ಪರಿಷತ್‍ ಚುನಾವಣೆ : ವಿಜಯೇಂದ್ರಗೆ ಸಿಗುತ್ತಾ ವರಿಷ್ಠರ ಅನುಮತಿ..?

 

 

ಬೆಂಗಳೂರು,ಮೇ16- ಸಾಕಷ್ಟು ಕಸರತ್ತು ನಡೆಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಹೆಸರನ್ನು ವಿಧಾನಪರಿಷತ್‍ಗೆ ಕಳುಹಿಸಿಕೊಟ್ಟಿದ್ದು, ವರಿಷ್ಠರು ಅನುಮತಿ ನೀಡಲಿದ್ದಾರೆಯೇ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.

ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನಮಂಥನ ಶಿಬಿರದಲ್ಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂಬ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.

ಕುಟುಂಬ ರಾಜಕಾರಣವನ್ನು ಅನಾದಿಕಾಲದಿಂದಲೂ ಟೀಕಿಸುತ್ತಾ ಬಂದಿರುವ ಬಿಜೆಪಿಗೆ ಕಾಂಗ್ರೆಸ್‍ನ ಈ ದೀಢೀರ್ ನಿರ್ಧಾರ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಒಂದು ವೇಳೆ ವರಿಷ್ಠರು ವಿಜಯೇಂದ್ರ ಹೆಸರನ್ನು ಅಂತಿಮಗೊಳಿಸಿದರೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆಯನ್ನೇ ಬಿಜೆಪಿ ಕಳೆದುಕೊಳ್ಳಲಿದೆ.

ಏಕೆಂದರೆ ಈಗಾಗಲೇ ಯಡಿಯೂರಪ್ಪ ಶಾಸಕರಾದರೆ ಅವರ ಪುತ್ರ ಬಿ.ವೈ.ರಾಘವೇಂದ್ರ , ಶಿವಮೊಗ್ಗ ಲೋಕಸಭಾ ಸಂಸದ. ಈಗ ವಿಜಯೇಂದ್ರ ಪರಿಷತ್‍ಗೆ ಆಯ್ಕೆಯಾದರೆ ಬಿಜೆಪಿಯು ಕೂಡ ವಂಶಪಾರಂಪರ್ಯ ರಾಜಕಾರಣಕ್ಕೆ ಹೊರತಾಗಿಲ್ಲ ಎಂಬ ಆಪಾದನೆಗೆ ಸಿಲುಕಲಿದೆ.

ರಾಜ್ಯ ಬಿಜೆಪಿ ಕೋರ್ ಕಮಿಟಿ ಶಿಫಾರಸ್ಸು ಮಾಡಿದ ಹೆಸರುಗಳು ಹಾಗೂ ನಿರ್ಣಯಗಳನ್ನು ವರಿಷ್ಠರು ತಿರಸ್ಕರಿಸಿದ ಹಲವು ಉದಾಹರಣೆಗಳು ಇವೆ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯಸಭೆಗೆ ಪ್ರಭಾಕರ ಕೋರೆ ಹಾಗೂ ಇನ್ನಿತರರ ಹೆಸರು ಕಳುಹಿಸಿದಾಗ ಹೈಕಮಾಂಡ್ ಅದನ್ನು ನಿರಾಕರಿಸಿತ್ತು.

ಅಚ್ಚರಿ ಎಂಬಂತೆ ಪಕ್ಷದ ವಲಯದಲ್ಲಿ ಹೆಸರನ್ನೇ ಕೇಳದಿದ್ದ ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ಹೆಸರುಗಳನ್ನು ಅಂತಿಮಗೊಳಿಸಲಾಗಿತ್ತು. ಈಗ ವಿಜಯೇಂದ್ರ ಸೇರಿದಂತೆ ಇನ್ನಿತರರ ಹೆಸರಿನ ಪಟ್ಟಿಗೆ ಹೈಕಮಾಂಡ್ ಒಪ್ಪುತ್ತದೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಕುಟುಂಬ ರಾಜಕಾರಣ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನಿರ್ಣಾಯಕ ಯುದ್ಧ ಆರಂಭಿಸಿದ್ದಾರೆ. ಉತ್ತರ ಪ್ರದೇಶದ ಚುನಾವಣೆಯಲ್ಲೂ ವಂಶವಾದಕ್ಕೆ ಮಣೆ ಹಾಕಿಲ್ಲ. ಅದೇ ಕಾಲಕ್ಕೆ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನಾ ಶಿಬಿರದಲ್ಲೂ ಕುಟುಂಬ ರಾಜಕಾರಣದಿಂದ ಅಂತರ ಕಾಯ್ದುಕೊಳ್ಳುವ ವಿಚಾರಗಳಿಗೆ ಒತ್ತು ನೀಡಲಾಗಿದೆ.

ಆದರೆ ಗಾಂಧಿ ಕುಟುಂಬ ಹಾಗೂ ಇತರೆ ಕೆಲ ಕುಟುಂಬ ಸದಸ್ಯರಿಗೆ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನಿಯಮ ಅನ್ವಯವಾಗುವುದಿಲ್ಲ ಎಂಬ ನಿರ್ಧಾರವನ್ನು ಬಿಜೆಪಿ ಬಲವಾಗಿ ಟೀಕಿಸಿದೆ. ಈ ಹಂತದಲ್ಲೇ ಯಡಿಯೂರಪ್ಪ ಪುತ್ರನ ಹೆಸರನ್ನು ಪರಿಷತ್‍ಗೆ ಅಖೈರುಗೊಳಿಸಿರುವುದು ಬಿಜೆಪಿಗೆ ಬಿಸಿತುಪ್ಪವಾಗಿದೆ.

