ವಿಜಯಭಾಸ್ಕರ್

ವಿಜಯಭಾಸ್ಕರ್
ಮಹಾನ್ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಅವರ ಸಂಸ್ಮರಣಾ ದಿನವಿದು. ಈ ಮಹಾನ್ ಸಂಗೀತ ಸಂಯೋಜಕರು 2002ರ ಮಾರ್ಚ್ 3ರಂದು ಈ ಲೋಕವನ್ನಗಲಿದರು.
ವಿಜಯಭಾಸ್ಕರ್ ಅವರು ಜನಿಸಿದ್ದು 1931ರ ಸೆಪ್ಟೆಂಬರ್ 7ರಂದು ಅಂತ ಶ್ರಿಧರಮೂರ್ತಿ ಸಾರ್ ಅವರಿಂದ ತಿಳಿದುಬಂತು. ಕೆಲವು ಕಡೆ 1924, 1925 ಇತ್ಯಾದಿ ಬರೆದಿತ್ತು.
‘ಮೂಡಲ ಮನೆಯ ಮುತ್ತಿನ ನೀರಿನ’, ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ’, ‘ಬೆಳ್ಳಿ ಮೋಡದ ಅಂಚಿನಿಂದ ಮೂಡಿಬಂದ ಮಿನುಗುತಾರೆ’, ‘ಹಾಡೊಂದ ಹಾಡುವೆ ನೀ ಕೇಳೋ ಮಗುವೆ’, ‘ನಿನ್ನೊಲುಮೆ ನಮಗಿರಲಿ ತಂದೆ’, ‘ಹಾವಿನ ದ್ವೇಷ ಹನ್ನೆರಡು ವರುಷ’, ‘ಭಾವವೆಂಬ ಹೂವು ಅರಳಿ’, ‘ವೇದಾಂತಿ ಹೇಳಿದನು’, ‘ದೇವ ಮಂದಿರದಲ್ಲಿ ದೇವರು ಕಾಣಲೆ ಇಲ್ಲ’, ‘ಎಲ್ಲೆಲ್ಲೂ ಸಂಗೀತವೇ’, ‘ವಸಂತ ಬರೆದನು ಒಲವಿನ ಓಲೆ’, ‘ಗಗನವು ಎಲ್ಲೋ ಭೂಮಿಯು ಎಲ್ಲೋ’ ಹೀಗೆ ಹಾಡುಗಳನ್ನು ನೆನೆದಾಗಲೆಲ್ಲಾ ನಮಗೆ ಕಾಣುವುದು ಅದರ ಹಿಂದಿನ ಶ್ರೇಷ್ಠ ಕೆಲಸದ ವಿಜಯಭಾಸ್ಕರ್.
ವಿಜಯಭಾಸ್ಕರ್ ಅವರು ನೌಷಾದ್, ಮದನ್ ಮೋಹನ್ ಅವರಂತಹ ಶ್ರೇಷ್ಠ ಸಂಗೀತ ನಿರ್ದೇಶಕರ ಸಹಾಯಕರಾಗಿ ಮುಂಬೈನಲ್ಲಿ ಕೈತುಂಬಾ ಕೆಲಸ ಹೊತ್ತು ಹಿಂದಿ ಚಿತ್ರರಂಗದಲ್ಲಿ ಮುಳುಗಿ ಹೋಗಿದ್ದರು. ಒಮ್ಮೆ ಮುಂಬೈನ ಮಾತುಂಗ ಹೋಟೆಲಿನಲ್ಲಿ ಕಾಫಿ ಕುಡಿಯುತ್ತಾ ತಮ್ಮ ಗೆಳೆಯರೊಂದಿಗೆ ಹರಟುತ್ತಿದ್ದಾಗ ಈ ಗೆಳೆಯರ ನಡುವಿನ ಕನ್ನಡದ ಸಂಭಾಷಣೆ ಕೇಳಿದ ಬಿ.ಆರ್. ಕೃಷ್ಣಮೂರ್ತಿ ಅವರು ತಮ್ಮ ಪರಿಚಯ ಹೇಳಿಕೊಂಡು ಜೊತೆ ಸೇರಿದರು. ಮಾತು ಮುಂದುವರೆದು, ಕೃಷ್ಣಮೂರ್ತಿಯವರು ಆರ್. ನಾಗೇಂದ್ರರಾಯರ ಶ್ರೀರಾಮಪೂಜಾ ಚಿತ್ರಕ್ಕೆ ಸಂಗೀತ ನೀಡಲು ವಿಜಯಭಾಸ್ಕರ್ ಅವರನ್ನು ಆಹ್ವಾನಿಸಿದರು. ಹೀಗೆ ವಿಜಯಭಾಸ್ಕರ್ ಬೆಂಗಳೂರಿಗೆ ಬಂದಿಳಿದರು.
