ಮಳೆಯಿಂದ ಧರೆಗೆ ಉರುಳಿದ ಮರಗಳು!

ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ಮಂಗಳವಾರ ರಾತ್ರಿ ಹಾಗೂ ಬುಧವಾರ ಉತ್ತಮ ಮಳೆಯಾಗಿದೆ. ಬಿರುಗಾಳಿ ಸಹಿತ ಸುರಿದ ಮಳೆಗೆ ನಗರವೂ ಸೇರಿ ಹಲವೆಡೆ ಮರ, ವಿದ್ಯುತ್‌ ಕಂಬಗಳು ಧರೆಗೆ ಉರುಳಿವೆ.

ಮಂಗಳವಾರ ತಡರಾತ್ರಿ ಆರಂಭವಾದ ಮಳೆ ನಸುಕಿನವರೆಗೆ ಸುರಿಯಿತು.

ಗುಡುಗು, ಮಿಂಚು, ಬಿರುಗಾಳಿ ಸಹಿತ ಸುರಿದ ಮಳೆಯಿಂದ ಮರ, ರಂಬೆಕೊಂಬೆಗಳು ಮುರಿದು ಬಿದ್ದವು.

ಚಿತ್ರದುರ್ಗ ನಗರದ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣ ರಸ್ತೆಯಲ್ಲಿ ಮೂರು ಮರಗಳು ಬುಡಸಹಿತ ಉರುಳಿಬಿದ್ದಿವೆ. ಇದರೊಂದಿಗೆ ವಿದ್ಯುತ್‌ ಕಂಬಗಳು ಹಾನಿಗೆ ಒಳಗಾಗಿವೆ. ಇದರಿಂದ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ನಗರಸಭೆ ಸಿಬ್ಬಂದಿ ಮುರಿದುಬಿದ್ದ ಮರಗಳನ್ನು ತೆರವುಗೊಳಿಸಿದರು.

ನಗರದ ಬ್ಯಾಂಕ್‌ ಕಾಲೊನಿ ಸೇರಿ ಹಲವೆಡೆ ಮರದ ರಂಬೆಗಳು ಮುರಿದು ಬಿದ್ದಿದ್ದವು. ತುರುವನೂರು ರಸ್ತೆಯಲ್ಲಿ ಮುರಿದು ಬಿದ್ದ ರಂಬೆಯನ್ನು ಮಧ್ಯಾಹ್ನ ಕಳೆದರೂ ತೆರವುಗೊಳಿಸಿರಲಿಲ್ಲ. ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಹಿರಿಯೂರು, ಹೊಳಲ್ಕೆರೆ ಸೇರಿ ಹಲವೆಡೆ ಇದೇ ರೀತಿ ಹಾನಿಯುಂಟಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ಎಚ್.ಡಿ. ಪುರದಲ್ಲಿ 34 ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ. ಹೊಳಲ್ಕೆರೆ ಪಟ್ಟಣದಲ್ಲಿ 32 ಮಿ.ಮೀ, ಚಿಕ್ಕಜಾಜಾರು 15, ಬಿ.ದುರ್ಗ 10 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರದಲ್ಲಿ 16 ಮಿ.ಮೀ, ತಳುಕು 23 ಮಿ.ಮೀ ಮಳೆಯಾಗಿದೆ.

ಚಿತ್ರರ್ಗದಲ್ಲಿ 11 ಮಿ.ಮೀ, ತುರುವನೂರು 14 ಹಾಗೂ ಭರಮಸಾಗರದಲ್ಲಿ 12, ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರದಲ್ಲಿ 8 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ತಾಳ್ಯ, ರಾಮಗಿರಿಯಲ್ಲಿ ಹಾನಿ

ಹೊಳಲ್ಕೆರೆ: ತಾಲ್ಲೂಕಿನ ವಿವಿಧೆಡೆ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ತಾಳ್ಯ ಹಾಗೂ ರಾಮಗಿರಿ ಹೋಬಳಿಯಲ್ಲಿ ಬೆಳೆ ಹಾನಿ ಆಗಿದೆ.

ಬಿರುಮಳೆಯಿಂದ ರಾಮಗಿರಿಯ ಚಂದ್ರಪ್ಪ ಎಂಬ ರೈತನ ತೋಟದಲ್ಲಿ ಫಸಲಿಗೆ ಬಂದಿದ್ದ ಬಾಳೆ ನೆಲಕ್ಕೆ ಉರುಳಿದ್ದು, ₹1 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಜೈಪುರ ಗ್ರಾಮದ ಸುಧಾ ಎಂಬುವರ ಮನೆಯ ಮೇಲೆ ಮರ ಉರುಳಿ ನಷ್ಟ ಸಂಭವಿಸಿದೆ.

