ಹೆಣ್ಣುಮಕ್ಕಳು ಶಿಕ್ಷಣ ಪಡೆಯಬೇಕೆಂಬ ಕನಸನ್ನು 19ನೇ ಶತಮಾನದ ಪ್ರಾರಂಭದಲ್ಲೇ ಕಂಡು ಈ ಧ್ಯೇಯೋದ್ಧೇಶಕ್ಕಾಗಿ ತಮ್ಮ ಪತಿ ಜ್ಯೋತಿಬಾ ಫುಲೆ ಅವರೊಂದಿಗೆ ನಿರಂತರ ಶ್ರಮಿಸಿದ ಮಹಾನ್ ತಾಯಿ ಈಕೆ. “ನಿಜವಾಗಿ ನೋಡಿದರೆ ಈ ಅಭಿನಂದನೆ ನಿನಗೆ ಸಲ್ಲತಕ್ಕದ್ದು. ನಾನು ಕೇವಲ ಬೇರೆ ಬೇರೆ ಕಡೆ ಶಾಲೆಗಳನ್ನು ಪ್ರಾರಂಭಿಸಲು ಕಾರಣಕರ್ತ. ಆದರೆ ನೀನು ಮಾತ್ರ ಶಾಲೆಗಳ ಬೆಳವಣಿಗೆಯ ಹಾದಿಯಲ್ಲಿ ಎದುರಾದ ಎಲ್ಲ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿರುವೆ. ಅದರಿಂದಾಗಿ ಬಂದಂತಹ ಬಹುಪರಿಯ ದುಃಖಗಳನ್ನು ನುಂಗಿಕೊಳ್ಳುತ್ತಾ […]

Advertisement

Wordpress Social Share Plugin powered by Ultimatelysocial