ಬಿ. ಆರ್ ಪಂತುಲು ಅವರ ಸಹಾಕರಾಗಿದ್ದ ಪುಟ್ಟಣ್ಣ ಕಣಗಾಲರು ಬೆಳ್ಳಿಮೋಡ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದಾಗ ಅವರ ಜೊತೆಗೂಡಿ ಶ್ರೇಷ್ಠ ಸಂಗೀತ ನೀಡಿದವರು ವಿಜಯಭಾಸ್ಕರ್. ಬೆಳ್ಳಿಮೋಡ ಚಿತ್ರದ ಗೀತೆಗಳು ಕನ್ನಡ ಸಿನಿಮಾರಂಗದ ಶ್ರೇಷ್ಠ ಹಾಡುಗಳ ಸಾಲಿನಲ್ಲಿ ಎಂದೆಂದೂ ವಿರಾಜಮಾನವಾದದ್ದು. ದ. ರಾ. ಬೇಂದ್ರೆಯವರ ‘ಮೂಡಲಮನೆಯ ಮುತ್ತಿನ ನೀರಿನ’ ಅಂತೂ ಶ್ರೇಷ್ಠ ಚಿತ್ರಗೀತೆಗಳ ಸಾಲಿನಲ್ಲಿ ಚಿರವಿರಾಜಮಾನವಾದದ್ದು. ಅದೇ ರೀತಿ ‘ಶರಪಂಜರ’ದ ಬೇಂದ್ರೆಯವರ ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ’ ಕೂಡ. ಮಾನಸ ಸರೋವರದಲ್ಲಿ ಜಿ.ಎಸ್.ಎಸ್ ಅವರ ‘ವೇದಾಂತಿ ಹೇಳಿದನು’ ಕೂಡಾ ಸ್ಮರಣೀಯವಾದದ್ದು. ಪುಟ್ಟಣ್ಣ ಮತ್ತು ವಿಜಯಭಾಸ್ಕರ್ ಅವರ ‘ಬೆಳ್ಳಿಮೋಡ’ದ ಜೊತೆಗೂಡುವಿಕೆ ಮುಂದೆ ಗೆಜ್ಜೆಪೂಜೆ, ಶರಪಂಜರ, ನಾಗರಹಾವು. ಉಪಾಸನೆ, ಶುಭಮಂಗಳ, ಕಥಾಸಂಗಮ ಮುಂತಾದ ಅವಿಸ್ಮರಣೀಯ ಚಿತ್ರಗಳನ್ನು ತಂದಿತು.
