“ಅಗೆದರೆ ಸಿಗುವುದು ಮಣ್ಣಲ್ಲ”

ಒಬ್ಬ ಹೆಣ್ಣು; ಅದರಲ್ಲೂ ವಿಧವೆ. ಹಿಂದೆ ಜೋರು ಯೌವ್ವನವಿದ್ದು ಈಗ ಗಂಡನನ್ನು ಕಳೆದುಕೊಂಡ ಹೆಣ್ಣನ್ನು ಸಮಾಜ ಹೇಗೆಲ್ಲಾ ತನ್ನ ಕಪೋಲಕಲ್ಪಿತ ದೃಷ್ಟಿಯಿಂದ ನೋಡಬಲ್ಲದು ಎಂದು ಸಾರುವ ಕತೆ. ವೃತ್ತದ ಕೇಂದ್ರಸ್ಥಾನದಲ್ಲಿದ್ದವರಿಗಷ್ಟೇ ವಾಸ್ತವತೆಯ ಅರಿವಿರುವುದೇ ಹೊರತಾಗಿ ಹೊರಗೆ ನಿಂತು ಹುಬ್ಬೇರಿಸುತ್ತ ದೃಷ್ಟಿ ಬೀರುವವರಿಗಲ್ಲ. ಕತೆಯ ಮುಖ್ಯ ಪಾತ್ರಧಾರಿ ಬಂಗಾರಮ್ಮನ ಮೈತುಂಬಾ ಬಡತನವನ್ನು ಹೊದ್ದುಕೊಂಡು ಜೀವನ ಸಾಗಿಸುತ್ತಿರುವವಳೇ. ಆದರೆ ಹೊರಗಿನ ಪ್ರಪಂಚಕ್ಕೆ ಅವಳು ಕಾಣಿಸಿಕೊಳ್ಳುವ ರೀತಿಯೇ ಬೇರೆ: ವಿಧವೆಯಾಗಿದ್ದರೇನಂತೆ. ಹಿಂದೆ ಯೌವ್ವನ ತುಂಬಿ ತುಳುಕಾಡುವ ಕಾಲಕ್ಕೆ ಬಂಗಾರಿ ಆಡಿದ್ದು ಒಂದೆರೆಡು ಆಟಗಳೇ? ಊರವರಿಗೆಲ್ಲ ಬೇಕಾದ ಗರತಿಯಾಗಿದ್ದವಳು ಗಂಟು ಮಾಡದೆ ಇರುವಳೇ? ಗಂಡ ಸತ್ತ ವಿಧವೆ ಎಂದು ಕಣ್ಣೀರು ಹಾಕುವುದು ನೆಪಕ್ಕಷ್ಟೇ. ಮನೆಯ ತಣ್ಣನೆಯ ನೆಲ ಹಾಸಿನಡಿ ಹುದುಗಿಟ್ಟ ಗಂಟನ್ನು ಬಿಚ್ಚಿಲು ಸಾಯ್ತಾಳೆ ಮುದುಕಿ. ಇದು ಸಮಾಜ ಬಂಗಾರಮ್ಮನನ್ನು ನೋಡುವ ರೀತಿ. ಆದರೇನಂತೆ? ಸಮಾಜ ತನ್ನನ್ನು ಹೇಗೆ ತಿಳಿಯಲಿ. ನನಗದರ ಚಿಂತಿಲ್ಲ. ನನ್ನ ಪಾಡು ನನ್ನದು ಎನ್ನುವ ಆಕೆ ಮಹಾನ್ ಸ್ವಾಭಿಮಾನಿ ಹೆಣ್ಣು ಎನ್ನುವುದು ಅವಳ ಅಂತರಂಗಕ್ಕೆ ಮಾತ್ರ ಅರಿತಿದ್ದ ಸತ್ಯವಾಗಿತ್ತು. “ನೆನ್ನೆ ಅವನು ಕೊಟ್ಟಿದ್ದ, ಈ ಹೊತ್ತು ಇಲ್ಲ. ಕೊಟ್ಟಾಗ ಅವನನ್ನು ಹೊಗಳಲಿಲ್ಲ, ಸ್ಮರಿಸಲಿಲ್ಲ. ಇಂದು ಅವನ್ನು ಕೊಡಲಿಲ್ಲವೆಂದು ದೂರುವುದೇತಕ್ಕೆ” ಎನ್ನುವ ಅವಳ ಮಾತುಗಳಲ್ಲಿಯೇ ತಿಳಿಯುತ್ತದೆ ಆಕೆ ಹಂಗಿನ ಹೆಣ್ಣಲ್ಲ ಎನ್ನುವುದು. ಆದರೂ speculative minded ಸಮಾಜ ಸುಮ್ಮನಿರುವುದೇ ಇಲ್ಲ. ಏನಾದರೊಂದು ಕುಹಕವಾಡುತ್ತಲೇ ಇರುತ್ತದೆ. ಬಂಗಾರಮ್ಮ ಹೊತ್ತು ಹೊತ್ತಿಗೆ ಸರಿಯಾದ ಕೂಳಿಲ್ಲದೆ, ಆರೈಕೆಯಿಲ್ಲದೆ ನರಳಿ ಸಾಯುವ ಹಂತಕ್ಕೆ ಬಂದು ಹಾಸಿಗೆಗೆ ಬಿದ್ದಾಗಲೂ ಸಮಾಜ ಆಕೆಯು ದಯಾಹೀನತೆಯನ್ನು ಅರಿಯದೇ ಅವಳು ಹುದುಗಿಸಿಟ್ಟಿರಬಹುದಾದ ಗಂಟಿನ ಕಡೆಗೇ ನೋಡುತ್ತದೆ. ಮತ್ತು ಅದನ್ನು ವಶಪಡಿಸಿಕೊಳ್ಳುವ ಸಲುವಾಗಿ ದೂರದ ಸಂಬಂಧಿಕನೊಬ್ಬ ಬಂಗಾರಮ್ಮನ ಆರೈಕೆ ಮಾಡುವ ನೆಪದಲ್ಲಿ ಎಡತಾಕುತ್ತಾನೆ. ಹಣದ ಆಸೆಗೆ ಬಂದವನನ್ನು ನೋಡಿ ಬಂಗಾರಮ್ಮ ಮರುಕಪಡುತ್ತಾಳೆ. ಹಣ ಹೇಗೆಲ್ಲಾ ಮನುಷ್ಯತ್ವವನ್ನು, ಅಂತಃಕರಣವನ್ನು ಹಲ್ಲೆಗೈಯ್ಯಬಲ್ಲದು ಎಂಬುದನ್ನು ಮನಗಾಣುತ್ತಾಳೆ. ಆರೈಕೆ ಮಾಡಲು ಬಂದಿದ್ದ ಸಂಬಂಧಿ ವಾಸ್ತವದ ಅರಿವಾಗಿ ಅವಳನ್ನು ದೂಷಿಸುತ್ತ ಮನೆಯಿಂದ ಹೊರನಡೆಯುತ್ತಾನೆ. ಅತ್ತ ಬಂಗಾರಮ್ಮ ನರಳಿ ಸಾಯುತ್ತಾಳೆ. ವಾಸನೆ ಬಡಿದ ಹೆಣವನ್ನು ಅಕ್ಕಪಕ್ಕದವರು ಅನ್ಯ ಮಾರ್ಗವಿಲ್ಲದೆ ಸುಟ್ಟು ಹಾಕುತ್ತಾರೆ. ಹಣದಾಸೆಗೆ ಸಂಬಂಧಗಳು ತೀರ ಯಾಂತ್ರಿಕವಾಗುವ ದುರ್ಭರ ಸನ್ನಿವೇಶದಲ್ಲಿ ನಾವಿದ್ದೇವೆ ಎನ್ನುವ ದುರಂತ ಸೂಚ್ಯವನ್ನು ಕಟ್ಟಿಕೊಡುತ್ತದೆ ಕತೆ.