ಕನ್ನೇನಹಳ್ಳಿಯ ರೈತ ಗಿರೀಶ್ ಎಂಬುವರ 10 ಅಡಿಕೆ ಮರಗಳಿಗೆ ಸಿಡಿಲು ಬಡಿದು ಹಾನಿ ಆಗಿದೆ. ಸಿಡಿಲಿನ ಹೊಡೆತಕ್ಕ ಅಡಿಕೆ ಮರದ ಸುಳಿಗಳು ಮುರಿದು ಬಿದ್ದಿವೆ. ಪಾಡಿಗಟ್ಟೆ ಗ್ರಾಮದ ರಮೇಶ್ ಎಂಬ ರೈತನ 30 ಅಡಿಕೆ ಮರಗಳಿಗೆ ಹಾನಿಯಾಗಿದೆ.

ಪಟ್ಟಣದಲ್ಲಿ ಮಧ್ಯರಾತ್ರಿ ಗುಡುಗು ಸಿಡಿಲಿನಿಂದ ಆರಂಭವಾದ ಮಳೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಬಿರುಸಿನ ಮಳೆಯಿಂದ ರಸ್ತೆ, ಚರಂಡಿಯ ತುಂಬ ನೀರು ಹರಿಯಿತು. ಗುಡುಗು, ಸಿಡಿಲಿನ ಆರ್ಭಟಕ್ಕೆ ಜನ ಭಯಭೀತರಾದರು. ಹೊರಕೆರೆ ದೇವರಪುರ ಭಾಗದಲ್ಲಿಯೂ ಉತ್ತಮ ಮಳೆ ಆಗಿದೆ.

ಹೊಳಲ್ಕೆರೆಯಲ್ಲಿ 32.2 ಮಿ.ಮೀ, ಎಚ್.ಡಿ. ಪುರದಲ್ಲಿ 34.2 ಮಿ.ಮೀ, ತಾಳ್ಯದಲ್ಲಿ 3 ಮಿ.ಮೀ. ಮಳೆಯಾಗಿದೆ.

ಉರುಳಿ ಬಿದ್ದ ಮರಗಳು

ಚಿಕ್ಕಜಾಜೂರು: ಮಂಗಳವಾರ ತಡರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಗೆ ಸಮೀಪದ ಅರಸನಘಟ್ಟ ಗ್ರಾಮದಲ್ಲಿ ಬೃಹತ್‌ ಮರಗಳು ಸೇರಿ ನೂರಾರು ಅಡಿಕೆ ಮರಗಳು ಉರುಳಿ ಬಿದ್ದಿವೆ.

ಮಂಗಳವಾರ ತಡರಾತ್ರಿ ಅರಸನಘಟ್ಟ, ಚಿಕ್ಕಂದವಾಡಿ, ಕಾಶಿಪುರ, ಅಮೃತಾಪುರ, ಗೌರೀಪುರ, ಹನುಮನಕಟ್ಟೆಗಳಲ್ಲಿ ಬಿರುಗಾಳಿಗೆ ಅರಸನಘಟ್ಟ ಗ್ರಾಮದ ನಾಗೇಶ್‌ ಅವರ ತೋಟದಲ್ಲಿ ‌ದೊಡ್ಡ ನೀಲಗಿರಿ ಮರ ಉರುಳಿ ಬಿದ್ದಿದೆ. ಇದರ ರಭಸಕ್ಕೆ ಅದರ ಸುತ್ತಮುತ್ತಲ ಸುಮಾರು 40ಕ್ಕೂ ಹೆಚ್ಚು ಅಡಿಕೆ ಮರಗಳು ಉರುಳಿ ಬಿದ್ದಿವೆ.

ಪ್ರಭಣ್ಣ ಅವರ ತೋಟದಲ್ಲಿ ಸುಮಾರು 60ಕ್ಕೂ ಹೆಚ್ಚು ಅಡಿಕೆ ಮರಗಳು ಉರುಳಿ ಬಿದ್ದಿವೆ. ಅರಸನಘಟ್ಟ ಗ್ರಾಮದ ಮಂಜುನಾಥ್‌ ಅವರ ಶೆಡ್‌ನ ಚಾವಣಿಗೆ ಹಾಕಿದ್ದ ತಗಡಿನ ಶೀಟುಗಳು ಹಾರಿಹೋಗಿವೆ. ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನ ಹಾಗೂ ರೈತರು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದು ಆಡನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಆರ್‌. ಹರ್ಷ ತಿಳಿಸಿದ್ದಾರೆ.