ಪುಟ್ಟಣ್ಣನವರ ಚಿತ್ರಗಳಿಗೆ ಮುಂಚೆ ಕೂಡಾ ವಿಜಯಭಾಸ್ಕರ್ ಮನಮೆಚ್ಚಿದ ಮಡದಿ, ಸಂತ ತುಕಾರಾಂ, ರಾಣಿ ಹೊನ್ನಮ್ಮ ಮುಂತಾದ ಚಿತ್ರಗಳಲ್ಲಿ ಅಪಾರ ಜನಪ್ರಿಯರಾಗಿದ್ದರು. ಭಾರತದ ಶ್ರೇಷ್ಠ ಚಿತ್ರ ನಿರ್ದೇಶಕರಲ್ಲಿ ಒಬ್ಬರೆನಿಸಿರುವ ಮಲಯಾಳದ ಅಡೂರು ಗೋಪಾಲಕೃಷ್ಣನ್ ಅವರ ಎಲ್ಲಾ ಚಿತ್ರಗಳಿಗೂ ವಿಜಯಭಾಸ್ಕರ್ ಅವರೇ ಸಂಗೀತ ನಿರ್ದೇಶಕರು. ಕಲಾತ್ಮಕ ಚಿತ್ರಗಳ ಸಾಲಿನಲ್ಲಿ ಪ್ರತಿಷ್ಟಿತವೆನಿಸಿರುವ ಎನ್ ಲಕ್ಷ್ಮೀನಾರಾಯಣರ ‘ನಾಂದಿ’, ಲಂಕೇಶರ ‘ಎಲ್ಲಿಂದಲೋ ಬಂದವರು’, ನಾಗಾಭರಣರ ‘ಗ್ರಹಣ’, ‘ನೀಲ’ ಚಿತ್ರಗಳಲ್ಲಿ ಕೂಡಾ ವಿಜಯಭಾಸ್ಕರ್ ಅವರ ಸಂಗೀತ ಅಪಾರ ಜನಪ್ರಿಯತೆ ಪಡೆದಿದೆ. ಹಿಂದಿಯಲ್ಲಿ ಜಿ.ವಿ. ಅಯ್ಯರ್ ಅವರ ವಿವೇಕಾನಂದ ಚಿತ್ರಕ್ಕೆ ಕೂಡಾ ಅವರ ಸಂಗೀತ ಸಂದಿದೆ. ಹೀಗೆ ವಿಜಯಭಾಸ್ಕರ್ 600ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದರು. ರಾಬರ್ಟ್ ಕ್ಲೈವ್ ಎಂಬ ಇಂಗ್ಲೀಷ್ ಚಿತ್ರದ ಸಂಗೀತ ನಿರ್ದೇಶನಕ್ಕೆ ಇಂಗ್ಲೆಂಡಿಗೆ ಹೋಗಿ ಬಂದರು. ತಮಿಳು, ತೆಲುಗು, ಮಲಯಾಳಂ, ತುಳು, ಕೊಂಕಣಿ, ಮರಾಠಿ ಚಿತ್ರಗಳಿಗೂ ಅವರು ಸಂಗೀತ ನೀಡಿದ್ದಾರೆ.
ಸಂಗೀತ ಪ್ರಧಾನವಾದ ‘ಮಲಯಮಾರುತ’ ಚಿತ್ರದ ಸಂಗೀತ ವಿಜಯಭಾಸ್ಕರ್ ಅವರಿಗೆ ಸಂಗೀತ ಲೋಕದಲ್ಲಿ ಪ್ರತಿಷ್ಠಿತವೆನಿಸಿರುವ ‘ಸುರಸಿಂಗಾರ್’ ಪ್ರಶಸ್ತಿ ತಂದಿತು. ಇದಲ್ಲದೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಡಾ. ರಾಜ್ಕುಮಾರ್ ಪ್ರಶಸ್ತಿ ಹಾಗೂ ಬೆಳ್ಳಿ ಮೋಡ, ಯಾವ ಜನ್ಮದ ಮೈತ್ರಿ, ಸಂಕಲ್ಪ, ಧರಣಿ ಮಂಡಲ ಮಧ್ಯದೊಳಗೆ, ಮುರಳೀಗಾನ ಅಮೃತಪಾನ, ಪತಿತ ಪಾವನಿ ಚಿತ್ರಗಳಲ್ಲಿನ ಶ್ರೇಷ್ಠಸಂಗೀತಕ್ಕೆ ಪ್ರಶಸ್ತಿ ಸಂದಿತು.