ಮುಂದಿನ ವಿಧಾನಸಭಾ ಚನಾವಣೆಯ ದೃಷ್ಟಿಕೋನದಲ್ಲಿ ಈ ಪ್ರಯತ್ನ ನಡೆಯುತ್ತಿದ್ದು, ಆದರೆ ವರಿಷ್ಠರು ಇದಕ್ಕೆ ಮಣೆ ಹಾಕುತ್ತಾರಾ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆಯ ಸಂದರ್ಭದಲ್ಲಿ ಹೊಸ ಸಂಪುಟದಲ್ಲಿ ವಿಜಯೇಂದ್ರ ಸ್ಥಾನ ಪಡೆದುಕೊಳ್ಳುತ್ತಾರಾ? ಎಂಬ ಕುತೂಹಲ ಕೆರಳಿತ್ತು. ಆದರೆ ಅದು ಹುಸಿಯಾಗಿತ್ತು. ರಾಜೀನಾಮೆಯ ಸಂದರ್ಭದಲ್ಲಿ ಬಿಎಸ್‍ವೈ ಈ ಬಗ್ಗೆ ಬೇಡಿಕೆ ಇಟ್ಟಿದ್ದರೂ ವರಿಷ್ಠರು ಮಣೆ ಹಾಕಿರಲಿಲ್ಲ. ಆದರೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು.

ಇದೀಗ ರಾಜ್ಯದಲ್ಲಿ ಮತ್ತೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಚರ್ಚೆ ನಡೆಯುತ್ತಿದೆ. ಈ ನಡುವೆ ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಬೇಕು ಎಂಬ ಪ್ರಯತ್ನಗಳು ಶುರುವಾಗಿದೆ. ವಿಧಾನಪರಿಷತ್ ಸದಸ್ಯತ್ವ ನೀಡಿ ಸಚಿವ ಸ್ಥಾನ ನೀಡುವ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ.

ಸಚಿವ ಸ್ಥಾನ ಸಿಕ್ಕಲ್ಲಿ ಹಳೆ ಮೈಸೂರು ಭಾಗದ ಉಸ್ತುವಾರಿಯನ್ನು ವಿಜಯೇಂದ್ರ ಅವರಿಗೆ ನೀಡುವ ಸಾಧ್ಯತೆ ಇದೆ. ಈಗಾಗಲೇ ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಕಮಲ ಪ್ರಯತ್ನಗಳು ನಡೆಯುತ್ತಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ತೆಕ್ಕೆಯಲ್ಲಿರುವ ಕ್ಷೇತ್ರಗಳಲ್ಲಿ ಕಮಲ ಬಾವುಟ ಹಾರಿಸಲು ಈಗಾಗಲೇ ಬಿಜೆಪಿ ಸಿದ್ಧತೆ ನಡೆಸುತ್ತಿದೆ.

ಈ ನಿಟ್ಟಿನಲ್ಲಿ ಜನರನ್ನು ಸೆಳೆಯುವ ನಾಯಕರೊಬ್ಬರಿಗೆ ಹಳೆ ಮೈಸೂರು ಭಾಗದ ಚುನಾವಣಾ ಉಸ್ತುವಾರಿಯನ್ನು ನೀಡುವುದು ಬಿಜೆಪಿ ತಂತ್ರಗಾರಿಕೆಯ ಭಾಗವಾಗಿದೆ. ಈ ನಿಟ್ಟಿನಲ್ಲಿ ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಲು ವರಿಷ್ಠರು ಸಮ್ಮತಿ ಸೂಚಿಸಲೂಬಹುದು ಎಂಬ ಅಭಿಪ್ರಾಯಗಳು ಕಮಲ ಪಾಳಯದಲ್ಲಿ ಕೇಳಿಬರುತ್ತಿದೆ.

ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಿದ್ದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಯಡಿಯೂರಪ್ಪ ಸಕ್ರಿಯವಾಗಿ ಭಾಗಿಯಾಗಬಹುದು. ಈ ಎಲ್ಲ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳಲಿದೆ ಎಂಬುವುದು ಸದ್ಯದ ಕುತೂಹಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಕ್ರಮವಾಗಿ ಕಿಸಾನ್ ಸಮ್ಮಾನ್ ಯೋಜನೆ ಹಣ ಪಡೆಯುತ್ತಿರುವ ರೈತರಿಗೆ ಬಿಗ್ ಶಾಕ್

Mon May 16 , 2022
ಬೆಂಗಳೂರು: ಜಮೀನು ಮಾರಾಟ ಮಾಡಿದ್ದರೂ ಅಕ್ರಮವಾಗಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಸಹಾಯಧನ ಪಡೆಯುತ್ತಿದ್ದ ರೈತರನ್ನು ಪತ್ತೆ ಮಾಡಿ ಹಣ ಪಾವತಿ ಸ್ಥಗಿತಗೊಳಿಸಲಾಗಿದೆ. ಕೃಷಿ ಇಲಾಖೆ ಈ ರೀತಿಯ 1.50 ಲಕ್ಷ ರೈತರನ್ನು ಪತ್ತೆ ಮಾಡಿದೆ. ಇವರಲ್ಲದೆ ಮೃತಪಟ್ಟಿದ್ದ 200ಕ್ಕೂ ಅಧಿಕ ರೈತರ ಖಾತೆಗೆ ಪಾವತಿಯಾಗುತ್ತಿದ್ದ ಹಣಕ್ಕೆ ತಡೆ ನೀಡಲಾಗಿದೆ. ಇದುವರೆಗೆ ಸಂದಾಯವಾದ ಹಣ ವಸೂಲಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 53 ಲಕ್ಷ ರೈತರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ […]

Advertisement

Wordpress Social Share Plugin powered by Ultimatelysocial