ವೀಣೆ ರಾಜಾರಾವ್

 
ವೀಣೆ ರಾಜಾರಾವ್ ಕರ್ನಾಟಕ ಸಂಗೀತದ ಶ್ರೇಷ್ಠ ಕಲಾ ಪರಂಪರೆಗೆ ಸೇರಿದವರು.
ರಾಜಾರಾವ್ ಅವರು 1909ರ ಮಾರ್ಚ್ 26ರಂದು ಜನಿಸಿದರು. ರಾಜಾರಾಯರ ತಂದೆ ಮೈಸೂರು ಆಸ್ಥಾನ ವಿದ್ವಾನ್ ಭೈರವಿ ಲಕ್ಷ್ಮೀನಾರಾಯಣಪ್ಪನವರು ಪ್ರಸಿದ್ಧ ವೈಣಿಕ ವೀಣೆ ಶೇಷಣ್ಣನವರ ನೇರ ಶಿಷ್ಯರಾಗಿದ್ದರು. ತಮ್ಮ ಪೂಜ್ಯ ತಂದೆಯವರಲ್ಲಿ ಶಿಷ್ಯವೃತ್ತಿ ಮಾಡಿ ಪಳಗಿದ್ದ ರಾಜಾರಾಯರು, ತಾರುಣ್ಯದಲ್ಲೇ ತಮ್ಮ ನೆಚ್ಚಿನ ಗುರುಗಳಾದ ಕರ್ನಾಟಕ ಸಂಗೀತದ ಪ್ರಸಿದ್ಧ ವಾಗ್ಗೇಯಕಾರರಾದ ಮೈಸೂರು ವಾಸುದೇವಾಚಾರ್ಯರ ಜೊತೆಗೆ ವಿನಿಕೆ ಮಾಡುವಷ್ಟು ಸಾಧನೆ ಮಾಡಿದ್ದರು. ಅಲ್ಲದೆ ತಮ್ಮ ಸೋದರ ಎಲ್. ಗೋಪಾಲರಾವ್ ಜೊತೆ ‘ಮೈಸೂರು ಸಹೋದರರು’ ಎಂದು ವೀಣೆ ಕಛೇರಿಗಳನ್ನು ಮಾಡುತ್ತಿದ್ದರು.
ವೀಣಾವಾದನವಲ್ಲದೆ ಗಾಯನದಲ್ಲೂ ಪ್ರಖ್ಯಾತರಾದ ರಾಜಾರಾಯರು ದೇಶದಾದ್ಯಂತ ಸಂಗೀತ ಕಛೇರಿಗಳನ್ನು ಮಾಡಿದ್ದಾರೆ. ಗಾಯಕರಾಗಿಯೂ ರಾಜಾರಾಯರಿಗೆ ಅಂದಿನ ಕಾಲದಲ್ಲಿ ಅದೆಷ್ಟು ಬೇಡಿಕೆ ಇತ್ತೆಂದರೆ 1934ರ ವರ್ಷದಲ್ಲಿ ಮದ್ರಾಸು ರಾಜ್ಯದಲ್ಲಿ ಅಲ್ಲಿನ ಸಂಗೀತ ಪ್ರೇಮಿಗಳ ಕೋರಿಕೆಯ ಮೇರೆಗೆ ಮೂರು ತಿಂಗಳ ವಾಸ್ತವ್ಯ ಹೂಡಿ ಮೈಸೂರು ವಾಸುದೇವಾಚಾರ್ಯರ ಕೃತಿಗಳು ಪ್ರಸಿದ್ಧಿ ಪಡೆಯುವಲ್ಲಿ ಪ್ರಶಂಸನೀಯ ಕೊಡುಗೆಯಿತ್ತರು.
ರಾಜಾರಾಯರು ಉತ್ಕಟ ಕನ್ನಡಾಭಿಮಾನಿಯಾಗಿದ್ದರು. ಅವರ ಆತ್ಮೀಯ ಗೆಳೆಯರಾದ ಅ.ನ.ಕೃಷ್ಣರಾಯರು ಕನ್ನಡದ ಬಳಕೆ ಸಂಗೀತದಲ್ಲಿ ಸೂಕ್ತವಾಗಿ ಆಗುತ್ತಿಲ್ಲವೆಂದು ಕಾಳಜಿ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನೂರಾರು ಹರಿದಾಸರ ಪದಗಳು ಮತ್ತು ಶಿವಶರಣರ ವಚನಗಳಿಗೆ ಸ್ವರಪ್ರಸ್ತಾರ ಹಾಕಿ ಪ್ರಚುರ ಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಹರಿದಾಸರ ಕೃತಿಗಳು, ಹರಿದಾಸ ಕೃತಿಮಂಜರಿ, ಶಿವಶರಣರ ವಚನಗಳು ಮತ್ತು ಬಸವೇಶ್ವರ ವಚನಗಾನ ಮಂಜರಿ ಎಂಬ ನಾಲ್ಕು ಕೃತಿಗಳಾಗಿ ಇವುಗಳನ್ನು ಪ್ರಕಟಿಸಿದೆ. ಡಿವಿಜಿ ಅವರ “ಅನ್ತಃಪುರ ಗೀತೆಗಳು” ಇವರ ರಾಗ ತಾಳ ಸೂಚನೆಯೊಂದಿಗೆ ಪ್ರಕಟವಾಗಿದೆ. ರಾಜಾರಾಯರ ಸ್ವಂತ ಕೃತಿಗಳು ‘ವೀಣೆ ರಾಜಾರಾಯರ ಕೃತಿಗಳು’ ಎಂಬ ಹೆಸರಿನಲ್ಲಿ ಪ್ರಕಟವಾಗಿವೆ.