ವಿಭಿನ್ನ ಪ್ರತಿಭೆಗಳ ಸಾಲಿನಲ್ಲಿ ಸೇರುವ ಕೆ.ಎಸ್.ಎಲ್. ಸ್ವಾಮಿ, ಕಸ್ತೂರಿ ಶಂಕರ್, ಬಿ. ಆರ್. ಛಾಯಾ, ಸುದರ್ಶನ್, ವಿಷ್ಣುವರ್ಧನ್ ಅವರ ಧ್ವನಿಯನ್ನು ಹಿನ್ನಲೆಗಾಯನಕ್ಕೆ ವಿಜಯಭಾಸ್ಕರ್ ಅವರು ಅಳವಡಿಸಿದ ರೀತಿ ಕೂಡಾ ವಿಶಿಷ್ಟವಾದದ್ದು. ಕೆ.ಎಸ್.ಎಲ್ ಸ್ವಾಮಿ ಅವರ ‘ಸೂರ್ಯಂಗೂ ಚಂದ್ರಂಗೂ’, ‘ಕಸ್ತೂರಿ ಶಂಕರ್’ ಅವರ ‘ಯಾವ ತಾಯಿಯು ಹಡೆದ ಮಗಳಾದರೇನು’, ಬಿ.ಆರ್. ಛಾಯಾ ಧ್ವನಿಯಲ್ಲಿ ‘ಹಿಂದೂಸ್ಥಾನವು ಎಂದೂ ಮರೆಯದ’, ಸುದರ್ಶನ್ ಧ್ವನಿಯಲ್ಲಿ ‘ಹೂವೊಂದು ಬಳಿ ಬಂದು’, ವಿಷ್ಣುವರ್ಧನ್ ಅವರ ಧ್ವನಿಯಲ್ಲಿ ‘ತುತ್ತು ಅನ್ನ ತಿನ್ನೋಕೆ’ ಹೀಗೆ ಪ್ರತಿಯೊಂದು ಧ್ವನಿಯನ್ನೂ ಹೇಗೆ ತನ್ನದೇ ಆದ ರೀತಿಯಲ್ಲಿ ಸಿನಿಮಾ ಸಂಗೀತಕ್ಕೆ ಉತ್ತಮ ರೀತಿಯಲ್ಲಿ ಬಳಸಬಹುದೆಂಬುದಕ್ಕೆ ವಿಜಯಭಾಸ್ಕರ್ ಶ್ರೇಷ್ಠ ನಿದರ್ಶನ.
ಹೀಗೆ ತಮ್ಮ ಸಂಗೀತ ಸಾಧನೆಗಳಿಂದ ಅಮರರಾದ ವಿಜಯಭಾಸ್ಕರ್ ತಮ್ಮ ಬೆಂಗಳೂರು ನಿವಾಸದಲ್ಲಿ 2002ರ ಮಾರ್ಚ್ 3ರಂದು ನಿಧನರಾದರು. ಈ ಮಹಾನ್ ಸಾಧಕರ ಆತ್ಮಕ್ಕೆ ನಮ್ಮ ಸ್ಮರಣೀಯ ನಮನ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆ. ಪಿ. ರಾವ್

Fri Mar 4 , 2022
ಕೆ. ಪಿ. ರಾವ್ ಭಾರತೀಯ ಭಾಷೆಗಳು ಕಂಪ್ಯೂಟರಿನಲ್ಲಿ ಬೆಳಕು ಕಾಣುವುದಕ್ಕೆ ಪ್ರಮುಖ ಕೊಡುಗೆದಾರರಾದವರು ನಮ್ಮ ಕನ್ನಡಿಗರಾದ ಕೆ. ಪಿ. ರಾವ್. ಇಂದಿನ ಕಂಪ್ಯೂಟರ್ ಯುಗದಲ್ಲಿ ನಾವು ನೀವುಗಳೆಲ್ಲಾ ಕನ್ನಡದಂತಹ ಭಾಷೆಗಳನ್ನು ಅತ್ಯಂತ ಸುಲಭವಾಗಿ ಉಪಯೋಗಿಸಲು ಸಾಧ್ಯವಾಗಿರುವುದು ಕೆ. ಪಿ. ರಾಯರು ಮಾಡಿದ ಭಗೀರಥ ಪ್ರಯತ್ನದ ದೆಸೆಯಿಂದಾಗಿದೆ. ಕಿನ್ನಿಕಂಬಳ ಪದ್ಮನಾಭ ರಾವ್ ಅವರು 1940ರ ಫೆಬ್ರುವರಿ 29ರಂದು ಮಂಗಳೂರು ಬಳಿಯ ಕಿನ್ನಿಕಂಬಳ ಗ್ರಾಮದಲ್ಲಿ ಜನಿಸಿದರು. ಕಿನ್ನಿಕಂಬಳದಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿದ ರಾವ್ […]

Advertisement

Wordpress Social Share Plugin powered by Ultimatelysocial