ಆಡನೂರು, ಪಾಡಿಗಟ್ಟೆ, ಬಾಣಗೆರೆ, ಚನ್ನಪಟ್ಟಣ, ಅಪ್ಪರಸನಹಳ್ಳಿ ಮೊದಲಾದ ಕಡೆಗಳಲ್ಲಿ ಹದ ಮಳೆಯಾಗಿದೆ. ಚಿಕ್ಕಜಾಜೂರಿನ ಲ್ಲಿ 15.8 ಮಿ.ಮೀ., ಬಿ. ದುರ್ಗದಲ್ಲಿ 10.2 ಮಿ.ಮೀಟರ್‌ನಷ್ಟು ಮಳೆಯಾದ ವರದಿಯಾಗಿದೆ.

ರಾಯಾಪುರದಲ್ಲಿ ಹಾನಿ

ಮೊಳಕಾಲ್ಮುರು: ತಾಲ್ಲೂಕಿನ ರಾಯಾಪುರ ಸುತ್ತಮುತ್ತ ಬುಧವಾರ ಸಂಜೆ ಭಾರಿ ಮಳೆಗಾಳಿ ಬೀಸಿದ್ದು ಅನೇಕ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ರಾಯಾಪುರ, ಹಾನಗಲ್, ಸೂಲೇನಹಳ್ಳಿ, ಯರ್ರೇನಹಳ್ಳಿ, ಮ್ಯಾಸರಹಟ್ಟಿ ಸುತ್ತಮುತ್ತ ಅರ್ಧ ಗಂಟೆಗೂ
ಹೆಚ್ಚು ಕಾಲ ಗುಡುಗು, ಸಿಡಿಲು ಆರ್ಭಟದೊಂದಿದೆ

ಮಳೆ ಪ್ರಮಾಣ ಕಡಿಮೆ ಇದ್ದು, 15 ನಿಮಿಷ ಸಾಧಾರಣ ಮಳೆಯಾಗಿದೆ. ಯರ್‍ರೇನಹಳ್ಳಿಯಲ್ಲಿ ವಿದ್ಯುತ್ ಕಂಬಗಳು ಉರುಳಿ ಬಿದ್ದಿದೆ. ರಾಯಾಪುರದಲ್ಲಿ 6 ಮರಗಳು ಬಿದ್ದಿವೆ. ರಸ್ತೆಬದಿಯಲ್ಲಿ ಹೊಸದಾಗಿ ಇಟ್ಟಿದ್ದ ಅಂಗಡಿಯೊಂದು ಹಾನಿಗೀಡಾಗಿದೆ ಎಂದು ಗ್ರಾಮಸ್ಥ ಬಸವರಾಜ್ ಮಾಹಿತಿ ನೀಡಿದರು.

ಬಿ.ಜಿ.ಕೆರೆ, ಕೊಂಡ್ಲಹಳ್ಳಿ, ಕೋನ ಸಾಗರ, ತುಮಕೂರ್ಲಹಳ್ಳಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಬುಧವಾರ ಸಂಜೆ ಸಾಧಾರಣ ಮಳೆಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಾಯಿ ಪಲ್ಲವಿ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇರೋವಾಗ್ಲೆ ಹಸೆಮಣೆ ಏರೋಕೆ ಸಜ್ಜಾಗಿದ್ದಾರೆ.

Thu May 5 , 2022
ಸೌತ್ ಚಿತ್ರರಂಗದ ಟಾಪ್ ನಟಿಯರಲ್ಲಿ ಸಾಯಿ ಪಲ್ಲವಿ ಕೂಡ ಒಬ್ಬರು. ಬ್ಯೂಟಿ ಜತೆ ಟ್ಯಾಲೆಂಟ್‌ಯಿರೋ ನಟಿ ಸಾಯಿ ಪಲ್ಲವಿ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇರೋವಾಗ್ಲೆ ಹಸೆಮಣೆ ಏರೋಕೆ ಸಜ್ಜಾಗಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಛಾಪೂ ಮೂಡಿಸಿರೋ ಪ್ರತಿಭಾವಂತ ನಟಿ ಸಾಯಿ ಪಲ್ಲವಿ ಇದೀಗ ಚಿತ್ರರಂಗದಲ್ಲಿ ಅಷ್ಟೋಂದು ಆಕ್ಟೀವ್ ಆಗಿಲ್ಲ. ಯಾಕೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. `ಶ್ಯಾಮ್ ಸಿಂಗ್ ರಾಯ್’ ಚಿತ್ರದ ನಂತರ ಸಾಕಷ್ಟು […]

Advertisement

Wordpress Social Share Plugin powered by Ultimatelysocial