“ಮುಂಜಾವಿನ ಮಸುಕಿನಲಿ”
ಮುಂಜಾವಿನ ಮಸುಕಿನ ಹೊತ್ತು ಕಳ್ಳತನದಿಂದ ತೆಂಗಿನ ಮರ ಹತ್ತಿ ಕಾಯಿ ಕೆಡವಿ ಇನ್ನೇನು ಮರದಿಂದ ಇಳಿಯಬೇಕೆನ್ನುವಷ್ಟರಲ್ಲಿ ಮನೆಯ ಆಳು ಮಗ ನಿಂಗ ಸಿಕ್ಕುಬೀಳುತ್ತಾನೆ. ಮಸುಕು ಹರಿದು ಬೆಳಕು ಮೂಡುವ ಹೊತ್ತಿಗೆ ಹಳ್ಳಿಯ ಸಮಸ್ತರೂ ಮರದಡಿ ಸೇರುತ್ತಾರೆ; ಕಳ್ಳನಾಗಿ ಮಾರ್ಪಾಡಾದ ನಿಂಗನನ್ನು ನೋಡಲು. ಏನೆಲ್ಲಾ ಯಾರೆಲ್ಲಾ ಎಷ್ಟು ಪ್ರಯತ್ನಿಸಿದರೂ ನಿಂಗ ಮರದಿಂದ ಕೆಳಕ್ಕಿಳಿಯುವುದಿಲ್ಲ. ಪೊಲೀಸರಿಗೂ ಸುದ್ದಿ ಮುಟ್ಟುತ್ತದೆ. ಅವನ ಅಪ್ಪ ಅಮ್ಮ ಇಬ್ಬರೂ ಬರುತ್ತಾರೆ. ಜೈಲಿಗೆ ಒಯ್ಯುವುದಿಲ್ಲ ಎನ್ನುವ ಭರವಸೆ ಪೊಲೀಸರಿಂದ ಸಿಕ್ಕ ನಂತರ ನಿಧಾನವಾಗಿ ಮರದಿಂದ ಕೆಳಕ್ಕಿಳಿಯುತ್ತಾನೆ ನಿಂಗ. ಇಳಿದ, ಇನ್ನೇನು ಇಳಿದೇ ಬಿಟ್ಟ, ಸಿಕ್ಕ, ಕೈಗೆ ಸಿಕ್ಕೇಬಿಟ್ಟನೆನ್ನುವಾಗ ಪೊಲೀಸ್ ಕೊಟ್ಟ ‘ಅರೆಸ್ಟ್ ಹಿಂ’ ಎನ್ನುವ ಆದೇಶ ಪಾಲಿಸಲು ಹೋದ ಕಾನ್ಸ್ಟೇಬಲ್ಗಳು ನಿಂಗನ ಬಾಯಿಂದ ಬರುತ್ತಿದ್ದ ನೊರೆ ಕಂಡು ಹಿಂಜರಿಯುತ್ತಾರೆ. ಮೇಲೆ ನೋಡಿದಾಗ ಮರದಿಂದ ಹಾವೊಂದು ಮೆಲ್ಲಗೆ ಹರಿದು ಬರುತ್ತಿರುತ್ತದೆ. ನಿಂಗ ಮರದ ಮೇಲಿದ್ದಾಗಲೇ ಸರ್ಪಕ್ಕೆ ಬಲಿಯಾಗಿರುತ್ತಾನೆ! ಹಸಿದ ಹೊಟ್ಟೆಯ ಆಕ್ರಂದನದ ಕೂಗು ಎಂತಹ ನೀಚ ಕೆಲಸಕ್ಕೆ ಬೇಕಾದರೂ ತೊಡಗಿಸಿಕೊಳ್ಳುವಂತೆ ಮಾಡಿಬಿಡುತ್ತದೆ. ಸಮಾಜ ವ್ಯಕ್ತಿಯ ನೀಚತನದತ್ತ ಬೊಟ್ಟುಮಾಡಿ ತೋರಿಸುತ್ತದೆಯೇ ಹೊರತು ಅದರಲ್ಲಿ ಅವಿತಿರಬಹುದಾದ ತಮ್ಮ ಪಾಲೂ ಇದೆಯೆನ್ನುವ ಕಹಿ ಸತ್ಯವನ್ನು ನೆನೆಯಲೂ ಆರರು. ಹಾವು ಕಚ್ಚಿ ಸತ್ತಾನೆನ್ನುವುದು ಮೇಲುನೋಟಕ್ಕೆ ಅರಿಯುವ ಸಂಗತಿಯಾದರೂ ನಿಂಗನ ಸಾವಿಗೆ ಹೊಣೆಯಾಗಿ ಕಂಡಿದ್ದು ಅವನು ಕಳ್ಳತನ ಮಾಡುವಂತೆ ಪ್ರೇರೇಪಿಸಿದ ಸಮಾಜ, ಕಳ್ಳತನ ಮಾಡಿ ಸಿಕ್ಕುಬಿದ್ದಾಗ ಏನಾದೀತೋ ಎನ್ನುವ ಭಯ, ಊರವರ ಹಾರಾಟ ಚೀರಾಟ, ಆಳುವರ ಮತ್ತು ಉಳ್ಳವರ ಬೆನ್ನಿಗೆ ನಿಂತ ರಕ್ಷಣಾ ವ್ಯವಸ್ಥೆ. ಕದ್ದು ಸತ್ತು ಬಿದ್ದ ನಿಂಗ ತಪ್ಪಿತಸ್ಥನಾದರೆ ಹಾಗೆ ಅವನನ್ನು ಕಳ್ಳತನ ಮಾಡುವ ಸ್ಥಿತಿಗೆ ತಂದಿಟ್ಟ ಸಮಾಜ?
