ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.

 

ಬೆಂಗಳೂರು, ಏ. 21: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಅಫ್ಜಲ್‌ಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ್ ಅವರ ಗನ್‌ಮ್ಯಾನ್ ಆಗಿದ್ದ ಡಿಎಆರ್ ಪೊಲೀಸ್ ಪೇದೆಯನ್ನು ಸಿಐಡಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಇದರ ಜತೆಗೆ ಸಿಎಅರ್ ಪೇದೆ ರುದ್ರೇಗೌಡ ಎಂಬಾತ ಸಹ ಬಂಧನಕ್ಕೆ ಒಳಗಾಗಿದ್ದು, ನೀರಾವರಿ ಇಲಾಖೆಯ ಇಂಜಿನಿಯರ್ ಮನೆ ಮೇಲೆ ಸಿಐಡಿ ಪೊಲೀಸರು ದಾಳಿ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ.

ಅಫ್ಜಲ್‌ಪುರ ಶಾಸಕ ಎಂ.ವೈ. ಪಾಟೀಲ್ ಅವರಿಗೆ ಗನ್‌ಮ್ಯಾನ್ ಆಗಿದ್ದ ಅಣ್ಣಯ್ಯ ದೇಸಾಯಿ ಎಂಬಾತನನ್ನು ಸಿಐಡಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಇನ್ ಸರ್ವೀಸ್ ಅಡಿಯಲ್ಲಿ ಪಿಎಸ್‌ಐ ಪರೀಕ್ಷೆ ಬರೆದಿದ್ದ ಅಣ್ಣಯ್ಯ ದೇಸಾಯಿ 200 ಅಂಕಕ್ಕೆ 138 ಅಂಕ ಗಳಿಸಿದ್ದ. ಪಿಎಸ್‌ಐ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ದೇಸಾಯಿ ಹೆಸರು ಇತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಪೊಲೀಸರು ಬುಧವಾರ ನೋಟಿಸ್ ನೀಡಿದ್ದರು. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ದೇಸಾಯಿಯನ್ನು ಬಂಧಿಸಿದ್ದಾರೆ.

ಪಿಎಸ್‌ಐ ಆಗಿ ನೇಮಕವಾಗಿದ್ದೇನೆ ಎಂದು ದೇಸಾಯಿ ಸನ್ಮಾನ ಮಾಡಿಸಿಕೊಂಡಿದ್ದ. ಆದರೆ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿ ಅಂಕ ಪಡೆದು ನೇಮಕವಾಗಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದೇಸಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಜ್ಞಾನಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ನಡೆದಿರುವ ಅಕ್ರಮದಂತೆ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಅನುಮಾನ ವ್ಯಕ್ತವಾಗಿದೆ. ಓಎಂಆರ್ ಶೀಟ್ ನೀಡಲು ನಿರಾಕರಿಸಿದ ದೇಸಾಯಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಮತ್ತೊಷ್ಟು ಸ್ಫೋಟಕ ಅಂಶಗಳು ಬೆಳಕಿಗೆ ಬರುವ ಸಾಧ್ಯತೆಯಿದೆ.

ಶಾಸಕರ ಕಾರು ನಿಲ್ಲಿಸಿ ಬಂಧನ

ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ್ ಮದುವೆಗೆ ಹೋಗುತ್ತಿದ್ದರು. ಈ ವೇಳೆ ಕಾರನ್ನು ಸಿಐಡಿ ಪೊಲೀಸರು ತಡೆದಿದ್ದಾರೆ. ಪೊಲೀಸರು ಕಾರು ತಡೆಯುವುದನ್ನು ನೋಡಿ ಶಾಕ್ ಆದ ಪಾಟೀಲ್ ಪ್ರಶ್ನಿಸಿದಾಗ, ನಿಮ್ಮ ಗನ್‌ಮ್ಯಾನ್ ದೇಸಾಯಿ ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದಾನೆ ಎಂದು ವಿಚಾರ ತಿಳಿಸಿದ್ದಾರೆ. ಶಾಸಕರ ಕಾರಿನಿಂದಲೇ ಇಳಿಸಿ ಅಣ್ಣಯ್ಯ ದೇಸಾಯಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ನಾಲ್ಕು ವರ್ಷದಿಂದ ಗನ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ.

ಇನ್ನು ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಎಆರ್ ಪೇದೆ ರುದ್ರೇಗೌಡ ಎಂಬಾತನನ್ನು ಸಹ ಬಂಧಿಸಲಾಗಿದೆ. ಈತ ಸಹ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದ್ದು, ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ಹೊರ ಬಂದಿದೆ.