ವೈಣಿಕ, ಗಾಯಕ, ಬೋಧಕರಾಗಿದ್ದ ರಾಜಾರಾಯರು ಶ್ರೇಷ್ಠ ಸಂಗೀತ ಶಾಸ್ತ್ರಜ್ಞರೂ ಆಗಿದ್ದರು. ಕನ್ನಡದಲ್ಲಿ ಸಂಗೀತ ಶಾಸ್ತ್ರದಲ್ಲಿ ಗ್ರಂಥಗಳ ಕೊರತೆ ಇರುವುದನ್ನು ಕಂಡ ರಾಜಾರಾಯರು ‘ಸಂಗೀತ ಶಾಸ್ತ್ರ ಸಾರ’ ಮತ್ತು ‘ಸಂಗೀತ ಶಾಸ್ತ್ರ ಚಂದ್ರಿಕೆ’ ಎಂಬ ಎರಡು ಮಹತ್ವಪೂರ್ಣ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದರು. ಇದಲ್ಲದೆ ‘ಭಾರತೀಯ ಸಂಗೀತ ವಾದ್ಯಗಳು’ ಎಂಬ ಕೃತಿಯನ್ನು ಕೂಡಾ ರಚಿಸಿದರು. ಈ ಎಲ್ಲ ಕೊಡುಗೆಗಳು ಸಂಗೀತ ಲೋಕದಲ್ಲಿ ಕನ್ನಡಕ್ಕೆ ಸಂದ ಐತಿಹಾಸಿಕ ದಾಖಲೆಗಳಾಗಿವೆ.
ರಾಜಾರಾಯರು ಚಿತ್ರರಚನೆ ಮತ್ತು ರಂಗಭೂಮಿ ಕಲಾವಿದರಾಗಿ ಸಹಾ ಸಾಧನೆ ಮಾಡಿದ್ದರು. ಬಿ.ಎಂ.ಶ್ರೀ. ಅವರ ‘ಗದಾಯುದ್ಧ’ ಮತ್ತು ಅ.ನ.ಕೃ. ಅವರ ನಾಟಕಗಳನ್ನು ರಂಗದ ಮೇಲೆ ತಂದಿದ್ದರು. ಅದ್ಭುತ ವಾಗ್ಮಿಗಳಾಗಿದ್ದರು. ಕರ್ನಾಟಕ ಸಂಗೀತ ಮತ್ತು ಸಂಗೀತ ಶಾಸ್ತ್ರದ ಕುರಿತಾದಂತೆ ವಿದ್ವತ್ಪೂರ್ಣವಾಗಿ ಮಾತನಾಡಬಲ್ಲ ಪರಿಪೂರ್ಣರೆಂದು ರಾಜಾರಾಯರ ಪ್ರಖ್ಯಾತಿ ಎಲ್ಲೆಡೆ ಹರಡಿತ್ತು. ಗಮಕ ಕಲೆ, ಸುಗಮ ಸಂಗೀತ ಮತ್ತು ಜೈನ ಭಕ್ತಿ ಸಂಗೀತಗಳಿಗೆ ಸಹಾ ಅವರು ಗಣನೀಯ ಕೊಡುಗೆ ನೀಡಿದರು. ಗಾನವಿದ್ಯಾವಿಶಾರದ, ರಾಗರಸಾಭಿಜ್ಞ, ಗಾಯನ ವಾದನ ಪ್ರವೀಣ, ಗಾನಕಲಾಭೂಷಣ ಮುಂತಾದವು ಆವರಿಗೆ ಸಂದ ಬಿರುದುಗಳಾಗಿದ್ದವು.
ಕರ್ನಾಟಕ ಗಾನ ಕಲಾ ಪರಿಷತ್ ಮತ್ತು ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ನಡೆಸಿದ ಎರಡು ರಾಜ್ಯಮಟ್ಟದ ಸಂಗೀತ ಸಮ್ಮೇಳನಗಳಿಗೆ ವೀಣೆ ರಾಜಾರಾಯರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಆಚಾರ್ಯ ಪಾಠಶಾಲೆ ಕಾಲೇಜಿನಲ್ಲಿ ಮತ್ತು ತಾವು ಸ್ಥಾಪಿಸಿದ ಶ್ರೀನಿವಾಸ ಸಂಗೀತ ಕಲಾ ಶಾಲೆಯಲ್ಲಿ ನೂರಾರು ಮಂದಿಗೆ ಶಿಕ್ಷಣ ನೀಡಿದ ರಾಜಾರಾಯರು ಪ್ರಾತಃಸ್ಮರಣೀಯರಾಗಿದ್ದಾರೆ. ತಂದೆಯ ಸ್ಮರಣೆಯಲ್ಲಿ ಅವರ ಮಕ್ಕಳು ಸ್ಥಾಪಿಸಿರುವ “ಗಾನಕಲಾಭೂಷಣ ವೀಣೆ ರಾಜಾರಾವ್ ಪ್ರತಿಷ್ಠಾನ” ಪ್ರತಿವರ್ಷ ಒಬ್ಬ ಪ್ರತಿಭಾವಂತ ಸಂಗೀತಗಾರರಿಗೆ “ವೀಣೆ ರಾಜಾರಾವ್ ರಾಷ್ಟ್ರೀಯ ಪ್ರಶಸ್ತಿ” ಯನ್ನು ನೀಡುತ್ತಿದೆ.