“ನೆಲ ಕೊಟ್ಟ ಕೆಂಪು”
ಪ್ರಾಯೋಗಿಕ ನೆಲೆಯಲ್ಲಿ ಮೂಡಿಬಂದ ಕತೆ ಇದಾಗಿದೆ. ಕತೆ ಕಟ್ಟುವಿಕೆ ಮತ್ತು ತಂತ್ರದ ದೃಷ್ಟಿಯಿಂದ ಭಿನ್ನ ಕತೆ ಎನಿಸಿದರೂ ಕತೆಯ ಅಂತ್ಯ ಅತ್ಯಂತ ಸಿನಿಮೀಯವಾಗಿರುವುದರಿಂದ – ಕತೆಯ ವಸ್ತು ತಟ್ಟಿದರೂ – ಕತೆ ಹೇಳಬೇಕಾದುದನ್ನು ಹೇಳಿಯೂ ಸೋಲುತ್ತದೆ. ದೇಹ ಬೆಳೆದ ಆದರೆ ಬುದ್ಧಿ ಬಲಿತಿಲ್ಲದ ಅಣ್ಣನೇ ತಂಗಿಯನ್ನು ಪ್ರಜ್ಞಾಪೂರ್ವಕವಾಗಿಯೋ ಯಾ ಅಪ್ರಜ್ಞಾಪೂರ್ವಕವಾಗಿಯೋ ಬಳಸಿಕೊಂಡ ನಂತರವೂ ಅವಳು ಅವನನ್ನು ಕರುಣೆಯ ಕಂಗಳಲ್ಲಿ ಕಾಣುವುದು ವಾಸ್ತವ ನೆಲೆಗಟ್ಟಿನಲ್ಲಿ ಸರಿ ಹೊಂದುವುದಿಲ್ಲ. ಸಮಾಜದ ದೃಷ್ಟಿಯಿಂದ ಅವನೊಬ್ಬ ಪೆದ್ದ; ಮಾನಸಿಕ ಸ್ಥಿಮಿತತೆ ಇಲ್ಲದವನಾದರೂ ಅವನಲ್ಲಿ ಲೈಂಗಿಕತೆ ಜಾಗ್ರತೆಗೊಳ್ಳುವುದು ಮತ್ತು ಹಾಗೆ ಮಾಡುವಂತೆ ಹಿಂದೆ ಅವನನ್ನು ಉದ್ದೀಪಿಸಿದ ಅಂಶಗಳಾದರೂ ಯಾವುವು? ಎನ್ನುವ ಹಿನ್ನೆಲೆ ಕತೆಯಲ್ಲಿ ಸಿಗುವುದಿಲ್ಲ. ಅವನ ಕಾರ್ಯವನ್ನು ಸಮರ್ಥಿಸಿಕೊಳ್ಳುವ ಪ್ರಬಲ ಅಂಶಗಳೂ ಇಲ್ಲ. ಹೀಗಾಗಿ ವಸ್ತುವನ್ನು ‘ಧಾಟಿ’ಸುವುದಷ್ಟೇ ಕತೆಯ ಪ್ರಧಾನ ಅಂಶವಾಗಿ ಕಾಣಿಸುತ್ತದೆ.
“ನಾ ಹೀಗೇ ಇದ್ದೇನು”
ಈ ಕತೆಯಲ್ಲಿ ಕೂಡ ಸದಾಶಿವರು ಲೈಂಗಿಕತೆಯ ಎಳೆಯನ್ನು ತರುತ್ತಾರೆ. ನೈತಿಕವೋ ಅನೈತಿಕವೋ? ಪರಿವೆಯಿರದ ಗೃಹಿಣಿಯೊಬ್ಬಳು ದೋಷವೇ ಇರದ ತನನ್ನು ತಾನು ಬಂಜೆ ಎನ್ನುವ ಪಟ್ಟದಿಂದ ಮುಕ್ತಗೊಳಿಸಿಕೊಳ್ಳಲು ಕೈ ಮೀರಿ ನಡೆದ ಘಟನೆಗೆ ಈಡಾಗಿ ಮೈಮರೆತು ದೇಹವನ್ನು ಗಂಡನ ಸ್ನೇಹಿತನೊಟ್ಟಿಗೆ ಹಂಚಿಕೊಳ್ಳುತ್ತಾಳೆ. ಕ್ಷಣ ಮಾತ್ರದಲ್ಲಿ ಘಟಿಸಿದ ಘಟನೆ ಅದಾಗಿರುತ್ತದೆ. ಆದುದಾದರೂ ಏನೆಂದು ತಿಳಿದು ಪರಿತಪಿಸುತ್ತಿರುವ ಹೊತ್ತಲ್ಲಿ ಅವಳ ಗರ್ಭ ಕಟ್ಟುತ್ತದೆ. ಮಗನ ನಪುಂಸಕತ್ವವನ್ನು ತಿಳಿದ ಅತ್ತೆ ರಾಡಿ ಎಬ್ಬಿಸುತ್ತಾಳೆ. ಸಂಜೆ ಆಫೀಸು ಮುಗಿಸಿ ಬರುವ ಗಂಡ ಏನನ್ನುವನೋ? ಎನ್ನುವ ಚಿಂತೆ ಅವಳನ್ನು ಕಾಡುವ ಹೊತ್ತಿಗೆ, ಸನಿಹ ಬರುವ ಗಂಡ ಔದಾರ್ಯಪೂರಿತ ನೋಟ ಬೀರುತ್ತಾನೆ. ಕತೆ ನಾಟಕೀಯವಾಗಿ ಕೊನೆಗೊಳ್ಳುತ್ತದೆ. ಇದೂ ಕೂಡ ತಂತ್ರದ ದೃಷ್ಟಿ ಮತ್ತು ನಿರೂಪಣೆಯಿಂದ ಒಳ್ಳೆಯ ಕತೆ ಎನಿಸಿಕೊಂಡರೂ ಕತೆಯ ಬೆಳವಣಿಗೆಯಲ್ಲಿರಬೇಕಾದ ಪೂರಕ ಅಂಶಗಳ ಕೊರತೆಯಿಂದಾಗಿ ಸೊರಗುತ್ತದೆ.
“ನಲ್ಲಿಯಲ್ಲಿ ನೀರು ಬಂತು”
ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವುದು ಸ್ಥಾಪಿತ ಸಿದ್ದಾಂತ. ಪರಸ್ಪರರಲ್ಲಿ ಅನ್ಯೋನ್ಯತೆ ಇದ್ದರೂ ಕೆಲವೊಮ್ಮೆ ಸಣ್ಣ ಕಾರಣದಿಂದಾಗಿ ವೈಮನಸ್ಯ ಏರ್ಪಡುವುದು ಸಹಜ. ಆದರೆ ನಿಜ ಪ್ರೀತಿ ವಿಶ್ವಾಸದ ಮುಂದೆ ವಿರಸ ಕ್ಷಣಿಕವಲ್ಲವೇ? ಈ ಕತೆ ಕೂಡ ಅದನ್ನೇ ಸಾರುತ್ತದೆ. ತುಂಬು ಬಸುರಿ ಸೀತಮ್ಮ, ಹತ್ತು ಹಡೆದಾಕೆ ರಂಗಮ್ಮ. ಚೊಚ್ಚಲ ಹೆರಿಗೆ ಏನಾಗುವುದೋ ಎನ್ನುವ ಆತಂಕದಿಂದ ಸೀತಮ್ಮ ನರಳಿದರೆ ಎಂತದ್ದು ಆಗುವುದಿಲ್ಲ ಆರಾಮಿರು ಎಂದು ಧೈರ್ಯ ತುಂಬುತ್ತಾಳೆ ರಂಗಮ್ಮ. ಇಬ್ಬರಲ್ಲೂ ಸ್ನೇಹ ಭಾವ ಮನೆ ಮಾಡಿರುವ ಹೊತ್ತಿಗೆ ನಲ್ಲಿಯಲ್ಲಿ ನೀರು ಬಂದದ್ದು ಗೊತ್ತಾಗಿ ಸೀತಮ್ಮ ತನ್ನ ಮನೆಯ ನಲ್ಲಿ ತಿರುವಿದರೆ ನೀರು ತೊಟ್ಟಿಕ್ಕುತ್ತಾ ಬರುತ್ತಿರುತ್ತದೆ; ಅಷ್ಟರಲ್ಲಾಗಲೇ ರಂಗಮ್ಮ ತನ್ನ ಮನೆಯ ನಲ್ಲಿಯನ್ನು ತಿರುವಿ ಬಿಟ್ಟಿರುತ್ತಾಳೆ! ಕುಡಿಯಲು ನೀರಿಲ್ಲ, ನಿಮ್ಮ ನಲ್ಲಿಯನ್ನು ನಿಲ್ಲಿಸಿರೆಂದು ಸೀತಮ್ಮ ದಮ್ಮಯ್ಯ ಗುಡ್ಡೆ ಹಾಕಿ ರಂಗಮ್ಮನನ್ನು ಕೇಳಿದರೂ ಆಕೆ ನಿಲ್ಲಿಸುವುದಿಲ್ಲ. ಕೊಡದ ನಂತರ ಕೊಡ ತುಂಬಿಸುತ್ತಲೇ ಇರುತ್ತಾಳೆ ರಂಗಮ್ಮ. ಕೊನೆಗೆ ಸೀತಮ್ಮನಿಗೆ ನೀರು ಸಿಗುವುದೇ ಇಲ್ಲ. ಅಲ್ಲಿಯ ತನಕ ಪರಸ್ಪರರಲ್ಲಿದ್ದ ಸ್ನೇಹ ಸಾಮರಸ್ಯ ಹಳಸಲು ಆರಂಭಿಸುತ್ತದೆ. ಒಳಗೊಳಗೇ ಇಬ್ಬರೂ ಪರಸ್ಪರರನ್ನು ದೂಷಿಸುತ್ತ ಕಾಲ ಹರಣ ಮಾಡುತ್ತಾರೆ. ಅದಾದರೂ ಎಷ್ಟೊತ್ತು? ಹತ್ತು ಹಡೆದ ರಂಗಮ್ಮ ಸೀತಮ್ಮನನ್ನು ತನ್ನ ಮಮತೆಯ ನೋಟದಿಂದ ನೋಡಿದ ಕೂಡಲೇ ಪರಸ್ಪರರ ಹುಸಿ ಮುನಿಸು ಇನ್ನೇನು ಮುಗಿಯಿತೆಂಬುವಲ್ಲಿ ನಲ್ಲಿಯಲ್ಲಿ ನೀರು ಬರಲು ಆರಂಭಿಸುತ್ತದೆ! ಅಂತ್ಯವಾಗಬೇಕಿದ್ದ ಕತೆ ಮತ್ತೊಮ್ಮೆ ಆರಂಭವಾಗುವ ಸೂಚನೆ ನೀಡುತ್ತದೆ.