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ನೀರಾವರಿ ಇಲಾಖೆಯ ಇಂಜಿನಿಯರ್ ಮಂಜುನಾಥ್ ಎಂಬಾತ ಭಾಗಿಯಾಗಿದ್ದು, ಆತನಿಗಾಗಿ ಸಿಐಪಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕಲಬುರಗಿ ಮೂಲದ ಈತನ ಮೇಲೆ ಸಿಐಡಿ ಪೊಲೀಸರು ದಾಳಿ ನಡೆಸಿದ್ದು, ಕೆಪಿಎಸ್‌ಸಿ ನೇಮಕಾತಿಗೆ ಸಂಬಂಧಿಸಿದ ಕೆಲವು ಅಭ್ಯರ್ಥಿಗಳ ಹಾಲ್ ಟಿಕೆಟ್‌ಗಳು ಲಭ್ಯವಾಗಿವೆ. ಸದ್ಯಕ್ಕೆ ಮಂಜುನಾಥ್ ತಲೆ ಮರೆಸಿಕೊಂಡಿದ್ದಾನೆ.

PSI ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಆಪಾದನೆ ಕುರಿತು, ತನಿಖೆ ನಡೆಸುತ್ತಿರುವ ರಾಜ್ಯ ಸಿಐಡಿ ಪೊಲೀಸರು ಮಹತ್ವದ ಬೆಳವಣಿಗೆಯೊಂದರಲ್ಲಿ, ಕಾಂಗ್ರೆಸ್ ಶಾಸಕರೊಬ್ಬರ, ಗನ್‌ಮ್ಯಾನ್ ಒಬ್ಬರನ್ನು ಬಂಧಿಸಿದ್ದಾರೆ. ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಅಕ್ರಮ ದಲ್ಲಿ ಭಾಗವಹಿಸಿದ್ದ ಎಲ್ಲಾ ತಪ್ಪಿತಸ್ಥರನ್ನು ಬಂಧಿಸಿ, ಕಾನೂನಿನ ಕ್ರಮಕ್ಕೆ ಒಳಪಡಿಸಲಿದ್ದಾರೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದರೂ, ಹುದ್ದೆಯಿಂದ ವಂಚಿತರಾದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಸಿಐಡಿ ತನಿಖೆಗೆ ಆದೇಶಿಸಲಾಗಿದೆ.ತನಿಖೆಯು ನಿಷ್ಪಕ್ಷಪಾತವಾಗಿ, ನಡೆಯುತ್ತಿದ್ದು, ಅಕ್ರಮದಲ್ಲಿ ಒಳಗಾಗಿದವರು, ಎಷ್ಟೇ ದೊಡ್ಡವರಾದರೂ ರಕ್ಷಿಸುವ ಪ್ರಶ್ನೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಇಡೀ ವಿಶ್ವದ ಕಣ್ಣು ಈಗ ಕನ್ನಡ ಚಿತ್ರರಂಗದ ಮೇಲಿದೆ. 'ಕೆಜಿಎಫ್ 2' ಬಾಕ್ಸಾಫೀಸ್!

Thu Apr 21 , 2022
  ಇಡೀ ವಿಶ್ವದ ಕಣ್ಣು ಈಗ ಕನ್ನಡ ಚಿತ್ರರಂಗದ ಮೇಲಿದೆ. ‘ಕೆಜಿಎಫ್ 2’ ಬಾಕ್ಸಾಫೀಸ್ ದಾಖಲೆಗಳನ್ನು ಕಣ್ಣಾರೆ ನೋಡಿದ ಬಳಿಕ ಸ್ಯಾಂಡಲ್‌ವುಡ್ ಸಿನಿಮಾಗಳ ಕಡೆ ತಿರುಗಿ ನೋಡುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಈ ಮಧ್ಯೆ ‘ಕೆಜಿಎಫ್ 2’ ಒಂದೊಂದೇ ರೆಕಾರ್ಡ್‌ಗಳನ್ನು ಬ್ರೇಕ್ ಮಾಡುತ್ತಾ? ಮುನ್ನುಗುತ್ತಿದೆ. ‘ಕೆಜಿಎಫ್ 2’ ಬಿಡುಗಡೆ ಆದಲ್ಲಿಂದ ಸುಮಾರು 29 ದಾಖಲೆಗಳನ್ನು ಬರೆದಿದೆ. ಬಾಕ್ಸಾಫೀಸ್‌ನಲ್ಲಿ ರಾಕಿಭಾಯ್ ಹವಾ ಕಂಡು ಭಾರತೀಯ ಚಿತ್ರರಂಗ ತಲೆಕೆಡಿಸಿಕೊಂಡಿದೆ. ಇಷ್ಟೊಂದು ದಾಖಲೆ ಬರೆದ […]

Advertisement

Wordpress Social Share Plugin powered by Ultimatelysocial