ವೀಣೆ ರಾಜಾರಾವ್ ಅವರು 1979ರ ನವೆಂಬರ್ 28ರಂದು ಈ ಲೋಕವನ್ನಗಲಿದರು. 2009ರ ವರ್ಷದಲ್ಲಿ ರಾಜಾರಾಯರ ನೆನಪಿನಲ್ಲಿ ಸಂಗೀತಲೋಕ ಅವರ ಶತಮಾನೋತ್ಸವ ವರ್ಷವನ್ನು ವಿಶಿಷ್ಟ ಶೈಲಿಯಲ್ಲಿ ಆಚರಿಸಿತ್ತು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಸ್. ನಂಜುಂಡಸ್ವಾಮಿ

Mon Mar 28 , 2022
  ಎಸ್.ನಂಜುಂಡ ಸ್ವಾಮಿ ವರ್ಣಚಿತ್ರ ಕಲೆ ಮತ್ತು ಶಿಲ್ಪಕಲೆಗಳೆರಡರಲ್ಲೂ ಅಗ್ರಗಣ್ಯರೆನಿಸಿದ್ದವರು. ಎಸ್. ಎನ್. ಸ್ವಾಮಿ ಅವರು ಈಗಿನ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಯರಗಂಬಳ್ಳಿ ಎಂಬಲ್ಲಿ 1906ರ ಮಾರ್ಚ್ 26 ರಂದು ಜನಿಸಿದರು. ತಂದೆ ಶಿಲ್ಪ ಸಿದ್ಧಾಂತಿ ವೀರತ್ತಸ್ವಾಮಿಗಳು. ಹೀಗಾಗಿ ಸ್ವಾಮಿ ಅವರಿಗೆ ಶಿಲ್ಪಕಲೆ ಮತ್ತು ಚಿತ್ರಕಲೆ ವಂಶಪಾರಂಪರ್ಯವಾಗಿ ಬಂದ ವಿದ್ಯೆಯಾಗಿತ್ತು. ಮುಂದೆ ಸ್ವಾಮಿ ಅವರು ಮೈಸೂರಿನ ಶ್ರೀ ಜಯಚಾಮರಾಜೇಂದ್ರ ವೃತ್ತಿ ಶಿಕ್ಷಣ ಶಾಲೆಯಲ್ಲಿ ಚಿತ್ರಾಭ್ಯಾಸ ಮಾಡಿ, ಮುಂಬಯಿ ಜೆ.ಜೆ. […]

Advertisement

Wordpress Social Share Plugin powered by Ultimatelysocial