“ಜಾನಿ ಮೆಟ್ಟಿಲು ಹತ್ತಿದಳು”
ಒಂಟಿ ಹೆಣ್ಣಿನ ಅಸಹಾಯಕ ಧನಿ ವಿಷಾದ ತರಂಗಗಳಾಗಿ ಧ್ವನಿಸುವುದೇ ಕತೆಯ ಸಾರಾಂಶ. ಸರ್ಕಸ್ಸಿನಲ್ಲಿ ಗಂಡಸಿನ ಸಮ ಬೈಕ್ ಓಡಿಸಬಲ್ಲ ಛಾತಿಯುಳ್ಳ ಹೆಣ್ಣು ಜಾನಿ. ಪೀಟರ್ ಅವಳ ಗಮ್ಯ ಮತ್ತು ಗುರಿ. ನಂಬಿಸಿ ಪ್ರೀತಿಸುವ ನಾಟಕವಾಡಿ ತೃಷೆ ತೀರಿಸಿಕೊಂಡ ನಂತರ ಜಾನಿ ಪೀಟರನ ಪಾಲಿಗೆ ಎಂಜಲೆಲೆಯಂತಾಗಿಬಿಡುತ್ತಾಳೆ. ಅವಳ ಸ್ಥಾನಕ್ಕೆ ತೆರೇಸಾಳನ್ನು ತಂದು ಕೂಡಿಸಿದ ನಂತರ ಜಾನಿಯ ಬದುಕು ಮೂರಾಬಟ್ಟೆಯಾಗಿಬಿಡುತ್ತದೆ. ಸರ್ಕಸ್ಸಿನ ಅಂಗಳದಲ್ಲಿ ಮೂವರೂ ಯಾರಿಗೂ ಕಡಿಮೆಯಿಲ್ಲದ ಪ್ರತಿಸ್ಪರ್ಧಿಗಳಂತೆ ಬೈಕನ್ನು ಓಡಿಸುವವರೇ. ಎದುರು ಬದುರಾಗಿ ಪ್ರೇಕ್ಷಕರನ್ನು ರಂಜಿಸಬೇಕಾದವರೇ. ಎದುರಿಗೆ ಕಾಣುವ ರಂಜನೀಯ ನೋಟ, ಪ್ರೇಕ್ಷಕರ ಕಣ್ಣಲ್ಲಿ ಉಕ್ಕುವ ಹರ್ಷೋದ್ಗಾರ ಇವರ ಪಾಲಿಗೆ, ಮುಖ್ಯವಾಗಿ ಜಾನಿಯ ಪಾಲಿಗೆ, ಇದ್ದೂ ಇಲ್ಲದ ಮರೀಚಿಕೆಯಂತಾಗಿಬಿಡುತ್ತದೆ. ಸಾವಿನ ಸೆಣೆಸಾಟದಲ್ಲಿ ಪರಸ್ಪರರನ್ನು ಒಡ್ಡಿಕೊಳ್ಳಬೇಕಾದ ಅನಿವಾರ್ಯತೆಯ ನಡುವೆಯೂ ಹೀಗೆ ಒಬ್ಬರ ವಿರುದ್ಧ ಒಬ್ಬರು ನಿಲ್ಲಬೇಕಾಗಿಬರುವುದು ಕೂಡ, ಜಾನಿಯ ಪಾಲಿನ ತೀರದ ವೇದನೆಯೇ ಆಗಿದೆ. ಜೀವದ ಹಂಗು ತೊರೆದು ಬೈಕ್ ಓಡಿಸುವ ಜಾನಿ ಇನ್ನೇನು ಅನಾಹುತಕ್ಕೆ ತನ್ನನ್ನು ತಾನು ಒಡ್ಡಿಕೊಂಡುಬಿಡುವಳೇ ಅಥವಾ ಪೀಟರ್ ತೆರೇಸಾರಲ್ಲಿ ಯಾರನ್ನಾದರೂ ಅನಾಹುತಕ್ಕೆ ದೂಡಿಬಿಡುವಳೇ ಎನ್ನುವ ಸಂಶಯ ಬೈಕ್ ಓಡಿಸುತ್ತಿದ್ದ ಸ್ವತಃ ಜಾನಿಗೇ ಬಂದರೂ, ಕೊನೆಗೆ, ಸುರಕ್ಷಿತವಾಗಿ ಮೆಟ್ಟಿಲು ಹತ್ತಿ ಮೇಲೆ ಬರುತ್ತಾಳೆ. ಅವಳ ಅಪ್ರತಿಮ ಸಾಹಸಕ್ಕೆ ನೆರೆದ ಮಂದಿ ಮನದೂಗಿ ನಮಿಸುತ್ತಾರೆ.
“ಗಿಡ್ಡಿ”
ನವರಸಗಳಲ್ಲೊಂದಾದ ಕಾಮದ ಹರಿ ಹಾಯುವಿಕೆ ಹೇಗೆ ಧಿಮಿಲ್ಲನೆ ಯಾವ ಸುಳುಹು ಸೂಚನೆ ನೀಡದೆ ಸ್ಪೋಟಗೊಳ್ಳುವುದೋ ಬಲ್ಲವರಿಲ್ಲ. ದೇಶ ಕಾಲಗಳ ಹಂಗನ್ನು ತೊರೆದು ನಿಂತ ಮುಖ್ಯ ಭಾವವದು. ಹಾಗಿಲ್ಲದಿದ್ದಲ್ಲಿ ಗೆಳೆಯ ಸೀನನ ಊರಿಗೆ ಬಂದ ರಾಮ, ಅವನ ಮನೆಯ ಹೊಲತಿ ಗಿಡ್ಡಿಯನ್ನು ಕುಡಿದ ಮತ್ತಿನಲ್ಲಿ ಆ ಪರಿ ಆ ಸರಿರಾತ್ರಿ ಆವರಿಸಿಕೊಳ್ಳುತ್ತಿದ್ದನೇ? ಮೈಮನಗಳಲ್ಲಿ ವಿದ್ಯುತ್ ಸಂಚಾರವಾಗಿ ನರನಾಡಿಗಳಲೆಲ್ಲ ರಕ್ತ ಸಂಚಾರ ಹಿಮ್ಮುಖವಾಗಿ ಪ್ರವಹಿಸಿದರೂ, ಆಳ ಮನಸ್ಸಿನ ಮೂಲೆಯಲ್ಲಿ ತನಗಾಗಿ ಗೊತ್ತಾದ ಗಂಡು ಕಾಳನಿಗೆ ಮೋಸ ಮಾಡಿದಂತೆ ಎನ್ನುವ ಯೋಚನೆ ಮಿಂಚಿನಂತೆ ಸರಿದು ಹೋದರೂ, ಒಡ್ಡಿದ ಬಲೆಯಿಂದ, ಗಂಡಸಿನ ಬಲವಾದ ಆದರೆ ಮಧುರೋನ್ಮತ್ತವಾದ ಹಿಸುಕು ಅಮುಕುವಿಕೆಯಿಂದ ದೊರೆಯುವ ಸುಖವನ್ನು ಗಿಡ್ಡಿಯಾದರೂ ನಿರಾಕರಿಸುತ್ತಿದ್ದಳೇ? ಕನಸಿನಲ್ಲಿ ನಡೆದಂತೆ ಘಟಿಸಿದ ವಾಸ್ತವದ ಕ್ರಿಯೆಗೆ ಪ್ರಕ್ರಿಯೆ ನೀಡದೆ ಮೌನವನ್ನನುಸರಿಸಿ ಸರಿದು ಬಿಡುತ್ತಾಳೆ ಗಿಡ್ಡಿ. ಅಮಲಿನ ಪ್ರವಾಹವಿಳಿದ ರಾಮನಿಗೆ ರಾತ್ರಿ ನಡೆದದ್ದೆಲ್ಲವೂ ಸ್ಪಷ್ಟವಿರದ ಅಸ್ಪಷ್ಟ ಚಿತ್ರಗಳಂತೆ ಕಾಣುತ್ತದೆ. ಮರಳಿ ಊರಿಗೆ ಹೊರಡಲು ಸಿದ್ಧನಾಗಿ ನಿಂತ ಅವನಿಗೆ ಗಿಡ್ಡಿ ಬಾಳೆಗೊನೆಯನ್ನು ಕಾಣಿಕೆಯಾಗಿ ತಂದು ನಜರು ಒಪ್ಪಿಸುತ್ತಾಳೆ. ವಿಮರ್ಶಕ ಜಿ. ಎಸ್. ಆಮೂರರು ಗುರುತಿಸುವಂತೆ, ಅವರಿಬ್ಬರ ಮಿಲನಕ್ಕೆ ಬಾಳೆಗೊನೆ ಒಳ್ಳೆಯ ಸಂಕೇತವಾಗಿದೆ ಎಂದು.
“ನೋಡಿದೆಯಾ ಅಮ್ಮ ಅವಳ ಧಿಮಾಕು”
ಗಂಡ ಅತ್ತೆ ಎನ್ನುವ ಸಂಕೋಲೆಯಿಂದ ಮುಕ್ತಳಾಗಿ ಸ್ವತಂತ್ರವಾಗಿ ಜೀವಿಸುತ್ತಿದ್ದವಳಿಗೆ ಸುಳ್ಳು ಸುದ್ದಿ ಕೊಟ್ಟು ಪುನಃ ಅತ್ತೆ ಮನೆಗೆ ಕರೆಯಿಸಿಕೊಳ್ಳಲಾಗುತ್ತದೆ. ಅಮ್ಮ ಮಗ ಸೇರಿ ಹೂಡಿದ ಸಂಚದು. ಆರೇಳು ವರ್ಷಗಳ ಬಿರುಕು ಬಳಿಕ ಹೆಂಡತಿಯೊಟ್ಟಿಗೆ ಬಾಳು ನಡೆಸುವ ಆಸೆ ಗಂಡನದು. ಮತ್ತೆದೇ ಕೂಪಕ್ಕೆ ಬರಲು ಇಷ್ಟವಿರುವುದಿಲ್ಲವಾದರೂ ಅತ್ತೆಗಾಗಿರಬಹುದಾದ ಕೇಡನ್ನು ಬಗೆದು ಮಾನವೀಯತೆ ಆಧಾರದ ಮೇಲೆ ಬರುತ್ತಾಳೆ. ಬಂದರೆ ಏನಿದೆ? ಅತ್ತೆಯ ಅದೇ ರಾಗ ಅದೇ ಹಾಡು. ಮದುವೆಯಾಗಿ ಬಂದ ಹೊಸತರಲ್ಲಿ ಕಟ್ಟಿದ ಕನಸುಗಳಿಗೆಲ್ಲ ಬೆಂಕಿಯಿಟ್ಟ ಗಂಡ ಅತ್ತೆ ಸೇರಿ ಕೊಟ್ಟ ಕಾಟ ಹಿಂಸೆ ವೇದನೆ ಸಂಕಟ ನೆನಪಿಗೆ ಬರುತ್ತದೆ. ಆದರೂ ಗಂಡ ಬದಲಾದರೂ ಆಗಿರಬಹುದೆನ್ನುವ ಸಣ್ಣ ಆಸೆ ಅವಳದು. ಮನಸ್ಸಿನ ಮೇಲಾದ ಗಾಯವನ್ನು ಮರೆತು ಮತ್ತೊಮ್ಮೆ ಹೊಂಗನಸನ್ನು ಹೆಣೆಯುವ ಆಲೋಚನೆಯಲ್ಲಿ ರಾತ್ರಿ ಮಲಗಿದ್ದವಳ ಬಳಿ ಯಾವುದೋ ಆಕೃತಿ ಸನಿಹ ಬಂದು ಮೈಮೇಲೆ ಬಿದ್ದಂತಾಗಿ ಅವಳ ದೇಹವನ್ನಿಡೀ ಅವಸರದಲ್ಲಿ ಆಕ್ರಮಿಸಿಕೊಳ್ಳತೊಡಗುತ್ತದೆ. ಚಣ ಕಾಲ ಬಯಕೆಗೆ ಬಲಿಯಾಗಿ ಮನಸ್ಸು ಮರೆತಿದ್ದರೂ ದೇಹ ಪ್ರಕೃತಿ ಅವಳನ್ನು ಬಡಿದೆಬ್ಬಿಸುತ್ತದೆ. ನೋಡಿದರೆ ಗಂಡ! ಕೂಗಿಕೊಳ್ಳುತ್ತಾಳೆ. ಹಿಂದಲ ಬಾಗಿಲ ಮೂಲಕ ಗಂಡ ಪರಾರಿಯಾಗುತ್ತಾನೆ. ಬೆಳಗ್ಗೆ ಎದ್ದವಳೇ ಮತ್ತೆಂದೂ ಆ ಮನೆಗೆ ಬಾರದಂತೆ ಪ್ರತಿಜ್ಞೆಗೈಯ್ಯುತ್ತಾಳೆ.
“ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ”
ಪ್ರೀತಿಯಲ್ಲಿ ಭ್ರಮನಿರಸನಗೊಂಡ ಶ್ರೀನಾಥನು ಊರುಕೇರಿ ಎನ್ನದೆ, ದಿಕ್ಕುದೆಸೆ ಎನ್ನದೆ ಸಿಕ್ಕಲ್ಲೆಲ್ಲ ಅಲೆದಾಡುತ್ತ, ಪರಿಚಯವುಳ್ಳ ಸ್ನೇಹಿತರ ಮನೆಗೆಲ್ಲ ಎಡತಾಕುವ ಕ್ರಿಯೆಯಲ್ಲಿ ಉಡುಪಿಯ ಸ್ನೇಹಿತ ರಾಮನ ಮನೆಗೆ ಬಂದಿಳಿಯುತ್ತಾನೆ. ಕೈಕೊಟ್ಟು ಹೋಗಿರಬಹುದಾದ ಅಥವಾ ಇನ್ನೂ ಪ್ರೀತಿಸುವ ಸಂಭವವಿರಬಹುದಾದ ಅವನ ಪ್ರೇಯಸಿಯ ಒಡನಾಟವನ್ನು ಧೇನಿಸುತ್ತಾ ಮಲ್ಪೆಯ ಸಮುದ್ರ ತಟಕ್ಕೆ ಬರುತ್ತಾನೆ. ಸಂಜೆ ಸೂರ್ಯಕಂತುವ ಮುನ್ನ ಅಲ್ಲಿ ನಡೆಯುವ ವಿದ್ಯಮಾನವನ್ನು ಕಣ್ಣ್ದುಂಬಿಕೊಳ್ಳುತ್ತಾನೆ. ಸಾಗರದ ವಿಹಂಗಮತೆಯ ಜೊತೆ ಬೆರೆತಿರುವ ವಿಷಾದ ಛಾಯೆ ಅವನನ್ನು ಆವರಿಸುತ್ತದೆ. ಆಗ ಅಲ್ಲೊಬ್ಬ ವಿಚಿತ್ರ ವ್ಯಕ್ತಿ ಬೋಟಿನ ಬಳಿ ಏನೋ ಮಾಡುತ್ತಿರುವುದು ಕಾಣಿಸುತ್ತದೆ. ಕೆಲ ಸಮಯದ ಬಳಿ ಆ ವ್ಯಕ್ತಿ ಅಲ್ಲಿಂದ ನಿರ್ಗಮಿಸಿದ ಬಳಿಕ ಶ್ರೀನಾಥ ಅಲ್ಲಿಗೆ ಬಂದು ಬೋಟಿನ ತಳಕ್ಕೆ ಕೈ ಹಾಕಿದಾಗ ಪತ್ರವೊಂದು ಸಿಗುತ್ತದೆ. ಓದಲೋ ಬೇಡವೋ ಎನ್ನುವ ಗೊಂದಲದ ನಡುವೆ ತೆರೆದು ಓದುತ್ತಾನೆ. ಅದೊಂದು ಪ್ರೇಮಪತ್ರ; ಪ್ರೇಮಿಯೊಬ್ಬ ತನ್ನ ಪ್ರೇಯಸಿಯೊಬ್ಬಳಿಗೆ ತನ್ನನ್ನು ಮರೆತು ಬಿಡು ಎಂದು ಬರೆದ ನಿವೇದನಾ ಪತ್ರವಾಗಿರುತ್ತದೆ. ಓದಿದ ನಂತರ ಪತ್ರವನ್ನು ಅಲ್ಲೇ ಹುದುಗಿಸಿಡುತ್ತಾನೆ. ಅವನ ಎಣಿಕೆಯಂತೆ ಪತ್ರವನ್ನು ತೆಗೆದುಕೊಳ್ಳಲು ಆ ಹುಡುಗಿ ಅಲ್ಲಿಗೆ ಬರುತ್ತಾಳೆ. ಪತ್ರವನ್ನು ಓದುತ್ತಾಳೆ. ಓದುತ್ತಲೇ ಕುಸಿಯುತ್ತಾಳೆ. ಮುಂದೆ ಸಾಗರ, ಭೋರ್ಗರೆವ ನಿರಾಶೆಯ ನಡುಗಡ್ಡೆಯಲ್ಲಿ ನಿಂತವಳಂತೆ ಕಾಣಿಸುತ್ತಾಳೆ. ಸದ್ಯ ಜೀವ ತೆಗೆದುಕೊಳ್ಳದಿದ್ದರೆ ಸಾಕು ಎಂದು ಮನದಲ್ಲೇ ಬಯಸುತ್ತಾನೆ ಶ್ರೀನಾಥ. ಪ್ರೀತಿಗಿಂತ ಬದುಕು ದೊಡ್ಡದು. ಬಸುಕಲ್ಲಿ ಗೆಲುವಿನಂತೆ ಸೋಲುವುದೂ ಮುಖ್ಯ ಹುಡುಗೀ! ಎಂದು ಮನದಲ್ಲೇ ಬೋಧನೆ ಮಾಡುತ್ತಾನೆ. ದಿಗಂತ ರಂಗುಗೆದರಿ ಕತ್ತಲಾವರಿಸುವ ತನಕ ಅಲ್ಲಿಯೇ ತಟಸ್ಥಳಾಗಿ ನಿಂತಿದ್ದ ಅವಳು ಯಾರೋ ಕರೆದಂತಾಗಿ ಒಮ್ಮೆಲೆ ಅಲ್ಲಿಂದ ಹೊರಡುತ್ತಾಳೆ. ಅಪರಿಚಿತ ಹುಡುಗಿ ಮತ್ತು ಅವನ ಪಾಡು ಒಂದೇ ಎನಿಸಿಬಿಡುತ್ತದೆ. ಆ ಕ್ಷಣಕ್ಕಾದ ಮನೋಬೋಧನೆ ಅವನು ಅವಳಿಗೆ ಮಾಡಿದ್ದೋ ಅಥವಾ ತನಗೆ ತಾನೇ ಹೇಳಿಕೊಂಡಿದ್ದೋ? ತಿಳಿಯದ ಶ್ರೀನಾಥ ನಂತರ ಸ್ನೇಹಿತನ ಮನೆಗೆ ಹೊರಟು ಅಲ್ಲಿಂದ ನೇರ ತನ್ನ ಮನೆಯತ್ತ ಹೊರಡುತ್ತಾನೆ.
“ನೆರಳು ಬೆಳಕಿನಾಟದಲ್ಲಿ ಕಂಡಿದ್ದೇನು”
ಈ ಕತೆಯಲ್ಲಿ ಸದಾಶಿವರು – ಸಂಭಾಷಿಸುವ ಕತೆಗಳನ್ನು ಬರೆದಿದ್ದವರು – ಮೌನದಲ್ಲಿ ಹೆಚ್ಚು ಆಪ್ತರಾಗುತ್ತಾರೆ. ಇಲ್ಲಿ ಬರುವ ಪಾತ್ರಧಾರಿಗಳ ಭಾವನೆಗಳನ್ನು ಅಂತರಂಗದ ಪಿಸುನುಡಿಯಷ್ಟು ಮೆದುವಾಗಿ ಮೆದ್ದಿದ್ದಾರೆ. ಸೂಕ್ಷ್ಮವಾಗಿ ನೋಡಿದರೆ ಇದೊಂದು ಮಾನಸಿಕ ವಿಶ್ಲೇಷಣಾತ್ಮಕ ಕತೆ ಎನಿಸುತ್ತದೆ. ವಾಸ್ತವದಲ್ಲ ಘೋರ ಅಪವಾದವನ್ನು ಅಪನಿಂದನೆಯನ್ನು ಎದುರಿಸುತ್ತಿರುವ ಕಥಾನಾಯಕ ಅದರಿಂದ ಬಿಡುಗಡೆಗಾಗಿ ಮೊರೆ ಹೋಗುವುದು ಗತಕಾಲದ ತನ್ನ ಬಾಲ್ಯದ ಸ್ಮೃತಿಗಳಿಗೆ. ಅಲ್ಲಿ ಆಗ್ಗೆ ನಡೆದ ಘಟನೆಗಳನ್ನು, ಈಗ ವಾಸ್ತವಕ್ಕೆ ಸಮೀಕರಿಸುವ ಉದ್ದೇಶ ಅವನದಲ್ಲ. ಅವನ ಮಾನಸಿಕ ಬಿಡುಗಡೆಯೇ ಹಿಂದಿನ ನೆನಪುಗಳನ್ನು ಮತ್ತೆ ಮತ್ತೆ ಹೊಕ್ಕು ಕಲಕುವುದರಲ್ಲಿದೆ. ಹೀಗಾಗಿ ಸಮಾಜ ಅವನನ್ನು ಏನೆಲ್ಲಾ ನಿಂದಿಸಿದರೂ, ಇವನ ಜೊತೆ ಬಾಳಲಾಗದೆ ಹೆಂಡತಿ ಓಡಿ ಹೋದಳೆನ್ನುವ ಕುಹಕವನ್ನು, ನಪುಂಸಕನೆನ್ನುವ ನಾಮಾಂಕಿತವನ್ನೂ ಸಮಾನ ಚಿತ್ತನಾಗಿ ಸ್ವೀಕರಿಸುವ ಸ್ವಾಸ್ಥ್ಯ ಅವನಿಗಿರುತ್ತದೆ. ಅವನ ಚಿತ್ತಸ್ವಾಸ್ಥ್ಯದಷ್ಟೇ ಹಿತಕರವಾಗಿ ಕತೆ ಮೂಡಿ ಬಂದಿದೆ.
“ಅಪರಿಚಿತರು”
ಬಹಳ ಇಷ್ಟವಾದ ಕತೆ. ಸದಾಶಿವರು ಬಹುಶಃ ತಮ್ಮ ಸೃಜನಶೀಲತೆಯ ಉತ್ತುಂಗದಲ್ಲಿ ರಚಿಸಿದ ಕತೆಯಿದು. ಹತ್ತಿರವಿದ್ದು ದೇಹಗಳೆರೆಡು ಬೆರೆತರೆ ಸಾಕೇ? ಮನಸ್ಸು ಆತ್ಮಗಳ ಮಿಳಿತ ಬೇಡವೇ? ಎನ್ನುವ ವಿಶಿಷ್ಟ ಸಿದ್ಧಾಂತ ಮೇಲೆ ಕತೆ ರಚಿಸಿದೆ. ವ್ಯಕ್ತಿ ವ್ಯಕ್ತಿಗಳ ಸಮಾಗಮ ಮಿಕ್ಕಿ ವ್ಯಕ್ತಿತ್ವದ ಸಮಾಗಮ ಆಗಬೇಕೆನ್ನುವುದು ನಾಯಕನ ಧೋರಣೆ. ಅವನ ಹೆಂಡತಿ ಕೇವಲ ಬಾಹ್ಯ ಜಗತ್ತಿನ ಕಾರ್ಯಕಲಾಪಗಳಲ್ಲಷ್ಟೇ ಆಸಕ್ತಿ ಹೊಂದಿದವಳು. ವಾಸ್ತವತೆಯನ್ನು ಮೀರಿದ ಯಾವ ಅಲೌಕಿಕವೂ ಅವಳನ್ನು ತಟ್ಟುವುದಿಲ್ಲ. ವಸ್ತುಸ್ಥಿತಿ ಅರಿವಿಗೆ ಬಂದಷ್ಟೇ ಅರಗಿಸಿಕೊಳ್ಳುವ ಜಾಯಮಾನದವಳು. ಆದರ್ಶ ಸಿದ್ಧಾಂತಗಳ ಸೋಗು ಅವಳಿಗಿಲ್ಲ. ಬಂದದ್ದು ಬಂದ ಹಾಗೆ ಸ್ವೀಕರಿಸುವ ಗುಣದವಳು. ಟಿಪಿಕಲ್ ಗೃಹಿಣಿ. ಇಬ್ಬರ ನಡುವೆ ಯಾವುದೇ ಕೊರತೆಗಳಿಲ್ಲದ ಹೊರತಾಗಿಯೂ ನಾಯಕ ಸದಾ ಕಾಲ ವಿಶಿಷ್ಟವಾದುದೇನನ್ನೋ ಅರಸುತ್ತಲೇ ಇರುತ್ತಾನೆ. ಭೌತಿಕತೆಯನ್ನು ಮೀರಿದ ದೈವೀಕತೆಯತ್ತಲೇ ಅವನ ಗಮನವೆಲ್ಲ. ಹೀಗಾಗಿ ದೈಹಿಕವಾಗಿ ಎಷ್ಟೇ ಸಾಮೀಪ್ಯವಿದ್ದರೂ ಮಾನಸಿಕವಾಗಿ ಪರಸ್ಪರರು ಪ್ರತ್ಯಾರೋಪಗಳನ್ನು ಸುರಿಸುತ್ತಲೇ ಇರುತ್ತಾರೆ. ಗಂಡನ ಸಣ್ಣ ಪ್ರಮಾಣದ ಔಟ್ ಆಫ್ ಸೈಟ್ ಕೂಡ ಅವಳಲ್ಲಿ ಅನುಮಾನ ಹೆಡೆ ಎತ್ತುವಂತೆ ಮಾಡುತ್ತವೆ. ಅವರವರ ಭಾವ ಪರಿಧಿಯಲ್ಲಿ ಅವರವರು ಬಂಧಿಗಳು. ಸಂಸಾರದಲ್ಲಿ ಆದರ್ಶಗಳು ಇರಬೇಕೋ ಬೇಡವೋ? ಸಂಬಂಧವನ್ನು ಯಾಂತ್ರಿಕವಾಗಿ ನೋಡಬೇಕೋ ಬೇಡವೋ? ಗಂಡ ಹೆಂಡಿರ ಸ್ನೇಹ ಪ್ರೀತಿ ವಿಶ್ವಾಸ ನಾಲ್ಕು ಗೋಡೆಗಳ ಸರಹದ್ದು ದಾಟಿ ಮೀರಿ ಬೆಳೆಯಬೇಕೋ ಬೇಡವೋ? ಅದು ಅವರವರೇ, ಅವರವರ ಅನುಕೂಲಕ್ಕೆ ತಕ್ಕಂತೆ ನಿರ್ಧರಿಸಬೇಕಾದುದಾಗಿದೆ ಎನ್ನುವ ಹೊಳಹು ನಾಯಕನಲ್ಲಿ ಜಾಗೃತಗೊಂಡ ಕ್ಷಣ ಹುಚ್ಚು ನಂಬಿಕೆಗಳ ಗೋಪುರ ಕಳಚಿ ಒಂದು ಹೆಣ್ಣಿನ ಸಹವಾಸದಲ್ಲಿ ಅವನು ಕಂಡುಕೊಳ್ಳಬಹುದಾದ ಸಾಧ್ಯತೆಗಳೇನಿವೆಯೋ ಅದೆಲ್ಲದರ ಅರಿವು ಅವನಿಗುಂಟಾಗಿ ನಿರುಮ್ಮಳನಾಗುತ್ತಾನೆ. ಅವರು ಪರಸ್ಪರ ಪರಿಚಿತರಾಗಿದ್ದುಕೊಂಡೇ ಅಪರಿಚಿತರಾಗಿರುತ್ತಾರೆ.
“ರಾಮನ ಸವಾರಿ ಸಂತೆಗೆ ಹೋದದ್ದು”
ಹಿರಿಯ ಲೇಖಕ ಎಸ್. ದಿವಾಕರ್ ಅವರು ಪ್ರಿಸಂ ಕಥಾಮಾಲಿಕೆಗಾಗಿ ಸಂಗ್ರಹಿಸಿರುವ ‘ಶತಮಾನದ ಕತೆಗಳು’ ಸಂಕಲನದಲ್ಲಿ ಈ ಕತೆಯಿದೆ. ನಿಸ್ಸಂಶಯವಾಗಿ ಈ ಕತೆ ಕನ್ನಡದ ಕ್ಲಾಸಿಕ್ ಕತೆಗಳಲ್ಲೊಂದು. ಲೇಖಕ ಸದಾಶಿವ ಅವರ ಮೇರು ಪ್ರತಿಭೆಯ ಅನಾವರಣ ಇದರಲ್ಲಿದೆ. ಅವರೇ ಹೇಳುವಂತೆ ಅವರ ಮಹತ್ತರ ಕತೆಗಳಲ್ಲಿ ಇದು ಎಂದಿಗೂ ಮೊದಲ ಸ್ಥಾನದಲ್ಲಿ ನಿಲ್ಲಬಲ್ಲ ಕತೆ. ಕ್ಲೀಷೆ ಏನಿಲ್ಲ? ಕತೆಯನ್ನು ಓದಿದ ಎಲ್ಲರ ಅಭಿಪ್ರಾಯವೂ ಇದೇ ಹೌದು. ಆ ಮಟ್ಟದ ಪ್ರಬುದ್ಧ ಮತ್ತು ಪ್ರೌಢ ಕತೆಯಿದು. ಕತೆಯ ಒಳನೋಟ ಬಿಡಿಸಿ ಕುತೂಹಲಕ್ಕೆ ತಣ್ಣೀರೆರಚುವ ಕೆಲಸ ನಾನು ಮಾಡುವುದಿಲ್ಲ. ಸಾಧ್ಯವಾದರೆ, ಸಿಕ್ಕರೆ ಕತೆಯನ್ನೊಮ್ಮೆ ಓದಿ ನಿರ್ಧಾರಕ್ಕೆ ಬನ್ನಿ.
ಕೆ ಸದಾಶಿವರು ತಮ್ಮ ಜೀವಿತಾವಧಿಯಲ್ಲಿ ಬರೆದುದು ಇಪ್ಪತ್ತಮೂರು ಕತೆಗಳನ್ನು ಮಾತ್ರ. ಬರೆದವುಗಳೆಲ್ಲ ಮೈಲುಗಲ್ಲುಗಳಲ್ಲದೇ ಹೋದರು ಮೈಲುಗಲ್ಲಿನಲ್ಲಿ ಅವರ ಹೆಸರಿರುವುದಂತೂ ಖರೆ. ಆರಂಭದ ಅವರ ಕತೆಗಳು ಸಂಭಾಷಣಾ ತಂತ್ರವನ್ನು ಅನುಸರಿಸಿದರೆ ನಂತರದ ಕತೆಗಳು ವಸ್ತು ಮತ್ತು ಸಂಕೇತವನ್ನು ಧ್ವನಿಸುವುದನ್ನು ಕಾಣಬಹುದು. ಅವರು ವೈಶಿಷ್ಟ್ಯತೆ ಎಂದರೆ ವರ್ತಮಾನದಲ್ಲಿ ಘಟನೆ ನಡೆಯುವಾಗ ರಸಾರ್ದ್ರತೆಗೆ ಭಂಗ ಬರದಂತೆ ಸೂಕ್ತ ರೀತಿಯಲ್ಲಿ ಹಳೆಯ ನೆನೆಕೆಯನ್ನೋ, ಬಾಲ್ಯದ ಮಧುರ ಸ್ಮೃತಿಗಳನ್ನೋ, ಅಚ್ಚಳಿಯದೆ ಉಳಿದ ಘಟನೆಗಳನ್ನೋ ವಾಸ್ತವಕ್ಕೆ ಸಮಾನಾಂತರವಾಗಿ ತರುವುದು. ಆ ಮೂಲಕ ಕತೆ ಹೆಚ್ಚು ನಿಷ್ಠಪೂರ್ಣವಾಗಿದ್ದಂತೆ ಧ್ವನಿಪೂರ್ಣವೂ ಆಗಿರುತ್ತದೆ. ಕನ್ನಡ ಸಾಹಿತ್ಯವನ್ನು ಅಭ್ಯಸಿಸುವರು ಕೆ. ಸದಾಶಿವರನ್ನು ಓದಲೇಬೇಕು. ಕೇವಲ ನಲವತ್ತ ನಾಲಕ್ಕು ವರ್ಷಕ್ಕೆ ಅಗಲಿದ ಅವರು ಅನಂತಮೂರ್ತಿಯವರ ಆಪ್ತ ಸ್ನೇಹಿತರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪೋಲೆಂಡ್ನಲ್ಲಿ 'ದೇಶಭ್ರಷ್ಟ ಉಕ್ರೇನಿಯನ್ ಝೆಲೆನ್ಸ್ಕಿ ಸರ್ಕಾರ' ರಚಿಸಲು ಯುಎಸ್ ಸಿದ್ಧತೆ ನಡೆಸುತ್ತಿದೆ!

Sun Mar 6 , 2022
ಪೋಲೆಂಡ್‌ನಲ್ಲಿ “ವೊಲೊಡಿಮಿರ್ ಝೆಲೆನ್ಸ್ಕಿ ದೇಶಭ್ರಷ್ಟರಾಗಿರುವ ಉಕ್ರೇನಿಯನ್ ಸರ್ಕಾರ” ರಚಿಸಲು ಯುಎಸ್ ಯೋಜನೆಯನ್ನು ಸಿದ್ಧಪಡಿಸುತ್ತಿದೆ ಎಂದು ಅಮೆರಿಕದ ಆಡಳಿತದ ಮೂಲವನ್ನು ಉಲ್ಲೇಖಿಸಿ ದಿ ವಾಷಿಂಗ್ಟನ್ ಪೋಸ್ಟ್ ಹೇಳಿದೆ. “ಈಗ ನಾವು ಯಾವುದೇ ಅನಿಶ್ಚಿತತೆಗಾಗಿ ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದೇವೆ” ಎಂದು ಪತ್ರಿಕೆಯು ಮೂಲವನ್ನು ಉಲ್ಲೇಖಿಸಿದೆ. ಪ್ರಕಟಣೆಯ ಪ್ರಕಾರ, ಉಕ್ರೇನ್‌ನ ಮಿತ್ರರಾಷ್ಟ್ರಗಳು ದೇಶದಲ್ಲಿ “ಗೆರಿಲ್ಲಾ ಕಾರ್ಯಾಚರಣೆಗಳನ್ನು” ಸಂಘಟಿಸುವಲ್ಲಿ “ಗಡೀಪಾರಿನಲ್ಲಿರುವ ಸರ್ಕಾರ” ಕ್ಕೆ ಸಹಾಯ ಮಾಡಬಹುದು ಎಂದು ಆರ್‌ಟಿ ವರದಿ ಮಾಡಿದೆ. ಮಾರ್ಚ್ 4 ರಂದು, ರಷ್ಯಾದ […]

Advertisement

Wordpress Social Share Plugin powered by Ultimatelysocial